ಕಾದಂಬರಿ

ಕಾದಂಬರಿ : ಬದುಕು ಭ್ರಮೆ , ಭಾಗ 5

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಹೀಗೇ ಹತ್ತು ದಿನಗಳು ಉರುಳಿದರೂ ಮನೆಯವರು ಸಿದ್ಧಾರ್ಥನ ಮನೆಗೆ ಹೋಗಿ ಬರುವ ಯಾವ ಸೂಚನೆಯೂ ಕಾಣಿಸಲಿಲ್ಲ. ಬಾಲಣ್ಣನ ಕಡೆಯಿಂದಲೂ ಆ ವಿಷಯದ ಬಗ್ಗೆ ಏನೂ ಸುದ್ಧಿಯಿಲ್ಲ. ತನ್ನ ಒಪ್ಪಿಗೆಯನ್ನು ಸೂಚಿಸಿದ್ದಾಳೆ ಎಂದು ಅಣ್ಣ ಅಪ್ಪ ಅಮ್ಮನಿಗೆ ಹೇಳಿದನೋ ಇಲ್ಲವೋ ಎಂದು ಸಂದೇಹ ಬರತೊಡಗಿದವು. ಅಪ್ಪ, ಅಣ್ಣ ಜಮೀನಿನ ವ್ಯವಹಾರದಲ್ಲಿ ಬಹಳ ಬಿಜಿಯಾಗಿದ್ದಾರೆ. ಸಿದ್ಧಾರ್ಥನಿಂದಲೂ ಯಾವ ಸುಳಿವೂ ಸಿಕ್ಕಿಲ್ಲ. ಯೋಚಿಸಿ ಯೋಚಿಸಿ ಭಾರ್ಗವಿ ಹಣ್ಣಾದಳು. ಒಂದೆರಡು ತಿಂಗಳಲ್ಲಿ ಯಾವುದೂ ಇತ್ಯರ್ಥವಾದರೆ ಉತ್ತಮ. ನನ್ನ ಮುಂದಿನ ಓದಿಗೆ ಸಹಾಯ ಸಕಾಲದಲ್ಲಿ ದೊರಕದಿದ್ದರೆ ಇನ್ನೂ ಒಂದುವರ್ಷ ವೇಸ್ಟಾಗುತ್ತದೆ. ಹಾಗೆ ಆಗದಿರಲಿ ಎಂದು ಚಡಪಡಿಸುವುದೇ ಅವಳ ಪಾಲಿಗಾಯಿತು.

ಅಂತೂ ಭಾರ್ಗವಿಯ ಆತಂಕಕ್ಕೆ ತೆರೆ ಬೀಳುವ ದಿನ ಒದಗಿಬಂತು. ಒಂದು ಸಂಜೆಹೊತ್ತು ಅವಳ ತಂದೆತಾಯಿಗಳು ನೇರವಾಗಿ ಭಾರ್ಗವಿಯನ್ನು ಪ್ರಶ್ನಿಸಿದರು. “ಮಗಳೇ ಸಿದ್ದಾರ್ಥ ನಿನ್ನನ್ನು ಮದುವೆಯಾಗಲು ಇಷ್ಟಪಟ್ಟಿದ್ದಾನೆ. ನಿನ್ನನ್ನು ಮುಂದೆ ಓದಿಸಲು ಒಪ್ಪಿಕೊಂಡಿದ್ದಾನೆ. ನೀನೂ ಅವನನ್ನು ಒಪ್ಪಿದ್ದೀಯೆ ಎಂದು ಬಾಲು ಹೇಳಿದ್ದು ನಿಜವೇ? ಮತ್ತಷ್ಟು ಯೋಚಿಸಿ ನೋಡು. ಅವನೇನೂ ಕೆಟ್ಟವನಲ್ಲ, ಆದರೆ ಆ ಮನುಷ್ಯನಿಗೆ ಜವಾಬ್ದಾರಿ ಕಡಿಮೆ. ನಮಗೆಲ್ಲ ಅದೇ ಚಿಂತೆ” ಎಂದರು. ಆಕೆಯ ನಿರ್ಧಾರ ಅಚಲವೆಂದು ತಿಳಿದ ಮೇಲೆ “ಆಯಿತು ಹೆಣ್ಣು ಹೆತ್ತವರ ಮನೆಯಿಂದಲೇ ಪ್ರಸ್ತಾಪವಾಗಬೇಕು. ನಾವೇ ಅವರಲ್ಲಿಗೆ ಹೋಗಿ ಬರಬೇಕು. ಅವರಿಗೆ ಮೊದಲೇ ಫೋನ್ ಮಾಡಿ ದಿನ ಗೊತ್ತುಮಾಡು ಬಾಲು” ಎಂದು ತಂದೆ ಹೇಳಿದರು.
ಇತ್ತ ಸಿದ್ಧಾರ್ಥನ ಮನೆಯಲ್ಲಿ ಗೆಳೆಯ ಬಾಲಕೃಷ್ಣ ಹೇಳಿದ್ದನ್ನು ಮನಸ್ಸಿನಲ್ಲಿಟ್ಟುಕೊಂಡು ಬಹಳ ನಾಜೋಕಾಗಿ ತನ್ನ ಇಂಗಿತವನ್ನು ತಂದೆ ತಾಯಿಗಳಿಗೆ ತಿಳಿಸಿದನು. ಅಷ್ಟಕ್ಕೇ ಬಿಡದೆ ತಾನು ಕೈ ಹಿಡಿಯುವವಳಿಗೆ ನೀಡಿರುವ ಆಶ್ವಾಸನೆಯನ್ನು ತಿಳಿಸಿ ನಿರಾಳನಾದ,

ಮಗನ ಮಾತುಗಳನ್ನು ಕೇಳಿದ ಗೋವಿಂದಪ್ಪನವರಿಗೆ ಬಿಸಿ ತುಪ್ಪದಂತಾಯಿತು. ನುಂಗಲಾರರು, ಉಗುಳಲಾರರು. ಉಭಯ ಸಂಕಟಕ್ಕೆ ಸಿಲುಕಿದರು. ಕಂಡು ಕೇಳಿದ ಹುಡುಗಿ, ಅಂದವಾಗಿದ್ದಾಳೆ, ಗುಣ ಅಪರಂಜಿಯಂತೆ, ಎಲ್ಲವೂ ಸರಿಯೇ, ಅವಳು ಮುಂದೆ ಓದಿದರೆ ಇಲ್ಲಿ ನಮ್ಮೊಡನೆ ಈ ಊರಲ್ಲಿ ಇರುತ್ತಾಳೆಯೇ? ಬೇಡವೆಂದು ಪ್ರಸ್ತಾಪ ತಳ್ಳಿಹಾಕಿದರೆ ಹುಂಬನಂಥ ನನ್ನ ಮಗ ನಮ್ಮ ಮಾತಿಗೆ ಸೊಪ್ಪು ಹಾಕುತ್ತಾನೆಯೇ? ಪರಿಣಾಮ ವ್ಯತಿರಿಕ್ತವಾದರೆ ಇವನು ಮನೆ ಬಿಟ್ಟು ಹೋಗಲೂ ಸಿದ್ಧನೇ. ಇಲ್ಲ ಅವರೇ ಜೋಡಿಯಾಗಿ ಧುತ್ತನೆ ಮನೆ ಬಾಗಿಲಿಗೆ ಗಂಡಹೆಂಡಿರಾಗಿ ಬಂದು ನಿಂತರೆ ! ಛೇ..ಛೇ..ಹಿರಿಯರನ್ನು ಕಡೆಗಣಿಸಿ ಹೋಗುವ ಹುಡುಗಿಯಲ್ಲ. ಅ ಮನೆಯವರೂ ಹಂಗಿಲ್ಲ. ಒಬ್ಬನೇ ಮಗ, ವಯಸ್ಸಿಗೆ ಬಂದವನೆ ಎದುರು ಹಾಕಿಕೊಳ್ಳುವುದು ಒಳ್ಳೆಯದಲ್ಲ. ಅ ಹುಡುಗಿಯನ್ನು ಮದುವೆಯಾದ ಮೇಲಾದರೂ ಅವಳ ಕಾಲ್ಗುಣದಿಂದ ಇವನು ಹುಡುಗಾಟಿಕೆ ಬಿಟ್ಟು ಜವಾಬ್ದಾರಿ ತೆಗೆದುಕೊಳ್ಳಬಹುದು. ನೋಡೋಣ. ಆ ಮಗುವಿನ ಹೆತ್ತವರು ಏನು ಹೇಳುತ್ತಾರೋ ಕೇಳೋಣ. ಅನ್ಯಥಾ ವಿರೋಧ ಕಟ್ಟಿಕೊಳ್ಳಬೇಕಾಗಿಲ್ಲ. ಹೀಗೇ ತಮಗೆ ತೋಚಿದಂತೆ ಆಲೋಚಿಸಿ ಗಂಡಹೆಂಡತಿ ತಮ್ಮಲ್ಲಿ ಚರ್ಚಿಸಿಕೊಂಡರು.

ಭಾರ್ಗವಿಯ ತಂದೆತಾಯಿಗಳು ಮೊದಲೇ ನಿರ್ಧರಿಸಿಕೊಂಡಂತೆ ಸಿದ್ಧಾರ್ಥನ ಮನೆಗೆ ಫೋನ್ ಮಾಡಿ ಭೇಟಿಗಾಗಿ ದಿನ, ಸಮಯ ಗೊತ್ತು ಮಾಡಿಕೊಂಡರು. ಅವರಿಂದ ಸಮ್ಮತಿ ಸಿಕ್ಕಿದ ಮೇಲೆ ಅವರ ಮನೆಗೆ ಹೋದರು. ಬಂದವರನ್ನು ಗೋವಿಂದಪ್ಪ ದಂಪತಿಗಳು ಆದರದಿಂದ ಬರಮಾಡಿಕೊಂಡರು.
ಮಲ್ಲಪ್ಪ ಶಾಂತಮ್ಮನವರು ತಮ್ಮ ಮಗ ಬಾಲುವಿನ ನಿರ್ದೇಶನದಂತೆ ಎಷ್ಟು ಬೇಕೋ ಅಷ್ಟು ಮಾತನಾಡುತ್ತ “ನಿಮ್ಮ ಮಗ ತನ್ನ ಸ್ನೇಹಿತ ಬಾಲಕೃಷ್ಣನ ಬಳಿ ತನ್ನ ಅಭಿಲಾಷೆಯನ್ನು ವ್ಯಕ್ತ ಮಾಡಿದ್ದನ್ನು ತಿಳಿಸಿದರು. ಹಾಗೂ ಇದು ತಮ್ಮಗೂ ಒಪ್ಪಿಗೆಯೆಂದು ತಿಳಿಸಿದರು. ತಮ್ಮ ಮಗಳೂ ಇದಕ್ಕೆ ಒಪ್ಪಿದ್ದಾಳೆ ಎಂದೂ ಸೇರಿಸಿದರು. ಅದರಿಂದ ನಿಮ್ಮ ಬಳಿ ನಿಮ್ಮ ಮನೆಯ ಸಂಬಂಧ ಕೇಳಿಕೊಂಡು ಬಂದಿದ್ದೇವೆ” ಎಂದರು.

ಈ ಮೊದಲೇ ತಮ್ಮ ಮಗನಿಂದ ವಿಷಯ ತಿಳಿದಿದ್ದ ಗೋವಿಂದಪ್ಪ ದಂಪತಿಗಳು ತಮಗೆ ಸಮ್ಮತಿಯಿದೆ ಎಂಬ ಮಾತನ್ನು ಹೇಳಿದರು. ನಂತರ ಎರಡೂ ಕುಟುಂಬದವರು ಹುಡುಗ, ಹುಡುಗಿಯನ್ನು ತಮ್ಮೊಡನೆ ಕೂಡಿಸಿಕೊಂಡು ವಿವಾಹದ ಬಗ್ಗೆ ವಿವರವಾಗಿ ಪ್ರಸ್ತಾಪ ಮಾಡಿದರು.
ಆ ಸಂದರ್ಭದಲ್ಲಿ ಸಿದ್ಧಾರ್ಥ ತೆಗೆದುಕೊಂಡ ನಿರ್ಧಾರ ಭಾರ್ಗವಿಗೆ ಮತ್ತೆ ಮತ್ತೆ ಮೆಲುಕು ಹಾಕುವಂತಿತ್ತು. “ನೋಡಿ ನಾನು ಭಾರ್ಗವಿಯನ್ನು ಇಷ್ಟಪಡುತ್ತಿದ್ದುದು ನಿಜ. ಅದಕ್ಕೆ ಸರಿಯಾಗಿ ನನ್ನ ಸ್ನೇಹಿತ ಬಾಲು ಹೇಳಿದ್ದನ್ನು ಕೇಳಿ ಯಾಕಾಗಬಾರದು ಎನ್ನಿಸಿತು. ಪೂರಕವಾಗಿ ಈಗ ನೀವೆಲ್ಲಾ ಮನಃಪೂರ್ವಕವಾಗಿ ಒಪ್ಪಿಗೆ ಇತ್ತಿದ್ದೀರ. ನಿಶ್ಚಿತಾರ್ಥ ಮಾಡಿಬಿಡಿ. ಭಾರ್ಗವಿಯ ಎರಡು ವರ್ಷದ ಮಾಸ್ಟ್ರರ್ಸ್ ಡಿಗ್ರಿ ಮುಗಿಸಿದ ಮೇಲೆ ಮದುವೆ ಮಾಡುವಿರಂತೆ. ಖಂಡಿತ ಮಾಡಿಕೊಳ್ಳುತ್ತೇನೆ.” ಎಂದು ಹೇಳಿದನು.

ಆತನ ಮಾತಿನಲ್ಲಿದ್ದ ಖಚಿತತೆಗೆ ಹಿರಿಯರು ಮೆಚ್ಚಿಗೆಯಿಂದ ತಲೆದೂಗಿದರು. ಭಾರ್ಗವಿಗೆ ಸ್ವರ್ಗಕ್ಕೆ ಮೂರೇ ಗೇಣು ಎನ್ನಿಸಿತು. ಹೌದು ಅದು ಹಾಗೇ ಇತ್ತು ಮುಂದುವರೆದಿದ್ದರೆ.. ಅಷ್ಟರಲ್ಲಿ ಆಕೆಯ ಫೋನ್ ರಿಂಗಣಿಸಿತು. ಅದರಿಂದ ಆಲೋಚನೆಗೆ ಬ್ರೇಕ್ ಬಿತ್ತು. ಅಲ್ಲಿಯೇ ಇದ್ದ ಮೊಬೈಲ್ ಕೈಗೆತ್ತಿಕೊಂಡು “ಹಲೋ” ಎಂದಳು. ಅತ್ತಕಡೆಯಿಂದ ಬಂದ ಧ್ವನಿ ಗೆಳತಿ ಸುಮನಾಳದ್ದು. ಅರೇ ! ಇದ್ಯಾವ ನಂಬರ್? ಎಲ್ಲಿಂದ ಫೋನ್ ಮಾಡುತ್ತಿದ್ದಾಳೆ? ಧ್ವನಿ ಅವಳದ್ದೇ, ಯೋಚಿಸುತ್ತಲೇ “ನಾನೇ ಭಾರ್ಗವಿ..ನಿನ್ನ ಜಿಗರಿ ದೋಸ್ತ್ ಸುಮನಾ” ಎಂದಳು. “ಹೌದು ಸ್ವರವೇನೋ ಗುರುತು ಹಿಡಿದೆ ಆದರೆ ನಂಬರ್..ನಾನು ಸೇವ್ ಮಾಡಿಕೊಂಡಿರುವುದೇ ಬೇರೆ, ಅದಕ್ಕೆ ಉತ್ತರಿಸಲು ತಡವಾಯ್ತು. ಏನು ವಿಷಯ? ಎಲ್ಲಿಂದ ಮಾತನಾಡುತ್ತಿದ್ದೀಯೆ? ಇದ್ಯಾರ ಫೋನ್” ಎಂದು ಪ್ರಶ್ನಿಸಿದಳು ಭಾರ್ಗವಿ.

“ಈಗ ನಾನು ಅವೆಲ್ಲ ವಿವರಗಳನ್ನು ಹೇಳಲಾಗುತ್ತಿಲ್ಲ. ನೀನು ಮನೆಯಲ್ಲಿದ್ದರೆ ಸ್ವಲ್ಪ ಹೊತ್ತಿನಲ್ಲಿ ಅಲ್ಲಿಗೆ ಬರುತ್ತೇನೆ. ಹೊಟ್ಟೆಗೇನಾದರೂ ಕವಳ ಸಿಗುತ್ತಾ?” ಎಂದು ಕೇಳಿದಳು ಸುಮನಾ.
“ಮನೆಯಲ್ಲಿಯೇ ಇದ್ದೇನೆ. ಬಾ ಆಗಲೇ ಮೂರು ಗಂಟೆಯಾಗಿದೆ, ಊಟ ಮಾಡಿಲ್ಲವೇನೇ? ಏನಾಗಿದೆ?” ಎಂದಳು ಭಾರ್ಗವಿ.
“ಹೇಳಿದೆನಲ್ಲಾ ನಾನಲ್ಲಿಗೆ ಬಂದಾಗ ಮಿಕ್ಕ ವಿಚಾರ. ಊಟಕ್ಕೇನಾದರೂ ರೆಡಿಮಾಡು. ಇಲ್ಲದಿದ್ದರೆ ಒಂದಿಷ್ಟು ಮೊಸರವಲಕ್ಕಿಯನ್ನಾದ್ರೂ ಕಲಿಸಿಡು.” ಎಂದು ಮಾರುತ್ತರಕ್ಕೂ ಕಾಯದೆ ಕಾಲ್ ಕಟ್ ಮಾಡಿದಳು ಸುಮನಾ.

ಸುಮನಾ ಇವಳು ನನಗೆ ಫೋನ್ ಮಾಡಿದಾಗಲೆಲ್ಲ ನನ್ನ ಮಕ್ಕಳು ನಿನ್ನ ಖಾಸಾ ಫ್ರೆಂಡ್ ಎಂದೇ ಹೇಳುತ್ತಿದ್ದರು. ಪಾಪ ಅವರಿಗೇನು ಗೊತ್ತು ಬದುಕಿನಲ್ಲಿ ಸ್ನೇಹ ಬಂಧನಕ್ಕೆ ಎಂಥಹ ಮಹತ್ವವಿದೆ ಎಂದು. ಬದುಕಲೇಬೇಕೆಂಬ ಭರವಸೆಯನ್ನು ಆಗಾಗ ಕೊಡುವ ಬೆಳಕಿನ ದೀವಿಗೆಗಳಿವು. ಯಾರಲ್ಲಿಯೂ ಹೇಳಿಕೊಳ್ಳಲಿಕ್ಕಾಗದ, ತೋಡಿಕೊಳ್ಳಲಾಗದ ಸಂಗತಿಗಳನ್ನು ಬಿಚ್ಚಿಟ್ಟು ಮನವನ್ನು ಹಗುರಗೊಳಿಸಿಕೊಳ್ಳುವ ಬಾಂಧವ್ಯಗಳು. ಸಹೃದಯಿಯಾದ ನನ್ನ ಸ್ನೇಹಿತೆ. ನಮ್ಮಿಬ್ಬರ ಗೆಳೆತನ ಇಂದು ನೆನ್ನೆಯದಲ್ಲ. ನಲವತ್ತು ವರ್ಷಕ್ಕೂ ಹೆಚ್ಚಾದುದು. ಏಕೊ ಏನೋ ಎಲ್ಲಿಂದಲೋ ಕಾಲ್ ಮಾಡಿ ಬರುತ್ತಿದ್ದಾಳೆ. ಬರಲಿ, ಕಾರಣ ಅವಳೇ ಹೇಳುತ್ತಾಳೆಂದಿದ್ದಾಳೆ. ಕೇಳಿಕೊಂಡರಾಯಿತು ಎಂದು ಹಾಸಿಗೆಯಿಂದ ಮೇಲೆದ್ದು ಅಡುಗೆ ಮನೆಯತ್ತ ನಡೆದಳು ಭಾರ್ಗವಿ. ಅಲ್ಲಿನ ಪಾತ್ರೆಗಳನ್ನು ತೆಗೆದು ನೋಡಿದಳು. ಒಂದು ಚಪಾತಿ ಸ್ವಲ್ಪ ಪಲ್ಯ, ಅನ್ನ, ಸಾರು. ಚಿಕ್ಕದೊಂದು ಬಟ್ಟಲಲ್ಲಿ ಮೊಸರು ಇತ್ತು. ಒಬ್ಬರಿಗೆ ಮೋಸವಿಲ್ಲ. ಇನ್ನೆಷ್ಟು ಊಟಮಾಡಿಯಾಳು? ನಾನು ಅವಳನ್ನು ಇವತ್ತು ನೋಡುತ್ತಿದ್ದೀನಾ? ಎಂದಂದುಕೊಂಡು ಮುಂಬಾಗಿಲನ್ನು ತೆರೆದು ಹೊರಬಂದವಳೇ ಅಂಗಳದಲ್ಲಿದ್ದ ಕಟ್ಟೆಯ ಮೇಲೆ ಕುಳಿತಳು.

ಸುತ್ತಲೂ ಕಣ್ಣಾಡಿಸಿದಳು. ತನ್ನಾಸೆಯ ಅರಮನೆ, ಎಷೊಂದು ಕಷ್ಟಪಟ್ಟು ಕಟ್ಟಿದ ಮನೆ. ಒಂದೊಂದು ಇಟ್ಟಿಗೆ, ಅದರೊಟ್ಟಿಗೆ ಮುಚ್ಚಿದ ಸಿಮೆಂಟು ಮರಳಿನ ಗಾರೆಗೆ ನನ್ನ ಬದುಕಿನ ಕಥೆಯ ಒಂದೊಂದು ಎಳೆಯೂ ಗೊತ್ತು. ಹಾಗೇ ಅವಳ ದೃಷ್ಟಿ ಪಕ್ಕಕ್ಕೆ ಹೊರಳಿತು. ಅಲ್ಲಿ ಮೆಟ್ಟಿಲು ಮಹಡಿಗೆ ಹೋಗಲು ದಾರಿ, ಅಲ್ಲಿ ಪುಟ್ಟ ಪುಟ್ಟ ಎರಡು ಮನೆಗಳು. ಕಟ್ಟಿದಾಗಿನಿಂದ ಬಾಡಿಗೆಗೆ ಬಂದವರು. ಅವರೇ ಮುಂದುವರೆದಿದ್ದಾರೆ. ಗಂಡ ಹೆಂಡತಿ, ಒಬ್ಬ ಮಗ, ಸೊಸೆ, ಮೊಮ್ಮಗ. ಮಗ ಸೊಸೆ ಇಬ್ಬರೂ ಉದ್ಯೋಗಸ್ಥರು. ಮೊಮ್ಮಗ ಇನ್ನೂ ಎರಡು ಮನೆಗಳಿಗೂ ಓಡಾಡಿಕೊಂಡು ಬೆಳೆಯುತ್ತಿದ್ದಾನೆ. ಹಬ್ಬ ಹರಿದಿನಗಳಲ್ಲಿ ಎಲ್ಲರೂ ಒಟ್ಟಿಗೆ ಆಚರಿಸುತ್ತಾರೆ. ಆದರೆ ಪ್ರತಿದಿನದ ವ್ಯವಹಾರ ಬೇರೆಬೇರೆ. ಒಬ್ಬರಿಗೊಬ್ಬರು ತಂಟೆತಕರಾರು ಮಾಡಿಕೊಳ್ಳದೆ ಅನುಸರಿಸಿಕೊಂಡು ಹೋಗುತ್ತಿದ್ದಾರೆ. ಭಾರ್ಗವಿಗೂ ಆಸರೆಯಾಗಿದ್ದಾರೆ.
ಅದರ ಮೇಲಕ್ಕೂ ಹೋಗಲು ಮೆಟ್ಟಿಲಿವೆ. ಅಲ್ಲಿ ಸೋಲಾರ್, ನೀರಿನ ಟ್ಯಾಂಕ್, ಅಳವಡಿಸಿದ್ದು ಎಲ್ಲವೂ ಅಚ್ಚಕಟ್ಟಾಗಿತ್ತು. ಕೆಳಗೆ ವಾಹನ ನಿಲುಗಡೆಗೂ ಜಾಗವಿತ್ತು. ಕೆಲಸದ ಮಧ್ಯದಲ್ಲೇ ಬಿಡುವು ಮಾಡಿಕೊಂಡು ಓಡಾಡುತ್ತಾ ತನ್ನ ಕಲ್ಪನೆಯಂತೆ ಕಟ್ಟಿಸಿದ ಮನೆ ಹೌದು.

“ಗೇಟು ತೆರೆದ ಸದ್ದಾದರೂ ತಿರುಗಿ ನೋಡದೆ ಪ್ರತಿಮೆಯಂತೆ ಕುಳಿತಿದ್ದೀಯಾ, ಸರಿಬಿಡು, ಯಾರಾದರೂ ಒಳಗಡೆ ಹೊಕ್ಕು ಏನು ತೆಗೆದುಕೊಂಡು ಹೋದರೂ ಗೊತ್ತಾಗುವುದಿಲ್ಲ” ಎಂದು ಹೇಳುತ್ತಲೇ ಭಾರ್ಗವಿಯ ಬೆನ್ನು ತಟ್ಟಿದಳು ಸುಮನಾ.
ಗೆಳತಿಯ ಆಕ್ಷೇಪಣೆಯ ಮಾತುಗಳೊಂದಿಗೆ ಬೆನ್ನಿಗೆ ಕೊಟ್ಟ ಏಟಿನಿಂದ ಅಲೋಚನೆಯಿಂದ ಎಚ್ಚೆತ್ತ ಭಾರ್ಗವಿ “ಓ..ಬಂದ್ಯಾ, ಅದೇ ಹಳೆಯ ಗುಂಗಿನಲ್ಲಿ ಮುಳುಗಿದ್ದೆ. ಆದರೂ ನೀನು ಹೇಳಿದ ಮಾತುಗಳು ನನ್ನ ಕಿವಿಗೆ ತಲುಪಿವೆ. ಸಾಮಾನುಗಳನ್ನು ಏನೇ ತೆಗೆದುಕೊಂಡು ಹೋದರೂ ಮತ್ತೆ ತರಬಹುದು, ಆದರೆ ಬರಿದಾದ ಮನಸ್ಸು ತುಂಬೀತು ಹೇಗೆ?” ಎಂದಳು.

ಭಾರ್ಗವಿಯ ಬದುಕಿನ ಸಕಲವನ್ನೂ ಬಲ್ಲ ಸುಮನಾ ಮಾತು ತಿರುಗಿಸಲೋಸ್ಕರ “ಈಗ ಸದ್ಯಕ್ಕೆ ಒಳಗೆ ನಡೆ. ಬರಿದಾಗಿ ಕೂಗುತ್ತಿರುವ ನನ್ನ ಹೊಟ್ಟೆಯನ್ನು ತುಂಬಿಸು” ಎಂದಳು ಸುಮನಾ.
“ಸಾರೀ ಕಣೇ, ಹಾಳಾದ ನೆನನಪುಗಳು ಬೆಂಬಿಡದೆ ಕಾಡುತ್ತವೆ. ಬಿಡೋಣವೆಂದರೆ ನನ್ನ ಬೆನ್ನಿಗೇ ಅಂಟಿಕೊಂಡು ಬೇತಾಳದಂತೆ ಹಿಂಬಾಲಿಸುತ್ತಲೇ ಇರುತ್ತವೆ. ಸರಿ..ಬಾ, ಏನು ವಿಷಯ? ದಿಢೀರಂತ ಹೀಗೇ?” ಎಂದು ಹೇಳುತ್ತಲೇ ಕುಳಿತಲ್ಲಿಂದ ಮೇಲೆದ್ದು ಗೆಳತಿಯ ಕೈಹಿಡಿದು ಮನೆಯೊಳಕ್ಕೆ ಕರೆದೊಯ್ದು ಮುಂಬಾಗಿಲನ್ನು ಭದ್ರಪಡಿಸಿದಳು ಭಾರ್ಗವಿ.
ಒಳಗೆ ಅಡಿಯಿಟ್ಟು ಸುಮನಾ ಭುಜದ ಮೇಲಿದ್ದ ವ್ಯಾನಿಟಿ ಬ್ಯಾಗನ್ನು ಅಲ್ಲೇ ಸೋಫಾದ ಮುಂದಿದ್ದ ಟೀಪಾಯಿ ಮೇಲಿಟ್ಟು ಬಾತ್‌ರೂಮಿನ ಕಡೆ ಹೊರಟಳು.

ಗೆಳತಿ ಅತ್ತ ಹೋಗುತ್ತಲೇ ರೂಮಿನ ವಾರ್ಡ್ರೋಬಿನಿಂದ ಟವೆಲೊಂದನ್ನು ತೆಗೆದು ಸಿಂಕಿನ ಪಕ್ಕದಲ್ಲಿದ್ದ ಸ್ಟ್ಯಾಂಡ್ ಗೆ ಹಾಕಿದ ಭಾರ್ಗವಿ ಅಡುಗೆ ಮನೆ ಹೊಕ್ಕಳು. ಇದ್ದ ಪದಾರ್ಥಗಳನ್ನು ಬಿಸಿಮಾಡಿಕೊಂಡು ಡೈನಿಂಗ್ ಟೇಬಲ್ ಹತ್ತಿರ ಬಂದಳು. ಅಲ್ಲಿದ್ದ ಜಗ್ಗಿನಿಂದ ಲೋಟಕ್ಕೆ ನೀರು ಬಗ್ಗಿಸಿ, ತಟ್ಟೆಯನ್ನು ಅಣಿಮಾಡಿಟ್ಟಳು. ಅಷ್ಟರಲ್ಲಿ ಬಾತ್‌ರೂಮಿನಿಂದ ಹೊರಬಂದ ಸುಮನಾ ಟವೆಲಿನಿಂದ ಕೈಗಳನ್ನು ಒರೆಸಿಕೊಂಡು ಅದನ್ನು ಮತ್ತೆ ಅದೇ ಜಾಗದಲ್ಲಿ ಸಿಕ್ಕಿಸಿ ಕುರ್ಚಿಯ ಮೇಲೆ ಕುಳಿತಳು. ಭಾರ್ಗವಿ ಬಡಿಸಿಕೊಟ್ಟದ್ದನ್ನು ದುಸರಾ ಮಾತನಾಡದೆ ತಿಂದು ಕೈತೊಳೆದುಕೊಂಡಳು. “ಅಬ್ಬಾ ! ಈಗ ಜೀವ ಬಂದಂಗಾಯ್ತು ಭಾರ್ಗವಿ. ನೋಡು ಮನುಷ್ಯನಿಗೆ ಹೆಚ್ಚು ಕಟ್ಟಿಕೊಳ್ಳಲಾಗದ, ಹಾಗೇ ಇರಲೂ ಆಗದ್ದು ಅಂದರೆ ಇದೇ ಇರಬೇಕು ಹಸಿವು.” ಎಂದಳು ಸುಮನಾ.
“ಹೂ..ಹಾಗೇ ಆ ತಕ್ಷಣಕ್ಕೆ ಸಾಕೆನ್ನುವುದೂ ತಿನ್ನುವ ಪಾದಾರ್ಥವೊಂದಕ್ಕೇ. ಅದಕ್ಕೇ ಹಿರಿಯರು ಹೇಳುವುದು ಅನ್ನದಾನಕ್ಕಿಂತ ಶ್ರೇಷ್ಠದಾನವಿಲ್ಲ ಎಂದು. ಅದಿರಲಿ, ಕಾಫಿ, ಟೀ ಏನಾದರೂ ಬೇಕಾ?” ಎಂದು ಕೇಳಿದಳು ಭಾರ್ಗವಿ.
“ಸದ್ಯಕ್ಕೇನೂ ಬೇಡ. ಹೊರಡುವಾಗ ಕೊಡುವಿಯಂತೆ” ಎಂದಳು ಸುಮನಾ.
“ಹಾ ಸರಿ ಈಗ ಹೇಳು ಎಲ್ಲಿಗೆ ಬಂದಿದ್ದೆ? ಏನು ಸಮಾಚಾರ? ಫೋನ್ ಇಲ್ಲದೆ ಬರುವವಳೇ ಅಲ್ಲ. ಮತ್ತೆ ಹೊರಡುವುದು ಎಂದೆಯಲ್ಲ ಎಲ್ಲಿಗೆ?” ಎಂದು ಕೇಳಿದಳು ಭಾರ್ಗವಿ.
“ಹೇಳ್ತೇನೆ ಮಾರಾಯ್ತೀ, ನಿನಗೆ ಗೊತ್ತಿಲ್ಲದ್ದೇನಲ್ಲ. ಹೊರಗೆ ಕೂಡೋಣ, ನಾನು ಸ್ವಲ್ಪ ಸೋಫಾದ ಮೇಲೇ ಅಡ್ಡಾಗುತ್ತೇನೆ. ಅಲ್ಲೇ ಮಾತನಾಡೋಣ” ಎಂದು ಹಾಲಿಗೆ ಬಂದರು.
“ಸುಮನಾ ಸೋಫಾದ ಮೇಲೆ ಬೇಡ, ದೀವಾನದ ಮೇಲೆ ಕಾಲುಚಾಚಿಕೊಂಡು ಆರಾಮವಾಗಿ ಉರುಳಿಕೋ, ನಾನು ಇವುಗಳನ್ನೆಲ್ಲ ಎತ್ತಿ ಸಿಂಕಿಗೆ ಹಾಕಿ ಬರುತ್ತೇನೆ” ಎಂದು ತಟ್ಟೆ. ಲೋಟ ಬಟ್ಟಲುಗಳನ್ನು ಎತ್ತಿಟ್ಟು ಕೈತೊಳೆದುಕೊಂಡು ಹೊರಬಂದಳು ಭಾರ್ಗವಿ.

(ಮುಂದುವರಿಯುವುದು)

-ಬಿ.ಆರ್.ನಾಗರತ್ನ, ಮೈಸೂರು
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ  : https://surahonne.com/?p=45428

13 Comments on “ಕಾದಂಬರಿ : ಬದುಕು ಭ್ರಮೆ , ಭಾಗ 5

  1. ನನ್ನ ಕಾದಂಬರಿಯನ್ನು ಸೂಕ್ತ ಚಿತ್ರ ದೊಂದಿಗೆ… ಧಾರಾವಾಹಿಯಾಗಿ ಪ್ರಕಟಿಸಿ ಪ್ರೋತ್ಸಾಹ ನೀಡುತ್ತಿರುವ..ಸುರಹೊನ್ನೆಯ ಸಂಪಾದಕರಿಗೆ.. ಹೃತ್ಪೂರ್ವಕವಾದ ಧನ್ಯವಾದಗಳು.

  2. ಬಹಳ ಬಹಳ ಚೆನ್ನಾಗಿ ಮೂಡಿ ಬರುತ್ತಿದೆ ಕಾದಂಬರಿ

    1. ನಿಮ್ಮ ಪ್ರೀತಿಯ ಸ್ಪಂದನೆಗೆ..ಹೃತ್ಪೂರ್ವಕವಾದ ಧನ್ಯವಾದಗಳು ನಯನ ಮೇಡಂ.

  3. ನೆನಪಿನ ಅಲೆಯಲ್ಲಿ ತೇಲಾಡುತ್ತಿರುವ ಭಾರ್ಗವಿಯ ಪಾತ್ರ ಬಹಳ ಇಷ್ಟವಾಯ್ತು. ಸುಮನಾಳ ಆಗಮನದ ತಿರುವು ಕುತೂಹಲದಾಯಕವಾಗಿದೆ! ಅಂತೂ ಕಥೆಯ ಓಘ ಸೂಪರ್ …ನಾಗರತ್ನ ಮೇಡಂ.

    1. ನಿಮ್ಮ ಓದು.. ಪ್ರೋತ್ಸಾಹ ಕ ಪ್ರತಿಕ್ರಿಯೆ ಗೆ ಪ್ರೀತಿಪೂರ್ವಕ ಧನ್ಯವಾದಗಳು ಶಂಕರಿ ಮೇಡಂ..

    2. ಆತ್ಮೀಯ, ಗೆಳತಿಯರ ಒಡನಾಟ , ಸಲುಗೆ ಹೇಗಿರುತ್ತದೆ ಎನ್ನುವ ಚಿತ್ರಣ ಮನಮುಟ್ಟುವಂತೆ ಇದೆ

      1. ಅಪರೂಪದ ಗೆಳತಿ ಯ ಆತ್ಮೀಯ ಅನಿಸಿಕೆಗೆ ಅಕ್ಕರೆಯ…ಧನ್ಯವಾದಗಳು.

    1. ವಾವ್..ಶೈಲಾಮೇಡಂ..ನಿಮ್ಮ ಓದು ಪ್ರತಿಕ್ರಿಯೆ ಗೆ ಶರಣು

  4. ವರ್ತಮಾನ ಮತ್ತು ಭೂತಕಾಲಗಳೆರಡನ್ನೂ ಸಮಾನವಾಗಿಕೊಂಡೊಯ್ಯುತ್ತಿರುವ ಪರಿ ಕಾದಂಬರಿಯನ್ನು ಹೆಚ್ಚು ಆಕರ್ಷಕವಾಗಿಸಿದೆ. ಆದರೂ ಇಷ್ಟೊಂದು ಕುತೂಹಲವನ್ನು ಹುಟ್ಟು ಹಾಕಿ ಒಂದು ವಾರ ಕಾಯುವಂತೆ ಮಾಡಬಾರದಿತ್ತು, ಛೇ..

    1. ನಿಮ್ಮ..ಓದು ಸೂಕ್ಷ್ಮಾವಲೋಕನಕ್ಕೆ..ನನ್ನ ನಮನ ಪದ್ಮಾ ಮೇಡಂ…

  5. ಬಹಳ ಸೊಗಸಾಗಿ ಮೂಡಿಬರ್ತಿದೆ , ಕುತೂಹಲಕಾರಿಯಾಗಿ ತಿರುವುಪಡೆದು , ಓದಿಸಿಕೊಂಡು ಹೋಗುತ್ತಿದೆ , ಮುಂದಿನ ವಾರದ ತನಕ ಕಾಯಲಾಗದೆ ಧಾರಾವಾಹಿಯ ಪಾತ್ರಗಳ ಕುರಿತು ಮೆಲುಕು ಹಾಕುತ್ತಾ , ಮನವು ದಿನವೂ ಗುರುವಾರದೆಡೆಗೆ ಓಡುತ್ತಿದೆ .

    1. ಬರಹಗಾರರಿಗೆ ಓದುಗರ ಪ್ರತಿ ಕ್ರಿಯೆ ಬಹಳ ಮುಖ್ಯ ಹಾಗೂ..ಉತ್ತೇಜನ ಕೊಡುತ್ತದೆ..ಆ ನಿಟ್ಟಿನಲ್ಲಿ ನಿಮ್ಮ.. ಅನಿಸಿಕೆಗೆ ನನ್ನ ಹೃತ್ಪೂರ್ವಕವಾದ ಧನ್ಯವಾದಗಳು ಗೆಳತಿ ನೇತ್ರಾ…

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *