ಪ್ರವಾಸ

ಯೂರೋಪ್‌ ಪ್ರವಾಸ (ಏಕೀಕೃತ) : ಭಾಗ-18

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ದಿನ 15

ನಮ್ಮ ಯೂರೋಪ್ ಪ್ರವಾಸದ ಕಡೆಯ ದಿನ. ಈ ದಿನ ನಾವು ರೋಮ್ ನಗರ ಮತ್ತು ವ್ಯಾಟಿಕನ್ ಸಿಟಿಗೆ ಭೇಟಿ ಕೊಡುವ ಕಾರ್ಯಕ್ರಮ ಇತ್ತು. ಎಂದಿನಂತೆ ಬೆಳಗಿನ ಉಪಹಾರ ಮುಗಿಸಿ, ಅರೆಝೋ ದಿಂದ ಉತ್ತರಕ್ಕೆ 220 ಕಿಲೋ ಮೀಟರ್ ದೂರದ ರೋ೦ ಗೆ ಪ್ರಯಾಣ ಬೆಳೆಸಿದೆವು. ರೋ೦ ನಗರದ ಹೆಸರು ಕೇಳಿಯೇ ಪುಳಕಿತರಾಗಿದ್ದ ನಾವು ರೋ೦ ನಗರವನ್ನು ನೋಡಲು ಬಹಳ ಉತ್ಸುಕರಾಗಿದ್ದೆವು.

“ರೋಮ್ ಹೊತ್ತಿ ಉರಿಯುತ್ತಿರುವಾಗ ನೀರೋ ಪಿಟೀಲು ನುಡಿಸುತ್ತಿದ್ದನಂತೆ” ಎಂಬ ನಾಣ್ನುಡಿಯ ಮರ್ಮ ತಿಳಿದುಕೊಳ್ಳುತ್ತ ರೋಮ್ ನಗರ ಪ್ರವೇಶಿಸಿದೆವು. ಕ್ರಿಸ್ತಶಕ 64 ರಲ್ಲಿ ರೋಮ್ ನಗರ ಭಯಂಕರ ಅಗ್ನಿ ಅಪಘಾತಕ್ಕೆ ಈಡಾಗಿ ಹೊತ್ತಿ ಉರಿಯುತ್ತಿತ್ತು. ಆಗ ಆಗಿನ ದೊರೆ ನೀರೋ ಪ್ರಜೆಗಳ ಮತ್ತು ನಾಗರೀಕರ ಹಿತರಕ್ಷಣೆ ಮಾಡದೆ ಅವರ ಸಹಾಯಕ್ಕೆ ಬಂದು ಕರ್ತವ್ಯ ನಿಭಾಯಿಸುವುದು ಬಿಟ್ಟು ಪಿಟೀಲು ಸಂಗೀತ ನುಡಿಸುತ್ತಿದ್ದನಂತೆ. ಆದ್ದರಿಂದ ಯಾರಾದರೂ ಕಷ್ಟದ ಪರಿಸ್ಥಿತಿಗಳಿಗೆ ಸ್ಪಂದಿಸದೆ ಉಡಾಫೆಯಾಗಿದ್ದರೆ ಆಗ ಈ ನಾಣ್ನುಡಿ ಯನ್ನು ಉಪಯೋಗಿಸುತ್ತಾರೆ. ರೋಮ್ ನಗರ ಪ್ರವೇಶಿಸುತ್ತಿದ್ದಂತೆ ಕೌತುಕದಿಂದ ಕಣ್ಣುಗಳು ಹೊರಗೆ ದೃಷ್ಟಿ ಹಾಯಿಸುತ್ತಿದ್ದವು.

ಸುಮಾರು ಒಂದು ಗಂಟೆ ನಂತರ ಬಸ್ ಒಂದು ಕಡೆ ನಿಂತು, ನಮ್ಮನ್ನೆಲ್ಲ ಕೆಳಗೆ ಇಳಿಸಿ ಅಲ್ಲಿ ನಮಗಾಗಿ ಕಾಯುತ್ತಿದ್ದ ಇನ್ನೊಬ್ಬ ಗೈಡ್ ನ ಹಿಂದೆ ಹೊರಟೆವು ಈ ಗೈಡ್ ಮಹಿಳಾ ಗೈಡ್ ಆಗಿದ್ದು, ಹಿಂದಿನ ದಿನದ ಫ್ಲಾರೆನ್ಸ್ ನಲ್ಲಿಯ ತಮಾಷೆ, ವಿನೋದ ಮಾಡುವ ಸ್ವಭಾವದ ಗೈಡ್ ಆಗಿರದೆ ಗಂಭೀರ ಸ್ವಭಾವ ಮತ್ತು ಸಿಡುಕಿನ ಸ್ವಭಾವದವರಾಗಿದ್ದರು. ಅಲ್ಲದೇ ಧ್ವನಿವರ್ಧಕ ಅಥವ ಶ್ರವಣ ಯ೦ತ್ರ ಗಳಿಲ್ಲದೇ ಇದ್ದಿದ್ದರಿ೦ದ ಅವರು ಹೇಳುವುದೂ ಸರಿಯಾಗಿ ಕೇಳಿಸುತ್ತಿರಲಿಲ್ಲ. ಅ೦ತೂ ಇ೦ತೂ ಅವರ ಹಿ೦ದೆ ಹೋಗಿ ಅವರು ತೋರಿಸಿದ್ದನ್ನು ನೋಡಿದೆವು. ರೋ೦ ನಗರ, ಕ್ರಿಸ್ತಪೂರ್ವ 753 ರಲ್ಲಿ ಟೈಬರ್ ನದಿಯ ದಡದ ಮೇಲಿನ ವಸಾಹತುವಾಗಿ ಪ್ರಾರಂಭವಾದದ್ದು ಕ್ರಮೇಣ ಅತಿ ದೊಡ್ಡ ಚಕ್ರಾಧಿಪತ್ಯವಾಗಿ ಜಗತ್ತಿನ ಉದ್ದಗಲಕ್ಕೂ ತನ್ನ ಕದಂಬ ಬಾಹುಗಳನ್ನು ಚಾಚಿಕೊಂಡಿತು. ಆದರೆ ಭ್ರಷ್ಟಾಚಾರ ದುರಹಂಕಾರ ವ೦ಚನೆಗಳಿಂದಾಗಿ ರೋಮನ್ ಸಾಮ್ರಾಜ್ಯ ಕ್ರಿ. ಶ 476 ರಲ್ಲಿ ಪತನಗೊಂಡಿತು.

ರೋ೦ ನಗರದ ಪ್ರೇಕ್ಷಣೀಯ ಸ್ಥಳಗಳೆಂದರೆ ಟ್ರೇವಿ ಫೌ೦ಟೇನ್ (Trevi Fountain), ಕೊಲೊಜಿಯ೦ (Colosseum(. ರೋ೦ ನಗರ ಅದ್ಭುತ ವಾಸ್ತು ಶಿಲ್ಪ ಮತ್ತು ಶಿಲ್ಪ ಕಲೆಗಳಿ೦ದ ಜನಾಕರ್ಷಣೆಯ ಕೇ೦ದ್ರ ವಾಗಿದೆ.

ಅಲ್ಲಿಯ ಒ೦ದು ಸ್ಕ್ವೆಯರ್ ನಲ್ಲಿ ಅತ್ಯ೦ತ ಹೆಚ್ಚಿನ ಜನಸ೦ದಣಿ ಇತ್ತು. ಅದು ಟ್ರೆವಿ ಫೌ೦ಟೇನ್. ಟ್ರೇವಿ ಫೌ೦ಟೇನ್ ನಗರದ ಕೇ೦ದ್ರ ಭಾಗದಲ್ಲಿದ್ದು 1762 ರಲ್ಲಿ ಈ ಕಾರ೦ಜಿಯು ಪ್ರಾರ೦ಭವಾಯಿತು. ಅದ್ಭುತ ವಾಸ್ತು ಶಿಲ್ಪ ಮತ್ತು ಶಿಲ್ಪ ಕಲೆಗಳಿ೦ದ ಜನಾಕರ್ಷಣೆಯ ಕೇ೦ದ್ರ ವಾಗಿದೆ. ಅಲ್ಲಿ ಬಲಗೈ ನಿ೦ದ ಎಡಭಾಗದ ಹೆಗಲ ಮೇಲಿನಿ೦ದ ಕಾರ೦ಜಿಯೊಳಗೆ ಒ೦ದು ನಾಣ್ಯ ಎಸೆದರೆ ಮತ್ತೆ ರೋ೦ ಗೆ ಬರುವುದಾಗಿಯೂ , ಎರಡು ನಾಣ್ಯ ಎಸೆದರೆ ಮದುವೆಯಾಗುವುದಾಗಿಯೂ, ಮೂರು ನಾಣ್ಯ ಎಸೆದರೆ ಡೈವೋರ್ಸ್ ಆಗುವುದಾಗಿಯೂ ನಂಬಿಕೆ ಇರುವುದಾಗಿ ತಿಳಿಸಿದರು. ನಮಗೆ ಈ ಮೂರರಲ್ಲಿ ಯಾವುದೂ ಬೇಡವಾಗಿದ್ದರಿ೦ದ ನಾವು ಯಾವುದೇ ನಾಣ್ಯ ಎಸೆಯಲಿಲ್ಲ.

ಟ್ರೆವಿ ಫೌ೦ಟೇನ್

ಅಲ್ಲಿಂದ ಕಾಲ್ನಡಿಗೆಯಲ್ಲಿ ವಿಶ್ವವಿಖ್ಯಾತ ಕೊಲೋಜಿಯಂ ಗೆ ಭೇಟಿಕೊಟ್ಟೆವು. ಶಿಥಿಲಾವಸ್ಥೆಯಲ್ಲಿರುವಂತೆ ಕಾಣುತ್ತಿದ್ದರೂ ಅತ್ಯಂತ ಭವ್ಯವಾಗಿ ನಿಂತ ಆ ಸ್ಮಾರಕ ಆಕರ್ಷಕವಾಗಿ ಕಾಣುತ್ತಿತ್ತು. ಪಠ್ಯ ಪುಸ್ತಕ ಗಳಲ್ಲಿ ಓದಿದ್ದ ಈ ಸ್ಮಾರಕ ಗಳನ್ನು ನೋಡಿ ಬಹಳ ಸ೦ತೋಷ ಪಟ್ಟೆವು. ಕೊಲಜಿಯಂ ಇದೊಂದು ಅ೦ಫಿ ಥಿಯೇಟರ್ ಅಥವಾ ದೊಡ್ಡ ಕ್ರೀಡಾಂಗಣ. ಅಂಡಾಕಾರದಲ್ಲಿ ನಿರ್ಮಿತವಾಗಿದ್ದು 80,000 ಪ್ರೇಕ್ಷಕರು ಕುಳಿತುಕೊಳ್ಳಬಹುದಾಗಿದೆ. ಸಾರ್ವಜನಿಕ ಪ್ರದರ್ಶನಗಳು ಕ್ರೀಡಾಕೂಟಗಳು ಗ್ಲೇಡಿಯೇಟರ್ ಯುದ್ಧಗಳು, ಮತ್ತು ಪ್ರಾಣಿಗಳ ಬೇಟೆಗಳಿಗೆ ಬಳಸಲಾಗುತ್ತಿತ್ತು. ಕ್ರಿಸ್ತಶಕ 76 ರಿಂದ 80ರಲ್ಲಿ ಕಟ್ಟಿದ ಈ ಬೃಹತ್ ರಚನೆ ಪ್ರಪ್ರಥಮ ಬಾರಿಗೆ 1945ರಲ್ಲಿ ಪುನರಚನೆ ಮತ್ತು ರಿಪೇರಿ ಮಾಡಲಾಗಿದೆ. ಅಂದರೆ ಸುಮಾರು 1800 ವರ್ಷ ಈ ರಚನೆ ಯಾವುದೇ ಪುನರುಜ್ಜೀವನ ಕಾಣದೆ ನಿಂತಿದೆ. ಮೂರು ಬೆಂಕಿ ಅಪಘಾತ ಮತ್ತು ನಾಲ್ಕು ಭೂಕಂಪಗಳಿ೦ದ ತತ್ತರಿಸಿ ಈಗ ಒ೦ದು ಸ್ಮಾರಕ ವಾಗಿ ಮತ್ತು ಪ್ರೇಕ್ಷಣೀಯ ಸ್ಥಳವಾಗಿದೆ. ಯುನೆಸ್ಕೊ ದ ಪಾರ೦ಪರಿಕ ತಾಣವಾಗಿರುವ ಈ ಸ್ಮಾರಕ ರೋಮನ್ ಚಕ್ರಾಧಿಪತ್ಯದ ಅದ್ಭುತ ವಾಸ್ತುಶಿಲ್ಪದ ಸಾಕ್ಷಿಯಾಗಿದೆ. ಕೆಲವೇ ನಿಮಿಷಗಳಲ್ಲಿ ನಿ೦ತ ನೀರು ಹೊರ ಹೋಗುವ ಅದ್ಭುತ ಒಳ ಚರ೦ಡಿ ವ್ಯವಸ್ಥೆ ಯನ್ನು ಒಳಗೊ೦ಡಿದೆ. ಅಲ್ಲದೆ ನೆಲದಡಿ ಸುರ೦ಗ ಮಾರ್ಗಗಳನ್ನು ಸಹ ರಚಿಸಲಾಗಿದೆ.

ಮೊದಲನೇ ಮಹಾ ಯುದ್ಧದಲ್ಲಿ ಶಿಥಿಲಗೊಂಡ, ನಮ್ಮ ಹಾಳು ಹಂಪಿಯನ್ನು ನೆನಪಿಸುವಂತಹ, ಅರೆ ಬರೆ ಅಳಿದುಳಿದ ಕಟ್ಟಡಗಳನ್ನು ಕೊಲೊಜಿಯ೦ ಸುತ್ತ ಮುತ್ತ ನೋಡಿ ಅಲ್ಲಿಂದ ಗಾಂಧಿ ಎಂಬ ಹೆಸರಿನ ಭಾರತೀಯ ರೆಸ್ಟೋರೆಂಟ್ ಗೆ ಮಧ್ಯಾಹ್ನದ ಊಟಕ್ಕಾಗಿ ಹೋದೆವು.

(ಮುಂದುವರಿಯುವುದು)
ಈ ಪ್ರವಾಸಕಥನದ ಹಿಂದಿನ ಸಂಚಿಕೆ ಇಲ್ಲಿದೆ:
  https://surahonne.com/?p=44921

ಟಿ.ವಿ.ಬಿ.ರಾಜನ್ , ಬೆಂಗಳೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *