ಅದೊಂದು ದಿನ ಸಂಜೆ 4.30 ರ ಹೊತ್ತಿಗೆ ವಾಟ್ಸಾಪ್ ತೆರೆದಾಗ ಒಂದು ಅಪರಿಚಿತ ಸಂಖ್ಯೆಯಿಂದ “ಹಲೋ” ಅನ್ನುವ ಸಂದೇಶ ಬಂದಿತ್ತು (ಸುಮಾರು ಮೂರು ಘಂಟೆಗೆ). ನನಗೆ ಆ ತರಹ ಸಂದೇಶಗಳು ಬರುತ್ತಿರುತ್ತವೆ. ವಿದ್ಯಾರ್ಥಿಗಳು ವಾಟ್ಸಾಪ್ ಮೂಲಕ ಸಂವಹನ ನಡೆಸುವಾಗ ಮೊದಲ ಹಂತ ಅದೇ. ಹೆಚ್ಚಿನವರು ಹಾಯ್ ಅಥವಾ ಹಲೋ ಅನ್ನುವರು. ಮೇಡಂ ಅಂತ ಬರೆಯುವವರ ಸಂಖ್ಯೆ ಕಡಿಮೆಯಾಗಿದೆ. ಆ ವಿಷಯ ಅಂತಿರಲಿ. “ಹಲೋ” ಅಂತ ಮರು ಸಂದೇಶ ಕಳುಹಿಸಿದೆ. “ಮ್ಯಾಮ್, ಕೃಷ್ಣಪ್ರಭ ಮ್ಯಾಮ್, ನಾನು ನಿಮ್ಮ ವಿದ್ಯಾರ್ಥಿನಿ ಸೌಮ್ಯ, ಮ್ಯಾಮ್” ಅಂತ ಉತ್ತರ ಬಂತು. “ಹೇಳು” ಅಂದೆ. “ಮ್ಯಾಮ್” ಅಂತ ಮರು ಸಂದೇಶ ಬಂತು.
ಸುಮಾರು ನಲ್ವತ್ತು ನಿಮಿಷದ ಬಳಿಕ ವಾಟ್ಸಾಪ್ ಸಂಖ್ಯೆಗೆ ಫೋನ್ ಕರೆ ಬಂತು. ನಾನಾಗ ಬಟ್ಟೆ ಒಗೆಯುತ್ತಿದ್ದೆ. ವಾಪಸ್ ಕರೆ ಮಾಡಿದಾಗ ಕರೆಯನ್ನು ಸ್ವೀಕರಿಸಲಿಲ್ಲ. ಐದು ನಿಮಿಷ ಬಿಟ್ಟು ಮತ್ತೆ ವಾಟ್ಸಾಪ್ ಕರೆ. ಕರೆ ಸ್ವೀಕರಿಸಿ ಮಾತನಾಡುವಾಗ ಆ ಕಡೆಯಿಂದ ಹುಡುಗಿಯೊಬ್ಬಳು ಜೋರಾಗಿ ಬಿಕ್ಕಿ ಬಿಕ್ಕಿ ಅಳುವ ಧ್ವನಿ. “ಏನಾಯಿತು?” ಅನ್ನುವ ನನ್ನ ಪ್ರಶ್ನೆಗೆ ಮಾತಿಲ್ಲ. ಅಳು ಮುಂದುವರಿದಿತ್ತು. ಕರೆ ತುಂಡರಿಸಲ್ಪಟ್ಟಿತು. ಮತ್ತೆ ಆ ನಂಬರಿಗೆ ಕರೆ ಮಾಡಿದರೂ ಉತ್ತರವಿಲ್ಲ. ವಿಚಿತ್ರ ಅನಿಸಿತು.
ಎರಡು ನಿಮಿಷದ ಬಳಿಕ ವೃದ್ಧರೊಬ್ಬರು ಆಸ್ಪತ್ರೆಯ ಮಂಚದಲ್ಲಿ ಮಲಗಿರುವ ಒಂದು ಫೋಟೋ ಬಂತು.
“ಮ್ಯಾಮ್, ಕೃಷ್ಣಪ್ರಭ ಮ್ಯಾಮ್, ನನ್ನ ತಂದೆ”
“ಇದ್ದಕ್ಕಿದ್ದ ಹಾಗೆ ಒಮ್ಮೆಲೇ ಆಯ್ತು”.
“ಐಸಿಯುನಲ್ಲಿ ಇದ್ದಾರೆ. ಇಲ್ಲಿ ಫೋನಲ್ಲಿ ಮಾತನಾಡಲು ಬಿಡುವುದಿಲ್ಲ”
“ನನ್ನ ತಂದೆ ಇನ್ನಿಲ್ಲ”
“ತಂದೆಯವರು ಕಿಡ್ನಿ ಹಾಗೂ ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದರು”
“ನಮ್ಮಿಂದಾಗುವ ಪ್ರಯತ್ನ ಮಾಡಿದೆವು”
“ಆದರೆ ನಮ್ಮ ದುರದೃಷ್ಟ”
ಒಂದರ ಮೇಲೊಂದು ಸಂದೇಶಗಳು ಮೊಬೈಲ್ ಪರದೆಯಲ್ಲಿ!
ಯಾರೋ ವಿದ್ಯಾರ್ಥಿನಿ ಇರಬೇಕೆಂದು ಸಂಶಯ ಬಂದರೂ ಸೌಮ್ಯ ಹೆಸರಿನ ಯಾವುದೇ ವಿದ್ಯಾರ್ಥಿನಿ ನೆನಪಿಗೆ ಬರಲಿಲ್ಲ. ಆದರೂ “ದಯವಿಟ್ಟು ಸಮಾಧಾನ ಮಾಡಿಕೋ” ಅಂತ ಮರುಸಂದೇಶ ಕಳುಹಿಸಿದೆ.
“ನೀನು ಯಾವ ತರಗತಿಯಲ್ಲಿ ಕಲಿಯುತ್ತಿರುವೆ?” ಅಂತ ಮರುಸಂದೇಶ ಕಳುಹಿಸಿದೆ. ಆ ಪ್ರಶ್ನೆಗೆ ಉತ್ತರ ಬರಲಿಲ್ಲ.
“ಕೃಷ್ಣಪ್ರಭ ಮ್ಯಾಮ್, ಅವರ ಅಂತಿಮ ಸಂಸ್ಕಾರವನ್ನು ಇವತ್ತೇ ಮಾಡುತ್ತೇವೆ ಮ್ಯಾಮ್”
“ಮ್ಯಾಮ್ ಕೃಷ್ಣಪ್ರಭ ಮ್ಯಾಮ್, ನೀವೇನೂ ತಿಳಿದುಕೊಳ್ಳುವುದಿಲ್ಲವಾದರೆ..”
“ಅಂತಿಮ ಸಂಸ್ಕಾರಕ್ಕೆ ನಿಮ್ಮಿಂದ ಸಹಾಯ ಆಗಬೇಕು”
“ತುಂಬಾ ಕೆಟ್ಟ ಪರಿಸ್ಠಿತಿಯಲ್ಲಿದ್ದೇವೆ”
“ಸ್ವಲ್ಪ ಸಹಾಯ ಮಾಡಿ. ಇವತ್ತು ನನ್ನ ತಂದೆಯ ಮರಣ. ಅಂತಿಮ ಸಂಸ್ಕಾರ ಆಗಬೇಕು. ದಯವಿಟ್ಟು ದಯವಿಟ್ಟು ಹತ್ತು ಸಾವಿರ ಕೊಟ್ಟು ಸಹಾಯ ಮಾಡಿ”
“ನಾನದನ್ನು ಮತ್ತೆ ನಿಮಗೆ ಹಿಂದಿರುಗಿಸುತ್ತೇನೆ”.
“ಈಗ ಕೈಯಲ್ಲಿ ಏನಿಲ್ಲ. ತುಂಬಾ ಕಷ್ಟಪಡ್ತಿದ್ದೇವೆ. ಪ್ಲೀಸ್ ಮ್ಯಾಮ್ ಪ್ಲೀಸ್”
“xxxxxxxxxxxxಒಂದು ಗೂಗಲ್ ಪೇ, ಫೋನ್ ಪೇ ಸಂಖ್ಯೆ ಬಂತು. ಸುಶೀಲ್ ಅಂತ ನನ್ನ ಸಹೋದರ.”
“ಪ್ಲೀಸ್ ಮ್ಯಾಮ್ ಪ್ಲೀಸ್…ಎಲ್ಲೂ ಹಣದ ವ್ಯವಸ್ಥೆ ಆಗ್ತಿಲ್ಲ”
“ಇಲ್ಲ ಮ್ಯಾಮ್”
“ಇತ್ತೀಚೆಗಷ್ಟೇ ಸ್ಟೆಂಟ್ ಓಪರೇಶನ್ ಕೂಡಾ ಆಗಿತ್ತು ಮ್ಯಾಮ್ “ಅನ್ನುವ ಸಂದೇಶ.
ಮತ್ತೆ ಕೆಲ ನಿಮಿಷದ ಬಳಿಕ ವಾಟ್ಸಾಪ್ ಕರೆ. ನಾನು ಉತ್ತರಿಸಲಿಲ್ಲ. ಟ್ರೂ ಕಾಲರ್ ನಲ್ಲಿ ಆ ಮೊಬೈಲ್ ಸಂಖ್ಯೆ ಹಾಕಿದಾಗ ಹೈದರಾಬಾದ್ ಎಂದು ಬರುತ್ತಿತ್ತು.
ಇನ್ನರ್ಧ ಘಂಟೆಯ ಬಳಿಕ ಇನ್ನೊಂದು ಫೋಟೋ. ಹೂಮಾಲೆ ಹಾಕಿದ್ದ ಮೃತದೇಹದ ಫೋಟೋ.
“ಬೇಕಾಗಿರುವ ಎಲ್ಲಾ ವ್ಯವಸ್ಥೆ ಆಗಿದೆ. ಸ್ಮಶಾನದಲ್ಲಿ ಹಣ ಕೊಡಬೇಕಿದೆ. ದಯವಿಟ್ಟು ಸಹಾಯ ಮಾಡಿ ಮ್ಯಾಮ್. 6000 ರೂಪಾಯಿ ಹಣ ಎಲ್ಲಿಯೂ ವ್ಯವಸ್ಥೆ ಆಗುತ್ತಿಲ್ಲ. ಸ್ಮಶಾನ ಒಂಬತ್ತು ಘಂಟೆಗೆ ಮುಚ್ಚುತ್ತದೆ. ಮ್ಯಾಮ್, ಪ್ಲೀಸ್, ಮ್ಯಾಮ್ ಪ್ಲೀಸ್”
“ಮತ್ತೆ — ತಾರೀಕಿಗೆ ಹಣ ವಾಪಸ್ ಮಾಡುತ್ತೇನೆ. ಪ್ಲೀಸ್, ಮ್ಯಾಮ್ ಪ್ಲೀಸ್. ನಿಮಗೆ ಗೂಗಲ್ ಪೇ ನಂಬರ್ ಕಳುಹಿಸಿದ್ದೇನೆ. ಪ್ಲೀಸ್, ಮ್ಯಾಮ್ ಪ್ಲೀಸ್ ನನಗೆ ಸಹಾಯ ಮಾಡಿ ಪ್ಲೀಸ್”
8.30 ಹೊತ್ತಿಗೆ- ಮತ್ತೆ ಪುನಃ ವಾಟ್ಸಾಪ್ ಕರೆ
“ಪ್ಲೀಸ್ 3000 ಸಹಾಯ ಮಾಡಿ. ಪ್ಲೀಸ್, ಮ್ಯಾಮ್ ಪ್ಲೀಸ್”
ಮತ್ತೆ ಪುನಃ ವಾಟ್ಸಾಪ್ ಕರೆ.
“ಸ್ಮಶಾನವನ್ನು ಮುಚ್ಚುವ ವೇಳೆ ಆಗುತ್ತಿದೆ. 3000 ಪ್ಲೀಸ್ ಮ್ಯಾಮ್, — ಕ್ಕೆ ವಾಪಸ್ ಕೊಡುತ್ತೇನೆ. ಪ್ಲೀಸ್, ಮ್ಯಾಮ್ ಪ್ಲೀಸ್”
“ಸ್ಮಶಾನದಲ್ಲಿ ಕೊಡಲು ನಮ್ಮ ಬಳಿ ಹಣವಿಲ್ಲ. ಹಣ ಎಲ್ಲೂ ಸಿಗಲಿಲ್ಲ. ದಯವಿಟ್ಟು ಸಹಾಯ ಮಾಡಿ. ಪ್ಲೀಸ್, ಮ್ಯಾಮ್ ಪ್ಲೀಸ್”.
ಆಗ 8.45 ಆಗಿತ್ತು: “ಇದು ಸುಮ್ಮನೆ ಸ್ಕ್ಯಾಮ್ ನಂಬರ್ ಅಂತ ಗೊತ್ತು. ಈಗಾಗಲೇ ಈ ನಂಬರನ್ನು ರಿಪೋರ್ಟ್ ಮಾಡಿದ್ದೇನೆ” ಎಂದು ಸಂದೇಶ ಕಳುಹಿಸಿದೆ.
“ಇಲ್ಲ ಮ್ಯಾಮ್, ನಾನು ಸೌಮ್ಯ ಮ್ಯಾಮ್” ಅಂತ ಸಂದೇಶ ಬಂತು.
ಮುಕ್ತಾಯ ಅಂದುಕೊಂಡಿದ್ದೆ!
ಈ ಘಟನೆ ನಡೆದ ಸುಮಾರು ಹತ್ತು ದಿನಗಳ ಬಳಿಕ ನಮ್ಮ ಕಾಲೇಜಿನ ಪ್ರಾಂಶುಪಾಲರು ಒಂದು ಭಾವಚಿತ್ರ ಕಳುಹಿಸಿ “ಈ ವಿದ್ಯಾರ್ಥಿನಿಯ ನೆನಪಿದೆಯೇ” ಎಂದು ಸಂದೇಶ ಕಳುಹಿಸಿದರು. ಸಾಧಾರಣವಾಗಿ ನಾನು ಯಾವುದೇ ವಿದ್ಯಾರ್ಥಿಗಳ ಪರಿಚಯವನ್ನು ಮರೆಯುವುದು ಕಡಿಮೆ. ಆ ಭಾವಚಿತ್ರದ ಕೆಳಗೆ “ಸಾರ್, ನಿಮ್ಮ ವಿದ್ಯಾರ್ಥಿನಿ ಸೌಮ್ಯ, ಸರ್” ಅನ್ನುವ ಸಾಲನ್ನು ಓದಿದಾಗ ನನಗಾದ ಅನುಭವ ಥಟ್ ಅಂತ ನೆನಪಿಗೆ ಬಂದು, ನನ್ನಲ್ಲಿ ಧನಸಹಾಯ ಕೇಳಿದ ಅದೇ ಹುಡುಗಿ ಇರಬಹುದೇ ಅನ್ನುವ ಗುಮಾನಿ|. ಕೂಡಲೇ ಪ್ರಾಂಶುಪಾಲರಿಗೆ ಕರೆ ಮಾಡಿ ವಿಚಾರಿಸಿದಾಗ ಅದೇ ಕಥೆ ಅನ್ನುವುದು ಗೊತ್ತಾಯಿತು. ಅದು ಕೂಡಾ ಅದೇ ಸಂಖ್ಯೆಯಿಂದ!
“ಯಾರು ಮೋಸದಿಂದ ಹಣ ಎಗರಿಸಲು ಪ್ರಯತ್ನಪಡುತ್ತಿದ್ದಾರೆ” ಅನ್ನುವ ಪ್ರಶ್ನೆ ಮತ್ತೆ ಬಲವಾಗಿ ಮೂಡಿತ್ತು ಮನದಲ್ಲಿ!
ಒಂದು ತಿಂಗಳ ಮೊದಲಷ್ಟೇ ನನ್ನ ಈಮೇಲ್ ಐಡಿ ಕೂಡಾ ಹ್ಯಾಕ್ ಆಗಿತ್ತು. ನನ್ನ ಈಮೇಲ್ ನಲ್ಲಿ ಲಭ್ಯವಿದ್ದ ಎಲ್ಲಾ ಈಮೇಲ್ ವಿಳಾಸಗಳಿಗೆ ನಾನೇ ಬರೆದಂತೆ ಇ-ಪತ್ರ ರವಾನೆಯಾಗಿತ್ತು. ಪತ್ರ ಓದಿದವರಿಗೆ ನಾನೇ ಬರೆದಿರಬೇಕು ಅನ್ನಿಸುವಷ್ಟು ಚಂದದ ಒಕ್ಕಣೆಯುಳ್ಳ ಪತ್ರ. ಆ ಇ-ಪತ್ರಕ್ಕೆ ಸ್ಪಂದಿಸಿದವರಿಗೆ ಮತ್ತೊಂದು ಪತ್ರ ನನ್ನ ಹೆಸರಲ್ಲಿ. “ಸಂಕೀರ್ಣ ಹೃದಯದ ಸಮಸ್ಯೆಯಿಂದ ಬಳಲುತ್ತಿರುವ ಮಗುವೊಂದರ ಹೃದಯದ ಶಸ್ತ್ರಚಿಕಿತ್ಸೆಗಾಗಿ ಹಣ ಹೊಂದಿಸುವ ಸಮಾಜಸೇವೆಯ ಕಾರ್ಯದಲ್ಲಿ ನನ್ನ ಜೊತೆಗೂಡಿ ರೂಪಾಯಿ 30,000 ನೀಡಿ ಸಹಕರಿಸಿ” ಅನ್ನುವ ವಿನಂತಿಯೊಡನೆ. ಆ ಒಂದು ವಾರ ನನ್ನ ಆಪ್ತವರ್ಗದವರ ಕರೆಗಳು, ಸಂದೇಶಗಳು ಬರುತ್ತಲೇ ಇದ್ದವು (ಈಮೇಲ್ ಐಡಿ ಹ್ಯಾಕ್ ಆಗಿದೆ ಅನ್ನುವ ಸ್ಟೇಟಸ್ ವಾಟ್ಸಾಪ್ ಹಾಗೂ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದರೂ).
ದಿನಾಲೂ ವೃತ್ತಪತ್ರಿಕೆಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹ ಬೇಸ್ತು ಬೀಳಿಸುವ ಜನರ ಸಂಖ್ಯೆ ಹೆಚ್ಚುತ್ತಿದೆ. ಸುಳ್ಳುಗಳನ್ನು ಸತ್ಯವೆಂದು ನಂಬಿಸಿ ಹಣ ದೋಚುವ, ಆನ್- ಲೈನ್ ವಂಚನೆ ಮಾಡುವವರಿಗೇನೂ ಕಡಿಮೆಯಿಲ್ಲ. ಎಷ್ಟು ಜಾಗ್ರತೆಯಿದ್ದರೂ ಸಾಲದು. “ಉದರಂ ಭರಣಂ ಬಹುಕೃತ ವೇಷಂ” ಅನ್ನುವಂತೆ ಆನ್-ಲೈನ್ ಮೋಸ ಮಾಡಲು ವಿಧಾನಗಳು ಹಲವು. ಯಾವುದೇ ಒತ್ತಡದಲ್ಲಿದ್ದರೂ ಅಪರಿಚಿತ ಕರೆಗಳಿಗೆ ಕೂಡಲೇ ಸ್ಪಂದಿಸಬೇಡಿ. ಅನಗತ್ಯ ಲಿಂಕ್ ಗಳನ್ನು ತೆರೆಯಬೇಡಿ ಅನ್ನುವ ಕಳಕಳಿಯ ಮನವಿ.

–ಡಾ. ಕೃಷ್ಣಪ್ರಭ ಎಂ, ಮಂಗಳೂರು

