ದಶಮ ಸ್ಕಂದ – ಉತ್ತರಾರ್ಧ – ಅಧ್ಯಾಯ – 7
ಜರಾಸಂಧ
ಕಂಸವಧೆಯ ನಂತರದಿ
ಅವನ ಪತ್ನಿಯರು ಅಸ್ತಿ ಮತ್ತು ಪ್ರಾಸ್ತಿ
ತಂದೆ ಮಗಧೇಶ್ವರ ಜರಾಸಂಧನ ಬಳಿಗೈದು
ತಮ್ಮ ದುರಂತಕಥೆಯನರುಹಿ ಗೋಳಾಡೆ
ಜರಾಸಂಧ ವ್ಯಗ್ರನಾಗಿ
ಯಾದವ ವಂಶ ಸಂಹಾರಕೆ ಸಂಕಲ್ಪಿಸಿ
ಮಧುರಾಪುರಿಯ ಮೇಲೆ
ಇಪ್ಪತ್ಮೂರು ಅಕ್ಷೋಹಿಣಿ ಸೇನೆಯೊಂದಿಗೆ ಧಾಳಿಮಾಡೆ
ಕೃಷ್ಣಬಲರಾಮರು ತಮ್ಮ ತೀಕ್ಷ ಬಾಣಗಳಿಂದ
ಪ್ರತಿಧಾಳಿ ಮಾಡೆ
ನೂರಾರು ಸೈನಿಕರು ಆನೆಗಳು ಕುದುರೆಗಳು
ಹತವಾದವು
ಜರಾಸಂಧ ತನ್ನ ಸೈನ್ಯಕೆ ಆದ ಪರಾಭವ ಕಂಡು
ಸ್ವತಃ ಅವನೇ ಬಲರಾಮನೊಂದಿಗೆ ಯುದ್ಧಕಿಳಿದನು
ಯುದ್ಧದಲಿ ಸೋತ ಜರಾಸಂಧನ
ವರುಣ ಪಾಶದಿ ಕಟ್ಟಿಹಾಕಿ ಬಂಧಿಸಿದರೂ
ಕೃಷ್ಣ ಅವನ ಬಿಟ್ಟು ಭೂಭಾರ ಹರಣ ಕಾರ್ಯ
ಮುಂದುವರಿಸಲಿಚ್ಛಿಸಿ
ಯುದ್ಧ ಮುಂದುವರಿಸೆ
ಕೇವಲ ಅಲ್ಪ ಯಾದವ ಸೇನೆಯೊಂದಿಗೆ
ಇಪ್ಪತ್ಮೂರು ಅಕ್ಷೋಹಿಣಿಯ ಸೈನ್ಯವ ಎದುರಿಸಿ
ಜಯಗಳಿಸಿದ ವೀರಶಿರೋಮಣಿಗಳು
ಶ್ರೀಕೃಷ್ಣ ಬಲರಾಮರು
ಇಷ್ಟೆಲ್ಲವಾದರೂ ಛಲಬಿಡದವನಂತೆ
ಜರಾಸಂಧನು ಅನೇಕ ರಾಜರೊಂದಿಗೆ
ವಿಶೇಷ ಸೈನ್ಯ ಬಲದಲ್ಲಿ
ಪುನಃ ಪುನಃ ದಂಡೆತ್ತಿ ಬಂದರೂ
ಕೃಷ್ಣ ಬಲರಾಮರ ಗೆಲ್ಲಲಾರದೆ
ಸೋತು ಬಸವಳಿದನು
ಹದಿನೇಳು ಬಾರಿ ದಂಡೆತ್ತಿ ಬಂದು
ಯಾದವ ಸೈನ್ಯವ ಎದುರಿಸಿದರೂ
ಗೆಲ್ಲಲಾಗದ ಜರಾಸಂಧನ ಶೌರ್ಯ
ಕೃಷ್ಣಮಾಯೆಯಲಿ
ಶೂನ್ಯ ಸಂಪಾದನೆ
(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=44929

-ಎಂ. ಆರ್. ಆನಂದ, ಮೈಸೂರು

