ವ್ಯಕ್ತಿ, ಕುಟುಂಬ ಹಾಗೂ ಸಮಾಜದ ಆರೋಗ್ಯ ರಕ್ಷಣೆಯಲ್ಲಿ, ನಾವೆಲ್ಲ ಮೂರು ಮುಖ್ಯ ಸೂತ್ರಗಳನ್ನು ಪಾಲಿಸಬೇಕು. ಯಾವುವು ಅವು ಎಂಬ ಕುತೂಹಲ ನಿಮ್ಮಲ್ಲಿ ಇದೆಯೇ ? ಓದಿದ ಮೇಲೆ “ಅಯ್ಯೋ ಇಷ್ಟೇನಾ ನಂಗೆ ಅರ್ಥವಾಯ್ತು” ಅಂತಾನೋ, “ನನಗೆ ಇವೆಲ್ಲವುಗಳ ನಡುವೆ ಒಂದು ಕೊಂಡಿ ಇದೇಂತಾನೇ ಗೊತ್ತಿರಲಿಲ್ಲ” ಅಂತಾನೋ ಹೇಳ್ತಾ, “ಇವನ್ನ ಸದಾ ಪಾಲಿಸಲು ಆಗುತ್ತಾ ಆಗೋಲ್ಲಾರೀ” ಅಂತಾ ಮೂಗು ಮುರೀಬಹುದು. ಆದರೆ ಗಮನವಿಟ್ಟು ನೀವು ಓದಿದೆ, ಆ ಕೊಂಡಿ ಅರ್ಥ ಮಾಡಿಕೊಂಡ್ರೆ, ಇವನ್ನ ಪಾಲಿಸಿದ್ರೆ, ನಾವು ನೀವೆಲ್ಲಾ ಖಂಡಿತ ಉತ್ತಮ ಆರೋಗ್ಯ ಹೊಂದಿ, ಬೇನೆಯ ನರಳುವಿಕೆಯಿಲ್ಲದೇ, ಬಾನಿನ ಶುಭ್ರ ಮೋಡದಂತೆ, ಸದಾ ಆರೋಗ್ಯದ ಹೊಳೆ ಹೊಳೆವ ದೇಹ, ಮುಖ, ಕಣ್ಣುಗಳು, ಮನಸು, ಎಲ್ಲ ಹೊಂದಬಹುದು ಅಂತ, ಈ ಆಕ್ಬ್ರನ ಖಾತ್ರಿ ಅನಿಸಿಕೆ. ಪ್ರತೀ ವರ್ಷ ಜುಲೈ ೧ ರಂದು. ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಎರಡು, ರಾಷ್ಟ್ರ ಮಟ್ಟದಲ್ಲಿ ನಡೆಯುವ ಒಂದು ಆಚರಣೆ, ಹಾಗೂ ಜುಲೈ ೧೦ ರಂದು ಮೌಂಟೇಲ್‌ಲ್ಲಿ ನಡೆಯುವ ಒಂದು ಚಟುವಟಿಕೆ, ಇವುಗಳನ್ನು ಕೊಂಚ ವಿವರವಾಗಿ ಗಮನಿಸಿದರೆ, ಬಹುಶಃ ನಿಮಗೆ ಇದು ಮನವರಿಕೆಯಾಗುತ್ತದೆ.
ನನ್ನ ದೃಷ್ಟಿಯಲ್ಲಿ, ಆರೋಗ್ಯವೆಂದರೆ ದೇಹ ಮನಸ್ಸು ಆತ್ಮಗಳ ಸಂಪೂರ್ಣ ಸಂಯೋಜಿತ ಸಮಸ್ಥಿತಿ. ಪ್ರತಿನಿತ್ಯದ ದಿನಚರಿ, ತೆಗೆದುಕೊಳ್ಳುವ ಆಹಾರ, ನಿದ್ರಾ ಸಮಯ, ಆಹಾರ ಜೀರ್ಣವಾಗುವುದು, ದೇಹದ ಗಾತ್ರ-ತೂಕ ಹೆಚ್ಚಾಗುವುದು/ ಕಡಿಮೆ ಆಗುವುದು, ಕೆಲಸ-ವಿಶ್ರಾಂತಿಗಳ ಸಮತೋಲನ, ಹವ್ಯಾಸಗಳು, ಚಟಗಳು, ಇವೆಲ್ಲ ವ್ಯಕ್ತಿಯ ಆರೋಗ್ಯದ ಮೇಲೆ ಪರಿಣಾಮ ಬೀರುವ ಅಂಶಗಳು, ಕುಟುಂಬದಲ್ಲಿ, ತಂದೆ-ತಾಯಿ, ಮಕ್ಕಳು, ಗಂಡ-ಹೆಂಡತಿ, ನಡುವಿನ ಭಾವನಾತ್ಮಕ ಹಾಗೂ ಲೈಂಗಿಕ ಸಂಬಂಧ, ಸೋದರ-ಸೋದರಿಯರ ಅನುಬಂಧ, ವಾಸಸ್ಥಳ, ಬಯಸುವ ಹಾಗೂ ನಿಜವಾಗಿಯೂ ಸಿಕ್ಕಿರುವ ಸೌಲಭ್ಯಗಳ ನಡುವಿನ ಅಂತರ, ಅವರ ನಡುವಿನ ಭಾವನಾತ್ಮಕ ಕ್ರಿಯೆ-ಪ್ರತಿಕ್ರಿಯೆಗಳು, ಕುಟುಂಬದ ಆರೋಗ್ಯದ ಮೇಲೆ ಪರಿಣಾಮ ಮಾಡುತ್ತವೆ. ವ್ಯಕ್ತಿ-ಕುಟುಂಬದ ಸ್ಥಿತಿ ಸಂಬಂಧಗಳು, ಅವರು ಪಾಲಿಸುವ ಸಮಾಜದ ನಿಯಮಗಳು, ತಪ್ಪು / ಅಪರಾಧಗಳು ಇವುಗಳ ಮೇಲೆ ಸಾಮಾಜಿಕ ಆರೋಗ್ಯ ಅವಲಂಬಿಸಿದೆ. ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯ ರಕ್ಷಣೆಗೆ, ನನ್ನ ದೃಷ್ಟಿಯಲ್ಲಿ, ಸದಾ ನಗುನಗುತ್ತ ಜೀವನದ ಪ್ರತಿ ಹೆಜ್ಜೆ ಇಟ್ಟರೆ, ನಕ್ಕು ಬಾಳಿದರೆ, ನಗಿಸಿ ಬಾಳಿದರೆ, ಜೀವನ ನಂದನವನವಾಗುತ್ತದೆ. ವಿಜ್ಞಾನಿಗಳು, ವೈದ್ಯರು ಹೇಳುವಂತೆ, ಅಳು, ಕೋಪ, ಇವುಗಳಿಗಿಂತ, ನಕ್ಕಾಗ ಮುಖದ ಹೆಚ್ಚು ಸ್ನಾಯುಗಳು ಚಲಿಸಿ ಆರೋಗ್ಯ ಉತ್ತಮವಾಗುತ್ತದಂತೆ.
ತಮಿಳು ಗಾದೆಯಂತೆ ‘ನಕ್ಕು ಬಾಳಿ ನಗಿಸಿ ಬಾಳಿ ಆದರೆ ನಗೆ+ಗೀಡಾಗಿ ಬಾಳಬೇಡಿ’.
ಇದೇ ನನ್ನ ಮೊದಲ ಸೂತ್ರ-‘ನಕ್ಕರೆ ಅದೇ ಸ್ವರ್ಗ’. ಏಪ್ರಿಲ್ ವರ್ಷ ವಿಶ್ವ ಮೂರ್ಖ ದಿನಾಚರಣೆ ಆಚರಿಸಿದರೆ, ಜುಲೈ ೧ ರಂದು ಅಂತರ್ ರಾಷ್ಟ್ರೀಯ ಹಾಸ್ಯ ಚಟಾಕಿಗಳ ದಿನಾಚರಣೆ ಆಚರಿಸುತ್ತಾರೆ. ಅಂದು ಸ್ನೇಹಿತನನ್ನು ಆಹ್ವಾನಿಸಿ ನಗೆಹನಿ ಹೇಳಿದರೆ, ಹಾಸ್ಯ ಪುಸ್ತಕದಿಂದ ಹಾಸ್ಯ ಚಟಾಕಿ ಓದಿ, ಸಾಮೂಹಿಕವಾಗಿ ನಗಬಹುದು. ಈಗ ನಗುವಿನ ಮಹತ್ವದ ಬಗ್ಗೆ ಓದಿ. ಡಿ.ವಿ.ಜಿ. ಅವರು ಮಂಕುತಿಮ್ಮನ ಕಗ್ಗದಲ್ಲಿ. ‘ನಗುವು ಸಹಜದ ಧರ್ಮ, ನಗಿಸುವುದು ಪರಧರ್ಮ, ನಗುವ ಕೇಳುತ ನಗುವದತಿಶಯದ ಧರ್ಮ’ ಎಂದು ಹೇಳಿದ್ದಾರೆ. ಭಾರತೀಯ ಜೀವನದರ್ಶನ, ಕಾವ್ಯ, ಪುರಾಣ, ನಾಟಕಗಳಲ್ಲಿ ಹಿಂದಿನಿಂದ ನವರಸಗಳು, ಅದರಲ್ಲೂ ಹಾಸ್ಯ ರಸಕ್ಕೆ ಮಹತ್ವ ಕೊಟ್ಟಿದ್ದಾರೆ.
ನನ್ನ ಎರಡನೇ ಸೂತ್ರ ‘ಸಸಿಗಳನ್ನು ನೆಡಿ, ಗಿಡ, ಮರ ಕಡಿಯದೇ ರಕ್ಷಿಸಿ’ .
ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ಪರಿಸರ, ವಾತಾವರಣ, ಸ್ವಚ್ಛವಿಡಬೇಕು. ಇದಕ್ಕಾಗಿ 1 ಜೂನ್ 5 ರಂದು, ವಿಶ್ವ ಪರಿಸರ ದಿನ, ಜುಲೈ 1 ರಂದು ವನಮಹೋತ್ಸವ, ಆಚರಿಸುತ್ತೇವೆ. ಶಾಲೆ, ಕಾಲೇಜು ಮಕ್ಕಳು, ಯುವಕ ಗುಂಪುಗಳ ಯುವಕರು, ಸ್ವಯಂಸೇವಾ ಸಂಘಗಳ ಸದಸ್ಯರು, ರಾಷ್ಟ್ರೀಯ ಸ್ವಚ್ಛತಾ ಅಭಿಯಾನದಲ್ಲಿ ಪೌರಕಾರ್ಮಿಕರು, ಸರಕಾರಿ ಹಾಗೂ ಖಾಸಗಿ ಉದ್ಯೋಗಿಗಳು, ಸಾಫ್ಟ್ವೇರ್ ಕ್ಷೇತ್ರದ ಯುವಜನ, ಕೈಗೂಡಿಸುತ್ತಿದ್ದಾರೆ. ಜೀವನ ಪರ್ಯಂತ ಲಕ್ಷಾವಧಿ ಸಸಿ ನೆಟ್ಟು, ನೀರೆರೆದು, ಕಾಪಾಡಿದ, ಸಾಲುಮರದ ತಿಮ್ಮಕ್ಕ, ಜೀವನಪೂರ್ತಿ 30 ವರ್ಷ 1 ಲಕ್ಷ ಸಸಿ ನೆಟ್ಟು, ನಿತ್ಯ ನೀರೆರೆದು ಪೋಷಿಸಿ, ಈಗ ಮತ್ತೆ 1 ಲಕ್ಷ ಸಸಿ ನೆಡುವ ಕಾಯಕ ಆರಂಭಿಸಿರುವ, ಉತ್ತರ ಕರ್ನಾಟಕದ ಖ್ಯಾತ ವೈದ್ಯರು ಇವರನ್ನು ಮರೆಯಲು ಸಾಧ್ಯವೇ? ಖ್ಯಾತ ಪರಿಸರವಾದಿ ಹಾಗೂ ಸಾಹಿತಿ ಪೂರ್ಣಚಂದ್ರ ತೇಜಸ್ವಿ, ಭದ್ರಾವತಿ ಆಕಾಶವಾಣಿಯ ನನ್ನ ಕಾಡಿನ ಕಥೆ ಮಾಲಿಕೆಗಾಗಿ ಹೇಳಿದ್ದಂತೆ, ಆಮ್ಲಜನಕ ಕೊಟ್ಟು, ಇಂಗಾಲ ಆಮ್ಲ ಪಡೆದು, ಪರಿಸರ ರಕ್ಷಿಸಿ, ಮಣ್ಣಿನ ತೇವಾಂಶ ಹಿಡಿದಿಟ್ಟು, ಮಣ್ಣು ಕೊಚ್ಚಿ ಹೋಗುವುದನ್ನು ತಡೆಯುವ, ಪಕ್ಷಿ, ಪ್ರಾಣಿ, ಕೀಟ, ಮಾನವರಿಗೆ, ಸತತ ಅನೇಕ ವರ್ಷ, ಹೂ, ಕಾಯಿ, ಹಣ್ಣು, ನೀಡುವ, ಪರಾಗಸ್ಪರ್ಶ ಮಾಡುವ, ಒಂದೊಂದೂ ಮರದ ಬೆಲೆ ಎಷ್ಟೋ ಕೋಟಿ ರೂಪಾಯಿಗಳು! ಪರಿಸರ ರಕ್ಷಿಸಿ, ನಮ್ಮ ಉಸಿರಾಟಕ್ಕೆ, ಸ್ವಚ್ಚಗಾಳಿ, ಬಾಳಲು ಮಳೆ ಕೊಡುವ ವೃಕ್ಷ ಸಂಪತ್ತನ್ನು ನಾವು ಕಾಪಾಡಿದರೆ, ಅದು ನಮ್ಮನ್ನು ರಕ್ಷಿಸುತ್ತದೆ.
ನನ್ನ ಮೂರನೆಯ ಸೂತ್ರ ‘ವೈದ್ಯರನ್ನು ನಂಬಿ, ನೀವೇ ವೈದ್ಯರಾಗಬೇಡಿ’.
ಆರೋಗ್ಯ ಕೆಟ್ಟಾಗ, ಅನಾರೋಗ್ಯ ದೂರ ಮಾಡಲು, ನೀವೇ ಸ್ವ-ವೈದ್ಯರಾಗಿ, ಮೆಡಿಕಲ್ ಶಾಪುಗಳಲ್ಲಿ, ಯಾರು ಯಾರೋ ಹೇಳಿದ, ಯಾರು ಯಾರಿಗೋ ಹೇಳಿದ, ಯಾರು ಯಾರಿಗೋ ವೈದ್ಯರು ಕೊಟ್ಟ ಮಾತ್ರೆ, ಸಿರಪ್‌ಗಳನ್ನು ಮನಸೋಚ್ಛೆ ನುಂಗಬಾರದು. ಅದಕ್ಕೆ ವೈದ್ಯೋ ನಾರಾಯಣೋ ಹರಿ ಎಂಬಂತೆ ಕುಟುಂಬಕ್ಕೆ ಒಬ್ಬ ವೈದ್ಯರನ್ನು, ಕುಟುಂಬ ವೈದ್ಯರನ್ನಾಗಿ ಇಟ್ಟುಕೊಂಡು, ಅವರ ಸಲಹೆಯಂತೆ ನಡೆಯಬೇಕೇ ಹೊರತು, ನಕಲಿ ವೈದ್ಯರು ಬಳಿ ಜಾಹೀರಾತು ನೋಡಿ ಹೋಗಬಾರದು. ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನಾಚರಣೆ, ಅತ್ಯುತ್ತಮ ವೈದ್ಯರಾಗಿ ಸೇವೆ ಸಲ್ಲಿಸಿದ್ದ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ, ಡಾ|| ಬಿಥನ್‌ಚಂದ್ರರಾಯ್ ಅವರ ಜನ್ಮದಿನದ ನೆನಪಿಗಾಗಿ, ಈ ದಿನದ ನೆನಪು. 1-7-1882 ರಂದು ಜನಿಸಿ, 1-7-1962 ರಂದು ಮರಣ ಹೊಂದಿದ ಇವರ ನೆನಪಿನಲ್ಲಿ, ರಾಷ್ಟ್ರೀಯ ವೈದ್ಯರ ದಿನಾಚರಣೆ.
1998 ರಲ್ಲಿ ಆರೋಗ್ಯ ಶಿಕ್ಷಣ ಚಳುವಳಿಯನ್ನು ಆರಂಭಿಸಿ, ರೇಡಿಯೋ ಹಾಗೂ ರಂಗಭೂಮಿ ಮೇಲೆ ಸತತ ಕಾರ್ಯಕ್ರಮಗಳನ್ನು ಮಾಡಿದ್ದೆ. ರಾಯಚೂರು ಜಿಲ್ಲೆ ಲಿಂಗಸೂಗೂರಿನಲ್ಲಿ, ಆರೋಗ್ಯ ಆಂದೋಳನದ ರಂಗ ಪ್ರರ್ಶನಗಳಿಗಾಗಿ ಹಾಗೂ ಅದನ್ನು ನೋಡಿ ಪ್ರಭಾವಿತರಾದ ಅಂದಿನ ಶಾಸಕರು ನೀಡಿದ 5 ಲಕ್ಷ ರೂ.ಗಳ ಅನುದಾನದಿಂದ, ಭಾರತೀಯ ವೈದ್ಯಕೀಯ ಸಂಘದ ಲಿಂಗಸೂಗೂರು ಶಾಖೆಯ ಕಟ್ಟಡ ಕಟ್ಟಲಾಯಿತು. 1998 ರಿಂದ 2003 ರವರೆಗೆ, ಆದ ಆರೋಗ್ಯ ಕಾರ್ಯಕ್ರಮ ಆಂದೋಳನ ಮೆಚ್ಚಿ, 2003 ರಲ್ಲಿ ಅದೇ ಶಾಸಕರು, ರಾಜ್ಯದ ಸಕ್ಕರೆ ಸಚಿವರಾಗಿ, ಮತ್ತೆ 5 ಲಕ್ಷ ರೂ. ಅನುದಾನ ನೀಡಿದ್ದರಿಂದ, ಕಟ್ಟಡದ ಮೊದಲ ಮಹಡಿ ಕಟ್ಟಲಾಯಿತು. ಹೀಗಾಗಿ 2005 ರ ಜುಲೈ 1 ರಂದು, ಅದೇ ಸಚಿವರ ಸಮ್ಮುಖದಲ್ಲಿ ವೈದ್ಯರ ದಿನಾಚರಣೆಯಂದು, ವೈದ್ಯನಲ್ಲದ ಈ ನಾಟಕಕಾರ ನಟ-ನಿರ್ದೇಶಕನಿಗೆ ಸನ್ಮಾನವಾದದ್ದು, ನನ್ನ ಬಾಳಿನಲ್ಲಿ, ಮರೆಯಲಾರದ ಘಟನೆ.
ಪ್ರಿಯ ಓದುಗರೇ ಈ ಮೂರು ಸೂತ್ರಗಳ ಬಗ್ಗೆ ಮತ್ತೆ, ಮತ್ತೆ, ವಿಚಾರ ಮಾಡಿ, ಯೋಜನೆ, ನಿರ್ಧಾರ ಮಾಡಿ, ಅನುಷ್ಠಾನಕ್ಕೆ ತನ್ನಿ ಎಂದು ವಿನಂತಿಸುವೆ.

–ಎನ್.ವ್ಹಿ. ರಮೇಶ್ , ಮೈಸೂರು.

