ಕರ್ನಾಟಕದ ಮಹಿಳೆಯರ ದೀರ್ಘಕಾಲದ ಅಂಧಕಾರದ ಬದುಕಿಗೆ ಅರುಣೋದಯವನ್ನುಂಟು ಮಾಡಿದವರೆಂದರೆ ಹನ್ನರಡನೆಯ ಶತಮಾನದ ವಚನಕಾರರು. ಕರ್ನಾಟಕದ ಇತಿಹಾಸದಲ್ಲಿ ಮಹಿಳೆಯರ ಪಾಲಿಗೆ ಈ ಶತಮಾನವು ನವನವೋನ್ಮೇಷಶಾಲಿಯಾಗಿ ಬೆಳಗಿತು. ಆಗ ನಡೆದ ಸಾಮಾಜಿಕ, ಧಾರ್ಮಿಕ, ಸಾಹಿತ್ಯಿಕ ಕ್ರಾಂತಿಯ ಫಲವಾಗಿ ದೀನದಲಿತರು ಮೊದಲಾಗಿ ಅದರಂತೆಯೇ ನೇಪಥ್ಯಕ್ಕೆ ಸರಿದಿದ್ದ ಮಹಿಳೆಯರು ಗೌರವದ ಸ್ಥಾನ ಪಡೆದರು. ಎಲ್ಲ ವರ್ಗದ ಮಹಿಳೆಯರೂ ಕ್ರಾಂತಿಯ ಕಿಡಿಗಳಾಗಿ ಹೊರಹೊಮ್ಮಿ ಜ್ಞಾನಜ್ಯೋತಿಗಳನ್ನು ಬೆಳಗಿಸಿ ಮಹಿಳಾ ಇತಿಹಾಸದಲ್ಲೇ ಒಂದು ಹೊಸ ಮನ್ವಂತರವನ್ನು ಸ್ಥಾಪಿಸಿದರು. ಅಂತ್ಯಜರಿಂದ ಮೊದಲಾಗಿ ಮೇಲ್ವರ್ಗದವವರೆಗೆ ಇದರಲ್ಲಿ ಎಲ್ಲರೂ ಪಾಲ್ಗೊಂಡಿದ್ದು ವಿಶೇಷ ವಿನೂತನ ಘಟನೆ. ತಮಗೆ ದೊರೆತ ಅವಕಾಶಗಳಿಂದ ಸ್ಫೂರ್ತಿಗೊಂಡು ಅಂದಿನ ಸ್ತ್ರೀಯರು ತಾವೂ ಸಹ ಅನುಭವಮಂಟಪದಲ್ಲಿ ಭಾಗವಹಿಸುತ್ತಿದ್ದರೆಂಬುದು ತಿಳಿದು ಬರುತ್ತದೆ. ಅಲ್ಲಿ ನಡೆಯುತ್ತಿದ್ದ ಚರ್ಚೆ, ಚಿಂತನೆ, ವಿಚಾರಮಂಥನಗಳಲ್ಲಿ ಭಾಗಿಯಾಗುತ್ತಿದ್ದರು. ವೈಚಾರಿಕವಾಗಿ ಜಾಗೃತಿಯನ್ನು ಪಡೆದರು. ತಾವೇ ವಚನಗಳನ್ನು ರಚಿಸಿ ತಮ್ಮದೇ ವಿಚಾರಗಳನ್ನು ದಾಖಲಿಸಿದರು. ಸುಮಾರು 66 ಶಿವಶರಣೆಯರು ಅನುಭವ ಮಂಟಪದಲ್ಲಿ ಪಾಲ್ಗೊಳ್ಳುತ್ತಿದ್ದರೆಂಬುದು ತಿಳಿದು ಬಂದಿದೆ. ಅವರಲ್ಲಿ ಮೂವತ್ತುಮೂರಕ್ಕು ಹೆಚ್ಚು ಶರಣೆಯರು ವಚನಗಳನ್ನು ರಚಿಸಿದ್ದಾರೆಂಬುದು ಸಾಮಾನ್ಯ ಸಂಗತಿಯಲ್ಲ. ಸಾಮಾಜಿಕ ,ವ್ಯಾವಹಾರಿಕ, ಧಾರ್ಮಿಕ ಆಚರಣೆ, ಅಧ್ಯಾತ್ಮಿಕ ಸಾಧನೆಗಳಲ್ಲಿ ಸ್ತ್ರೀಸ್ವಾತಂತ್ರ್ಯದ, ಸಮಾನತೆಗಳ ಫಲವನ್ನು ಸಮರ್ಥವಾಗಿ ನಿರೂಪಿಸಿದರು. ಇದೊಂದೇ ಅವಧಿಯಲ್ಲಿ ಇಷ್ಟೊಂದು ಸಾಧನೆಗಳನ್ನು ಮಾಡಿರುವುದು ವಿಶ್ವ ಸಾಹಿತ್ಯದಲ್ಲಿಯೇ ಅಪೂರ್ವವಾದ ಸಾಧನೆ, ಇತಿಹಾಸದ ದಾಖಲೆ ಎನ್ನಬಹುದು.
ಹೀಗೆ ಬಹುಕಾಲದ ಬಂಧನದಿಂದ ಹೊರಬಂದ ಸ್ತ್ರೀಯರು ಶರಣ ಸಮಾಜದ ನಡುವೆ ತಮ್ಮ ಅನಿಸಿಕೆಗಳನ್ನು ಧೈರ್ಯದಿಂದ ವ್ಯಕ್ತಪಡಿಸುವ ಅವಕಾಶವನ್ನು ಸಂಪೂರ್ಣವಾಗಿ ಸದುಪಯೋಗ ಮಾಡಿಕೊಂಡರು. ಜಾತಿ, ಕುಲ ಭೇದಗಳನ್ನು ಮರೆತರು. ಜಗತ್ತಿನ ಸ್ತ್ರೀಧರ್ಮದ ಮೇಲ್ಮೆಯನ್ನು ಜಗತ್ತಿಗೆ ಸಾರಿದರು. ಇದರ ಫಲವಾಗಿ ಅಕ್ಕಮಹಾದೇವಿ, ಅಕ್ಕನಾಗಮ್ಮ, ನೀಲಾಂಬಿಕೆ, ಗಂಗಾಂಬಿಕೆ, ಮುಕ್ತಾಯಕ್ಕ, ಮುಂತಾದ ಮೇಲ್ವರ್ಗದ ಶರಣೆಯರಷ್ಟೇ ಅಲ್ಲದೆ ಲಕ್ಕಮ್ಮ, ಸತ್ಯಕ್ಕ, ಮಹಾದೇವಿ, ಲಿಂಗಮ್ಮ, ಕಾಳವ್ವೆ, ಅಮುಗೆರಾಯಮ್ಮ, ಮುಂತಾದ ಕೆಳವರ್ಗದ ಸ್ತ್ರೀಯರೂ ತೆರೆದ ಮನಸ್ಸಿನಿಂದ ತಮ್ಮ ಚಿಂತನೆಗಳನ್ನು ಅನುಭವದ ನೆಲೆಯಲ್ಲಿ ಒರೆಗೆ ಹಚ್ಚಿ ಅವರವರ ಆಸಕ್ತಿಗೆ ಅನುಸಾರವಾಗಿ ಹೇಳುವ ಸಾಮರ್ಥ್ಯವನ್ನು ಪಡೆದುಕೊಂಡರು. ಶತಮಾನಗಳ ದಾಸ್ಯದ ಶೃಂಖಲೆಯಿಂದ ಹೊರಬಂದು ತಮ್ಮ ಬೌದ್ಧಿಕತೆಯು ಪುರುಷರಿಗಿಂತ ಏನೂ ಕಡಿಮೆಯಿಲ್ಲ, ಒಂದು ಕೈ ಮೇಲೇ ಎಂಬಂತೆ ಶೃತಪಡಿಸಿದ್ದು ಹೆಮ್ಮೆಯ ವಿಷಯವಾಗಿದೆ.
ವಚನಕಾರ್ತಿಯರಲ್ಲಿ ಅಗ್ರಸ್ಥಾನದಲ್ಲಿರುವ ಶರಣೆ ಅಕ್ಕಮಹಾದೇವಿಯು ಹೆಣ್ಣಿನ ಸ್ವಾತಂತ್ರ್ಯ ಸಾಧನೆಯ, ವಿಚಾರಶೀಲ ಮನಸ್ಸಿನ, ಕ್ರಾಂತಿಕಾರಿ ನಿಲುವನ್ನು ಮೈಗೂಡಿಸಿಕೊಂಡವಳು . ಈಕೆ ಶಿವಮೊಗ್ಗ ಜಿಲ್ಲೆಯ ಉಡುತಡಿಯೆಂಬ ಗ್ರಾಮದ ನಿರ್ಮಲಶೆಟ್ಟಿ, ಸುಮತಿ ದಂಪತಿಗಳ ಪುತ್ರಿ. ಭೌತಿಕ ಸಂಸಾರವನ್ನು ಒಲ್ಲದೆ ವೀರವೈರಾಗ್ಯವನ್ನು ಅರಸಿ ಸಾಧನೆಗೈದು ಅಧ್ಯಾತ್ಮದ ಮೇರು ಶಿಖರವನ್ನೇರಿದವಳು. ಪರಮ ವೈರಾಗ್ಯನಿಧಿ ಅಲ್ಲಮಪ್ರಭು, ಭಕ್ತಿಭಂಡಾರಿ ಬಸವಣ್ಣ, ಶಿವಯೋಗಿ ಸಿದ್ಧರಾಮಯ್ಯ, ಷಟ್ಸ್ಥಲಜ್ಞಾನಿ ಚನ್ನಬಸವಣ್ಣನೇ ಮುಂತಾದ ಮಹಾ ಶಿವಭಕ್ತ ಶರಣರಿಂದ ಜಗದಕ್ಕನೆಂದು ಕರೆಸಿಕೊಂಡು ಕಿರಿಯ ವಯಸ್ಸಿನಲ್ಲಿಯೇ ನಮೋನಮೋ ಎನ್ನಿಸಿಕೊಂಡದ್ದು ಅವಳ ಹಿರಿಮೆ ಗರಿಮೆಗಳಿಗೆ ಸಾಕ್ಷಿಯಾಗಿದೆ. ಜ್ಞಾನವೈರಾಗ್ಯಗಳ ಜೊತೆಗೆ ಅಂದಿನ ಕಾಲದಲ್ಲಿ ಆಕೆಯಲ್ಲಿದ್ದ ಅಪರೂಪವಾದ ಧೈರ್ಯ, ಮನೋಬಲಗಳು ಅಕ್ಕನ ವ್ಯಕ್ತಿತ್ವಕ್ಕೊಂದು ವಿಶೇಷತೆಯನ್ನು ನೀಡಿವೆ. ಆಕೆಯು ಪ್ರಥಮ ಮಹಿಳಾ ಕವಿಯತ್ರಿಯೂ ಹೌದು. ಆಕೆ ರಚಿಸಿದ ಸುಮಾರು 365 ವಚನಗಳು ಲಭ್ಯವಾಗಿವೆ. ಇವಲ್ಲದೆ ಯೋಗಾಂಗ ತ್ರಿವಿಧಿ, ಮಂತ್ರಗೋಪ್ಯ ಎಂಬ ಕೃತಿಗಳನ್ನು ರಚಿಸಿರುವಳೆಂದು ತಿಳಿದುಬಂದಿದೆ. ಶರಣರಿತ್ತ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅರ್ಥಪೂರ್ಣವಾಗಿ ಬಳಸಿಕೊಂಡಿದ್ದಾಳೆ ಅಕ್ಕಮಹಾದೇವಿ. ಇವಳ ವಚನಗಳು ಅಕೆಯ ಜೀವನ ದರ್ಶನದೊಂದಿಗೆ ಮಿಳಿತವಾಗಿವೆ. ಅವಳದ್ದು ಸಿದ್ಧವೈರಾಗ್ಯವಲ್ಲ ಸಿದ್ಧಿಸಿಕೊಂಡ ವೈರಾಗ್ಯ. ಹಾಗೆಂದು ಸಮಾಜದಲ್ಲಿ ಕಂಡುಬರುವ ಹಳವಂಡಗಳನ್ನು ಕಟುವಾಗಿ ಖಂಡಿಸಿದ್ದಾಳೆ. ಮೇಲಾಗಿ ಸಾಧನೆ ಮಾಡುವ ಮನಸುಳ್ಳವರಿಗೆ ಸಮಾಜದ ಕೋಟಲೆಗಳ ನಡುವೆಯೇ ಇದ್ದು ಅಧ್ಯಾತ್ಮಿಕ ಸಾಧನೆ ಮಾಡಬಹುದೆಂದು ತನ್ನ ವಚನಗಳ ಮೂಲಕ ನಿರೂಪಿಸಿದ್ದಾಳೆ. ಅದಕ್ಕೊಂದು ಉತ್ತಮ ಉದಾಹರಣೆ ಕೊಡುವುದಾದರೆ ಈ ವಚನವನ್ನು ನೋಡಬಹುದು:
ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯಾ
ಸಮುದ್ರದಾ ತಡಿಯಲ್ಲೊಂದು ಮನೆಯ ಮಾಡಿ ನೆರೆತೊರೆಗಳಿಗಂಜಿದೊಡೆಂತಯ್ಯಾ
ಸಂತೆಯೊಳಗೊಂದು ಮನೆಯ ಮಾಡಿ ಶಬ್ಧಕ್ಕೆ ನಾಚಿದೊಡೆಂತಯ್ಯಾ
ಚೆನ್ನಮಲ್ಲಿಕಾರ್ಜುನಯ್ಯಾ ಕೇಳಯ್ಯಾ, ಲೋಕದೊಳಗೆ ಹುಟ್ಟಿದ ಬಳಿಕ
ಸ್ತುತಿ ನಿಂದೆಗಳು ಬಂದರೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು.
ಜೀವನದ ಕೆಲವು ಅನಿವಾರ್ಯತೆಗಳು, ಅಸೌಕರ್ಯಗಳ ನಡುವೆಯೇ ಸಮಾಧಾನ ಚಿತ್ತದಿಂದ, ನಿರ್ಲಿಪ್ತತೆಯಿಂದ ಬದುಕು ನಡೆಸುತ್ತ ಹೋಗುವುದೆ ಸಹಜವಾದ ನಡೆ. ಹಾಗೇ ಅವುಗಳನ್ನೆಲ್ಲ ನಿರ್ಲಕ್ಷಿಸಿ ಸಾಧನೆಯತ್ತ ಮನಸ್ಸನ್ನು ಸ್ಥಿತಿಗೊಳಿಸಿ ಮುನ್ನಡೆಯಬೇಕು. ಇಂತಹ ಅನುಭವ ಜನ್ಯವಾದ ವಿಚಾರಪ್ರಜ್ಞೆಯುಳ್ಳ ಹೆಮ್ಮೆಯ ವಚನಕಾರ್ತಿ ಅಕ್ಕಮಹಾದೇವಿ. ಅವಳ ನುಡಿಗಳು ಮಾನವರೆಲ್ಲರಿಗೂ ಉಪಯುಕ್ತ ಸಂದೇಶವಾಗಿದೆ.
ಉಳಿಗಮಾನ್ಯ ಸಂಸ್ಕೃತಿಯ ಪ್ರತಿನಿಧಿಯಂತಿದ್ದು ಕೌಟುಂಬಿಕ ರಚನೆಯಲ್ಲಿ ಅಧೀನ ನೆಲೆಯಲ್ಲಿದ್ದ ಸತಿಯನ್ನು ಸಮಾನ ಸಹಚರಿಯಾಗಿ ಗೌರವಿಸಿದ್ದರು ಶರಣರು. ಅಂತೆಯೇ ಅವರ ಸ್ವಂತಿಕೆ, ಬುದ್ಧಿಶಕ್ತಿ, ವಿಚಾರವಂತಿಕೆಯನ್ನು ಗೌರವಿಸಿದರು. ಹಾಗೆಯೇ ನೀಲಾಂಬಿಕೆ, ಆಯ್ದಕ್ಕಿ ಲಕ್ಕಮ್ಮ, ಮೋಳಿಗೆಯ ಮಹಾದೇವಿ, ಲಿಂಗಮ್ಮನಂತಹ ವಿಚಾರ ಪತ್ನಿಯರು ದಾಂಪತ್ಯದ ಸಂಪ್ರದಾಯಕ ಚೌಕಟ್ಟಿನಲ್ಲಿಯೂ ತಮ್ಮ ವೈಚಾರಿಕ ಪ್ರಜ್ಞೆಯಲ್ಲಿ ಸ್ವಂತಿಕೆಯನ್ನು ಪ್ರದರ್ಶಿಸಲು ಸಾಧ್ಯವಾಯಿತು ಎಂದು ಹೆಮ್ಮೆಯಿಂದ ಹೇಳಬಹುದು.
ಬಸವನ ಬಗೇವಾಡಿಯಲ್ಲಿ ಜನಿಸಿ ಸಂಗಮದಲ್ಲಿ ಬೆಳೆದು ವಿದ್ಯಾಭ್ಯಾಸಮಾಡಿ, ಕಲ್ಯಾಣವನ್ನು ತನ್ನ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡ ಶರಣಶ್ರೇಷ್ಠ, ಕ್ರಾಂತಿಕಾರಿ, ಜ್ಞಾನಭಂಡಾರಿ ಎಂಬೆಲ್ಲ ಅಭಿದಾನಗಳನ್ನು ಪಡೆದಿದ್ದ ಬಸವಣ್ಣನಿಗೆ ಸಾಂಸಾರಿಕವಾಗಿ ಇಬ್ಬರು ಹೆಂಡತಿಯರಿದ್ದರು. ಅವನ ಸೋದರ ಮಾವನ ಮಗಳಾದ ಗಂಗಾಂಬಿಕೆ ಒಬ್ಬಳಾದರೆ, ಬಿಜ್ಜಳ ಮಹಾರಾಜರ ಸಾಕುತಂಗಿಯಾದ ನೀಲಾಂಬಿಕೆ ಮತ್ತೊಬ್ಬಳು. ಅವರಿಬ್ಬರೂ ಬಸವಣ್ಣನವರ ಕಾರ್ಯಕ್ಷೇತ್ರದಲ್ಲಿ ಸಹಕರಿಸುತ್ತ ಅವರ ಎರಡು ಕಣ್ಣುಗಳಂತೆ ನಡೆದುಕೊಂಡರು. ಅವರಿಬ್ಬರ ವಿಚಾರಗಳು, ಆಚಾರ, ನಂಬಿಕೆ, ವಿಶ್ವಾಸ, ಸ್ವಂತಿಕೆಯ ಅಭಿಪ್ರಾಯಗಳು ವಿಭಿನ್ನವಾಗಿದ್ದರೂ ಬಸವಣ್ಣನವರ ಸಾಧನೆಗೆ ಅಡ್ಡಿಯುಂಟುಮಾಡಿರಲಿಲ್ಲ.
ಗಂಗಾಂಬಿಕೆಯ ವಚನಗಳಲ್ಲಿ ಹೆಚ್ಚಾಗಿ ವೈಯಕ್ತಿಕ……ವಿಚಾರಗಳಿದ್ದರೆ ನೀಲಾಂಬಿಕೆಯ ವಚನಗಳಲ್ಲಿ ವೈಚಾರಿಕ ಪ್ರಜ್ಞೆ ಎದ್ದು ಕಾಣುತ್ತದೆ. ಅಧ್ಯಾತ್ಮಿಕ ನೆಲೆಯಲ್ಲಿ ಸ್ತಿçÃಪುರುಷ ಭೇದವನ್ನು ನಿರಾಕರಿಸುತ್ತಾರೆ. ಸತಿಪತಿಯೆಂಬ ಅಂಗಸುಖ ಹಿಂಗಿ ಲಿಂಗವೇ ಪತಿಯೆಂದ ಬಳಿಕ ಸತಿಗೆ ಪತಿಯುಂಟೇ? ಎಂದು ಪ್ರಶ್ನಿಸುವ, ಅದರೊಳಗೆ ಉತ್ತರವನ್ನೂ ಒಳಗೊಳ್ಳುವ ಸ್ವಂತಿಕೆಯು ನೀಲಾಂಬಿಕೆಯ ವೈಚಾರಿಕ ಔನ್ನತ್ಯದ ದ್ಯೋತಕವಾಗಿದೆ ಎಂದು ಹೇಳಬಹುದು.
ವಚನಕಾರ್ತಿಯರಲ್ಲಿ ವೈಚಾರಿಕ ಅಂಶಗಳನ್ನು ಪರಿಗಣಿಸುವಾಗ ಅವರಲ್ಲಿ ಪ್ರಶ್ನಿಸುವ ಮನೋಧರ್ಮವಿರುವುದು ಗಮನಾರ್ಹ. ಪ್ರಶ್ನೆಗಳನ್ನು ಎತ್ತುವುದು ಅದಕ್ಕೆ ಉತ್ತರವನ್ನು ನಿರೀಕ್ಷಿಸುವ ಅಥವಾ ತಾವೇ ಸ್ವನಿರ್ಧರಿತ ವಿಷಯಗಳನ್ನು ಹೇಳುವುದು ಇವರ ವೈಶಿಷ್ಟ್ಯ ಅಗತ್ಯ, ಅವಶ್ಯಕ ಅಂಶಗಳನ್ನು, ಧಾರ್ಮಿಕ ಸಾಂಪ್ರದಾಯಕ, ಅನುಭಾವಿಕ, ಆರ್ಥಿಕ ವಿಚಾರಗಳ ನೆಲೆಯಲ್ಲಿ ಪ್ರಸ್ತಾಪಿಸುವುದು ಪ್ರಧಾನ ವಿಷಯವಾಗಿದೆ. ಇವುಗಳು ಅಂದಿನ ಸಾಮಾಜಿಕ, ಧಾರ್ಮಿಕ ಹಿನ್ನೆಲೆಯಲ್ಲಿ ಔಚಿತ್ಯವೂ, ಪ್ರಸ್ತುತವೂ, ಅಪೇಕ್ಷಣೀಯವೂ, ಆಗಿದ್ದ ವಿಚಾರಗಳೆಂಬುದರಲ್ಲಿ ಎರಡು ಮಾತಿಲ್ಲ. ಆದ್ದರಿಂದ ಅವುಗಳ ವೈಚಾರಿಕ ಸತ್ವವನ್ನು ಬಿಡಿಸಿ ಹೇಳಬೇಕಾಗಿಲ್ಲ. ಪ್ರತಿಯೊಂದನ್ನೂ ಒರೆಗೆ ಹಚ್ಚುವ ಗುಣ ಎಲ್ಲರಲ್ಲಿದೆ. ಪರೀಕ್ಷೆಯಿಲ್ಲದೆ ಮುಕ್ತಾಯಕ್ಕ ಅಲ್ಲಮಪ್ರಭುವನ್ನು ಗುರುವೆಂದು ಒಪ್ಪಿಕೊಳ್ಳಲಿಲ್ಲ. ತನ್ನ ಅಣ್ಣ ಅಜಗಣ್ಣನ ವಿಯೋಗದ ದುಃಖದಲ್ಲಿದ್ದರೂ ಮುಕ್ತಾಯಕ್ಕ ಅಲ್ಲಮಪ್ರಭುವಿನೊಡನೆ ತರ್ಕಕ್ಕೆ ನಿಲ್ಲುತ್ತಾಳೆ. ಅವಳ ಪ್ರಖರ ವೈಚಾರಿಕತೆ, ತಾತ್ವಿಕಜ್ಞಾನ, ಸೈದ್ಧಾಂತಿಕ ವಿಶ್ಲೇಷಣೆ, ಸ್ವತಂತ್ರ ಮನೋಧರ್ಮ ಇತ್ಯಾದಿ ವಿಶಿಷ್ಟತೆಯ ಉನ್ನತ ತತ್ವಜ್ಞಾನಿಯೀಕೆ. ಅಜಗಣ್ಣ, ಅಜಗಣ್ಣತಂದೆ ಎಂಬ ಅಂಕಿತದಿಂದ ರಚಿಸಿರುವ ವಚನಗಳಲ್ಲಿ 37 ವಚನಗಳು ಲಭ್ಯವಾಗಿವೆ. ಅಜಗಣ್ಣ ಮುಕ್ತಾಯಕ್ಕನ ಹಿರಿಯ ಸೋದರ, ಉನ್ನತಸ್ಥರದ ಗುಪ್ತಭಕ್ತನಾಗಿದ್ದ. ಅವನನ್ನೇ ಆಕೆ ತನ್ನ ಅಧ್ಯಾತ್ಮಗುರುವೆಂದು ಸ್ವೀಕರಿಸಿದ್ದಳು. ಅವನು ಲಿಂಗೈಕ್ಯನಾದ ನಂತರ ವ್ಯಕ್ತಪಡಿಸಿದಳೆಂದು ಹೇಳಲಾಗುವ ವಚನಗಳು ಮುಕ್ತಾಯಕ್ಕನದ್ದಾಗಿವೆ. ಅಣ್ಣನ ಅಗಲಿಕೆಯಿಂದ ದುಃಖಿತೆಯಾಗಿದ್ದ ಅವಳನ್ನು ಸಂಧಿಸಿದವರು ಅಲ್ಲಮಪ್ರಭುಗಳು. ಆಕೆಯನ್ನು ಜೀವನದ ನಿತ್ಯಸತ್ಯತೆಯ, ಅನುಭಾವಿಯ ನಿಲುವು ಮೊದಲಾದವುಗಳಿಗೆ ಸಂಬಂಧಿಸಿದಂತೆ ಅನೇಕ ಪ್ರಶ್ನೆಗಳನ್ನು ಕೇಳುತ್ತಾರೆ. ಅವುಗಳಿಗೆ ಅಷ್ಟೇ ಉನ್ನತಸ್ಥರದ ಉತ್ತರಗಳನ್ನು ಆಕೆ ಕೊಡುತ್ತಾಳೆ. ಮುಕ್ತಾಯಕ್ಕ ವಚನಕಾರ್ತಿಯರಲ್ಲಿಯೇ ಇಷ್ಟೊಂದು ಎತ್ತರದ ಅನುಭಾವದ ನಿಲುವಿನಲ್ಲಿ ನಿಂತು ಮಹಾಜ್ಞಾನಿ ಅಲ್ಲಮರನ್ನು ಎದುರಿಸಿದವರು ಮತ್ತೊಬ್ಬರಿಲ್ಲ.. ಎಂಬುದು ವಚನಕಾರ್ತಿಯ ಹಿರಿಮೆ ಗರಿಮೆಗೆ ಸಾಕ್ಷಿಯಾಗಿದೆ ಎನ್ನಬಹುದು.
(ಮುಂದುವರಿಯುವುದು)

ಬಿ.ಆರ್.ನಾಗರತ್ನ, ಮೈಸೂರು

