ತಗತೆ ಸೊಪ್ಪಿನ ಬಸ್ಸಾರು ಮತ್ತು ಪಲ್ಯ
ಆಯಾಯ ಋತುಗಳಲ್ಲಿ ತಾನಾಗಿ ಚಿಗುರಿ ಬೆಳೆಯುವ ಸಸ್ಯರಾಶಿಗಳಲ್ಲಿ ಔಷಧೀಯ ಗುಣಗಳಿವೆ ಎಂದು ಕಂಡುಕೊಂಡಿದ್ದ ನಮ್ಮ ಪೂರ್ವಿಕರು, ಸಾಂದರ್ಭಿಕವಾದ ಮತ್ತು ರುಚಿಯಾದ ಅಡುಗೆಯಿಂದಲೇ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು. ಹಳ್ಳಿಯವರು ತರಾವರಿ ಸೊಪ್ಪು, ಬೀಜ, ಗಡ್ದೆ, ಬೇರುಗಳಿಂದಲೇ ದೈನಂದಿನ ಅಡುಗೆ ಯನ್ನು ನಿಭಾಯಿಸಬಲ್ಲರು.
ತಿಂಗಳಿಗೆ ಒಂದು ಬಾರಿಯಾದರೂ ತಿಂದರೆ ಒಳ್ಳೆಯದು ಎಂದು ಪರಿಗಣಿಸಲಾಗುವ ಬಾಳೆದಿಂಡು, ಕೇಪುಳ ಹೂ, ಕೊಡಸಿಗೆ ಹೂ, ಕೆಸು, ಶುಂಠಿ, ಕಾಕಿ ಸೊಪ್ಪು, ನೆರುಗಲ ಸೊಪ್ಪು, ದೊಡ್ಡಪತ್ರೆ, ಒಂದೆಲಗ, ಚಕ್ರಮುನಿ ಸೊಪ್ಪು …..ಹೀಗೆ ಪಟ್ಟಿ ಮಾಡುತ್ತಾ ಹೋದರೆ 365 ದಿನಕ್ಕೂ ಸಾಕಾಗುವಷ್ಟು ವೈವಿಧ್ಯತೆ ನಮ್ಮ ಸುತ್ತುಮುತ್ತಲಿನ ಸಸ್ಯಸಿರಿಯಲ್ಲಿಯೇ ಸಿಗುತ್ತವೆ.
ಒಂದೆರಡು ಮಳೆ ಬಿದ್ದಾಗಿದೆ. ಈಗ ಅಲ್ಲಲ್ಲಿ ಕಾಣಸಿಗುವ ಒಂದು ಪುಟ್ಟ ಸಸ್ಯ ‘ತಗತೆ ಸೊಪ್ಪು’. ಇತರ ಸೊಪ್ಪುಗಳಲ್ಲಿ ತಯಾರಿಸಬಹುದಾದ ಎಲ್ಲಾ ವಿಧದ ಅಡುಗೆಯನ್ನು ಇದರಲ್ಲಿ ತಯಾರಿಸಬಹುದು. ಉದಾ: ಪಲ್ಯ, ತಂಬುಳಿ, ಪತ್ರೊಡೆ, ಸಾಂಬಾರು……ಇತ್ಯಾದಿ. ಮೊನ್ನೆ, ಸ್ವಲ್ಪ ತಗತೆ ಸೊಪ್ಪನ್ನು ಕಿತ್ತು ತಂದು ಮೈಸೂರು ಶೈಲಿಯ ‘ಬಸ್ಸಾರು’ ಮತ್ತು ಪಲ್ಯ ಮಾಡಿ ಸವಿದೆವು. ತಗತೆ ಸೊಪ್ಪಿನ ಬಸ್ಸಾರು ಮತ್ತು ಪಲ್ಯ ಅನ್ನದೊಂದಿಗೆ ಉಣ್ಣಲು ಚೆನ್ನಾಗಿರುತ್ತವೆ.
ತಗತೆ ಸೊಪ್ಪಿನ ಪಲ್ಯ ಮಾಡುವ ವಿಧಾನ:
ಹೆಚ್ಚಿದ ತಗತೆ ಸೊಪ್ಪಿನ ಜತೆಗೆ, ಯಾವುದಾದರೂ ಒಂದು ವಿಧದ ಕಾಳುಗಳನ್ನು ಸೇರಿಸಿ (ಹುರುಳಿಕಾಳು, ಅಲಸಂದೆ ಕಾಳು..ಇತ್ಯಾದಿ) ಬೇಯಿಸಿ. ಬೆಂದ ಮೇಲೆ ಅದರ ತಿಳಿಯಾದ ಕಟ್ಟನ್ನು ಬಸಿದು ಬೇರೆ ಪಾತ್ರೆಯಲ್ಲಿ ಎತ್ತಿಟ್ತುಕೊಳ್ಳಿ. ಬಾಣಲೆಯಲ್ಲಿ ಸಾಸಿವೆ,ಉದ್ದಿನಬೇಳೆ ಮತ್ತು ಕರಿಬೇವಿನ ಸೊಪ್ಪು ಹಾಕಿ ಒಗ್ಗರಣೆ ಸಿದ್ಧಪಡಿಸಿ. ಇದಕ್ಕೆ ಹೆಚ್ಚಿದ ಹಸಿರುಮೆಣಸಿನಕಾಯಿ ಮತ್ತು ಈರುಳ್ಳಿ ಚೂರುಗಳನ್ನು ಸೇರಿಸಿ ಬಾಡಿಸಿ. ಆಮೇಲೆ ಬೆಂದ ಸೊಪ್ಪು ಮತ್ತು ಕಾಳುಗಳ ಮಿಶ್ರಣವನ್ನು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ,ಖಾರ, ಬೇಕಿದ್ದರೆ ಸ್ವಲ್ಪ ಬೆಲ್ಲ (ತಗತೆ ಸೊಪ್ಪಿಗೆ ಸ್ವಲ್ಪ ಒಗರು ರುಚಿಯಿದೆ) ಸೇರಿಸಿ, ಸೌಟಿನಲ್ಲಿ ಕೈಯಾಡಿಸಿ, ಸಣ್ಣ ಉರಿಯಲ್ಲಿ ಒಂದೆರಡು ನಿಮಿಷ ಬೇಯಿಸಿ. ಒಲೆ ಆರಿಸಿದ ಮೇಲೆ ಸ್ವಲ್ಪ ನಿಂಬೆ ಹಣ್ಣಿನ ರಸ ಮತ್ತು ಕಾಯಿತುರಿ ಸೇರಿಸಿ, ಚೆನ್ನಾಗಿ ಬೆರೆಸಿದರೆ ಪಲ್ಯ ತಯಾರು.
ಬಸ್ಸಾರು ಮಾಡುವ ವಿಧಾನ:
2 ಚಮಚೆಯಷ್ಟು ಪಲ್ಯವನ್ನು ರುಬ್ಬಿ. ಬಸಿದು ತೆಗೆದಿರಿಸಿದ್ದ ಸಾರಿನ ಕಟ್ಟಿಗೆ ರುಬ್ಬಿದ ಪಲ್ಯವನ್ನು ಸೇರಿಸಿ. ಬೇಕಿದ್ದಷ್ಟು ಉಪ್ಪು, ಸಾರಿನ ಪುಡಿ, ಒಂದೆರಡು ಹಸಿರುಮೆಣಸಿನಕಾಯಿ ಮತ್ತು ಸ್ವಲ್ಪ ಹುಣಸೇಹಣ್ಣಿನ ರಸವನ್ನು ಸೇರಿಸಿ ಚೆನ್ನಾಗಿ ಕುದಿಸಿ.
ಬೆಳ್ಳುಳ್ಳಿ ಒಗ್ಗರಣೆ ಕೊಟ್ಟು, ಕೊತ್ತಂಬರಿ ಸೊಪ್ಪು ಉದುರಿಸಿದರೆ ಬಸ್ಸಾರು ಸಿದ್ಧ.
– ಹೇಮಮಾಲಾ
ನಮ್ಮಲ್ಲಿ ತಗತ್ತೆ ಗಿಡ ಇನ್ನು ಹುಟ್ಟಬೇಕಷ್ಟೆ. ಮಳೆ ಚೆನ್ನಾಗಿ ಶುರುವಾದ ಮೇಲೆ. ತಗತ್ತೆ ಸಪ್ಪು ಮತ್ತು ಹಲಸಿನ ಬೀಜ ಮಿಶ್ರ ಪಲ್ಯ ರುಚಿ ಆಗುತ್ತದೆ.
ನಮ್ಮಮ್ಮ ಇದರಲ್ಲಿ ತಂಬುಳಿ ಮಾಡ್ತಾ ಇದ್ರು.
Hema avare nanna amma e soppannu yestu sanna daagi hechakke sadya vo astu sannadaagi hechi palya maadthidru. E rithi neevu ondu sala maadi nodi thilisi
Looks yumm! 🙂
Madically uses:(Tagate sippin) enu?
ಮೆಂತೆಸೊಪ್ಪು, ಪಾಲಾಕ್ ಸೊಪ್ಪು ಇತ್ಯಾದಿಗಳಂತೆ ತಗತೆ ಸೊಪ್ಪನ್ನೂ ಅಡುಗೆಯಲ್ಲಿ ಬಳಸಬಹುದು. ಸೊಪ್ಪುಗಳಲ್ಲಿ ನಾರಿನಂಶ , ಕಬ್ಬಿಣದ ಅಂಶ ಜಾಸ್ತಿ ಇರುವುದರಿಂದ ಆರೋಗ್ಯಕ್ಕೆ ಉತ್ತಮ ಎಂದು ಪರಿಗಣಿಸಲಾಗುತ್ತದೆ. ಹೆಚ್ಚಿನ ವಿವರ ನನಗೆ ತಿಳಿದಿಲ್ಲ. (ಯಾರಾದರೂ ಆಯುರ್ವೇದ ಡಾಕ್ಟರ್ ಬಳಿ ಕೇಳುವುದು ಸೂಕ್ತ)
Happy to come across this website.