ಸಂಪಾದಕೀಯ

ಧಾರಾವಾಹಿ-ಕನಸೊಂದು ಶುರುವಾಗಿದೆ: ಪುಟ 35

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಮರುದಿನ ಬೆಳಿಗ್ಗೆ 9 ಗಂಟೆಗೆ ಮುಹೂರ್ತ ಧಾರೆ ಆದ ಕೂಡಲೇ ತಿಂಡಿಯ ಕಾರ್ಯಕ್ರಮ ನಡೆಯಿತು.
“ಮಧ್ಯಾಹ್ನವೇ ರಿಸೆಪ್ಷನ್. ಆದರೆ ನೀವು ನಾಳೆ ಬೆಳಿಗ್ಗೆ ಸತ್ಯನಾರಾಯಣ ಪೂಜೆ ಮುಗಿಸಿಕೊಂಡು ಹೊರಡಬೇಕು” ಅಂತ ರಘುಪತಿಯವರು ಶ್ರೀನಿವಾಸ್‌ರಾವ್ ಕುಟುಂಬಕ್ಕೆ ಮೊದಲೇ ಹೇಳಿದ್ದರು. ಶಕುಂತಲಾ-ರಾವ್‌ಗೆ ವರು ಬಗ್ಗೆ ಯೋಚನೆ ಹೇಗಿದ್ದಾಳೋ ಎನ್ನುವ ಆತಂಕ.

“ಅಕ್ಕಾ ನಾವು ಸಾಯಂಕಾಲ ಮೈಸೂರಿಗೆ ಹೋಗಿ ಅಲ್ಲಿದ್ದು ನಾಳೆ ಬೆಂಗಳೂರಿಗೆ ಬರ‍್ತೀವಿ………”
“ಯಾರ‍್ಯಾರು ಹೊರಡ್ತಿದ್ದೀರಿ?”
“ನಾನು ನಮ್ಮನೆಯವರು ಅಲೋಕ…….”
“ಹಾಗೇ ಮಾಡು. ಇಲ್ಲಿಂದ ಹಾಸನಕ್ಕೆ ಹೋಗಿ…….”
“ಆ ಚಿಂತೆ ನಿಮಗೆ ಬೇಡ. ನಾನೂ ಇವತ್ತೇ ಹೊರಡ್ತಿದ್ದೇನೆ. ನಾನೇ ಇವರನ್ನು ನನ್ನ ಜೊತೆ ಕರೆದುಕೊಂಡು ಹೋಗ್ತೀನಿ.”
“ನೀನ್ಯಾಕಪ್ಪ ಇಷ್ಟು ಬೇಗ ಹೊರಡಬೇಕು?”
“ನಿಮ್ಮ ಮಗಳನ್ನು ನಾಳೆ ಮಧ್ಯಾಹ್ನ ಚೆಕಪ್‌ಗೆ ಕರೆದುಕೊಂಡು ಹೋಗಬೇಕು. ಆಂಟಿ ಒಬ್ಬರಿಗೇ ಆಗಲ್ಲ……..”
“ನಾವು ಹೋಗ್ತಿವಲ್ಲಾ…….”
“ನಾಳೆ ಆಂಟಿ ಕಾರು ಸಿಗಲ್ಲ. ಕ್ಯಾಬ್ ಬುಕ್ ಮಾಡಿಕೊಂಡು ಹೋಗಬೇಕು. ಜೊತೆಗೆ ಮದುವೆ ಆಯ್ತಲ್ಲ. ನನಗೇನು ಕೆಲಸ? ಅಪ್ಪ-ಅಮ್ಮ ಒಪ್ಪಿದ್ದಾರೆ. ನೀವು ಯೋಚಿಸಬೇಡಿ.”

ಶಕುಂತಲಾ ಒಪ್ಪಲೇಬೇಕಾಯಿತು. ಅಷ್ಟರಲ್ಲಿ ರಮಾ ಶೋಭಾ ದಂಪತಿಗಳಿಗೆ ಉಡುಗೊರೆ ತಂದರು. ಜೊತೆಗೆ ಚಂದ್ರಾವತಿ, ಶರು, ಮಲ್ಲಿಗೆ ಸೀರೆ, ಶಾರದಾಗೆ ಡ್ರೆಸ್ ಇರುವ ಪ್ಯಾಕೆಟ್ಸ್ ಕೊಟ್ಟರು. ಅದೇ ವೇಳೆಗೆ ಒಳಗೆ ಬಂದ ಶಾಂತಮ್ಮ ತಿಂಡಿ ಪ್ಯಾಕೆಟ್ಸ್ ತಾಂಬೂಲ ಕೊಟ್ಟರು.
ಊಟ ಮಾಡಿಕೊಂಡು 4 ಗಂಟೆಗೆ ಹೊರಟರು. ಶಾರದ ಚಂದ್ರಾವತಿಯ ಡ್ರೈವರ್‌ಗೆ ಪ್ಯಾಂಟ್‌ಪೀಸ್, ಅವನ ಹೆಂಡತಿಗೆ ಸೀರೆ, ತಿಂಡಿ ಪ್ಯಾಕೆಟ್ ಕೊಟ್ಟರು. ಅವರು ಮೈಸೂರು ತಲುಪಿದಾಗ ಒಂಭತ್ತು ಗಂಟೆಯಾಗಿತ್ತು. ಶೋಭಾ ವಾರುಣಿಯನ್ನು ತಬ್ಬಿಕೊಂಡು ಎಷ್ಟು ಸೊರಗಿದ್ದೀಯಲ್ಲೇ?” ಎಂದು ಅತ್ತರು.

“ನಾವು ಬೆಳಿಗ್ಗೆ ತಿಂಡಿ ತಿಂದುಕೊಂಡು ಹೊರಡ್ತೀವಿ. ಅಕ್ಕ ಉಳಿದವರು ಬರುವ ಹೊತ್ತಿಗೆ ಮನೆ ಕ್ಲೀನ್ ಮಾಡಿಸಬೇಕು.”
“ಹಾಗೇ ಮಾಡಿ” ಎಂದ ಆರ್.ಜಿ. ಚಂದ್ರಾವತಿ ಆಶ್ಚರ್ಯದಿಂದ ಅವನತ್ತ ನೋಡಿದರು. ಅವನು ಯಾರಿಗೂ ಕಾಣದಂತೆ ಕೈಮುಗಿದ. ಶಿವಶಂಕರ್ ತಿಂಡಿ ತಿಂದು ಕ್ಯಾಬ್‌ಬುಕ್ ಮಾಡಿದರು. ಅಲೋಕ ವರು ಜೊತೆಯೇ ಇರುವುದಾಗಿ ಹಠ ಮಾಡಿದ. ವರು ಅವನಿಗೆ ಸಮಾಧಾನ ಹೇಳಿ ಕಳುಹಿಸಿದಳು.
ಅವರು ಹೋದಮೇಲೆ ವರು ಟ್ಯಾಬ್ಲೆಟ್ ತೆಗೆದುಕೊಂಡು ಮಲಗಿದಳು.
ಅಷ್ಟರಲ್ಲಿ ಶಕುಂತಲಾ ಆರ್.ಜಿ.ಗೆ ಫೋನ್ ಮಾಡಿದರು.

“ವರು ಹೇಗಿದ್ದಾಳಪ್ಪಾ?”
“ಹುಷಾರಾಗಿದ್ದಾರೆ. ಊಟ ಮಾಡಿ ಮಲಗಿದರು. ಸಾಯಂಕಾಲ ನಾಲ್ಕು ಗಂಟೆಗೆ ಚೆಕಪ್‌ಗೆ ಕರೆದುಕೊಂಡು ಹೋಗ್ತೀನಿ.”
“ಹೋಗಿ ಬಂದ ಮೇಲೆ ಕಾಲ್ ಮಾಡಪ್ಪ.”
“ಆಗಲಿ ಆಂಟಿ” ಎಂದು ಆರ್.ಜಿ. ಕಾಲ್ ಕಟ್ ಮಾಡಿದ.
“ಯಾವ ಚೆಕಪ್?”
ಆರ್.ಜಿ. ಹೇಳಿದ “ಚೆಕಪ್‌ಗೆ ಕರೆದುಕೊಂಡು ಹೋಗಬೇಕೂಂತ ಸುಳ್ಳು ಹೇಳಿ ಹೊರಟುಬಂದೆ ಆಂಟಿ.”
“ಸರಿಯಪ್ಪ….”
“ಶೋಭಾ ಆಂಟಿ ಬೆಳಿಗ್ಗೆ ಹೋಗದಿದ್ರೆ ನನಗೆ ಕಷ್ಟವಾಗುತ್ತಿತ್ತು.”
“ನಿನ್ನ ಪ್ಲಾನ್ ಅರ್ಥವಾಯ್ತು. ಮನಸ್ಸಿಲ್ಲದ ಮನಸ್ಸಿನಿಂದ ಮದುವೆ ಅಟೆಂಡ್ ಮಾಡಿದೇಂತ ಕಾಣತ್ತೆ.”
“ಹೌದು ಆಂಟಿ. ಹೋದಮೇಲೆ ತುಂಬಾ ಬೇಜಾರಾಯಿತು.”
“ಬೇಜಾರಾ ಯಾಕೆ?”
“ವಾರುಣಿಯವರು ಹುಷಾರಿಲ್ಲದೆ ಮಲಗಿದ್ದಾರೆ. ಅದಕ್ಕೆ ಅವರು ಬರಲಿಲ್ಲಾಂತ ಹೇಳಿದ್ದಕ್ಕೆ ಅವರ ತಂಗಿ ತುಂಬಾ ಕೆಟ್ಟದಾಗಿ ಮಾತನಾಡಿದರು.”
“ಏನು ಮಾತನಾಡಿದಳು?”

ಆರ್.ಜಿ. ಹೇಳಿದ.
“ನಮ್ಮ ವಾರುಣಿ ತರಹ ಅಲ್ಲ ಅವಳು. ಅಲ್ಪನಿಗೆ ಐಶ್ಚರ್ಯಬಂದರೆ ಅರ್ಧರಾತ್ರಿಯಲ್ಲಿ ಕೊಡೆಹಿಡಿದಾಂತ ಗಾದೆ ಇದೆ. ಮದುವೆ ಗೊತ್ತಾದ ಮೇಲೆ ತುಂಬಾ ಬದಲಾಗಿದ್ದಳು……….”
“ನಮ್ಮನೆಗೆ ಅವಳು ಸರಿಯಾದ ಸೊಸೆಯಲ್ಲ ಅನ್ನಿಸ್ತಿದೆ. ಸ್ವಂತ ಅಕ್ಕನ ಬಗ್ಗೆಯೇ ವಿವೇಚನೆ ಇಲ್ಲದೆ ಕಾಮೆಂಟ್ ಮಾಡಿದವರು ನಮ್ಮ ಮನೆಗೆ ಹೊಂದಿಕೊಳ್ತಾರಾ ಅನ್ನಿಸ್ತಿದೆ. ನಮ್ಮ ಫ್ಯಾಮಿಲಿ ಒಗ್ಗಟ್ಟಿಗೆ ಪ್ರಸಿದ್ಧಿ. ಇನ್ನು ಮುಂದೆ ಏನಾಗುತ್ತದೋಂತ ಭಯವಾಗ್ತಿದೆ.”
“ಅಷ್ಟು ಆತಂಕ ಪಡಬೇಡ. ನಿಮ್ಮ ಮನೆಯಲ್ಲಿ ಇಷ್ಟು ದಿನ ಒಗ್ಗಟ್ಟು ಇರುವುದಕ್ಕೆ ನಿಮ್ಮ ಮನೆಯವರ ಜಾಣತನವೇ ಕಾರಣ. ನಿಮ್ಮಣ್ಣ ಅದೇ ಜಾಣತನ ಉಪಯೋಗಿಸಿ ಒಗ್ಗಟ್ಟು ಕಾಪಾಡ್ತಾನೆ. ನೀನು ಯೋಚನೆ ಮಾಡಬೇಡ.”
“ಆದರೂ……”
“ಹೆಣ್ಣು ಮಕ್ಕಳಿಗೆ ಅವರ ಕೆಲಸಗಳಿಗೆ ತಂದೆ-ತಾಯಿ ಸಪೋರ್ಟ್ ಇದ್ದರೆ ಅವರು ಗಂಡನ ಮನೆ ಹಾಳುಮಾಡ್ತಾರೆ. ಶ್ರೀನಿವಾಸರಾವ್-ಶಕುಂತಲ ಅಂತಹ ಜನರಲ್ಲ. ಮಗಳು ತಪ್ಪು ಮಾಡ್ತಿದ್ದಾಳೇಂತ ಗೊತ್ತಾದರೆ ಮನೆಗೆ ಸೇರಿಸಲ್ಲ. ಒದ್ದು ಬುದ್ಧಿ ಹೇಳ್ತಾರೆ.”

ಅಂದು ಆರ್.ಜಿ. ಕಾಲೇಜ್‌ಗೆ ಹೋಗಲಿಲ್ಲ. ಮರುದಿನ ಅವನು ಹೋಗುವ ವೇಳೆಗೆ ಬಕುಳಾಳಿಂದ ಎಲ್ಲರಿಗೂ ವಿಷಯ ಗೊತ್ತಾಗಿತ್ತು. ಆರಾಧ್ಯ ಸರ್, ರಶ್ಮಿ ಮೇಡಂ ವರೂಗೆ ಫೋನ್ ಮಾಡಿ ವಿಚಾರಿಸಿಕೊಂಡರು. ಸಾಯಂಕಾಲ 5-6 ಮಂದಿ ಬಂದು ನೋಡಿಕೊಂಡು ಹೋದರು. ಅಮೃತಾ ಅವಳನ್ನು ಅಪ್ಪಿಕೊಂಡು ಅತ್ತಳು.
“ನಿಮ್ತಂದೆ ಹೇಗಿದ್ದಾರೆ?”
“ಹುಷಾರಾಗಿದ್ದಾರೆ. ಅಮ್ಮ ತುಂಬಾ ಗಾಬರಿಯಾಗಿದ್ರು. ನಾನು ಅಪ್ಪನ ಹತ್ತಿರ ಇರುವುದು ಅನಿವಾರ್ಯವಾಗಿತ್ತು. ನಿನ್ನಿಂದ ಅದು ಸಾಧ್ಯವಾಯಿತು. ನಿನ್ನ ಉಪಕಾರ ನಾನು ಮರೆಯುವಂತಿಲ್ಲ.”
“ನಮ್ಮನಮ್ಮಲ್ಲಿ ಇದೆಲ್ಲಾ ಬೇಕೇನೆ?”
“ನೀನು ನಿನ್ನ ತಂಗಿ ಮದುವೆಗೆ ಹೋಗಕ್ಕಾಗಲಿಲ್ಲ……..”
“ನಾನು ಹೋಗದೇ ಇದ್ದರೂ ಮದುವೆ ಚೆನ್ನಾಗಿ ನಡೆದಿದೆ. ಆ ವಿಚಾರ ಬಿಡು. ನೀನು ಧೈರ್ಯ ತಂದುಕೊಂಡು ನಿಮ್ಮ ತಂದೇನ್ನ ನೋಡಿಕೋ………”

ಎರಡುದಿನ ಮನೆಯಲ್ಲಿ ಇದ್ದು ವಾರುಣಿಗೆ ಬೋರಾಯಿತು. ಅವಳು ಕಾಲೇಜಿಗೆ ಹೋಗಲಾರಂಭಿಸಿದಳು.
ಭಾನುವಾರ ಬೆಳಿಗ್ಗೆ ಶಕುಂತಲಾ, ರಾವ್, ಶಂಕರ ಬಂದರು. ಮಗಳನ್ನಪ್ಪಿ ಶಕುಂತಲಾ ಕಣ್ಣೀರು ಸುರಿಸಿದರು.
“ಯಾಕಮ್ಮ ಅಳ್ತಿದ್ದೀಯ?”
“ನೀನು ಖಾಯಿಲೆ ಬಿದ್ದಾಗಲೂ ನನಗೆ ಬರಕ್ಕಾಗಲಿಲ್ಲವಲ್ಲಾಂತ ಬೇಜಾರಾಗ್ತಿದೆ. ಯಾವ ಜನ್ಮದ ಪುಣ್ಯವೋ ಏನೋ ನಿಮ್ಮ ಆಂಟಿ ನಿನ್ನ ತಾಯಿಗಿಂತ ಚೆನ್ನಾಗಿ ನೋಡಿಕೊಳ್ತಿದ್ದಾರೆ.”
“ಅವರು ನನ್ನ ಎರಡನೆಯ ತಾಯಿ. ಅವರು, ಆರ್.ಜಿ. ಇಲ್ಲದಿದ್ದರೆ ನಾನು ಏನಾಗ್ತಿದ್ನೋ ಏನೋ?”

“ಸಾಕು ನನ್ನ ಹೊಗಳಿದ್ದು, ಶಕುಂತಲಾ, ಶರು ಹೇಗಿದ್ದಾಳೆ? ಮಗಳು ಅಳಿಯ ಬಂದಿದ್ರಾ?”
“ಬೆಂಗಳೂರಿಗೆ ಬಂದು ಹೋಟೆಲ್‌ನಲ್ಲಿ ಇಳಿದುಕೊಂಡಿದ್ರು. ಒಂದು ದಿನ ಊಟಕ್ಕೆ ಬಂದು ಹೋದ್ರು.”
“ಅಷ್ಟೇ ತಾನೆ. ಅದೆಲ್ಲಾ ಕಾಮನ್ ಬಿಡು. ಶರು-ಕೀರ್ತಿ ಹನಿಮೂನ್‌ಗೆ ಎಲ್ಲಿಗೆ ಹೋದರು?”
“ಕೇರಳ ಕಡೆಗೆ ಹೋಗ್ತೀವಿ” ಅಂದ್ರು.
“ಹೌದಾ? ಅವಳು ಬೆಂಗಳೂರಿಗೆ ಬರುವ ಪ್ರೋಗ್ರಾಂ ಇದ್ರೆ ನನಗೆ ತಿಳಿಸಮ್ಮ.”

“ಯಾಕೆ? ಬಂದು ಅವಮಾನ ಮಾಡಿಸಿಕೊಳ್ಳುವುದಕ್ಕಾ?”
“ಯಾಕಮ್ಮಾ ಹಾಗಂತೀಯಾ?”
“ಶರು ತುಂಬಾ ಬದಲಾಗಿದ್ದಾಳೆ ಕಣೆ. ತುಂಬಾ ಅಹಂಕಾರದಿಂದ ಮಾತಾಡ್ತಾಳೆ. ಮನೆಯಲ್ಲಿ ಮಕ್ಕಳಿದ್ದಾರೇಂತ ಗೊತ್ತಿತ್ತು. ಚಾಕ್ಲೇಟು ಕೂಡ ತರಲಿಲ್ಲ. ಕೀರ್ತಿ ಜೊತೆ ಹೊರಗೇ ಕೂತಿದ್ದಳೇ ಹೊರತು ಒಳಗೆ ಬಂದು ನಮ್ಮ ಜೊತೆ ಮಾತೇ ಆಡಲಿಲ್ಲ. ಕೀರ್ತಿ ಹೊಗಳುತ್ತಾ ಊಟ ಮಾಡಿದರು. ಇವಳು ತಿಂದ ಶಾಸ್ತç ಮಾಡಿ ತಟ್ಟೆಯಲ್ಲೇ ಕೈ ತೊಳೆದುಕೊಂಡು ಎದ್ದುಹೋದಳು.”
“ನಾಲ್ಕು ಬಾರಿಸಬೇಕಾಗಿತ್ತು.”
“ಆ ಕ್ಷಣದಲ್ಲಿ ನನಗೂ ಹಾಗೇ ಅನ್ನಿಸಿತು. ಹಾಗೆ ಮಾಡಿದ್ರೆ ಹೋಗೋದು ನಮ್ಮ ಮಾನವೇಂತ ಸುಮ್ಮನಾದೆ.”
“ನೀನು ಬೈದು ಬುದ್ಧಿ ಹೇಳಬೇಕಾಗಿತ್ತಮ್ಮ.”
“ನನಗೆ ಅವಳು ನಮ್ಮ ಜೊತೆ ಮಾತಾಡಲಿಲ್ಲಾಂತ ಬೇಜಾರಿಲ್ಲ. ನನಗೆ ಭಯವಾಗ್ತಿರೋದು ಅವಳು ಅತ್ತೆ ಮನೆಯಲ್ಲಿ ಹೇಗಿರ‍್ತಾಳೋ? ತನ್ನ ನಡವಳಿಕೆಯಿಂದ ಮನೆಯ ಒಗ್ಗಟ್ಟು ನಾಶಮಾಡ್ತಾಳೇನೋಂತ ಭಯಕಾಡ್ತಿದೆ.”
“ಅಷ್ಟು ಚಿಂತೆ ಮಾಡಬೇಡಮ್ಮ. ಅವರ ಮನೆಯ ಒಗ್ಗಟ್ಟಿಗೆ ಧಕ್ಕೆ ಬಂದರೆ ಅವರೇ ಅವಳಿಗೆ ಬುದ್ಧಿ ಕಲಿಸ್ತಾರೆ.”
“ಏನೋಮ್ಮ ನಮ್ಮ ಹಣೆಯಲ್ಲಿ ಏನು ಬರೆದಿದೆಯೋ?” ಎಂದರು ಶಕುಂತಲ.

ಈ ಕಾದಂಬರಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=44925
(ಮುಂದುವರಿಯುವುದು)

ಸಿ.ಎನ್. ಮುಕ್ತಾಮೈಸೂರು

6 Comments on “ಧಾರಾವಾಹಿ-ಕನಸೊಂದು ಶುರುವಾಗಿದೆ: ಪುಟ 35

  1. ಬಹಳ ಚಂದದ ಕಾದಂಬರಿ. ಪಾತ್ರಗಳು ಎಲ್ಲ ಕಾಲಕ್ಕೂ ಹೊಂದಿಕೆ ಆಗುತ್ತವೆ.

  2. ಜೀವನದಲ್ಲಿ ಬರುವ ಅನಿವಾರ್ಯ ತೊಂದರೆಗಳನ್ನೂ ಸೂಕ್ಷ್ಮವಾಗಿ ಗುರುತಿಸಿ ಪರಿಹರಿಸುತ್ತಾ ಸಾಗುವ ಕಾದಂಬರಿ ಓದುವ ಸುಖ ನೀಡುತ್ತಿದೆ.

  3. ಕಾದಂಬರಿಯನ್ನು ಪ್ರಕಟಿಸುತ್ತಿರುವ ಸಂಪಾದಕಿ ಹೇಮಮಾಲಾ ಇವರಿಗೂ ಹಾಗೂ ತಮ್ಮ ಬರಹಗಳಿಂದ ಮುಂದೆ ನೀಡುತ್ತಾ ಎಲ್ಲರನ್ನೂ ಪ್ರೋತ್ಸಾಹಿಸುತ್ತಿರುವ ಗೆಳತಿಯರಿಗೆ ನಮನಗಳು

  4. ಜೀವನದಲ್ಲಿ ಬರುವ ಸಣ್ಣ ಪುಟ್ಟ ತೊಡರುಗಳನ್ನು ನಿವಾರಿಸುವ ಸೂತ್ರಗಳನ್ನು ನೀಡುತ್ತಾ ಹರಡುತ್ತಿರುವ ಕಥಾ ಹಂದರ ಎಂದಿನಂತೆ ಚಂದ.

  5. ಚೆಂದದ ಕಾದಂಬರಿ
    ಬದುಕಿನಲ್ಲಿ ಬರುವ ಸವಾಲುಗಳನ್ನು ಕಟ್ಟಿಕೊಡುತ್ತಾ ಮುನ್ನುಗ್ಗುತ್ತಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *