(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ರಮಾ-ರಘುಪತಿ ಊರಿಗೆ ಹೋದ ವಾರದ ನಂತರ ಅನಿಕೇತ್ ವರೂಗೆ ಫೋನ್ ಮಾಡಿದ.
“ಎಂಗೇಜ್‌ಮೆಂಟ್ ಫೋಟೋ ಕಳಿಸಿದ್ದೀನಿ ನೋಡು.”
“ಖಂಡಿತಾ ನೋಡ್ತೀನಿ.”
“ನಾವಿಬ್ಬರೂ ಈ ಶನಿವಾರ ರ‍್ತಿದ್ದೇವೆ. ಮದುವೆ ಆಗದೇ ಇರುವುದರಿಂದ ನಂದಾ ಹೋಟೆಲ್‌ನಲ್ಲಿ ಇರಲು ಒಪ್ತಿಲ್ಲ.”
“ಅದಕ್ಕೆ ಯಾಕೆ ಯೋಚನೆ? ನಾವೆಲ್ಲಾ ಇಲ್ವಾ? ಶನಿವಾರ ಎಷ್ಟು ಹೊತ್ತಿಗೆ ಬರ‍್ತೀರಾ ಹೇಳಿ?”
“ಬಹುಶಃ ೧೧ ಗಂಟೆಗೆಬ ರ‍್ತೀವಿ. ನೀನು ಅವತ್ತು ರಜ ಹಾಕು. ನಂದಾ ಮೈಸೂರು ಸಿಲ್ಕ್ ಸೀರೆ ತೆಗೆದುಕೊಳ್ಳಬೇಕಂತೆ.”
“ಆಯ್ತು ಹಾಕ್ತೀನಿ ಬನ್ನಿ.”
ಚಂದ್ರಾವತಿ ತುಂಬಾ ಖುಷಿಪಟ್ಟರು. ಆರ್.ಜಿ. ಮಾತ್ರ “ಅಯ್ಯೋ ನಾನವತ್ತು ಬೆಂಗಳೂರಿಗೆ ಬರ‍್ತೀನೀಂತ ನಿಮ್ಮ ತಂದೆಗೆ ಹೇಳಿದ್ದೀನಿ.”
“ಈಗೇನಾಯ್ತು ಬರಲ್ಲಾಂತ ಹೇಳಿದರಾಯ್ತು.”
“ನೀವು ಮಾಡಿ ನಾನು ಮಾಡಲ್ಲ.”
“ಆಗಲಿ ನಾನು ಈಗಲೇ ಮಾಡ್ತೀನಿ” ಎನ್ನುತ್ತಾ ವರು ತಂದೆಗೆ ಕಾಲ್ ಮಾಡಿದಳು.
“ನಾನೇ ಮಾಡೋಣಾಂತಿದ್ದೆ ವರು……….”
“ಯಾಕಪ್ಪಾ?”
“ಅನಿಕೇತ್-ಅವನ ಉಡ್‌ಬಿ ನಿಮ್ಮ ಊರಿಗೆ ಬರ‍್ತಿದ್ದಾರಂತೆ. ಅನಿಕೇತ್ ಫೋನ್ ಮಾಡಿ ‘ನೀವು ಆಂಟಿ ಬನ್ನಿ. ನೀವಾದರೆ ನಮಗೆ ಚೆನ್ನಾಗಿ ಪರಿಚಯ. ಅವರುಗಳು ಹೊಸಬರು ಕೊಂಚ ಸಂಕೋಚವಾಗತ್ತೆ’ ಎಂದ. ನಾನು ನಿಮ್ಮಮ್ಮ ಅವನ ಜೊತೆ ಬರ‍್ತಿದ್ದೇವೆ.”
“ಒಳ್ಳೆಯದಪ್ಪಾ. ಸೀದಾ ಚಂದ್ರಾವತಿ ಆಂಟಿ ಮನೆಗೇ ಬನ್ನಿ ಎಷ್ಟು ಹೊತ್ತಿಗೆ ಹೊರಡುತ್ತೀರ ತಿಳಿಸಿ.”
“ಆಗಲಿ ವರು” ಎಂದರು ರಾವ್.
ಆರ್.ಜಿ ಗೆ ಸಮಾಧಾನವಾಯಿತು.
ಶನಿವಾರ ೧೧ ಗಂಟೆಗೆ ರಾವ್ ಅನಿಕೇತ್ ಶಕುಂತಲಾ ನಂದಾ ಬಂದಿಳಿದರು. ದಾರಿಯಲ್ಲಿ ತಿಂಡಿ ತಿಂದಿದ್ದರಿಂದ ಕಾಫಿ ಮಾತ್ರ ಕುಡಿದರು. ನಂತರ ಅನಿಕೇತ್, ನಂದಾ, ವರು, ಆರ್.ಜಿ ಹೊರಟರು. ನಂದಾ ಒಟ್ಟು ೮ ಮೈಸೂರು ಸಿಲ್ಕ್ ಸೀರೆಗಳನ್ನೂ, ಆರು ಪ್ರಿಂಟೆಡ್‌ಸಿಲ್ಕ್ ತೆಗೆದುಕೊಂಡಳು. ಅನಿಕೇತ್ ಬಲವಂತಮಾಡಿ ವಾರುಣಿಗೆ ಒಂದು ಮೈಸೂರು ಸಿಲ್ಕ್ ಕೊಡಿಸಿದ.
ಅನಿಕೇತ್ ಗುಂಪು ಶಾಪಿಂಗ್ ಹೋದಾಗ ಚಂದ್ರಾವತಿ ರಾವ್-ಶಕುಂತಲಾಗೆ ರಘುಪತಿ-ಶಾರದ ಬಂದಿದ್ದ ವಿಚಾರ ತಿಳಿಸಿದರು. ಅವರ ಕುಟುಂಬದಲ್ಲಿ ಆಗುತ್ತಿರುವ ಬದಲಾವಣೆ, ಶರು ವರ್ತನೆ, ನಿರ್ಮಲಾ ಕುಟುಂಬದ ಸ್ಥಳ ಬದಲಾವಣೆ, ಧರ್ಮನ ಮದುವೆ ಬಗ್ಗೆ ಹೇಳಿದರು. “ರಘುಪತಿಯವರು ಮಗನಿಗೆ ಕೆಲಸಕ್ಕೆ ಸೇರಲು ಹೇಳಿದ್ದಾರೆ. ಆರ್.ಜಿ ಒಪ್ಪಿದ್ದಾನೆ. ರಘುಪತಿಯವರಿಗೆ ಅವರ ಅಣ್ಣಂದಿರು ಅವರು ಕೇಳಿದ ಕಡೆ ಮನೆ ತೆಗೆದುಕೊಡಲು ಸಿದ್ಧರಾಗಿದ್ದಾರೆ. ರಘುಪತಿಯವರು ‘ನಾನು ಪೆನ್ಷನ್ ಪೇಪರ್ ರೆಡಿ ಮಾಡಿಕೊಟ್ಟು ಸಂಪಾದಿಸ್ತೀನಿ’ ಅಂತಿದ್ದಾರೆ. ಆರ್.ಜಿ ಒಪ್ಪಿದ್ದಾನೆ. ಆದರೆ ಅವನಿಗೆ ತನ್ನ ಕನಸು ನನಸಾಗುತ್ತಿಲ್ಲವಲ್ಲ ಎಂಬ ಬೇಸರವಿದೆ.”
“ಆರ್.ಜಿ ಗುರುಕುಲದ ಬಗ್ಗೆ ಹೇಳ್ತಿದ್ರಲ್ವಾ?” ಶಕುಂತಲಾ ಕೇಳಿದರು.
ಚಂದ್ರಾವತಿ ಅದರ ಸಾಧಕ-ಬಾಧಕಗಳ ಬಗ್ಗೆ ಚರ್ಚೆಯಾಗಿರುವುದನ್ನು ತಿಳಿಸಿದರು.
“ಕೈಯಲ್ಲಿ ಹಣ ಇರಬೇಕು. ಏನಾದರು ಕೆಲಸ ಆರಂಭಿಸಿದರೆ ಅದರಿಂದ ಲಾಭ ಆಗಬೇಕು” ಅಂತ ಅವರ ಅಭಿಪ್ರಾಯ. “ಪದೇ ಪದೇ ಅಣ್ಣಂದಿರನ್ನು ಹಣ ಕೇಳಲು ರಘುಪತಿಗಳಿಗಿಷ್ಟವಿಲ್ಲ.”
“ಹೊಸ ಶಾಲೆ ಆರಂಭಿಸೋದು ಅಷ್ಟು ಸುಲಭ ಅಲ್ಲ. ಅದರ ಬದಲು ಈಗಾಗಲೇ ಇರುವ ಶಾಲೆಗಳನ್ನು ಉದ್ಧಾರಮಾಡಬಹುದು” ಎಂದರು ರಾವ್.
“ನೋಡೋಣ ಏನೇನಾಗುತ್ತದೋ” ಎಂದರು ಚಂದ್ರಾವತಿ.
ಶಾಪಿಂಗ್ ಹೋಗಿದ್ದವರು ವಾಪಸ್ಸಾದರು. ಊಟವಾದ ಮೇಲೆ ಆರ್.ಜಿ, ಅನಿಕೇತ್, ನಂದಾ ರಾವ್ ದಂಪತಿಗಳನ್ನು ತಮ್ಮ ಮನೆಗೆ ಕರೆದೊಯ್ದ. ಸಾಯಂಕಾಲ ಶಕುಂತಲಾ ಕಾಫಿ ಮಾಡಿದರು.
ಅನಿಕೇತ್ ಕೇಳಿದ. “ಅಮ್ಮಾ, ಮುಂದೆ ವರು ಏನ್ಮಾಡ್ತಾಳಂತೆ?”
“ಅವಳು ಕೆಲಸಕ್ಕೆ ಸೇರಕ್ಕೆ ತುದಿಗಾಲಿನಲ್ಲಿ ನಿಂತಿದ್ದಾಳೆ.”
“ಹೌದು. ಆರಾಧ್ಯಸರ್ ಅವರಿಗೆ ಕೆಲಸಕೊಡಿಸುವುದಾಗಿ ಹೇಳಿದ್ದಾರೆ.”
“ನೀವೇನು ಮಾಡ್ತೀರ?” ಅನಿಕೇತ್ ಕೇಳಿದ.
“ನಾನೂ ಕೆಲಸಕ್ಕೆ ಸೇರ್ತೀನೆ. ನನಗೆ ‘ಹಳ್ಳಿಗಳ ಮಕ್ಕಳಿಗೆ ಯಾವುದಾದರೂ ರೀತಿಯಲ್ಲಿ ಸಹಾಯ ಮಾಡಬೇಕು ಅನ್ನುವ ಆಸೆ ಇತ್ತು. ಸಧ್ಯಕ್ಕೆ ಆ ನನ್ನ ಕನಸು ನನಸಾಗಲ್ಲ’ ಅನ್ನಿಸತ್ತೆ.”
“ಯಾಕೆ ಹಾಗಂತೀರಾ? ಮನಸ್ಸು ಮಾಡಿದರೆ ಎಲ್ಲಾ ಸಾಧ್ಯ.” ನಂದಾ ಹೇಳಿದಳು.
“ನೀವು ಏನು ಹೇಳ್ತಿದ್ದೀರಾ?”
“ನಿಮಗೇನು ಆಸೆ ಇತ್ತು ಮೊದಲು ಹೇಳಿ.”
“ನನಗೆ ಗುರುಕುಲ ಮಾದರಿ ಶಾಲೆ ಆರಂಭಿಸಿ ಒಳ್ಳೆಯ ಶಿಕ್ಷಣ ಕೊಡುವ ಮನಸ್ಸಿತ್ತು ಆದರೆ……”
“ನಾನು ಒಂದು ವಿಚಾರ ಹೇಳಲಾ?”
“ನಾನು ಹೈಸ್ಕೂಲು ಓದಿದ್ದು ಮೈಸೂರಿನಲ್ಲಿ. ನಮ್ಮ ತಾತ-ಅಜ್ಜಿ ಆಗ ಮೈಸೂರಿನಲ್ಲಿದ್ದರು. ಅವರ ಮನೆಯಲ್ಲಿದ್ದು ಓದುತ್ತಿದ್ದೆ. ನಮ್ಮ ಜೊತೆ ದತ್ತಾತ್ರಿ ಅನ್ನುವ ಹುಡುಗ ಇದ್ದ. ಅವನು ಹಳ್ಳಿಯಿಂದ ಶಾಲೆಗೆ ಬರ‍್ತಿದ್ದ…….”
“ನಮ್ಮ ಹಳ್ಳಿ-ಶಾಲೆಗಳಲ್ಲಿ ಏನೂ ಇಲ್ಲ ಕಣೆ. ಕೂತುಕೊಳ್ಳಲು ಡೆಸ್ಕ್ ಬೆಂಚ್ ಇಲ್ಲ. ಕುಡಿಯುವ ನೀರಿಲ್ಲ. ಶೌಚಾಲಯ ಇಲ್ಲ, ವಿದ್ಯುಚ್ಛಕ್ತಿ ಇಲ್ಲ, ಆಟದ ಮೈದಾನ ಇಲ್ಲ. ಮಕ್ಕಳು ಕೂಲಿ ಮಾಡಿಕೊಂಡು ಶಾಲೆಗೆ ರ‍್ತಾರೆ. ಓದುವ ವಾತಾವರಣ ಇಲ್ಲದಿರುವಾಗ ಮಕ್ಕಳು ಹೇಗೆ ಓದುತ್ತಾರೆ? ಅಂತಹವರಿಗೆ ಏನಾದರೂ ಮಾಡಬೇಕು” ಅಂತಿದ್ದ.
“ನೀವೆಲ್ಲಾ ಯಾವ ಶಾಲೆಯಲ್ಲಿ ಓದ್ತಾ ಇದ್ರಿ?”
“ಪ್ರತಿಷ್ಠಿತ ಹೈಸ್ಕೂಲ್‌ನಲ್ಲಿ ಓದುತ್ತಿದ್ದೆವು. ಅವನ ತಂದೆ ಕಷ್ಟಪಟ್ಟು ಆ ಶಾಲೆಗೆ ತಂದು ಸೇರಿಸಿದ್ದರು. ಅವನು ಜಾಣ. ಮ್ಯಾಥ್ಸ್ ಎಂ.ಎಸ್.ಸಿ. ಮಾಡಿ ಕೆಲಸಕ್ಕೆ ಸೇರಿದ. ಅವನು ಏನು ಮಾಡಿದ ಗೊತ್ತಾ?”
“ಏನು ಮಾಡಿದ?”
“ತನ್ನ ಮೊದಲ ಸಂಬಳದಲ್ಲಿ ತಾನು ಓದುತ್ತಿದ್ದ ಶಾಲೆಯ ಮಕ್ಕಳಿಗೆ ನೋಟ್ ಬುಕ್ ಹಂಚಿದ. ಕ್ರಮೇಣ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳಲು ಆರಂಭಿಸಿದ. ಅವನ ಜೊತೆ ಕೆಲವರು ಕೈಜೋಡಿಸಿದರು. ದತ್ತು ತೆಗೆದುಕೊಂಡ ಶಾಲೆಗಳನ್ನು ಉದ್ಧಾರ ಮಾಡಿದ್ರು. ಶಾಲೆಯ ಕುಂದು ಕೊರತೆಗಳನ್ನು ತಿಳಿದುಕೊಂಡು ಅವುಗಳನ್ನು ಪರಿಹರಿಸಲು ಶುರು ಮಾಡಿದರು. ಈಗ ಅವನು ಬೆಂಗಳೂರು ಯೂನಿವರ್ಸಿಟಿಯಲ್ಲಿ ಕೆಲಸ ಮಾಡ್ತಿದ್ದಾನೆ ತನ್ನ ಕೆಲಸ ಬಿಟ್ಟಿಲ್ಲ.”
“ವಂಡರ್‌ಫುಲ್.”
“ತುಂಬಾ ಒಳ್ಳೆಯ ಸಲಹೆ ಕೊಟ್ಟೆಯಮ್ಮ. ಶಿಕ್ಷಣ ರಂಗದಲ್ಲಿ ಇಷ್ಟು ವರ್ಷಗಳಿದ್ದರೂ ಈ ವಿಚಾರ ಹೊಳೆಯಲೇ ಇಲ್ಲ. ನಿಜ ನಮ್ಮ ಬಹಳಷ್ಟು ಸರ್ಕಾರಿ ಶಾಲೆಗಳಲ್ಲಿ ನೀನು ಹೇಳಿದ ಸಮಸ್ಯೆಗಳಿವೆ. ಆರ್.ಜಿ. ನೀವು ಮೈಸೂರಿನಲ್ಲೇ ಕೆಲಸ ಮಾಡಿಕೊಂಡು ಮೈಸೂರಿನ ಸುತ್ತಮುತ್ತ ಇರುವ ಶಾಲೆಗಳನ್ನು ದತ್ತು ತೆಗೆದುಕೊಳ್ಳಬಹುದು.”
“ನನಗೂ ಹಾಗೇ ಅನ್ನಿಸ್ತಿದೆ” ಆರ್.ಜಿ. ಖುಷಿಯಿಂದ ಹೇಳಿದ.
“ನಾಳೆ ಬೆಳಿಗ್ಗೆ ಚಾಮುಂಡಿಬೆಟ್ಟಕ್ಕೆ ಹೋಗೋಣವಾ?” ಅನಿಕೇತ್ ಕೇಳಿದ.
“ನಾವು ಬರಲ್ಲ. ನೀವುಗಳು ಹೋಗಿಬನ್ನಿ.”
ಅಷ್ಟರಲ್ಲಿ ಚಂದ್ರಾವತಿ ಫೋನ್ ಮಾಡಿದರು. “ನಾಳೆ ನೀವೆಲ್ಲಾ ಇಲ್ಲಿಗೇ ಊಟಕ್ಕೆ ಬರಬೇಕು.”
“ನಾವು ಬರಲು ಸಿದ್ಧ. ಇವರು ಬೆಳಿಗ್ಗೆ ಚಾಮುಂಡಿಬೆಟ್ಟಕ್ಕೆ ಹೊರಟಿದ್ದಾರೆ.”
“ಯಾರ‍್ಯಾರು ಹೊರಟಿದ್ದಾರೆ?”
“ಆರ್.ಜಿ., ಅನಿಕೇತ್, ನಂದಾ, ವರೂಗೂ ಹೇಳಿ.”
“ಬರ‍್ತಾಳೆ. ನೀವು ಹೋಗಕ್ಕೆ ಮುಂಚೆ ಬನ್ನಿ ರೆಡಿಯಾಗರ‍್ತಾಳೆ.”
ಬೆಳಿಗ್ಗೆ ಕೃಷ್ಣ ಕಳುಹಿಸಿದ್ದ ಖಾರಾಭಾತ್, ಸಜ್ಜಿಗೆ ತಿಂದು ಹೊರಟರು. ರಾವ್-ಶಕುಂತಲಾ ಚಂದ್ರಾವತಿ ಮನೆಯ ಬಳಿ ಇಳಿದರು. ವರು ಹತ್ತಿದಳು. ಸೀರೆಯಲ್ಲಿ ಮುದ್ದಾಗಿ ಕಾಣುತ್ತಿದ್ದವಳನ್ನು ಆರ್.ಜಿ. ಕಣ್ತುಂಬಿಕೊಂಡ. ಅನಿಕೇತ್ ಗಮನಿಸಿದವನು ನಂದಾಳ ಕಡೆ ನೋಡಿ ನಗೆ ಬೀರಿದ.
ತಾಯಿ ಚಾಮುಂಡೇಶ್ವರಿಯ ಮುಂದೆ ಕೈ ಮುಗಿದು ನಿಂತವನನ್ನು ನೋಡಿ ಹುಬ್ಬೇರಿಸಿದಳು. ನಂದಾ ಅನಿಕೇತ್ ಜೊತೆ ಅಂಗಡಿಗಳಿಗೆ ಹೋಗಿ ಕೈಗೆ ಸಿಕ್ಕಿದ್ದನ್ನು ಕೊಳ್ಳತೊಡಗಿದಳು.
ದೇವಸ್ಥಾನದಿಂದ ಹೊರಬಂದೊಡನೆ ವರು ಆರ್.ಜಿ.ಯನ್ನು ರೇಗಿಸಿದಳು. “ಏನು ರಾಯರು ಬಹಳ ಹೊತ್ತು ಪ್ರಾರ್ಥನೆ ಮಾಡ್ತಿದ್ರಿ?”
“ಅನಿರೀಕ್ಷಿತವಾಗಿ ನನ್ನ ಸಮಸ್ಯೆಗೆ ಪರಿಹಾರವಾಗಿ ಒಂದು ರೀತಿಯ ನಿರಾಳತೆಯ ಅನುಭವವಾಗ್ತಿದೆ. ಒಂದು ರೀತಿಯ ಆಶಾಭಾವನೆ ಮೂಡಿದೆ. ನನ್ನ ಉಳಿದ ಕನಸುಗಳನ್ನೂ ನನಸು ಮಾಡು ತಾಯಿ ಅಂತ ಕೇಳಿಕೊಂಡೆ.”
“ಯಾವ್ಯಾವ ಕನಸುಗಳಿದ್ದವು ಕೇಳಬಹುದಾ?”
“ಗುರುಕುಲದ ಕನಸು ಕೈಬಿಟ್ಟಾಗ ತುಂಬಾ ಬೇಜಾರಾಗಿತ್ತು. ಈಗ ಬೇರೆ ರೀತಿಯಲ್ಲಿ ಶಾಲಾ ಮಕ್ಕಳಿಗೆ ಸಹಾಯ ಮಾಡಬಹುದಲ್ಲಾಂತ ಖುಷಿಯಾಗ್ತಿದೆ.”
“ವೆರಿಗುಡ್.”
“ನಮ್ತಂದೆ-ತಾಯಿ ಜೊತೆ ಯಾವಾಗಲೂ ಇರಬೇಕು ಅನ್ನಿಸ್ತಿತ್ತು. ನಾವು ಒಟ್ಟು ಕುಟುಂಬದಲ್ಲಿ ಇದ್ದಿದ್ದರಿಂದಲೋ ಏನೋ ಯಾರೋ ಊಟ ಮಾಡಿಸ್ತಿದ್ರು. ಯಾರೋ ಮಲಗಿಸ್ತಿದ್ರು. ಮತ್ತೆ ಯಾರೋ ಬಟ್ಟೆ ತರುತ್ತಿದ್ದರು. ಕೊಂಚ ದೊಡ್ಡವನಾದ ಮೇಲೆ ಅಪ್ಪನ ಜೊತೆ ಸಂತೆಗೆ ಹೋಗಬೇಕು, ಸುತ್ತಾಡಬೇಕು ಅನ್ನಿಸ್ತಿತ್ತು. ಅಪ್ಪ ಕೈಗೆ ಸಿಗುತ್ತಿರಲಿಲ್ಲ. ಅಮ್ಮನ ತೊಡೆಯ ಮೇಲೆ ಮಲಗಬೇಕು ಅನ್ನಿಸ್ತಿತ್ತು. ಅಮ್ಮಾ ಎಲ್ಲೋ ಇರ‍್ತಿದ್ರು. ಈಗ ಅವರ ಜೊತೆ ಇರಬಹುದೂಂತ ಖುಷಿಯಾಗ್ತಿದೆ.”
“ರಾಗಿಣಿಗೆ ಕೂಡ ಈ ವಿಚಾರದಲ್ಲಿ ಬೇಜಾರಿತ್ತು………”
“ಹೋದವಾರ ಮಡಿಕೇರಿಗೆ ಹೋದಾಗ ನೀವೂ ರಾಗಿಣಿ ಏನೋ ಪಿಸಪಿಸ ಮಾತಾಡ್ತಿದ್ರಲ್ಲಾ ಏನದು? ರಾಗಿಣಿ ಆರಾಮವಾಗಿದ್ದಾಳೆ ತಾನೆ?”
“ತುಂಬಾ ಖುಷಿಯಾಗಿದ್ದಾಳೆ. ಅತಿಯಾದರೆ ಅಮೃತಾನೂ ವಿಷ ಅನ್ನುತ್ತಾರಲ್ಲ ಹಾಗಾಗಿದೆ ಅವಳ ಸ್ಥಿತಿ.”
“ಏನು ಹಾಗಂದ್ರೆ?”
“ನಡೆಯೋದು ಮರೆತು ಹೋಗಿದೆ ಕಣೆ. ಶ್ರೀಮಂತರ ಮನೆ ನೋಟ ಚೆನ್ನ, ಬಡವರ ಮನೆಯ ಊಟ ಚೆನ್ನ ಅನ್ನುವುದು ಅದಕ್ಕೆ ಅಂದಳು.”
“ಯಾಕೆ ಅವರ‍್ಮನೇಲಿ ಊಟ ಚೆನ್ನಾಗಿರಲ್ವಾ?”
“ಹಾಗಲ್ಲಾರಿ. ಅವರ ಮನೆಯಲ್ಲಿ ತಿಂಡಿಗೇ 5 ಐಟೆಮ್ಸ್ ಇರುತ್ತದೆ. ಇನ್ನು ಊಟದ ಬಗ್ಗೆ ಹೇಳುವಂತೆಯೇ ಇಲ್ಲ. ‘ಹಳೆಯ ದಿನಗಳೇ ಚೆನ್ನಾಗಿದ್ದವು ಕಣೆ. ನಾವು ರಸ್ತೆಯಲ್ಲಿ ಪಾನಿಪೂರಿ, ಚುರುಮುರಿ ತಿನ್ನುತ್ತಿದ್ದುದು, ಹೋಟೆಲ್‌ನಲ್ಲಿ ಮಸಾಲದೋಸೆ, ಜಾಮೂನು ತಿನ್ನುತ್ತಿದ್ದುದೇ ಸಖತ್ ಆಗ್ತಿರುತ್ತಿತ್ತು’ ಅಂದಳು.”
“ಮಾನಸ ಹೇಗಿದ್ದಾಳೆ?”
“ರಾಗಿಣಿ ಮನೆಯವರಿಗೆ ಗಂಡು ಮಗು ಬೇಕಾಗಿತ್ತು. ಮಾನಸ ಮನೆಯವರಿಗೆ ಹೆಣ್ಣು ಮಗು ಬೇಕಾಗಿತ್ತು. ಆದರೆ ಇಬ್ಬರ ಆಸೆಗಳೂ ಈಡೇರಿಲ್ಲ.”
“ಮಾನಸಾಗೆ ಮಗು ಇಷ್ಟವಿಲ್ವಾ?”
“ಇಷ್ಟವಿಲ್ಲದೆ ಇರುತ್ತದಾ? ಅವರ ಮನೆಗೆ ಅವಳ ಬಾಣಂತನ ಮಾಡಕ್ಕೆ ಅವಳ ತಾಯಿ, ಅಜ್ಜಿ ಜೊತೆ ಅವಳ ಚಿಕ್ಕಮ್ಮ, ಅವಳ ತಾಯಿಯ ತಾಯಿ ಬಂದಿದ್ದಾರೆ.”
“ನನ್ನ ಮಗು ನನ್ನ ಕೈಗೇ ಸಿಗ್ತಿಲ್ಲ ಕಣೆ” ಅಂತ ಫೋನ್‌ನಲ್ಲೇ ಅತ್ತಳು.
ಆರ್.ಜಿ. ಚಪ್ಪಾಳೆ ಹಾಕಿಕೊಂಡು ನಕ್ಕ.
“ಇವರಿಬ್ಬರೆಲ್ಲಿ ಕಾಣ್ತಾ ಇಲ್ಲ”
“ಯಾವುದೋ ಮರದ ಕೆಳಗೆ ಕುಳಿತು ಭಾವೀ ಜೀವನದ ಬಗ್ಗೆ ಕನಸು ಕಾಣ್ತಿರಬೇಕು.”
“ನಾವು ಕನಸುಕಾಣುವುದಕ್ಕೇನಿದೆ? ಕನಸು ನನಸಾಗಿದೆಯಲ್ಲಾ? ಕನಸು ಕಾಣಬೇಕಿರುವವರು ನೀವು…..”
“ಬೇರೆ ಕನಸು ಕಾಣಲು ಆಗಲ್ಲ. ಕಣ್ಮುಚ್ಚಿದರೆ ಸಾಕು ಗಂಗೋತ್ರಿ ಕಾಲೇಜು, ಪರೀಕ್ಷೆ ಇವುಗಳೇ ಬೀಳುತ್ತವೆ” ಎಂದಳು ವರು.
“ಪರೀಕ್ಷೆ ಯಾವಾಗ?”
“ಮುಂದಿನ ತಿಂಗಳು ಎರಡನೇ ವಾರದಲ್ಲಿ ಬೀಳಬಹುದು. ಆಮೇಲೆ ರಜ. ಫಲಿತಾಂಶಕ್ಕಾಗಿ ಕಾಯುವುದು. ಯಾಕೋ ೩ ಮತ್ತು ನಾಲ್ಕನೇ ಸೆಮಿಸ್ಟರ್‌ಗಳು ಬೇಗ ಮುಗಿಯಿತು ಅನ್ನಿಸ್ತಿದೆ.”
ಎಲ್ಲರೂ ಕಾರು ಹತ್ತಿದರು.
ಈ ಕಾದಂಬರಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=45050
(ಮುಂದುವರಿಯುವುದು)

–ಸಿ.ಎನ್. ಮುಕ್ತಾ, ಮೈಸೂರು

