‘ಬಂಗಾರದ ಮನುಷ್ಯ’

Spread the love
Share Button
veeralinganagoudar s (1)

ಕೆ.ಬಿ.ವೀರಲಿಂಗನಗೌಡ್ರ

 

ನಮ್ಮೆಲ್ಲ ಮಕ್ಕಳಿಗೆ ಮುಖ್ಯವಾಗಿ ಹಳೆಯ ಚಲನ ಚಿತ್ರಗಳನ್ನು ನಾವಿಂದು ತೋರಿಸಬೇಕಿದೆ. ಹಿಂದಿನ ಬಹುತೇಕ ಚಿತ್ರಗಳು ಮನರಂಜನೆಯ ಜೊತೆಗೆ ಪ್ರೇಕ್ಷಕರ ಮನಮುಟ್ಟುವಂತಹ ಸ್ಪಷ್ಟ ಸಂದೇಶವನ್ನು ರವಾನಿಸುತ್ತಿದ್ದವು. ಚಿತ್ರಗಳ ಮಧ್ಯೆ ಬರುವ ಗೀತೆಗಳ ಸಾಹಿತ್ಯ, ಸಂಗೀತ ಕೇಳುಗರಿಗೆ ಹಿತ ನೀಡುವುದರೊಂದಿಗೆ ಆಹ್ಲಾದತೆಯ ಆಗಸದಲ್ಲಿ ತೇಲಾಡಿಸುತ್ತಿದ್ದವು. ತುಂಡು ಬಟ್ಟೆ, ಅಶ್ಲೀಲ ಸನ್ನಿವೇಷ, ವಾಸ್ತವಕೆ ಹತ್ತಿರವಲ್ಲದ ಕಲ್ಪನೆ ಅಂದಿನ ಚಿತ್ರಗಳಲ್ಲಿ ಕಿಂಚತ್ತೂ ಇರಲಿಲ್ಲ. ‘ಕಲೆಯೇ ಜೀವನ, ಜೀವನವೇ ಕಲೆ’ ಎಂದು ಪರಿಭಾವಿಸಿದ್ದ ಆಗಿನ ಕಲಾವಿದರೆಲ್ಲರ ಬದುಕು ಕೂಡಾ ತುಂಬಾ ಆದರ್ಶಮಯವಾಗಿದ್ದವು. ತೆರೆಯ ಮೇಲೊಂದು, ತೆರೆಯ ಹಿಂದೆ ಮತ್ತೊಂದು ಎನ್ನುವಂತಹ ದ್ವಂದ್ವದ ಬದುಕು ಕಟ್ಟಿಕೊಂಡ ಕಲಾವಿದರು ನನಗಂತೂ ಗೊತ್ತಿಲ್ಲ. ಈ ಕಾರಣಕ್ಕಾಗಿಯೇ ‘Old id Gold’ ಅನ್ನೊ ಮಾತು ಹೆಚ್ಚು ಪ್ರಸ್ತುತವೆಂದು ನನಗೀಗ ಅನ್ನಿಸುತ್ತಿದೆ.

‘ಬಂಗಾರದ ಮನುಷ್ಯ’ ಚಿತ್ರ ನೋಡಿ ಅದೆಷ್ಟೊ ಯುವ ರೈತರು ತಮ್ಮ ಬಂಜರು ಭೂಮಿಯಲ್ಲಿ ಬಂಗಾರ ಬೆಳೆದವರಿದ್ದಾರೆ. ‘ಸತ್ಯ ಹರಿಶ್ಚಂದ್ರ’ ಚಿತ್ರ ನೋಡಿ ಪ್ರಾಮಾಣಿಕವಾದ ಬದುಕು ಕಟ್ಟಿಕೊಳ್ಳಬೇಕೆಂದು ಪ್ರತಿಜ್ಞೆ ಮಾಡಿದವರಿದ್ದಾರೆ. ಅಂದಿನ ಚಿತ್ರಗಳು ಆಪ್ತತೆ, ನಿರ್ಮಲವಾದ ಪ್ರೀತಿ, ಪಾರದರ್ಶಕತೆಯನ್ನು ಹೊಂದುವುದರೊಡನೆ ಬದುಕಿಗೊಂದು ದಾರಿದೀಪದಂತಿದ್ದವು. ದಾರಿ ತಪ್ಪಿದವರನ್ನು ಕೈ ಹಿಡಿದು ಸರಿದಾರಿಗೆ ತಂದು ನಿಲ್ಲಿಸಿದ ಉದಾಹರಣೆಗಳು ಸಾಕಷ್ಟಿವೆ. ಒಟ್ಟಾರೆ ಹಳೆಯ ಚಿತ್ರಗಳ ಕುರಿತು ಇಷ್ಟೆಲ್ಲಾ ನೆನಪಾಗಲು ಕಾರಣ ನನ್ನ ನೆಚ್ಚಿನ ಅಪರೂಪದ ಮೇರುನಟ ಡಾ. ರಾಜಕುಮಾರ ಅಗಲಿದ ದಿನ ಎಪ್ರಿಲ್ 12. ನಾನು ಅತೀ ಹೆಚ್ಚು ನೋಡಿದ್ದು ರಾಜಕುಮಾರವರು ನಟಿಸಿದ ಸಿನೇಮಾಗಳನ್ನೆ. ರಾಜಕುಮಾರ ಅಗಲಿದ ಮೇಲೆ ನಾನು ನೋಡಿದ ಚಿತ್ರ (ಪ್ರಾಯಶಃ ನಾಲ್ಕು ವರ್ಷಗಳ ಹಿಂದೆ) ‘ಪೃಥ್ವಿ’, ಪುನಿತ ರಾಜಕುಮಾರ ನಟಿಸಿದ ಈ ಚಿತ್ರ ಸಧ್ಯದ ಭ್ರಷ್ಟ ರಾಜಕೀಯ ಬಣ್ಣವನ್ನು ಬಯಲು ಮಾಡಿತ್ತು. ಕಾಕತಾಳಿಯವೇನೊ ಈ ಚಿತ್ರದ ನೆನಪು ನನಗಿನ್ನೂ ಹಸಿಯಾಗಿದ್ದಾಗಲೇ ಅಕ್ರಮ ಗಣಿಗಾರಿಕೆ ಒಂದು ರೀತಿಯಲ್ಲಿ ಅಂತ್ಯ ಕಂಡಿತು, ಗಣಿಧಣಿ, ಮಾಜಿ ಸಚಿವ ಜನಾರ್ಧನ ರೆಡ್ಡಿಯ ಭವಿಷ್ಯ ಏನಾಯಿತೆಂಬುದು ಜಗಕ್ಕೆಲ್ಲಾ ಗೊತ್ತಿದೆ.

ಅಣ್ಣಾವ್ರೆಂದೆ ಜನಪ್ರಿಯರಾದ ರಾಜಕುಮಾರ ತಮ್ಮ ಬದುಕಿನೂದ್ದಕ್ಕೂ ಬಣ್ಣ ಹಚ್ಚಿಕೊಂಡು ನಟಿಸಿದರೆ ಹೊರತು, ಯಾವುದೇ ಜಾತಿ, ಮತ, ಪಂಥ, ಪಕ್ಷಗಳ ಬಣ್ಣವನ್ನು ಯಾವತ್ತೂ ಹಚ್ಚಿಕೊಳ್ಳಲಿಲ್ಲ. ನನ್ನೂರಿನಲ್ಲಿದ್ದ (ಇಪ್ಪತೈದು ವರ್ಷಗಳ ಹಿಂದೆ) ‘ಡಾ. ರಾಜಕುಮಾರ ಅಭಿಮಾನಿಗಳ ಸಂಘ’ದ ಕ್ರೀಯಾಶೀಲ ಸದಸ್ಯನಾಗಿದ್ದ ಆ ಸಂದರ್ಭವನ್ನು ನಾನೀಗ ನೆನದುಕೊಂಡರೆ, ನಮ್ಮ ಸಂಘದ ರಾಜ್ಯಾಧ್ಯಕ್ಷರಿಗೆ ಒಂದು ನಿಗಮ ಮಂಡಳಿಯ ಅಧ್ಯಕ್ಷರಿಗಿಂತಲೂ ಹೆಚ್ಚು ಗೌರವ, ಜನಪ್ರಿಯತೆ ಇತ್ತು. ಇನ್ನು ಡಾ. ರಾಜ್‌ರವರ ಬಗ್ಗೆ ಜನರಿಗಿರುವ ಗೌರವ, ಅಭಿಮಾನ, ಪ್ರೀತಿ ಬಣ್ಣಿಸಲಸದಳ. ‘ಜನರಿಂದ ನಾನು ಮೇಲೆ ಬಂದೆ, ಜನರನ್ನೆ ನಾನು ದೇವರೆಂದೆ’ ಎಂಬ ಅದ್ಭುತ ಕಂಠಸಿರಿ ಈಗಲೂ ನನ್ನ ಸ್ಮೃತಿಪಟಲದಲ್ಲಿ ಸದಾ ಸುಳಿದಾಡುತ್ತಿದೆ. ಪ್ರೇಕ್ಷಕರನ್ನು ದೇವರೆಂದು ನಂಬಿ ಆರಾಧಿಸಿದ ಒರ್ವ ಅನನ್ಯ ಕಲಾವಿದ ಇಂದು ನಮ್ಮ ಮಧ್ಯೆ ಭೌತಿಕವಾಗಿ ಇರದಿದ್ದರೂ, ಅವರ ಅಭಿನಯ, ಕೋಗಿಲೆಯಂತಹ ಕಂಠ, ಸರಳ ಮತ್ತು ಸಾತ್ವಿಕ ಗುಣ ನಮ್ಮೊಡನೆ ಅಷ್ಟೆ ಅಲ್ಲ, ನಮ್ಮ ಮುಂದಿನ ಪೀಳಿಗೆಗೂ ಸದಾ ಹಸಿರಾಗಿಯೇ ಇರುತ್ತದೆ.

ರೈತ ಕುಟುಂಬದಲ್ಲಿಯೇ ಬೆಳೆದ ನನಗೆ ‘ಬಂಗಾರದ ಮನುಷ್ಯ’ ಚಿತ್ರದಲ್ಲಿಯ ಡಾ. ರಾಜ್‌ರವರ ಅಭಿನಯವನ್ನು ಮರೆಯಲು ಸಾಧ್ಯವೇ ಇಲ್ಲ. ನನ್ನ ದೃಷ್ಟಿಯಲ್ಲಿ ಡಾ. ರಾಜಕುಮಾರ ನಿಜಕ್ಕೂ ‘ಬಂಗಾರದ ಮನುಷ್ಯನೆ’. ರಾಜ್‌ರವರ ಕಾಲ ಘಟ್ಟದಲ್ಲಿದ್ದಂತಹ ಕಲಾವಿದರು, ಗೀತೆ ರಚನೆಕಾರರು, ನಿರ್‍ದೇಶಕರು, ಸಂಗೀತ ಸಂಯೋಜಕರೆಲ್ಲ ಮಹಾನ್ ಪ್ರತಿಭೆಗಳು, ಇವರೆಲ್ಲ ಸರ್ವಕಾಲಕೂ ಸ್ಮರಣಿಯರು. ಇತ್ತೀಚಿನ ಚಲನ ಚಿತ್ರಗಳ ಪೊಸ್ಟರ್‌ಗಳಲ್ಲಿಯ ಲಾಂಗ್, ಮಚ್ಚು, ಚೈನು, ರಕ್ತದ ಚಿತ್ತಾರಗಳನ್ನು ನೋಡಿ ನನ್ನ ಮನಸ್ಸು ಘಾಸಿಗೊಂಡಿದೆ. ಇನ್ನು ಚಿತ್ರಗಳನ್ನು ನೋಡಿದರಂತೂ ನನ್ನ ಸ್ಥಿತಿ ದೇವರೆ ಗತಿ. ಹಿಂದಿನ ಚಿತ್ರರಂಗಕ್ಕೂ ಇಂದಿನದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಒಟ್ಟಾರೆ ನಾವು ಕಂಡಿರುವ, ಕೇಳಿರುವ, ಉಂಡಿರುವ ಸುಖ ನಮ್ಮ ಮಕ್ಕಳಿಗಿಲ್ಲ. ಇನ್ನು ಮೊಮ್ಮಕ್ಕಳ ಭವಿಷ್ಯವಂತೂ ಆಯೋಮಯ.

 

– ಕೆ.ಬಿ.ವೀರಲಿಂಗನಗೌಡ್ರ, ಬಾಗಲಕೋಟ ಜಿಲ್ಲೆ.

8 Responses

 1. Rajarama Ramachandra says:

  K.B. Veeralingana goudra barediruvudu manmuttuvanthahadu. Very good message.

 2. nayana says:

  ನಮಸ್ತೆ,
  “ಡಾ. ರಾಜಕುಮಾರ ನಿಜಕ್ಕೂ ‘ಬಂಗಾರದ ಮನುಷ್ಯನೆ’. ರಾಜ್‌ರವರ ಕಾಲ ಘಟ್ಟದಲ್ಲಿದ್ದಂತಹ ಕಲಾವಿದರು, ಗೀತೆ ರಚನೆಕಾರರು, ನಿರ್‍ದೇಶಕರು, ಸಂಗೀತ ಸಂಯೋಜಕರೆಲ್ಲ ಮಹಾನ್ ಪ್ರತಿಭೆಗಳು, ಇವರೆಲ್ಲ ಸರ್ವಕಾಲಕೂ ಸ್ಮರಣಿಯರು. ”

  ಸರಿಯಾದುದನ್ನೇ ಹೇಳಿದ್ದೀರಿ….
  ಚೆನ್ನಾಗಿದೆ ಬರಹ …..

 3. ಸುರೇಖಾ ಭಟ್ ಭೀಮಗುಳಿ says:

  ನಮ್ಮೆಲ್ಲ ಮಕ್ಕಳಿಗೆ ಮುಖ್ಯವಾಗಿ ಹಳೆಯ ಚಲನ ಚಿತ್ರಗಳನ್ನು ನಾವಿಂದು ತೋರಿಸಬೇಕಿದೆ. – ಸರಿ… ಅವರು ನೋಡಲು ಸಿದ್ಧವಿರಬೇಕಲ್ಲ…. ನಮ್ಮನ್ನು ಅಡ್ಡ ದಾರಿಗೆ ಸೆಳೆಯುವುದಕ್ಕೇ ಆಗ ಬೇರಾವುದೇ ಮಾಧ್ಯಮಗಳಿರಲಿಲ್ಲ. ಆದರೆ ಈಗ ಹೊರಗಿನ ಆಕರ್ಷಣೆಗಳಾದ ಟಿವಿ, ಕಂಪೂಟರ್, ಮೊಬೈಲ್, ಇಂಟರ್ ನೆಟ್ ಗಳ ಪ್ರಪಂಚದಲ್ಲಿ ಬಿದ್ದು ಹೋಗಿರುವ ಮಕ್ಕಳನ್ನು ನಮ್ಮ ಕಾಲದ ಸಿನೆಮಾ ಲೋಕಕ್ಕೋ/ಉತ್ತಮ ಸಾಹಿತ್ಯ ಲೋಕಕ್ಕೋ ಕರೆದೊಯ್ಯುವುದು ಸವಾಲೇ ಸರಿ…. ಅಲ್ಲದೆ ಈಗಿನ ಸಿನೇಮಾಗಳನ್ನೂ ಅವರೇನೂ ಬಹಳ ಗಮನವಿರಿಸಿ ನೋಡುವುದಿಲ್ಲ…. ಅದಕ್ಕವರು ನಮ್ಮಂತೆ ಭಾವನಾತ್ಮಕವಾಗಿ ಸ್ಪಂದಿಸುವುದೂ ಇಲ್ಲ….. ಇನ್ನು ಅಲ್ಲಿರುವ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ದೂರವೇ ಉಳಿಯಿತು. ಅದಕ್ಕೆಲ್ಲ ಅವರ ಉತ್ತರ “ಕಾಲಹರಣ- ಖುಷಿ” ಅಷ್ಟೇ…. ಸಿನೆಮಾ ಬಿಟ್ಟು ಬೇರೆ ಬೇರೆ ದೃಶ್ಯ ಮಾಧ್ಯಮಗಳಾದ ನಾಟಕ, ಸಂಗೀತ, ನೃತ್ಯ, ಯಕ್ಷಗಾನ ಕಾರ್ಯಕ್ರಮಗಳಲ್ಲಿ ಅವರನ್ನು ತೊಡಗಿಸುವುದು, ಜೊತೆಗೆ ನಮ್ಮನ್ನೂ (ಕೊನೇ ಪಕ್ಷ ಪ್ರೇಕ್ಷಕರಾಗಿಯಾದರೂ) ತೊಡಗಿಸಿಕೊಳ್ಳುವುದು ಇನ್ನುಳಿದಿರುವ ದಾರಿ….

 4. Nishkala Gorur says:

  ಡಾ. ರಾಜ್ ಕುಮಾರ್ ಕಿ ಜೈ!!!!!!!!

 5. Ranganna Nadgir says:

  Nijawagiyoo Olleya Hagu Vicharaprachodaka Lekhana. Onderadu Dr Rajakumara Chitagalannu alawadisabekagttu,

 6. kumaragouda says:

  ಒಂದು ಪ್ರತಿಕ್ರಿಯೆ ಮತ್ತೊಂದು ಲೇಖನ ಬರೆಯಲು ಸ್ಫೂರ್ತಿ ಆಗುವುದು, ತನ್ನಿಮಿತ್ಯ ನನ್ನ ಲೇಖನ ಓದಿ ಅಭಿಪ್ರಾಯ ಹಂಚಿಕೊಂಡ ಎಲ್ಲರಿಗೂ ಅಭಿನಂದನೆಗಳು

 7. ಬಸವಾರಾಜ.ಜೋ.ಜಗತಾಪ says:

  ಹೌದು ಸರ್ ಇಂದಿನ ಚಿಕ್ಕ ವಯಸ್ಸಿನ ಮಕ್ಕಳು ಪ್ರೀತಿಸಿ ಓಡಿಹೋಗುವ ಚಿತ್ರಗಳನ್ನು ನೋಡಿ ಹಾಳದಾವರು ಎಷ್ಟೊ ಜನ.ನಿಮ್ಮ ಬರಹ ಬಹಳ ಅಮುಲ್ಯವಾದ ಮಾಹಿತಿ ನೀಡಿದೆ.ಇಂದಿನ ಯುವಜನತೆಗೆ “ಬಂಗಾರದ ಮನುಷ್ಯ” ಮತ್ತು “ದೇವತಾ ಮನುಷ್ಯ”ಎಂದು ನಮ್ಮ ಚಿಕ್ಕಪ್ಪನವರು ದಿನವೂ ಹೆಗಲ ಮೇಲೆ ಹೊತ್ತು ತರುವ ತಗಡಿನ ಕೊಡಗಳಿಗೆ ಡಾಂಬರಿನಿಂದ ಬರೆಸಿದ್ದು ನನಗೆ ನೆನಪಿದೆ.ಬಾಗಿಲ ಹತ್ತಿರ ಬಂದಾಗ ನಾನು ಅವರ ಹೆಗಲಮೆಲಿನ ಒಂದು ಕೊಡ ಇಳಿಸಬೇಕು ಆಗ ನಾನು ಬಂಗಾರದ ಮನುಷ್ಯನನ್ನು ಇಳಿಸಿದೆ ದೆವತಾ ಮನುಷ್ಯನನ್ನು ಇಳಿಸಿದೆ ಎನ್ನುತ್ತಿದ್ದೆ.ಅವರು ನಾಕಂಡ ಬಂಗಾರದ ಮನುಷ್ಯನಾದ ರೈತ. ಹಿಂತಾಹ ಬರಹಗಳಿಂದಾದರೂ ನಮ್ಮ ಯುವ ಜನತೆ ಎಚ್ಚೆತ್ತುಕೊಳ್ಳಲಿ…..

 8. sangeetha raviraj says:

  ತುಂಬಾ ಚೆನ್ನಾಗಿದೆ ಬರಹ

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: