ಬೊಗಸೆಬಿಂಬ

ಸಾಕೇತ ರಾಮನಿಗೆ ಸಂಗೀತ ನಮನ

Share Button

‘ಭಾವಯಾಮಿ ರಘುರಾಮ’ ಕೃತಿಯನ್ನು ಎಮ್.ಎಸ್.ಸುಬ್ಬುಲಕ್ಷ್ಮಿ ಅವರ ಧ್ವನಿಯಲ್ಲಿ, ಬಾಲ್ಯದಲ್ಲಿ ಕೇಳಿದ್ದು ನನ್ನ ಮನಸ್ಸಿನಲ್ಲಿ ಇನ್ನೂ ಹಚ್ಚಹಸಿರಾಗಿದೆ. ಬಾಲಮುರಳೀಕೃಷ್ಣ ಹಾಡಿರುವ ‘ಪಿಬರೇ ರಾಮರಸಂ’ ಎಮ್.ಎಸ್.ಶೀಲಾ ಹಾಡಿರುವ ‘ರಾಮ ನಾಮ ಪಾಯಸಕ್ಕೆ’, ‘ಜಾನಕೀನಾಥ ಸಹಾಯ ಕರೆ’ ಎಂಬ ಹಾಡುಗಳನ್ನು ಚಿಕ್ಕಂದಿನಿಂದ ಆಕಾಶವಾಣಿಯಿಂದ ಕೇಳುತ್ತಿದ್ದಾಗ, ಶ್ರೀರಾಮ ಎಂಬ ಹೆಸರಿನಲ್ಲಿಯ ಮಧುರ ಸವಿ, ಕೇಳುವ ಕಿವಿಗಳಿಗೆ ಕರ್ಣರಸಾಯನ ಅಮೃತ ಧಾರೆಯಾಗುತ್ತಿತ್ತು. ಆಗ ನನಗನಿಸುತ್ತಿತ್ತು, ಇವುಗಳನ್ನು ಭಾವಪರವಶತೆಯಿಂದ ಹಾಡುವ ಕಲಾವಿದರ ಬಾಯಿಗಳಿಗೂ ಕಲ್ಲುಸಕ್ಕರೆ ರುಚಿ ಇಳಿದಿರಬಹುದೇ ಎಂದು.

ನಮ್ಮ ಭಾರತ ದೇಶದಲ್ಲಿ, ಹಿಂದಿನ ಪರಂಪರೆಯಿಂದ, ಜೀವನ ದರ್ಶನದಲ್ಲಿ ಭಕ್ತಿಗೆ, ಸಮರ್ಪಣಾ ಭಾವಕ್ಕೆ, ಭಗವಂತನ ಮೇಲಿನ ನಂಬಿಕೆಯಿಂದ ಅತನಲ್ಲಿ ದಾಸ್ಯಭಾವಕ್ಕೆ, ಮಹತ್ವದ ಸ್ಥಾನವಿದೆ. ತನ್ನ ಮನಃಶಾಂತಿಗಾಗಿ, ತನ್ನ ಹೆದರಿಕೆ ದೂರ ಮಾಡಲು, ತನಗೊಂದು ಆದರ್ಶಕ್ಕಾಗಿ, ತನ್ನ ಮನಸ್ಸಿನ ನಿಯಂತ್ರಣಕ್ಕಾಗಿ, ವಿವಿಧ ನಾಮಗಳಿಂದ, ಮನುಜ ಕರೆದ, ಆ ಪರಮ ದಿವ್ಯಶಕ್ತಿಯನ್ನು, ರಾಮನೆಂದು ಕರೆದ ಭಕ್ತಿಪಂಥದವರು, ತಮ್ಮ ಕೀರ್ತನೆ, ಸಂಗೀತದಿಂದ, ಹಾಡಿ, ಕುಣಿದು, ಭಕ್ತಿಪರವಶತೆಯಲ್ಲಿ ಧನ್ಯತೆ ಪಡೆದಿದ್ದಾರೆ. ಕರ್ನಾಟಕ ಶಾಸ್ತ್ರೀಯಸಂಗೀತದಲ್ಲಿ ರಾಮ ಭಕ್ತಿ ಪರಂಪರೆಯಲ್ಲಿ, ಆ ಶ್ರೀರಾಮನನ್ನು, ತಮ್ಮ ಕೃತಿಗಳ ಮೂಲಕ ಆರಾಧಿಸಿದ ಕೆಲ ಕೀರ್ತನಕಾರರು, ಅವರ ಕೆಲವು ಕೃತಿಗಳನ್ನು, ಹಾಡಿರುವ ಪ್ರಮುಖ ಗಾಯಕರನ್ನು, ಈ ಲೇಖನದಲ್ಲಿ ನೆನೆಯಬಯಸುತ್ತೇನೆ.

ದಾಸಪರಂಪರೆಯಲ್ಲಿ ಬಂದ ಕನಕದಾಸರು ರಾಮಧಾನ್ಯ ಚರಿತ್ರೆಯಲ್ಲಿ, ಸಮಾಜದ ಬಲಿಷ್ಠ ಹಾಗೂ ದುರ್ಬಲ ವರ್ಗದವರನ್ನ, ಅಕ್ಕಿ ಹಾಗೂ ರಾಗಿ ಧಾನ್ಯಗಳ ನಡುವಿನ ಸಂಭಾಷಣೆ ಮೂಲಕ, ಈ ಎರಡೂ ಧಾನ್ಯಗಳಿಗೆ ರಾಮ ಕೊಟ್ಟ ಸೆರೆವಾಸದಲ್ಲಿ, ಉಳಿದು ಬಂದ ರಾಗಿ ಬಗ್ಗೆ ವರ್ಣಿಸುತ್ತಾರೆ. ಹಲವಾರು ದೇವರನಾಮಗಳಲ್ಲಿ ಇವರು ಶ್ರೀರಾಮನನ್ನು ಸ್ತುತಿಸಿದ್ದಾರೆ.

ಕರ್ನಾಟಕ ಸಂಗೀತ ಪಿತಾಮಹ, ವಾಗ್ಗೇಯಕಾರರು, ಲಕ್ಷಣಕಾರರಾದ ಪುರಂದರದಾಸರು, ಹಿಂದೂಸ್ಥಾನಿ ಸಂಗೀತದ ಮೇಲೂ ಪ್ರಭಾವ ಹೊಂದಿದ್ದಾರೆ. ಭೀಮಸೇನ ಜೋಶಿ, ಮಾಧವ ಗುಡಿ, ಬಸವರಾಜರಾಜಗುರು, ವಿದ್ಯಾಭೂಷಣರು, ಪುತ್ತೂರು ನರಸಿಂಹನಾಯಕ್, ಪಂಡಿತ್ ವೆಂಕಟೇಶಕುಮಾರ್, ನಾಗರಾಜರಾವ್ ಹವಾಲ್ದಾರ್, ಗಣಪತಿ ಭಟ್ಟ, ಇವರೆಲ್ಲ ಪುರಂದರದಾಸರ ಕೀರ್ತನೆಗಳಲ್ಲಿಯ ರಾಮನನ್ನು, ತಮ್ಮ ಕಂಠಶ್ರೀ ಹಾಗೂ ಸಂಗೀತ ಪ್ರಾವೀಣ್ಯತೆಯಿಂದ ಆರಾಧಿಸಿದ್ದಾರೆ. ಪುರಂದರದಾಸರ ಕೀರ್ತನೆಗಳ ಗಾಯನಕ್ಕಾಗಿ, ಮೈಸೂರು ವಿಶ್ವವಿದ್ಯಾಲಯದಿಂದ ಗೌರವ-ಡಾಕ್ಟರೇಟ್ ಪಡೆದ ಡಾ. ಎಮ್.ಎಲ್.ವಸಂತಕುಮಾರಿ ರಾಮನ ಬಗೆಗೆ ಅನೇಕ ದೇವರ ನಾಮಗಳನ್ನು ಹಾಡಿ ಅಮರ ಮಾಡಿದ್ದಾರೆ. ತ್ಯಾಗರಾಜರ ಪಂಚರತ್ನ ಕೃತಿಗಳಲ್ಲಿ, ನಾಟರಾಗದಲ್ಲಿರುವ ಮೊದಲನೆಯ ಕೃತಿ ಜಗದಾನಂದಕಾರಕ-ಪ್ರಪಂಚದಲ್ಲಿಯ ಎಲ್ಲ ಸಂತೋಷದ ಮೂಲ ರಾಮ ಎನ್ನುತ್ತ, ಆತನನ್ನು 108 ನಾಮಗಳಿಂದ ತ್ಯಾಗರಾಜರು ವರ್ಣಿಸಿದ್ದಾರೆ. ವರಾಳಿರಾಗದ ನಾಲ್ಕನೇ ಕೃತಿ ಕಣಕಣ ರುಚಿರಾದಲ್ಲಿ, ರಾಮನ ಸೌಂದರ್ಯವನ್ನು ಕೊಂಡಾಡಲಾಗಿದೆ. ಚೌರುಕೇಶಿ ರಾಗದ ಆಡ ಮೋಡಿಗಲದಾ ರಾಮಯ್ಯ, ಪಂತುವರಾಳಿ ರಾಗದ ಅಪ್ಪಾ ರಾಮಭಕ್ತಿ ಎಂತೋ, ಹಂಸಧ್ವನಿ ರಾಗದ ರಘುನಾಯಕ, ಭೈರವಿ ರಾಗದ ರಾಮಕೋದಂಡರಾಮ, ಮಧ್ಯಮಾವತಿ ರಾಗದ ರಾಮಕಥಾ ಸುಧಾರಸಪಾನ ಮರೆಯಲಾಗದ ಕೃತಿಗಳು.

ಪ್ರಹ್ಲಾದ ಭಕ್ತಿ ವಿಜಯದಲ್ಲಿ ತ್ಯಾಗರಾಜರು, ಪುರಂದರದಾಸರಿಂದ ಸ್ಫೂರ್ತಿ ಪಡೆದ ಬಗ್ಗೆ ನಿವೇದಿಸಿದರೆ, ಇವರಿಬ್ಬರ ಕೆಲ ಕೀರ್ತನೆಗಳನ್ನು ಗಮನಿಸಿ.
ಪುರಂದರದಾಸರ ಕೀರ್ತನೆಗಳು ತ್ಯಾಗರಾಜರ ಕೃತಿಗಳು
ಅಂತರಂಗದಲಿ ಹರಿಯಕಾಣದವ ನಿಧಿ ಚಾಲ ಸುಖಮಾ
ನಮ್ಮ ಭಾಗ್ಯ ದೊಡ್ಡದೋ ರಾಮುನಿ ಸನ್ನಿಧಿ ಸೇವಾಸುಖಮಾ
ಮನವ ನಿಲಿಸುವುದು ಬಲುಕಷ್ಟ ಮನಸು ನಿಲ್ಪ ಶಕ್ತಿ ಲೇಕ ಪೋತೆ
ದಾಸನ ಮಾಡಿಕೋ ಎನ್ನ ಮೇಲುಕೋ ದಯಾನಿಧಿ
ರಾಮನಾಮ ಪಾಯಸಕ್ಕೆ ರಾಮಕಥಾಸುಧಾರಸ ಪಾನಮು

ಮೈಸೂರು ಅರಮನೆಯ ಸಂಗೀತಗಾರರಾಗಿದ್ದ ಮೈಸೂರು ಸದಾಶಿವರಾವ್ ರಚಿಸಿರುವ ಅಪೂರ್ವಕೃತಿಗಳಲ್ಲಿ, ಹಂಸಧ್ವನಿರಾಗದ ರಾಮಾಭಿರಾಮಾ, ವೀಣೆ ಶೇಷಣ್ಣ ಅವರ ಆನಂದ ಭೈರವಿ ರಾಗದಕೃತಿ ರಾಮ ನಿನ್ನು, ಬಿಡಾರಂ ಕೃಷ್ಣಪ್ಪ ಅವರ ರಿಷಭಪ್ರಿಯ ರಾಗದ ದಾಶರಥಿ ನಿನ್ನು, ಕೃತಿಗಳು ರಾಮನನ್ನು ಪ್ರಾರ್ಥಿಸುವ ಅಪೂರ್ವ ಕೃತಿಗಳಾಗಿವೆ.

17ನೇ ಶತಮಾನದಲ್ಲಿದ್ದ, ಭದ್ರಾಚಲ ರಾಮದಾಸ ರಚಿಸಿರುವ ಕೀರ್ತನಗಳಲ್ಲಿ, ‘ಪಲುಕೆ ಬಂಗಾರಮಾಯೇನ ಕೋದಂಡಪಾಣಿ’, ‘ಪಾಹಿರಾಮಪಭೋ ರಾಮಚಂದ್ರುಲು ನಾ ಪೈ’, ‘ಇಕ್ಷಾಕು ಕುಲತಿಲಕ’, ‘ತಕ್ಕುವೇಮಿ ಮನಕು ರಾಮಂಡೊಕ್ತಡುಂಡು ವರಕು’, ‘ಪಾಹಿಮಾಂ ಶ್ರೀ ರಾಮಯಂತೇ’, ‘ರಾಮಜೋಗಿ, ಸುದಿನಮೇ ಸೀತಾರಾಮುನಿ ಸರಣೆ ಪಾವನಮು’, ‘ಎದು ಮೋತಿವೋ ರಾಮ’, ‘ಏಮಿರಾ ರಾಮ’, ‘ನಾ ವಲ್ಲ ನೇರಮೇಯಿರಾ ರಾಮ’, ‘ಭಜರೇ ಮಾನಸರಾಮಮ್’, ‘ಜೈ ಜೈ ಸೀತಾರಾಂ’, ‘ಪರಮ ಪಾವನನಾಮ ಪಟ್ಟಾಭಿರಾಮ’ ಎಂಬ ಕೀರ್ತನೆಗಳಲ್ಲಿ ರಾಮನಾಮ ಧ್ಯಾನವಿದೆ.

ಎಂ.ಬಾಲಮುರಳೀಕೃಷ್ಣ ಹಾಡಿರುವ ‘ಜಗದಾನಂದಕಾರಕ’, ಎಂ.ಎಲ್.ವಸಂತ ಕುಮಾರಿ, ಸುಧಾ ರಘುನಾಥನ್ ಹಾಡಿರುವ ‘ಮರುಗೇಲರಾ ಓ ರಾಘವ’, ಟಿ.ವಿ ಶಂಕರನಾರಾಯಣ ಹಾಡಿರುವ’ರಾಮರಾಮ’, ಎಂ.ಎಸ್.ಸುಬ್ಬುಲಕ್ಷ್ಮಿ ಅವರ ಧ್ವನಿಯಲ್ಲಿರುವ ‘ರಘುವಂಶಸುಧಾ’, ಮಹಾರಾಜಪುರಂ ಸಂತಾನಂ ಹಾಡಿರುವ ‘ಸೀತಕಲ್ಯಾಣ ವೈಭೋಗಮೇ’, ಎಸ್.ಗಾಯತ್ರಿ ಅವರ ಧ್ವನಿಯಲ್ಲಿರುವ ‘ತೆಲಿಸಿರಾಮ’, ಕೃತಿಗಳು ಅಮರವಾಗಿವೆ. ತುಲಸಿದಾಸರ ‘ಶ್ರೀರಾಮ ಚಂದ್ರ ಕೃಪಾಳು ಭಜಮನ’, ‘ಜಯಜಯಂತಿ ಜಯ ರಘವಂಶ ಭೂಷಣರಾಮ ರಾಜೀವ ಲೋಚನಂ’, ‘ತುಮಕ ಚಲತರಾಮಚಂದ್ರ (ಬಾಲಗಯನ ಮನೆ’), ಮೀರಾಬಾಯಿಯ ‘ಪಾಯೋಜಿ ಮೈನೆ ರಾಮರತನ ಧನಪಾಯೇ’, ಈ ಹಾಡುಗಳನ್ನು ಡಿ.ವಿ.ಪಲೂಸ್‌ಕರ್ ಅವರ ಭಕ್ತಿಪರವಶ ಧ್ವನಿಯಲ್ಲಿ ಕೇಳಿದಾಗ, ನಾವೂ ರಾಮಭಕ್ತಿಸಾಗರದಲ್ಲಿ ಮಿಂದು ಪುನೀತರಾಗುತ್ತೇವೆ.

ವಿ.ಕೆ.ರಾಮನ್ ಅವರ ‘ಅಂದರ್ ರಾಮ ಬಾಹರ್ ರಾಮ’, ‘ಜಯ ಜಯ ಆರತಿ ರಾಮ್ ತುಮ್ಹಾರ’, ‘ದಶರಥ್ ಕಾ ಘರ್ ನ ಜನ್ನೇ’ ಕೇಳಿದರೆ ಕಣ್ಣ ಮುಂದೆ ಕಬೀರ್‌ದಾಸರ ರಾಮಭಕ್ತಿ ಪ್ರಕಾಶಿಸುತ್ತದೆ.
ಮೈಸೂರಿನ ಶ್ರೀ ರಾಮಾಭ್ಯುದಯ ಸಭೆಯ ರಾಮೋತ್ಸವ ಸಂಗೀತೋತ್ಸವಕ್ಕೆ, ಪ್ರತೀವರ್ಷ ಬರುವ ಸಂಗೀತಗಾರರೆಲ್ಲ, ತಮ್ಮ ಕಂಠಸಿರಿಯ ಮೂಲಕ, ಶ್ರೀರಾಮ ಪ್ರಭುವಿನ ಬಗ್ಗೆ ಹಾಡಿದಾಗ, ವಾದ್ಯವಾದನ ನುಡಿಸಿದಾಗ, ಸುತ್ತಮುತ್ತಲಿನ ಇಡೀ ವಾತಾವರಣ, ರಾಮ ರಸಭಾವದಿಂದ, ಸಂಗೀತಮಯವಾಗಿ ತಲೆದೂಗುತ್ತದೆ, ಎಂದು ನೆರೆದಿದ್ದವರಿಗೆ ಅನಿಸುವುದರಲ್ಲಿ, ಯಾವ ಉತ್ತೇಕ್ಷೆಯೂ ಇಲ್ಲ, ಈ ರಾಮಮಂದಿರದಿಂದ, ಹಿಂದಿನಿಂದ ಪ್ರತಿವರ್ಷ ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣೆ ಮಾಡುತ್ತಿದ್ದುದರಿಂದ, ಈ ರಾಮಮಂದಿರದ ಶ್ರೀ ರಾಮ, ಒಮ್ಮೆ ಸಪಾಟ ರಾಮ ಎಂಬ ಹೆಸರು ಪಡೆದಿದ್ದವ, ಈಗ ‘ಪ್ರತಿವರ್ಷದ ಶ್ರೀರಾಮನವಮಿ ಸಂಗೀತೋತ್ಸವಗಳಿಂದ, ಸಂಗೀತ ರಾಮನಾಗಿ ಪ್ರಸಿದ್ಧಿ ಹೊಂದಿರುವುದು ವಿಶೇಷ.

ನಮ್ಮ ದೇಶದಲ್ಲಿರುವ 12 ಮುಖ್ಯ ಶ್ರೀರಾಮನ ದೇಗುಲಗಳ ಬಗ್ಗೆ ಈಗ ತಿಳಿಯೋಣ:-
ಉತ್ತರ ಪ್ರದೇಶದ ಅಯೋಧ್ಯಾದಲ್ಲಿ ಕಟ್ಟಲಾಗಿರುವ ಭವ್ಯ ರಾಮಮಂದಿರ ಅತ್ಯಂತ ಸುಂದರವಾಗಿ ಕಣ್ಮನ ಸೆಳೆಯುವಂತಿದೆ. ಕ್ರಿ.ಶ 1788ರಲ್ಲಿ ಮಹಾರಾಷ್ಟ್ರ ರಾಜ್ಯದ ನಾಸಿಕದ ಪಂಚವಟಿ ಪ್ರದೇಶದಲ್ಲಿ ಕಟ್ಟಲಾಗಿರುವ ಕಪ್ಪು ಬಣ್ಣದ ರಾಮನ ಮೂರ್ತಿ ಇರುವ ದೇವಾಲಯವೇ ಕಾಲರಾಮ ಮಂದಿರ.

ಅಯೋಧ್ಯೆಯ ಕನಕ ಭವನ ದೇವಾಲಯ ಬಂಗಾರದಲ್ಲಿ ಕಟ್ಟಿರುವ ಅರಮನೆಯಂತಿದೆ. ಇಲ್ಲಿ ಅತ್ಯಂತ ಸುಂದರವಾದ ರಾಮ, ಸೀತೆಯರ ಮೂರ್ತಿಗಳಿವೆ. ಈ ಮೂರ್ತಿ ಧರಿಸಿರುವ ಆಭರಣಗಳು, ಚಿನ್ನದ್ದು. ಈ ದೇವಾಲಯಕ್ಕೆ ದರ್ಶನ ಕೊಡಬೇಕಾದರೆ ಸೂರ್ಯೋದಯ ಅಥವಾ ಸೂರ್ಯಾಸ್ತದ ಸಮಯದಲ್ಲಿ ಭೇಟಿ ಕೊಡಬೇಕು. ಆಗ ಸೂರ್ಯನ ಬಂಗಾರದ ಬಣ್ಣದ ಕಿರಣಗಳು ದೇವಾಲಯದ ಮೇಲೆ ಬಿದ್ದು, ಇಡೀ ದೇವಾಲಯಕ್ಕೆ ಪವಿತ್ರ ಹೊಳಪಿನ ಬಂಗಾರದ ದೀಪಾಲಂಕಾರ ಮಾಡಿದಂತೆ ಕಾಣುತ್ತದೆ.

ತೆಲಂಗಾಣ ರಾಜ್ಯದಲ್ಲಿರುವ ಗೋದಾವರಿ ನದಿಯ ದಂಡೆ ಮೇಲಿರುವ ಶ್ರೀ ರಾಮಚಂದ್ರ ಸ್ವಾಮಿ ದೇವಾಲಯವನ್ನು ಒಮ್ಮೆ ನೋಡಿ ಬನ್ನಿ. ಈ ಸ್ಥಳದಲ್ಲಿಯೇ ಹಿಂದೆ ಶ್ರೀರಾಮ ಈ ನದಿಯನ್ನು ದಾಟಿ ವಿಷ್ಣುವಿನ ಭಕ್ತನಾದ ಭದ್ರನನ್ನು ಕಂಡನಂತೆ.

ತಮಿಳುನಾಡಿನ ರಾಜ್ಯದ ಕುಂಭಕೋಣಂದಲ್ಲಿರುವ ರಾಮಸ್ವಾಮಿ ದೇವಾಲಯದಲ್ಲಿ ಕಣ್ಣು ಸೆಳೆಯುವ ಅತ್ಯಂತ ಭವ್ಯ 64 ಕಂಬಗಳ ಪ್ರಾಂಗಣವಿದೆ. ಇಲ್ಲಿ ದ್ರಾವಿಡ ವಾಸ್ತು ಶಿಲ್ಪದ ಸೂಕ್ಷö್ಮ ಕೆತ್ತನೆಗಳ ಗೋಪುರವಿದೆ. ಈ 16ನೇ ಶತಮಾನದ ದೇವಾಲಯದಲ್ಲಿ ಹಿಂದೆ ಶ್ರೀರಾಮ ತನ್ನ ಸೋದರರಾದ ಲಕ್ಷ್ಮಣ, ಭರತ ಶತೃಘ್ನ ಹಾಗು ಹನುಮಂತನೊಂದಿಗೆ ಪೂಜೆ ಸಲ್ಲಿಸಿದನೆಂಬ ಪ್ರತೀತಿಯಿದೆ. ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಕ್ರಿ.ಶ 1835ರಲ್ಲಿ ಮೊದಲ ಡೊಗ್ರಾ ರಾಜ ಗುಲಾಬ್‌ಸಿಂಗ್ ಈ ದೇವಾಲಯ ಕಟ್ಟಿಸಿರುವನಂತೆ. ಈ ದೇವಾಲಯದ ಪ್ರಾಂಗಣದಲ್ಲಿ 7 ದೇವಾಲಯಗಳಿದ್ದು, ವಿವಿಧ ದೇವಾನುದೇವತೆಗಳ ಮಂದಿರಗಳಿವೆ.

ಕರ್ನಾಟಕ ರಾಜ್ಯದ ಹಂಪೆಯ ಬಳಿ ಇರುವ ಕೋದಂಡರಾಮ ದೇವಾಲಯದಲ್ಲಿ ವಿಜಯನಗರ ಹಾಗೂ ಹೊಯ್ಸಳ ಶೈಲಿಯ ವಾಸ್ತು ಶಿಲ್ಪವನ್ನು ಕಾಣಬಹುದು. ಇಲ್ಲಿ ರಾಮನೊಂದಿಗೆ ಸೀತೆ, ಲಕ್ಷö್ಮಣ ಹಾಗೂ ಹನುಮಾನ್‌ಗೆ ಪೂಜೆ ಸಲ್ಲುತ್ತದೆ. ಯುನೆಸ್ಕೋವು ಈ ದೇವಾಲಯವನ್ನು ವಿಶ್ವ ಪರಂಪರಾ ಸ್ಥಳ ಎಂದು ಗುರುತಿಸಿದೆ.

ಪಂಜಾಬ್ ರಾಜ್ಯದಲ್ಲಿ ಅಮೃತ್‌ಸರದಲ್ಲಿ ಶ್ರೀರಾಮ ತಿರತ ದೇವಾಲಯವಿದೆ. ಈ ಸ್ಥಳವನ್ನು ರಾಮನನ್ನು ಬಿಟ್ಟು ತೆರಳಿದ ಸೀತೆ ಆಶ್ರಯ ಪಡೆದ ಸ್ಥಳವಂತೆ. ಇಲ್ಲಿಯೇ ಮಹರ್ಷಿ ವಾಲ್ಮೀಕಿಯ ಆಶ್ರಮದಲ್ಲಿ ಲವ, ಕುಶರು ಹುಟ್ಟಿದರಂತೆ. ಈ ದೇವಾಲಯದ ಪ್ರದೇಶದಲ್ಲೇ ವಾಲ್ಮೀಕಿ ಮಹರ್ಷಿಗಳು ರಾಮಾಯಣ ಕೃತಿ ಬರೆದರಂತೆ.

ತಮಿಳುನಾಡು ರಾಜ್ಯದ ರಾಮೇಶ್ವರಂದಲ್ಲಿಯ ಶ್ರೀರಾಮನಾಥಸ್ವಾಮಿ ದೇವಾಲಯವನ್ನು ನೋಡಿದ್ದೀರಾ? ಈ ಸ್ಥಳದಲ್ಲಿಯೇ ರಾಮಸೇತು ನಿರ್ಮಾಣವಾದುದಂತೆ. ಇಲ್ಲಿಂದಲೇ ಶ್ರೀಲಂಕಾಗೆ ಯುದ್ಧಕ್ಕೆ ಹೊರಡುವ ಮುನ್ನ ಶ್ರೀರಾಮ ಪೂಜಿಸಿದ ಶಿವಲಿಂಗ ಇದೆಯಂತೆ.

ರಾಮೇಶ್ವರಂದಿಂದ 13 ಕಿಲೋ ಮೀಟರ್ ದೂರದಲ್ಲಿ ಎಲ್ಲಾ ಕಡೆ ಸಮುದ್ರದಿಂದ ಸುತ್ತುವರೆದಿರುವ ಕೋದಂಡರಾಮಸ್ವಾಮಿ ದೇವಾಲಯವಿದೆ. ರಾವಣನನ್ನು ಯುದ್ಧದಲ್ಲಿ ರಾಮ ಕೊಂದ ನಂತರ, ರಾವಣನ ಸೋದರ ವಿಭೀಷಣ ಈ ದೇವಾಲಯ ಕಟ್ಟಿಸಿದನಂಥೆ. ಆದ್ದರಿಂದ ಈ ದೇವಾಲಯದಲ್ಲಿ ರಾಮ, ಸೀತೆ ಲಕ್ಷ್ಮಣರೊಂದಿಗೆ ವಿಭೀಷಣನ ಮೂರ್ತಿಯಿದೆ.

ಮಧ್ಯಪ್ರದೇಶ ರಾಜ್ಯದಲ್ಲಿ ಓರ್ಚಾದಲ್ಲಿರುವ ರಾಮ ಇಲ್ಲಿ ರಾಜನಾಗಿ ಪೂಜಿಸಿಕೊಳ್ಳುತ್ತಿದ್ದಾನೆ. ಪ್ರತಿನಿತ್ಯ ರಾಜನಿಗೆ ಸಲ್ಲುವ ಗೌರವ ವಂದನೆ ಇಲ್ಲಿ ಸಲ್ಲುತ್ತದೆ. ಇಲ್ಲಿ ರಾಮನ ಮೂರ್ತಿಯೊಂದಿಗೆ ಸೀತೆ ಹಾಗೂ ಲಕ್ಷ್ಮ್ಮಣ ಮೂರ್ತಿಗಳಿದೆಯಂತೆ. ಈ ದೇವಸ್ಥಾನದಲ್ಲಿ ಹನುಮಂತ ಹಾಗೂ ದುರ್ಗಾದೇವಿಗೆ ಪೂಜೆ ಸಲ್ಲಿಸುತ್ತಾರೆ. ಸುಗ್ರೀವ ಹಾಗೂ ಜಾಂಬವಂತ ಇವರ ಮೂರ್ತಿಗಳು ಇವೆ.

ಕೇರಳ ರಾಜ್ಯದಲ್ಲಿರುವ ತ್ರಿಪ್ರಯಾರ್ ಶ್ರೀರಾಮಸ್ವಾಮಿ ದೇವಾಲಯದಲ್ಲಿ ಶ್ರೀಕೃಷ್ಣ ರಾಮನನ್ನು ತ್ರಿಪ್ರಯಾರಪ್ಪನ್ ಎಂಬ ಹೆಸರಿನಲ್ಲಿ ಪೂಜಿಸಿದ್ದನಂತೆ. ಈ ದೇವಾಲಯದಲ್ಲಿ ಶ್ರೀರಾಮನ ಮೂರ್ತಿಯ 4 ಕೈಗಳಲ್ಲಿ ಶಂಖ, ಚಕ್ರ, ಬಿಲ್ಲು, ಹಾಗೂ ಮಾಲೆ ಇವೆ.

ಎನ್.ವ್ಹಿ.ರಮೇಶ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *