ಸುಬ್ರಹ್ಮಣ್ಯನ ದರ್ಶನ
ನಮ್ಮ ಮಹಿಳಾ ಸಂಘದ ವತಿಯಿಂದ ದಕ್ಷಿಣ ಕನ್ನಡದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದಿದ್ದೆವು . ವಿಪರೀತವಾದ ಜನಸಂದಣಿ.ಅಂದು ಯಾವುದೋ ರಜಾದಿನ ಬೇರೆ. ದೇವರ ದರ್ಶನಕ್ಕೆ ಒಳಗೆ ಹೋದರೂ ಕಾಣಲು ಸಾಧ್ಯವಾಗಲಿಲ್ಲ.ಅಲ್ಲಿಂದಲೇ ಕೈಮುಗಿದು ಸಮಾಧಾನ ಪಟ್ಟುಕೊಂಡಿದ್ದೇ ಆಯ್ತು.ತುಂಬಾ ದೂರದ ಪ್ರಯಾಣವಾಗಿದ್ದರಿಂದ ಮಧ್ಯಾಹ್ನದ ಎರಡು ಘಂಟೆಗೆ ಹಿಂದಿರುಗಲು ಜೀಪು ಹತ್ತಿದ್ದೆವು.ಅದಾಗಲೇ ಆಕಾಶದ ತುಂಬಾ ಕರಿ ಕರಿ ಮೋಡಗಳು ದಟ್ಟೈಸಿತ್ತು .ಜೊತೆಗೆ ಗುಡುಗು,ಸಿಡಿಲು ಬೇರೆ. ಬಳ್ಳಿ ಬಳ್ಳಿಯಾಗಿ ಬಾನಿನಲ್ಲಿ ಸಿಡಿಲಿನ ಆರ್ಭಟ. ಕುಕ್ಕೆ ಸುಬ್ರಹ್ಮಣ್ಯವೆಂದರೆ ದಟ್ಟ ಕಾಡಿನ ಮಧ್ಯೆ ಇರುವ ಕ್ಷೇತ್ರ. ಆಕಾಶ ಮುಟ್ಟುವ ಮರಗಳ ಸಾಲು ಸಾಲು ಕಿಲೋಮೀಟರುಗಳ ದೂರಕ್ಕೂ ಮುಗಿಯದು . ನಡು ಮಧ್ಯಾಹ್ನ ಕತ್ತಲಾವರಿಸಿತ್ತು.ನಮಗೆ ಹೆದರಿಕೆ.ಎಲ್ಲಿಯ ಸುಬ್ರಹ್ಮಣ್ಯ ಕ್ಷೇತ್ರ; ಎಲ್ಲಿಯ ಕಾಸರಗೋಡು? ದೂರದ ಪ್ರಯಾಣ ನಮ್ಮ ಮುಂದಿದೆ. ಮಾತಿಲ್ಲದೆ ಸಪ್ಪಗಿದ್ದೆವು.ದೇವರ ದರ್ಶನಕ್ಕೆ ಬಂದವರಿಗೆ ದರ್ಶನವಿಲ್ಲ; ಈಗ ನೋಡಿದರೆ ಅಬ್ಬರದ ಗುಡುಗು,ಸಿಡಿಲು,ಮಿಂಚಿನ ಆಕ್ರೋಶ.
ಜೀಪಿನ ಚಾಲಕ ಕವಿದ ಕತ್ತಲಿನ ನಡುವೆ ಜಾಗರೂಕತೆಯಿಂದ ವಾಹನ ಚಲಾಯಿಸುತ್ತಿದ್ದರು. ಸುಮಾರು ದೂರ ಬಂದರೂ ಕಾಡು ಮುಗಿಯದು.ಬರುವಾಗ ಚೆಂದವಾಗಿ ಕಂಡಿದ್ದ ಕಾದು ಈಗ ಒಮ್ಮೆ ಮುಗಿಯಬಾರದೇ ಎನ್ನಿಸುತ್ತಿತ್ತು. ಆಗ ನೇರ ರಸ್ತೆಯಲ್ಲಿ ಅಡ್ಡವಾಗಿ ಬಿದ್ದ ಮರದ ಕಾಂಡ ಕಾಣಿಸಿತ್ತು. ಕಪ್ಪಗೆ ,ಉದ್ದಕ್ಕೆ ಸುಮಾರು ಹತ್ತಡಿಯ ಆಸುಪಾಸಿನ ತುಂಡು. ಅದರ ಮೇಲಿನಿಂದ ಜೀಪು ಚಲಾಯಿಸಬಹುದಿತ್ತು. ಸ್ಪಷ್ಟ ಕಾಣಲು ಕತ್ತಲಿಂದಾಗಿ ಆಗಿರಲಿಲ್ಲ. ಜೀಪು ಅದೇ ವೇಗದಿಂದ ಹತ್ತಿರವಾಗಿ ಬಂತು. ಮ್ತೀರಾ ಹತ್ತಿರ ಬಂದಾಗ ಕಟ್ಟಿಗೆಯಲ್ಲಿ ನಸು ಚಲನೆ ಕಂಡ ಹಾಗೆ ಅನುಭವ.ಚಾಲಕನ ಹತ್ತಿರದ ಸೀಟಿನಲ್ಲಿದ್ದ ನಾನು ಅವರಲ್ಲಿ ಹಾಗೆ ಹೇಳಲು ಸಮಯವಿಲ್ಲದೆ ಸ್ಟಿಯರಿಂಗ್ ನ ಮೇಲಿದ್ದ ಅವರ ಕೈ ಮೇಲೆ ನನ್ನ ಕೈ ಇಟ್ಟೆ. ಅದೇ ಸೆಕೆಂಡ್ ನಲ್ಲಿ ಅವರಿಗೂ ಆ ಚಲನೆ ಗೋಚರವಾಗಿತ್ತು. ಅದಾವ ಚಾಕಚಕ್ಯತೆಯಿಂದ ಬ್ರೇಕ್ ಹಾಕಿ ನಿಲ್ಲಿಸಿದ್ದರೋ ಆ ಸುಬ್ರಹ್ಮಣ್ಯ ಸ್ವಾಮಿಗೇ ಗೊತ್ತು, ರಸ್ತೆಯಲ್ಲಿ ಅಡ್ಡವಾಗಿ ಬಿದ್ದ ‘ಕರಿಮರದ ತುಂಡು’ ಬಲು ನಿಧಾನವಾಗಿ ಚಲಿಸತೊಡಗಿತು.
ಬಲು ಸಮೀಪದಿಂದ ನೋಡುತ್ತಿದ್ದ ನಮಗೆ ಮೈ ರಕ್ತ ಹೆಪ್ಪುಗಟ್ಟಿದ ಅನುಭವ! ಮೊದಲೇ ಮೋಡ ಕವಿದು ಚಳಿ ಹಿಡಿಯುವ ಹವೆ;ಈಗ ನಡುಗುವ ಸ್ಥಿತಿ ! ಮೆಲ್ಲಗೆ, ಬಲು ಮೆಲ್ಲಗೆ ಕರಿಯ ಕಾಳಿಂಗ ಸರ್ಪ ರಸ್ತೆ ದಾಟಿತು. ಆ ತನಕ ಉಸಿರು ಬಿಗಿ ಹಿಡಿದ ನಾವು ಅಷ್ಟೂ ಜನರಿಗೆ ಜೀವ ಬಂತು. ಅದು ದಾಟಿದ ಕಡೆಗೆ ನೋಡಿದ್ದೆ. ಅಲ್ಲಿ ಕಂಡಿತ್ತು ದೇವಸ್ಥಾನದ ಫಲಕ ” ವಳಲಂಬೆ ಶಂಖಪಾಲ ದೇವಸ್ಥಾನ” ಕ್ಷೇತ್ರ ಶಂಖಪಾಲನದು! ನಮಗೆ ದರ್ಶನವಾಗಿದ್ದು ಶಂಖಪಾಲನೇ ಹೌದು. ಜೀಪು ಚಾಲಕರ ಅತೀವ ಜಾಗರೂಕತನವೇ, ಅಥವಾ ನೈಪುಣ್ಯತೆಯೋ ತೀರಾ ಹತ್ತಿರದ ತನಕ ವಾಹನ ಬಂದರೂ ಕಾಳಿಂಗ ಸರ್ಪಕ್ಕೆ ಎಳ್ಳಿನಷ್ಟೂ ತೊಂದರೆ ಆಗಿರಲಿಲ್ಲ. ಸಾವಧಾನವಾಗಿ ದಾಟಿ ಹೋಗಿತ್ತು. ನಮಗೋ ಮಾತಾಡಲೂ ದನಿ ಇಲ್ಲ! ನಡುಗುವ ಅನುಭವ!
– ಕೃಷ್ಣವೇಣಿ ಕಿದೂರು
ಮೈ ನವಿರೇಳಿಸುವ ಅನುಭವ!