ಹಲಸಿನ ಹಣ್ಣಿನ ‘ಬೆರಟಿ’ ಪಾಯಸ.
ಹಲಸಿನಹಣ್ಣು ಧಾರಾಳವಾಗಿ ಲಭ್ಯವಿರುವ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ, ಹಣ್ಣಿನ ತೊಳೆಗಳನ್ನು ಬೇರ್ಪಡಿಸಿ, ಹಣ್ಣು ಸಪ್ಪೆ ಇದ್ದರೆ ಬೆಲ್ಲವನ್ನು ಸೇರಿಸಿ ಸಣ್ಣ ಉರಿಯಲ್ಲಿ ಬಹಳಷ್ಟು ಸಮಯ ಕಾಯಿಸುತ್ತಾರೆ. ಕೊನೆಗೆ ಅದು ಹಲ್ವದ ಹದಕ್ಕೆ ಬರುವಾಗ ಸ್ವಲ್ಪ ತುಪ್ಪವನ್ನು ಹಾಕಿ ಒಲೆಯಿಂದ ಇಳಿಸುತ್ತಾರೆ. ಬಿಸಿ ಆರಿದ ಮೇಲೆ ಇದನ್ನು ಶೇಖರಿಸಿ ಇಟ್ಟರೆ ವರ್ಷಪೂರ್ತಿ ಕೆಡುವುದಿಲ್ಲ. ಇದಕ್ಕೆ “ಹಲಸಿನ ಹಣ್ಣಿನ ಬೆರಟಿ ” ಎಂಬ ಹೆಸರೂ ಇದೆ.
ಹಲಸಿನ ಹಣ್ಣು ಲಭ್ಯವಿಲ್ಲದ ಸೀಸನ್ ನಲ್ಲಿ ಇದರಿಂದ ರುಚಿಕರ ಪಾಯಸ ತಯಾರಿಸುತ್ತಾರೆ.
ವಿಧಾನ: ಹಲಸಿನ ಹಣ್ಣಿನ ಹಲ್ವವನ್ನು ಸಣ್ಣಗೆ ಹೆಚ್ಚಿ 1-2 ಗಂಟೆಗಳ ಕಾಲ (ಮೃದುವಾಗುವ ವರೆಗೆ) ನೀರಿನಲ್ಲಿ ನೆನೆಸಬೇಕು. ಆಮೇಲೆ ಅದನ್ನು ಸೌಟಿನಲ್ಲಿ ಕೈಯಾಡಿಸಿ ಕದಡಬೇಕು. ಮಿಕ್ಸಿಗೆ ಹಾಕಿ ರುಬ್ಬಿದರೂ ಆಗುತ್ತದೆ. ಈ ಮಿಶ್ರಣಕ್ಕೆ, ತಕ್ಕಷ್ಟು ಬೆಲ್ಲ ಹಾಕಿ, ಸಮಪ್ರಮಾಣದಲ್ಲಿ ತೆಂಗಿನಕಾಯಿಯ ಹಾಲನ್ನು ಸೇರಿಸಿ ಕುದಿಸಬೇಕು. ಅಲ್ಲಿಗೆ ಪಾಯಸ ಸಿದ್ದವಾಗುತ್ತದೆ.
ಸಾಮಾನ್ಯವಾಗಿ ಈ ಪಾಯಸಕ್ಕೆ ಏಲಕ್ಕಿ, ದ್ರಾಕ್ಷಿ, ಗೋಡಂಬಿಯನ್ನು ಸೇರಿಸುವುದಿಲ್ಲ. ಅದರ ಬದಲು ಸ್ವಲ್ಪ ಎಳ್ಳು ಮತ್ತು ಕೊಬ್ಬರಿ ಹೋಳುಗಳನ್ನು ಹುರಿದು ಸೇರಿಸುವ ಪದ್ಧತಿ. ಒಟ್ಟಾರೆಯಾಗಿ ಇದು ಅಪ್ಪಟ ಗ್ರಾಮೀಣ ಅಡುಗೆ.
ರೆಡಿಮೇಡ್ ಪಾಯಸದ ಮಿಶ್ರಣದ ಪ್ಯಾಕೆಟ್ ಗಳು ಲಭ್ಯವಿಲ್ಲದ ಕಾಲದಲ್ಲಿ ನಮ್ಮ ಅಜ್ಜಿಯರು ಹಳ್ಳಿಯಲ್ಲಿ ಸಿಗುವ ವಸ್ತುಗಳಿಂದ ಎಷ್ಟು ಸರಳವಾಗಿ, ರುಚಿಕಟ್ಟಾಗಿ ಅಡುಗೆ ಮಾಡುತ್ತಿದ್ದರು ಎನಿಸುತ್ತದೆ! ಇಂತಹ ಪಾಯಸಗಳು ಈಗ ಅಪರೂಪವಾಗುತ್ತಿವೆ.
– ಹೇಮಮಾಲಾ.ಬಿ
ಹೊಸ ಹೊಸ ತಿನಿಸುಗಳ ಬಗ್ಗೆ ತಿಳಿಸ್ತಾನೆ ಇರಿ ನಮ್ಗೆ ಬಾಯಲ್ಲಿ ನೀರು ಬರ್ತಾನೆ ಇರ್ಲಿ …… ನಮ್ಗು ಒಂದು ದಿನ ಹೊಟ್ಟೆ ತುಂಬಿಸ್ತೀರ ದಯವಿಟ್ಟು….
Baiyali neeru…..