ಪ್ರಕೃತಿಗೆ ನಿವೇದನೆ
ಬಗೆಯ ಬಗೆಯ ಅಂದ ಚೆಂದ ಬಣ್ಣ ಹೂಗಳೇ
ಸ್ವರ್ಗ ಸೊಬಗು ಜಗಕೆ ಬಂತು ನಿಮ್ಮ ರೂಪಕೇ
ಭಾಗ್ಯ ನಿಮ್ಮ ಪುಣ್ಯ ನಿಮ್ಮ ದೇವಿ ಮುಡಿಯಲಿ
ಕಂದ ಕರೆದನೆಂದು ಹೇಳು ದೇವಿ ಕಿವಿಯಲಿ
ನೂರು ವರುಷ ಬಾಳಿ ಬೆಳೆದ ಕಲ್ಪ ವೃಕ್ಷವೇ
ನೂರು ಕೊಂಬೆ ಪಕ್ಷಿಧಾಮ ದೇವ ವೃಕ್ಷವೇ
ಪುನಃ ಹೇಳು ಪುನಃ ಹೇಳು ಅನ್ನಪೂರ್ಣೆಗೆ
ದಾರಿ ತಪ್ಪಿ ಕಾಡಿನಲ್ಲಿ ಕಂದ ಕರೆವನೇ
ಜಗದ ಜನರ ಪಾಪ ಕಳೆವ ದೇವಿ ಗಂಗೆಯೇ
ರಾಮ ಕುವರ (1) ಕಂಡ ದೇವಿ ನಿನ್ನ ಮಧ್ಯೆಯೇ
ಮರಳು ರಾಶಿ ದಾಟಿ ಅಲೆದೆ ದಿವ್ಯ ಮಾತೆಗೆ
ಕಂದ ಅಳುವನೆಂದು ಹೇಳು ಅನ್ನಪೂರ್ಣೆಗೇ
ಲೋಕವೆಲ್ಲ ವ್ಯಾಪಿಸಿರುವ ವಾಯು ದೇವನೇ
ಎಲ್ಲ ಜೀವ ಪ್ರಾಣದಾತ ಕಾಣಲಾರದೇ
ಬೇಡಿಕೊಂಬೆ ನೂರು ಬಾರಿ ಜೀವದಾತ್ಮನೇ
ಕಂದ ಕರೆದನೆಂದು ಹೇಳು ಅನ್ನಪೂರ್ಣೆಗೇ=
ಎಂದಿಗೆಂದು ಮೇಲು ಮುಖಿ ಅಗ್ನಿ ದೇವನೆ
ಹೋಮದಲ್ಲಿ ಬಂದು ನೀನು ತಿಳಿಪೆ ದೇವಿಗೆ
ನನ್ನದೊಂದು ಬಿನ್ನವಿದು (2) ತಿಳಿಸು ದೇವಿಗೆ
ಕಂದ ಕರೆದನೆಂದು ಹೇಳು ಅನ್ನಪೂರ್ಣೆಗೆ
(1. ರಾಮ ಕುವರ – ಬಂಗಾಳದ ಅನ್ನಪೂರ್ಣ ಭಕ್ತ ರಾಮ ಪ್ರಸಾದ ಸೇನ್. 2. ಪಾಠಾಂತರ – ಅರಿಕೆಯಿದು)
.– ಬಿ.ವಿ.ರಾವ್