(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಚಿಂತನಶೀಲತೆ, ಅಭಿವ್ಯಕ್ತಿ ಸುಭಗತೆ, ಕಾಯಕನಿಷ್ಟೆ, ತತ್ವಜ್ಞಾನ, ಸ್ವಂತಿಕೆ ಮುಂತಾದ ಗುಣವಿಶೇಷಗಳಿಂದ ಗಮನ ಸೆಳೆಯುವ ಮತ್ತೊಬ್ಬ ಹೆಮ್ಮೆಯ ವಚನಕಾರ್ತಿ ಮೋಳಿಗೆಯ ಮಹದೇವಮ್ಮ. ಈಕೆ ಮೋಳಿಗೆ ಮಾರಯ್ಯನವರ ಪತ್ನಿ. ಮೊದಲು ಆತ ಕಾಶ್ಮೀರದ ಸವಾಲಕ್ಷ್ಯದ ದೊರೆ ಮಹದೇವ ಭೂಪಾಲನಾಗಿದ್ದ. ಆಕೆ ಮಹಾರಾಣಿ ಗಂಗಾದೇವಿಯೆಂದು ಈಕೆಯ ಮೂಲಹೆಸರು. ರಾಜ್ಯಕೋಶವನ್ನೆಲ್ಲ ತೊರೆದು ಶರಣಪಥವನ್ನು ಸೇರಿ ಬಸವಕಲ್ಯಾಣಕ್ಕೆ ಬಂದು ಸಾಮಾನ್ಯರಂತೆ ಆತ ಕಟ್ಟಿಗೆ ತರುವ ಕಾಯಕವನ್ನು ಕೈಗೊಂಡು ಮೋಳಿಗೆ ಮಾರಯ್ಯನಾಗುತ್ತಾನೆ, ಈಕೆ ಮೋಳಿಗೆ ಮಹಾದೇವಿಯಾಗುತ್ತಾಳೆ. ಪತಿಯ ಕಾಯಕದಲ್ಲಿ ಸಹವರ್ತಿನಿಯಾಗಿ ಗುರುಲಿಂಗ ಜಂಗಮ ನಿಷ್ಠೆ, ಸರಳ ಸಾತ್ವಿಕ ಜೀವನ ನಡೆಸುತ್ತಾ ಕಲ್ಯಾಣದ ಶರಣರ ಸಮುದಾಯದಲ್ಲಿ ಒಂದಾಗುತ್ತಾರೆ. ಈಕೆ ರಚಿಸಿದ್ದಾಳೆನ್ನಲಾದ 70 ವಚನಗಳು ಲಭ್ಯವಾಗಿದ್ದು ‘ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನ’ ಎಂಬ ಅಂಕಿತವನ್ನು ಬಳಸಿದ್ದಾಳೆ.
ಕಲ್ಯಾಣಕ್ರಾಂತಿಯ ನಂತರ ಶರಣರೆಲ್ಲರೂ ದಿಕ್ಕಪಾಲಾಗಿ ಚದುರಿಹೋಗುತ್ತಾರೆ. ಶರಣರಿಲ್ಲದ ಕಲ್ಯಾಣ ಮಾರಯ್ಯನವರ ಪಾಲಿಗೆ ಎಣ್ಣೆ ತೀರಿದ ಹಣತೆಯಂತೆ ತೋರುತ್ತದೆ. ಕಲ್ಯಾಣವನ್ನು ತ್ಯಜಿಸಿ ಲಿಂಗೈಕ್ಯರಾಗಬೇಕೆನ್ನುವ ಬಯಕೆ ಮಾರಯ್ಯನವರಲ್ಲಿ ತೀವ್ರವಾಗುತ್ತದೆ. ತಮ್ಮಾಸೆಯನ್ನು ಪತ್ನಿಯಲ್ಲಿ ಹೇಳಿಕೊಳ್ಳುತ್ತಾರೆ. ಕಟ್ಟಿಗೆಯ ಕಾಯಕದಲ್ಲಿ ದಿನವೂ ಕೈಲಾಸವನ್ನು ಕಾಣುತ್ತಿದ್ದ ಕಾಯಕಯೋಗಿ ಪತಿ ಮಾರಯ್ಯನವರು ಭಿನ್ನಭಾವದಲ್ಲಿ ತೊಳಲಾಡುತ್ತಿರುವುದನ್ನು ಕಂಡು ಮಹಾದೇವಿ ಪತಿಯ ಕೈಲಾಸದ ಭ್ರಮೆಯನ್ನು ಪರಿಹರಿಸಿ ನಿಜದ ನೆಲೆಯನ್ನು ತಿಳಿಸಲು ಪತಿಯೊಂದಿಗೆ ತಾತ್ವಿಕ ಚಿಂತನೆ ನಡೆಸುತ್ತಾಳೆ.
ಅದೇತಕಯ್ಯಾ ಶಿವನೊಡನೆ ಕೂಟಸ್ಥನಾಗಬೇಕೆಂಬ ಹಲುಬಾಟ
ಇದು ನಿತ್ಯಸತ್ಯದ ಆಟವಲ್ಲ, ಮಾಡಿದ ಭಕ್ತಿಗೆ ಕೈಲಾಸಕ್ಕೆ ಹೋದಿಹೆನೆಂಬುದು ಕೈ ಕೂಲಿ
ಎಂದು ನಿರಪೇಕ್ಷ ಭಕ್ತಿಯ ಅಗತ್ಯವನ್ನು ನೆನಪಿಸುತ್ತಾಳೆ. ಮುಂದುವರೆಯುತ್ತಾ
ಕಾಷ್ಟವ ಸುವರ್ಣ ಮಾಡಿದೆನೆಂಬ ಘಾತುಕತನವೇ ನಿಮ್ಮ ಭಕ್ತಿ?
ಕಾಯಕವೇ ಕೈಲಾಸವಾದ ಮೇಲೆ ಮತ್ತೆ ಬೇರೆ ಕೈಲಾಸವುಂಟೇ?
ಸ್ವಯಂ ಜ್ಯೋತಿ ಇದ್ದಂತೆ ದೀಪವನ್ನರಸುವರೇ ಅಯ್ಯಾ
ಇತ್ಯಾದಿ ಮಾತುಗಳಿಂದ ಮಾರಯ್ಯನವರ ಉಭಯಭಾವವನ್ನು ಸ್ವಾನುಭವದ ಬೆಳಕಿನಲ್ಲಿ ಪರಾಮರ್ಶಿಸುತ್ತಾಳೆ ಮಹಾದೇವಿ.
ವಿಧೇಯತೆ ಮತ್ತು ಅನುಕರಣೆಯ ಹೆಸರಿನಲ್ಲಿ ವಿವಾಹಿತ ಮಹಿಳೆಯರ ಬೌದ್ಧಿಕ ಮತ್ತು ಅದ್ಯಾತ್ಮಿಕ ವ್ಯಕ್ತಿತ್ವವು ಅದೃಶ್ಯಗೊಳ್ಳುತ್ತಿತ್ತು. ಮೌಲ್ಯ ವ್ಯವಸ್ಥೆಯಲ್ಲಿ ಮಹಾದೇವಮ್ಮ ಸತೀತ್ವದ ವಿಭಿನ್ನ ಪ್ರತೀಕವನ್ನು ಸ್ಥಾಪಿಸಿದ್ದಾಳೆ. ಭೌತಿಕ ದಾಂಪತ್ಯದ ಪರಿಕಲ್ಪನೆಗೆ ಅಧ್ಯಾತ್ಮಿಕ ಆಯಾಮ ನೀಡಿದ ಅಕ್ಕಮಹಾದೇವಿ ಒಂದೆಡೆಯಾದರೆ ಸಾಂಪ್ರದಾಯಕ ದಾಂಪತ್ಯದ ಅಸಮಾನ ನೆಲೆಯಲ್ಲಿ ಸಹೃದಯ ಸಂಬಂಧವಾಗಿಸುವಲ್ಲಿ ಮಹಾದೇವಮ್ಮನ ಕಾಣ್ಕೆ ಮೌಲಿಕವಾದದ್ದು. ಸತಿಗೆ ವಿಧಿಸಲಾಗಿದ್ದ ವಿಧೇಯತೆ, ಅಂಧಾನುಕರಣೆಯಾಗದೇ ಸಾಮರಸ್ಯವು ದಂಪತಿಗಳ ವೈಚಾರಿಕ ಮತ್ತು ಭಾವನಾತ್ಮಕ ಸಾಂಗತ್ಯವಾಗಿ ವೈಯಕ್ತಿಕ ಸತ್ವ ಪ್ರತಿಭೆಗಳ ವಿಕಸನಕ್ಕೆ ವೇದಿಕೆಯಾಗಬೇಕೆನ್ನುವ ನಿರೀಕ್ಷೆ ಮಹಾದೇವಮ್ಮನಲ್ಲಿ ಹೆಮ್ಮೆಯ ಸಂಗತಿಯಾಗಿದೆ.
ಸಮಾಜದ ದೋಷಗಳನ್ನು, ಶೋಷಣೆಗಳನ್ನು ತೋರಿಕೆಯ ಭಕ್ತರನ್ನು ಶರಣೆಯರು ಕಟುವಾಗಿ ಟೀಕಿಸುತ್ತಾರೆ. ಧರ್ಮದ ಹೆಸರಿನಲ್ಲಿ ನಡೆಯುವ ಆಡಂಬರದ ಪೂಜೆ ಪುನಸ್ಕಾರಗಳನ್ನು ವಿಚಾರವಂತ ಶರಣೆಯರು ಒಪ್ಪುವುದಿಲ್ಲ. ಬದಲಾಗಿ ಆಂತರಿಕ ಶುದ್ಧತೆಗೆ ಪ್ರಾಶಸ್ತ್ಯ ನೀಡಿದ್ದಾರೆ.
ಸತ್ಯಕ್ಕನೆಂಬ ವಚನಕಾರ್ತಿ ಏಕದೇವಾನಿಷ್ಠೆಯ ನಿಬ್ಬೆರಗಿನಲ್ಲಿ ಬದುಕಿದ ಸತ್ಯಶರಣೆ. ಈಕೆ ರಚಿಸಿದಳೆನ್ನಲಾದ ವಚನಗಳಲ್ಲಿ 25 ವಚನಗಳು ಲಭ್ಯವಾಗಿವೆ. “ಶಂಭುಜಕ್ಕೇಶ್ವರಾ” ಎಂಬುದು ಈಕೆಯ ವಚನಗಳ ಅಂಕಿತ. ಸ್ವಾವಲಂಬನೆಯ ಸತ್ಯಶುದ್ಧ ಜೀವನಮಾರ್ಗವನ್ನು ಈಕೆ ಪುರಸ್ಕರಿಸಿದ್ದಾಳೆ.
ಲಂಚವಂಚನಕ್ಕೆ ಕೈಯಾಗದ ಭಾಷೆ, ಬಟ್ಟೆಯಲ್ಲಿ ಹೊನ್ನವಸ್ತ್ರ ಬಿದ್ದಿದ್ದಡೆ
ಕೈಮುಟ್ಟಿ ಎತ್ತಿದೆನಾದರೆ ಅಯ್ಯಾ ನಿಮ್ಮಣೆ ನೀವಿಕ್ಕಿದ ಭಿಕ್ಷೆಯೊಳಗಿಪ್ಪೆನಯ್ಯಾ
ಶಂಭುಜಕ್ಕೇಶ್ವರದೇವ ನಿಮ್ಮಾಣೆ.
ವಚನಕಾರರು ನೀಡಿದ ಆರ್ಥಿಕ ಮೌಲ್ಯ, ಕಾಯಕತ್ವದ ಪರಿಕಲ್ಪನೆಗೆ ಶಿವಶರಣೆಯರೂ ಸಹಮತವನ್ನು ನೀಡಿರುವ ವಚನಗಳಲ್ಲಿ ವೈಶಿಷ್ಟ್ಯತೆ ತುಂಬಿದೆ. ಅದರಲ್ಲೂ ಕಾಯಕ ಮತ್ತು ದಾಸೋಹ ತತ್ವಗಳನ್ನು ತಮ್ಮ ಬದುಕಿನ ಮುಖ್ಯ ಆಚರಣೆಯನ್ನಗಿ ಸ್ವೀಕರಿಸಿದ್ದ ಆಯ್ದಕ್ಕಿ ಲಕ್ಕಮ್ಮ ಶ್ರೇಷ್ಠ ಶರಣೆ. ಆಕೆಯು ಕಾಯಕ ತತ್ವವನ್ನು ಸಮಾಜವಾದದ ತತ್ವವನ್ನಾಗಿ ವಿಸ್ತರಿಸಿದ ಮೊಟ್ಟಮೊದಲ ವಚನಕಾರ್ತಿಯೆನ್ನಬಹುದು.
ಈಕೆ ಶರಣಶೇಷ್ಠ ಆಯ್ದಕ್ಕಿ ಮಾರಯ್ಯನವರ ಧರ್ಮಪತ್ನಿ. ‘ಮಾರಯ್ಯಪ್ರಿಯ ಅಮರೇಶ್ವರ ಲಿಂಗ” ಎಂಬ ಅಂಕಿತವನ್ನಿರಿಸಿಕೊಂಡು ರಚಿಸಿರುವ ವಚನಗಳಲ್ಲಿ 25 ವಚನಗಳು ಲಭ್ಯವಾಗಿವೆ. ಎಲ್ಲವೂ ಸನ್ನಿವೇಶ ಪ್ರೇರಣೆಯಿಂದ ಹೊರಬಂದವು. ಅದ್ದರಿಂದ ಬಿಡಿಬಿಡಿಯಾಗಿದ್ದರೂ ಅವುಗಳಲ್ಲಿ ಭಾವದ ಏಕಸೂತ್ರತೆ ಕಂಡುಬರುತ್ತದೆ.
ಅಂಗಕ್ಕೆ ಬಡತನವಲ್ಲದೆ ಮನಸ್ಸಿಗೆ ಬಡತನವುಂಟೇ ಎಂಬ ನಿಶ್ಚಲ ನಿಲುವು ಆಕೆಯದು.
ಆಸೆಯೆಂಬುದು ಅರಸಿಂಗಲ್ಲದೆ ಶಿವಭಕ್ತರಿಗುಂಟೇ ಎಂಬ ಅರಿವು.
ಕೂಟಕ್ಕೆ ಸತಿಪತಿ ಎಂಬ ನಾಮವಲ್ಲದೆ ಬೇರೆ ಒಡಲುಂಟೇ ಎಂಬ ಸಮತಾಭಾವ.
ಒಮ್ಮನವ ಮೀರಿ ಇಮ್ಮನವ ತಂದಿರಿ, ಇದು ನಿಮ್ಮ ಮನವೋ ಬಸವಣ್ಣನ ಒಳ್ಳೆಯತನವೋ ಎಂದು ಬಸವಣ್ಣನನ್ನೇ ಪ್ರಶ್ನಿಸುವ ಕೆಚ್ಚಿದೆ ಆಕೆಗೆ.
ಆಯ್ದಿದೆನೆಂಬ ಕಾಯಕದ ಅಂಕೆ ಹಿಂಗಿತೇ? ನಾನು ಮಾಡಿದೆನೆಂಬ ತವಕ ಹಿಂಗಿತೇ? ಎಂದು ಅಸೆಬುರುಕ ಗಂಡನನ್ನೇ ಝಂಕಿಸಿ ಕೇಳುವಂತಹ ರೋಷ ಆಕೆಯ ಮಾತಿನಲ್ಲಿದೆ. ಅನುಭವ ಮಂಟಪದ ಗೋಷ್ಟಿಯಲ್ಲಿ ಕಾಯಕ ಮರೆತು ಕುಳಿತಿದ್ದ ಪತಿಯನ್ನು ಹೀಗೆ ಎಚ್ಚರಿಸುತ್ತಾಳೆ.
ಮಾಡುವ ಭಕ್ತಿಯಲ್ಲಿ ಅಹಂಕಾರ ತೋರಿದಾಗ ಗರ್ವದಿಂದ ಮಾಡುವ ಭಕ್ತಿ ದ್ರವ್ಯದ ಕೇಡು ಎಂಬ ವಿವೇಕ. ಭಕ್ತಿಗೆ ಪ್ರತಿಫಲ ಅಪೇಕ್ಷಿಸಿದಾಗ ಮಾಡಿ ನೀಡಿ ಹೋದಿಹೆನೆಮದಾಗ ಕೈಲಾಸವೇನು ಕೈಕೂಲಿಯೆ?
ಎಂದು ನಿರಪೇಕ್ಷ ನಿಷ್ಕಾಮ ಭಕ್ತಿಯನ್ನು ಅನುಸರಿಸಲು ತಿಳಿಸಿ ಹೇಳುತ್ತಾಳೆ.
ನಿನ್ನ ವಿರಕ್ತಿ ನಷ್ಟವಾಗದ ಮುನ್ನ ಮಾರಯ್ಯಪ್ರಿಯ ಅಮರೇಶ್ವರಲಿಂಗವನರಿಯಿರಯ್ಯಾ ಎಂಬ ಅರಿವಿನ ಮಾರ್ಗವನ್ನು ತನ್ನ ಪತಿಗೇ ಬೋಧಿಸಿದವಳು ಲಕ್ಕಮ್ಮ. ಇವೆಲ್ಲವೂ ಲಕ್ಕಮ್ಮನು ಏರಿನಿಂತ ಅದ್ಯಾತ್ಮಿಕ ನಿಲುವನ್ನು ಸಾರುತ್ತದೆ. ಇಲ್ಲಿ ಲಕ್ಕಮ್ಮನು ಶರಣರು ನೀಡಿದ್ದ ಸ್ತ್ರೀ ಸ್ವಾತಂತ್ರ್ಯ ವೃಕ್ಷದ ಸತ್ಫಲವಾಗಿ ಕಾಣುತ್ತದೆ.
ಮನಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ ಚಿತ್ತಶುದ್ಧದಲ್ಲಿ ಕಾಯಕ ಮಾಡುವಲ್ಲಿ
ಸದ್ಭಕ್ತರಿಗೆ ಎತ್ತ ನೋಡಿದತ್ತ ಲಕ್ಷ್ಮಿ ತಾನಾಗಿಪ್ಪಳು ಮಾರಯ್ಯ ಪ್ರಿಯ ಅಮರೇಶ್ವರ
ಲಿಂಗದ ಸೇವೆಯುಳ್ಳಕ್ಕರ ನನಗಿಂತ ಹಂಗಿಲ್ಲ.
ಇಂತಹ ಸೂತ್ರಬದ್ಧವಾದ ಆಕೆಯ ನುಡಿಗಳು, ವಿಚಾರವಂತಿಕೆ ವಚನಗಳ ಸೊಗಸನ್ನು ಹೆಚ್ಚಿಸಿವೆ. ಲಕ್ಕಮ್ಮನ ಭಾವಶ್ರೀಮಂತಿಕೆಯನ್ನು ಪ್ರಕಾಶಿಸಿವೆ. ಮಾರಯ್ಯಪ್ರಿಯ ಅಮರೇಶ್ವರಲಿಂಗವುಳ್ಳಕ್ಕರ ನನಗಿಂತ ಹಂಗಿಲ್ಲ ಎನ್ನುವ ಆತ್ಮ ವಿಶ್ವಾಸ ಲಕ್ಕಮ್ಮನಲ್ಲಿ ಕಾಣುವ ವ್ಯಕ್ತಿತ್ವದ ವಿಶಿಷ್ಟತೆ. ಈಕೆಯ ಕಾಯಕ ತತ್ವ ಅಂದಿಗಷ್ಟೇ ಅಲ್ಲ ಇಂದಿಗೂ ಪ್ರಸ್ತುತವಾಗಿದೆ. ಇದು ವಿಚಾರಶೀಲ ಮನೋಧರ್ಮವಲ್ಲದೆ ಮತ್ತೇನು? ಶರಣೆಯರು ಸಮಾಜದ ಅನ್ಯಾಯ, ಅಸಮಾನತೆಗಳನ್ನು, ಅಂಧ ಸಂಪ್ರದಾಯಗಳನ್ನು, ಅರ್ಥಹೀನ ವ್ರತಾಚರಣೆಗಳನ್ನು ಉಗ್ರವಾಗಿ ಖಂಡಿಸಿರುವುದು ಅವರಲ್ಲಿನ ವಿಚಾರಶಕ್ತಿಯ ಬಲದಿಂದ ಎಂಬ ಅಂಶವನ್ನು ಅವರು ರಚಿಸಿರುವ ವಚನಗಳಲ್ಲಿನ ವೈಚಾರಿಕ ಪ್ರಜ್ಞೆಯಿಂದ ಎಂಬುದನ್ನು ಅರಿತೆವು.
ಇನ್ನು ಕೆಲವು ಶರಣೆಯರ ವಚನಗಳಲ್ಲಿನ ಸತ್ವಶೀಲತೆಯ ಬಗ್ಗೆ ಮತ್ತೊಂದಿಷ್ಟು ಹೇಳುವುದಾದರೆ ಹಲವರಿಗೆ ಹಲ್ಲದೆರೆದು ಹಲವರಿಗೆ ಬೋಧಿಸಿ ತನ್ನ ಉದರಂಗಳ ಹೊರೆವ ಸಂದೇಹಿಗಳ ಕಂಡವಳು ವೀರಮ್ಮನೆಂಬ ವಚನಕಾರ್ತಿ ‘ಹದಮಣ್ಣಲ್ಲದೆ ಮಡಕೆಯಾಗದು, ವ್ರತಹೀನರನ್ನು ಬೆರೆಯಲಾಗದು. ಬೆರೆತರೆ ನರಕ ತಪ್ಪದು’ ಎನ್ನುವುದು ಕೇತಲದೇವಿಯ ನಿಲುವು. ಅನುಭವ ಚಿಂತನೆಗಳ ಫಲವಾಗಿ ಹೊರಬಂದ ವಿಚಾರಧಾರೆಗಳು.
ಬಸವಣ್ಣನವರು ಲಾಂಛನಕ್ಕೆ ಶರಣೆಂದರೆ ಅಮುಗೆ ರಾಯಮ್ಮನೆಂಬ ವಚನಕಾರ್ತಿ ‘ ಲಾಂಛನಿಗಳೆಂದು ಕಾಂಚನಕ್ಕೆ ಕೈಯಾನುವರಲ್ಲಿ ಪಾದೋದಕ ಪ್ರಸಾದ ಕೊಡುವೆನೆಂದೊಡೆ ಕೆಸರಿನೊಳಗೆ ಬಿದ್ದ ಪಶುವಿನಂತಾಯಿತು ಕಾಣಾ’ ಎಂದು ವೈಚಾರಿಕ ನಿಲುವಿನಿಂದ ವಿಶಿಷ್ಟವಾಗಿ ನಿಲ್ಲುತ್ತಾಳೆ. ವ್ರತವೇ ಪ್ರಾಣಕ್ರಿಯೆಯ ಜ್ಞಾನ ಎಂದು ತಿಳಿದ ವಚನಕಾರ್ತಿಯರು ವ್ರತನೇಮಗಳನ್ನು ಗುಪ್ತರೀತಿಯಲ್ಲಿ ಆಚರಿಸಬೇಕೆಂದು ಹೇಳಿರುವ ವಿಚಾರಗಳು ಪ್ರಸ್ತುತತೆಯನ್ನು ಹೊಂದಿವೆ.
ಅತ್ಯಾಧುನಿಕ ನಾಗರಿಕತೆಯ ಕಂಪ್ಯೂಟರ್‌ಯುಗದಲ್ಲಿ ನಾವಿದ್ದರೂ ಇನ್ನೂ ಸಹ ಹೆಚ್ಚುಹೆಚ್ಚು ಹೆಣ್ಣುಮಕ್ಕಳು ಚಿಂತನಶೀಲರಾಗದಿರುವುದು ವಿಷಾದನೀಯ. ಜಾಗತಿಕ ಮಟ್ಟದಲ್ಲಿ ವಚನಕಾರ್ತಿಯರ ವೈಚಾರಿಕತೆ, ಜಿವನಧೋರಣೆಗಳು ಪ್ರಗತಿಪರವಾಗಿವೆ. ಇಂದಿನ ಹೆಣ್ಣುಮಕ್ಕಳು ಈ ನಿಟ್ಟಿನಲ್ಲಿ ತಮ್ಮ ವಿಚಾರಶಕ್ತಿಯನ್ನು ಬೆಳೆಸಿಕೊಳ್ಳಬೇಕಾಗಿದೆ. ಬಸವಾದಿ ಶರಣರು ಮಹಿಳೆಯರಿಗೆಂದೇ ಮೀಸಲಾತಿ ನೀಡಲಿಲ್ಲ. ಬದಲಿಗೆ ತಮ್ಮಂತೆಯೇ ಅವರನ್ನು ಸಹಜೀವಿಗಳು, ಸಮಾನ ಜೀವನಾದರ್ಶ, ಬುದ್ಧಿಶಕ್ತಿಯುಳ್ಳವರು ಎಂದು ಪರಿಗಣಿಸಿದ ಕಾರಣದಿಂದ ಅವರಿಗೆ ಸಾಮಾಜಿಕ, ಧಾರ್ಮಿಕ ಸಮಾನತೆಯನ್ನು ನೀಡಿ ತಮ್ಮನ್ನು ತಾವು ಗೌರವಿಸಿಕೊಂಡರು. ಅಲ್ಲದೆ ಎಲ್ಲ ಕಾಲಕ್ಕೂ ಬಸವಣ್ಣನೇ ದೇವರು ಎಂದು ಅಕ್ಕಮಹಾದೇವಿಯೆ ಆತನಂತಹ ಮಹಾಪುರುಷರಿಗೆ ಗೌರವನೀಡಿ ನಮಿಸಿದ್ದಾಳೆ. ಅದ್ದರಿಂದ ಇಂದಿಗೂ ಸಹ ಬಸವಾದಿ ಶರಣರು ನೀಡಿದ ಸಮಾನತೆಯ ಪರಿಣಾಮವಾಗಿ ಆತ್ಮವಿಶ್ವಾಸದಿಂದ ವೈಚಾರಿಕತೆ ಬೆಳೆಸಿಕೊಂಡು ಮುನ್ನಡೆಯಬೇಕಾದದ್ದು ಪ್ರತಿಯೊಬ್ಬ ಹೆಣ್ಣುಮಗಳ ಕರ್ತವ್ಯವಾಗಿದೆ. ಮಹಿಳೆಯರಲ್ಲಿ ಸ್ವತಂತ್ರ ಚಿಂತನೆ, ವೈಚಾರಿಕತೆ, ವೈಜ್ಞಾನಿಕ ಮನೋಧರ್ಮವಿದ್ದರೆ ಆಧುನಿಕತೆಯು ಮೈಗೂಡಿದಂತೆ.
ಆದ್ದರಿಂದ ಹನ್ನೆರಡನೆಯ ಶತಮಾನದ ಶಿವಶರಣೆಯರಲ್ಲಿ ಹುಸಿಧರ್ಮಾಚರಣೆಯ ವಿರುದ್ಧ ತಿರಸ್ಕಾರ, ಹಳೆಯ ಅರ್ಥಹೀನ ಸಂಪ್ರದಾಯಗಳು, ಅಂಧಾಚರಣೆಗಳನ್ನು ಕುರಿತಾದ ಚಿಂತನೆ, ಶೋಷಣೆಗಳ ವಿರುದ್ಧ ಸಿಡಿದುನಿಂತ ದಿಟ್ಟತನ, ಧಾರ್ಮಿಕತೆಯಲ್ಲಿ ನಡೆಸಿದ ಉನ್ನತ ಸಾಧನೆಗಳು, ಪ್ರಗತಿಪರ ಚಿಂತನೆಗಳನ್ನು ತಮಗೆ ದೊರೆತ ಅಭಿವ್ಯಕ್ತಿ ಸ್ವಾತಂತ್ರ್ಯದ ಅವಕಾಶದಲ್ಲಿ ಸದುಪಯೋಗಪಡಿಸಿಕೊಂಡು ವಚನಗಳನ್ನು ರಚಿಸುವುದರ ಮೂಲಕ ಪ್ರಕಟಮಾಡಿರುವುದು ಹೆಮ್ಮೆಯ ವಿಷಯ. ಅವರೆಲ್ಲರ ಬಗ್ಗೆ ಇದೊಂದು ಪಕ್ಷಿನೋಟವಷ್ಟೇ. ಅವರ ಸಾಧನೆಗಳು ಎಲ್ಲ ಕಾಲಕ್ಕೂ ಸ್ಫೂರ್ತಿ ನೀಡಬಹುದಾದ ಮಹತ್ತರ ಕೊಡುಗೆಯಾಗಿದೆ.
(ಮುಗಿಯಿತು)
ಈ ಬರಹದ ಹಿಂದಿನ ಕಂತು ಇಲ್ಲಿದೆ :

–ಬಿ.ಆರ್.ನಾಗರತ್ನ. ಮೈಸೂರು.

