ಸದ್ದಿಗಂಜುತ ಹೊರಳಿ ನಿದ್ದೆಗಣ್ಣಲಿ ಅಳುವ
ಮುದ್ದು ಮಗುವಿನ ಕದಪು ಸವರುತಿಹ ಬೆಳಗು
ಸುತ್ತಲಿನ ಕತ್ತಲೆಯ ಅತ್ತ ಸರಿಸುತ ನಭದಿ
ಸುಪ್ತ ನಿದ್ದೆಯ ನಶೆಯ ನೂಕುತಿಹ ಬೆಳಗು
ಹೊನ್ನ ರೇಖೆಯ ಬರೆದು ಸನ್ನೆ ನೀಡುತ ನಡೆದು
ಚೆನ್ನ ರಾಗದಿ ಗೀತ ಹಾಡಿ ಬರುತಿಹ ಬೆಳಗು
ನಸುಗಂಪ ಸೂಸುತಿಹ ನಸುನಗುವ ಚೆಲ್ಲುತಿಹ
ಕುಸುಮ ರಾಶಿಯ ತಡವಿ ವಿಕಸಿಸಿದ ಬೆಳಗು
ಹಕ್ಕಿ ಕಲರವ ನಡುವೆ ಫಕ್ಕನುದಯಿಸಿ ಬಂದು
ಸಕ್ಕರೆಯ ಸಿಹಿ ಕನಸು ಪಕ್ಕಕಿರಿಸಿದ ಬೆಳಗು
ಕವಿದ ಕತ್ತಲೆಯ ಸರಿಸಿ ಕರಿ ಬಾನು ಬೆಳಗಿಸುತ
ಕಂಪ ಚೆಲ್ಲುತ ಬಂದ ಕಮನೀಯ ಬೆಳಗು
ಚಂದಿರನ ಬೆಳಕನ್ನು ಚಂದದಿಂದಲಿ ಸರಿಸಿ
ಚೆಲ್ಲುತಿಹ ಕಿರಣಗಳ ಚೋದ್ಯದಾ ಬೆಳಗು

-ಶಂಕರಿ ಶರ್ಮ, ಪುತ್ತೂರು.


ಬಹಳ ದಿನಗಳ ನಂತರ ಸುರಹೊನ್ನೆಯ ಲ್ಲಿ ಬಂದ ಕವನದ ರೂಪದಲ್ಲಿನ ಕಿರಣಗಳ… ಬೆಳಕು..ನಮ್ಮ ಮನದಲ್ಲೂ ಬೆಳಕ ಮೂಡಿಸಿತು..ಶಂಕರಿ ಮೇಡಂ… ವಂದನೆಗಳು… ನಿಮ್ಮ ವೃತ್ತಿ ಯ ಅನುಭವದ ಬರೆಹವನ್ನು ಎದುರು ನೋಡುತಿದ್ದೇನೆ…ಮನಸ್ಸು ಮಾಡಿ…
ಪ್ರೀತಿಯ ಪ್ರತಿಕ್ರಿಯೆಗೆ ನಮಿಸಿದೆ ನಾಗರತ್ನ ಮೇಡಂ. ತಮ್ಮ ಆತ್ಮೀಯ ಸಲಹೆಯನ್ನು ಸ್ವೀಕರಿಸಿ ಕಾರ್ಯರೂಪಕ್ಕೆ ಇಳಿಸಲು ಆದಷ್ಟು ಬೇಗ ಪ್ರಯತ್ನಿಸುವೆ.
ಬೆಳಗಿನ ಬೆಳಕು ಹರಡುವ ಪರಿಯನ್ನು
ಅಷ್ಟೇ ಚೆಂದವಾಗಿ ಬಣ್ಣಿಸಿರುವ ಇರಿ
ಅಭಿನಂದನೆಗಳು
ಬಹಳ ಸುಂದರವಾಗಿದೆ ಕವಿತೆ
ಧನ್ಯವಾದಗಳು ನಯನಾ ಮೇಡಂ
ಬೆಳಗಿನ ಸೌಂದರ್ಯವನ್ನು ಹಲವಾರು ರೀತಿಯಲ್ಲಿ ಬಣ್ಣಿಸಿರುವ ಪರಿ ಅನನ್ಯ.
ಧನ್ಯ ನಮನಗಳು ಪದ್ಮಾ ಮೇಡಂ
ಚೇತೋಹಾರಿಯಾದ ಕವಿತೆ…………
ಬೆಳಗನ್ನು ಕುರಿತು ಕನ್ನಡದ ಘಟಾನುಘಟಿ ಕವಿಗಳೆಲ್ಲರೂ ಬರೆದಿದ್ದಾರೆ.
ಇದು ಸಹ ನೂತನ ಸೇರ್ಪಡೆ. ಇಷ್ಟವಾಯಿತು, ಅಭಿನಂದನೆ ಮತ್ತು ಧನ್ಯವಾದ.