ಲಹರಿ

ನಾನೂ ಗೋಲ್ಡ್ ಮೆಡಲಿಸ್ಟ್ ಕಣ್ರೀ..

Share Button

 

Surekha Bhimaguli2
ಸುರೇಖಾ ಭೀಮಗುಳಿ

ಇದ್ದಕ್ಕಿದ್ದಂತೆ ತೂಕ ಇಳಿಸಬೇಕೆನ್ನಿಸಿತು. ಮನಸ್ಸಿನಲ್ಲಿ ಸ್ವಿಮ್ಮಿಂಗ್ ಸೇರುವ ಯೋಚನೆ ! ಒಂದು ವಿದ್ಯೆ ಕಲಿತ ಹಾಗೂ ಆಗುತ್ತದೆ. ನೀರಿನಲ್ಲಿ ಆಡುವುದು ಯಾರಿಗೆ ಇಷ್ಟ ಆಗುವುದಿಲ್ಲ ? ಹೇಗಾದ್ರು ಮನೆಯಿಂದ ಒಂದು ಕಿಲೋಮೀಟರ್ ದೂರದಲ್ಲಿ, ಒಂದು ಶಾಲೆಯ ಸ್ವಿಮ್ಮಿಂಗ್ ಪೂಲ್ ಇದೆ.

ನೋಡಿಯೇ ಬಿಡುವದು ಎಂದು ನಿರ್ಧರಿಸಿ ಸ್ವಿಮ್ಮಿಂಗ್ ಕಲಿಯೋದಕ್ಕೆ ಸೇರಿ ಆಯಿತು. ಆಲ್ಲಿ ಲೇಡೀಸ್ ಸ್ವಿಮ್ಮಿಂಗ್ ಇನ್ಷ್ಟ್ರಕ್ಟರ್ ಇರಲಿಲ್ಲ. ಅಲ್ಲಿದ್ದ ಸ್ವಿಮ್ಮಿಂಗ್ ಸರ್ ಕೊಡುವ ಓರಲ್ ಇನ್ಷ್ಟ್ರಕ್ಷನ್ ಅರ್ಥ ಮಾಡಿಕೊಂಡು, ಸ್ವಿಮ್ಮಿಂಗ್ ಕಲಿವ ಹೊತ್ತಿಗೆ, ಎರಡು ತಿಂಗಳು ಕಳೆದಿತ್ತು. ಆದ್ರೂ ಬಿಡಲಿಲ್ಲ – ಹಠಕಟ್ಟಿ ಕಲಿತೇ ಬಿಟ್ಟೆ ! ಆರು ತಿಂಗಳಲ್ಲಿ “ಚೆನ್ನಾಗಿ” ಹೇಳುವಷ್ಟು ಈಜುವುದಕ್ಕೆ ಬಂತು !! ತೂಕವು ಸಹ ನಿಧಾನಕ್ಕೆ ಕಮ್ಮಿ ಆಗೊದಕ್ಕೆ ಶುರುವಾಯ್ತು.

ಪೂಲ್ ಓನರ್ “ನೀವೇ ಏಕೆ ಲೇಡೀಸ್ ಗೆ ಸ್ವಿಮ್ಮಿಂಗ್ ಹೇಳಿಕೊಡಬಾರದು ?” ಕೇಳಿದರು. ಆಗದ ಮಾತಲ್ಲ. ನನಗೆ ಸಹ ಕಂಪನಿ ಸಿಕ್ಕುತ್ತದಲ್ಲ ! “ಹೂಂ” ಅಂದೆ. ಆ ನನ್ನ ಹೊಸ ಸ್ಟೂಡೆಂಟ್ ಗಳೋ ಸಿನೆಮಾ ಸ್ಟೈಲ್ ನಲ್ಲಿ ಸ್ವಿಮ್ಮಿಂಗ್ ಡ್ರೆಸ್ ಧರಿಸಿ ಕಲಿಯಲು ಬಂದರು…. ಅವರುಗಳಿಗೆ ಶಿಸ್ತಿನ ಸ್ವಿಮ್ಮಿಂಗ್ ಸೂಟ್ (ಒಳಗಡೆ ಟೈಟ್ ಪ್ಯಾಂಟ್ + ಸ್ವಿಮ್ಮಿಂಗ್ ಸೂಟ್ + ಮೇಲಿಂದ ಟೀ ಶರ್ಟ್) ಧರಿಸುವಂತೆ ಮತ್ತು ಅದನ್ನು ಪೂಲ್ ಓನರ್ ಒಪ್ಪುವಂತೆ ಮಾಡಿದೆ. ಸ್ವಿಮ್ಮಿಂಗ್ ಪೂಲ್ ಓನರ್ (ನನ್ನದೇ ವಯಸ್ಸಿನ ಮಹಿಳೆ- ತೂಕದಲ್ಲಿ ನನ್ನ ಎರಡು ಪಟ್ಟು) ಅವರೂ ನನ್ನ ಸ್ವಿಮ್ಮಿಂಗ್ ಕ್ಲಾಸ್ ನ ವಿದ್ಯಾರ್ಥಿ !   ಅಲ್ಲಿಂದ ಮತ್ತೆ ಒಂದುವರೆ ವರ್ಷದಲ್ಲಿ ಸುಮಾರು 60 -70 ಹೆಣ್ಮಕ್ಕಳಿಗೆ ಈಜು ಕಲಿಸಿದೆ.  ನಾನು ಎರಡು ತಿಂಗಳಲ್ಲಿ ಕಲಿತದ್ದನ್ನು , 21  ಕ್ಲಾಸ್ ನಲ್ಲಿ ನನ್ನ ವಿದ್ಯಾರ್ಥಿಗಳಿಗೆ ಕಲಿಸಿಬಿಡುತ್ತಿದ್ದೆ !  ಕೆಲವು ಚಿಕ್ಕ ಪ್ರಾಯದ ಹೆಣ್ಮಕ್ಕಳು  ಎರಡು ವಾರದಲ್ಲಿ ಕಲಿತು ಬಿಡ್ತಾ ಇದ್ರು !!

ನನ್ನ ತೂಕ 9 ಕೆ.ಜಿ. ಇಳಿಯಿತು. ಒಂದು ಬಾರಿ ಇಳಿದ ಮೇಲೆ ನಿಧಾನಕ್ಕೆ ಏರುವುದಕ್ಕೆ ಶುರುವಾಯ್ತು. “ಈ ಈಜು ಹೇಳಿಕೊಡುವ ಸಂಭ್ರಮದಲ್ಲಿ ನನಗೆ ಪ್ರಾಕ್ಟೀಸ್ ಸಾಕಾಗುತ್ತಿಲ್ಲ” ಅನ್ನಿಸುವುದಕ್ಕೆ ಶುರುವಾಯ್ತು. ಜೊತೆಗೆ “ಅಷ್ಟು ಬೇಗ ಕಲಿಸಬಾರದು” ಹೇಳುವ ನಿರ್ದೇಶನ ಪೂಲ್ ಓನರ್ ಕಡೆಯಿಂದ ಸಿಕ್ಕಿತ್ತು. (ಅವರ ಬ್ಯುಸ್ನೆಸ್ ಚಿಂತೆ ಅವರಿಗೆ).”ಮಗು ಚುರುಕಿದೆ ಅಂತ UKG ಪಾಠವನ್ನು LKG ಮಕ್ಕಳಿಗೆ ಹೇಳಿಕೊಡ್ತಾರೇನ್ರೀ ? ಬ್ಯಾಕ್ ಸ್ಟ್ರೋಕ್ ಕಲಿಬೇಕಿದ್ರೆ ಅವರು ಮುಂದಿನ ಹಂತದ ಸ್ವಿಮ್ಮಿಂಗ್ ಕ್ಲಾಸ್ ಗೆ ಸೇರಬೇಕು” ಎಂಬುದು ಪೂಲ್ ಓನರ್ ಆಂಬೋಣ. ಅವರ ದೃಷ್ಟಿಯಲ್ಲಿ ಅವರು ಹೇಳುವುದು ಸರಿಯೇ….. ಆದರೆ ತಿಂಗಳಾಗುವುದರಲ್ಲಿ ನನ್ನ ವಿದ್ಯಾರ್ಥಿಗಳೆಲ್ಲ ಸ್ನೇಹಿತೆಯರಾಗಿಬಿಡುತ್ತಿದ್ದರು !  “ಏನಾದ್ರು ಸ್ವಂತ ಉದ್ಯೋಗ ಮಾಡಬೇಕು – ಹೀಗೆ ಇನ್ನೊಬ್ಬರ ಕೈಕೆಳಗಿನ ಕೆಲಸ ಸಾಕು” ಎಂದೆನಿಸಲು ಶುರುವಾಯಿತು. ಸ್ವಿಮ್ಮಿಂಗ್ ಹೇಳಿಕೊಡುವುದನ್ನು ಬಿಟ್ಟು, “ಸುರುಚಿ ಮಿನಿ ಕ್ಯಾಟೆರಿಂಗ್” ಶುರು ಮಾಡಿದೆ. ಆದರೂ ಆ ಪೂಲ್ ಬಿಟ್ಟು, ಮಕ್ಕಳ ಶಾಲೆಯಲ್ಲಿದ್ದ ಸ್ವಿಮ್ಮಿಂಗ್ ಪೂಲ್ ಗೆ ಹೋಗಿ ಪ್ರಾಕ್ಟೀಸ್ ಮಾಡಿಕೊಂಡಿದ್ದೆ. ಆದರೂ ತೂಕ ಕಮ್ಮಿಯಾಗಲಿಲ್ಲ. ಕ್ಯಾಟೆರಿಂಗ್  ಪರಿಣಾಮವೂ ಇದ್ದೀತು !

ಒಂದು ದಿನ ಆ ಹೊಸ ಸ್ವಿಮ್ಮಿಂಗ್ ಪೂಲ್ ಸ್ಟಾಫ್ “ಈ ಶನಿವಾರ-ಭಾನುವಾರ ಶ್ರೀನಗರ ಕೆಂಪೇಗೌಡ ಸ್ವಿಮ್ಮಿಂಗ್ ಪೂಲ್ ನಲ್ಲಿ ಕಾಂಪಿಟೇಶನ್ ಇದೆ. ನೀವೇಕೆ ಸ್ಪರ್ಧಿಸಬಾರದು ?” ಅಂತ ಕೇಳಿದರು. ’ಸರಿ ಅದೂ ಒಂದು ಆಗಿ ಹೋಗಲಿ’ ಎನ್ನುತ್ತಾ ಸ್ಪರ್ಧಿಸಲು ನಿರ್ಧರಿಸಿದೆ.

ಶನಿವಾರ ಬೆಳಿಗ್ಗೆ ಬೇಗ ಎದ್ದು,  ಮನೆಕೆಲಸ ಸಾಧ್ಯವಾದಷ್ಟು ಮಾಡಿಟ್ಟು, ಏನೋ ಸ್ವಲ್ಪ ತಿಂದು ಶ್ರೀನಗರದತ್ತ ಸ್ಕೂಟಿ ಓಡಿಸಿದೆ. 8.30 ಕ್ಕೆ ಪ್ರಾರಂಭವಾಗಲಿದ್ದ ಸ್ಪರ್ಧೆಗಳಿಗೆ 8 ಗಂಟೆಗೆ ನೂರೈವತ್ತು ರೂಪಾಯಿ ಕೊಟ್ಟು ಹೆಸರು ನೊಂದಾಯಿಸಿದೆ. ತಿಂಡಿ ವ್ಯವಸ್ಥೆ ಇತ್ತು. ಇಡ್ಲಿ-ವಡೆ-ಚಟ್ನಿ-ಸಾಂಬಾರ್, ಕಾಫಿ/ಟೀ ….. ತಿಂದು ಬಿಟ್ಟರೆ ಸ್ವಿಮ್ ಮಾಡುವುದಕ್ಕಾಗಿವುದಿಲ್ಲ ಎಂಬ ದೃಷ್ಠಿಯಿಂದ ತಿನ್ನದೇ ಉಳಿದೆ.

ಸ್ವಿಮ್ಮಿಂಗ್ ಸೂಟ್ ಹಾಕಿಕೊಂಡು, ನೀರಿನಲ್ಲಿಳಿದು, ಒಂದಿಷ್ಟು ಈಜಿ, ನನ್ನ ಸರದಿಗಾಗಿ ಕಾಯುತ್ತಾ ಕುಳಿತೆ. ಸ್ಪರ್ಧೆಗಾಗಿ ಬಂದ ಮಹಿಳೆಯರ ಸಂಖ್ಯೆ ಬಹಳ ಕಡಿಮೆಯಿತ್ತು. ಅಷ್ಟರಲ್ಲಿ  ನನ್ನ ಹಾಗೆ ಇದ್ದ ಮಹಿಳೆಯೊಬ್ಬರು ಬಂದು “ನಿಮ್ಮದು ಯಾವ ಏಜ್ ಗ್ರೂಪ್ ?” ಕೇಳಿದಳು. ಹೇಳಿದೆ. “ಅಯ್ಯೋ.. ನನ್ನದೂ ಅದೆ. ಒಂದು ಕೆಲಸ ಮಾಡೋಣ. ನೀವು – ನಾನು ಬೇರೆ ಬೇರೆ ಈವೆಂಟ್ ಗಳಲ್ಲಿ ಸ್ಪರ್ಧಿಸೋಣ. ಆಗ ಇಬ್ಬರಿಗೂ ಗೋಲ್ಡ್ ಮೆಡಲ್ ಸಿಗುತ್ತೆ.” ಅಂದರು. ನನಗೋ ದಿಗ್ಭ್ರಾಂತಿ ! “ಹೀಗೂ ಉಂಟೇ ?” ಎನ್ನಿಸಿತು. “ನಾನು ಸ್ಪರ್ಧೆಗೆ ಬಂದಿದ್ದಾ ? ಅಲ್ಲವಾ ?… ” ನನ್ನನ್ನು ನಾನೇ ಕೇಳಿಕೊಂಡೆ ಮನಸ್ಸಿನಲ್ಲಿ. ಅವರು ಹೆಚ್ಚು ಶ್ರಮ ಬೇಕಿದ್ದ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೋಲ್ಡ್ ಮೆಡಲ್ ಗೆದ್ದು (?) ಕೊಂಡರು ! ಸಮಾನ ಏಜ್ ಗ್ರೂಪ್ ನಲ್ಲಿ ಯಾರೂ ಇಲ್ಲದ ಕಾರಣ ನನಗೂ ಮೂರು ಗೋಲ್ಡ್ ಮೆಡಲ್ ಗಳು ಧಕ್ಕಿದವು ! ನನ್ನ ಹಣೆಬರಹ ಜಾಮೂನ್ ಮಿಕ್ಸ್ ಅಡ್ವೆರ್ಟೈಸ್ಮೆಂಟ್ ಗಿಂತ ಅತ್ತತ್ತ ಆಗಿ ಹೋಯಿತು. ನನ್ನ ಈ ಗೋಲ್ಡ್ ಮೆಡಲ್ ಕತೆ ಹೇಳಿದರೆ ನಾನೇ ನನ್ನ ಮಾನವನ್ನು ಹರಾಜಿಗಿಟ್ಟಂತೆ. ನೀವು ನಮ್ಮವರಲ್ವಾ ? ನಿಮ್ಮೆದುರು ಅವಮಾನ ಎಂಥದ್ದು ? ಆದ್ದರಿಂದ ನಿಮ್ಮೆದುರು ನಾನೀಗ ಹೇಳಿಕೊಳ್ಳಬಹುದು : “ನಾನೂ ಗೋಲ್ಡ್ ಮಡಲಿಸ್ಟ್ ಕಣ್ರೀ….” ಅಂತ. ಆತ್ಮೀಯರು “ಕೋಲ್ಡ್ ಮೆಡಲಿಸ್ಟ್” ಅಂತ ಗೇಲಿ ಮಾಡ್ತಾರೆ ! ನಾನಾದರೂ ಏನು ಮಾಡೋದಕ್ಕೆ ಆಗುತ್ತೆ ? ಅಲ್ವಾ ?

Gold medalist

ರಣರಣ ಬಿಸಿಲು. ಹೊಟ್ಟೆ ತಾಳಹಾಕುತ್ತಿತ್ತು … ಪುರುಷ ಸ್ಪರ್ಧಿಗಳೇನೋ ನೂರರ ಸಂಖ್ಯೆಯಲ್ಲಿದ್ದರು. ಎಲ್ಲ ಸ್ಪರ್ಧೆಗಳು ಮುಗಿದಾಗ ಸೂರ್ಯ ನೆತ್ತಿಯ ಮೇಲಿದ್ದ. ಮತ್ತೆ ಶುರುವಾಯ್ತು ನೋಡಿ- ಪ್ರಶಸ್ತಿ ಪ್ರಧಾನ ಸಮಾರಂಭ ! ಬೇಗನೆ ಮುಗಿಯಬಾರದೇ ? ಊಟಕ್ಕಾಗಿ ಕರುಳು ಕಾತರಿಸುತ್ತಿತ್ತು. ಈಜಲಾಗುವುದಿಲ್ಲ ಎಂಬ ನೆಪವೊಡ್ಡಿ ಬೆಳಿಗ್ಗೆ ಬಾಯಿಯವರೆಗೆ ಬಂದಿದ್ದ ಇಡ್ಲಿ-ವಡೆಯನ್ನು ಧಿಕ್ಕರಿಸಿದ್ದೆ. ಈಗ ಬೇಕೆಂದಾಗ ಕೊಡಲು ಅದೇನು ನನ್ನ ತವರು ಮನೆಯೇ ? ಕೊನೆಗೂ ಒಂದಲ್ಲ -ಮೂರು ಪ್ರಶಸ್ತಿ ಪತ್ರದ ಜೊತೆ ಮನೆ ಸೇರಿದಾಗ – ಮುಖವೆಲ್ಲ (ಬಿಸಿಲಿನಲ್ಲಿ ನಿಂತ ಪರಿಣಾಮ) ಮುಶಿಯ(ಕೆಂಪು ಮೂತಿಯ ಮಂಗ)ನ ತರಹ ಕೆಂಪು ಕೆಂಪು ! ಮಂದಿನ ದಿನಗಳಲ್ಲಿ ಮುಖದ ಒಂದು ಪದರ ಚರ್ಮ ಸುಲಿದು ಹೋಯಿತೆನ್ನಿ. ಅದು ನನ್ನ ಸ್ವಿಮ್ಮಿಂಗ್ ಸ್ಪರ್ಧೆಯ ಬಯಸದೆ ಬಂದ ಕೊಡುಗೆ ! ಇತ್ತ ಕೊಟ್ಟ ಹಣವೂ, ಶ್ರಮವೂ, ಮುಖದ ಚರ್ಮವೂ “ಗೋವಿಂದ ಅನ್ನಿ ಗೋವಿಂದ !” ಎಂದವು. ನನಗೆ ಧಕ್ಕಿದ ಪ್ರಶಸ್ತಿ ಪತ್ರಗಳು ನನ್ನನ್ನು ನೋಡಿ ನಕ್ಕವು ! ಮರೆಯಲಾರದ / ಮರೆಯಬಾರದ ಅನುಭವ ನನ್ನದಾಯಿತಲ್ಲ…. ನಿಮ್ಮೊಂದಿಗೆ ಹೇಳಿಕೊಳ್ಳುವುದಕ್ಕೆ ಒಂದು ವಿಷಯ ಸಿಕ್ಕಿತಲ್ಲ…. ಅದುವೇ ಸಮಾಧಾನ !

 

– ಸುರೇಖಾ ಭೀಮಗುಳಿ, ಬೆಂಗಳೂರು

 

 

 

5 Comments on “ನಾನೂ ಗೋಲ್ಡ್ ಮೆಡಲಿಸ್ಟ್ ಕಣ್ರೀ..

  1. ಛೆ, ನಾನೂ ಭಾಗವಹಿಸಬಾರದಿತ್ತೆ, ಕನಿಷ್ಟ ಸಿಲ್ವರ್ ಪದಕವಾದರೂ ಸಿಗುತಿತ್ತು ( ಗುಲಾಬ್ ಜಾಮೂನ್ ಜಾಹೀರಾತಿನ ಎರಡನೇ ಬಹುಮಾನದಂತೆ)

    1. ಧನ್ಯವಾದಗಳು Hema Mala…. ಬನ್ನಿ ಒಮ್ಮೆ … ನಾವಿಬ್ರೆ ಈಜಿ …. ಅದೇ ಸರ್ಟಿಫಿಕೇಟನ್ನು ಅರ್ಧ- ಅರ್ಧ. ಹಂಚಿಕೊಳ್ಳೋಣ….

  2. ಒಳ್ಳೇ ಅನುಭವ

    ಅಂದ ಹಾಗೇ . ಮೆಡಲ್ . ಗಾಜಿನ ಚೌಕಟ್ಟಿನಲ್ಲಿಟ್ಟಿದ್ದೀರಾ . . ?

    1. ಧನ್ಯವಾದಗಳು.Bellala Gopinatha rao …. ಅಯ್ಯೋ … ಮೆಡಲ್ಲು ಅಂದ್ರೆ ಅಷ್ಟೆಲ್ಲ ಏನೂ ಇಲ್ಲ … ಆ ಸರ್ಟಿಫಿಕೇಟುಗಳಿಗೆ ಜೇನುತುಪ್ಪ ಹಾಕಿ ನೆಕ್ಕೋದೊಂದು ಬಾಕಿ….
      ಹಾಗೆಲ್ಲ ಪ್ರದರ್ಶನ ಮಾಡಿದ್ರೆ ಏನಾಗುತ್ತೆ ಗೊತ್ತಾ ? ಮನೆಗೆ ಬಂದವರ್ಯಾರಾದರೂ ಅದರೆ ಬಗ್ಗೆ ಕೇಳಿದಾಗ ನನ್ನ ಮಕ್ಕಳು ಈ ಪುರಾಣ ಎಲ್ಲಾ ಹೇಳಿ ನನ್ನ ಮಾನ (?) ಹಾರಾಜಿಗೆ ಹಾಕ್ತಾರೆ…. ಮರ್ಯಾದೆ (?) ತೆಗೀತಾರೆ !!!!

Leave a Reply to ಸುರೇಖಾ ಭಟ್ ಭೀಮಗುಳಿ Cancel reply

 Click this button or press Ctrl+G to toggle between Kannada and English

Your email address will not be published. Required fields are marked *