ಬಿಟ್ಟು ಯೋಚಿಸಬಹುದೇ..?
.
ದಿನದ ಕನಸುಗಳೆಲ್ಲಾ
ಗುಲಾಬಿ ಬಣ್ಣ ಮೆತ್ತಿದ
ಬೊಂಬಾಯಿ ಮಿಠಾಯಿ
ಸವಿಯುವ ಮುನ್ನವೇ ಕರಗಿ
ಬರೇ ಅಂಟು ಜಿನುಗಷ್ಟೇ
ಉಳಿಯುವ ನಂಟು.
ಈ ಹೊತ್ತಲ್ಲದ ಹೊತ್ತಿನಲ್ಲಿ
ನೀ ಬಂದು ಮೈದಡವಿ ತಲೆ
ನೇವರಿಸದೇ ಇರುತ್ತಿದ್ದರೆ..
ನಾಳೆಯ ಕನಸುಗಳಿಗೆ ಬಣ್ಣ
ಬಳಿಯಲು ನನ್ನ ಬಳಿ ರಂಗು
ಉಳಿಯುತ್ತಿತ್ತೇ?
ಕಣ್ಣಾಲಿ ತೆರೆದಷ್ಟೂ
ಸಂತೆ ನೆರೆಯುವ ಬಿನ್ನಾಣ ಲೋಕ
ಹೊರಗೆ ತೆಳ್ಳಗೆ ಹಚ್ಚಿದ ಬೆಡಗಿನ ಲೇಪ
ಲೋಪವೇ ಇಲ್ಲದ ಬದುಕಿದೆ ಒಳಗೆ
ಬಗೆದು ಕಂಡವರಿಲ್ಲ ಪಾಪ!
ಆಳದಲ್ಲೆಲ್ಲೋ ಛಳಕ್ ಎಂದ ನೋವು
..ಹೊತ್ತಿಗೆ ನೀ ಬಂದು ಮುಲಾಮು
ಹಚ್ಚದೇ ಹೋಗುತ್ತಿದ್ದರೆ..
ಗಾಯವೇನೋ ಮಾಯುತ್ತಿತ್ತು.
ನೋವು ಮಾಸುತ್ತಿತ್ತೇ..?
ಮುದುಡಿಕೊಂಡಷ್ಟೂ ರೆಕ್ಕೆ ಬಿಚ್ಚಿ
ಆಗಸಕ್ಕೆ ಬೆಟ್ಟು ನೆಟ್ಟು ಹಾರಲು
ಕಲಿಸುತ್ತಿರುವೆ.
ಮರೆತಷ್ಟೂ ಮತ್ತೂ ಮತ್ತೂ
ಗಾಳಿಯಂತೆ ಬೀಸುತ್ತಿರುವೆ.
ಈ ಕ್ಷಣ ಪಕ್ಕಕ್ಕಿಟ್ಟು ನಿನ್ನ
ಬಿಟ್ಟು ಯೋಚಿಸಬಹುದೇ..?
ನಾನು ಆಲೋಚಿಸುತ್ತಿರುವೆ.
ಧ್ಯಾನಕ್ಕೆ ಯಾರ ಕಾವಲೂ ಇಲ್ಲ
ಅಪ್ಪಣೆಗೆ ಕಾಯಲೂ ಬೇಕಿಲ್ಲ
ಕವಿತೆಯೇ..ಈಗ ಹೇಳು
ಅರೆ ಕ್ಷಣ ನಿನ್ನ ಬಿಟ್ಟು ನಾ
ಯೋಚಿಸಬಲ್ಲೆನೇ…?
ಇನ್ನು ನೀನೂ …?!
.
– ಸ್ಮಿತಾ ಅಮೃತರಾಜ್.
.
ಚಂದದ ಕವಿತೆ ಜವಾರಿ ಕನ್ನಡದ ಶಬ್ದಗಳ ಬಳಕೆ ಮೆರಗುಕೊಟ್ಟಿದೆ ಕವಿತೆಗೆ.