ರೀ… ಒಂದ್ನಿಮ್ಷ ಒಳಗ್ಬರ್ತೀರಾ….!
ರೀ… ಒಂದ್ನಿಮ್ಷ ಒಳಗ್ಬರ್ತೀರಾ….! ಯಾರು, ಯಾರಿಗೆ, ಯಾವಾಗ ಈ ರೀತಿ ಕರೆಯಬಹುದು ಎಂದು ‘ಥಟ್ಟಂತ ಹೇಳಿ’ ಎಂದು ಯಾರಾದರು ಕೇಳಿದರೆ ಮದುವೆಯಾದವರೆಲ್ಲಾ ಮುಸಿ ಮುಸಿ ನಗಬಹುದು!
ಯಾರಿಗೆ ಧೈರ್ಯ ಇದೆ ಹೇಳಿ ಈ ರೀತಿ ಕರೆಯಲು, ಕಟ್ಟಿಕೊಂಡ ಹೆಂಡತಿಯನ್ನು ಬಿಟ್ಟು? ಒಳಗೆ ಬನ್ನಿ ಎಂದರೆ ಪಾಯಸ ತಿನ್ನುವುದಕ್ಕೆ ಎಂದುಕೊಂಡರೆ ಹೇಗೆ? ಬಹಿರಂಗದಲ್ಲಿ ಹೇಳಲಾಗದ್ದನ್ನು ಏಕಾಂತದಲ್ಲಿ ಕಿವಿ ಹಿಂಡಿಯೋ, ತಲೆಗೆ ಮೊಟಕಿಯೊ ಹೇಳುವುದಿದೆ ಎಂದೇ ಅರ್ಥ. ದಾಂಪತ್ಯದಲ್ಲಿ ಏಕಾಂತವೆಂದರೆ ಇಬ್ಬರು ಒಟ್ಟಿಗಿರುವುದು ಎಂದು ನಾನು ತಿಳಿದುಕೊಂಡಿರುವ ಅರ್ಥ. ಅದಿರಲಿ ವಿಚಾರವೇನೆಂದರೆ… ಸ್ತ್ರೀ ಜಾತಿ ಬಹುಶಃ ಒಮ್ಮತದ ಅಭಿಪ್ರಾಯಕ್ಕೆ ಬರುವುದು ‘ನಮ್ಮ ಮನೆಯವರಿಗೆ ಏನು ಗೊತ್ತಾಗೋಲ್ಲಾರಿ’ ಎಂಬ ವಿಷಯದಲ್ಲಿ ಮಾತ್ರ. ಬೆಳಗು ಸಂಜೆಯ ವಾಯು ವಿಹಾರದಲ್ಲೂ ನನ್ನ ಮುಂದೆ ವಾಯುಸೇವನೆಗಾಗಿ ಹೊರಟ ಲಲನಾಮಣಿಯರದು ಇದೇ ಅಭಿಪ್ರಾಯ! ಪರಿಣಾಮ ಮನೆಯಲ್ಲಿ ಮಕ್ಕಳು ಅಂದುಕೊಳ್ಳುವುದು `ಅಪ್ಪನಿಗೇನೂ ತಿಳಿಯುವುದಿಲ್ಲ, ಅಮ್ಮ ಬುದ್ಧಿವಂತೆ!’ ಮದುವೆಯಾದ ಹೊಸತರಲ್ಲಿ ಮಗಳನ್ನು ಬೀಳ್ಕೊಡುವಾಗ ಅಳಿಯ ಪಿ.ಹೆಚ್.ಡಿಯೇ ಮಾಡಿರಲಿ, ತಾಯಿ ಮಗಳಿಗೆ ಹೇಳುತ್ತಾಳೆ. ನಮ್ಮ ಅಳಿಂಯಂದ್ರಿಗೆ ಏನು ಗೊತ್ತಾಗುವುದಿಲ್ಲ! ಜೋಪಾನ! ಪೀಠಿಕೆ ಜಾಸ್ತಿಯಾಯಿತು…, ಬಿಡಿ. ವಿಷಯ ಎಲ್ಲೆಲ್ಲಿಗೋ ಹೋಗುತ್ತಿದೆ. ನೇರವಾಗಿ ಈ ಲೇಖನದ ಶೀರೋನಾಮೆಯ ಕುರಿತಂತೆ ಬರೆಯುತ್ತೇನೆ.
ಈ ‘ರೀ… ಒಂದ್ನಿಮ್ಷ ಒಳಗ್ಬರ್ತೀರಾ….!!’ಎನ್ನುವುದರ ಆಡಿಯೋ ನೀವೆಷ್ಟೋ ಸಲ ಕೇಳಿದ್ದೀರಿ. ನಾನಾದರೋ ಇದರ ಲೈವ್ ನೋಡಿದ ಭಾಗ್ಯವಂತ. ಸಂಘದ ಯಾವುದೋ ಒಂದು ಕಾರ್ಯಕ್ರಮಕ್ಕೆ ಚಂದಾ ಎತ್ತಬೇಕಾಗಿತ್ತು. ಅದಕ್ಷರು ಸ್ಸಾರಿ ಅಧ್ಯಕ್ಷರು ಟಾರ್ಗೆಟ್ ಬೇರೆ ನೀಡಿದ್ದರು. ಇಂತಹ ಸಂದರ್ಭಗಳಲ್ಲಿ ಕಂಡು ಕಾಣಿರದ ಬಂಧು ಮಿತ್ರರೆಲ್ಲರು ನೆನಪಾಗುತ್ತಾರೆ! ಅವರ ಮನೆಗಳಿಗೆ ‘ಚಂದಾದಾರ’ ರಾಗಿಯೋ, ‘ಚಂದಾಮಾಮ’ಗಳಾಗಿಯೋ ಹೋಗಬೇಕಾಗುತ್ತದೆ. ಮೊದಲು ನೆನಪಾದವನೆ ಗೆಳೆಯ ವಿಶ್ವ. ಆಫಿಸಿನಿಂದಲೇ ಫೋನಾಯಿಸಿ ಅವನ ಉಭಯಕುಶಲೋಪರಿ ಬೆಸಗೊಂಡು ವಿಚಾರ ತಿಳಿಸಿದೆ. ಈ ಬಾರಿ ನಿನ್ನ ಮನೆಯಿಂದ ಒಂದು ಸಾವಿರಗಳ ರುಪಾಯಿಗಳ ದೇಣಿಗೆ ಬೇಕೆಂದೆ. ವಿಶ್ವ ಹೇಳಿದ ಅದು ನಮ್ಮ ಸಂಘ, ಸಂಘದ ಕಾರ್ಯಕ್ರಮವೆಂದರೆ ಅದು ನಮ್ಮ ಕಾರ್ಯಕ್ರಮ. ಈ ಸೂತ್ರ ಪ್ರತಿಯೊಬ್ಬರಿಗೂ ತಿಳಿದಿರಬೇಕು. ನೀನು ಕೇಳುವುದು ಹೆಚ್ಚೊ ನಾನು ಕೊಡುವುದು ಹೆಚ್ಚೊ! ನನ್ನ ಕಿವಿಯನ್ನೇ ನಂಬಲಾಗಲಿಲ್ಲ ನನಗೆ! ವಿಶ್ವನಿಗಂದೆ ‘ಒಮ್ಮೆ ನಿನ್ನ ಮೊಬೈಲ್ಅನ್ನು ನಿನ್ನ ಕಾಲ ಮೇಲಿಡು’. ಯಾಕೆ ಅಂದ. ಇಲ್ಲಿಂದಲೇ ಫೋನಿನಲ್ಲಿಯೇ ನಮಸ್ಕಾರ ಮಾಡುತ್ತೇನೆ!
ಭಾನುವಾರ ಪಂಚ ಪಂಚ ಉಷಃಕಾಲದಲ್ಲೆದ್ದು ನಿತ್ಯಾಹ್ನಿಕಗಳನ್ನು ಪೂರೈಸಿಕೊಂಡವನಾಗಿ ಹೆಗಲಲ್ಲೊಂದು ಬುದ್ಧಿವಂತರ ಚೀಲ, ಚೀಲದೊಳಗೆ ಚಂದಾ ಎತ್ತುವುದಕ್ಕೆ ಬೇಕಾದ ಸಾಮಗ್ರಿಗಳು, ಐ ಮೀನ್… ರಶೀದಿ ಪುಸ್ತಕ, ಕರಪತ್ರ, ಪೆನ್ನು ಮತ್ತು ಮುಖವೊರೆಸಿಕೊಳ್ಳಲು ಕರವಸ್ತ್ರ! (ಕೆಲವೆಡೆ ಅದರ ಅವಶ್ಯಕತೆ ಉಂಟಾಗುತ್ತದೆ!) ಗಳೊಂದಿಗೆ ‘ಚಂದಾಮಾಮ’ನಾಗಿ ದ್ವಿಚಕ್ರಿಯಾಗಿ ಹೊರಟೆ. ವಿಶ್ವನ ಮನೆಯ ಕರೆಗಂಟೆ ಒತ್ತಿದೆ. ಒಂದೆರಡು ನಿಮಿಷಗಳ ಬಳಿಕ ಬಾಗಿಲು ತೆರೆಯಿತು. ಬಾಗಿಲಲ್ಲಿ ವಿಶ್ವನ ಮಡದಿ ವಿಶಾಲು. ಅನ್ವರ್ಥನಾಮ ಆಕೆಯದು! ವಿಶ್ವ ಇದ್ದಾನೇನು… ಕೇಳಿದೆ. ಹ್ಞೂ…ಇರಬೇಕು ಅನ್ಸತ್ತೆ! ಅಡ್ಡಗೊಡೆಯ ಮೇಲೆ ದೀಪವಿಟ್ಟಂತೆ ಉತ್ತರಿಸಿದಳು. ಬಾಗಿಲ್ಲೇ ನಿಂತು ಬನ್ನಿ.. ಬನ್ನಿ…ಅಂದಳು. ನೀವು ಜಾಗ ಬಿಟ್ರೆ ನಾನು ಬರೋಕಾಗುತ್ತೆ ಎಂದೆ! ಕಾರಣ ಇಷ್ಟೆ..ಸೈಝಲ್ಲಿ ಆಕೆ ವಿಶ್ವನ ಅರ್ಧಾಂಗಿಯಲ್ಲ, ಪೂರ್ಣಾಂಗಿ!!! ಒಹ್ ವಾಟ್ ಎ ಜೋಕ್ ಅಂದಳು.
ವಿಶ್ವ ಒಳಗಿನಿಂದ ಬಂದ. ಉಭಯ ಕುಶಲೋಪರಿಯಾಯ್ತು. ಬಂದ ಕಾರ್ಯವನರುಹಿದೆ. ಇವತ್ತೇ ಬರ್ತಿ ಅಂದ್ಕೊಂಡಿರ್ಲಿಲ್ಲ… ವಿಶ್ವ ಪಿಸು ನುಡಿದ. ದಾಸರು ಹೇಳ್ಳಿಲ್ವೇನೋ…ಇಂದಿನ ದಿನವೇ ಶುಭ ದಿನವು, ಇಂದಿನ ವಾರ ಶುಭವಾರವೆಂದು ಎಂದೆನ್ನುತ್ತ ರಶೀದಿ ಪುಸ್ತಕವನ್ನು ಹೊರತೆಗೆದು ಮೊನ್ನೆ ಹೇಳಿದ್ದಿಯಲ್ಲ ಒಂದು ಸಾವಿರ ಅಂತ. ರಶೀದಿ ಕೊಡುತ್ತೇನೆ ಎಂದೆ. ಮನೆಯೊಳಗಿಂದ ವಿಶಾಲು ಸಣ್ಣಗೆ ಕೆಮ್ಮಿದಳು. ಅದು ವಿಶ್ವನ ಕಿವಿಗೆ ಬೀಳಲಿಲ್ಲ. ಆಕೆ ದನಿಯೆತ್ತಿದಳು…! ರೀ…ಒಂದ್ನಿಮ್ಷ ಒಳಗ್ಬರ್ತೀರಾ…….! ಧ್ವನಿಯಲ್ಲಿ ಸ್ವಲ್ಪ ಮಟ್ಟಿನ ಕಠೋರತೆಯಿತ್ತು. ಸ್ವಿಚ್ ಅದುಮಿ ಬಲ್ಬ್ ಉರಿಯಲು ತಗಲುವ ಸಮಯಕ್ಕಿಂತಲೂ ಕಡಿಮೆ ಸಮಯದಲ್ಲಿ ವಿಶ್ವ ವಿಶಾಲು ಮುಂದಿದ್ದ! ಬೆಳಕಿನ ವೇಗಕ್ಕಿಂತ ಧ್ವನಿಯ ವೇಗವೇ ಹೆಚ್ಚು ಎಂಬ ವೈಜ್ಞಾನಿಕ ಸತ್ಯದ ಅನಾವರಣವನ್ನು ನಾನು ಅಲ್ಲಿ ಕಂಡೆ! ಐದು ನಿಮಿಷಗಳ ಬಳಿಕ ವಿಶ್ವ ನನ್ನೆಡೆಗೆ ಬಂದ. ಯುದ್ಧದಲ್ಲಿ ಸೋತವನಂತಿತ್ತು, ಸಾಕಷ್ಟು ಬೆವರಿದ್ದ ಕೂಡ! ಬಂದವನೆ ಹವಾಮಾನದ ಬಗೆಗೆ ಮಾತು ಪ್ರಾರಂಭಿಸಿ ಲೋಕಾಯುಕ್ತರ ರಾಜಿನಾಮೆ, ಬೆಂಗಳೂರು ಮಹಾನಗರ ಸಭೆಯನ್ನು ವಿಭಜನೆ ಮಾಡುವ ಬಗೆಗೆ ಅವನ ವಿರೋಧ, ಒಬಾಮ ಆಡಳಿತ, ಮೋದಿಯ ಸ್ವಚ್ಛ ಬಾರತ ಮೊದಲಾದ ವಿಷಯಗಳ ಬಗೆಗೆ ಮಾತನಾಡಿದ. ಕುಸಿದ ಶೇರ್ ಮಾಕೇಟ್, ಏರಿದ ಬೆಲೆಗಳ ಬಗೆಗೂ ಮಾತನಾಡಿದ. ವಿಶಾಲುನೂ ಬದುಕಿನ ಶ್ರೀಮಂತ ಕಷ್ಟಗಳ ಬಗೆಗೆ ಮಾತು ಮುಂದುವರಿಸಿ ಏನೋ ನೆನೆಸಿಕೊಂಡವಳಂತೆ ಎದ್ದು ಒಳಗೆ ನಡೆದಳು.
ಇದೇ ಸುಸಮಯವೆಂದು ವಂತಿಗೆಯ ಬಗೆಗೆ ಪ್ರಸ್ತಾಪಿಸಿದೆ. ನೀನಿಷ್ಟು ಬೇಗ ವಕ್ಕರಿಸುತ್ತಿ ಅಂತ ನನಗೇನು ಕನಸೇ..?. ನಿನ್ನೆ ಪಕ್ಕದ್ಮನೆ ರಂಗ ಮಕ್ಳನ್ನ ಸ್ಕೂಲ್ ಗೆ ಎಢ್ಮಿಟ್ ಮಾಡ್ಬೇಕು. ಒಂದೈದು ಕೊಡಯ್ಯಾ ಅಂದ. ಮಕ್ಕಳ ವಿದ್ಯಾಭ್ಯಾಸದ ವಿಷಯ. ನನ್ಮಕ್ಳೇನು, ಅವನ್ಮಕ್ಳೇನು.. ಎಲ್ಲಾ ಒಂದೆ! ಕೈಲಿದ್ದ ಐದುಸಾವಿರಾನೂ ಅವನಿಗೆ ಕೊಟ್ಬಿಟ್ಟೆ. ಈಗ ನಿಲ್ಲೋ ನಿಲ್ಲು..! ಮುಂದಿನ್ವಾರ ಬಾ ಅಂದ. ಬಿಡ್ತಿನ್ಯೇ ನಾನು…! ವಿಶ್ವ ನಾನು ಮತ್ತೆ ಮತ್ತೆ ಬರಕ್ಕಾಗಲ್ಲ. ಗಾಡಿಗೆ ಪೆಟ್ರೊಲ್ ಕಾಸು ಸಂಘ ಕೊಡೊಲ್ಲ. ಒಂದ್ಕೆಲ್ಸ ಮಾಡು. ಚೆಕ್ ಕೊಟ್ಬಿಡು ಅಂದೆ. ಅಂತು ನನ್ನ ಪಾಲಿನ ನಕ್ಷತ್ರಿಕ ನೀನು ಅಂತ ನನ್ನ ಬೈದ. ಶಾಲು….ವಿ..ಶಾಲೂ.., ಎಲ್ಲಿ ಒಳಗಿಂದ ಆ ಚೆಕ್ ಬುಕ್ ತಾಮ್ಮಾ ಅಂದ. ಹೆಂಡತಿಯನ್ನು ಅಮ್ಮ ಎಂದು ಕರೆಯುವುನ್ನು ವಿಶ್ವ ರೂಢಿಸಿಕೊಂಡಿದ್ದ! ಅವನ ಧೈರ್ಯಕ್ಕೆ ಭಳಿಭಳಿರೆ ಎಂದುಕೊಂಡೆ.
ಒಂದು ಟ್ರೆಯಲ್ಲಿ ಕಾಫಿ ಮತ್ತು ಒಂದಷ್ಟು ಬಿಸ್ಕೆಟ್ ತಂದಳು ವಿಶಾಲು. ನನಗೂ ವಿಶ್ವನಿಗೂ ತಲಾ ಎರಡೆರಡು ಕೊಟ್ಟು ಒಂದೆರಡನ್ನು ತನ್ನ ಮುದ್ದಿನ ನಾಯಿ ಮೋತಿಗೆ ಹಾಕಿದಳು. ನನಗೆ ಕೊಟ್ಟ ಬಿಸ್ಕೆಟ್ ನೋಡಿದೆ. ಸದ್ಯ ನಾಯಿ ಬಿಸ್ಕೆಟ್ ಆಗಿರಲಿಲ್ಲ! ಎಲ್ಲಮ್ಮಾ ಚೆಕ್ ಬುಕ್..? ವಿಶ್ವ ಮಡದಿಯೊಡನೆ ಬೆಸಗೊಂಡ! ಎನ್ರೀ ನೀವು… ಒಂದು ತಿಂಗ್ಳಿಂದ ಹೇಳ್ತಾನೇ ಇದ್ದೀನಿ. ಬ್ಯಾಂಕಿಂದ ಹೊಸ ಚೆಕ್ ಬುಕ್ ತನ್ನಿ. ಹೀಗೆ ಯಾರಾದ್ರೂ ಚಂದಾ ವಸೂಲಿ, ವಂತಿಗೆ ಅಂತ ಬಂದ್ರೆ ಬೇಕಾಗುತ್ತೇ ಅಂತ.! ಆ ಕ್ಷಣಕ್ಕೆ ನನಗೆ ಭೂಮಿ ಬಾಯ್ದೆರೆದು ನನ್ನನ್ನು ನುಂಗಬಾರದೆ ಅನಿಸಿತು. ವಿಶ್ವನ ಕಡೆ ನೋಡಿದೆ. ಆತ ಗೋಡೆಯ ಮೇಲೆ ನೊಣವೊಂದನ್ನು ಹಲ್ಲಿ ಕಬಳಿಸುವುದನ್ನು ಎವೆಯಿಕ್ಕದೆ ನೋಡುತ್ತಿದ್ದ. ವಿಶಾಲು ಗಂಡನನ್ನು ಅನುನಯದಿಂದ ತರಾಟೆಗೆ ತೆಗೆದುಕೊಂಡಳು.. ಏನ್ರೀ ನೀವು… ಸದ್ಯ ನಿಂ ಫ್ರೆಂಡ್ ಆದ್ರಿಂದ ನಮ್ಮ ಮಾನ ಉಳೀತು! ಇಲ್ದಿದ್ರೆ ಎಷ್ಟು ಶೇಮ್ ಆಗ್ತಿತ್ತುನೋಡಿ. ಪ್ಲೀಸ್ ಇನ್ನು ಮುಂದೆ ಹೀಗ್ಮಾಡ್ಬೇಡಿಪಾ…! ಆಕೆ ಮುದ್ದು ಕಂದನನ್ನು ರಮಿಸುವಂತೆ ವಿಶ್ವನಿಗೆ ನಾಜೂಕಾಗಿ ಬೈದಳು. ಪರಿಸ್ಥಿತಿಯನ್ನು ನಾಜೂಕಾಗಿ ತನ್ನ ಕೈಗೆತ್ತಿಕೊಂಡಳು ವಿಶಾಲು.
ಆಕೆ ಮಾತು ಮುಂದುವರಿಸಿದಳು…ನೋಡಿ ಗುಂಡಣ್ಣೋರೇ.. ಈಗ್ಲೂ ಹಾಳ್ಬಿದ್ದೇನೂ ಹೋಗಿಲ್ಲ. ಆದದ್ದೆಲ್ಲ ಒಳಿತೇ ಆಯಿತು. ನಿಮ್ಗೆ ಚೆಕ್ ಕೊಟ್ಬಿಟ್ಟಿದ್ರೆ ನಮ್ದು ಒಂದು ಚೆಕ್ ಲೀಫು ವೇಸ್ಟೂ, ನಾವು ಕಾರ್ಯಕ್ರಮಕ್ಕೆ ಬರ್ತಾ ಇದ್ವೊ ಇಲ್ವೋ ಯಾರಿಗೆ ಗೊತ್ತು? ಈಗ ನಾವು ನಿಮಗೆ ಕಮಿಟ್ ಆಗ್ಬಿಟ್ವಿ…! ಹೆಂಗೂ ಕಾರ್ಯಕ್ರಮಕ್ಕೆ ನಾವು ಬರ್ಲೇ ಬೇಕು… ಏನ್ರಿ ಕಾರ್ಯಕ್ರಮದ ಡೇಟು ಇವತ್ತೇ ಬ್ಲಾಕ್ ಮಾಡೀಪಾ. ಮತ್ತೆ ನಾವ್ ಹೋಗದಿದ್ರೆ ನಿಂ ಫ್ರೆಂಡು ಬೇಜಾರು ಮಾಡ್ಕೋತಾರೆ. ಆಕೆ ಮೀಟಿಂಗ್ ಮುಗಿಸಿದವಳಂತೆ ಎದ್ದಳು.. ನಾನು ಅನಿವಾರ್ಯವಾಗಿ ಖಾಲಿ ಕೈಯ್ಯಲ್ಲಿ ಏಳಲೇ ಬೇಕಾಯಿತು.
ಕಾರ್ಯಕ್ರಮ ವಿಜ್ರಂಭಣೆಯಿಂದ ಜರುಗಿತು. ಸಭೆಯಲ್ಲೆಲ್ಲ ತಡಕಾಡಿದೆ..ವಿಶ್ವ-ವಿಶಾಲುಗಳು ಕಾಣಲಿಲ್ಲ. ದೇಣಿಗೆ ಸಂಗ್ರಹದ ವಿವರಗಳನ್ನು ನೋಡಿದೆ…, ಚೆಕ್ಕೂ ಇಲ್ಲ…..ಕ್ಯಾಷೂ ಇಲ್ಲ!!!
– ದಿವಾಕರ ಡೋಂಗ್ರೆ ಎಂ. (ಮಾಳವ)
ಮನೆಯ ಆರ್ಥಿಕ ಮಂತ್ರಿ ಆಕೆ. ತಪ್ಪೇನಿಲ್ಲ. ಬರಹ ಮತ್ತು ಶೈಲಿ ಚೆನ್ನಾಗಿದೆ.
ಮಾನ್ಯರೇ, ಸಾಮಾನ್ಯವಾಗಿ ಈ ಚಂದ ವಸೂಲಿಯ ಕಥೆಯೇ ಹೀಗೆ. ಕೆಲವರು ಸತ್ಕಾರ್ಯಗಳಿಗೆ ದೇಣಿಗೆ ಕೊಡಬೇಕಾದರೆ. ಏನೋ ಕಳೆದುಕೊಂಡಂತೆ, ಅಥವೆ ಎನೋ ಉಳಿಸಿದಂತೆ. ಇದು ಒಂದು ರೀತಿಯಲ್ಲಿ ಮುಜುಗರದ ಸಂಗತಿ. ಮಾನಸಿಕ ಹಿಂಸೆ ಸಹ.
ಕಥೆಯಂತು ಸತ್ಯ ಕಥೆಯಂತೆಯೇ ಇದೆ ನಿರೂಪಣೆ ಚೆನ್ನಾಗಿದೆ.
ದಿವಾಕರ ಡೋಂಗ್ರೆಯವರೆ, ಇದೀಗ ತಾನೆ ನಿಮ್ಮ ವಿಭಿನ್ನ ಬರಹ ‘ನಾನು, ಮಂಥರೆ ಮಾತಾಡುತ್ತಿದ್ದೇನೆ ‘ ಓದಿ ಒಂದು ನಿಮಿಷದ ಮಟ್ಟಿಗೆ ಬಂದರೆ ಇಲ್ಲಿ ನಿಮ್ಮ ಮುದ ತರುವ ಲಘು ಬರಹ ‘ಒಳಗ್ಬನ್ರಿ ಒಂದ್ನಿಮ್ಷ…’ ಪುರಾಣ ಪ್ರವಚನ ! ಎರಡೂ ಚೆನ್ನಾಗಿವೆ 🙂
ಲಘು ಹಾಸ್ಯ ಲೇಖನ ತು೦ಬಾ ಚೆನ್ನಾಗಿತ್ತು