“ಮೊಳೆ ಹೊಡೆಯೋದಕ್ಕೂ ಕೆಪ್ಯಾಸಿಟಿ ಬೇಕು !”
ನನಗೆ “ತಲೆ ಕೊರೆಯೋದು” ಹೇಳಿದರೆ ಭಯಂಕರ ಇಷ್ಟ ! ನನ್ನ ಈ “ಇಷ್ಟ” ಸಾಕಷ್ಟು ಜನಕ್ಕೆ “ಸಂಕಷ್ಟ” ಅಂತ ನನಗೂ ಗೊತ್ತು. ಆದ್ರೆ ಯಾರಿಗೋ ಕಷ್ಟ ಆಗತ್ತೆ ಹೇಳಿ ನನ್ನ ಇಷ್ಟನ ಬಿಡೋದಕ್ಕೆ ಆಗುತ್ತಾ ?
ಚಿಕ್ಕವಳಿರುವಾಗ ಅಮ್ಮನ ತಲೆ ಕೊರೆದುಕೊಂಡಿದ್ದೆ. ಪಾಪದ ಅಮ್ಮ ನನ್ನ ಪ್ರಶ್ನೆಗಳಿಗೆಲ್ಲ ಉತ್ತರ ಕೊಡೋದಕ್ಕೆ ಆಗದೆ, ಒಂದು ಬೆಲ್ಲದ ಉಂಡೆ ಕೈಗೆ ಕೊಟ್ಟು, ಸಾಗಹಾಕಿಕೊಂಡಿದ್ರು ! ಮತ್ತೆ ನನ್ನನ್ನು ಶಾಲೆಗೆ ಅಟ್ಟಿದ ಮೇಲೆ, ತಲೆ ಕೊರೆಸಿಕೊಳ್ಳೋದಕ್ಕೆ ಗೆಳೆಯ-ಗೆಳತಿಯರು ಸಿಕ್ಕಿದರು. ಕಿರಿಯ ಪ್ರಾಥಮಿಕ ಶಾಲೆಯ ನನ್ನ ಜೊತೆಗಾರರು ನನ್ನ ತಲೆ ಕೊರೆತಕ್ಕೆ ಎಷ್ಟು ಹೊಂದಿಕೊಂಡರು ಗೊತಿದ್ಯಾ ? ನಾನು ಮಾತಾನಾಡದೆ “ಠೂ” ಬಿಟ್ಟರೆ, ಕಡ್ಡಿ (ಬಳಪ) ಕೊಟ್ಟು ರಾಜಿ ಮಾಡಿಕೊಳ್ತಾ ಇದ್ದರು. ನನಗೆ ಸರೀ ನೆನಪಿದೆ ! “ರಾಘವೇಂದ್ರ” ಹೆಸರಿನ ಒಬ್ಬ ಸಹಪಾಠಿ ಇದ್ದ. ಬಳಪಕ್ಕೆ ಬೇಕಾಗಿ ನಾನು ದಿನಾ ಅವನ ಜೊತೆ “ಠೂ” ಬಿಡ್ತಾ ಇದ್ದೆ. ಶಾಲೆ ಬಿಟ್ಟು ಮನೆಗೆ ಹೋಗುವಾಗ ಅವನತ್ರ ಇರ್ತಾ ಇದ್ದ ಎಲ್ಲ ಬಳಪ ನನಗೆ ಕೊಟ್ಟು, ರಾಜಿ ಮಾಡಿಕೊಂಡು ಮನೆಗೆ ಹೋಗ್ತಾ ಇದ್ದ. ಪಾಪ ! ಎಷ್ಟು ಸರ್ತಿ ಮನೇಲಿ ಬೈಸಿಕೊಂಡನೊ ಎಂಥದೊ ? ಸ್ಲೇಟಿಲಿ ಬರೆಯುವಷ್ಟು ದಿನವೂ ನಾನು ಬಳಸಿದ್ದು ರಾಘವೇಂದ್ರ ಕೊಟ್ಟ ಬಳಪವನ್ನೆ ! ಬಳಪಕ್ಕಾಗಿ ಅಪ್ಪನನ್ನು ಕೇಳಿದ ನೆನಪೇ ಇಲ್ಲೆ ! ಮೊನ್ನೆ ಊರಿಗೆ ಹೋಗಿದ್ದಾಗ ರಾಘವೇಂದ್ರನನ್ನು ಮಾತನಾಡಿಸಿ “ಸ್ಸಾರಿ” ಕೇಳಿ ಬಂದೆ !!!
ಮತ್ತೆ ಮಾಧ್ಯಮಿಕ ಶಾಲೆಗೆ ಬಂದ ಮತ್ತೆ, ನಾನೇ ತರಗತಿಯಲ್ಲಿ ಲೀಡರ್. ಹಾಗೆ ನನ್ನ ಚಾಳಿಗೆ ಯಾರಿಂದಲೂ ಉಪದ್ರ ಬರಲಿಲ್ಲ ! ಏಳನೇ ತರಗತಿಯಲ್ಲಿದ್ದಾಗ, ನಾನು ಶಾಲೆಗೆ ಹೋಗದಿದ್ದ ದಿನ ಲೀಡರ್ ಸೆಲೆಕ್ಟ್ ಮಾಡಿದ್ದು…. ಮರುದಿನ ಮಾತನಾಡಿದವರ ಲಿಸ್ಟ್ ನಲ್ಲಿ ನನ್ನ ಹೆಸರೆ ಮೊದಲು ಇದ್ದದ್ದು….. ಮುಖ್ಯೋಪಾಧ್ಯಾಯರು ನನಗೆ ಬೆತ್ತದ ರುಚಿ ತೋರ್ಸಿದ್ದು…… ಎಲ್ಲ ಹೇಳಿದರೆ ನನ್ನ ಮರ್ಯಾದಿಯೆ ಹೋಗೋದು. ಅಲ್ಲವಾ ?
ಹಿರಿಯ ಪ್ರಾಥಮಿಕ ಶಾಲೆಯ ಜೀವನವೂ ನನ್ನ ಇಷ್ಟಕ್ಕೆ ಪೂರಕವಾಗಿಯೆ ಇತ್ತು ! ಭಾಷಣ-ಚರ್ಚಾಸ್ಪರ್ಧೆಗಳು ನನ್ನ ಚಾಳಿಗೆ ಹೊಸ ವೇದಿಕೆ ಆದದ್ದು – “ಮಾತಿನ ಮಲ್ಲಿ” ಬಿರುದು ಸಿಕ್ಕಿದ್ದು – ನಾನು ಖುಷಿಯಿ೦ದಲೆ “ಬಿರುದು ಸ್ವೀಕಾರ” ಮಾಡಿದ್ದು – ಎಲ್ಲವು ಹೈಸ್ಕೂಲ್ ಜೀವನದ ಸವಿಸವಿ ನೆನಪು !
ಮತ್ತೆ ಕೆಲಸಕ್ಕೆ ಸೇರಿದ ಮೇಲೆ ಆಗಿದ್ದು ಬೇರೆಯೇ ಕತೆ. ಸಹೋದ್ಯೋಗಿಗಳ ಜೊತೆ ಪಟ್ಟಾಂಗ ಹೊಡೆಯುತ್ತಿದ್ದ ನನ್ನನ್ನು ನೋಡಿದ ಬಾಸ್, ನನ್ನನ್ನು ತನ್ನ ಛೇಂಬರ್ ಗೆ ಕರೆಸಿಕೊಂಡದ್ದು….. “ಸರಿ ಇನ್ ಮೇಲೆ ಮಾತಾಡಲ್ಲ” ಅಂತ ಬಾಸ್ ಎದುರು ನಾನು ಶಪಥ ತೊಟ್ಟದ್ದು….. ನಾಲ್ಕು ದಿನದಲ್ಲಿ ಮತ್ತೆ ಬಾಸ್ ನನ್ನನ್ನು ಛೇಂಬರ್ ಗೆ ಬರಹೇಳಿ “ನೀವು ಸೈಲೆಂಟ್ ಆಗಿಬಿಟ್ರೆ ಆಫೀಸ್ ಗೆ ಕಳೆನೇ ಇಲ್ಲ” ಅಂದದ್ದು !…. ಬಾಸ್ “ಸನ್ಯಾಸಿ ಬೆಕ್ಕಿನ ಕತೆ” ಹೇಳಿದ್ದು… ಯಾವುದದು ಕತೆ ಅಂದ್ರಾ ? ಹೇಳ್ತೀನಿ ಕೇಳಿ…. ಒಂದು ಬೆಕ್ಕು ಇತ್ತಂತೆ. ಒಂದಿನ “ನಾನಿನ್ನು ಪ್ರಾಣಿ ಹಿಂಸೆ ಮಾಡೋಲ್ಲ, ಇಲಿ ಬೇಟೆ ಆಡಲ್ಲ” ಅಂತ ಶಪಥ ತೊಟ್ಟಿತಂತೆ. ದಿನ ದಿನಕ್ಕೆ ಇಲಿಗಳ ಸಂಖ್ಯೆ ಏರಿದ್ದೇ ಏರಿದ್ದು… ಬೆಕ್ಕಿನ ಮೈ ಮೇಲೆ ಬಂದು ಕುಳಿತುಕೊಳ್ಳುವಷ್ಟು ಧೈರ್ಯ ಇಲಿಗಳಿಗೆ ಬಂದುಬಿಟ್ಟಿತು. “ಹೀಗೇ ಆದ್ರೆ ಜಗತ್ತಿನ ತುಂಬ ಇಲಿಗಳೇ ತುಂಬಿ ಬಿಡ್ತಾವೆ. ದೇವರ ಸೃಷ್ಠಿ ಏರುಪೇರಾಗಿ ಬಿಡುತ್ತೆ. ಇಲಿಯನ್ನು ಬೇಟೆಯಾಡುವುದೇ ನನ್ನ ಧರ್ಮ” ಎಂದು ಬೆಕ್ಕಿಗೆ ಜ್ಞಾನೋದಯವಾಯಿತು. ಮತ್ತೆ ಇಲಿ ಬೇಟೆ ಆರಂಭಿಸಿಯೇ ಬಿಟ್ಟಿತು ಬೆಕ್ಕು.- ಹಾಗೊಂದು ಕತೆ ಬಾಸ್ ಹೇಳಿದ್ದು. ಯಾವುದಾದರೂ ಆಫೀಸ್ ನಲ್ಲಿ ಬಾಸ್ ಹೀಗೆ ತನ್ನ ಉದ್ಯೋಗಿಯನ್ನು ಕರೆದು ಕತೆ ಹೇಳಿದ್ದು ನೀವು ಕೇಳಿದ್ದೀರಾ ? ಇದು ಸತ್ಯವಾಗಿಯೂ ನಡೆದ ಘಟನೆ !
ನನ್ನ ಮಗ ” ಮೊಳೆ ಹೊಡೆಯೋದಕ್ಕೆ ” ಶುರು ಮಾಡಿದಾಗ, ಮೊಳೆ ಹೊಡೆಸಿಕೊಳ್ಳುವವರ ಕಷ್ಟದ ಅರಿವು ನನ್ನ ಅನುಭವಕ್ಕೆ ಬಂದದ್ದು ! ತುಂಬಾ….. ಕಷ್ಟ ಬಿದ್ದು, ಈಗ ನನ್ನ ಚಾಳಿಯ ಹಿಡಿತಕ್ಕೆ ತಂದಿದ್ದೀನಿ. ಈಗ ನಾನೇ ಯಾರ ತಲೆಗೂ ಮೊಳೆ ಹೊಡಿಯೋದಕ್ಕೆ ಹೋಗೋಲ್ಲ – ಅವರಾಗಿಯೇ ಬಂದಾಗ – ಸಿಕ್ಕಿದ ಅವಕಾಶ ಬಿಟ್ಟು ಕೊಡೋದೂ ಇಲ್ಲ. ಅಂಥಾ ಸ೦ದರ್ಭದ ಅನುಕೂಲಕ್ಕಾಗಿಯೇ ಅನಾಸಿನ್ – ಅಮೃತಾಂಜನ್ ಜೊತೆಲಿ ಇಟ್ಟುಕೊಂಡಿರ್ತೀನಿ.
ಚಿಕ್ಕವಳಿರುವಾಗ “ಪಟ್ ಪಟಾಂತ ಏನ್ ಚೆನ್ನಾಗಿ ಮಾತಾಡ್ತಾಳೆ ಹುಡುಗಿ !” ಎಂದು ಹೇಳಿದ ಜನಗಳೇ, ಈಗ “ಏನ್ ವಟವಟಾಂತ ಮಾತಾಡ್ತಾಳೆ “ ಹೇಳಿ ಮೂಗುಮುರಿತಾರೆ. ವಾಚಾಳಿ- ವಟಸುಬ್ಬಿ ಮುಂತಾದ ಬಿರುದನ್ನೂ ಕೊಡ್ತಾರೆ. ಎದುರಿಂದ “ನೀವು ಬಿಡೀಪ್ಪಾ. ಕಲ್ಲನ್ನೂ ಕುಟ್ಟಿ ಮಾತಾಡಿಸ್ತೀರ” ಹೇಳಿ ಹೊ(ತೆ)ಗಳುವ ಜನ ಹಿಂದಿನಿಂದ “ಅವಳ ಬಾಯಿ ಬೊಂಬಾಯಿ” ಅಂತ ವ್ಯಂಗ್ಯ ಮಾಡ್ತಾರೆ. ಯಾರು ಏನು ಹೇಳಿದ್ರೆ ನನಗೇನು ? ನಾನಂತು ನನ್ನ ಚಾಳಿ ಜೊತೆಲಿ ಸುಖ(?)ವಾಗಿ ಇದ್ದೀನಿ !
ನನ್ನ ತಲೆ ತಿನ್ನುವ ರೀತಿಯಲ್ಲು ಗಮ್ಮತ್ತಿದೆ ! ತೀರ ವ್ಯಾವಹಾರಿಕ ಜನಗಳ ಜೊತೆ ಆಧ್ಯಾತ್ಮದ ಬಗ್ಗೆ, ತೀರ ಆಸ್ತಿಕರ ಜೊತೆ ಪ್ರಾಪಂಚಿಕ ವಿಷಯಗಳ ಬಗ್ಗೆ ಕೊರಿತೀನಿ. ಅವರು “ಸಾಕಪ್ಪಾ ಇವಳ ಸಹವಾಸ” ಹೇಳಿ ಎದ್ದು ಹೋದರೆ. ಆಗ ನನಗೆ ಭಯಂಕರ ಖುಷಿ ಆಗತ್ತೆ ! ಅವರಿಗೆ ಇಷ್ಟ ಇರುವ ವಿಷಯ ಬಿಟ್ಟು, ಉಳಿದ ವಿಷಯದ ಬಗ್ಗೆ ಕೊರೆಯೋದಕ್ಕೆ ತುಂಬ ಖುಷೀ ಆಗುತ್ತೆ ! ಬೇರೇನೂ ವಿಷಯ ಸಿಕ್ಕದಿದ್ರೆ “ಯುವ ಬ್ರಿಗೇಡ್” ಬಗ್ಗೆ ಬೇಕಾದ್ರೂ ಒಂದು ಗಂಟೆ ಕೊರೀತೀನಿ ! ಅದು ನನ್ನ ಕೆಪ್ಯಾಸಿಟಿ !! (??) ಹೂಂ ಮತ್ತೇ …….. ಮೊಳೆ ಹೊಡೆಯೋದಕ್ಕೂ ಕೆಪ್ಯಾಸಿಟಿ ಬೇಕು !
ಒಂದು ವಿಷಯದಲ್ಲಿ ತುಂಬ ಹುಶಾರಾಗಿರ್ತೀನಿ. ಯಾವದು ಗೊತಿದ್ಯಾ ? ನನಗಿಂತ ದೊಡ್ಡ ಬ್ಲೇಡ್ ಪಾರ್ಟಿ ಎದುರಿಗೆ ಬಂತು ಅಂತ ಗ್ರಹಿಸಿಕೊಳ್ಳಿ. ಬಾರೀ ಬ್ಯುಸಿ ಇರುವವರ ಹಾಗೆ ನಾಟಕ ಮಾಡಿ ತಪ್ಪಿಸಿಕೊಂಡು ಬಿಡ್ತೀನಿ ! ನನ್ನ ತಲೆ ಮಾತ್ರ ಕೊರೆಸಿಕೊಳ್ಳೋಲ್ಲ.
ಈಗ ನೋಡಿ ಎಷ್ಟು ಚಂದಕ್ಕೆ ನಿಮ್ಮ ತಲೆ ಕೊರೆದೆ ? ಅನಾಸಿನ್ – ಅಮೃತಾಂಜನ್ ರೆಡಿ ಇದೆ. ಬೇಕಾ ?
– ಸುರೇಖಾ ಭಟ್, ಭೀಮಗುಳಿ
ಹ್ಹ ಹ್ಹ ಹ್ಹ! 😀 ಬೆಳ್ಳಂಬೆಳಗ್ಗೆಯೇ ಮೊಳೆ ಹೊಡೆಸಿಕೊಂಡು ಖುಷಿ ಆಯಿತು..! 😉 ಸೂಪರ್! 🙂
ಸುತ್ತಿಗೆ ಇಲ್ಲದಿದ್ದರೂ ಪರವಾಇಲ್ಲ, ಕೆಪ್ಯಾಸಿಟಿ ಬೇಕು 🙂 !
ಮೊಳೆ ಹೊಡೆಸ್ಕೊಳೋಕೆ ಕೂಡ ಏನು ಕಡಿಮೆ ಕೆಪ್ಯಾಸಿಟಿ ಬೇಕಾಗಿಲ್ಲ. ಲೇಖನ ಚೆನ್ನಾಗಿದೆ.
ಈ ಗರಗಸ ,ಭೈರಿಗೆ ಎಲ್ಲಾ ಇದೇ ಪೇಟಂಟ್ನಲ್ಲೇ ಬರುತ್ತಾ?
ಮೊಳೆಹೊಡೆಯುವ ಕೆಲಸ ಹುಟ್ಟಿನಿಂದಲೇ ಬರುವಂಥದ್ದು. ಮತ್ತೆ ಕಲಿತರೂ ಬರುವಂಥದ್ದಲ್ಲ ಎಂಬ ಅರಿವು ಇದೆ. ಏಕೆಂದರೆ ನನಗೆ ಹುಟ್ಟಿನಿಂದ ಆ ಸಾಮರ್ಥ್ಯ ಬರಲೇ ಇಲ್ಲ! ನಿಮ್ಮ ಈ ಅಸಾಧಾರಣ ಸಾಮರ್ಥ್ಯಕ್ಕೆ ಒಂದು ಸಲಾಮ್!