ಹೀಗೊಂದು ಸಂಭಾಷಣೆ.
ಮರದ ಬುಡವನ್ನು ಒರಗಿಕೊಂಡು ಕುಳಿತಿದ್ದ ಗೋವಿಂದನಿಗೆ ಜೊಂಪು ಹತ್ತಿದಂತಾಗಿ ಹಾಗೇ ಕಣ್ಣು ಮುಚ್ಚಿದ್ದ.
‘ಹಲೋ ಹಲೋ’ ಯಾರೋ ಕರೆದಂತಾಗಿ ಕಣ್ಣುಬಿಟ್ಟ. ಉಹುಂ….ಯಾರೂ ಕಾಣಿಸಲಿಲ್ಲ. ನನ್ನ ಭ್ರಮೆ ಇರಬಹುದು. ಈ ಉರಿಬಿಸಿಲಿನಲ್ಲಿ ಇಲ್ಲಿಗೆ ಯಾರು ಬಂದಾರು.
‘ಹಲೋ..ಹಲೋ.. ಗೋವಿಂದು ಇವತ್ತು ಇನ್ನೂ ಇಲ್ಲೇ ಇದ್ದೀಯಾ? ಮಧ್ಯಾನ್ಹದ ಊಟಕ್ಕೂ ಮನೆಗೆ ಹೋದ ಹಾಗಿಲ್ಲ. ಏಕೆ ಹೊಟ್ಟೆ ಹಸಿದಿಲ್ಲವೇ?’
‘ಅರೆ ಇದೇನಿದು ಯಾರೋ ನನ್ನನ್ನು ತುಂಬಾ ಗಮನಿಸಿದಂತೆ ಕಾಣಿಸುತ್ತಿದೆ. ಬಹಳ ದಿವಸಗಳಿಂದ ನೋಡಿರುವ ಹಾಗೆ ಮಾತನಾಡಿಸುತ್ತಿದ್ದಾರೆ. ಯಾರಿರಬಹುದು?’ ಕುಳಿತಲ್ಲಿಂದಲೇ ಸುತ್ತಮುತ್ತ ಕಣ್ಣಾಡಿಸಿದ ಗೋವಿಂದ. ಒಂದು ನರಪಿಳ್ಳೆಯೂ ಕಾಣಿಸಲಿಲ್ಲ. ಹೊಲ ಗದ್ದೆ ತೋಟದ ಕಡೆಗೂ ದಿಟ್ಟಿಸಿದ ಯಾರೂ ಕಾಣಲಿಲ್ಲ. ಇಡೀ ಜಗತ್ತನ್ನೇ ತನ್ನ ಮುಷ್ಟಿಯಲ್ಲಿ ಇಟ್ಟುಕೊಂಡು ಆಟವಾಡಿಸುತ್ತಿರುವ ಮಹಾಮಾರಿ ಕೊರೋನಾ ಏನಾದರೂ ಬಂದುಬಿಟ್ಟಿತೇ? ಅಯ್ಯೋ ನಾನು ಆಗಲೇ ಮನೆಗೆ ಹೋಗಿ ಬಿಡಬೇಕಿತ್ತು. ಛೀ..ಛೀ.. ಅಲ್ಲಿ ಹೋಗಿ ಮಾಡುವುದೇನಿದೆ ಎಂದುಕೊಂಡಿದ್ದೇ ತಪ್ಪಾಯಿತು’ ಮನೆಗೆ ಹೊರಡಲು ಹೆಜ್ಜೆಯಿಟ್ಟ.
‘ಹೆದರಿಕೊಂಡೆಯಾ ಗೋವಿಂದು? ನಾನು ನಿನ್ನ ಜಮೀನಿನಲ್ಲಿ ತಲೆತಲಾಂತರದಿಂದ ಬಂದಿರುವ ಬೇವಿನ ಮರದ ಸಂತತಿಯ ಮರಿಮಗ. ನೀನು ನನ್ನ ನೆರಳಲ್ಲಿ ಮಲಗಿದ್ದೆಯಲ್ಲಾ, ಹಾಗೇ ಮಾತನಾಡಿಸೋಣವೆಂದು ಕರೆದೆ. ನೀನೊಬ್ಬನೇ ಸಿಕ್ಕುವುದು ಅಪರೂಪ ನೋಡು, ಕಷ್ಟಸುಖ ಮಾತನಾಡೋಣವೆಂದು ಆಸೆಯಾಯಿತು. ಹೆದರಬೇಡ, ನಾನ್ಯಾವ ಭೂತ, ಪ್ರೇತವೂ ಅಲ್ಲ. ಅಲ್ಲದೆ ಕೊರೋನಾ ಪಿಡಗೂ ಅಲ್ಲ’ ಎಂದಿತು.
‘ಓ…ನೀನೂ ಮಾತನಾಡಲು ಪ್ರಾರಂಭಿಸಿಬಿಟ್ಟೆಯಾ? ಮುಗೀತು ಬಿಡು ಈಗ ಖಾತರಿಯಾಯ್ತು, ಕಲಿಯುಗ ಮುಗಿಯಲು ಬಂತೆಂದು ಕಾಣಿಸುತ್ತದೆ. ನನ್ನ ಅಜ್ಜ ಹೇಳುತ್ತಿದ್ದ ಅದೆಲ್ಲೋ ಒಂದು ಗುಡಿಯಲ್ಲಿ ಕಲ್ಲಿನ ಬಸವ ವರ್ಷವರ್ಷ ಬೆಳೆಯುತ್ತಿದೆಯಂತೆ ಅದಕ್ಕೆ ಜೀವ ಬಂದು ಎದ್ದು ಓಡಿದಾಗ, ಕಲ್ಲಿನ ಕೋಳಿ ಕೂಗಿದಾಗ, ಅಲ್ಲಿನ ಕಲ್ಯಾಣಿಯ ನೀರು ಉಕ್ಕಿ ಹರಿದಾಗ ಪ್ರಳಯವಾಗುತ್ತೇಂತ. ಈಗ ಮರವೇ ಮಾತನಾಡುತ್ತಿದೆ ಎಂದರೆ ಆ ಕಾಲ ಸಮೀಪಿಸಿದೆ’ ಎಂದನು.
‘ಹೇ.. ಹೇ..ಹೇ! ಯಾವ ಯುಗ ಏನು ಕತೆ? ನಾವು ಸದಾಕಾಲ ಮಾತನಾಡುತ್ತಲೇ ಇದ್ದೇವೆ. ಆದರೆ ನಿಮ್ಮ ತರಾತುರಿ, ಗದ್ದಲ, ಗಡಿಬಿಡಿಯಲ್ಲಿ ನಿಮಗೆ ಕೇಳಿಸಿಕೊಳ್ಳುವ ವ್ಯವಧಾನವಿಲ್ಲ’ ಎಂದಿತು.
‘ಹ್ಹಾ..ಹ್ಹಾ ನೋಡು ನೀನು ನನ್ನ ಕಿವಿಯ ಮೇಲೆ ಹೂ ಇಡಲಿಕ್ಕೆ ಬರಬೇಡ. ಚಿಕ್ಕಂದಿನಿಂದ ನಾನು ಗಿಡ, ಮರ, ಬಳ್ಳಿ, ಕೆರೆಕಟ್ಟೆಗಳ ನಡುವೆಯೇ ಬೆಳೆದವನು. ಎಂದೂ ಇಲ್ಲದ್ದು ಈಗ, ಹೂಂ ಕತೆಗಳಲ್ಲಿ ಕೇಳಿದ್ದೇನಷ್ಟೆ. ವಿಜ್ಞಾನಿಗಳು ಮರಗಿಡಗಳಿಗೂ ಜೀವವಿದೆಯೆಂದು ಹೇಳುವುದನ್ನು ಕೇಳಿದ್ದೇನೆ. ಆದರೆ ಅವುಗಳು ನಮ್ಮಂತೆ ಮಾತನಾಡುತ್ತವೆ ಎಂದು ಹೇಳಿಲ್ಲ. ಇರಲಿ, ನಿನಗೇ ಮಾತನಾಡುವ ಶಕ್ತಿ ಬಂದಿದೆಯೋ, ಅಥವಾ ನಿನ್ನೊಳಗೆ ಯಾವುದಾದರೂ ಭೂತಪ್ರೇತ ಸೇರಿಕೊಂಡಿದೆಯೋ ಕಾಣೆ. ಏನಾದರಾಗಲಿ ಮಾತನಾಡಲು ಆರಂಭಿಸಿದ್ದೀಯೆ, ಏನು ಹೇಳಬೇಕೋ ಪೂರ್ತಿಯಾಗಿ ಹೇಳಿಯೇಬಿಡು. ಕೇಳಿಕೊಂಡೇ ಮನೆಗೆ ಹೋಗುತ್ತೇನೆ’ ಹೊರಡುತ್ತಿದ್ದವ ಮತ್ತೆ ಆ ಮರದ ನೆರಳಿಗೆ ಬಂದು ಕುಳಿತ.
‘ನೋಡಪ್ಪಾ, ಈ ಕೊರೋನಾ ಬಂದೇಬಂತು, ನಿನ್ನ ಮುಖದ ಮೇಲಿನ ನಗುವೇ ಮಾಸಿಹೋಗಿದೆ. ಅಲ್ಲಾ ಬೇಜಾರು ಮಾಡಿಕೊಳ್ಳಬೇಡ, ನೀವು ನಮ್ಮನ್ನು ಹೇಗೆ ನೋಡುಕೊಳ್ಳುತ್ತೀರಿ ಎಂದರೆ ನೆಲವನ್ನು ಅಗೆದು ಗುಳಿತೋಡಿ ಅದರಲ್ಲಿ ಬೀಜಹಾಕಿ ಮಣ್ಣು ಗೊಬ್ಬರದಿಂದ ಮುಚ್ಚಿ ನೀರು ಹಾಯಿಸುತ್ತೀರಿ. ಪ್ರಾಣಿಪಕ್ಷಿಗಳು ಹಾಳುಮಾಡದಂತೆ ಎಚ್ಚರವಹಿಸಿ ಬೆಳೆಸುತ್ತೀರಿ. ನೀವು ಕೊಟ್ಟಿದ್ದನ್ನೆಲ್ಲ ಹೀರಿಕೊಂಡು ನಾವು ಚಿಗುರೊಡೆದು ರೆಂಬೆಕೊಂಬೆಗಳನ್ನು ಹರಡಿಕೊಂಡು ದಷ್ಟಪುಷ್ಟವಾಗಿ ಬೆಳೆದು ಬೀಗುತ್ತಿರುತ್ತೇವೆ. ಆದರೆ ಈ ಕೊಂಬೆ ಈಕಡೆ ಬರುವವರಿಗೆ ತಾಕುತ್ತೆ, ಆ ಕೊಂಬೆ ಉದ್ದಕ್ಕೆ ಚಾಚಿ ನೆರಳು ಬಹಳವಾದರೆ ಅದರ ನೆರಳಿನ ಜಾಗದಲ್ಲಿ ಬೆಳೆಗಳು ಅಥವಾ ಗಿಡಗಳು ಬೆಳೆಯೋಲ್ಲವೆಂದು ನೀವೇ ಕೊಂಬೆಗಳನ್ನು ಕತ್ತರಿಸುತ್ತೀರಿ. ಆಗಾಗ್ಗೆ ಸುತ್ತಮುತ್ತಲ ಚಾಚುಕಡ್ಡಿಗಳನ್ನು ಕ್ಷೌರಿಕರು ಕೂದಲು ಕತ್ತರಿಸುವಂತೆ ಟ್ರಿಮ್ ಮಾಡುತ್ತೀರಿ. ದಪ್ಪದಾದ ಕೊಂಬೆಗಳನ್ನು ಮನೆಯ ತೊಲೆಗಳಾಗಿ, ಅಥವಾ ಯಾವುದಾದರೂ ಪೀಠೋಪಕರಣಗಳಿಗೆ ಉಪಯೋಗ ಮಾಡುತ್ತೀರಿ. ಮರಕ್ಕೆ ಗೆದ್ದಲೇನಾದರೂ ಆವರಿಸಿ ಮರ ಟೊಳ್ಳಾದರೆ ನಮ್ಮನ್ನೇ ಬೀಳಿಸಿ ಉರುವಲಾಗಿ ಬಳಸಿ ಬೂದಿ ಮಾಡಿಬಿಡುತ್ತೀರಿ. ಇಷ್ಟೆಲ್ಲಾ ತೊಂದರೆ ಕೊಡುತ್ತಾರೆಂದು ತಿಳಿದಿದ್ದರೂ ನಾವು ಗಾಳಿ, ಮಳೆ, ಬಿಸಿಲು ಲೆಕ್ಕಿಸದೇ ಹೋರಾಡುತ್ತಾ ನಮಗೆ ದೇವರು ಕೊಟ್ಟ ಆಯುಸ್ಸು ಇರುವವರೆಗೂ ನಿಮಗೆ ಹೂವು, ಹಣ್ಣು, ಕೊಡುತ್ತಾ ಕಾಲಹಾಕುತ್ತೇವೆ. ಅದೇ ನೀವು? ಏನಾದರೊಂದು ಸಂಕಟ ಬಂದರೆ ಪ್ರಪಂಚವೇ ಮುಳುಗಿಹೋದಂತೆ ತಲೆಮೇಲೆ ಕೈಹೊತ್ತು ಕೂಡುತ್ತೀರಿ. ಹ್ಹಾ ನಮಗಂತೂ ಈ ಕೊರೊನಾ ರೋಗಬಂದಾಗಿನಿಂದ ತುಂಬ ಸಹಾಯವಾಗಿದೆ. ಏಕೆಂದರೆ ಶಬ್ಧಮಾಲಿನ್ಯವಿಲ್ಲ, ವಾಯುಮಾಲಿನ್ಯವಿಲ್ಲ, ಎಲ್ಲಿಂದಲೋ ವಲಸೆ ಬಂದಿರುವ ಹಕ್ಕಿಗಳ ಕಲರವ ಇಂಪಾಗಿ ಕಿವಿಗಳಿಗೆ ಕೇಳಿಸುತ್ತಿದೆ. ನಾನೂ ಕೂಡ ಹೂ, ಕಾಯಿಗಳಿಂದ ಶೋಭಾಯಮಾನವಾಗಿ ಕಂಗೊಳಿಸಿದ್ದೇನೆ. ಸುತ್ತಮುತ್ತಲಿನ ಮರಗಿಡಗಳಿಂದ ಅರಳಿದ ಹೂಗಳು ಸೂಸುವ ಸುಗಂಧ ಬೀಸುವ ಗಾಳಿಯೊಡನೆ ಸೇರಿ ವಾತಾವರಣವೇ ಹಿತಕರವಾಗಿದೆ. ನೀನೂ ನಿನಗೆ ಬಂದಿರುವ ಕಷ್ಟವನ್ನು ಎದುರಿಸಿ ಬದುಕುವುದನ್ನು ಕಲಿ. ನಾನು ಹೇಳಿದ್ದು ತಿಳಿಯಿತೇ ಗೋವಿಂದು’ ಎಂದಿತು.
‘ಏ..ವೃಕ್ಷರಾಜ ಸ್ವಲ್ಪ ಬಾಯಿಮುಚ್ಚಿಕೊಂಡು ಸುಮ್ಮನಿರುತ್ತೀಯಾ? ನನಗೆ ಬಂದಿರುವ ಕಷ್ಟ ಒಂದೇ, ಎರಡೇ ಏನಂತ ಹೇಳಲಿ’ ಎಂದ.
‘ಅದೇನಪ್ಪಾ ಅಂತಹದ್ದು, ನಾನು ಕಾಣದ್ದು? ನೀನು ಅದೃಷ್ಟವಂತ. ಹೊಲ, ತೋಟ, ಗದ್ದೆ, ಕಲ್ಯಾಣಿ ಎಲ್ಲವೂ ಒಂದೇಕಡೆ ಇದೆ. ಕೊರೋನಾ ಬರುವುದಕ್ಕೆ ಮೊದಲೇ ಬೆಳೆಗಳನ್ನು ಕೊಯ್ದು ಒಕ್ಕಣೆ ಮಾಡಿ ಧಾನ್ಯಗಳನ್ನು ಮನೆಗೆ ಸಾಗಿಸಿದ್ದೆ. ತೋಟದಲ್ಲಿ ಬೆಳೆದಿದ್ದ ಹಣ್ಣುಹಂಪಲುಗಳನ್ನು ಕಿತ್ತು ಮಾರಿದ್ದೆ. ಈಗ ಆಗಿದ್ದರೆ ಆಳುಕಾಳುಗಳು ದೊರೆಯುತ್ತಿರಲಿಲ್ಲ ಕಷ್ಟವಾಗುತ್ತಿತ್ತು. ಎಲ್ಲವೂ ಮುಗಿದಿದೆ. ಅನುಕೂಲವೇ ಆಯಿತಲ್ಲ’ ಎಂದಿತು.
‘ಅಯ್ಯೋ,.. ಪೆಕರಪ್ಪಾ ನೀನು ತಲೆತಲಾಂತರದಿಂದ ನಮ್ಮೊಡನೆ ಬಂದಿದ್ದೀ ಎಂದೆಯಲ್ಲಾ, ಕೇಳು, ನಾನೂ ಸಹ ಈ ಕುಟುಂಬದ ಮರಿಮಗನೇ. ನಿನ್ನ ಸಂತತಿ ಇದ್ದಂತೆ ನಮ್ಮಲ್ಲೂ ಸಂತತಿ ಜೋರಾಗಿಯೇ ಇದೆ. ಆದರೆ ನನ್ನಪ್ಪನಿಗೆ ನಾನೊಬ್ಬನೇ ಗಂಡುಮಗ. ನನ್ನ ಹಿಂದೆಮುಂದೆ ಆರುಜನ ಸಹೋದರಿಯರು. ಈಗ ನೀನು ಹೇಳಿದೆಯಲ್ಲಾ ಹೊಲ, ಗದ್ದೆ, ತೋಟ ನೂರಾರು ಎಕರೆ ಇದೆಯಾ? ಒಡಹುಟ್ಟಿದವರ ಜವಾಬ್ದಾರಿ ಕಳೆದುಕೊಳ್ಳುವಷ್ಟರಲ್ಲಿ ಸುಮಾರು ಕೈಬಿಟ್ಟು ನನ್ನ ಪಾಲಿಗೆ ಉಳಿದದ್ದು ಸ್ವಲ್ಪವೇ. ಚೆನ್ನಾಗಿ ಕೇಳಿಸಿಕೋ ಯುಗಾದಿ ಹಬ್ಬಕೆಂದು ಮುಂಚೆಯೇ ಬಂದ ಸಹೋದರಿಯರ ಕುಟುಂಬಗಳು ಕೊರೋನಾ ಲಾಕ್‌ಡೌನ್‌ನಿಂದಾಗಿ ಹಿಂತಿರುಗಿ ಹೋಗಲಾರದೆ ಎಲ್ಲರೂ ಇಲ್ಲೇ ಝಾಂಡಾ ಹೂಡಿದ್ದಾರೆ. ‘ಕೂತು ಉಣ್ಣುವವನಿಗೆ ಕುಡಿಕೆ ಹೊನ್ನು ಸಾಲದು’ ಎಂಬಂತೆ ಎಷ್ಟೇ ಕೂಡಿಸಿದ್ದರೂ ಸಾಲದಂತಾಗಿದೆ. ದಿನೇ ದಿನೇ ಮುಂದೇನು? ಎನ್ನುವಂತಾಗಿದೆ. ಈ ಮಧ್ಯೆ ಕೊರೋನಾ ಬರದಂತೆ ನಮ್ಮನ್ನು ಹೇಗೆ ಕಾಪಾಡಿಕೊಳ್ಳಬೇಕೆಂದು ಟಿ.ವಿ. ಚಾನೆಲ್ಲುಗಳಲ್ಲಿ ಬೆಳಗಿನಿಂದ ಸಂಜೆಯವರೆಗೂ ಕುಯ್ದಿದ್ದೇ ಕುಯ್ದಿದ್ದು. ಸಾಲದಕ್ಕೆ ಮನೆಯಲ್ಲಿ ಹೆಂಗಸರು ಆ ಕಷಾಯ ಈ ಕಷಾಯ ಅಂತ ದಿನಕ್ಕೆ ಹಲವು ಬಾರಿ ಶುಂಠಿ, ಮೆಣಸು, ಜೀರಿಗೆ, ಅರಿಷಿನ, ಲವಂಗ ಇನ್ನೂ ಏನೇನೋ ಕಾಯಿಸಿ ಗಂಟಲಿಗೆ ಸುರಿದುಕೊಳ್ಳುವವರಿಗೂ ಬಿಡುವುದಿಲ್ಲ. ಇದರಿಂದ ಮೇಲೆ ಕೆಳಗೆ ಉರಿ ಹೊತ್ತಿಕೊಂಡು ಒದ್ದಾಡುವ ಹಾಗೆ ಆಗಿದೆ. ಇದೂ ಸಾಲದೆಂಬಂತೆ ನನ್ನ ಸೋದರಿಯರ ಮಕ್ಕಳು ಹೊಸ ರುಚಿಗಳ ಪ್ರಯೋಗ ಮಾಡಲು ಹೋಗಿ ಯದ್ವಾ ತದ್ವಾ ಸಾಮಾನುಗಳನ್ನು ಖರ್ಚು ಮಾಡುತ್ತಿದ್ದಾರೆ. ಬಿಸಿ ತುಪ್ಪ ನುಂಗಲೂ ಆಗದೆ ಉಗುಳಲೂ ಆಗದಂತಾಗಿದೆ. ನಾಲ್ಕು ದಿನಾಂತ ಬಂದವರು ಐವತ್ತು ದಿನಗಳಾದರೂ ಜಪ್ಪಯ್ಯಾ ಅಂದಿಲ್ಲ. ಲಾಕ್‌ಡೌನ್ ಇನ್ನೂ ಮುಂದುವರಿಸುತ್ತಾರಂತೆ ಎಂದು ಸುದ್ದಿ’ ಎಂದನು.
‘ಅಲ್ಲಪ್ಪಾ ಬಂದಿರುವವರು ಮನೆಯ ಖರ್ಚುವೆಚ್ಚದಲ್ಲಿ ತಮ್ಮ ಪಾಲೂ ಇರಲಿ ಆಂತ ಅಷ್ಟೊಇಷ್ಟೋ ಕೊಡುವುದಿಲ್ಲವೇ?’ ಎಂದಿತು.
‘ಹ್ಹಾ..ಹ್ಹಾ.. ವೃಕ್ಷರಾಜ ಎಲ್ಲಿದ್ದೀಯೋ ಮಾರಾಯ, ಅವರೆಲ್ಲಾ ಹೆಣ್ಣುಕೊಟ್ಟ ಮಾವನ ಮನೆಗೆ ಬಂದ ಅಳಿಯಂದಿರು. ಅವರುಗಳಿಗೆ ಮಾಡಿಸಿಕೊಂಡು ಅಭ್ಯಾಸ ಇದೆಯೇ ಹೊರತು ಮಾಡಿ ಗೊತ್ತಿಲ್ಲ. ಗೊತ್ತಾದರೂ ನಾವೇಕೆ ಮಾಡಬೇಕೆಂಬ ಮನೋಭಾವದವರು. ಇದರಿಂದಲೇ ನನಗೆ ಚಿಂತೆ ಜಾಸ್ತಿಯಾಗಿದೆ. ಈಗ ಬಿಟ್ಟಿರುವ ಹಣ್ಣು ತರಕಾರಿಗಳೆಲ್ಲಾ ನಾವೇ ಕೀಳುತ್ತೇವೆಂದು ನನ್ನ ಅಕ್ಕತಂಗಿಯರ ಮಕ್ಕಳು ಮಂಗಗಳಂತೆ ಹಣ್ಣುಗಳ ಜೊತೆಗೆ ಹೂವು, ಹೀಚು, ಕಾಯಿ ಯಾವುದನ್ನೂ ಬಿಡದೆ ಧ್ವಂಸ ಮಾಡುತ್ತಿರುತ್ತಾರೆ. ಅವುಗಳಿಂದ ಎಷ್ಟು ಹಾನಿಯಾಗಿದೆ ಎಂದರೆ ಅವೆಲ್ಲಾ ಒಂದು ಹದಕ್ಕೆ ಬರಬೇಕಾದರೆ ಎಷ್ಟು ಸಮಯ ಹಿಡಿಯುತ್ತದೆಯೋ ದೇವರೇ ಬಲ್ಲ’ ಎಂದನು.
‘ಏಕೆ ಗೋವಿಂದು ಅವರುಗಳಿಗೆ ತಿಳಿ ಹೇಳಬೇಕಿತ್ತು ….ಕೇಳುವುದಿಲ್ಲವೇ?’ ಎಂದಿತು.
‘ಹಾ….ಹಾಗೇನಾದರೂ ಮಾಡಿದರೆ ಅವರನ್ನು ಹೆತ್ತವರ ಕೆಂಗಣ್ಣಿಗೆ ಗುರಿಯಾಗುತ್ತೇನೆ. ಅದಕ್ಕೇ ಅಸಹಾಯಕತೆಯಿಂದ ನಾನು ಪ್ರತಿದಿನ ಒಂಟಿಯಾಗಿ ನಿನ್ನ ನೆರಳಿನಲ್ಲಿ ಸ್ವಲ್ಪ ಹೊತ್ತು ಹಾಗೇ ಮಲಗಿ ಹೋಗುವುದು ತಿಳಿಯಿತೇ, ಆಹಾ…. ಕೊರೋನಾ ಲಾಕ್ ಡೌನ್‌ನಿಂದ ನಾವೆಲ್ಲಾ ಒಟ್ಟಿಗೆ ಇದ್ದು ಆಟ ಆಡುತ್ತೀವಿ ಊಟ ಮಾಡುತ್ತೀವಿ. ಹಾಗೆ ಹೀಗೆ ಅಂತ ದಿನಾ ಪತ್ರಗಳನ್ನು ಬರೆದು ಫೋಟೋ ಸಮೇತ ಪತ್ರಿಕೆಗಳಲ್ಲಿ ಹಾಕಿಸಿಕೊಳ್ಳುವವರು ಹೆಚ್ಚಾಗಿದ್ದಾರೆ. ನಿಜವಾಗಿ ಒಳ ಹೊಕ್ಕು ನೋಡಿದರೆ ಪರದಾಟ ಪ್ರಾಣಸಂಕಟ ಪಟ್ಟೋರಿಗೇ ಗೊತ್ತು. ಆಯಿತು ಬರುತ್ತೇನೆ ನಿನ್ನೊಡನೆ ಮಾತನಾಡಿದ್ದರಿಂದ ನನ್ನ ಮನಸ್ಸು ಎಷ್ಟೋ ಹಗುರವಾಯಿತು. ದೇವರಿಟ್ಟಂತೆ ಆಗಲಿ’ ಎಂದು ಎದ್ದು ಜೇಬಿನಲ್ಲಿ ಇದ್ದ ಕರವಸ್ತ್ರವನ್ನು ತ್ರಿಕೋನಾಕಾರವಾಗಿ ಮಾಡಿಕೊಂಡು ಬಾಯಿಗೆ ಕಟ್ಟಿಕೊಂಡ. ಹೆಗಲಮೇಲಿದ್ದ ಟವಲನ್ನು ತಲೆಗೆ ಸುತ್ತಿಕೊಂಡ. ಮರಕ್ಕೆ ಒರಗಿಸಿದ್ದ ಕೋಲನ್ನು ತೆಗೆದುಕೊಂಡ. ಅಲ್ಲೇ ಮೇಯುತ್ತಿದ್ದ ಮನೆಯ ಹಸುಗಳಾದ ಗಂಗೆ, ತುಂಗೆ ಯಮುನೆ, ಗೌರಿಯನ್ನು ಕರೆಯುತ್ತಾ ಮನೆಗೆ ಹೋಗಲು ಸಜ್ಜಾದ. ಯಾರೋ ನಕ್ಕಂತಾಯಿತು. ತಲೆ ಎತ್ತಿ ನೋಡಿದ. ತನ್ನ ಮನೆಯ ಹಸುಗಳೇ! ಇದೇನು ಸೋಜಿಗಾ? ಎಂದುಕೊಂಡ.
‘ಧಣಿ, ಹೆದರಬೇಡ ನಾವೇ ನಕ್ಕಿದ್ದು. ನಾನು ಹುಟ್ಟಿದಾಗ ನಮ್ಮ ಅಜ್ಜಿ ಹೇಳಿದ್ದ ಮಾತು ನೆನಪಿಗೆ ಬಂತು. ಕೂಸೇ…ನಾವು ಅದೂ ಇದೂ ತಿಂದುಬಿಡುತ್ತೇವೆಂದು ನಮ್ಮ ಬಾಯಿಗೆ ಕುಕ್ಕೆ ಕಟ್ಟುತ್ತಾರೆ ಈ ಮನುಷ್ಯರು. ಸ್ವಲ್ಪ ದೊಡ್ಡವರಾದಮೇಲೆ ಬೇರೆಯವರ ಹೊಲಗಳ ಬೇಲಿಹಾರಿ ಹೋಗುತ್ತೇವೆಂದು ಮುಂಗಾಲು ಸೇರಿಸಿ ಹಲಗೆಯೊಂದಕ್ಕೆ ಹಗ್ಗ ಕಟ್ಟಿ ಅದನ್ನು ಎಳೆದುಕೊಂಡು ಹೋಗುವ ಹಾಗೆ ಮಾಡುತ್ತಾರೆ’ ಎಂದು ಹೇಳುತ್ತಿದ್ದಳು. ಈಗ ನಿಮ್ಮಗಳ ಅವಸ್ಥೆ ನೋಡಿ ನಗು ಬಂತು. ಕಾಲಿಗೆ ಹಗ್ಗ ಕಟ್ಟಿಲ್ಲ ಮೂತಿಮೂಗಿಗೆ ಬಟ್ಟೆ ಕಟ್ಟಿಕೊಳ್ಳುತ್ತೀರಿ. ಆದರೆ ಎಲ್ಲಾ ಕಡೆ ಅಡ್ಡಾಡುವ ಹಾಗಿಲ್ಲ. ನೀನೊಬ್ಬ ರೈತನೆಂದು ಸ್ವಲ್ಪ ರಿಯಾಯಿತಿ ಕೊಟ್ಟವರೆ. ಆದರೂ ಬಂದೋಬಸ್ತು ಮಾಡಿಕೊಂಡು ಓಡಾಡಬೇಕು. ಹುಂ…ಕಾಲ ದೋಸೆ ಮೊಗಚಿಹಾಕಿದಂತೆ, ಚಿಂತೆ ಮಾಡಬೇಡ ನೀನು ಇಷ್ಟೊತ್ತು ಬೇವಿನಣ್ಣನ ಹತ್ತಿರ ಮಾತಾಡಿದ್ದನ್ನೆಲ್ಲಾ ನಾವು ಕೇಳಿಸಿಕೊಂಡೆವು. ಹಾ…ನಾವು ಹುಟ್ಟಿದಾಗಿನಿಂದ ನಮಗೆ ಆಶ್ರಯ ನೀಡಿ ಊಟ ಕೊಟ್ಟು ಸಾಕಿದ್ದೀಯಾ, ಸಾಕುತ್ತಲೂ ಇದ್ದೀಯಾ ಆ ನೆಂಟರೆಲ್ಲಾ ಬಂದಾಗಿನಿಂದ ಹಾಲನ್ನು ಹೊರಗೆ ಮಾರಾಟ ಮಾಡಲಾಗುತ್ತಿಲ್ಲವೆಂಬುದೂ ನಮಗೆ ಗೊತ್ತಾಗಿದೆ. ಚಿಂತೆ ಬಿಡು ನಾವು ಚೆನ್ನಾಗಿ ತಿಂದುಂಡು ಜಾಸ್ತಿ ಹಾಲು ಕೊಡುತ್ತೇವೆ. ಅಂದ ಹಾಗೆ ಇವತ್ತಿನ ಬೆಳಗಿನ ಸಮಾಚಾರ ಕೇಳಿದೆಯಾ? ನಾಳೆಯಿಂದ ಲಾಕ್‌ಡೌನ್ ಸಡಿಲಿಸುತ್ತಾರಂತೆ ಮನೆಗೆ ಬಂದಿರುವ ನೆಂಟರೆಲ್ಲಾ ಯಾರ್‍ಯಾರದ್ದೋ ಹತ್ತಿರ ಅನುಮತಿಗಾಗಿ ಓಡಾಡುತ್ತಿದ್ದಾರೆ. ಒಂದೆರಡು ದಿನಗಳಲ್ಲಿ ಎಲ್ಲರೂ ಖಾಲಿ ಆಗಬಹುದು’ಎಂದು ಸಂತೈಸಿದವು.
‘ವಾರೆವ್ಹಾ…ಜೀವ ಇದೆ ಎಂದು ಬೀಗುತ್ತಾ ಓಡಾಡುವ ನರ ಮನುಷ್ಯರಿಗಿಂತ ನಿರ್ಜೀವಿಗಳಾದ ನೀವುಗಳೇ ವಾಸಿ. ನಮ್ಮ ಸ್ವಾರ್ಥವನ್ನು ಎತ್ತಿ ತೋರಿಸಿದರೂ ನಿಮಗೆ ತಿಳಿದ ರೀತಿಯಲ್ಲಿ ಪ್ರತಿಫಲ ನೀಡಿ ಜೀವನ ಸಾರ್ಥಕ ಪಡಿಸಿಕೊಳ್ಳುತ್ತೀರಿ. ಸಾಕಿದವರಿಗೆ ಸಮಾಧಾನ ಹೇಳುವ ಉದಾರ ಮನಸ್ಸು ನಿಮ್ಮಲ್ಲಿದೆ. ನೀವೆಲ್ಲಾ ನನ್ನ ಜೊತೆ ಕೈ ಜೋಡಿಸಿದರೆ ಕೊರೋನಾ ಏನು, ಯಾವ ಅಪತ್ತು ಬಂದರೂ ಎದುರಿಸಬಹುದು’ ಎಂದು ಹಸುಗಳನ್ನು ಹೊಡೆದುಕೊಂಡು ಮನೆಯತ್ತ ಹೆಜ್ಜೆ ಹಾಕಿದ ಗೋವಿಂದು.
-ಬಿ.ಆರ್.ನಾಗರತ್ನ, ಮೈಸೂರು
bahala chenngide. sudha
ಚಂದದ ಬರಹ
ಈ ಪರಿಕಲ್ಪನೆ ಹಾಗೂ ನಿರೂಪಣೆ ಸೂಪರ್ ಆಗಿದೆ
ಧನ್ಯವಾದಗಳು ಸಾಹಿತ್ಯ ಸಹೃದಯರಿಗೆ.
ಮನಸ್ಸು ಮುದುರಿದಾಗ ಪ್ರಕೃತಿಯೇ ಸಂತೈಸಿದ ಪರಿ ಚೆನ್ನಾಗಿ ಮೂಡಿಬಂದಿದೆ. ಅಭಿನಂದನೆಗಳು.
ಮಾತು ಬಾರದ ಮರ, ಗಿಡ,ಪ್ರಾಣಿಗಳಿಗೆ ಮಾತು ಕೊಟ್ಟು, ಅವುಗಳ ಮನದ ಭಾವನೆಗಳನ್ನು ಚೆನ್ನಾಗಿ ಪ್ರಕಟ ಪಡಿಸಿರುವಿರಿ.
ಧನ್ಯವಾದಗಳು ಗೆಳತಿಯರೇ
ಪ್ರಕೃತಿಯೊಂದಿಗೆ ಒಡನಾಟ ಸೊಗಸಾಗಿ ಮೂಡಿಬಂದಿದೆ
ಇಂದಿನ ವಾಸ್ತವಕ್ಕೆ ಕಥೆಯ ರೂಪ ನೀಡಿದ ರೀತಿ ಚಂದ
ನನ್ನ ಲೇಖನ ಓದಿ ಪ್ರತಿಕ್ರಿಯಿಸಿದ ಸಾಹಿತ್ಯ ಸಹೃದಯರಿಗೆ ನನ್ನ ಧನ್ಯವಾದಗಳು.
ಪ್ರಕೃತಿ ಯನ್ನು ಇಷ್ಟು ಚನ್ನಾಗಿ ಅರ್ಥ ಮಾಡಿ ಕೊಂಡು, ಮರದ ಮನಸ್ಸಿನಾಳಕ್ಕೆ ಹೊಕ್ಕು ಅದರ ಅಂತರ್ಯ ತಿಳಿಸಿ ನಮ್ಮ ಕಣ್ಣು ತೆರೆಸಿದ ಬರಹಗಾರ್ತಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.
ತುಂಬಾ ಚೆನ್ನಾಗಿದೆ
ತುಂಬಾ ಚೆನ್ನಾಗಿದೆ
ನನ್ನ ಲೇಖನ ಓದಿ ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.