‘ನೆಮ್ಮದಿಯ ನೆಲೆ’-ಎಸಳು 2

Share Button

.       
(ಇದುವರೆಗಿನ ಕಥಾಸಾರಾಂಶ: ಮಾಗಿದ ಬದುಕಿನ ಸಂಧ್ಯಾಕಾಲದಲ್ಲಿ, ಏಕಾಂಗಿಯಾಗಿ ಮನೆಯಲ್ಲಿದ್ದ ಸುಕನ್ಯಾಳ ಮನಸ್ಸಿನಲ್ಲಿ ತನ್ನ ಬಾಲ್ಯ, ತೌರುಮನೆ… ಹೀಗೆ ಗತಕಾಲದ ನೆನಪಿನ ಸುರುಳಿ ಬಿಚ್ಚಲಾರಂಭಿಸಿದೆ. ಇನ್ನು ಮುಂದಕ್ಕೆ ಓದಿ)

        ನನ್ನಪ್ಪ ನರಸಿಂಹಯ್ಯನವರಿಗೆ ಹೆಸರಿಗೆ ತಕ್ಕಂತೆ ನರಸಿಂಹನ ಸ್ವಭಾವವಿರಲಿಲ್ಲ. ಅವರ ಕಣ್ಣಲ್ಲಿ ಕರುಣೆ, ನಡೆಯಲ್ಲಿ ಮೃದುತನ, ಅನಾವಶ್ಯಕವಾದ ವಟವಟವಿಲ್ಲದ ತೂಕದ ಮಾತುಗಳು, ಬದುಕಿಗೆ ಎಂದೂ ವಿಮುಖರಾದವರಲ್ಲ. ಅವರು ಓದದ ವಿಷಯಗಳೇ ಇರಲಿಲ್ಲ. ನಮ್ಮ ತಾತನವರಿಗಿದ್ದ ಜನ್ಮಜಾತ ಸಹಜ ಸಂಸ್ಕಾರಗಳು ಅವರಲ್ಲಿಯೂ ಮನೆಮಾಡಿಕೊಂಡಿದ್ದವು. ನನ್ನಮ್ಮ ಭಾಗೀರಥಿ ಶಾಂತ ಸ್ವಭಾವದ ಹೆಂಗಸು. ಆಚಾರವಿಚಾರ, ಶಾಸ್ತ್ರಸಂಪ್ರದಾಯಗಳಲ್ಲಿ ಶ್ರದ್ಧೆ ನಂಬಿಕೆ ಇಟ್ಟುಕೊಂಡು ಆಚರಿಸಿಕೊಂಡು ಬರುತ್ತಿದ್ದರು. ಸ್ವತಃ ಉಪಾಧ್ಯಾಯರಾಗಿದ್ದ ನನ್ನಪ್ಪನಿಗೆ ವಿದ್ಯೆಯ ಮೇಲೆ ಅಪಾರ ಒಲವು. ನಮಗೆಲ್ಲಾ ಅದರ ಮಹತ್ವವನ್ನು ಸಮಯ ಸಿಕ್ಕಾಗಲೆಲ್ಲ ಹಲವಾರು ಮಹನೀಯರ ಉದಾಹರಣೆ ಕೊಡುತ್ತಾ ಮನದಟ್ಟು ಮಾಡಿಕೊಡುತ್ತಿದ್ದರು. ಇನ್ನು ಸಲಿಗೆ, ಸ್ವಾತಂತ್ರ್ಯದ ಬಗ್ಗೆ ಹೇಳುವುದಾದರೆ ಬಿಗಿಮುಷ್ಟಿ ಇಲ್ಲದಿದ್ದರೂ ಲಕ್ಷ್ಮಣರೇಖೆಯಂತೂ ಇತ್ತು. ಹೆಣ್ಣುಗಂಡು ಮಕ್ಕಳೆಂಬ ಭೇದಮಾಡದೆ ಒಂದೇ ತೆರನಾದ ಸವಲತ್ತುಗಳನ್ನು ಒದಗಿಸುತ್ತಿದ್ದರು. ಹೆತ್ತವರ ಆಸೆಯಂತೆ ನಾವುಗಳೂ ಸ್ಪಂದಿಸುತ್ತಾ ಹೋದೆವು. ಹಿರಿಯಣ್ಣ ರಾಘವ ಗಣಿತ ವಿಷಯದಲ್ಲಿ ಎಂ,ಎಸ್.ಸಿ. ಮಾಡಿ ಕಾಲೇಜೊಂದರಲ್ಲಿ ಉಪನ್ಯಾಸಕ ಹುದ್ದೆ ಹಿಡಿದರೆ ಕಿರಿಯಣ್ನ ಮಾಧವ ಚಾರ್ಟರ್ಡ್ ಅಕೌಂಟೆಂಟ್ ಆಗಿ ವೃತ್ತಿಯನ್ನಾರಂಭಿಸಿದನು. ಅಕ್ಕ ಉಮಾ ಹೋಂಸೈನ್ಸ್ ಪದವಿ ಗಳಿಸಿದಳು. ಅವಳ ವಿವಾಹವೂ ಆಯಿತು. ನನ್ನ ಭಾವ ಸ್ವಂತ ಉದ್ಯಮಿಯಾಗಿದ್ದರು. ನನ್ನ ಇಬ್ಬರು ಅಣ್ಣಂದಿರ ವಿವಾಹಗಳೂ ಅವರಿಷ್ಟದಂತೆ ಆಗಿದ್ದವು. ಅವರುಗಳು ಸಂಸಾರಸ್ಥರಾಗಿ ತಮ್ಮದೇ ಆದ ನೆಲೆಗಳನ್ನು ಕಟ್ಟಿಕೊಂಡರೂ ಅವರ ಈ ವ್ಯವಸ್ಥೆಗಳು ನನ್ನ ಹೆತ್ತವರಿಗೆ ಅಷ್ಟಾಗಿ ಇಷ್ಟವಾಗಿರಲಿಲ್ಲ. ಆದರೂ ಅದನ್ನು ಹೊರಗೆ ತೊರ್ಪಡಿಸಿಕೊಳ್ಳದೆ ಮೌನದ ಮೊರೆ ಹೊಕ್ಕಿದ್ದರು. ಅಷ್ಟರಲ್ಲಿ ನಾನು ವಿಜ್ಞಾನ ಪದವಿ ಮುಗಿಸಿದೆ. ಅಂತೆಯೇ ನಂಜನಗೂಡಿನ ಮಧ್ಯಮ ವರ್ಗದ ಕುಟುಂಬದವರೊಬ್ಬರಿಂದ ನನ್ನನ್ನು ಸೊಸೆಯಾಗಿ ಮಾಡಿಕೊಂಡು ಸಂಬಂಧ ಬೆಳೆಸುವ ಅಪೇಕ್ಷೆಯಿಂದ ಕೋರಿಕೆ ಬಂದಿತು. ಅವರ ಮನೆಯಲ್ಲಿ ನಾಲ್ಕುಗಂಡು ಒಬ್ಬ ಹೆಣ್ಣು ಮಗಳಿದ್ದರು. ಮನೆಯ ಮುಖ್ಯಸ್ಥರು ರಾಮಾಜೋಯಿಸರು. ಅವರ ಧರ್ಮಪತ್ನಿ ಶಾರದಮ್ಮ. ಯಜಮಾನರಿಗೆ ನಂಜುಂಡೇಶ್ವರ ದೇವಾಲಯದಲ್ಲಿ ಲೆಕ್ಕಪತ್ರವಿಡುವ ಕರಣಿಕರ ಕೆಲಸ. ಸ್ವಲ್ಪ ಮಟ್ಟಿಗೆ ಹೊಲ, ಜಮೀನು ಇದ್ದು ಹೈನುಗಾರಿಕೆಯನ್ನೂ ಮಾಡಿಕೊಂಡಿದ್ದರು. ಉಣ್ಣಲು, ಉಡಲು ಯಾವ ತೊಂದರೆಯಿರಲಿಲ್ಲ. ಅವರ ಕೊನೆಯ ಮಗನೇ ದಯಾನಂದ. ಮೈಸೂರಿನ ಕಾಲೇಜೊಂದರಲ್ಲಿ ವಾಣಿಜ್ಯ ವಿಷಯದಲ್ಲಿ ಉಪನ್ಯಾಸಕನಾಗಿದ್ದ. ಅವನಿಗೇ ಕನ್ಯೆಯ ಹುಡುಕಾಟ. ವಿವರಗಳಿಷ್ಟೇ ಆದರೂ ಹುಡುಗನೊಂದು ಬೇಡಿಕೆಯಿಟ್ಟಿದ್ದ. ಮದುವೆಯಾಗಿ ಬರುವ ಹುಡುಗಿ ನಂಜನಗೂಡಿನಲ್ಲಿಯೇ ಇರಬೇಕೆಂಬುದು. ಈ ಎಲ್ಲ ವಿಚಾರಗಳನ್ನು ನಮ್ಮಪ್ಪನ ಗೆಳೆಯರಾದ ಶ್ಯಾಮರಾಯರು ತಂದಿದ್ದರು. ಅದನ್ನು ಕೇಳಿದ ನನ್ನ ಅಣ್ಣಂದಿರು ಎಲ್ಲವೂ ಸರಿ, ಆದರೆ ನಮ್ಮ ತಂಗಿ ನಂಜನಗೂಡಿನಲ್ಲಿಯೇ ಇರಬೇಕು ಎಂಬುದೇಕೆ? ಹುಡುಗ ಕೆಲಸ ಮಾಡುತ್ತಿರುವುದು ಮೈಸೂರಿನಲ್ಲಿ ತಾನೆ. ಇದ್ಯಾವ ಸೀಮೆಯ ಕರಾರು? ಬೇರೆ ಸಂಬಂಧ ನೋಡಿದರಾಯ್ತು ಇದನ್ನು ಬಿಟ್ಟುಬಿಡಿ. ಎಂದರು. ಆದರೆ ನನ್ನ ಹೆತ್ತವರಿಗೆ ತನ್ನ ಹಿರಿಯರ ಬಗ್ಗೆ ಇಷ್ಟು ಕಾಳಜಿ ಇರುವ ಹುಡುಗನನ್ನು ಬಿಡಬಾರದು. ಎಂಬ ಅನಿಸಿಕೆ. ಸ್ವಲ್ಪ ಕಾಲಾವಕಾಶ ಕೇಳಪ್ಪಾ ನಿರ್ಧಾರ ತೆಗೆದುಕೊಳ್ಳಲು ಎಂದು ತಮ್ಮ ಗೆಳೆಯನಿಗೆ ಹೇಳಿಕೊಂಡರು. ಇದರಿಂದ ಅಣ್ಣಂದಿರಿಗೆ ಸ್ವಲ್ಪ ಅಸಮಾಧಾನವಾಗಿ ಧುಮುಧುಮು ಎನ್ನುತ್ತಲೇ ತಮ್ಮ ಮನೆಗಳಿಗೆ ತೆರಳಿದರು.

.            ಅವರೆಲ್ಲರೂ ಹೋದನಂತರ ಮನೆಯಲ್ಲಿ ಮೌನ ಆವರಿಸಿತು. ಒಂದೆರಡು ಸಾರಿ ಏನೋ ಹೇಳಬೇಕೆಂದು ಹೆತ್ತವರು ಪ್ರಯತ್ನಿಸಿದರೂ ಮಾತನಾಡಲಿಲ್ಲ. ಇದೆಲ್ಲವನ್ನೂ ಗಮನಿಸುತ್ತಿದ್ದ ನಾನು ಅಪ್ಪಾ, ಅಮ್ಮ ನನ್ನ ಕಡೆಯಿಂದ ಯಾವುದೇ ಅಭ್ಯಂತರವಿಲ್ಲ. ಅವರಿಗೆ ಒಪ್ಪಿಗೆಯೆಂದು ಹೇಳಿಕಳುಹಿಸಿ ಎಂದೆ. ಅದನ್ನು ಕೇಳಿದ ಅವರಿಬ್ಬರೂ ಅಚ್ಚರಿಯಿಂದ ನನ್ನತ್ತ ನೋಡಿದರು. ಅವರ ಕಂಗಳಲ್ಲಿ ಸಂತಸದ ಸೆಲೆ ಕಂಡಿತು. ಆದರೂ ಬಾಯಲ್ಲಿ ಮಾತ್ರ ಮಗಳೇ ಸುಕನ್ಯಾ ನಿಧಾನವಾಗಿ ಆಲೋಚಿಸು. ಇದರಲ್ಲಿ ನಮ್ಮ ಬಲವಂತವೇನಿಲ್ಲ. ಈಗ ನಿನ್ನ ಅಣ್ಣಂದಿರು ಹೇಳಿದ್ದು ನೀನು ಸಿಟಿಯಲ್ಲಿ ಬೆಳೆದ ಹುಡುಗಿ, ಅಲ್ಲದೆ ತುಂಬ ಸುಖವಾಗಿ ಬೆಳೆದವಳು, ಅಲ್ಲಿ ಹೇಗೆ ಹೊಂದಿಕೊಳ್ಳುತ್ತಾಳೆ ಎಂದು ಎಂದರು. ಇಲ್ಲಾಪ್ಪ ನಾನು ಎಲ್ಲ ರೀತಿಯಲ್ಲೂ ಯೋಚಿಸಿಯೇ ನಿರ್ಧಾರಕ್ಕೆ ಬಂದಿದ್ದೇನೆ ಎಂದೆ.

.          ನಾನು ಹೀಗೆ ಹೇಳಿದ್ದೇ ತಡ, ಅವರಿಬ್ಬರೂ ಹೊಸ ಹುರುಪು ಬಂದಂತೆ ಕುಳಿತಲ್ಲಿಂದ ಎದ್ದರು. ಅಮ್ಮ ದೇವರ ಮನೆಯಕಡೆ ಹೊರಟರೆ ಅಪ್ಪ ತಮ್ಮ ರೂಮಿಗೆ ತೆರಳಿ ಶಾಲು ಹೊದ್ದು ಬಂದರು. ಬೆಳಗ್ಗೆ ತಿಳಿಸಿದರಾಗದೇ ಅಪ್ಪಾ ಎಂದೆ. ಇಂತಹ ವಿಷಯಗಳಲ್ಲಿ ತಡಮಾಡಬಾರದು ಮಗಳೇ ಎನ್ನುತ್ತಾ ಚಪ್ಪಲಿ ಮೆಟ್ಟಿಕೊಂಡು ಮುಂಬಾಗಿಲು ತೆರೆದು ಮುಂದಿನ ಬೀದಿಯಲ್ಲಿದ್ದ ಅವರ ಗೆಳೆಯರು ಶ್ಯಾಮರಾಯರ ಮನೆಗೆ ಹೊರಟೇ ಬಿಟ್ಟರು. ಇತ್ತ ನನ್ನಮ್ಮ ದೇವರ ಮನೆಯಿಂದ ಹೊರಬಂದು ದೇವರ ಕುಂಕುಮ ನನ್ನ ಹಣೆಗಿಟ್ಟು ನನ್ನ ಮುಖವನ್ನು ಬೊಗಸೆಯಲ್ಲಿ ಹಿಡಿದು ನನ್ನ ಮುದ್ದಿನ ಕೂಸೇ, ನನಗೆ ಗೊತ್ತಿತ್ತು ನೀನು ಹೀಗೇ ಹೇಳುತ್ತೀಯೆಂದು. ‘ತುಳಿದು ಬಾಳೋದಕ್ಕಿಂತ ತಿಳಿದು ಬಾಳೋದು ಮುಖ್ಯ’ ಒಳ್ಳೆಯ ತೀರ್ಮಾನ ತೆಗೆದುಕೊಂಡೆ ಮಗಳೇ ಎಂದು ನನ್ನ ಮುಂದಲೆಗೆ ಒಂದು ಸಿಹಿ ಮುತ್ತನ್ನಿತ್ತರು. ಛೀ ಹೋಗಮ್ಮ ಇಷ್ಟಕ್ಕೇ ಆಗಲೇ ಮದುವೆ ಆದಂತೆ ಆಡುತ್ತಿದ್ದೀಯ. ಇನ್ನೂ ಅವರುಗಳು ನಮ್ಮ ಮನೆಗೆ ಬಂದು ನನ್ನನ್ನು ನೋಡಿ ಒಪ್ಪಬೇಕಲ್ಲಾ? ಎಂದೆ. ಒಪ್ಪದೇ ಏನು, ಮಾಡುತ್ತಾರೆ. ನನ್ನ ಮಗಳು ಒಳ್ಳೆಯ ದಂತದ ಬೊಂಬೆಯ ಹಾಗೆ ಇದ್ದಾಳೆ. ಇನ್ನು ಗುಣವೋ ಅಪರಂಜಿ. ಎಂದರು. ನಾನೇ ಮುಂದಾಗಿ ಅಮ್ಮಾ ಸಾಕುಮಾಡುತ್ತೀರಾ? ಎಂದು ಹುಸಿಮುನಿಸು ತೋರುವಷ್ಟರಲ್ಲಿ ಅಪ್ಪನ ಆಗಮನವಾಯ್ತು. ಏನು ಅಮ್ಮ ಮಗಳ ಜುಗಲಬಂದಿ ಎನ್ನುತ್ತಾ ಚಪ್ಪಲಿ ಬಿಟ್ಟು ಒಳಬಂದರು. ಖುರ್ಚಿಯ ಮೇಲೆ ಕುಳಿತು ದೀರ್ಘವಾದ ಉಸಿರು ಬಿಟ್ಟರು.

‘         ಅಪ್ಪಾ ಹೇಳಿಬಂದಿರಾ? ನಾವು ಎಲ್ಲಿಗೆ ಹೋಗಬೇಕಂತೆ? ಎಂದು ಕೇಳಿದೆ. ಓ. ಅದೇ ಸಂಗತಿಯನ್ನು ಕೇಳಿದೆ. ಅದಕ್ಕವರು ಅಯ್ಯೋ ಆ ಪದ್ಧತಿಗಳೆಲ್ಲ ಅವರಿಗಿಷ್ಟವಿಲ್ಲವಂತೆ. ಅವರುಗಳೇ ನಮ್ಮ ಮನೆಗೆ ಬರುತ್ತಾರಂತೆ. ಎಂದರು. ಈ ವಿಷಯ ನನಗೆ ಹೊಸದು. ಏಕೆಂದರೆ ನಮ್ಮಲ್ಲಿ ಗಂಡಿನ ಮನೆಯವರು ಎಲ್ಲಿಗೆ ಬರಲು ತಿಳಿಸುತ್ತಾರೋ ಅಲ್ಲಿಗೆ ನಾವೇ ಹುಡುಗಿಯನ್ನು ಕರೆದುಕೊಂಡು ಹೋಗುವುದು ಪದ್ಧತಿ. ಅಲ್ಲಿಯೇ ವಧು ಪರೀಕ್ಷೆ. ನಮ್ಮ ಅಣ್ಣಂದಿರು ತಮ್ಮ ಸಂಗಾತಿಗಳನ್ನು ತಾವೇ ಆರಿಸಿಕೊಂಡಿದ್ದರಿಂದ ನಮಗೆ ಹಾಗೆ ಕರೆಸುವ ಅವಸರ ಬರಲೇ ಇಲ್ಲ. ಆದರೆ ನಮ್ಮ ಅಕ್ಕ ಉಮಾಳ ವಧುಪರೀಕ್ಷೆಯು ನಮ್ಮಪ್ಪನ ಸ್ನೇಹಿತರಾದ ಛಾಯಾಪತಿ ಎಂಬುವರ ಮನೆಯಲ್ಲಿ ಏರ್ಪಾಡಾಗಿತ್ತು. ಪುಣ್ಯಕ್ಕೆ ಮೊದಲನೇ ಇಂಟರ್‌ವ್ಯೂನಲ್ಲೇ ವರನ ಕಡೆಯವರು ಕ್ಲೀನ್‌ಬೋಲ್ಡ್ ಆಗಿಬಿಟ್ಟರು. ಫಟಾಫಟ್ ಯಾವುದೇ ಕಂಡೀಷನ್ ಇಲ್ಲದೆ ವಿವಾಹ ಸಂಪನ್ನವಾಗಿತ್ತು. ನನ್ನದು ಇದೇ ಮೊದಲ ವಧುಪರೀಕ್ಷೆ. ಅದೂ ಹೊಸ ರೀತಿಯಲ್ಲಿ. ನನಗೆ ಒಳಗೊಳಗೇ ಖುಷಿ ಅನ್ನಿಸಿತು. ಸಂಜೆಯಿಂದ ಮನೆಯಲ್ಲಿ ಕವಿದಿದ್ದ ಆತಂಕ ಮಾಯವಾಗಿ ಸಮಾಧಾನದ ಹಂತ ಮುಟ್ಟಿತ್ತು. ಮೌನ ಸರಿದುಹೋಗಿ ಮೂವರೂ ಹರಟೆ ಹೊಡೆಯುತ್ತಾ ರಾತ್ರಿಯೂಟ ಮುಗಿಸಿ ನಿರಾಳವಾಗಿ ನಿದ್ರೆಗೆ ಜಾರಿದೆವು.

‘          ಹುಡುಗನ ಕಡೆಯವರು ಜಾತಕಗಳು ಹೊಂದಿಕೊಂಡಿವೆ, ನೀವೂ ತೋರಿಸಿ ಎಂದು ತಮ್ಮ ಮಗನ ಜಾತಕ ಕಳುಹಿಸಿಕೊಟ್ಟರು. ಶಾಮರಾಯರೇ ಅದನ್ನು ಪರಿಶೀಲಿಸಿ ಪ್ರಶಸ್ತವಾಗಿದೆ ಎಂಬ ಸಂದೇಶ ರವಾನಿಸಿದರು. ನಂತರ ಅವರು ಹೆಚ್ಚುದಿನ ಕಾಯಿಸದೆ ಮುಂದಿನ ಭಾನುವಾರವೇ ಬರುತ್ತೇವೆಂಬ ಸುದ್ಧಿಯನ್ನು ತಿಳಿಸಿದರು. ವಿಷಯ ತಿಳಿದ ನನ್ನ ಅಣ್ಣಂದಿರು ಈ ಸಂಬಂಧಕ್ಕೆ ನಕಾರಾತ್ಮಕ ಪ್ರತಿಕ್ರಿಯೆ ತೋರಿದ್ದರೂ ಮತ್ತೆ ಅವರನ್ನೇ ಕರೆದಿದ್ದಾರೆ ಎಂದುಕೊಂಡು ಇದಕ್ಕೆ ಔಪಚಾರಿಕವಾಗಿ ತಮ್ಮ ಸಮ್ಮತಿ ಇದೆ ಎಂದು ತಮ್ಮ ಅಸಮಾಧಾನವನ್ನು ತೋರ್ಪಡಿಸಿಕೊಂಡರು. ಆ ದಿನ ತಮಗೇನೋ ತುರ್ತಾದ ಕಾರ್ಯಗಳಿವೆ ಎಂದು ಹುಸಿನೆಪ ಒಡ್ಡಿ ಬರಲಾಗದ್ದಕ್ಕೆ ಅಸಹಾಯಕತೆ ವ್ಯಕ್ತ ಪಡಿಸಿದರು. ಇದಾವುದನ್ನೂ ಮನಸ್ಸಿಗೆ ಹಚ್ಚಿಕೊಳ್ಳದೆ ನನ್ನ ಹೆತ್ತವರು ತಮ್ಮ ತಯಾರಿಯನ್ನು ಮಾಡಿಕೊಳ್ಳತೊಡಗಿದರು. ಹಬ್ಬ, ಹರಿದಿನ, ಮದುವೆ, ಮುಂಜಿ ಇಂಥಹ ವಿಶೇಷ ಸಮಾರಂಭಗಳಲ್ಲಿ ನಮ್ಮಪ್ಪ ಪಾಲಳ್ಳಿಯಲ್ಲಿರುವ ನಮ್ಮ ಜಮೀನು ಮಾಡುತ್ತಿದ್ದ ರೈತಾಪಿ ಸಿಬ್ಬಂದಿಗಳಲ್ಲಿ ಒಂದಿಬ್ಬರನ್ನು ಕರೆಯಿಸಿ ಮನೆಯ ಧೂಳುದುಂಬುಗಳನ್ನು ತೆಗೆಸಿ ಸ್ವಚ್ಛ ಮಾಡಿಸುತ್ತಿದ್ದರು. ಈಗಲೂ ಅವರುಗಳೇ ಬಂದು ಕೆಲಸವನ್ನು ಮುಗಿಸಿಕೊಟ್ಟರು. ಮನೆಯಲ್ಲಿ ಕೆಲಸದವರು ಇರಲಿಲ್ಲವೆಂದಲ್ಲ, ಕಸಮುಸುರೆ ಮಾಡುವುದಕ್ಕಿದ್ದಳು. ಆದರೆ ಇಷ್ಟು ದೊಡ್ಡದಾದ ಮನೆ, ಅದೂ ಹೆಂಚಿನ ಮನೆಯನ್ನು ಶುಚಿಗೊಳಿಸುವ ಕೆಲಸ ಹೇಳಿದ್ದರೆ ಆಕೆ ಓಡಿಹೋಗಿಬಿಡುವಳೆಂದು ಅಪ್ಪ ಕಂಡುಕೊಂಡ ಉಪಾಯವದು.

.        ಏನು ತಿಂಡಿತೀರ್ಥಮಾಡಬೇಕು, ಅವರುಗಳು ಬರುವ ಸಮಯಕ್ಕೆ ಯಾವ ಪದಾರ್ಥದಿಂದ ಸ್ವಾಗತಿಸಬೇಕು ಎಂಬುದರ ಬಗ್ಗೆ ಚರ್ಚೆಮಾಡಿ ನಿರ್ಧರಿಸಿದ್ದಾಯಿತು. ಗಂಡಿನವರು ಹತ್ತು ಗಂಟೆಗೆ ಬಂದು ಹನ್ನೆರಡರೊಳಗೆ ಹೊರಟು ಬಿಡುವವರಿದ್ದಾರೆಂದು ಅಪ್ಪನ ಗೆಳೆಯರಾದ ಶಾಮರಾಯರು ಹೇಳಿದ್ದನ್ನು ಅಪ್ಪ ಎಲ್ಲರಿಗೂ ನೆನಪಿಸಿದರು. ಅದಾದ ನಂತರ ಯಥಾಪ್ರಕಾರ ಬಂದಾಗ ನಿಂಬೆಹಣ್ಣಿನ ಪಾನಕ, ನಂತರ ಉಪಾಹಾರಕ್ಕೆ ವಾಡಿಕೆಯಂತೆ ಕೇಸರಿಬಾತ್, ಉಪ್ಪಿಟ್ಟಿನ ವ್ಯವಸ್ಥೆಗೆ ಒಪ್ಪಿಗೆಯಾಯಿತು. ಮತ್ತೆ ಏನೋ ನೆನಪಿಸಿಕೊಂಡವರಂತೆ ಲೇ ಸುಕನ್ಯಾ, ನಿನ್ನ ಗೆಳತಿ ಹೇಮಾಳಿಗೆ ಆ ದಿನ ಸ್ವಲ್ಪ ಬರಲು ಹೇಳು ಎಂದರು ಅಮ್ಮ. ಆಗ ನಾನು ಬೇಡಮ್ಮಾ, ಈಗಲೇ ಅವೆಲ್ಲಾ ಏಕೆ? ಎಂದೆ. ಅರೆ ನಿನಗೇನು ಗೊತ್ತಾಗಲ್ಲ ಮಗಳೇ, ನಿಮ್ಮಕ್ಕನೂ ನಿನ್ನ ಜೊತೆಯಲ್ಲಿಲ್ಲ, ಇದೇ ಊರಿನಲ್ಲಿದ್ದರೂ ಅತ್ತಿಗೆಯರೂ ಇಲ್ಲವೇ ಇಲ್ಲ. ನೀನೊಬ್ಬಳೇ ಆಗುತ್ತೀಯೆಂದು ಹೇಳಿದೆ. ಜೊತೆಗೊಬ್ಬರು ಇದ್ದರೆ ಚೆಂದ. ‘ಹಾಗೇ ಇನ್ನೊಂದು ಮಾತು. ನೀನು ಬೇಜಾರು ಮಾಡಿಕೊಂಡರೂ ಪರವಾಗಿಲ್ಲ ಹೇಳಿಬಿಡುತ್ತೇನೆ. ಆ ವರನ ಜೊತೆಯಲ್ಲಿ ಹಿರಿಯರು ಬಂದಿರುತ್ತಾರೆ. ನಿನ್ನ ಅಲಂಕಾರ ಹಿತಮಿತವಾಗಿರಲಿ. ಕೂದಲನ್ನು ಒಪ್ಪವಾಗಿ ಬಾಚಿ ಲಕ್ಷಣವಾಗಿ ಜಡೆ ಹಾಕಿಕೋ. ಕಿವಿ ಪಕ್ಕದಲ್ಲಿ ಹೂ ಸಿಕ್ಕಿಸಿಕೊಳ್ಳಬೇಡ. ಸಾಕವ್ವನಿಗೆ ಮಲ್ಲಿಗೆ ದಂಡೆ ತರಲು ಹೇಳಿದ್ದೇನೆ. ಮುಡಿದುಕೋ. ಕಣ್ಣಿಗೆ ಕಾಣಿಸದಂತಹ ಚುಕ್ಕೆ ಬಿಟ್ಟು ಹಣೆಗೆ ಅಗಲವಾಗಿ ಕುಂಕುಮದ ಬೊಟ್ಟಿಟ್ಟುಕೋ. ಕಂಡೂ ಕಾಣದಂತಿರುವ ನಿನ್ನ ಕಿವಿಯೋಲೆ ತೆಗೆದು ಕೆಂಪು ಮುತ್ತಿನ ಓಲೆ ಹಾಕಿಕೋ. ಅದಕ್ಕೆ ಒಪ್ಪುವಂಥ ಲಕ್ಷ್ಮೀಪದಕದ ಒಂದೆಳೆ ಸರ ಹಾಕಿಕೋ. ಕೈಗೆ ವಾಚು ಕಟ್ಟಿಕೋಬೇಡ, ಚಿನ್ನದ ಬಳೆಗಳ ಜೊತೆಗೆ ಗಾಜಿನ ಬಳೆಗಳೂ ಇರಲಿ. ಒಳ್ಳೆಯ ಬಣ್ಣದ ಮೈಸೂರು ಸಿಲ್ಕ್ ಸೀರೆ ಉಟ್ಟುಕೋ’.

.         ಹೀಗೆ ಅವ್ಯಾಹತವಾಗಿ ಸಾಗುತ್ತಿದ್ದ ಅವರ ಸಲಹೆಗಳ ಸರಮಾಲೆಯನ್ನು ಅಲ್ಲಿಯೇ ಕೆಲಸಮಾಡುತ್ತಿದ್ದ ಸಾಕಮ್ಮ ಕೇಳಿಸಿಕೊಂಡು “ಅವ್ವಾ, ನಾನು ನಿಮ್ಮ ಮನೆಯಲ್ಲಿ ಕೆಲಸ ಮಾಡೋಕೆ ಬಂದು ಸುಮಾರು ಇಪ್ಪತ್ತುವರ್ಷಕ್ಕೂ ಮಿಕ್ಕಿರಬೇಕು. ಇದುವರೆಗೂ ಆದ ಮದುವೆಗಳನ್ನೂ ನೋಡಿದ್ದೀನಿ. ನೀವು ಇಷ್ಟು ಖುಷಿಪಟ್ಟಿದ್ದು ನಾಕಾಣೆ. ಈಗಿನ್ನೂ ಅವರು ನಮ್ಮ ಚಿಕ್ಕಮ್ಮಾವ್ರನ್ನು ನೋಡಕ್ಕೆ ಬತ್ತಾವ್ರೆ ಹ್ಹ ಹ್ಹ” ಎಂದು ನಗಾಡಿದಳು. ಶ್..ಸುಮ್ಮನಿರೇ, ಅಡ್ಡಾದಿಡ್ಡಿ ಮಾತಾಡಬೇಡ. ಅವರು ನಮ್ಮ ಸುಕನ್ಯಾಳನ್ನು ಒಪ್ಪೇ ಒಪ್ತಾರೆ. ಅವಳು ದೊಡ್ಡವರಿಗೆಲ್ಲಾ ಬುದ್ಧಿ ಹೇಳುವಂತೆ ಸಂಸಾರ ನಡೆಸುತ್ತಾಳೆ ನೋಡ್ತಾ ಇರು. ನಾನದನ್ನು ಕಣ್ತುಂಬ ನೋಡಬೇಕು ಎಂದು ಸಾಕಮ್ಮನ ಬಾಯಿ ಮುಚ್ಚಿಸಿದರು ನಮ್ಮಮ್ಮ. ಅವರ ಮಾತಿನ ಹಿಂದೆ ಜವಾಬ್ದಾರಿಯನ್ನೇ ಬಯಸದ ನನ್ನ ಅಣ್ಣಂದಿರ ನಡವಳಿಕೆಯಿಂದ ಅವರೆಷ್ಟು ನೊಂದಿದ್ದಾರೆ ಎಂಬುದನ್ನು ತಿಳಿದು ಮಾರುತ್ತರ ನೀಡದೇ ಮೌನ ವೀಕ್ಷಕಳಾದೆ.

.       ಮರುದಿನ ಬೆಳಗ್ಗೆ ನಾನು ಏಳುವಷ್ಟರಲ್ಲಾಗಲೇ ಬಾಗಿಲಿಗೆ ನೀರುಹಾಕಿ ರಂಗೋಲಿ ಬಿಡಲಾಗಿದೆ. ದಿನವೂ ಒಂಭತ್ತು ಗಂಟೆಗೆ ಬರುತ್ತಿದ್ದ ಸಾಕಮ್ಮ ಎಷ್ಟು ಬೇಗ ಬಂದಿದ್ದಳೋ ಕಾಣೆ. ಮನೆಯನ್ನೆಲ್ಲಾ ಒಪ್ಪ‌ಓರಣ ಮಾಡಿ ರಾತ್ರಿಯ ಪಾತ್ರೆಗಳ ಸಾರಣೆಮಾಡುತ್ತಿದ್ದಾಳೆ. ಹೆಜ್ಜೆ ಸಪ್ಪಳದಿಂದಲೇ ನನ್ನ ಬರುವಿಕೆಯನ್ನು ತಿಳಿದ ಅವಳು ಅವ್ವಾ ಚಿಕ್ಕಮ್ಮಾವ್ರು ಎದ್ದರು ನೋಡಿ ಎಂದು ಕೂಗಿದಳು. ನಾನು ಏಕೇ ಹೀಗೆ ಕೂಗಿಕೊಳ್ಳುತ್ತೀ ನಾನು ಎದ್ದು ಬರುವುದನ್ನು ನನ್ನಮ್ಮ ಎಂದೂ ನೋಡೇ ಇಲ್ಲವೇ? ಎಂದೆ. ಹುಂ ಅದೇನೂ ಹೊಸದಲ್ಲ, ಆದರೆ ಇವತ್ತು ನೀವು ಎದ್ದ ಕೂಡ್ಲೆ ಅವ್ವ ಅವರಿಗೆ ಹೇಳು ಅಂದಿದ್ರು. ಅದ್ಕೇ ಅಂಗೆ ಕೂಗಿದೆ ಎಂದಳು. ಅವಳ ಮಾತು ಕೇಳಿದ ನನಗೆ ನನ್ನಮ್ಮ ನೆನ್ನೆಯೇ ಸಾಕಷ್ಟು ಇನ್‌ಸ್ಟ್ರಕ್ಷನ್ ಕೊಟ್ಟಿದ್ದಾರೆ. ಇವತ್ತು ಇನ್ಯಾವ ಹೊಸದು ತಲೆಗೆ ಹೊಕ್ಕಿದೆಯೋ ಕಾಣೆ ಎಂದು ಯೋಚಿಸುವಷ್ಟರಲ್ಲೇ ಹಾ ! ಎದ್ದೆಯಾ, ನಿನ್ನ ನಿತ್ಯಕರ್ಮಗಳನ್ನು ಮುಗಿಸಿ ಬಾ, ಬಿಸಿಬಿಸಿ ಕಾಫಿ ಕೊಡುತ್ತೇನೆ. ಕುಡಿದು ತಲೆಗೆ ಸ್ವಲ್ಪ ಎಣ್ಣೆ ಬೆವರು ಮಾಡಿಕೋ. ಸಾಕವ್ವ ನೀರು ಹಾಕಿ ಬೆನ್ನು ಉಜ್ಜಿಕೊಡುತ್ತಾಳೆ. ಬೇಗ ಸ್ನಾನ ಮುಗಿಸಿ ಬಾ, ಅಂಗಳದಲ್ಲೇ ನಿಂತು ತಲೆ ಒಣಗಿಸಿಕೊಳ್ಳುವಂತೆ, ಒದ್ದೆ ಕೂದಲನ್ನು ಬಾಚಿಕೊಂಡರೆ ತಲೆ ನೋವಾಗುತ್ತೆ. ನಾನೇ ಅದನ್ನು ಮಾಡಿಸೋಣವೆಂದರೆ ನನ್ನದು ಆಗಲೇ ಸ್ನಾನ ಆಗಿಬಿಟ್ಟಿದೆ. ಅಪ್ಪ ಸ್ನಾನ ಪೂಜೆ ಮುಗಿಸಿ ಹೊರಗೆ ಹೋಗಿದ್ದಾರೆ. ಇನ್ನೇನು ಬರಬಹುದು ಎಂದರು ಅಬ್ಬಾ ! ಇಷ್ಟೇ ತಾನೇ, ಇದೇನು ನನಗೆ ಹೊಸದಲ್ಲ. ತಲೆಸ್ನಾನ ಮಾಡಿದಾಗಲೆಲ್ಲ ಅಮ್ಮ ಇಲ್ಲವೇ ಸಾಕಮ್ಮನ ಉಪಸ್ಥಿತಿ ಇದ್ದೇ ಇರುತ್ತಿತ್ತು. ಆಗೆಲ್ಲ ಅಮ್ಮಾ ಕೂದಲನ್ನು ಕಟ್ ಮಾಡಿಸಿಬಿಡುತ್ತೇನೆಂದರೆ ಛೀ..ಛೀ ಅದೇನು ಮಾತೂಂತ ಆಡ್ತೀ ಕೂಸೇ, ಹೆಣ್ಣುಮಕ್ಕಳಿಗೆ ಕೂದಲೇ ಭೂಷಣ. ಅಲ್ಲದೆ ನಮ್ಮಲ್ಲಿನ ಸಂಪ್ರದಾಯ ಗೊತ್ತಿಲ್ಲವೇನು ನಿನಗೆ? ಏನು ಈಗಿನ ಹುಡುಗೀರೋ ಎಂದರೆ ಸಾಕಮ್ಮ ಚಿಕ್ಕಮ್ಮಾ ಅದ್ಯಾಕೆ ಬೇಸರ ಮಾಡಿಕೊಳ್ತೀರಿ. ವರ್ಷ ಕಳೆದಂತೆ ತಂತಾನೇ ಕೂದಲು ಕಡಿಮೆಯಾಗ್ತವೆ. ಮದುವೆಗೆ ಮೊದಲು ನಂಗೂ ಹಂಗೇ ದಪ್ಪಗೆ ಉದ್ದಕ್ಕಿದ್ವು. ಆ ಊರು, ಈ ಊರು ಅಂತ ತಿರುಗ್ತಾ ತಿರುಗ್ತಾ ಅತ್ತೇ ಮನೆ ಕ್ವಾಟ್ಲೇಲಿ ಸಿಕ್ಕಿ ಇಕಾ ನೋಡಿ ಹೆಂಗೆ ಆಗೈತೆ ಚೇಳಿನಕೊಂಡಿ ಥರಾ ಎಂದು ವೈರಾಗ್ಯದ ಮಾತನಾಡಿದಳು. ಅದು ನೆನಪಿಗೆ ಬಂತು. ಅತ್ತೆ ಮನೆಗೆ ಹೋದಾಗ ಇಲ್ಲಿ ನಡೆಸಿದ ದರ್ಬಾರು ಅಲ್ಲಿ ನಡೆಯುತ್ತಾ. ಅಲ್ಲದೆ ಹೊಸ ಊರು, ನೀರು..ಹೂಂ ಅಯ್ಯೋ ಇನ್ನೂ ನೀನಿಲ್ಲೇ ನಿಂತಿದ್ದೀಯಾ? ಹಿಂಗಾದ್ರೆ ಆಯಿತು ಬಿಡು ಎಂದ ನನ್ನಮ್ಮನ ಮಾತಿನಿಂದ ಎಚ್ಚೆತ್ತು ಪ್ರಾತಃವಿಧಿಗಳನ್ನು ಮುಗಿಸಿ ಕಾಫಿ ಕುಡಿದು ಸ್ನಾನಕ್ಕೆ ಸಿದ್ಧಳಾದೆ.

.         ಸ್ನಾನ ಮುಗಿಸಿ ದೇವರಿಗೆ ನಮಿಸಿ ಅಮ್ಮ ಕೊಟ್ಟ ತಿಂಡಿಯನ್ನು ತಿಂದು ಮುಗಿಸಿದೆ. ಅಂಗಳದಲ್ಲಿ ತಲೆ ಒಣಗಿಸಿಕೊಳ್ಳುತ್ತಾ ನಿಂತಿದ್ದ ನನಗೆ ಅಪ್ಪನ ಆಗಮನದ ವಾಸನೆ ಹೊಡೆಯಿತು. ಸುಕನ್ಯಾ..ಸುಕನ್ಯಾ ಓ ! ನೀನು ಇಲ್ಲೇ ನಿಂತಿದ್ದೀಯಾ? ನಿನ್ನ ಗೆಳತಿ ಹೇಮಾಳ ಮನೆಗೆ ಊರಿನಿಂದ ಯಾರೋ ನೆಂಟರು ಬಂದಿದ್ದಾರಂತೆ. ಅವಳಿಗೆ ಬರೋಕಾಗಲ್ವಂತೆ. ಅವರ ಮನೆಯ ಆಳುಮಗ ದಾರಿಯಲ್ಲಿ ಸಿಕ್ಕಿದ್ದ. ಅಂದ ಹಾಗೆ ಬೇಗ ಬೇಗ ತಯಾರಾಗಮ್ಮ ಎಂದು ಹೇಳಿ ಅಮ್ಮನಿದ್ದ ಅಡುಗೆಮನೆಯತ್ತ ನಡೆದರು. ಅವರು ಹೇಳಿದ ವಿಷಯ ಕೇಳಿ ನನಗೆ ಅಬ್ಬಾ ಸದ್ಯಕ್ಕೆ ಅವಳು ಬರದಿರುವುದೇ ಒಳ್ಳೆಯದು. ಅಮ್ಮನ ಒತ್ತಾಯಕ್ಕೆ ಅವಳನ್ನು ಕರೆದಿದ್ದೆ. ಅವಳು ನನ್ನ ಆತ್ಮೀಯ ಗೆಳತಿಯೇನೋ ಸರಿ, ಆದರೆ ಅವಳಿಗೆ ಒಂದುಚೂರು ವಿಷಯ ಮಾತನಾಡಲು ಸಿಕ್ಕರೂ ಸರಿ ತುತ್ತೂರಿಗೆ ಮುತ್ತುಕೊಟ್ಟಂತೆ. ಎಲ್ಲಕಡೆ ಟಾಂ ಟಾಂ. ಪುಣ್ಯಕ್ಕೆ ಅದರಿಂದ ಬಚಾವಾದೆ. ಎಂದುಕೊಂಡು ರೂಮಿಗೆ ಬಂದೆ. ಅಮ್ಮನ ಆದೇಶದಂತೆ ಸಿದ್ಧಳಾಗಿ ಕನ್ನಡಿಯಲ್ಲೊಮ್ಮೆ ನನ್ನನ್ನೇ ನೋಡಿಕೊಂಡೆ. ಅದೇ ವೇಳೆಗೆ ಮತ್ತೊಂದು ಲೋಟ ಕಾಫಿ ಹಿಡಿದು ಬಂದಳು ಸಾಕಮ್ಮ. ನನ್ನ ಕಡೆ ನೋಡಿ ಅವ್ವಯ್ಯಾ ! ಚಿಕ್ಕಮ್ಮಾವ್ರೇ ನನ್ನ ಕಣ್ಣಿನ ದೃಷ್ಟಿಯೇ ತಾಗೀತು ಬಿಡಿ. ಎಂಥಾ ಛಂದ ಕಾಣಿಸ್ತೀರಿ. ನೀವು ಏನೂ ಅಂದುಕೊಳ್ಳಲ್ಲಾ ಅಂದ್ರೆ ಒಂದು ಮಾತು. ಎಂದಳು. ಅದೇನು ಹೇಳು ಸಾಕಮ್ಮ ಎಂದೆ. ನೀವು ಹಾಕ್ಕೊಂಡಿರುವ ಜಡೆ ಸೊಟ್ಟಂಬಟ್ಟ ಆಗಿದೆ. ಸರಿಯಾಗಿ ಹೆಣೆದುಕೊಡ್ಲಾ? ಎಂದಳು. ನಾನೂ ನೋಡಿಕೊಂಡೆ. ಅವಳ ಮಾತು ನಿಜವೆನ್ನಿಸಿತು. ಮೌನವಾಗಿ ಅವಳ ಸಲಹೆಗೆ ಸಮ್ಮತಿಸಿದೆ. ನೀಟಾಗಿ ಕೂದಲನ್ನು ಮತ್ತೊಮ್ಮೆ ಬಾಚಿ ಜಡೆ ಹೆಣೆದು ಹೂ ದಂಡೆಯನ್ನು ಮುಡಿಸಿ ನಾನು ಕಾಫಿ ಕುಡಿದಿಟ್ಟಿದ್ದ ಲೋಟವನ್ನು ತೆಗೆದುಕೊಂಡು ಹೊರಗೆ ನಡೆದಳು. ಅವಳು ಹೋದಮೇಲೆ ನಾನು ಮತ್ತೊಮ್ಮೆ ನಿಲುವುಗನ್ನಡಿಯಲ್ಲಿ ನೋಡಿಕೊಂಡೆ. ಅಪ್ಪನದ್ದು ಎತ್ತರದ ನಿಲುವು, ಅಮ್ಮ ಮಧ್ಯಮ. ಲಕ್ಷಣದಲ್ಲಿ ಅಮ್ಮನೇ ಅಪ್ಪನಿಗಿಂತ ಮೇಲಾಗಿದ್ದಳು. ಬಣ್ಣದಲ್ಲಿ ಮಾತ್ರ ಈ ವಯಸ್ಸಿನಲ್ಲೂ ಒಬ್ಬರನ್ನೊಬ್ಬರು ಮೀರಿಸುವಂತಿದ್ದರು. ಅಕ್ಕ ಮತ್ತು ಅಣ್ಣಂದಿರು ಅಪ್ಪನ ನಿಲುವು ಅಮ್ಮನ ಲಕ್ಷಣಗಳನ್ನು ಹೊಂದಿದ್ದರು. ನಾನು ಮಾತ್ರ ಅಮ್ಮನ ಪಡಿಯಚ್ಚಿನಂತಿದ್ದೆ. ನೋಡಲು ಬರುತ್ತಿರುವ ಹುಡುಗನೇನಾದರೂ ತುಂಬ ಎತ್ತರವಿದ್ದರೆ… ರೆ.. ರಾಜ್ಯದಲ್ಲಿ ವಿಹರಿಸುತ್ತಿರುವಾಗಲೇ ಹೊರಗಡೆ ಓ.. ಬನ್ನಿ ಬನ್ನಿ ಎಂಬ ಆಹ್ವಾನದ ಧ್ವನಿ ಕೇಳಿಬಂತು. ಒಂದು ವಾರದಿಂದ ತಯಾರಿಗಳೆಲ್ಲ ಮಾಯವಾದಂತಾಗಿ ಇವತ್ತಿನ ಪರೀಕ್ಷೆಯನ್ನು ಹೇಗೆ ಎದುರಿಸಬೇಕೆಂಬ ಪ್ರಶ್ನೆಯೊಂದೇ ದುತ್ತೆಂದು ಕಣ್ಮುಂದೆ ಬಂತು. ಎಲ್ಲ ಹೆಣ್ಣುಮಕ್ಕಳು ಮುಜುಗರದಿಂದ ಎದುರಿಸಲೇಬೇಕಾದ ಸನ್ನಿವೇಶಗಳಲ್ಲಿ ಇದೊಂದು ಪ್ರಮುಖಘಟ್ಟ. ನನ್ನ ಅತ್ತಿಗೆಯಂದಿರು ಮೊದಲೇ ಆಯ್ಕೆ ಮಾಡಿಕೊಂಡದ್ದರಿಂದ ಯಾವುದೇ ವಧುಪರೀಕ್ಷೆಗೂ ಒಳಪಟ್ಟಿರಲಿಲ್ಲ. ಅಷ್ಟರಲ್ಲಿ ಸುಕನ್ಯಾ..ಅಮ್ಮಾ ಸುಕನ್ಯಾ ಎಂಬ ಕರೆ ನನ್ನನ್ನು ವಾಸ್ತವಕ್ಕೆ ಕರೆತಂದಿತು. ರೆಡಿಯಾಗಿದ್ದೀಯಾ ಕೂಸೇ? ಎಂದು ಕೇಳುತ್ತಾ ಒಳಬಂದ ಅಮ್ಮನನ್ನು ನೋಡಿದೆ. ಸಾಕಮ್ಮನ ಕೈಯಲ್ಲಿ ಪಾನಕದ ಲೋಟಗಳನ್ನು ಅಣಿಗೊಳಿಸಿಟ್ಟ ತಟ್ಟೆಯಿತ್ತು. ಕುರಿಯನ್ನು ಬಲಿಪೀಠಕ್ಕೆ ಕೊಂಡೊಯ್ಯುವಂತೆ ಇಬ್ಬರೂ ನಿಂತಿದ್ದರು. ಮನಸ್ಸಿನಲ್ಲಿ ಬಂದ ಆಲೋಚನೆಯಿಂದ ನಗುಬಂತು. ಅದನ್ನು ಅಮ್ಮನ ಮುಂದೆ ಹೇಳಿ ಅವಳಿಂದ ಬೈಸಿಕೊಳ್ಳಲು ಮನಸ್ಸಾಗದೇ ಮುಂದೇನು ಎಂಬಂದೆ ಪ್ರಶ್ನಾರ್ಥಕವಾಗಿ ಅವಳನ್ನು ನೋಡಿದೆ. ಅವಳಾದರೋ ಬಂದ ವಿಷಯವನ್ನೇ ಮರೆತಂತೆ ನನ್ನನ್ನೇ ನೋಡುತ್ತಾ ನಿಂತುಬಿಟ್ಟಿದ್ದಳು. ನಾನೇ ಎಚ್ಚರಿಸಬೇಕಾಯ್ತು. ಮಗಳೇ ಹೆಚ್ಚು ಜನ ಬಂದಿಲ್ಲ. ಹುಡುಗ, ಅವರ ತಂದೆ, ತಾಯಿ, ನಿಮ್ಮ ಅಪ್ಪನ ಗೆಳೆಯರಾದ ಶ್ಯಾಮರಾಯರು. ನೋಡುವುದಕ್ಕೆ ತುಂಬ ಸೀದಾಸಾದಾ ಇರುವಂತೆ ಕಾಣುತ್ತಾರೆ. ಹೆದರಿಕೊಳ್ಳದೇ ಹೋಗು ಎಂದು ಸಾಕಮ್ಮನ ಕೈಯಲ್ಲಿದ್ದ ತಟ್ಟೆಯನ್ನು ನನಗೆ ಕೊಡಿಸಿದರು.

(ಚಿತ್ರಋಣ: ಸಾಂದರ್ಭಿಕ ಚಿತ್ರ, ಅಂತರ್ಜಾಲದಿಂದ)

‘        ಅಂಜುತ್ತ ಅಳುಕುತ್ತ ತಟ್ಟೆಯನ್ನು ಹಿಡಿದುಕೊಂಡು ಅವರುಗಳು ಕುಳಿತಿದ್ದ ಹಾಲಿನೊಳಕ್ಕೆ ಅಡಿಯಿಟ್ಟೆ. ನೋಡಿದರೆ ಗೌರವ ಬರುವಂತಿದ್ದ ಹಿರಿಯರ ಜೋಡಿ, ಆಪ್ತತೆ ಉಂಟುಮಾಡುವಂತಹ ಮಹಿಳೆ, ಅವರ ಪಕ್ಕದಲ್ಲಿ ಕುಳಿತಿದ್ದ ವರಮಹಾಶಯ. ಓರೆಗಣ್ಣಿನಿಂದಲೇ ನೋಡಿದೆ. ಹ್ಯಾಂಡ್ಸಮ್ ಆಗಿದ್ದಾರೆ ಎನ್ನಿಸಿತು. ಆದರೆ ಎತ್ತರವಿದ್ದಾರೆ, ನನ್ನನ್ನು ಇವರು ಒಪ್ಪುತ್ತಾರೆಯೇ? ಎಂದು ಸಂದೇಹವಾಯಿತು. ಬಾರಮ್ಮಾ ಕುಳಿತುಕೋ ಎಂದವರು ಅಪ್ಪನ ಗೆಳೆಯ ಶ್ಯಾಮರಾಯರು. ಏನಾದರೂ ಕೇಳುವುದಿದ್ದರೆ ಕೇಳಿ ಎಂದು ಹಿರಿಯರಿಗೆ ಹೇಳಿದರು. ಅವರು ಏನು ಸ್ವಾಮಿ, ಎಲ್ಲಾ ಸಂಗತಿಗಳನ್ನು ತಿಳಿದುಕೊಂಡು ಜಾತಕಗಳು ಹೊಂದಿಕೊಂಡ ಮೇಲಲ್ಲವೇ ನಾವು ಇಲ್ಲಿಗೆ ಬಂದದ್ದು. ಅದೂ ಇವರುಗಳ ಒಪ್ಪಿಗೆಯ ಮೇರೆಗೇ. ಇನ್ನು ಮಾತನಾಡುವುದೇನಿದ್ದರೂ ಮುಂದೆ ಬಾಳ್ವೆ ನಡೆಸಬೇಕಾದವರು. ಅದೂ ಅವರುಗಳು ಇಷ್ಟಪಟ್ಟರೆ. ನಾವು ಕೇಳುವುದೇನಿಲ್ಲ, ನೀನು ಒಳಕ್ಕೆ ಹೋಗಮ್ಮ ಎಂದುಬಿಟ್ಟರು ಹಿರಿಯರು. ಅಷ್ಟು ಹೇಳಿದ್ದೇ ತಡ ಬದುಕಿದೆಯಾ ಬಡಜೀವವೇ ಎಂದುಕೊಂಡು ಪಾನಕ ಕುಡಿದಿಟ್ಟಿದ್ದ ಲೋಟಗಳನ್ನು ಎತ್ತಿಕೊಂಡು ಒಳಕ್ಕೆ ಬಂದುಬಿಟ್ಟೆ. ಒಂದು ಹತ್ತು ನಿಮಿಷಗಳಾಗಿರಬಹುದು, ಹೊರಗಿನಿಂದ ನನಗೆ ಮತ್ತೆ ಬುಲಾವ್ ಬಂದಿತು. ಕಾರಣ ಹುಡುಗ ಹುಡುಗಿಯೊಡನೆ ಪ್ರತ್ಯೇಕವಾಗಿ ಒಂದೆರಡು ಮಾತನಾಡಬೇಕಂತೆ ಎಂದು. ನನ್ನ ಹೆತ್ತವರು ಇದಕ್ಕೆ ಕಾಲಕ್ಕೆ ತಕ್ಕಂತೆ ಸಮ್ಮತಿಯಿತ್ತಿದ್ದರು. ನನಗೆ ಅಚ್ಚರಿಯಾಯಿತು.

ಈ ಕಾದಂಬರಿಯ ಹಿಂದಿನ ಸಂಚಿಕೆ ಇಲ್ಲಿದೆ: http://surahonne.com/?p=30833

(ಮುಂದುವರಿಯುವುದು)
-ಬಿ.ಆರ್ ನಾಗರತ್ನ, ಮೈಸೂರು

9 Responses

  1. ನಯನ ಬಜಕೂಡ್ಲು says:

    ಸೊಗಸಾಗಿದೆ ಕಾದಂಬರಿ. ಎಷ್ಟೇ ಆಧುನಿಕತೆ ನಮ್ಮಲ್ಲಿ ಹಾಸು ಹೊಕ್ಕಿದ್ದರೂ ಮೊದಲಿನ ಶಾಸ್ತ್ರ, ಸಂಪ್ರದಾಯಗಳೇ ಚಂದ. ಆ ಆಚರಣೆಗಳಿಗೂ ಒಂದು ಹಿನ್ನಲೆ ಇರುತಿತ್ತು. ಅವೆಲ್ಲ ಇಂದು ಮೂಲೆಗುಂಪಾಗುತ್ತ ಬಂದಿದ್ದರೂ ಕೆಲವೊಂದು ಕಡೆ ಗಳಲ್ಲಿ ಇಂದಿಗೂ ಕಾಣ ಸಿಗುತ್ತಿವೆ

  2. ಬಿ.ಆರ್.ನಾಗರತ್ನ says:

    ಧನ್ಯವಾದಗಳು ಮೇಡಂ.

  3. ಮಾಲತಿ says:

    ಮುಂದೆ ಇಬ್ಬರ ಮಧ್ಯೆ ಏನು ಸಂಭಾಷಣೆ ನಡೆಯಬಹುದು ಎಂಬ ಕುತೂಹಲ

  4. ಬಿ.ಆರ್.ನಾಗರತ್ನ says:

    ಧನ್ಯವಾದಗಳು ಗೆಳತಿ ಮಾಲತಿ ನಿಮ್ಮ ಕೂತಹಲಕ್ಕೆ ಮುಂದಿನವಾರ ಉತ್ತರ ಸಿಗುತ್ತದೆ.

  5. ನಾನೂ ಕೂಡ ನನ್ನ ಫ್ಲಾಶ್ ಬ್ಯಾಕ್ ಗೆ ಹೋದ ಹಾಗೆ ಆಯ್ತು.

  6. ಶಂಕರಿ ಶರ್ಮ says:

    ನಮ್ಮ ಸಂಸ್ಕಾರ, ಸಂಪ್ರದಾಯಗಳನ್ನು ಬಹಳ ಸೊಗಸಾಗಿ ಭಟ್ಟಿ ಇಳಿಸಿರುವಿರಿ ತಮ್ಮ ಇಂದಿನ ಕಥಾಭಾಗದಲ್ಲಿ..ಚೆನ್ನಾಗಿ ಓದಿಸಿಕೊಂಡು ಹೋಗುವ ಚಂದದ ನಿರೂಪಣೆ.. ಧನ್ಯವಾದಗಳು ಮೇಡಂ.

  7. Anonymous says:

    ಧನ್ಯವಾದಗಳು ಸಾಹಿತ್ಯ ಸಹೃದಯರಿಗೆ.

  8. ಸುಮ ಕೃಷ್ಣ says:

    ಅಬ್ಬಾ, ಎಷ್ಟು ಚೆಂದದ ನಿರೂಪಣೆ, ಹೆಣ್ಣು ನೋಡುವ ಸಂಪ್ರದಾಯ ಚೆನ್ನಾಗಿ ವಿವರಿಸಿದ್ದೀರಿ, ಹೆಣ್ಣಿನ ತಂದೆ ತಾಯಿಯ excitement, ಹುಡುಗಿಗೆ ಹೇಗೇ ಅಲಂಕಾರ ಮಾಡಿಕೆಕೊಳ್ಳಬೇಕೆಂದು ಸಲಹೆ… ನನ್ನ ಮದುವೆ ಕಾಲಕ್ಕೆ ಕರೆದೋಯಿದಿತ್ತು,
    ಮುಂದಿನ ಸುರಹೊನ್ನೇಗಾಗಿ ಕಾಯುತ್ತಿರುವೆ ಕಾತುರದಿಂದ..

  9. ಸುಮ ಕೃಷ್ಣ says:

    ಬಹಳ ಸೊಗಸಾಗಿ ಮೂಡಿಬಂದಿದೆ, ಇಂದಿನ ಕಾಲದಲ್ಲೂ ನಮ್ಮ ಸಂಪ್ರದಾಯ, ಹೆಣ್ಣು ನೋಡುವ ಶಾಸ್ತ್ರ, ಓದುತಿದ್ದರೆ ನನ್ನ ಮದುವೆಯ ಕಾಲಕ್ಕೆ ಹೋಗಿಬಿಟ್ಟಿದ್ದೆ. ನಾವೇ ಪಾತ್ರದಲ್ಲಿ ಇಳಿದ ಅನುಭವ…. ಮುಂದಿನ ನೆಲೆ ಗಾಗಿ ಕಾಯುತಿರುವೆ..

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: