ಹಸಿರೇ ಉಸಿರಾದ ನನ್ನೂರು ಬೆಳ್ಳಾಲ

Spread the love
Share Button
B Gopinatha Rao

ಬೆಳ್ಳಾಲ ಗೋಪಿನಾಥ ರಾವ್

ಡೆದಷ್ಟೂ ದಾರಿಯೇ, ಯಾವ ಕಡೆಗೆ ಹೋದರೂ ಎರಡು ನದಿಯನ್ನು ದಾಟಲೇ ಬೇಕು, ಆಗೆಲ್ಲಾ ಒಂದು ದ್ವಿ ಚಕ್ರ ವಾಹನ ನೋಡಬೇಕಾದರೂ ಎರಡು ಮೈಲಿ ನಡೆದು ಒಂದು ಹೊಳೆ ದಾಟಲೇಬೇಕು. ಅದಕ್ಕೇ ಹಬ್ಬ ಹರಿದಿನಗಳು, ಅತಿಥಿ ಅಭ್ಯಾಗತರು ಬಂದಾಗ ನಮ್ಮೆಲ್ಲರ ಸಂಭ್ರಮ ವರ್ಣನಾತೀತ.  ಹಸಿರು ಹುಲ್ಲು ಗಿಡ ಮರಗಳ ಸಂಭ್ರಮದ ಸಿರಿ ನನ್ನೂರು ಬೆಳ್ಳಾಲ. ಆಗೆಲ್ಲಾ ಕೇಜಿ ಸ್ಕೂಲುಗಳಿರಲಿಲ್ಲವಲ್ಲ, ಅದಕ್ಕೇ ನನಗೆ ನನ್ನ ಶಾಲೆ ಆರಂಭ ವಾದದ್ದು ನನ್ನ 6  ನೇವರ್ಷದಲ್ಲಿ, ನನ್ನ ಚಿಕ್ಕಪ್ಪನೇ ನನ್ನ ಗುರು, ಮನೆಯಿಂದ ನಾಲ್ಕು ಮೈಲಿಗಳ ದೂರದಲ್ಲಿತ್ತು ನನ್ನ ಮೊದಲ ಶಾಲೆ ಕುಳ್ಳಂಬಳ್ಳಿಯಲ್ಲಿ. ನಮ್ಮಲ್ಲಿ ತಂದೆ ಚಿಕ್ಕಪ್ಪ ಇಬ್ಬರೂ ಅಧ್ಯಾಪಕರೇ. ಅದಕ್ಕೆ ಮನೆಯಲ್ಲಿ ಒಂದು ಪಕ್ಕಾ ಶಿಸ್ಥಿನ ವಾತಾವರಣ. ಶಾಲೆಗೆ ಹೋಗಿ ಬಂದ ಕೂಡಲೇ ಅದೇ ಬಟ್ಟೇ ಹಾಕಿಕೊಂಡು ಮನೆ ಒಳಕ್ಕೆ ಹೋಗೋ ಹಾಗಿಲ್ಲ.  ಸಂಜೆ ಆರು ಆರೂವರೆಗೆ ಭಜನೆ ಮಾಡಲೇ ಬೇಕು. ಭಜನೆಯ ಅವಧಿ ಎಂದರೆ ಊದುಕಡ್ಡಿ. ಅಂದರೆ ಒಮ್ಮೆ ಹಚ್ಚಿದ ಊದು ಕಡ್ಡಿ ಉರಿದು ಮುಗಿಯುವವರೆಗೆ ಭಜನೆ ಮಾಡಲೇ ಬೇಕು,ಕನಕದಾಸರು, ಪುರಂದರ ದಾಸರು ಅವರದೆಲ್ಲಾ ದೊಡ್ದ ದೊಡ್ಡ ಭಜನೆ ಪುಸ್ತಕಗಳಿರುತ್ತಿದ್ದವು ಮನೆಯಲ್ಲಿ. ರಾಗ ರೋಗ ಏನೂ ಇಲ್ಲ, ಗಟ್ಟಿಯಾಗಿ ಹಾಡಿದೆವೆಂದರೆ ಅದೇ ಭಜನೆ. ಕಾಪಿ ತಿಂಡಿ ಅಂದ್ಕೊಂಡು ನಗಾಡುತ್ತಿದ್ದೆವು ರಾಗದ ಬಗೆಗೆ.ಸಂಜೆ ಆಯಿತೆಂದರೆ ಎಲ್ಲರೂ ವೃತ್ತಾಕಾರವಾಗಿ ದೇವರ ಇದಿರು ಕುಳಿತು ಸರದಿಯಲ್ಲಿ ಹಾಡಬೇಕಿತ್ತು.

ಸಣ್ಣವರಿರುವಾಗ ಕಥೆಗಳು ಅಂದರೆ ಪ್ರಾಣ.ಎಲ್ಲರೂ ಕಥೆ ಹೇಳಲೇ ಬೇಕು ಅಪ್ಪ, ಅಮ್ಮ, ಚಿಕ್ಕಮ್ಮ, ಚಿಕ್ಕಪ್ಪ, ಮತ್ತೆ ಮನೆಗೆ ಅತಿಥಿಗಳಾಗಿ ಬಂದವರು ಎಲ್ಲರಿಗೂ ಈ ಶಿಕ್ಷೆಯೇ. ಅಮ್ಮ ರಂಜನೀಯವಾಗಿ ಕಥೆ ಹೇಳುತ್ತಿದ್ದಳು.  ನನ್ನ ಆಸಕ್ತಿ ನೋಡಿ ಚಿಕ್ಕಪ್ಪ ಶಾಲೆಯಿಂದಲೇ ಕಥೆ ಪುಸ್ತಕ ತಂದು ಓದಲು ಕೊಡುತ್ತಿದ್ದರು. ಅಪ್ಪಯ್ಯ 1956 ರಿಂದ 1966  ರ ವರೆಗೆ ಚಂದಮಾಮ ತರಿಸುತ್ತಿದ್ದರು. ಅದನ್ನು ಹನ್ನೆರಡು ಪುಸ್ತಕಗಳ ಒಂದು ಕಟ್ಟು ಮಾಡಿ ಇಟ್ಟಿದ್ದರು.ಮುಂದೆ ಮಕ್ಕಳಿಗೆ ಓದಲು ಬೇಕಾಗುತ್ತೆ ಅಂತ. ಅದಕ್ಕೇ ನಾನು 5-6  ವರ್ಷದವನಿರುವಾಗಲೇ ಅಜ್ಜಿಗೆ ಚಂದಮಾಮ ಓದಿ ಹೇಳುತ್ತಿದ್ದೆ.ಆಗ ಅದೇ ಬಹು ದೊಡ್ಡ ವಿಷಯ, ಮಾಸ್ಟ್ರಮಗ ಅಜ್ಜಿಗೆ ಚಂದಮಾಮ ಓದಿ ಹೇಳ್ತಿದ್ದ ಅಂತೆ.

ಸುತ್ತಲೂ ಹಸಿರು ಗುಡ್ಡಗಳು,ಸೊಂಪಾದ ಮರಗಿಡಗಳು ಪ್ರಕೃತಿಯೇ ಸೌಂದರ್ಯ ಮೈತಳೆದಂತೆ,ಪ್ರಾಯಶಃ ಎಲ್ಲರಿಗೂ ತಮ್ಮ ತಮ್ಮಹಳ್ಳಿ ಅಥವಾ ಹುಟ್ಟಿದೂರು ನನಗನ್ನಿಸಿದ ಹಾಗೆಯೇ ಅನ್ನಿಸಬಹುದು. ನಮ್ಮೂರು ನಮ್ಮೂರೇ. ನಾ ಹುಟ್ಟಿದೂರು ಮೂರುಕಡೆ ಗುಡ್ಡ ಒಂದು ಕಡೆ ಮಾತ್ರ ನೋಟದುದ್ದಕ್ಕೂ ಬಯಲು. ಎತ್ತ ನೋಡಿದರತ್ತ ಕಾಣುವ ಹಸಿರು ಆ ತೋಟ ಹೊಲಗದ್ದೆ ನೆನಪಾದಾಗಲೆಲ್ಲ ಅರ್ಧ ದಣಿವನ್ನಾರಿಸುವಂತ ಚೇತೋಹಾರಿ ವಿಸ್ಮಯ. ಗದ್ದೆ ಬಯಲಲ್ಲೆಲ್ಲಾ ನಡೆದೋಡುವಾಗ ಮರಗಿಡಗಳಲ್ಲಿ ಹೂ ಬಸಿರ ಹೊತ್ತಾಗ ಮಾವಿನ  ಸುರಗಿ ಗೋವೆ ಹೂಗಳ ಘಮಲು ನನ್ನ  ನಾಸಿಕಾಘ್ರದಲ್ಲಿ ಇನ್ನೂ. ಅದರ ಪರಿಮಳಕ್ಕೇ ನನ್ನ ಮನಸ್ಸು ನನ್ನ ಬಾಲ್ಯಕ್ಕೋಡುತ್ತೆ ಈಗಲೂ.

children nature2

ಮಳೆಗಾಲವಂತೂ ಸ್ವರ್ಗ. ಪಿರಿ ಪಿರಿ ಬೀಳುವ ಮಳೆಗೆ ಹೊರಗೆ ಬಯಲಲ್ಲಿ ದೊಡ್ದವರ ಕಣ್ಣು ತಪ್ಪಿಸಿ ನೆನೆಯುವ ಆಸೆ ಮಕ್ಕಳಿಗಿದ್ದರೆ ಅವರನ್ನು ಹೊರಗೆ ಹೋಗದ ಹಾಗೆ ಬಿಡುಗಣ್ಣಿಂದ ಕಾಯುವ ಕೆಲಸ ದೊಡ್ದವರಿಗೆ, ಎಲ್ಲಿ ನೆನೆದು ಖಾಯಿಲೆ ಕಸಾಲೆ ಅಂಟಿಸಿಕೊಂಡು ಬಂದರೆ? ವೈದ್ಯರನ್ನು ನೋಡಲೂ ಹತ್ತು ಕಿ ಮೀ ನಡೆಯ ಬೇಕಲ್ಲ. ದೊಡ್ದವರ ಕೈಯ್ಯ ಹುಣಿಸೆ ಬರಲು ರೆಡಿಯಾಗಿರುತ್ತೆ. ಆದರೂ ಮಳೆಯಲ್ಲಿ ನೆನೆಯಲು ಒಮ್ಮೆಯಾದರೂ ಚಾನ್ಸ್ ಸಿಗದೇ ಇರೋದೇ ಇಲ್ಲ, ಅಷ್ಟೂ ತಲಬು ಮಕ್ಕಳಿಗೆ. ಗುಡುಗು  ಬಂದು ಮಳೆ ಜೋರಾದರೆ ಸಿಗುವ ರಜಾದ ಮಜವೇ ಬೇರೆ. ಹೊರಗಡೆ ಮಳೆಯ ಆರ್ಭಟವಾದರೆ ನಾವೆಲ್ಲಾ ಒಳಗಡೆ ಅಡುಗೆ ಮನೆಯಲ್ಲಿ ಅಮ್ಮ ಸುಟ್ಟು ಕೊಡುವ ಹಲಸಿನ, ಗೆಣಸಿನ ಹಪ್ಪಳ, ಅಥವಾ ಸುಟ್ಟ ಗೆಣಸು, ಬೇಯಿಸಿದ ಅವಡೆ ಕೋಡು, ಹುರಿದ ನೆಲಗಡಲೆಯ ತಲುಬು ಈಗಲೂ ಬಾಯಲ್ಲಿ ನೀರು ಬರಿಸುತ್ತದೆ. ಕಂಬಳಿ ಹೊದೆದಾದರೂ ಮಳೆಯಲ್ಲಿ ನೆನೆಯಲು ನಾವೆಲ್ಲಾ ತಯಾರೇ ಅದೂ ದೊಡ್ದವರು ಬಿಟ್ಟರೆ.

ಈಗಿನ ಧಾವಂತದ ಸದಾ ಮುಂದೋಡುತ್ತಿರುವ  ಕಾಲಚಕ್ರದಲ್ಲಿ ಇವೆಲ್ಲವೂ ಸದಾ ಹಸಿರು ನೆನಪುಗಳೇ ಮನದ ಆ ಮೂಲೆಯಲ್ಲಿನ ಸದಾ ಜಿನುಗುವ ಅಮೃತಧಾರೆ.
ಸೈನಿಕರು ಶಿಸ್ತಿನ ಕಾವಾಯತು ನಡೆಸುವಂತೆ ( ಆಗೆಲ್ಲಾ ಅವಿಭಕ್ತ ಕುಟುಂಬ) ಹಸಿರು ಗದ್ದೆ ಬಯಲಲ್ಲಿ ಶಾಲೆಗೆ ಹೋಗುತ್ತಿರುವುದನ್ನು ಈಗಲೂ ನನ್ನ ಕಣ್ಣು ಕನಸು ಕಂಡು ನಲಿಯುತ್ತಿರುತ್ತದೆ. ನಮ್ಮರ್ಧದೆತ್ತರದ ಟಿಫಿನ್ ಬಾಕ್ಸ್ ಮಧ್ಯಾನ್ನ ದೂಟ ಬಾಳೆಯೆಲೆಯ ಮೇಲೆ ಆ ತಣಿದ ಕುಚ್ಚಲಕ್ಕಿಯ ಮಜ್ಜಿಗೆಯ ಮಿಶ್ರಿತ ಕಂಪು ಒಟ್ಟಿಗೆ ಕುಳಿತುಣ್ಣುವಾಗಿನ ಮಜ..?? “ ಬರಿನೆನೆದರೇನುಂಟು, ಮತ್ತೆ ದೊರೆಯುವರೇ ಆ ತೌರಿನವರೂ”. ಶಾಲೆಗೆ ಹೋಗಲು ಬೇಸರವಾದರೆ, ನಿಧಾನವಾಗಿ ಹಿಂದೆ ಹಿಂದೆ ನಿಂತು, ಮಧ್ಯದಲ್ಲಿಯೇ ವಾಪಾಸ್ಸು ಮನೆಗೆ ಬಂದು ಅಮ್ಮನಿಗೆ ತೋಡಿನಲ್ಲಿ( ಹಳ್ಳದಲ್ಲಿ) ನೀರು ಬಂತು ಹೋಗಲಾಗದೆ ವಾಪಾಸ್ಸು ಬಂದೆವು ಅಂತ ಸುಳ್ಳು ಹೇಳಿ, ಅದು ಸಂಜೆ ನಮ್ಮವರೆಲ್ಲಾ ವಾಪಾಸ್ಸು ಶಾಲೆಯಿಂದ ಬರುವವರೆಗೆ ಮಾತ್ರ, ಅನಂತರ ಅಮ್ಮನ ಮೂಡಿನಂತೆ ಹುಣಿಸೆ ಬರಲೋ, ಮಾಫಿಯೋ. ಅದೆಲ್ಲಾ ಈಗಿನ ಮಕ್ಕಳಿಗೆಲ್ಲಿ ನಸೀಬು. ಒಮ್ಮೆ ದಾರಿಯಲ್ಲೇ ಚಡ್ಡಿಯೆಲ್ಲಾ ಮಾಡಿಕೊಂಡು ಮುಂದಿನ ಹಳ್ಳ ಬರುವರೆಗೆ ನಡೆದು ಅಕ್ಕನಿಂದ ಬೈದು ಒಗೆಸಿಕೊಳ್ಳುವ ಮಜ. ಮಳೆಗಾಲದಲ್ಲಿ ಹೊಸ ಧಿರುಸು ತೊಟ್ಟು ದೊಡ್ಡವರು ಬೇಡವೆಂದರೂ ಕೇಳದೇ ಬೆತ್ತಲ ದಾರಿಯಲ್ಲಿ ಓಡಿ ಜಾರಿ ಬಿದ್ದು ಕೆಸರು ಮಾಡಿಸಿಕೊಂಡು ಹಿರಿಯರಿಗೆ ಧರ್ಮ ಸಂಕಟ ತಂದ ಪರಿ ಈಗಲೂ ನಗೆಯುಕ್ಕಿಸುತ್ತೆ.

ಮಳೆಗಾಲದಲ್ಲಿ ನಮ್ಮ ಊರನ್ನು ಸುತ್ತುವರಿದ ವಾರಾಹಿ ಮತ್ತು ಚಕ್ರ ನದಿಗಳದ್ದೇ ಆರ್ಭಟ. ಕೆಲವೊಮ್ಮೆ ಮನೆಗೆ ಬಂದ ನೆಂಟರಿಗೆ ಹೋಗಲಾಗದ ಹಾಗೆ ಮಾಡಿ ನಮಗೆ ಸಂತಸ ತಂದದ್ದೂ ಇದೆ. ತುಂಬಿ ಹರಿಯುವ ಕೆಂಪು ನೀರು ನೋಡುವಾಗಲೆಲ್ಲಾ ಅದರಲ್ಲಿ ತೇಲಿ ಬರುವ ಕಸ, ಮರದ ಕೊಂಬೆ, ಎಲ್ಲವೂ ಈಗಲೂ ನೆನಪಾಗುತ್ತೆ. ನಾವೂ ಹಲಕೆಲವೊಮ್ಮೆ ಸಿಕ್ಕಿ ಹಾಕಿಕೊಂಡದ್ದು, ಮತ್ತೆ ಕೆಲವೊಮ್ಮೆ ದೋಣಿ ನಡೆಸುವನಿಲ್ಲದೇ ನಾವೇ ನಡೆಸುವ ಹುಚ್ಚು ಧೈರ್ಯ  ಮಾಡಿ ಅಭ್ಯಾಸವಿಲ್ಲದೇ ಇದ್ದುದರಿಂದ  ನದಿಯ ನೀರಿನ ಸೆಳೆತದೊಂದಿಗೇ ಸಾಗುತ್ತಾ ಪ್ರಾಣಾಪಾಯದಲ್ಲಿ ಸಿಲುಕಿದ್ದೂ ಇದೆ. ಈ ಘಟನೆಗಳೆಲ್ಲಾ  ನನ್ನ ತ್ಯಾಂಪ ಸೀನಾಯಣದಲ್ಲಿ ಬರುತ್ತಿರುತ್ತವೆ.

children summerರಾತ್ರೆ ಕೆಲವೊಮ್ಮೆ ಅನಿವಾರ್ಯವಾದಾಗ ತಂಬಿಗೆ ತಕೊಂಡು ಹೊರಗಡೆ ಹೋದಾಗ ರಾತ್ರೆಯ ಕತ್ತಲಲ್ಲಿ ಮರಗಳೇ ಚಿತ್ರವಿಚಿತ್ರ ಧರಿಸಿ ಬಂದ ರಾಕ್ಷಸರಾಗಿ ಬಂದ ಕಾರ್ಯ ಮರೆತೂ ವಾಪಾಸ್ಸು ಓಡಿ ಹಿರಿಯರಿಂದ ಬೈಸಿಕೊಂಡದ್ದೂ ಇದೆ. ಡಾಕ್ಟರ್ ಹತ್ರ ಕರೆದುಕೊಂಡು ಹೋಗಿ ಅಪ್ಪಯ್ಯ ಅಂತ ಅಳುತ್ತಿದ್ದ ನನ್ನ ತಂಗಿಯೊಬ್ಬಳು ಹೀಗಿನ ಜಡಿ ಮಳೆಯ ರಾತ್ರಿಯಲ್ಲೇ ನಮ್ಮನ್ನೆಲ್ಲಾ ತೊರೆದು ಹೋಗಿಯೇ ಬಿಟ್ಟಿದ್ದಳು,ಹೃದಯ ದೃವಿಸುವ ಆ ಘಟನೆ ನೆನಪಾದಾಗಲೆಲ್ಲಾ ಈಗಲೂ ಕಣ್ನಂಚು ಮಡುಗಟ್ಟುತ್ತದೆ.ಇದೇ ಕಾರಣಕ್ಕಾಗಿ ತಂದೆ ಬೆಳ್ಳಾಲ ಬಿಟ್ಟು ಸಿದ್ದಾಪುರಕ್ಕೆ ಬಂದಿದ್ದರು..ಹೀಗೇ ಒಮ್ಮೊಮ್ಮೆ ನನಗೆ ನಾನೇ ಅಂತರ್ಮುಖಿಯಾದಾಗಲೆಲ್ಲಾ ಮನಸ್ಸು ಪುನರ್‍ ಚೇತೋಹಾರಿಯಾಗಲು ನಾನು ನನ್ನೂರಿನ ಬಾಲ್ಯಕ್ಕೇ ಶರಣು ಹೋಗುತ್ತಿರುತ್ತೇನೆ.

ಮೊನ್ನೆ ಮೊನ್ನೆ ಊರಿಗೆ ಹೋದಾಗ ಮತ್ತೊಮ್ಮೆ ಅದೇ ನೆನಪು ಹಸಿಯಾಯ್ತು. ನನ್ನ ಭಾಷಣದಲ್ಲಿ ಅದನ್ನೆಲ್ಲಾ ನೆರೆದ ಊರವರೊಡನೆ ಹಂಚಿಕೊಂಡಾಗ ಅವರೂ ಚಪ್ಪಾಳೆ ತಟ್ಟಿ ನನ್ನ ಆ ಮಧುರ ಅನುಭವಗಳನ್ನು ಸ್ವಾಗತಿಸಿದರು. ನನ್ನ ಊರಿನ ಜತೆ ನನ್ನ ಹೆಸರು ತಳುಕು ಹಾಕಲು ಕಾರಣ ನನ್ನ ಅಪ್ಪಯ್ಯನೇ, ಈಗಲೂ ಊರ ಕಡೆ ಹೋದಾಗ ಅಲ್ಲಿನ ಪ್ರತೀ ಮರ ಗಿಡಗಳೂ ನನ್ನೊಡನೆ ಸಂಭಾಷಿಸುವಂತಾಗುತ್ತದೆ, ಅಪ್ಪಯ್ಯ ನನ್ನ ಜತೆ ಈಗ ಇಲ್ಲ, ಆದರೆ ಅಪ್ಪಯ್ಯನ ಜತೆ ಕಳೆದು ಸವಿದಳಿದ ಆ ಸುವರ್ಣ ಕಾಲವನ್ನು ಇನ್ನೂ ನನ್ನ ಜತೆಗೆ ಅವುಗಳೆಲ್ಲಾ ಮೌನ ರಾಗದಲ್ಲಿ ಹಂಚಿಕೊಂಡಭಾಸ ಈಗಲೂ. ಬಾಲ್ಯದ ಆ ಹಸಿರು ಯುಗವನ್ನು ಮತ್ತೆ ಕಣ್ಣಿಗೆ ಸವಿಸುವ ಆತ್ಮೀಯ ಗೆಳೆಯರೆಂದೆನಿಸುತ್ತದೆ ಎಂದೆಂದಿಗೂ. ಆದರೆ ಆ ನನ್ನ ಊರಿಗಿನ್ನೂ ವಿದ್ಯುತ್ ಸಂಪರ್ಕವಿಲ್ಲ, ಸರಿಯಾದ ಟಾರು ರಸ್ತೆಯಿಲ್ಲ ಅದಕ್ಕೇ ಬಸ್ ಸಂಪರ್ಕವೂ, ಅದಕ್ಕಾಗಿಯೇ ನನ್ನೂರು ಯಾವುದೇ ಋಣಾತ್ಮಕತೆ ಕಲಿತಿಲ್ಲ, ನಾನು ಚಿಕ್ಕಂದಿನಲ್ಲಿರುವಾಗಿನ ಹಾಗೇಯೇ ಇದೆ. ಅಷ್ಟೇ ಅಸ್ಖಲಿತವಾಗಿ, ಸರ್ವಾಂಗ ಸುಂದರವಾಗಿ.
ಹೀಗೆ ಸಿಹಿ (ಕಹಿ ತುಂಬಾನೇ ಕಡಿಮೆ) ಸಿಹಿ ನೆನಪುಗಳನ್ನೊಳಗೊಂಡ ಬಾಲ್ಯವು ಈ ಹಳ್ಳಿಯ ನೆನಪಿನೊಂದಿಗೇ ಇನ್ನೂ ಮಾರ್ದವವಾಗಿ ಫ್ರೆಷ್ ಆಗುತ್ತಲಿರುತ್ತದೆ. ಅದಕ್ಕೇ ನನ್ನ ಬಾಲ್ಯದ ಗೆಳೆಯ ಸೀನ ಮತ್ತು ತ್ಯಾಂಪ ಬರಹಗಳಲ್ಲಿ ಹಾಸು ಹೊಕ್ಕಾಗಿ ನನ್ನಜೀವನದ ಮತ್ತೊಂದೇ ಭಾಗವಾಗಿ ಸದಾ ನನ್ನನ್ನು ಉತ್ತೇಜಿಸುವ ಹಳ್ಳಿಯ ಸಂಕೇತವಾಗಿ ಬಿಟ್ಟಿದ್ದಾರೆ. ಅದಕ್ಕೇ ನನ್ನ ಮನದಲ್ಲೂ ಬರಹದಲ್ಲೂ ನನಗೆ ನನ್ನೂರು ತುಂಬಾ ತುಂಬಾ ತುಂಬಾನೇ ಇಷ್ಟ.

 

– ಬೆಳ್ಳಾಲ ಗೋಪಿನಾಥ ರಾವ್

 

4 Responses

 1. Shruthi Sharma says:

  ಬರಹವು ನಿಮ್ಮ ಬಾಲ್ಯದತ್ತ ಒಮ್ಮೆ ನನ್ನನ್ನೂ ಒಯ್ದಿತು! ಉತ್ತಮ ಲೇಖನ ಮನಕ್ಕೆ ಮುದ ನೀಡಿತು.. ವಂದನೆಗಳು. 🙂

 2. Anantha Indaje says:

  ಲೇಖನದಿಂದ ಹುಚ್ಚು ಹಿಡಿಸುವುದೆಂದರೆ ಹೀಗೆ. ಹಳೆಕಾಲದ ಶಬ್ದಗಳು, ಹೊಸತು ಎನಿಸುವ ಲೇಖನ. ನಮ್ಮೊಂದಿಗೆ ಹರಿವ ಆಪ್ತ ಅನುಭವ ….!!!! ಧನ್ಯವಾದಗಳು

 3. ಸುರೇಖಾ ಭೀಮಗುಳಿ says:

  ಅದೇಕೆ ಬಾಲ್ಯದ ನೆನಪುಗಳು ಇಷ್ಟೊಂದು ಕಾಡುತ್ತಿವೆ ? “ಕಾಡುವುದು” ಎಂಬ ಶಬ್ದ ಪ್ರಯೋಗವೇ ತಪ್ಪು…. ಈ ನೆನಪು ನಮ್ಮಲ್ಲಿ ನವ ಚೈತನ್ಯವನ್ನು ಉಕ್ಕಿಸುತ್ತದೆ ಎಂಬಲ್ಲಿಗೆ ಬಾಲ್ಯದ ನೆನಪುಗಳು ನಮಗೂ ಇಷ್ಟ ಎಂದಲ್ಲವೇ ಅರ್ಥ ? ಊರು ಬಿಟ್ಟು – ವಿದ್ಯಾಭ್ಯಾಸ – ಉದ್ಯೋಗ – ಸಂಸಾರ ಎಲ್ಲ ಹಂತಗಳನ್ನು ಕ್ರಮಪ್ರಕಾರ ದಾಟುವ ಹೊತ್ತಿನಲ್ಲಿ ಈ ಬಾಲ್ಯ ನೆನಪಿಗೇ ಬರಲಿಲ್ಲ. ಬಂದರೂ ಅಕ್ಷರದಲ್ಲಿ ಮೂಡಿಸುವ ಪ್ರಯತ್ನವನ್ನೇ ಮಾಡಿರಲಿಲ್ಲ. ನಮ್ಮ ಮಕ್ಕಳ ಬಾಲ್ಯ(ನಮ್ಮ ಗಡಿಬಿಡಿ ಜೀವನಕ್ಕೆ ಸ್ವಲ್ಪ ವಿರಾಮ ಸಿಕ್ಕಿದ್ದಕ್ಕಿರಬಹುದಾ ?) ಕಾಲಕ್ಕೆ ನಮ್ಮ ಬಾಲ್ಯ ಕಣ್ಣ ಮುಂದೆ ಬಂದು ನಿಲ್ಲುತ್ತಿದೆ ! ಅದನ್ನು ದಾಖಲಿಸುವ ಪ್ರಯತ್ನವೂ ಅದ್ಭುತವಾಗಿ ಮುಂದುವರೆಯುತ್ತಿದೆ ! ಬೆಳ್ಳಾಲದ ಬಾಲ್ಯ ಕಣ್ಣಿಗೆ ಕಟ್ಟಿತು. ಅಭಿನಂದನೆ……………..

 4. ಅದೇಕೊ ನನ್ನ ಬಾಲ್ಯ ಊರು ಪ್ರಾಯಶಃ ಬಿಟ್ಟು ದೂರ ಇದ್ದಿದ್ರಿಂದಲೇ ಹೀಗೇ ಅಪ್ಯಾಯ ಆಯ್ತೇನೋಗೊತ್ತಿಲ್ಲ, ಆದರೂ ನಿಮ್ಮೆಲ್ಲರ ಪ್ರೋತ್ಸಾಹೀ ಮೆಚ್ಚುಗೆ ನನ್ನನ್ನು ಇನ್ನೂ ಇನ್ನೂ ಪ್ರೇರೇಪಿಸುವುದಂತೂನಿಜ

  Anantha Indaje , ಸುರೇಖಾ ಭೀಮಗುಳಿ ಮತ್ತು Shruthi Sharma ಆತ್ಮೀಯ ಸ್ನೇಹೀ ಪ್ರೋತ್ಸಾಹದ ನುಡಿಗಳಿಗೆ, ಮೆಚ್ಚುಗೆಗಳಿಗೆಶರಣು.

  ಚುರುಕಾದ ಅಪ್ಯಾಯ ಅನ್ನಿಸುವಂತಹ ಚಿತ್ರಗಳನ್ನು ಸೇರಿಸಿ ಮುದ ನೀಡಿದ ಹೇಮ ಲತಾರಿಗೂ ಸುರಗಿ ಬಳಗಕ್ಕೂ ನಾನು ಆಬಾರಿ

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: