ಉಂಡುಲಕಾಳು ಕಂಡಿದ್ದೀರಾ?
‘ಉಂಡುಲಕಾಳು’ ಎಂದ ಹೆಸರು ಕೇಳಿದಾಗ, ಹೆಸರುಕಾಳು, ಅಲಸಂದೆ ಕಾಳು, ತೊಗರಿಕಾಳು… ಇತ್ಯಾದಿ ವರ್ಗದ ಯಾವುದೋ ಒಂದು ದ್ವಿದಳ ಧಾನ್ಯ ಇರಬೇಕು ಅಂತ ಭಾವಿಸುವ ಸಾಧ್ಯತೆ ಇದೆ. ಆದರೆ ಇದು ಧಾನ್ಯವಲ್ಲ ! ಹೀಗೆ, ಉಂಡುಲಕಾಳಿನ ವಿಶೇಷತೆ ಅದರ ಹೆಸರಿನಿಂದಲೇ ಆರಂಭವಾಗುತ್ತದೆ
ಮಲೆನಾಡು, ಕರಾವಳಿಗಳಲ್ಲಿ ನಾಮಾನ್ಯವಾಗಿ ಜನವರಿಯಿಂದ ಜುಲೈ ವರೆಗೆ ಹಲಸಿನಕಾಯಿ ಲಭ್ಯವಿರುತ್ತದೆ. ಕೆಲವು ತಳಿಗಳು ಬೇಗನೇ ಅಂದರೆ ನವೆಂಬರ್ ತಿಂಗಳಲ್ಲಿ ಕಾಯಿ ಬಿಡುವುದೂ ಇದೆ. ಇನ್ನು ಕೆಲವು ತಳಿಗಳು ಸೋನೆ ಸುರಿವ ಶ್ರಾವಣದಲ್ಲೂ ಸಿಗುತ್ತವೆ. ಒಟ್ಟಾರೆಯಾಗಿ ಹಲಸಿನಕಾಯಿಯ ವಿವಿಧ ಅಡುಗೆಗಳನ್ನು ಇಷ್ಟಪಡುವವರಿಗೆ ನವೆಂಬರ್ ನಿಂದ ಸಕಾಲ ಸುರುವಾಗುತ್ತದೆ.
ಎಳೆ ಹಲಸಿನಕಾಯಿಯ ವಿವಿಧ ಅಡುಗೆಗಳು ಹೆಚ್ಚಿನವರಿಗೆ ಚಿರಪರಿಚಿತ. ಬಲಿತ ಹಲಸಿನಕಾಯಿಯ ತರಾವರಿ ಪಲ್ಯ, ಹುಳಿ, ಹಪ್ಪಳ, ಚಿಪ್ಸ್, ದೋಸೆ ಒಂದು ಪ್ರಕಾರವಾದರೆ, ಬಲಿತ ಹಲಸಿನಕಾಯಿಯ ಸೊಳೆಗಳನ್ನು ಉಪ್ಪುನೀರಿನಲ್ಲಿ ಬೆರೆಸಿ, ಶೇಖರಣೆ ಮಾಡುವುದು ಇನ್ನೊಂದು ಪ್ರಕಾರ. ಹೀಗೆ ಉಪ್ಪುನೀರಿನಲ್ಲಿ ಶೇಖರಿಸಿದ ಹಲಸಿನಕಾಯಿಯ ಸೊಳೆಗಳಿಗೆ ವಿಶಿಷ್ಟ ರುಚಿ, ಪರಿಮಳ ಇರುತ್ತದೆ. ಇವುಗಳನ್ನು ಬಳಸಿ ರುಚಿಕರವಾದ ಪಲ್ಯ, ರೊಟ್ಟಿ, ಹುಳಿ ತಯಾರಿಸುತ್ತಾರಾದರೂ ‘ಉಂಡುಲಕಾಳು‘ ಎಂಬ ಎಣ್ಣೆಯಲ್ಲಿ ಕರಿದ ಸ್ನ್ಯಾಕ್ಸ್ ಗೆ ಪ್ರಥಮ ಸ್ಥಾನ. ಇದು ಬಹಳ ರುಚಿ ಮತ್ತು ತಯಾರಿಸಲು ಹೆಚ್ಚು ಸಮಯ ಬೇಡುವ ತಿನಿಸು. ಬೇಕರಿಗಳಲ್ಲಿ ಸಿಗುವುದಿಲ್ಲ, ಆಧುನಿಕ ತಾಯಂದಿರಿಗೆ ಇದನ್ನು ತಯಾರಿಸಲು ಗೊತ್ತಿರುವುದು ಕಡಿಮೆ. ಹಾಗಾಗಿ ಇದೊಂದು ಅಪ್ಪಟ ಗ್ರಾಮೀಣ ತಿನಿಸು ಹಾಗೂ ಆಧುನಿಕ ಅಡುಗೆಮನೆಯಲ್ಲಿ ಮರೆಯಾದ ‘ರೆಸಿಪಿ’ .
‘ಉಂಡುಲಕಾಳು’ ಗಳನ್ನು ತಯಾರಿಸಲು ಬೇಕಾಗುವ ಸಾಮಗ್ರಿಗಳು :
- ಉಪ್ಪಿನಲ್ಲಿ ಹಾಕಿಟ್ಟ ಹಲಸಿನ ಸೊಳೆ ಮೂರು ಹಿಡಿ
- ಕಾಯಿತುರಿ ಕಾಲು ಕಪ್
- ಒಣ ಕೊಬ್ಬರಿ ಅರ್ಧ
- ಚಿಟಿಕೆ ಅರಸಿನ
- ಚಿಟಿಕೆ ಜೀರಿಗೆ
- ಕರಿಯಲು ಎಣ್ಣೆ.
ವಿಧಾನ:
- ಉಪ್ಪು ಸೊಳೆಯನ್ನು ಹಿ೦ದಿನ ದಿನವೇ ಒ೦ದು ಪಾತ್ರೆಯಲ್ಲಿ ಹಾಕಿ ತು೦ಬ ನೀರು ಹಾಕಿ ನೆನೆಯಲು ಬಿಡಿ.
- ಮರುದಿನ ಅದರ ನೀರನ್ನೆಲ್ಲಾ ಚೆನ್ನಾಗಿ ಹಿ೦ಡಿ, ಸೊಳೆಗಳನ್ನು ಬೇರ್ಪಡಿಸಿ.
- ಹಿಂಡಿದ ಉಪ್ಪುಸೊಳೆಗಳನ್ನು ನೀರು ಹಾಕದೆ ಗಟ್ಟಿಯಾಗಿ ರುಬ್ಬಿ.
- ರುಬ್ಬುವಾಗ ಕಾಯಿತುರಿ,ಜೀರಿಗೆ,ಅರಸಿನ ಸೇರಿಸಿ.
- ಬೇಕಿದ್ದಲ್ಲಿ ಉಪ್ಪು ರುಚಿ ನೋಡಿ (ಸೊಳೆಗಳನ್ನು ಉಪ್ಪು ನೀರಿನಲ್ಲಿಯೇ ಶೇಖರಿಸಿ ಇಟ್ಟಿರುವುದರಿಂದ, ಅದರಲ್ಲಿ ಸಾಕಷ್ಟು ಉಪ್ಪು ಇರುತ್ತದೆ)
- ಒಣಕೊಬ್ಬರಿಯನ್ನು ಸಣ್ಣ ಚೂರುಗಳನ್ನಾಗಿ ಮಾಡಿ
- ಸಣ್ಣ ನೆಲ್ಲಿಕಾಯಿ ಗಾತ್ರದಷ್ಟು, ರುಬ್ಬಿದ ಹಿಟ್ಟು ತೆಗೆದುಕೊ೦ಡು ಮಧ್ಯೆ ಒ೦ದು ಒಣಕೊಬ್ಬರಿ ಚೂರು ಇಟ್ಟು ಚಿಕ್ಕ ಚಿಕ್ಕ ಉ೦ಡೆಗಳನ್ನು ಮಾಡಿ.
- ಈ ಉಂಡೆಗಳನ್ನು ಕಾದ ಎಣ್ಣೆಯಲ್ಲಿ ಹೊಂಬಣ್ಣಕ್ಕೆ ಬರುವಂತೆ ಕರಿಯಿರಿ. ಉಂಡುಲಕಾಳು ಸವಿಯಲು ಸಿದ್ಧ.
– ಸಾವಿತ್ರಿ ಭಟ್, ಪುತ್ತೂರು
I love this snack. Remembering college days and Saya visit.
ನಾನು ಇದನ್ನು ತಯಾರಿಸುವುದನ್ನು ಬಲ್ಲೆ. ಇದು ನನಗೂ ಶಾನೆ ಇಷ್ಟ. ನಿಮ್ಮ ರೆಸಿಪಿ ಯಲ್ಲಿ ಅಕ್ಕಿ ಹಿಟ್ಟು ಉಪಯೋಗಿಸುವುದು ಕಾಣಲಿಲ್ಲ. ಗಟ್ಟಿ ರುಬ್ಬುವಾಗ ಸ್ವಲ್ಪ ಅಕ್ಕಿ ಹಿಟ್ಟನ್ನು(ಅಕ್ಕಿ ಹುಡಿ) ಬಳಸಿದರೆ ಸಣ್ಣ ಉಂಡೆ ಕಟ್ಟುವುದು ಸುಲಭ ಮತ್ತು ರುಚಿಕರ. ಆಹ್ಲಾದಕರ ಪರಿಮಳವೂ ಸಹ!!! ನೀರೂರುತ್ತಿದೆ ಬಾಯಿ…!!!
ಉಪ್ತೋಳೆಗಳು ಗಟ್ಟಿ (ರಬ್ಬರಿನಂತೆ) ಆಗಿದ್ದರೆ ಅಕ್ಕಿ ಮಿಶ್ರಣ ಇಲ್ಲದೆ ಉಂಡೆ ಮಾಡಲು ಬರೂದಿಲ್ಲ. ಅಕ್ಕಿ ಹಿಟ್ಟಿನ ಅಂಟು ಅದಕ್ಕೆ ಅವಶ್ಯ ಮತ್ತು ಪರಿಮಳ, ರುಚಿ ಕಾರಕ.
ಇದನ್ನ ಫ್ರೆಷ್ ಸೊಳೆಲಿ ಮಾಡಕಾಗಲ್ವಾ?
ಇಲ್ಲ. ಹಲಸಿನಕಾಯಿ ಲಭ್ಯವಿರುವ ಸೀಸನ್ ನಲ್ಲಿ ಕಾಯಿಸೊಳೆಗಳನ್ನು ಉಪ್ಪು ನೀರಿನಲ್ಲಿ ಹಾಕಿ ಮಳೆಗಾಲಕ್ಕೆಂದು ಶೇಖರಿಸಿಡುತ್ತಾರೆ. 1-2 ತಿಂಗಳು ಕಳೆದಾಗ ಸೊಳೆಗಳು ಉಪ್ಪನ್ನು ಹೀರಿ, ಬಣ್ಣ-ರುಚಿ-ಆಕಾರ ಬದಲಾಗುತ್ತವೆ. ಉಂಡುಲಕಾಳು ತಯಾರಿಸುವ ಮುನ್ನ ಉಪ್ಪುಸೊಳೆಗಳನ್ನು ನೀರಿನಲ್ಲಿ ನೆನೆಸಿ, ತೊಳೆದು, ನೀರನ್ನು ಬಸಿದು, ಸಾಧ್ಯವಾದಷ್ಟು ಗಟ್ಟಿಯಾಗಿ ಹಿಂಡಬೇಕು. ಆಗ ಸೊಳೆಗಳು ಮೆತ್ತಗಾಗಿ ‘ಮುದ್ದೆ’ ತರ ಆಗುತ್ತವೆ. ಅಂತಹ ಸೊಳೆಗಳು ಉಂಡುಲಕಾಳು ಮಾಡಲು ಸೂಕ್ತವಾಗುತ್ತವೆ. ಫ್ರೆಶ್ ಸೊಳೆಗಳಲ್ಲಿ ಈ ರೀತಿ ‘ಮುದ್ದೆ’ ಆಗಲಿಕ್ಕಿಲ್ಲ ಅನಿಸುತ್ತದೆ.
ನಮ್ಮಲ್ಲಿ ಕೃಷ್ಣಾಷ್ಟಮಿ ದಿವಸ ಇದು ನೈವೇದ್ಯಕ್ಕೆ ಕ೦ಪಲ್ಸರಿ….. ಆದರೆ ಬೆಲ್ಲ ಹಾಕಿ ಸಿಹಿ ಉ೦ಡ್ಲೇಕಾಳು ಮಾಡ್ತಾರೆ….
Bahala sampradayika tinisina bagge tilisiddiri …dhanyavadagalu
ಓದಿ ಪ್ರೋತ್ಸಾಹಿಸಿದ ತಮಗೆಲ್ಲಾ ಧನ್ಯವಾದಗಳು .ಪ್ರಕಟಿಸಿದ ಸುರಹೊಂನೆಗೆ ತು೦ಬಾ ಥ್ಯಾಂಕ್ಸ್ .
Undluga, my favorite
Undala kalu thinnade estu varshavayitho …..? Punaha nanapisidiri madam
ಒಳ್ಳೆಯ ರೆಸಿಪೀ ಧನ್ಯವಾದಗಳು…
ಹೌದು ಒಳ್ಳೆಯ ತಿನಿಸಿನ ಪರಿಚಯವಾಯಿತು…ಅಚ್ಚುಕಟ್ಟಾದ ನಿರೂಪಣೆ ಮೂಲಕ ತಿಳಿಸಿ ಕೊಟ್ಟಿದೀರಿ..ಧನ್ಯವಾದಗಳು..