ಉಚಿತ ವೈದ್ಯಕೀಯ ತಪಾಸಣಾ ಶಿಬಿರ
ಅರಣ್ಯ ಇಲಾಖೆ, ಮೈಸೂರಿನ ಕುಟುಂಬ ವೈದ್ಯರ ಸಂಘ ಹಾಗೂ ಯೂಥ್ ಹಾಸ್ಟೆಲ್ ಅಸೋಸಿಯೇಶನ್ ಗಂಗೋತ್ರಿ ಘಟಕಗಳ ಸಹಯೋಗದಿಂದ, ಎಪ್ರಿಲ್ 11 ಮತ್ತು 12, 2015 ರಂದು, ಮೈಸೂರಿನಿಂದ ಸುಮಾರು 80 ಕಿ.ಮೀ ದೂರದಲ್ಲಿರುವ, ಎಚ್.ಡಿ.ಕೋಟೆ ತಾಲೂಕಿನ, ಎನ್.ಬೇಗೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಏರ್ಪಡಿಸಿದ್ದರು. ವೈದ್ಯಕೀಯ ಕ್ಷೇತ್ರದ ನುರಿತ ವೈದ್ಯರು ಮತ್ತು ಆರೋಗ್ಯ ತಪಾಸಣಾ ಪರಿಣಿತರು ಈ ಕಾರ್ಯಕ್ರಮದಲ್ಲಿ ಉಚಿತವಾಗಿ ಸೇವೆ ಸಲ್ಲಿಸಿದ್ದರು.
ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರನ್ನು ಕಾಡುತ್ತಿರುವ ಹೃದಯ ಸಂಬಂಧಿ ಸಮಸ್ಯೆಗಳು, ರಕ್ತದೊತ್ತಡಮತ್ತು ಸಕ್ಕರೆ ರೋಗವನ್ನು ಪತ್ತೆ ಹಚ್ಚುವ ತಪಾಸಣೆಯ ಜೊತೆಗೆ ಕೆಲವು ಖಾಯಿಲೆಗಳಿಗೆ ಉಚಿತವಾಗಿ ಔಷಧಿವನ್ನೂ ವಿತರಿಸಲಾಗಿತ್ತು. ಎನ್.ಬೇಗೂರು ಮತ್ತು ಸುತ್ತುಮುತ್ತಲಿನ ಹಲವು ಹಳ್ಳಿಗಳ ಗ್ರಾಮಸ್ಥರು ಈ ಕಾರ್ಯಕ್ರಮದ ಪ್ರಯೋಜನ ಪಡೆದರು. ನಿರೀಕ್ಷೆಗೂ ಮೀರಿ ಬರುತ್ತಿದ್ದ ಜನರ ಸಾಲು ಮತ್ತು ಖಾಲಿಯಾಗಿದ್ದ ಔಷಧಿಗಳ ಪ್ಯಾಕೆಟ್ ಗಳು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾಗಿತ್ತು.
ಕಾರ್ಯಕ್ರಮದಿಂದಾಗಿ ಸಂತೋಷಿತರಾದ ಕೆಲವು ವೃದ್ಧ ಮಹಿಳೆಯರು, “ಒಳ್ಳೆ ಕೆಲ್ಸ ಮಾಡಿದ್ದಾರಿ.. ದೇವ್ರು ನಿಮ್ನ ಚೆನ್ನಾಗಿಟ್ಟಿರ್ಲಿ ನಿಮ್ಮಕ್ಳು ಎಲ್ಲಾರು ಚೆನ್ನಾಗಿರಿ……ಮುದ್ದೆ…ಉಪ್ಸಾರು ಉಣ್ಣೋರಂತೆ…” ಇತ್ಯಾದಿ ಬಾಯ್ತುಂಬ ಆಶೀರ್ವದಿಸಿ, ಮನೆಗೂ ಆಮಂತ್ರಿಸಿದ ಅವರ ಪ್ರೀತಿಯ ಮುಂದೆ ಮೂಕಳಾದೆ. ಯಾಕೆಂದರೆ, ವೈಯುಕ್ತಿಕವಾಗಿ ನಾನೇನೂ ಕೆಲಸ ಮಾಡಿಲ್ಲ. ಉತ್ತಮ ಕಾರ್ಯಮಾಡುವವರೊಂದಿಗೆ ಸ್ವಯಂಸೇವಕಿಯಾಗಿ ಭಾಗವಹಿಸಬೇಕೆಂಬ ಆಸೆಯಿತ್ತು. ಅದಕ್ಕೆ ಆಯೋಜಕರು ಅವಕಾಶ ಕೊಟ್ಟರು. ಹಾಗಾಗಿ ಒಂದು ಅಳಿಲುಸೇವೆ ಮಾಡಲು ಸಾಧ್ಯವಾಯಿತು.
ಎನ್. ಬೇಗೂರು ಎಂಬ ಪುಟ್ಟ ಹಳ್ಳಿ ತೀರಾ ಕುಗ್ರಾಮವಲ್ಲವಾದರೂ ಕೆಲವು ಮೂಲಭೂತ ಅವಶ್ಯಕತೆಗಳನ್ನು ಮಾತ್ರ ಹೊಂದಿದೆ. ನಾವು ಅಲ್ಲಿ ಉಳಕೊಂಡಿದ್ದ ಅರಣ್ಯ ಇಲಾಖೆಯೆ ಅತಿಥಿಗೃಹದಲ್ಲಿ ನಿನ್ನೆ ಮಧ್ಯಾಹ್ನ ನಿಂತುಹೋಗಿದ್ದ ವಿದ್ಯುಚ್ಛಕ್ತಿ ಇಂದು ನಾವು ಹೊರಡುವ ವರೆಗೂ ಬಂದಿಲ್ಲ. ನಮಗಂತೂ ಅಲ್ಲಿನ ಸಿಬ್ಬಂದಿ ಇರುವ ವ್ಯವಸ್ಥೆಯಲ್ಲಿ ಊಟ, ತಿಂಡಿ ತಯಾರಿಸಿ ಕೊಟ್ಟರು. ಅವರೆಲ್ಲರಿಗೂ ಧನ್ಯವಾದ ಸಲ್ಲಿಸಿ, ಇಂದು ಸಂಜೆ ಮೈಸೂರು ತಲಪುವಷ್ಟರಲ್ಲಿ ಈ ವಾರಾಂತ್ಯ ಸಂಪನ್ನವಾಯಿತು.
– ಹೇಮಮಾಲಾ.ಬಿ
Gud initiative n a well done job mam
ಹಳ್ಳಿಯ ಜನರಿಗೆ ಉಪಯುಕ್ತ ಕಾರ್ಯಕ್ರಮ ಕೊಟ್ಟಿದ್ದೀರಿ. ಅಭಿನಂದನೆಗಳು…
ಜನರ ಪರವಾಗಿ ನನ್ನಿಂದಲೂ ಕೂಡ ಒಳ್ಳೆಯ ಕೆಲಸಕ್ಕೆ ಧನ್ಯವಾದಗಳು.
thumbha oleya kelasa madidira… thanks………
ತು೦ಬ ಒಳ್ಳೆಯ ಕಾರ್ಯಕ್ರಮ.ನಿಮಗೆ ಇನ್ನೂ ಹೆಚ್ಚಿನ ಸಮಾಜಸೇವೆ ಮಾಡುವ ಅವಕಾಶಗಳು ದೊರಕಲಿ
ಒಳ್ಳೆಯ ಕಾರ್ಯಕ್ರಮ! 🙂
ಮೆಚ್ಚಿದ , ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು