ಲಹರಿ

ಮಿಂಚಿನ ಓಟದಲ್ಲಿ ನಾನು!

Share Button

 

Hema-21062015-edited
ಹೇಮಮಾಲಾ.ಬಿ

‘ಮೈಸೂರುಮಲ್ಲಿಗೆ’ ಸಿನೆಮಾದಲ್ಲಿ ಬರುವ ಒಂದು ದೃಶ್ಯ ಹೀಗಿದೆ. ಸತ್ಯಾಗ್ರಹಕ್ಕೆ ಸಂಬಂಧಿಸಿದ ಕರಪತ್ರಗಳನ್ನು ತನ್ನ ಬಳಿ ಇರಿಸಿಕೊಂಡಿದ್ದ ಸತ್ಯಾಗ್ರಹಿಯನ್ನು ಪೋಲೀಸರು ಬೆನ್ನಟ್ಟುತ್ತಾರೆ. ಕರಪತ್ರಗಳ ಗಂಟನ್ನು ‘ಬಳೆಗಾರ ಚೆನ್ನಯ್ಯ’ನತ್ತ ಎಸೆದು ಸತ್ಯಾಗ್ರಹಿ ಓಡುತ್ತಾನೆ,ಪೋಲೀಸರು ಹಿಂಬಾಲಿಸುತ್ತಾರೆ. ಕೊನೆಗೆ ಆತನನ್ನು ತಪಾಸಣೆ ಮಾಡಿದಾಗ ಕರಪತ್ರಗಳೇನೂ ಸಿಗುವುದಿಲ್ಲ. ಪೆಚ್ಚಾದ ಪೋಲೀಸರು “ನೀನು ಯಾಕೆ ಓಡಿದೆ? ” ಎಂದು ಕೇಳುತ್ತಾರೆ . “ನೀವು ಬೆನ್ನಟ್ಟಿ ಬಂದಿರಲ್ಲಾ,ಅದಕ್ಕೆ ಓಡಿದೆ ಎಂದು ಆತ ಉತ್ತರಿಸುತ್ತಾನೆ. ಎರಡು ವರ್ಷಗಳ ಹಿಂದೆ (16/08/2015) ನನಗೂ ಹೆಚ್ಚುಕಡಿಮೆ ಇದೇ ಅನುಭವವಾಯಿತು.

ನಮ್ಮ ಬಡಾವಣೆಯ ಶಾಲೆಯಲ್ಲಿ ಪ್ರತಿದಿನವೂ ಮುಂಜಾನೆ 0530 ಘಂಟೆಯಿಂದ 0700 ರ ವರೆಗೆ, ಯೋಗಾಭ್ಯಾಸ ಜರಗುತ್ತದೆ. ಇದರಲ್ಲಿ ಭಾಗವಹಿಸುವುದು ನಾನು ಇತ್ತೀಚೆಗೆ ರೂಢಿಸಿಕೊಂಡ ಕ್ರಮ. ನಮ್ಮ ಮನೆಯಿಂದ ಪಕ್ಕದ ಬೀದಿಗೆ ಕಾಲುದಾರಿಯಲ್ಲಿ ತಿರುಗಿ, ಅಲ್ಲಿಂದ ನೇರವಾಗಿ ನಡೆದರೆ ಶಾಲೆ ಸಿಗುತ್ತದೆ. ಶಾಲೆ ತಲಪಲು 10 ನಿಮಿಷ ಸಾಕು. ಹಾಗಾಗಿ 0515 ಘಂಟೆಗೆ ಯೋಗಾಭ್ಯಾಸಕ್ಕೆ ತಕ್ಕಂತಹ ಉಡುಪು (ಟ್ರ್ಯಾಕ್ ಪ್ಯಾಂಟ್, ಟಿ-ಶರ್ಟ್) ಧರಿಸಿ ಮನೆಯಿಂದ ಹೊರಟಿದ್ದೆ. ನಮ್ಮ ಅಕ್ಕ-ಪಕ್ಕದ ಮನೆಯ ಗೆಳೆತಿಯರು ಜತೆಯಾಗುತ್ತಾರೆಯೇ ಎಂದು ಒಂದು ಬಾರಿ ಅವರ ಮನೆಗಳ ಕಡೆಗೆ ನೋಡಿದೆ. ಅವರ ಮನೆಯಲ್ಲಿ ದೀಪ ಕಾಣಿಸಲಿಲ್ಲ. ಬಹುಶ: ಈವತ್ತು ಅವರು ಯೋಗಾಭ್ಯಾಸಕ್ಕೆ ಬರುವುದಿಲ್ಲವೇನೋ ಅಂದುಕೊಂಡು ನನ್ನ ಪಾಡಿಗೆ ಒಬ್ಬಳೇ ನಡೆಯಲಾರಂಭಿಸಿದೆ.

ಹತ್ತಾರು ಹೆಜ್ಜೆ ಹಾಕಿರಬಹುದಷ್ಟೆ. ರಸ್ತೆಯ ತಿರುವಿನಲ್ಲಿ ಒಂದು ಬೈಕ್ ಬರುತ್ತಿತ್ತು. ಮುಂಜಾನೆಯ ಸಮಯ ಆಗೊಂದು-ಈಗೊಂದು ಎಂಬಂತೆ ವಾಹನಗಳು ಓಡಾಡುವುದು ಸಹಜ. ಅದರ ಕಡೆಗೆ ಗಮನ ಕೊಡದೆ ವೇಗವಾಗಿ ನಡೆಯುತ್ತಿದ್ದೆ. ನನ್ನನ್ನು ಬಿಟ್ಟರೆ ರಸ್ತೆಯಲ್ಲಿ ಬೇರಾರೂ ಇರಲಿಲ್ಲ. ಇನ್ನೇನು ಪಕ್ಕದ ಬೀದಿಯನ್ನು ಸೇರುವ ಕಾಲುದಾರಿಗೆ ತಿರುಗಬೇಕು ಅನ್ನುವಷ್ಟರಲ್ಲಿ ಹಿಂದಿನಿಂದ ಬರುತ್ತಿದ್ದ ಬೈಕ್ ಸವಾರರು “ಏಯ್ , ನಿಲ್ಲೊ…ನಿಲ್ಲೋ.” ಎಂದು ಜೋರಾಗಿ ಕೂಗಿದರು.

ತತ್ಕ್ಷಣ ನನಗೆ ನೆನಪಾದುದು ಇತ್ತೀಚೆಗೆ ನಡೆಯುತ್ತಿರುವ ಸರಗಳ್ಳತನ, ಮತ್ತು ಒಬ್ಬಂಟಿಯಾಗಿ ವಾಕಿಂಗ್ ಮಾಡುವವರಿಂದ ಮೊಬೈಲ್, ಉಂಗುರ ಇತ್ಯಾದಿ ದೋಚಿದ ಪ್ರಕರಣಗಳು. ಹಲವಾರು ವರ್ಷಗಳ ಹಿಂದೆ ನನ್ನ ಕತ್ತಿನಿಂದಲೂ ಸರವನ್ನು ಕಳ್ಳರು ಎಗರಿಸಿದ್ದರು. ಅಯ್ಯೋ, ನನ್ನ ಗ್ರಹಚಾರವೇ, ದಿನಾ ಇಷ್ಟು ನಡೆಯುವಾಗ ಕನಿಷ್ಟ ಒಬ್ಬರಾದರೂ ಯೋಗಾಭ್ಯಾಸಕ್ಕೆ ಬರುವವರು ಸಿಗುತ್ತಿದ್ದರು. ಇಂದು ಯಾರನ್ನೂ ಕಾಣಿಸುತ್ತಿಲ್ಲ. ಇತ್ತೀಚೆಗೆ ನಮ್ಮ ಬಡಾವಣೆಯಲ್ಲಿಯೂ ಒಂದೆರಡು ಮನೆಕಳ್ಳತನ, ಸರಗಳ್ಳತನದ ಪ್ರಯತ್ನಗಳಾಗಿವೆ.ಭಯವಾಗಲು ಇಷ್ಟು ಸಾಕು ತಾನೆ?

ಸ್ವರಕ್ಷಣೆಗಾಗಿ ತತ್ಕ್ಷಣಕ್ಕೆ ಹೊಳೆದದ್ದು ಓಟ. ಚಿಗರೆಯಂತೆ ಓಡುವ ವಯಸ್ಸು ನನ್ನದಲ್ಲ. ಸ್ಥೂಲಕಾಯದವಳೆಂದು ಒಪ್ಪಲು ಮನಸ್ಸು ಹಿಂಜರಿಯುವುದು ನಿಜವಾದರೂ ಶರೀರ ಸಮ್ಮತಿಸಿಯಾಗಿದೆ. ಮಂಡಿನೋವು ಬೇರೆ ಆಗಿಂದಾಗ್ಗೆ ಕಾಟ ಕೊಡುತ್ತಿದೆ. ಆದರೆ ನನಗೆ ಗೊತ್ತು, ಇತರ ಯೋಗಬಂಧುಗಳು ಇಲ್ಲೇ ಹತ್ತಿರದಲ್ಲಿ ಬರುತ್ತಿರುತ್ತಾರೆ, ನಾನು ಜೋರಾಗಿ ಕಿರುಚಿದರೆ ಅವರಿಗೆ ಕೇಳಬಹುದು, ಓಡಿದರೆ ಅವರನ್ನು ತಲಪಬಹುದು. ಹಾಗಾಗಿ ನನಗೆ ಸಾಧ್ಯವಾದಷ್ಟು ಗಟ್ಟಿಯಾಗಿ  “ಹೆಲ್ಪ್…ಹೆಲ್ಪ್…” ಎಂದು ಕಿರುಚುತ್ತಾ, ಶಾಲೆಯ ಕಡೆಗೆ ಧಾವಿಸಿದೆ. ನನ್ನ ಹಿಂದುಗಡೆಯಲ್ಲಿ ಬರುತ್ತಿದ್ದ ಬೈಕ್ ಸವಾರರು, ಇನ್ನಷ್ಟು ಸಂದೇಹಗೊಂಡು, ಕಾಲುದಾರಿಯ ಪಕ್ಕ ಬೈಕ್ ನಿಲ್ಲಿಸಿ ” ನಿಲ್ಲೊ….ವಾಚ್ ಮನ್ ಹಿಡಿಯೋ ಅವನ್ನ ” ಎನ್ನುತ್ತಾ ಓಡಿ ಬಂದರು. ನನ್ನ ಅದೃಷ್ಟಕ್ಕೆ ಅಷ್ಟರಲ್ಲಿ ಇನ್ನಿಬ್ಬರು ಯೋಗ ತರಗತಿಗೆ ಬರುವವರು ರಸ್ತೆಯಲ್ಲಿ ಕಾಣಿಸಿಕೊಂಡರು. ಬಡಾವಣೆಯ ವಾಚ್ ಮನ್ ಕೂಡ ಅಲ್ಲಿದ್ದರು. ಅಲ್ಲಿಗೆ ನನ್ನ ಮತ್ತು ಬೈಕ್ ಸವಾರರ ‘ರೇಸ್ ‘ ನಿಂತಿತು.

ಅವರೆಲ್ಲರನ್ನು ಕಂಡಾಗ ನನಗೆ ಧೈರ್ಯ ಬಂತು, ಏದುಸಿರು ಬಿಡುತ್ತಾ ಹಿಂತಿರುಗಿ ನೋಡಿದಾಗ ಆ ಬೈಕ್ ಸವಾರರು ‘ಗಸ್ತಿನ ಪೋಲೀಸರು’ ! ನಮ್ಮದು ಖಾಸಗಿ ಬಡಾವಣೆ, ಖಾಸಗಿ ಸೆಕ್ಯೂರಿಟಿ ವ್ಯವಸ್ಥೆ ಇರುವುದು ಗೊತ್ತು. ವಿಷಲ್ ಹೊಡೆಯುತ್ತಾ ಅವರು ರಾತ್ರಿಪಹರೆ ಕಾಯುವುದು ಗೊತ್ತಿತ್ತು. ಆದರೆ ಬೈಕ್ ನಲ್ಲಿ ಬರುವ ಗಸ್ತಿನ ಪೋಲೀಸರನ್ನು ನಿಯೋಜಿಸಿದ್ದು ತೀರಾ ಇತ್ತೀಚಿನ ಬೆಳವಣಿಗೆ, ಹಾಗಾಗಿ ನನಗೆ ಈ ವಿಚಾರ ಗೊತ್ತಿರಲಿಲ್ಲ.

ಒಬ್ಬಂಟಿಯಾಗಿ, ಮಬ್ಬುಗತ್ತಲಿನಲ್ಲಿ, ಯೋಗಾಭ್ಯಾಸದ ಉಡುಗೆ ಧರಿಸಿ, ಅತ್ತಿತ್ತ ನೋಡುತ್ತಾ, ಕೈಯಲ್ಲೊಂದು ಯೋಗ ಮ್ಯಾಟ್ ಹಿಡಿದು ಹೊರಟಿದ್ದ ನನ್ನನ್ನು ಕಂಡಾಗ ಅವರಿಗೆ “ಅನುಮಾನಾಸ್ಪದ ವ್ಯಕ್ತಿ , ಕಳ್ಳನ ಲಕ್ಷಣಗಳಿವೆ” ಎಂದು ಅನಿಸಿರಬೇಕು. ಅನುಮಾನ ಪರಿಹರಿಸಲೆಂದು ‘ನಿಲ್ಲೋ ..’ ಅಂದಿದ್ದರು. ನಾನು ಅವರನ್ನು ‘ಸರಗಳ್ಳರು’ ಎಂದು ಭಾವಿಸಿ ‘ಎದ್ದೆನೋ ಬಿದ್ದೆನೋ’ ಎಂಬಂತೆ ಕಾಲುದಾರಿಯಲ್ಲಿ, ಮೋರಿಯನ್ನು ಹಾರಿ ಓಡಿದ್ದೆ. ನಾನು ಓಡಿದ್ದಕ್ಕೆ ಅವರು ಇನ್ನಷ್ಟು ಅನುಮಾನ ಪಟ್ಟು ಪಕ್ಕಾ ಕಳ್ಳನ ಲಕ್ಷಣ” ಎಂದು ಪರಿಗಣಿಸಿ ನನ್ನನ್ನು ಬೆನ್ನಟ್ಟಿದ್ದರು!

Police chase

ನಿಜ ಗೊತ್ತಾದಾಗ ಪೆಚ್ಚಾದ ಪೋಲೀಸರು “ನೀವ್ಯಾಕೆ ಓಡಿದಿರಿ…” ಅಂದರು.
“ನೀವು ಸರಗಳ್ಳರು ಇರಬೇಕು ಅಂದುಕೊಂಡೆ…ಇವರುಗಳನ್ನು ಕಂಡಾಗ ಧೈರ್ಯ ಬಂತು, ಅದಕ್ಕೆ ಓಟ ನಿಲ್ಲಿಸಿದೆ ” ಅಂದೆ !!!

ಕೊನೆಗೆ ಪರಸ್ಪರ ಪರಿಚಯ ಮಾತನಾಡಿ, ಅವರ ಕರ್ತವ್ಯನಿಷ್ಥೆಯನ್ನು ಮೆಚ್ಚಿದೆವು. ಈ ವಿಷಯ ನಮ್ಮ ಯೋಗಾಭ್ಯಾಸ ತರಗತಿಯಲ್ಲಿಯೂ ಬಹಳ ಗಂಭೀರವಾಗಿ ಮತ್ತು ಹಾಸ್ಯಮಯವಾಗಿ ಚರ್ಚಿತವಾಯಿತು.

ನೀವು ಸ್ಕೂಟರ್ ನಲ್ಲಿ ಬನ್ನಿ……”
“ಇಬ್ಬರು-ಮೂವರು ಮಾತನಾಡಿಕೊಂಡು ಒಟ್ಟಾಗಿ ಬನ್ನಿ…”
” ಬೆಳಕಾಗಿರಲ್ಲ, ಅದಕ್ಕೇ ಮನೆ ಹತ್ತಿರವಿದ್ದರೂ ನಾನು ಕಾರಲ್ಲಿಯೇ ಬರುವುದು…”
” ನಾವು ಅಕ್ಕ-ಪಕ್ಕದ ಮನೆಯವರು ಒಟ್ಟಾಗಿಯೇ ಬರುವುದು.ಒಬ್ಬರಿಗೆ ಬರಕಾಗಲ್ಲಾಂದ್ರೆ ಇಬ್ಬರೂ ಯೋಗ ಕ್ಲಾಸ್ ಗೆ ಬಂಕ್ …”
“ಮನೆಯವರು ಬರಲ್ಲಾಂದ್ರೆ ನಾನು ಬರಲ್ಲ…”
“ಮನೆ ಹತ್ರ ಇದ್ದರೂ ನಡ್ಕೊಂಡ್ರು ಬಂದ್ರೆ ಬೀದಿನಾಯಿ ಒಟ್ಟಿಗೆ ಬರುತ್ತೆ…ಅದ್ಕೆ ನಾನು ಸ್ಕೂಟ್ರಲ್ಲಿ ಬರೋದು..”

ಇತ್ಯಾದಿ ಸಲಹೆ ಮತ್ತು ವಿಭಿನ್ನ ಕಾರ್ಯವೈಖರಿಗಳ ಪ್ರಸ್ತಾಪಗಳಾದುವು.

ಏನಿದ್ದರೂ, ಎಲ್ಲರ ಹಿತದೃಷ್ಟಿಯಿಂದ, ಇನ್ನು ಮುಂದೆ, ಯೋಗತರಗತಿಗಳನ್ನು 0545 ಘಂಟೆಯಿಂದ ಆರಂಭಿಸೋಣ, ಅಷ್ಟರಲ್ಲಿ ಬೆಳಗಾಗುತ್ತದೆ, ಜನರು ಓಡಾಡಲು ಆರಂಭಿಸುತ್ತಾರೆ ಎಂಬ ತೀರ್ಮಾನ ತೆಗೆದುಕೊಳ್ಳಲಾಯಿತು.

ಇಲ್ಲಿಗೆ, ನನ್ನ ಮಿಂಚಿನ ಓಟದ ಅವಘಡ ಸುಖಾಂತ್ಯಗೊಂಡಿತು.

 

– ಹೇಮಮಾಲಾ.ಬಿ

12 Comments on “ಮಿಂಚಿನ ಓಟದಲ್ಲಿ ನಾನು!

  1. ಆ ಘಳಿಗೆಯಲ್ಲಿ ನೀವು ಅನುಭವಿಸಿದ ಆತಂಕ ಬಹುಶ ಶಬ್ದಕ್ಕೆ ಮೀರಿದ್ದು.

  2. ಛೇ, ಒಳ್ಳೆಯ ಒಂದು ಪೇಚಿನ ಪ್ರಸಂಗವನ್ನು ಮಿಸ್ ಮಾಡ್ಕೊಂಡೆ, ಏನೇ ಆದ್ರೂ hats off to you…
    ಯಾರು ಅಂತಾನೂ ನೋಡದೆ ಓದಿದರಲ್ಲ ಅದಕ್ಕೆ…ಯೋಗಕ್ಕೆ ಬಂದಿದ್ದು ಸಾರ್ಥಕ !

  3. ಮಂಡಿ ನೋವು ಜಾಸ್ತಿ ಆಗಿರಬಹುದಲ್ವ ಓಡಿ ಓಡಿ….

  4. ನಗು ತರಿಸಿತು ನಿಜ…ಆದರೆ ನಿಮ್ಮ ಜಾಗುರುಕತೆ ಮೆಚ್ಚುಗೆಯಾಯಿತು. ಬಹುಶಹ… ನಿಮ್ಮಂತೆಯೇ ಮಹಿಳೆಯರು ಜಾಗ್ರತೆವಹಿಸಿದರೆ
    ಸರಗಳ್ಳತನ ಸ್ವಲ್ಪ ಮಟ್ಟಿಗೆ ಕಡಿಮೆ ಆದರು ಆದೀತು…!

  5. ಆ ಕ್ಷಣದ ಮನಸ್ಥಿತಿ ಹೇಗಿದ್ದಿರಬಹುದಲ್ವ …. ಗ್ರೇಟ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *