ಘಮ ಘಮ ಘಮಾಡಿಸ್ತಾವ ಮಲ್ಲಿಗೆ…
ಹದಿನೈದು ವರ್ಷಗಳ ಹಿಂದೆ, ಮೈಸೂರಿನ ಬಡಾವಣೆಯೊಂದರಲ್ಲಿ ನಮ್ಮ ಮನೆ ಕಟ್ಟಿದ ಮೇಲೆ, ಮನೆ ಮುಂದಿನ ಪುಟ್ಟ ಕೈದೋಟದಲ್ಲಿ ಹಿಡಿಸಲಾರದಷ್ಟು ಪುಷ್ಪಸಂಕುಲವನ್ನು ಬೆಳೆಸುವ ಹುಮ್ಮಸ್ಸಿತ್ತು. ಅಕ್ಕಪಕ್ಕದ ಮನೆಗಳಿಂದ ಪಡೆದ ಗಿಡಗಳು, ಫಾರಂನಿಂದ ತಂದ ಹೈಬ್ರಿಡ್ ತಳಿಗಳು, ನೆಂಟರ ಮನೆಯಿಂದ ತಂದ ಗಿಡಗಳು, ಅಫೀಸಿನ ತೋಟದ ಮಾಲಿಯನ್ನು ಕೇಳಿ ಪಡೆದ ಸಸಿಗಳು…..ಇತ್ಯಾದಿ ಹಲವಾರು ಮೂಲಗಳಿಂದ ನಮ್ಮ ಮನೆಯಂಗಳ ಸೇರಿದವು. ಇವುಗಳಲ್ಲಿ ಕೆಲವು ನಮ್ಮ ಅತಿಕಾಳಜಿಯನ್ನೂ, ಸೀಮಿತ ಜಾಗದಲ್ಲಿ ‘ಸಸಿಸಂಖ್ಯಾಸ್ಫೋಟ’ವನ್ನು ಸಹಿಸಲಾರದೆ ಸತ್ತು ಹೋದುವು. ಒಟ್ಟಾರೆಯಾಗಿ ಹೆಚ್ಚಿನ ಗಿಡಗಳು ಮೈಸೂರಿನ ಪೂರಕ ಹವೆ ಮತ್ತು ಹೊಸಮಣ್ಣಿನ ಸಾರ ಸೇರಿ, ನಳನಳಿಸಿ ಬೆಳೆದಾಗ ಸಡಗರ ಪಟ್ಟಿದ್ದೂ ಆಯಿತು.
ನರುಗಂಪಿನ ಜಾಜಿಮಲ್ಲಿಗೆಯ ಸಸಿಯೊಂದನ್ನು ನೆಟ್ಟು, ಅದಕ್ಕೆ ಅಧಾರವಾಗಿ ದಾರ ಜೋಡಿಸಿ ತಾರಸಿಯ ಗ್ರಿಲ್ ಗೆ ಕಟ್ಟಿದ್ದೆ. ಒಂದೆರಡು ವರ್ಷಗಳಲ್ಲಿ, ದಾರವನ್ನು ಅನುಸರಿಸಿ, ಸುಮಾರು 18 ಅಡಿ ಎತ್ತರಕ್ಕೆ ಬೆಳೆದು ತಾರಸಿ ತಲಪಿದ ಜಾಜಿ ಬಳ್ಳಿಯು ಅಂದಿನಿಂದ ಇಂದಿನವರೆಗೂ ನಮ್ಮ ತಾರಸಿಯಲ್ಲಿ ‘ ಘಮ ಘಮಾಡಿಸ್ತಾ ‘ ಇವೆ. ಈಗ ಈ ಜಾಜಿಬಳ್ಳಿಯ ಎತ್ತರವೇ ಆಕರ್ಷಣೆಯಾಗಿದ್ದು, ಬೀದಿಯಲ್ಲಿ ಹೋಗುವ ಕೆಲವರು ಗಮನಿಸಿ ಛಾಯಾಚಿತ್ರ ತೆಗೆದುಕೊಳ್ಳುವುದೂ ಇದೆ. ಇದುವರೆಗೆ ಅರಳಿದವೆಷ್ಟೊ, ಮುದುಡಿದುವೆಷ್ಟೊ, ಹುಳಹುಪ್ಪಟೆ ತಿಂದುವೆಷ್ಟೊ, ದೇವರ ಮುಡಿಗೆ ತಲಪಿದವೆಷ್ಟೊ, ಹೆಂಗೆಳೆಯರ ಜಡೆ ಸೇರಿದುವೆಷ್ಟೋ….ಯಾರಿಗೆ ಬೇಕು ಈ ಲೆಕ್ಕ? .. ಎಂಬಂತೆ ಬಿಂಕದಿಂದ ಜಾಜಿಬಳ್ಳಿಯು ನಮ್ಮ ತಾರಸಿಯಲ್ಲಿ ರಾರಾಜಿಸುತ್ತವೆ.
ಜಾಜಿಮಲ್ಲಿಗೆಗೆ ಇಂಗ್ಲಿಷ್ ನಲ್ಲಿ Pink Jasmine ಅನ್ನುತ್ತಾರೆ. ಸಾಮಾನ್ಯವಾಗಿ ಕರಾವಳಿಯ ಮನೆಯಂಗಳದಲ್ಲಿ ಒಂದಾದರೂ ಜಾಜಿಮಲ್ಲಿಗೆಯ ಬಳ್ಳಿ ಇರುತ್ತದೆ. ಇದು ಬಳ್ಳಿಯಾದರೂ ಸುಮಾರು 8-10 ಅಡಿ ಎತ್ತರಕ್ಕೆ ಪೊದರಿನಂತೆ ಬೆಳೆಯುತ್ತದೆ. ಸಂಜೆಯಾಗುತ್ತಿದ್ದಂತೆ ಸುವಾಸನೆ ಬೀರುತ್ತ ಅರಳುವ ಹೂಗಳು ಬೇಗನೇ ಬಾಡುತ್ತವೆ.ಇದರಲ್ಲಿ ನಸುಗುಲಾಬಿ ಮತ್ತು ಬಿಳಿ ಬಣ್ಣದ ಪ್ರಭೇಧಗಳಿವೆ.
ಉದ್ದ ತೊಟ್ಟನ್ನು ಹೊಂದಿರುವ ಜಾಜಿಯ ಮೊಗ್ಗುಗಳನ್ನು ಕಿತ್ತು, ಬಾಳೆಯ ನಾರಿನಲ್ಲಿ ಅಂದವಾಗಿ ಪೋಣಿಸುವುದು ಒಂದು ಕಲೆ. ಇತರ ಮಲ್ಲಿಗೆಯಷ್ಟು ಇಳುವರಿ ದೊರೆಯದುದರಿಂದ ಮತ್ತು ಬೇಗನೇ ಬಾಡುವ ಗುಣದಿಂದಾಗಿ ಜಾಜಿಮಲ್ಲಿಗೆಗೆ ಇತರ ಮಲ್ಲಿಗೆಗಳಷ್ಟು ವಾಣಿಜ್ಯ ಪ್ರಾಮುಖ್ಯತೆ ಲಭಿಸಿಲ್ಲ. ಗಣಪತಿ ಪೂಜೆಗೆ ಜಾಜಿಮಲ್ಲಿಗೆ ಶ್ರೇಷ್ಠ ಎಂಬ ನಂಬಿಕೆಯಿದೆ.
– ಹೇಮಮಾಲಾ.ಬಿ
ಘಮ ಘಮ illivaregu bartide..
ಇಳುವರಿ ಕಡಿಮೆ ಇದ್ದರೂ ಬೇರೆ ಮಲ್ಲಿಗೆಗಿಂತ ದುಬಾರಿ, ಬೇಡಿಕೆಯೂ ಹೆಚ್ಚು. ಇಳುವರಿ ಕಡಿಮೆ ಇದ್ದರೂ ಬೇರೆ ಮಲ್ಲಿಗೆಗಿಂತ ದುಬಾರಿ, ಬೇಡಿಕೆಯೂ ಹೆಚ್ಚು.
ಇಳಿಸಂಜೆಯ ತಂಬೆಲರಿಗೆ ಜಾಜಿಯ ಗಂಧ ಸುಂದರ, ಸುಮಧುರ! 🙂
ಲೇಖನ ಅತ್ಯುತ್ತಮ 🙂
ಇಂಥ ಜಾಜಿ ಪೊದೆ ನಾನು ಇದೇ ಮೊದಲು ಕಂಡೆ . ಘಮ ಘಮ ಹೆಡಿಂಗ್ ಸೂಪರ್ .
ಮೆಚ್ಚಿದ , ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.
ಸೊಗಸಾದ ಮಲ್ಲಿಗೆಯಂತಹ ಲೇಖನ…:)