ಕತ್ತಲು ಸರಿದು ಹಬ್ಬಿಹುದು ನೋಡು ಆಗಸದ ತುಂಬಾ ಬಣ್ಣ,
ಬದುಕಲ್ಲೂ ಹೀಗೆಯೇ ಮಿಡಿಯುವುದು ಸಂತಸದ ಸುಮಧುರ ಶೃತಿ
ತಾಳ್ಮೆ ಇರಲು ಸುಂದರ ಪ್ರತಿ ಚರಣ.
ಹಬ್ಬಿ ಕಣ್ಮನ ಸೆಳೆಯುವ ರಂಗು,
ತುಂಬಿಹನು ಆ ರವಿ ಅಂತರಾಳದಲ್ಲೊಂದು ಗುನುಗು,
ಈ ಸಂಜೆಯ ಸೊಬಗು,
ನಡೆಸಿದೆ ಹರಡುವ ಹುನ್ನಾರ ಮನಗಳ ತುಂಬಾ ಬೆರಗು.
ಆಗಸದ ರಂಗಿನಾಟದೊಳಗೆ ಮಾಯ,
ಈ ಬಡಪಾಯಿ ಹೃದಯ,
ಕಲಿಸಿದವರಾರೋ ಗೆಳೆಯ,
ಪ್ರಕೃತಿಗೂ ಸುಂದರ ಬಣ್ಣ ಬಳಿಯುವ ಕಲೆಯ?
ಕಂಡಿಲ್ಲ ನಾನು ಸೃಷ್ಟಿಕರ್ತನ ಮೀರಿಸುವಂತಹ ಚಿತ್ರಕಾರನ,
ಆಗಸದ ತುಂಬಾ ಬಣ್ಣ ತುಂಬಿ ಮೂಡಿಸಿಹನು ಮನದಲ್ಲಿ ಸಂಚಲನ.
ಸೂರ್ಯನ ಹೊಂಗಿರಣ ಭುವಿ ಮೇಲೆ ಸೋಕಲು ಹೊಮ್ಮುವುದೊಂದು ಕಾಂತಿ,
ಈ ನೋಟ ಮನಸಿಗೆ ನಾಟಲು ಇಲ್ಲಿಯೂ ಆವರಿಸುವುದೊಂದು ಉಲ್ಲಾಸ, ಶಾಂತಿ.

-ನಯನ ಬಜಕೂಡ್ಲು


ಸೃಷ್ಟಿ ಯ ಸೋಜಿಗ ಕವನದಲ್ಲಿ ಮೂಡಿಸಿರುವ..ರೀತಿ ಮನಕ್ಕೆ ಮುದ ತಂದಿತು ನಯನ ಮೇಡಂ…
ಧನ್ಯವಾದಗಳು ಮೇಡಂ
ಸಂಜೆಯ ಸೊಬಗನ್ನು ವರ್ಣಿಸುವ ಚೆಂದದ ಕವಿತೆ
ನಿಮ್ಮ ಸ್ಫೂರ್ತಿ ತುಂಬುವ ಮಾತುಗಳಿಗೆ ಹೃತ್ಪೂರ್ವಕ ಧನ್ಯವಾದಗಳು ಮೇಡಂ. ಶರಣು
ಸಂಜೆಯ ಸೊಬಗನ್ನು ಅನುಭವಿಸಿ ಅದು ಅಕ್ಷರಗಳ ಲಾಸ್ಯದಲ್ಲಿ ಮಿಂದೆದ್ದು ಚಂದದ ಕವಿತೆಯಾಗಿ ಹೊರಹೊಮ್ಮಿದೆ.
ಸಂಜೆಯ ಸೊಬಗನ್ನು ಜೀವನಕ್ಕೆ ಹೋಲಿಸಿ ಮೂಡಿಬಂದ ಸುಂದರ ಕವನ.