ನಿದಿರೆಯಿಂದೆಚ್ಚೆತ್ತು ಸಿಂಗರಿಸಿ ಸಡಗರದಿ
ಮುದದಿಂದ ಮುಂಜಾನೆ ರಾಗವನು ಹಾಡಿ
ಕದ ತೆರೆದು ನಿಂತಿರುವ ಧರಣಿ ದೇವಿಯ ಗೃಹದ
ಎದುರು ಪ್ರಣತಿಯ ಹಿಡಿದು ಬಂದಿರುವ ಬೆಳಗು
ಆಗಸದಿ ಚಂದಿರನ ಹಾಲ್ಬೆಳಕು ಮೇಲ್ಹೊದಿಕೆ-
ಯಾಗಿ ಬಂದಿರುವ ಮುಗಿಲು ಹರಡಿ ನಾಲ್ದೆಸೆಗೆ
ಸಾಗಿರಲು ಸೋನೆ ಮಳೆ ಧರಣಿಯನು ತೊಯ್ಯುತಲಿ
ಬಾಗಿ ನಮಿಸುತ ಬಂದ ಬಂಗಾರ ಬೆಳಗು
ವರುಣನಾಗಮನದಿಂದ ಧರಣಿ ಧಗೆ ತಂಪಾಗೆ
ಅರುಣನೇರಿದ ಹೊನ್ನ ರಥವನ್ನು ಮುದದಿ
ಕಿರಣ ಬೀರುತ ಭಾನು ಬಾನು ಸಿಂಗರಗೊಳಿಸಿ
ಬರಮಾಡಿ ನವದಿನವ ಸಂತಸದಿ ಬೆಳಗು
ಆಗಸಕೆ ಚಾಚಿರುವ ಮರಗಳಲಿ ತುಂಬಿರುವ
ಮಾಗಿರುವ ಫಲಗಳನು ಕಾತರದಿ ತಿನಲು
ಸಾಗಿ ಬರುತಿಹ ಸಕಲ ಖಗಗಳನು ಆದರದಿ
ಸ್ವಾಗತಿಸಿ ವನದೊಳಗೆ ಹರಡಿರುವ ಬೆಳಗು
ಅಂದಿಗೆಯ ಸದ್ದಡಗಿ ಬೆಚ್ಚನೆಯ ತೊಟ್ಟಿಲಲಿ
ಕಂದ ನಿದಿರೆಯ ಕಣ್ಣು ಮುಚ್ಚಿ ಮಲಗಿರಲು
ಚಂದದಿಂದಲಿ ರಾಗ ಪಾಡಿ ಪಕ್ಷಿಗಳ ಜತೆ
ಮುಂದಿನಿಂದಲಿ ಬಂದ ಮುಂಜಾನೆ ಬೆಳಗು
ಗೆಳೆತನವು ಜೀವಿಗಳ ಜೀವನದ ಬಲವಹುದು
ಹಳೆಯ ಸ್ನೇಹದ ಕೊಂಡಿ ಸೇರಲದು ಸವಿಯು
ಕಳೆದಿರುವ ದಿನಗಳನು ನೆನೆಯುತ್ತ ಮುದಗೊಳುತ
ಹೊಳೆ ಹೊಳೆವ ನಗುಮೊಗವ ತೋರುವ ಬೆಳಗು
ಗರಗರನೆ ತಿರುಗುತಿಹ ಭೂ ಗ್ರಹದ ವೇಗಕ್ಕೆ
ಭರಭರನೆ ಬೀಸುತಿದೆ ವಾಯು ಎಲ್ಲೆಡೆಯು
ಥರಥರನೆ ಚಳಿಯಿಂದ ನಡುಗುವುದ ಮನಗಂಡು
ಸರಸರನೆ ಮೇಲೇರಿ ಬಂದಿತಾ ಬೆಳಗು

-ಶಂಕರಿ ಶರ್ಮ, ಪುತ್ತೂರು


ನಿಮ್ಮ ಬಂಗಾರ ಬೆಳಕಿನ ಕಲ್ಪನೆಯ …. ಕವಿತೆ.. ಅರ್ಥಪೂರ್ಣ ವಾಗಿದೆ ಶಂಕರಿ ಮೇಡಂ…
ಮೆಚ್ಚುಗೆಯ ನುಡಿಗಳಿಗೆ ಕೃತಜ್ಞತೆಗಳು ನಾಗರತ್ನ ಮೇಡಂ.
ಕವನದ ಸಾಲುಗಳಲ್ಲಿ ಪದವಿಲಾಸ ಚೆನ್ನಾಗಿದೆ.
ಸೊಗಸಾದ ಪೂರಕ ಚಿತ್ರದೊಂದಿಗೆ ಪ್ರಕಟಿಸಿ ಪ್ರೋತ್ಸಾಹಿಸಿದ ಮಾಲಾ… ಪ್ರೀತಿಯ ನಮನಗಳು.
ಸೊಗಸಾಗಿದೆ ಕವನ
ಸ್ಪಂದನೆಗೆ ವಂದನೆಗಳು ಮೇಡಂ
ತುಂಬಾ ಸುಂದರ ಕವನ.
ಪ್ರತಿಕ್ರಿಯೆಗೆ ಧನ್ಯವಾದಗಳು ಮೇಡಂ
ಅತ್ಯಂತ ಚೆಂದದ ಕವಿತೆ ಬೆಳಗಿಗೆ ಬಂಗಾರದ ಲೇಪನವನ್ನು ಹೊದ್ದಿಸಿದೆ. ಸೊಗಸಾದ ಉಪಮೆಗಳು.