ಬಾ ಮನ್ಮಥ…..
ಕಾಲಾತೀತನಿರಬಹುದು ನೀನು
ಅರವತ್ತರ ಬಳಿಕ ಮರಳಿ ಬಂದಿದ್ದೀಯಾ
ಏನವಸರವಿತ್ತು ನಿನಗೆ?
ಹೊತ್ತು ಗೊತ್ತು ಬೇಡವೆ;
ನನಗೀಗ ವಾನಪ್ರಸ್ಥದ ಸಮಯ!
ಅರವತ್ತರ ಹಿಂದೆ ನೀನು ಬಂದಾಗ
ನಾನಿನ್ನು ತೊಟ್ಟಿಲ ಕೂಸು
ಸ್ಪರ್ಶಕ್ಕೆ ಮುದಗೊಳ್ಳುವ ತವಕ ನನಗೆ
ಮುಂದೆ.., ಹೇಳುವುದಕ್ಕೆ ಬಹಳಷ್ಟಿದೆ,
ಬೇಡ ಬಿಡು, ಹಳೆಯ ಕಥೆ ಯಾಕೀಗ?
ಮುಕ್ಕಣ್ಣನ ಕಣ್ಣುರಿಗೆ ಭಸ್ಮವಾಗಿ
ಅಂಗ ಅಂಗಗಳಲ್ಲಿ ಅನಂಗನಾಗಿ
ಎಂಥೆಂಥವರನ್ನೋ ಕಾಡಿ
ಪುರಾಣ, ಇತಿಹಾಸ ಕತೆಗಳಾಗಿಸಿದ
ನೀನೊಬ್ಬ ದೊಡ್ಡ ಕತೆಗಾರ!
ಕಬ್ಬಿನ ಜಲ್ಲೆಯ ಬಿಲ್ಲಾಗಿಸಿ
ಮಾಮರನ ತಳಿರ ಚಾಪವಾಗಿಸಿ
ಕೊಬ್ಬಿದ ಜವ್ವನಿಗರ ಎದೆಗೆ ಹೂಡಿ
ಹೊಸತೊಂದು ಪ್ರೇಮ ಕಥೆಗೆ
ಮುನ್ನುಡಿ ಬರೆಯುವವ ನೀನು!
ನಿನ್ನ ಶರದ ಉರಿಗೆ ಸೋತವರಿಗೆ
ಸಾಂತ್ವನ ನೀಡಿದ್ದು ಶೃಂಗಾರಶಯ್ಯೆ!
ತಪ್ಪು ಒಪ್ಪುಗಳ ಲೆಕ್ಕ ಯಾರಿಗೆ ಬೇಕು ಹೇಳು?
ಕೂಡುವಿಕೆಯಲ್ಲಿ ಕಳೆದದ್ದೆಷ್ಟು, ಪಡೆದದ್ದೆಷ್ಟು
ಅದು ಅವರವರಿಗೇ ಗೊತ್ತು!
ಶೃಂಗಾರಕ್ಕೊದಗುವವ ನೀನು
ವಸಂತವೊಂದೇ ಏಕೆ?
ಋತುಗಳನುಕೂಲವಿದ್ದರೆ
ರತಿಯೋ, ಆತ್ಮರತಿಯೋ
ನಡೆಯಲಿ ನಿನ್ನಾಟ ಅನವರತ!
‘ಪರ’ದ ಚಿಂತನೆಗೆ ಕಣ್ಮುಚ್ಚಿ ಕುಳಿತಾಗ
ಧುತ್ತೆಂದು ಎದುರು ನಿಲ್ಲುವ ಇಹದ ವ್ಯಾಮೋಹ
ನನ್ನೊಳಗೆ ಅವಿತಿರುವ ನಿನ್ನನ್ನು
ಹಿಡಿ ಬೂದಿಯಾಗಿಸಿ, ಆಗಬೇಕೆಂದಿದ್ದೇನೆ
ಶಿವೋಹಂ ಶಿವೋಹಂ ಶಿವೋಹಂ
,
– ‘ಮಾಳವ’ , ದಿವಾಕರ ಡೋಂಗ್ರೆ ಎಂ.
ಅರ್ಥಪೂರ್ಣ ಕವನ ..ಇಷ್ಟವಾಯಿತು.
ಒಳ್ಳೆಯ ವಾಕ್ಯಗಳು
ಧನ್ಯವಾದಗಳು
ಕವನದ ಕುರಿತಂತೆ ನಿಮ್ಮ ಅನಿಸಿಕೆಗಳಿಗಾಗಿ ಧನ್ಯವಾದಗಳು. ಕನ್ನಡವನ್ನು ಉಳಿಸುವ ಕೆಲಸದಲ್ಲಿ ನಾವೆಲ್ಲರೂ ಒಟ್ಟಿಗೆ ಇರೋಣ.
ಮನ್ಮಥನ ಬಗ್ಗೆ ನಿಮ್ಮ ಅನಿಸಿಕೆ ಬಹಳ ಹೊಂದಾಣಿಕೆ ಯಾಗಿದೆ.