ಪತ್ರಿಕೆಯಲ್ಲಿ ಮುದ್ರಿತ ಕವಿತೆಯನ್ನು
ಗಾಜಿನ ಪರದೆಯ ಮೇಲೆ
ಕಣ್ಣಾಡಿಸುತ್ತಾ ಓದುತ್ತಿದ್ದೇನೆ…
“ಬಹಳ ಚೆನ್ನಾಗಿ ಬರೆದಿದ್ದೀಯಾ!”
ಎಂದು ಎಲ್ಲರೂ ಆಡಿಕೊಳ್ಳುವ ಮಾತು ಕೇಳಿ,
ಜೇಬಿನೊಳಗಿನ ಲೇಖನಿ
ಆಶ್ಚರ್ಯದಿಂದ ಕಣ್ಣುಬಿಟ್ಟಿತು.
ಮೇಜಿನ ಮೂಲೆಗಂಟಿಕೊಂಡಿದ್ದ
ಶಾಯಿ ಕುಪ್ಪಿ ಕಿರುನಗೆ ಬೀರಿತು.
ಕೈಖಾನೆಯ ಬಿಳಿ ಕಾಗದಗಳ ಕಂತೆ
ಗೊಂದಲದಿಂದ ಬೆಳ್ಳಗಾಗಿ ನೋಡಿತು.
ನಿಜವೇ—
ಈಚೆಗೆ ನಾನು
ಲೇಖನಿಗೆ ಶಾಯಿ ತುಂಬಿ
ಕಾಗದದ ಮೇಲೆ ಕವಿತೆಗಳನ್ನು ಬರೆಯುವುದಿಲ್ಲ…
ಗಾಜಿನ ಪರದೆಯ ಮೇಲೆ
ಬೆರಳ ತುದಿಗಳಿಂದ ಟೈಪ್ ಮಾಡುತ್ತಿದ್ದೇನೆ.
ಹೀಗೆಂದುಕೊಂಡ ಕ್ಷಣದಲ್ಲೇ—
ಬೀರುವಿನ ಮೇಲೆ ಭಾರವಾಗಿ ನೆತ್ತಿಕೊಂಡಿದ್ದ
ಹಳೆಯ ಟೈಪ್ ರೈಟರ್,
ಧೂಳಿನ ತೆರೆ ಹಿಂದೆ
ಅಸಹನೆಯಿಂದ ಮೈಕೊಡವಿತು…
ಪರ್ಯಾಯಗಳು ಸಹಜವೇ—
ಹೂಡುವ ಅಸ್ತ್ರ ಬದಲಾಗಬಹುದು,
ಆವರಿಸುವ ಪರಿಸರ ಬದಲಾಗಬಹುದು…
ಆದರೆ ಬದಲಾಗದುದು—
ಆ ಆಲೋಚನೆಗಳ ಹಿಂದೆ ಹರಿಯುವ
ಬೌದ್ಧಿಕ ಮಥನದ ಸರಪಳಿ;
ಬದಲಾಗದುದು—
ಅಕ್ಷರಗಳ ಉಗಮದ ಹಿಂದೆ
ಬಾಹ್ಯ ಘಟನೆಗಳ ಸ್ಪಂದನಕ್ಕೆ
ಅಂತರಂಗದಲ್ಲಿ ಕುದಿಯುವ
ಆ ತಲ್ಲಣದ ನಿಜಸ್ವರ.
ತೆಲುಗು ಮೂಲ : ಮಲ್ಲಾರೆಡ್ಡಿ ಮುರಳೀ ಮೋಹನ್
ಕನ್ನಡ ಅನುವಾದ : ಕೋಡೀಹಳ್ಳಿ ಮುರಳೀ ಮೋಹನ್

