ನೆಗ್ಗಿದ ತಟ್ಟೆ..ರಂಗಾಯಣ..ಚಿಣ್ಣರ ಮೇಳ

Spread the love
Share Button
Hema6

ಹೇಮಮಾಲಾ.ಬಿ

ಶಾಲಾ ಮಕ್ಕಳಿಗೆ ಬೇಸಗೆ ರಜೆ ಸಿಕ್ಕಿದೆ.  ಪಕ್ಕದ ಖಾಲಿ ಸೈಟಿ ನಲ್ಲಿ ಬಡಾವಣೆಯ ಮಕ್ಕಳ ಸಡಗರದ ಆಟ ನೋಡುತ್ತಿರುವಾಗ ‘ರಂಗಾಯಣದ ಚಿಣ್ಣರ ಮೇಳ‘ ನೆನಪಾಗುತ್ತಿದೆ.  ಮೈಸೂರಿನವರಿಗೆ ‘ರಂಗಾಯಣ’ ಚಿರಪರಿಚಿತ. ಬೇಸಗೆಯಲ್ಲಿ  ಇವರು ಹಮ್ಮಿಕೊಳ್ಳುವ  ಬೇಸಗೆ ಶಿಬಿರವಾದ ‘ಚಿಣ್ಣರ ಮೇಳ’ ಬಹಳ ಸೊಗಸಾಗಿರುತ್ತದೆ. ನಮ್ಮ ಮಗ 8-10 ವರ್ಷದ ಬಾಲಕನಾಗಿದ್ದಾಗ ಅವನನ್ನು   ‘ಚಿಣ್ಣರ ಮೇಳ’ಕ್ಕೆ ದಾಖಲಿಸಿದ್ದೆವು. ಈ ಬೇಸಗೆ ಶಿಬಿರ ಎಷ್ಟು ಪ್ರಖ್ಯಾತ ಎಂದರೆ  ಅವರು ಅಪ್ಲಿಕೇಶನ್ ಫಾರ್ಮ್ ಕೊಡುತ್ತಾರೆಂದು ನಿಗದಿಪಡಿಸಿದ ದಿನದಂದು ಬೆಳಗ್ಗೆ 10 ಗಂಟೆಯೊಳಗೇ ಸುಮಾರು 400  ಅಪ್ಲಿಕೇಶನ್ ಫಾರ್ಮ್ ವಿತರಣೆಯಾಗಿ ಆಮೇಲೆ ಬಂದವರಿಗೆ ಅವಕಾಶವಿಲ್ಲದಾಗುತ್ತದೆ!

ಚಿಣ್ಣರ ಮೇಳದಲ್ಲಿ ಮಕ್ಕಳಿಗೆ ನಮ್ಮ ಸಂಸ್ಕೃತಿಯನ್ನು ಕಲಿಸುವುದರ ಜತೆಗೆ, ದೇಸೀ ಆಟಗಳನ್ನು, ಪರಿಸರವನ್ನು ಪರಿಚಯಿಸುತ್ತಾರೆ.  ‘ಮಕ್ಕಳನ್ನು ಮುಕ್ತವಾಗಿ ಪ್ರಕೃತಿಯಲ್ಲಿ ಬೆಳೆಯಲು ಬಿಡಿ‘ ಎಂದು ಪ್ರಥಮ ದಿನ ಪಾಲಕರ ಭೇಟಿಯಲ್ಲಿಯೇ  ತಿಳಿಸಿದ್ದರು. ನನಗೆ ಈಗ ನೆನಪಿರುವಂತೆ,  2005/2006 ನೇ ಇಸವಿಯಲ್ಲಿ  ನಮ್ಮ ಮಗ ಭಾಗವಹಿಸಿದ್ದ,  ಸುಮಾರು ಒಂದು ತಿಂಗಳ  ಅವಧಿಯ ಚಿಣ್ಣರ ಮೇಳದಲ್ಲಿ,  ಈ ಕೆಳಗಿನ ಕಾರ್ಯಕ್ರಮಗಳಿದ್ದುವು:

 • ಖ್ಯಾತ ಚಲನಚಿತ್ರ ಕಲಾವಿದರಾದ  ದಿ.ಅಶ್ವಥ್  ಅವರು ಕೊಳಲೂದುವ ಮೂಲಕ ಉದ್ಘಾಟನೆ . ಆವರು ಕೊಳಲು ಊದುತ್ತಿದ್ದಂತೆ, ವೇದಿಕೆಯ ಇಕ್ಕೆಲದಿಂದ, ಪೀ-ಪೀ ಎಂದು ತೋಚಿದಂತೆ ಕೊಳಲೂದುತ್ತಾ ಬಂದ ನೂರಾರು  ಪುಟಾಣಿಗಳ ದಂಡು.
 • ದೇಸಿ ಆಟಗಳಾದ ಕಬಡ್ಡಿ, ಲಗೋರಿಗಳ ಪರಿಚಯ. ಅಲ್ಲಿ ಕಲಿತು ಬಂದ ಲಗೋರಿ ಆಟವನ್ನು ನಮ್ಮ  ಬೀದಿಯ ಮಕ್ಕಳು,  ‘ಕಮೆಂಟ್ರಿ’ ಸಮೇತವಾಗಿ ಬಹಳ ದಿನಗಳ ನಂತರವೂ ಆಡುತ್ತಿದ್ದರು.
 • ಕುಕ್ಕರಹಳ್ಳಿ ಕೆರೆಯ ಏರಿ ಮೇಲೆ ವಾಕಿಂಗ್ ಮತ್ತು ಪಕ್ಷಿವೀಕ್ಷಣೆ. ಇದರಿಂದ ಪ್ರಭಾವಿತನಾದ ನಮ್ಮ ಮಗ , ಕೆಲವು ದಿನ ನಮ್ಮ ಬಡಾವಣೆಯಲ್ಲಿಯೇ ಗೆಳೆಯರನ್ನು ಸೇರಿಸಿಕೊಂಡು, ಪುಟ್ಟ ನೋಟ್ಸ್ ಬುಕ್ ಹಿಡಿದುಕೊಂಡು ಕಾಗೆ, ಗುಬ್ಬಚ್ಚಿ, ಪಾರಿವಾಳಗಳ ಲೆಕ್ಕ ಬರೆದ.
 • ಚಾಮುಂಡಿ ಬೆಟ್ಟವನ್ನು ಮೆಟ್ಟಿಲುಗಳ ಮೂಲಕ ಹತ್ತುವುದು ಜತೆಗೆ ಸಸ್ಯಸಿರಿಯ ಪರಿಚಯ.
 • ಬೊಂಬೆ ರಥ : ಎಲ್ಲಿ ಹೋದರಪ್ಪ ಇವರೆಲ್ಲಾ ಎಂದು ನೋಡುವಷ್ಟರಲ್ಲಿ   ಮಕ್ಕಳೆಲ್ಲಾ ಸೇರಿ ಒಂದು ಸಣ್ಣ ರಥವನ್ನು ಹಗ್ಗದ ಮೂಲಕ ಎಳೆದುಕೊಂಡು  ಬಂದರು. ಮಕ್ಕಳೇ ತಯಾರಿಸಿದ ವಿವಿಧ ಬೊಂಬೆಗಳನ್ನು,  ಆ ರಥಕ್ಕೆ ಕಟ್ಟಿ ಸಿಂಗರಿಸಿದ್ದರು.
 • ನಾಟಕ : ಮಕ್ಕಳಿಗೆ ತರಬೇತಿ ನೀಡಿ  ‘ಟಿಪ್ಪು ಸುಲ್ತಾನ್’ ನಾಟಕ ಆಡಿಸಿದ್ದರು. ಹಾಗಾಗಿ ನಮ್ಮ  ಮನೆಯಲ್ಲಿ, ಮಗನ ‘ಮೀರ್ ಸಾಧಿಕ್’ ಪಾತ್ರದ ತಾಲೀಮ್ ನಡೆಯುತ್ತಾ ಇತ್ತು!
 • ರಂಗಿನ ಓಕುಳಿ :  ಒಂದು ದಿನ  ಚಿಣ್ಣರ ಮೇಳದಲ್ಲಿ ಮಕ್ಕಳು  ಪರಸ್ಪರ ಬಣ್ಣದ ನೀರಿನ  ಓಕುಳಿ ಎರಚಿಕೊಂಡು ಸಂಭ್ರಮ ಪಡಲು ವ್ಯವಸ್ಥೆ ಕಲ್ಪಿಸಿದ್ದರು.

ಸಾಂಸ್ಕೃತಿಕ ಮೇಳ: ಕೆಲವು ಮಕ್ಕಳಿಗೆ  ಮನೆಯಿಂದ ಒಂದು ತಟ್ಟೆ ಮತ್ತು ಚಮಚ  ಇನ್ನು ಕೆಲವರಿಗೆ ಲೋಟ-ಚಮಚ   ತರಲು ಹೇಳಿದ್ದರು. ಕೆಲವರಿಗೆ ಹಾಡು ಕಲಿಸಿದ್ದರು. ಒಟ್ಟಾರೆಯಾಗಿ ಎಲ್ಲಾ ಮಕ್ಕಳನ್ನೂ ಒಂದಲ್ಲ ಒಂದು ರೀತಿ ತೊಡಗಿಸಿದ್ದರು, ತನಗೆ  ಅವಕಾಶ ಸಿಗಲಿಲ್ಲ ಎಂದು ಯಾವ ಮಗುವೂ ಬೇಜಾರು ಮಾಡಿಕೊಂಡಿಲ್ಲ.  ಹೀಗೆ ಹಾಡುವ ಮೇಳಕ್ಕೆ ತಟ್ಟೆ, ಲೋಟ, ಚಮಚ, ಕುಟ್ಟಣಗಳ ಹಿಮ್ಮೇಳ.  ನಮ್ಮ ಮಗ ತಟ್ಟೆಯನ್ನು ಚಮಚದಿಂದ ಎಷ್ಟು ಜೋರಾಗಿ ಕುಟ್ಟುತ್ತಿದ್ದ ಎಂಬುದಕ್ಕೆ ಸಾಕ್ಷಿಯಾಗಿ, ಅವನು ಬಳಸಿ ನೆಗ್ಗಿದ ತಟ್ಟೆಯನ್ನು ಈಗಲೂ ಇಟ್ಟುಕೊಂಡಿದ್ದೇವೆ.

ಚಿಣ್ಣರ ಸಂತೆ : ಎಲ್ಲಾ ಮಕ್ಕಳು ತಮ್ಮ ಮನೆಯಿಂದ ಏನಾದರೂ ಸಾಮಾಗ್ರಿ ತಂದು ‘ಸಂತೆಯಲ್ಲಿ ಅಂಗಡಿ ‘ ಇಡಬೇಕೆಂದು ಹೇಳಿದ್ದರು . ಆಗಿನ ದೂರದರ್ಶನದ ಜಾಹೀರಾತಿನಲ್ಲಿ ” ಐ ಲವ್ ಯೂ ರಸ್ನಾ..” ಅಂತ ಪುಟಾಣಿಯೊಬ್ಬಳು ಉಲಿಯುತ್ತಿದ್ದಳು. ಸರಿ, ನಮ್ಮ ಮಗ, ತಾನು ‘ರಸ್ನಾ’ ಮಾರುತ್ತೇನೆಂದ. ಸಂತೆಯ  ದಿನ ಎರಡು ದೊಡ್ಡ ಬಾಟಲುಗಳಲ್ಲಿ ರಸ್ನಾ ಮಾಡಿ  ತುಂಬಿಸಿ ಆಯಿತು. ಒಂದು ಬೆಡ್ ಶೀಟ್ ಮತ್ತು ಕೆಲವು  ಕಾಗದದ ಕಪ್ ಗಳನ್ನು ತೆಗೆದುಕೊಂಡು  ರಂಗಾಯಣಕ್ಕೆಹೋಗಿದ್ದ. ಆ ದಿನ  ಸಂಜೆ ಪಾಲಕರಿಗೂ ಬರಲು ಅವಕಾಶವಿತ್ತು. ಸಂಜೆ ‘ರಂಗಾಯಣ’ದ ಆವರಣದಲ್ಲಿ ನಾವು ಹೋಗುತ್ತಿದ್ದಂತೆ, ಮಕ್ಕಳ ಸಂತೆಯಲ್ಲಿ ವ್ಯಾಪಾರ, ಚೌಕಾಸಿ ತಾರಕಕ್ಕೇರಿತ್ತು. ಬಂದಿದ್ದ ಪಾಲಕರೇ ಗ್ರಾಹಕರು.

ಕೆಲವು ಮಕ್ಕಳು ಚಾಪೆ ಹಾಸಿ ಕುಳಿತು ತಾವು ತಂದಿದ್ದ ಕಲ್ಲಂಗಡಿ ಹಣ್ಣು, ಜ್ಯೂಸ್, ಮಜ್ಜಿಗೆ, ಚಾಕಲೇಟ್ ಇತ್ಯಾದಿ ಮಾರುತ್ತಿದ್ದರೆ, ಇನ್ನು ಕೆಲವರು ತಲೆ ಮೇಲೆ ಬುಟ್ಟಿಯಲ್ಲಿ ಹೊತ್ತು ಸಂತೆಯಲ್ಲಿ ಓಡಾಡುತ್ತಾ ಮಾರುತ್ತಿದ್ದರು!  ಪಾಲಕರು/ಗ್ರಾಹಕರು ಬೇಕೆಂದೇ ಚೌಕಾಸಿ ಮಾಡುತ್ತಿದ್ದರೆ, ಪುಟಾಣಿಗಳು ನಿಷ್ಣಾತ ವ್ಯಾಪಾರಿಗಳಂತೆ ತಿರುಗೇಟು ಕೊಡುತ್ತಾ ವ್ಯವಹಾರ ಮಾಡಿ  ಸಂಪಾದಿಸುತ್ತಿದ್ದರು!    ರಂಗಾಯಣದ ಕಲಾವಿದರು  ಮೈಗೆಲ್ಲಾ ಬಣ್ಣ ಬಳಿದು  ಅಂಗಡಿ ‘ಮಾಲೀಕರ’ ಮುಂದೆ ಸಾಕಷ್ಟು ತಕರಾರು ಮಾಡುತ್ತಿದ್ದರು!  ಕೋಲೆಬಸವನೂ ಬಂದಿದ್ದ. ಒಬ್ಬರು ಕತ್ತಿನವರೆಗೂ ಮರಳಿನ ರಾಶಿಯಲ್ಲಿ ಹುದುಗಿ ಆಕರ್ಷಿಸುತ್ತಿದ್ದರು, ಬಲೂನ್ ವ್ಯಾಪಾರವಿತ್ತು. ಅಂತೂ ರಂಗಾಯಣದ ಆವರಣದಲ್ಲಿ ‘ಅಪ್ಪಟ ಸಂತೆ’ ಸೃಷ್ಟಿಯಾಗಿತ್ತು.

ತಮ್ಮ ಪಾಲಕರನ್ನು ಕಂಡ ತತ್ಕ್ಷಣ  ಮಕ್ಕಳು ಅದುವರೆಗೆ ನಡೆಸುತ್ತಿದ್ದ ಅಂಗಡಿಯನ್ನು ಅಲ್ಲಿಗೇ ಬಿಟ್ಟು,  ಬೇರೆ ಅಂಗಡಿಗೆ ವ್ಯಾಪಾರಕ್ಕೆ ಹೊರಡಲು ಅನುವಾದರು. ನಮ್ಮ ಮಗ ರಸ್ನಾ ಮಾರುತ್ತಿದ್ದನು ಅದುವರೆಗೆ 12 ರೂ ಗಳಿಸಿದ್ದನ್ನು  ಹೆಮ್ಮೆಯಿಂದ ತೋರಿಸಿದ.   ನನ್ನನ್ನು ಕಂಡೊಡನೆ, ಜಿಗ್ಗನೆ ಎದ್ದು, ಸ್ವಲ್ಪ ದುಡ್ಡು ಪಡಕೊಂಡು ‘ಪರ್ಚೇಸ್ ಮಾಡ್ಬೇಕು’  ಅಂದು  ಛಂಗನೆ ಓಡಿದ.  ಏನಪ್ಪಾ ಮಾಡಲಿ ಅನ್ನುತ್ತಾ ಕೊನೆಗೆ ನಾನು ಅವನ ಜಾಗದಲ್ಲಿ  ಕುಳಿತುಕೊಂಡೆ. ನೋಡನೋಡುತ್ತಿರುವಷ್ಟರಲ್ಲಿ, ಎಲ್ಲಾ ಅಂಗಡಿಗಳಲ್ಲಿ ಮಾಲೀಕರು ನಾಪತ್ತೆ.  ಅವರ ಜಾಗದಲ್ಲಿ ಅಪ್ಪಂದಿರು/ಅಮ್ಮಂದಿರು/ಅಜ್ಜಿಯಂದಿರು ಸಂತೆಯಲ್ಲಿ  ನಗುತ್ತಾ  ಕುಳಿತಿದ್ದರು.  ‘ಪರ್ಚೇಸ್ ಮಾಡಲೆಂದು’  ಕೆಲವರು ಚುರುಮುರಿ ತಿನ್ನಲು ಹೋದರೆ ಇನ್ನು ಕೆಲವರು ಐಸ್ ಕ್ಯಾಂಡಿ ಗಾಡಿಯ ಮುಂದೆ ಇದ್ದರು. ಕೊನೆಗೆ ನಾವು  ಅಕ್ಕ-ಪಕ್ಕದ ಅಂಗಡಿಯಲ್ಲಿದ್ದ ಪಾಲಕರು  ಪರಸ್ಪರ ಪರಿಚಯ ಮಾಡಿಕೊಂಡು  ಸಂತೆಗೆಂದು  ಕಳುಹಿಸಿದ್ದ ತಿಂಡಿ/ಪಾನೀಯವನ್ನು ಹಂಚಿ ಮುಗಿಸಿ ಅಂಗಡಿ ಕ್ಲೋಸ್ ಮಾಡಿದೆವು!

Avi-chinnara mela

ಒಟ್ಟಾರೆಯಾಗಿ, ಚಿಣ್ಣರಮೇಳದಲ್ಲಿ ಭಾಗವಹಿಸಿ ನಮ್ಮ ಮಗನಿಗೂ ನಮಗೂ ಬಹಳ ಸಂತಸವಾಯಿತು. ಆ ದಿನಗಳಲ್ಲಿ   ಡಿಜಿಟಲ್ ಕ್ಯಾಮೆರಾ/ ಸ್ಮಾರ್ಟ್ ಫೋನ್  ಈಗಿನಷ್ಟು ವ್ಯಾಪಕವಾಗಿ ಲಭ್ಯವಿದ್ದಿದ್ದರೆ , ಎಷ್ಟೊಂದು ಫೊಟೊ ತೆಗೆದಿಡಬಹುದಾಗಿತ್ತು ಅನಿಸುತ್ತದೆ. ಕಾಲ ಮಿಂಚಿ ಹೋಗಿದೆ!  ಹಾಗಾಗಿ ಈಗ ಚಿಣ್ಣರ ಮೇಳದ  ‘ನೆಗ್ಗಿದ ತಟ್ಟೆ’ಯಲ್ಲಿಯೇ ಆ ಚಿತ್ರಗಳನ್ನು ನಾವು ಕಾಣಬೇಕು!

 

– ಹೇಮಮಾಲಾ.ಬಿ

 

5 Responses

 1. ಬಸವಾರಾಜ.ಜೋ.ಜಗತಾಪ says:

  ಚೆನ್ನಾಗಿದೆ ಬಾಲ್ಯದ ಆಟಗಳ ಬಗ್ಗೆ ಬರೆಯಬೇಕು ಎನಿಸಿತು.

 2. Shruthi Sharma says:

  ಸೂಪರ್!! 🙂

 3. Mahadeva Shastry says:

  ರಂಗ ಶಿಬಿರದಲ್ಲಿ ಭಾಗವಹಿಸಿದ ಅನುಭವ. .. ನಾವು ಪುತ್ತೂರಲ್ಲಿ.. ಹತ್ತು ವರ್ಷಗಳ ಕಾಲ ದೇರಾಜೆ ಮೂರ್ತಿ , ವಿಟ್ಲ ಅವರ ” ಸಮ ಸಾಂಪ್ರತಿ “” ತಂಡ ದೊಂದಿಗೆ ಆಯೊಜಿಸಿದ. ಶಿಬಿರದ ನೆನಪು ಮರುಕಳಿಸಿತು

 4. Vidyaurs AV says:

  ತುಂಬಾ ಅದ್ಭುತ ವಾದ ಬರವಣಿಗೆ

 5. Deepak Kumar says:

  Nice explanation. Now only we came to know in detail what activities tkaes place in Chinnara mela

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: