ಮೂರು ಮಿಂಚುಗಳು
ಹಳೆ ಅಂದರೆ ಅದು ಕಳೆ ಅಲ್ಲ
ಹೊಸದೆಂದರೆ ಅದು ಹೀಚಲ್ಲ
ಹಳೆ ಅಂದರೆ ಅದು ಮಾಗಿದ ಫಲ
ಹೊಸದೆಂದರೆ ಧುಮ್ಮಿಕ್ಕುವ ಜಲ.
ಇರಲಿ ಹಳೆತನದ ನಿಶಾನು
ಮೂಡಲಿ ಹೊಸತನದ ಕಮಾನು
ಹಳೆಯ ಅನುಭವದ ರಸಪಾಕದಲಿ
ತೇಲಲಿ ಹೊಸತನದ ಜಾಮೂನು !
……………………..
ನನ್ನ ನಾ ಗೆದ್ದರೆ ಸೋಲಲ್ಲು ಗೆದ್ದಂತೆ
ನನ್ನೊಳಗೆ ಸೋತರೆ ಗೆದ್ದರೂ ಸೋತಂತೆ
ನೀತಿಯಲಿ ಗೆದ್ದರೆ ನಿಜದ ಗೆಲುವು
ಭೀತಿಯಲಿ ಸೋತರೆ ನಿಜದ ಸೋಲು.
ನೀತಿಯಲಿ ಸೋತರೂ ನಿಜದ ಗೆಲುವು
ಅನೀತಿಯಲಿ ಗೆದ್ದರೂ ನಿಜದ ಸೋಲು
ಗೆದ್ದಿದ್ದು ಗೆಲುವಲ್ಲ ಸೋತಿದ್ದು ಸೋಲಲ್ಲ
ಒಳಗಿರುವ ಆತ್ಮನೇ ನಿಜವ ಬಲ್ಲ.
…………………..
ಐದೂ ಬೆರಳುಗಳು ಭಗವಂತನದೆ ಸೃಷ್ಟಿ
ಪಂಚಭೂತಗಳು ಸೇರಿದರೇ ಸಮಷ್ಟಿ
ಎಲ್ಲ ಬೆರಳೂ ಕೂಡಿದರಷ್ಟೆ ಮುಷ್ಟಿ .
ಕೆನೆಯ ಮೊಸರದು ಸ್ವಚ್ಛ – ಸುಂದರದ ದೃಷ್ಟಿ
ಮಥಿಸಿದರೆ ಬಳಸಿ ಸುಚಿಂತನದ ಯಷ್ಟಿ
ಸಮರಸದ ನವನೀತ ನೀಡುವುದು ಪುಷ್ಟಿ.
.
– ಮೋಹಿನಿ ದಾಮ್ಲೆ (ಭಾವನಾ)
ಒಂದು ಹಳೆ ಬೇರು ಹೊಸ ಚಿಗುರು,
ಮತ್ತೊಂದು ಸೋಲು ಗೆಲುವ ಸಖರು
ಮಗದೊಂದು ಸಮಷ್ಟಿ ಪುಷ್ಟಿಯ ಹೊಂಚು
ಸದ್ದಿಲ್ಲದೆ ಫಳಫಳಿಸಿವೆ ಮೂರು ಮಿಂಚು ! ||
ಮೂರೂ ಮಿಂಚುಗಳನ್ನು ತುಂಬ ಚಂದದ ಗೊಂಚಲಾಗಿ ಜೋಡಿಸಿ ಹೇಳಿದ್ದೀರಿ.
ಧನ್ಯವಾಾದಗಳು.
ಚೆನ್ನಾಗಿದೆ….