ಅಪ್ಪನ ಕೈಗಡಿಯಾರ …
ಅಂದು ನಾನು ಏಳನೇ ಕ್ಲಾಸು.
ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಶಾಲೆಯ ಇಬ್ಬರು ಅಧ್ಯಾಪಕರು ನಿವೃತ್ತರಾಗುವರಿದ್ದರು.
ಮುಂದಿನ ವರ್ಷ ನಾವು ಹೈಸ್ಕೂಲು … ಅದಕ್ಕೆಂದೇ ಬೀಳ್ಕೊಡುವ ಸಮಾರಂಭವನ್ನು ಹಮ್ಮಿಕ್ಕೊಳ್ಳಲಾಗಿತ್ತು.
ನಿವೃತ್ತರಾಗಿ ಹೋಗುವ ಅಧ್ಯಾಪಕರಿಗೆ ಫಲ ಪುಷ್ಪ ನೀಡಿ ಶಾಲು ಹೊದಿಸಿ ಸನ್ಮಾನಿಸುವುದು ರೂಢಿ. ತದನಂತರ ಸಹ ಅಧ್ಯಾಪಕರು ಅವರ ಬಗ್ಗೆ ಒಂದೆರಡು ಒಳ್ಳೆಯ ಮಾತುಗಳನ್ನು ಆಡುತ್ತಿದ್ದರು ..
ಇದೆಲ್ಲಾ ಸರ್ವೇ ಸಾಧಾರಣ .. ಆದರೆ ನಮ್ಮಂತಹ ಮಕ್ಕಳಿಗೆ ಖುಷಿ ಕೊಡುವ ಇನ್ನೊಂದು ಸಂಗತಿಯಿತ್ತು ..
ಅದೇನೆಂದರೆ ಶಾಲೆಯ ಅಧ್ಯಾಪಕರು ಮತ್ತು ಏಳನೇ ಕ್ಲಾಸಿನ ವಿದ್ಯಾರ್ಥಿಗಳ ಒಂದು ಗ್ರೂಪ್ ಫೋಟೋ ..
ಫೋಟೋ ಇಂದಿನಷ್ಟು ಚಾಲ್ತಿಯಲ್ಲಿರದ ದಿನಗಳು …
ಎಲ್ಲರೂ ಹೊಸಬಟ್ಟೆ, ಪ್ಯಾಂಟು, ಶೂ ಧರಿಸಿ ಬರುವ ದಿನ .
ಹುಡುಗಿಯರಾದರೆ ಲಂಗ ರವಿಕೆ ಜೊತೆಗೆ ಚಿನ್ನದ ಸರ .. ಆ ಸರವನ್ನು ರವಿಕೆಯೊಳಗೆ ಬಚ್ಚಿಡುತ್ತಿರಲಿಲ್ಲ .. ಬದಲಾಗಿ ನಾಲ್ಕು ಜನ ಕಾಣುವಂತೆ ಡಿಸ್ಪ್ಲೇ ಮಾಡಬೇಕಿತ್ತು …
ಆ ದಿನಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳೂ ವಾಚು ಧರಿಸುತ್ತಿರಲಿಲ್ಲ. ಕೇವಲ ಬಡತನ ಕಾರಣವಲ್ಲ .. ಆ ದಿನಗಳು ಅಂತಿದ್ದುವು.
send-off ದಿನ ಹತ್ತಿರವಾಗುತ್ತಾ ಬಂದಿತ್ತು ..
ಅಂದು ಅಮ್ಮನಲ್ಲಿ ಹೇಳಿದ್ದೆ .. ನನಗೆ ಶಾಲೆಗೆ ಹೋಗುವಾಗ ನನ್ನ ಹೊಸ ವಾಚು ಕೊಡಬೇಕು ..
ಅಮ್ಮ ಅಪ್ಪನಲ್ಲಿ ಕೇಳಿ ಕೊಡಿಸುತ್ತೇನೆ ಅಂದಿದ್ದರು .. ಆದರೆ ಅಪ್ಪ ಅದಕ್ಕೆ ಒಪ್ಪಲಿಲ್ಲ. ನಾನು ಅತ್ತಿದ್ದೆ.
ಮನಸ್ಸು ನೊಂದು ಅಮ್ಮನಲ್ಲಿ ಕೇಳಿದ್ದೆ .. .. ವಾಚು ಖರೀದಿಸಿ ಕೊಟ್ಟಿದ್ದು ಅಪ್ಪನಲ್ಲ .. ಮತ್ತಿನ್ನೇಕೆ ಅವರಿಗೆ ಇಷ್ಟೂ ಹಟ.
(ಆ ಹೊಸವಾಚು ಕೊಡಿಸಿದ್ದು ನನ್ನ ಭಾವ.)
ನಾನು ಅಳುವ ಶಬ್ದ ಕೇಳಿಸಿದಾಗ ಅಪ್ಪ ನನ್ನನ್ನು ಹತ್ತಿರ ಕರೆದು ಕೆಲವೊಂದು ಪ್ರಶ್ನೆ ಕೇಳಿದ್ದರು …
” Mr. N ಅವರ ಮಗನಲ್ಲಿ ವಾಚು ಇದೆಯಾ …
“Mr. B ಅವರ ಮಗ ವಾಚು ಕಟ್ಟುತ್ತಾನೆಯೇ …
ನಿನ್ನ ಅಕ್ಕಪಕ್ಕದಲ್ಲಿ ಕುಳಿತುಕೊಳ್ಳುವವರು ವಾಚು ಕಟ್ಟುತ್ತಾರೆಯಾ … ”
ಎಲ್ಲದಕ್ಕೂ ಇಲ್ಲ ಎಂದು ಉತ್ತರಿಸಿದ್ದೆ.
ಕೊನೆಗೆ ನನಗೆ ಬುದ್ಧಿವಾದ ಹೇಳಿದ್ದರು .. ” ನೋಡು ಎಲ್ಲರ ನಡುವೆ ನೀನು ಭಿನ್ನವಾಗಿ ಕಾಣಬಾರದು .. ಅವರೆಲ್ಲರೂ ಬರಿಗಯ್ಯಲ್ಲಿ ಇರುವಾಗ ನೀನು ವಾಚು ಕಟ್ಟಿ ಹೋದರೆ ಅದು ನಿನ್ನ ಅಹಂ ಆಗಬಹುದು .. ನೀನೇನೋ ಸಂತಸ ಪಡಬಹುದು .. ಆದರೆ ವಾಚು ಇಲ್ಲದವರಿಗೆ ಒಂದು ರೀತಿಯ ದುಃಖ ಆಗಬಹುದು… ”
ಅಂದು ಅವರ ನೀತಿಮಾತು ಪೊಳ್ಳೆಂದು ಭಾವಿಸಿದ್ದೆ .. ಕೊನೆಗೆ ಅವರಿಂದ ವಾದ ಮಾಡಿ ಗೆಲ್ಲಲು ಸಾಧ್ಯವಿಲ್ಲ ಎಂದಾಗ ಬರಿಗಯ್ಯಲ್ಲೇ ಶಾಲೆಗೆ ಹೋಗಿದ್ದೆ.
ಒಬ್ಬ ಅಧ್ಯಾಪಕನಾಗಿ ವಿದ್ಯಾರ್ಥಿಗಳ ಮನಸ್ಸನ್ನು ತಿಳಿಯುವುದರಲ್ಲಿ ಸಫಲರಾಗಿದ್ದರು ಎಂದು ಇಂದು ನನಗೆ ಅನಿಸುತ್ತಿದೆ.
ಆ ದಿನ ..
ಮಧ್ಯಾಹ್ನ ಸುಮಾರು ಎರಡು ಗಂಟೆಗೆ ಕಾರ್ಯಕ್ರಮ ಶುರುವಾಗಿತ್ತು ..
ನಮ್ಮ ಶಾಲೆಯ ಹಾಗೂ ಅಕ್ಕ ಪಕ್ಕದ ಶಾಲೆಯ ಅಧ್ಯಾಪಕರು ಮತ್ತು ಒಡನಾಡಿಗಳೂ ಹಾಜರಾಗಿದ್ದರು. ಸಭೆಯಲ್ಲಿ ನನ್ನ ತಂದೆಯವರೂ ಉಪಸ್ಥಿತರಿದ್ದರು ..
ಗ್ರೂಪ್ ಫೋಟೋ ಕಪ್ಪು ಬಿಳುಪಿನದ್ದಾಗಿದ್ದರೂ ಗೆಳೆಯರೆಲ್ಲರೂ ಬಣ್ಣ ಬಣ್ಣದ ಉಡುಪು ಧರಿಸಿ ಬಂದಿದ್ದರು .. ಹೆಚ್ಚಿನ ಗೆಳೆಯರ ಕೈಯ್ಯಲ್ಲ್ಲೂ ವಾಚು .. ಎಲ್ಲವೂ ಸಡಿಲವಾಗಿ ಬೀಳುವ ಪರಿಸ್ಥಿತಿ ..
ಬಹುಶಃ ಅಣ್ಣಾನದೋ ,ಅಪ್ಪನದೋ, ಚಿಕ್ಕಪ್ಪನದೋ ಆಗಿರಬಹುದು … ಆದ್ದರಿಂದಲೇ ಅಷ್ಟೊಂದು ಸಡಿಲ ..
ಆದರೆ ಸ್ವಂತವಾಗಿ ಕೈಗಡಿಯಾರ ಇದ್ದರೂ ಧರಿಸುವ ಭಾಗ್ಯ ನನಗಿರಲಿಲ್ಲ ..
ಕ್ಲಾಸಿನ ಹುಡುಗಿಯರಾದರೋ .. ಹೊಸ ಲಂಗ .. ರವಿಕೆ .. ಕಯ್ಯಲ್ಲಿ ವಾಚು ಮತ್ತು ಕೊರಳಿಗೆ ನೆಕ್ಲೇಸ್ ..
ನನ್ನ ನೋವು ಯಾರಲ್ಲಿ ಹೇಳಲಿ .. ನಾನು ಮಂಕಾಗಿ ಹೋಗಿದ್ದೆ.
ಭಾಷಣ ಕಳೆಯಿತು ..
ಮೊದಲ ಬ್ಯಾಚು ನಿವೃತ್ತರಾಗಿ ಹೋಗುವ ಇಬ್ಬರು ಅಧ್ಯಾಪಕರ ನಡುವೆ ಅದೇ ಶಾಲೆಯ ಮತ್ತು ಪಕ್ಕದೂರಿನ ಶಾಲೆಯ ಅಧ್ಯಾಪಕರ ಫೋಟೋ ..
ಸುಮಾರು ಇಪ್ಪತ್ತು ಮೂವತ್ತು ಜನರು ಅಧ್ಯಾಪಕರು ..
ಫೋಟೋ ತೆಗೆಸುವಾಗ ನನ್ನ ಅಪ್ಪ ಎದುರಿಗೆ ಕುಳಿತಿದ್ದರು. ನಾನು ನೋಡುತ್ತಲೇ ಇದ್ದೆ .. ಅಪ್ಪನ ಮೊಗ ಮತ್ತು ಅಪ್ಪ ಕಟ್ಟಿದ ಸೀಕೋ ಫೈವ್ ವಾಚು ..
(ಅಪ್ಪನಲ್ಲಿ ಮೊದಲು ಹೆನ್ರಿ ಸ್ಯಾಂಡೋಜ್ ವಾಚ್ ಇತ್ತು ಮತ್ತು ಈ ಸೀಕೋ ಫೈವ್ ವಾಚ್ ನನ್ನ ದೊಡ್ಡಪ್ಪ ಸಿಂಗಾಪುರದಿಂದ ಬರುವಾಗ ಗಿಫ್ಟ್ ಕೊಟ್ಟಿದ್ದು ).
ಅಧ್ಯಾಪಕರ ಸರದಿ ಮುಗಿದಿತ್ತು ..
ಇನ್ನು ವಿದ್ಯಾರ್ಥಿಗಳು ಮತ್ತು ಅದೇ ಶಾಲೆಯ ಅಧ್ಯಾಪಕರ ಸರದಿ …
ಅಪ್ಪ ದೂರ ನಡೆಯುತ್ತಿರುವುದು ಗಮನಿಸುತ್ತಿದ್ದೆ .. ತಿರುಗಿ ನನ್ನತ್ತ ನೋಡಿದಾಗ ಕಿರುನಗೆ ಬೀರಿದ್ದೆ ..
ನನ್ನನ್ನು ತನ್ನತ್ತ ಕರೆದರು .. ಪಕ್ಕಕ್ಕೆ ಹೋದೆ ..
ತನ್ನ ಸೀಕೋ ಫೈವ್ ವಾಚು ಬಿಚ್ಚಿ ಕೊಟ್ಟರು .. .. ಎಲ್ಲಾ ಹುಡುಗರಲ್ಲೂ ವಾಚ್ ಇದೆ .. ನೀನೂ ಕಟ್ಟಿಕೊ ..
ನಾನು ಬೇಡ .. ಬೇಡ ಅಂದೆ .. ನಿರ್ಬಂಧಿಸಿದರು .. ಕೊನೆಗೆ ನಾನು ಅಪ್ಪನ ವಾಚು ಕಟ್ಟಿ ಫೋಟೋಕ್ಕೆ ನಿಂತೆ.
ಫೋಟೋಗ್ರಾಫರ್ ಸ್ಮೈಲ್ ಎಂದಾಗ ಹೊಟ್ಟೆಗೆ ಕೈಕಟ್ಟಿ ನಿಂತಿದ್ದ ವಿದ್ಯಾರ್ಥಿಗಳ ಕೈಗಳು ಎದೆಯತ್ತ ಬರುತ್ತಿತ್ತು .. ಮುಖ ಹೇಗೆ ಬರಬೇಕೆಂಬುದಕ್ಕಿಂತ ಕಟ್ಟಿದ ವಾಚು ಫೋಟೋದಲ್ಲಿ ಕಾಣಿಸಬೇಕೆಂದೇ ಆಗ್ರಹ ..
ಹುಡುಗಿಯರ ನೆಕ್ಲೆಸ್ ರವಕೆಯ ಎದುರು ಮಿಂಚುತ್ತಿತ್ತು ..
ಸ್ಮೈಲ್ …
ಒನ್ .. ಟೂ .. ತ್ರೀ … ಹೇಳಿ ಫೋಟೋಗ್ರಾಫರ್ ಕಪ್ಪುಹೊದಿಕೆಯೊಳಗಿಂದ ಮುಖವನ್ನು ಹೊರಗೆಳೆದು ಓಕೆ .. ಎಂದಾಗ ನಾವು ಸ್ವಸ್ಥಾನದಿಂದ ಕೆಳಗೆ ಇಳಿದಿದ್ದೆವು ..
ನಾನು ಬೇಗನೆ ಓಡಿ ಕಯ್ಯಲ್ಲಿದ್ದ ವಾಚು ಬಿಚ್ಚಿ ದೂರದಲ್ಲಿ ನೋಡುತ್ತಿದ್ದ ಅಪ್ಪನ ಕೈಗೆ ಕೊಟ್ಟು ಅದೇ ವೇಗದಲ್ಲಿ ಬಂದಿದ್ದೆ … !!!
(ಚಿತ್ರದಲ್ಲಿ :- ನನ್ನ ಮನೆಯ ಶೋ ಕೇಸ್ ನಲ್ಲಿರುವ ಹಳೆಯ ವಾಚುಗಳು .. ಆ ಹಳೆಯ ಹೆನ್ರಿ ಸ್ಯಾಂಡೋಜ್ ವಾಚು ಕೂಡಾ ಕಾಣಬಹುದು – ಹಳೆಯ ವಸ್ತುಗಳ ಸಂಗ್ರಹವು ಕೂಡಾ ನನ್ನ ಹವ್ಯಾಸ )
– ಕೆ. ಎ. ಎಂ. ಅನ್ಸಾರಿ