(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
“ನಾನು ಪರಕೆ ಧೂಳು ತೆಗೆಯುವ ಕೋಲು, ಒರೆಸೋ ಬಟ್ಟೆ ಎಲ್ಲಾ ತರಬೇಕು. ನೀವು ಹೋಗಿ.”
ವಾರುಣಿ ದಾರಿಯಲ್ಲಿ ಟೀ ಪೌಡರ್, ಹಾಲು ತೆಗೆದುಕೊಂಡಳು.
“ಮನೆಯಲ್ಲಿ ಸಕ್ಕರೆ ಇದೆ. ಬನ್ನಿ ಹೋಗೋಣ.”
ಆರ್.ಜಿ. ಮನೆ ಸರಸ್ವತಿಪುರಂನಲ್ಲಿ ಜೆ.ಎಸ್.ಎಸ್ ಕಾಲೇಜ್ ಬಳಿ ಇತ್ತು. ಮನೆ ಸಾಕಷ್ಟು ದೊಡ್ಡದಾಗಿತ್ತು. ಗೇಟ್ ದಾಟಿದೊಡನೆ ಕಾರ್ ಪಾರ್ಕಿಂಗ್‌ಗೆ ಜಾಗವಿತ್ತು. ಮನೆ ಪ್ರವೇಶಿಸುತ್ತಿದ್ದಂತೆ ವೆರಾಂಡ. ವೆರಾಂಡದಲ್ಲಿ ಒಂದು ಸೋಫಾ, ಎರಡು ಸೋಫಾ ಚೇರ್‌ಗಳಿದ್ದವು. ಮಧ್ಯದಲ್ಲಿ ಟೀಪಾಯ್ ಇಡಲಾಗಿತ್ತು.
ಹಾಲ್‌ನಲ್ಲಿ ಎರಡು ದೊಡ್ಡ ರೂಮ್‌ಗಳಿದ್ದವು. ಹಾಲ್ ದಾಟಿದೊಡನೆ ಚಿಕ್ಕ ಪ್ಯಾಸೇಜ್ ಇದ್ದು ಅಲ್ಲಿ ಮಹಡಿಗೆ ಮೆಟ್ಟಿಲುಗಳಿದ್ದವು. ಮುಂದೆ ಹೋದರೆ ಅಡಿಗೆ ಮನೆ, ಪೂಜಾರೂಮು ಒಂದು ಕಡೆ, ಮತ್ತೊಂದು ಕಡೆ ಸ್ಟೋರ್‌ರೂಮ್, ಬಚ್ಚಲುಮನೆಗಳಿದ್ದವು. ನಾಲ್ಕು ಮೆಟ್ಟಲು ಇಳಿದರೆ ದೊಡ್ಡ ಅಂಗಳ, ಬಟ್ಟೆ ಒಗೆಯುವ ಕಲ್ಲು, ಎರಡು ಸಂಡಾಸ್‌ಗಳಿದ್ದವು. ಮಹಡಿ ಮೇಲೆ ಚಿಕ್ಕ ಹಾಲು ಬಾಲ್ಕನಿ, ಅಟ್ಯಾಚ್ಡ್ ಬಾತ್‌ರೂಂಗಳಿರುವ ಎರಡು ರೂಂಗಳಿದ್ದವು.
ವಾರುಣಿ ಕೆಳಗೆ ಬಂದು ವೆರಾಂಡದ ಸೋಫಾದಲ್ಲಿ ಕುಳಿತಳು.
“ಹೇಗಿದೆ ನಮ್ಮ ಮನೆ?”
“ನಿಮಗೆ ಇಷ್ಟು ದೊಡ್ಡ ಮನೆ ಬೇಕಾಗಿತ್ತಾ?”
“ನಾನು ಬಯಸಿ ಬಯಸಿ ಈ ಮನೆಗೆ ಬಂದಿದ್ದೀನಾ? ನಮ್ತಂದೆ, ತಾಯಿ ದೊಡ್ಡಪ್ಪಂದಿರು ನಾವು ಆಗಾಗ್ಗೆ ರ‍್ತಾ ರ‍್ತೇವೆ ಇಷ್ಟು ದೊಡ್ಡ ಮನೆ ಬೇಕೂಂತ ಮನೆ ಮಾಡಿದ್ರು……”
ಅಷ್ಟರಲ್ಲಿ ಮಲ್ಲಿ, ಅವಳ ಗಂಡ ಬಂದರು.
ಹಾಲ್‌ನಲ್ಲಿ ಒಂದು ರೂಂನಲ್ಲಿದ್ದ ವಾರ್ಡ್ರೋಬ್ ಕ್ಲೀನಾಗಿತ್ತು. ವಾರುಣಿಗೆ ಅದನ್ನು ಕ್ಲೀನ್ ಮಾಡಲು ಕಷ್ಟವಾಗಲಿಲ್ಲ. ಹಾಸಿಗೆಗೆ ಹಾಕಿದ್ದ ಬೆಡ್‌ಶೀಟ್ಸ್, ಕರ್ಟನ್ಸ್ ತೆಗೆದು ಒಗೆಯಲು ಹಾಕಿದಳು. ರಗ್ಗುಗಳನ್ನು ಬಿಸಿಲಿಗೆ ಹಾಕಿದಳು.
ಆರ್.ಜಿ ರೂಮ್ ವಾರ್ಡ್ರೋಬ್ ತೆಗೆದೊಡನೆ ಒಂದು ಹೊರೆ ಬಟ್ಟೆಗಳು ಕೆಳಗೆ ಬಿದ್ದವು. ಎಲ್ಲಾ ತುರುಕಿದ್ದುದ ಮೂಟೆ ಸಮೇತ ಕೆಳಗೆ ಬಿತ್ತು. ಅವಳು ಎಲ್ಲವನ್ನೂ ತೆಗೆದು ಒಗೆಯ ಬೇಕಿರುವುದನ್ನು ಒಂದು ಕಡೆ ಹಾಕಿ, ಐರನ್‌ಗೆ ಕಳುಹಿಸಬೇಕಿರುವುದನ್ನು ಬೇರೆ ಮಾಡಿದಳು. ವಾರ್ಡ್ರೋಬ್‌ನಿಂದ ಗಬ್ಬುವಾಸನೆ ರ‍್ತಿತ್ತು. ಅವಳು ತೆಗೆದು ನೋಡಿದಳು. ಹಲ್ಲಿಗಳು, ಜಿರಳೆಗಳು ಸತ್ತು ಬಿದ್ದಿದ್ದವು. ಅವಳು ಪರಕೆ ತೆಗೆದು ವಾರ್ಡ್ರೋಬ್ ಗುಡಿಸಿದಳು. ಮಂಚದ ಮೇಲೆ ಇಟ್ಟಿದ್ದ ಎಲ್ಲಾ ಬಟ್ಟೆಗಳನ್ನು ಒಂದು ಗಂಟು ಕಟ್ಟಿದಳು. ಬೆಡ್‌ಶೀಟ್ಸ್, ಕರ್ಟನ್ಸ್ ತೆಗೆದಳು. ಐದು ಗಂಟೆಯ ಹೊತ್ತಿಗೆ ಟೀ ಮಾಡಿದಳು.
“ಟೀ ತುಂಬಾ ಚೆನ್ನಾಗಿದೆ.”
“ಬೇಕಾದ್ರೆ ಇನ್ನೂ ಒಂದು ಕಪ್ ಕೊಡ್ತೀನಿ. ಮೊದಲು ನಿಮ್ಮ ಎಲ್ಲಾ ಬಟ್ಟೆಗಳನ್ನು ಆಂಟಿಮನೆಗೆ ತಲುಪಿಸಿ ಬನ್ನಿ.”
“ಯಾಕ್ರಿ?”
“ನಿಮ್ಮ ವಾರ್ಡ್ರೋಬ್‌ನಲ್ಲಿ ಹಲ್ಲಿಗಳು, ಜಿರಳೆಗಳು ಸತ್ತು ಬಿದ್ದಿದ್ದವು. ನೀವು ಒಗೆಯದೆ ಆ ಬಟ್ಟೆಗಳನ್ನು ಉಪಯೋಗಿಸಬೇಡಿ.”
“ನಾನು ಎಲ್ಲಾ ಒಗೆಯಲು ಕೊಟ್ಟರೆ ಏನು ಹಾಕಿಕೊಳ್ಳಲಿ?”
“ಹೈದರಾಬಾದ್‌ಗೆ ಬಟ್ಟೆ ತಂದಿದ್ರಲ್ಲಾ ಆ ಸೂಟ್‌ಕೇಸ್ ಎಲ್ಲಿ?”
ಅವನು ತಂದಿಟ್ಟ. ಅದರಲ್ಲೂ ಕೆಲವು ಒಗೆಯದ ಬಟ್ಟೆಗಳಿದ್ದವು. ಕೆಲವು ಒಗೆದ ಬಟ್ಟೆಗಳಿದ್ದವು.’
“ಇದನ್ನು ಹಾಕಿಕೊಳ್ಳಿ. ನೀವು ಹೋಗುವ ಮೊದಲು ನಿಮ್ಮ ಬುಕ್ಸ್ ಇರುವ ರೂಂ ತೋರಿಸಿ.”
“ನಾನು ಅದನ್ನು ಕ್ಲೀನ್ ಮಾಡಿದ್ದೀನಿ.”
“ನಾನು ನೋಡಬೇಕು.”
ಆ ರೂಮ್‌ನ ವಾರ್ಡ್ರೋಬ್‌ನಲ್ಲಿ ಪುಸ್ತಕಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಮಂಚದ ಮೇಲೂ ಪುಸ್ತಕಗಳಿದ್ದವು. ಪುಸ್ತಕಗಳಿಗೆಂದೇ ಇದ್ದ ಅಲ್ಮೇರಾ ಖಾಲಿಯಾಗಿತ್ತು.
“ಇದೇನಾ ನೀವು ನೀಟ್ ಆಗಿ ಇಟ್ಟುಕೊಂಡಿರುವ ರೀತಿ?”
ಅವನು ಮಾತಾಡಲಿಲ್ಲ. ಅಷ್ಟರಲ್ಲಿ ಮಲ್ಲಿ ಬಂದಳು.
“ಟೀ ಕುಡಿದೆಯಾ?”
“ಆಯ್ತು. ಈ ಕೆಲಸ ಈಗ ಮುಗಿಯೋ ತರಹ ಕಾಣ್ತಿಲ್ಲ. ಆರೂವರೆ ಹೊತ್ತಿಗೆ ನಮಗೆ ತಿಂಡಿ ತಂದುಕೊಡಿ.”
“ಆಗಲಿ ರ‍್ತೀನಿ.”
“ಮಲ್ಲಿ ಬೆಡ್‌ಶೀಟ್ ಕರ್ಟನ್ಸ್ ಇಲ್ಲಿ ವಾಷಿಂಗ್ ಮಿಷನ್‌ಗೆ ಹಾಕಿ ಉಳಿದ ಬಟ್ಟೆಗಳನ್ನು ಆಂಟಿಗೆ ಕಳಿಸ್ತಿದ್ದೀನಿ.”
“ನಾನು ಕೆಳಗಡೆ ರೂಮ್‌ಗಳು ಹಾಲ್, ಅಡಿಗೆ ಮನೆ ಧೂಳು ತೆಗೆದು ಒರೆಸಿದ್ದೀನಿ. ನನ್ನ ಗಂಡ ಓಗಿ ನನ್ನ ನಾದಿನೀನ್ನ ಕರ‍್ಕೊಂಡು ಬರ‍್ತಾನೆ. ಅವಳು ಒಂದ್ಸಲ ಒರೆಸಲಿ.”
ಆರ್.ಜಿ. ಬಟ್ಟೆಗಳನ್ನು ತೆಗೆದುಕೊಂಡು ಹೋಗಿ ಚಂದ್ರಾವತಿಗೆ ಕೊಟ್ಟು ಬಂದ. ಅವರು “ಆರ್.ಜಿ ಮಲ್ಲಿ, ಅವಳ ಗಂಡಂಗೆ ಏನಾದ್ರೂ ತಿಂಡಿ ತೊಗೊಂಡು ಹೋಗು.”
“ಎಲ್ಲರಿಗೂ ತೆಗೆದುಕೊಂಡು ಹೋಗ್ತೀನಿ.”
“ನೀನು ದೋಸೆ, ಇಡ್ಲಿ ತೆಗೆದುಕೊಂಡು ಹೋಗಿ ವರುಗೆ ಕೊಟ್ಟರೆ ಅವಳು ರಾತ್ರಿ ಏನೂ ತಿನ್ನೋದೇ ಇಲ್ಲ…….”
“ಇಲ್ಲ ಆಂಟಿ ನಾನು ಅವರಿಗಿಷ್ಟವಾದ ತಿಂಡಿ ತೊಗೊಂಡು ಹೋಗ್ತೀನಿ. ಅವರು ನಾವು ಟೂರ್ ಹೋಗಿದ್ದಾಗ ತುಂಬಾ ಇಷ್ಟಪಟ್ಟು ಸಮೋಸ, ಪಾನಿಪೂರಿ ತಿನ್ನುತ್ತಿದ್ದರು. ಅದೇ ತೆಗೆದುಕೊಂಡು ಹೋಗ್ತೀನಿ” ಎಂದ ಆರ್.ಜಿ.
ಅಂದು ಅವರು ಆರ್.ಜಿ. ಮನೆಯಿಂದ ಹಿಂದಿರುಗಿದಾಗ ಗಂಟೆ ಎಂಟೂವರೆಯಾಗಿತ್ತು. ಚಂದ್ರಾ ಆಂಟಿ ತರಿಸಿದ್ದ ಊಟ ಮಾಡಿ ಎಲ್ಲಾ ಮಲಗಿದರು. ಆರ್.ಜಿ ಹೋಗುವ ಮೊದಲು ಚಂದ್ರಾವತಿಗೆ ಹೇಳಿದ. “ನಿಮ್ಮ ತಮ್ಮನವರಿಗೆ ನಮ್ಮ ತಂದೆ-ತಾಯಿ ಇರುವಷ್ಟು ದಿನ ಊಟ-ತಿಂಡಿ ಕಳಿಸಲು ಹೇಳ್ತೀರಾ?”
“ನೀನು ನಿಮ್ಮನೆ ಲೊಕೇಶನ್ ಕಳಿಸು.”
“ನಾಳೆ ಅವರು ಎಷ್ಟು ಹೊತ್ತಿಗೆ ಬರುತ್ತಾರೋ ಗೊತ್ತಿಲ್ಲ. ಬಂದಮೇಲೆ ತಿಳಿಸ್ತೀನಿ.”
ಆಂಟಿ ಒಪ್ಪಿದರು.
ಮರುದಿನ ರಘುಪತಿ-ರಮಾ ಒಂದು ಗಂಟೆಯ ಹೊತ್ತಿಗೆ ತಲುಪಿದರು. ಆರ್.ಜಿ. ಊಟ ತರಿಸಿದ್ದ. ಅವರು ಹೊಗಳುತ್ತಾ ಊಟ ಮಾಡಿದರು.
“ವಾರುಣಿ, ಚಂದ್ರಾಮೇಡಂ ಹೇಗಿದ್ದಾರೆ?”
“ಚೆನ್ನಾಗಿದ್ದಾರೆ. ನಾಳೆ ಅವರ ಮನೆಗೆ ಹೋಗೋಣ. ನೀವು ರೆಸ್ಟ್ ಮಾಡಿ.”
“ನಾವಿರೋದ್ರಲ್ಲಿ ಯಾವಾಗಲಾದರೂ ಹೋಗಬಹುದು. ಈದಿನ ಭಾನುವಾರ ಅಲ್ವಾ? ಅವರನ್ನು ಆರು ಗಂಟೆಗೆ ಬರಲು ಹೇಳ್ತೀಯಾ?”
ರಮಾ ಕೇಳಿದರು.
“ಯಾಕಮ್ಮಾ?”
“ನಾನು ನಿನ್ನ ಹತ್ತಿರ ಮುಖ್ಯವಾದ ವಿಷಯ ಮಾತಾಡಬೇಕು. ಅವರೂ ಇದ್ರೆ ಒಳ್ಳೆಯದು……….”
“ಅವರು ಯಾಕಮ್ಮಾ?”
“ನೀನು ಹೇಳಪ್ಪ.”
ಆರ್.ಜಿ. ಫೋನ್ ಮಾಡಿ ಹೇಳಿದ. ಚಂದ್ರಾವತಿ ಖುಷಿಯಿಂದ ಒಪ್ಪಿದರು. ಮಲ್ಲಿ “ನಾನು ಶಾರದಾ ಜೊತೆ ೈರ‍್ತೀನಿ. ನೀವು ಓಗಿ ಬನ್ನಿ” ಎಂದಳು. ಬರುವ ದಾರಿಯಲ್ಲಿ ಚೂಡವಲಕ್ಕಿ, ಕೊಬ್ಬರಿಮಿಠಾಯಿ ತೆಗೆದುಕೊಂಡರು.
ರಮಾ ಅವರನ್ನು ತುಂಬಾ ಆತ್ಮೀಯವಾಗಿ ಸ್ವಾಗತಿಸಿ ವಾರುಣಿಯ ಯೋಗಕ್ಷೇಮ ವಿಚಾರಿಸಿಕೊಂಡರು. ಚಂದ್ರಾವತಿ ತಂದಿದ್ದ ತಿಂಡಿ ಕೊಟ್ಟು ಕಾಫಿ ಮಾಡಿದರು.
“ನಿಮಗೆಲ್ಲಾ ಒಂದು ಸಂತೋಷದ ವಿಷಯ ಹೇಳಬೇಕು. ನಮ್ಮ ಧರ್ಮರಾಜ್ ಮದುವೆ ಗೊತ್ತಾಯಿತು.”
“ಹೌದಾ? ಎಲ್ಲಿಯ ಹುಡುಗಿ? ಆರ್.ಜಿ ಕೇಳಿದ.
“ಹಾಸನದ ಹುಡುಗಿ ಟೀಚರ್. ಧರ್ಮಂದು ಲವ್‌ಮ್ಯಾರೇಜ್.”
“ಪರವಾಗಿಲ್ಲ ಅಣ್ಣ……….”
“ಹುಡುಗಿ ಬುದ್ಧಿವಂತಳು. ಕಂಡಿಷನ್ ಹಾಕಿ ಮದುವೆಯಾಗ್ತಿದ್ದಾಳೆ.”
“ಅವಳು ಕಂಡಿಷನ್ಸ್ ಹಾಕಿದ್ದಾಳಾ?”
“ಹುಂ. ಅವಳು ಪ್ರೈಮರಿ ಸ್ಕೂಲು ಟೀಚರ್. ಗರ‍್ನಮೆಂಟ್ ಕೆಲಸ. ಕರಸ್ಪಂಡೆನ್ಸ್ನಲ್ಲಿ ಬಿ.ಎ. ಓದ್ತಿದ್ದಾಳೆ. ತಂದೆ ಪುರೋಹಿತರು. ಇವಳು ಒಬ್ಬಳೇ ಮಗಳು. ‘ನಾನು ಹಳ್ಳಿಗೆ ಬರಲ್ಲ. ನಾನೇ ಬೇಕೂಂದ್ರೆ ಹಾಸನದಲ್ಲಿ ಅಂಗಡಿ ಇಡಿ’ ಅಂದಿದ್ದಾಳೆ.”
“ದೊಡ್ಡಪ್ಪ ಒಪ್ಪಿದ್ರಾ?”
“ಒಪ್ಪಿದರು. ಈಗ ಹಾಸನದಲ್ಲಿ ಒಂದು ಮನೆ ನೋಡಿದ್ದಾರೆ. ಭೋಗ್ಯಕ್ಕೋ, ಖರೀದಿಗೋ ನಿರ್ಧಾರವಾಗಿಲ್ಲ……..”
“ಆಶ್ಚರ್ಯ ಅನ್ನಿಸ್ತಿದೆ.”
“ಇದರಲ್ಲಿ ಆಶ್ಚರ್ಯ ಏನುಬಂತು?” ಎಂದ ರಮಾ ನಿರ್ಮಲಾ ಮನೆಯ ಕಥೆ ಹೇಳಿದರು.
“ಕಾಲ ಬದಲಾಗ್ತಿದೆ. ಗೋಪಿ ನೀನೂ ಬದಲಾಗಬೇಕು.”
“ನನಗರ್ಥವಾಗ್ತಿಲ್ಲ ಅಪ್ಪ.”
“ಅಣ್ಣಂದಿರಿಗೆ ಮುಂದೆ ಬೆಂಗಳೂರಿಗೆ ಹೋಗಬೇಕಾಗಬಹುದು ಅನ್ನಿಸ್ತಿದೆ. ಇವತ್ತು ಧರ್ಮ ಹಳ್ಳಿಬಿಟ್ಟು ಹೊರಟಿದ್ದಾನೆ. ನಾಳೆ ಕೀರ್ತಿ ಕೂಡ ಹೋಗಬಹುದು. ಗಿರಿಜಾ ಕೂಡ ‘ನನ್ನ ಮಗೂಗೆ ಒಳ್ಳೆಯ ವಿದ್ಯಾಭ್ಯಾ ಬೇಕು’ ಅಂತ ಬಯಸಬಹುದು.”
“ಅದು ಸಹಜ” ಎಂದರು ಚಂದ್ರಾವತಿ.
“ನೀನು ಇಂಗ್ಲೀಷ್ ಎಂ.ಎ ಆದಮೇಲೆ ಕೆಲಸಕ್ಕೆ ಸೇರಬೇಕು ಗೋಪಿ. ನೀನು ಗುರುಕುಲ ಮಾದರಿ ಶಾಲೆ ತೆಗೆಯಲು ಬಯಸ್ತಿದ್ದೀಯ. ಉಚಿತ ವಿದ್ಯಾಭ್ಯಾಸ ಕೊಡಬೇಕು ಅಂತಿದ್ದೀಯ. ಅದು ಸಾಧ್ಯಾನಾ? ಲಾಭ ಇಲ್ಲದಿರುವ ಕಡೆ ನಾವು ಖರ್ಚುಮಾಡ್ತಾನೇ ಹೋದರೆ ಏನು ಪ್ರಯೋಜನ?”
“ದೊಡ್ಡಪ್ಪಂದಿರು ಕೊಡ್ತೀನಿ ಅಂದಿದ್ದಾರಲ್ಲಾ?”
“ಅವರು ಎಷ್ಟು ದಿನಗಳು ಕೊಡಬಹುದು? ಅವರು ತಮ್ಮ ಬಗ್ಗೆಯೂ ಯೋಚನೆ ಮಾಡಬೇಕಲ್ವಾ?” ರಮಾ ಕೇಳಿದರು.
“ನೋಡು ಗೋಪಿ ನೀನು ಕೆಲಸಕ್ಕೆ ಸೇರು. ನನಗೂ ಪೆನ್ಷನ್ ಬರತ್ತೆ. ನಾನು ಪೆನ್ಷನ್ ಪೇಪರ‍್ಸ್ ಮಾಡಿಕೊಟ್ರೆ ಹಣ ಬರುತ್ತದೆ. ಅಣ್ಣಂದಿರು ನೀನು ಇಷ್ಟಪಡುವ ಜಾಗದಲ್ಲಿ ಮನೆ ತೆಗೆದುಕೊಡಲು ಸಿದ್ಧರಾಗಿದ್ದಾರೆ.”
“ನಿಮ್ತಂದೆ ಹೇಳ್ತಿರೋದು ಸರಿಯಾಗಿದೆ ಆರ್.ಜಿ. ನಿನ್ನದೇ ಹಣ ಕೈಯ್ಯಲ್ಲಿರುವಾಗ ನೀನು ಅದನ್ನು ನಿನಗಿಷ್ಟ ಬಂದ ಕೆಲಸಕ್ಕೆ ಬಳಸಬಹುದು. ಪದೇ ಪದೇ ಹಣ ಕೇಳುವುದಕ್ಕೆ ನಿಮ್ಮ ತಂದೆಗೆ ಸಂಕೋಚ ಆಗುತ್ತದಲ್ವಾ?” ಚಂದ್ರಾವತಿ ಹೇಳಿದರು.
“ಈಗ ನೀನು ಗುರುಕುಲ ಮಾದರಿ ಶಾಲೆ ತೆಗೆದರೂ ಯಾರು ರ‍್ತಾರೆ ಹೇಳು. ಹಳ್ಳಿಯವರೂ ಇಂಗ್ಲೀಷ್ ಮೀಡಿಯಂ ಶಾಲೆ ಬಯಸುತ್ತಾರೆ. ನಾವು ಹಳ್ಳಿಯ ಶಾಲೆಗಳ ಬಗ್ಗೆ ಏನಾದ್ರೂ ಮಾಡೋಣ ತಜ್ಞರನ್ನು ಕೇಳೋಣ. ‘ನೀನು ಕೆಲಸಕ್ಕೆ ಸೇರು. ನೀನು ಎಲ್ಲರ‍್ತೀಯೋ ನಾವೂ ಅಲ್ಲೇ ರ‍್ತೀವಿ.’ ನಮಗ್ಯಾದ್ರೂ ಯಾರಿದ್ದಾರೆ?” ರಮಾ ಕೇಳಿದರು.”
“ಆಗಲೀಮ್ಮ. ನಾನು ಖಂಡಿತಾ ಕೆಲಸಕ್ಕೆ ಸರ‍್ತೀನಿ. ಪ್ರಪಂಚ ಬದಲಾಗ್ತಿರುವಾಗ ನಾವೂ ಬದಲಾಗೋಣ. ನೀವು ಯೋಚಿಸಬೇಡಿ” ಆರ್.ಜಿ. ಹೇಳಿದ.
“ನಾವು ನಮ್ಮ ಕಾಲದಲ್ಲಿ ಸೊಸೆಯರು ತುಂಬಾ ಹೊಂದಿಕೊಂಡಿದ್ದೆವು. ನಮ್ಮ ಗಿರಿಜಾನೂ ಪರವಾಗಿಲ್ಲ. ಆದರೆ ಮುಂದೆ ಬರುವವರು ನಮ್ಮ ಗಿರಿಜಾ ತರಹ ಇರ‍್ತಾರೇಂತ ಹೇಳಕ್ಕಾಗಲ್ಲ.”
ಅಲ್ಲಿಗೇ ರಾತ್ರಿ ಊಟ ಕಳುಹಿಸಲು ಚಂದ್ರಾವತಿ ತಮ್ಮನಿಗೆ ಫೋನ್ ಮಾಡಿದರು.
“ನಮಗೆ ಚಪಾತಿ, ಪಲ್ಯ ಸಾಕು” ಎಂದರು ರಮಾ.
ಊಟ ಬಂದ ನಂತರ ತಮ್ಮ ಮನೆಯ ಊಟ ತೆಗೆದುಕೋಂಡು ಚಂದ್ರಾವತಿ, ಆರ್.ಜಿ ಮನೆ ಬಿಟ್ಟರು. ಆರ್.ಜಿ ಕೆಲಸಕ್ಕೆ ಸೇರಲು ಒಪ್ಪಿದ್ದು ಅವರಿಗೆ ಸಂತೋಷವಾಗಿತ್ತು.
ತಾವಿದ್ದ ಒಂದು ವಾರದಲ್ಲಿ ರಮಾ ಹಲವಾರು ಸಲ ಚಂದ್ರಾವತಿ ಮನೆಗೆ ಬಂದು ಹೋದರು. ಅವರು ಮಾತುಕತೆಯಾಡುವಾಗ ಶರು ವಿಚಾರ ಬಂದಿತ್ತು. ಶರುವಿನ ಬಗ್ಗೆ ರಮಾಗೆ ಅಷ್ಟು ಒಳ್ಳೆಯ ಅಭಿಪ್ರಾಯ ಇರುವಂತೆ ಚಂದ್ರಾಗೆ ಕಾಣಲಿಲ್ಲ.
ಚಂದ್ರಾವತಿ ಮಾತ್ರ ವಾರುಣಿಯನ್ನು ಅವರ ಮುಂದೆ ತುಂಬಾ ಹೊಗಳಿದರು. “ಶರು ತರಹ ಅಲ್ಲ ನಮ್ಮ ವಾರುಣಿ. ತಂದೆ-ತಾಯಿ, ತಮ್ಮನ ಬಗ್ಗೆ ತುಂಬಾ ಪ್ರೀತಿ.”
“ಹುಡುಗಿ ತುಂಬಾ ನಿಧಾನಸ್ಥೆ ಅಂತ ಕಾಣತ್ತೆ.”
“ಹೌದು. ಆದರೆ ಅನ್ಯಾಯ ಕಂಡರೆ ಸುಮ್ಮನಿರಲ್ಲ. ತುಂಬಾ ದಬಾಯಿಸ್ತಾಳೆ.”
ನಂತರ ಶಾರದಾ ಶರುವಿನ ನಡವಳಿಕೆಯ ಬಗ್ಗೆ ಒಂದೆರಡು ಉದಾಹರಣೆ ಕೊಟ್ಟರು. ಚಂದ್ರಾ ಕೂಡ ಹೇಳಿದರು.
ಈ ಕಾದಂಬರಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=45029
(ಮುಂದುವರಿಯುವುದು)

–ಸಿ.ಎನ್. ಮುಕ್ತಾ, ಮೈಸೂರು

