ದಿನ 14
ವಾಹ್- ವಾಲು ಗೋಪುರ – ಪೀಸಾ
ಬೆಳಗಿನ ಕಾರ್ಯಕ್ರಮ ಮತ್ತು ಉಪಹಾರದ ನಂತರ ಜಗತ್ಪ್ರಸಿದ್ಧ ಪೀಸಾ ದ ವಾಲು ಗೋಪುರ ನೋಡಲು ಉತ್ಸುಕರಾಗಿ ನಮ್ಮ ಪ್ರಯಾಣ ಆರಂಭಿಸಿದೆವು. ಪಡೋವಾ ದಿಂದ ಸುಮಾರು 300 ಕಿ.ಮೀ ದೂರದ ಪೀಸಾ ತಲುಪಲು ಸುಮಾರು 4:30 ಗಂಟೆ ಬೇಕಾಯಿತು. ನಮ್ಮ ಬಸ್ ನಿಲ್ದಾಣದಿಂದ ಟ್ರೈನ್ ತರಹದ ವಾಹನದಲ್ಲಿ ಎಲ್ಲರೂ ಪೀಸಾ ವಾಲುಗೋಪುರದ ಸಮೀಪಕ್ಕೆ ಬಂದು ಮೊದಲು ಊಟದ ಹೋಟೆಲ್ ಗೆ ಹೋಗಿ ಊಟ ಮುಗಿಸಿ, ಅಲ್ಲಿಂದ ಕಾಲ್ನಡಿಗೆಯಲ್ಲಿ ಸ್ಕ್ವೆಯರ್ ಆಫ್ ಮಿರಾಕಲ್ಸ್, ಬ್ಯಾಪ್ಟಿಸ್ಟರಿಗಳನ್ನು ನೋಡಿ ಲೀನಿಂಗ್ ಟವರ್ ಆಫ್ ಪೀಸಾ ನೋಡಿದೆವು. ಪೀಸಾ ವಾಲು ಗೋಪುರ ಕ್ರಿ.ಶ. 1173 ರಿಂದ 1300 ರ ಸಮಯದಲ್ಲಿ ಕಟ್ಟಿದ ಗೋಪುರ 1372 ರಲ್ಲಿ ಮುಕ್ತಾಯವಾಯಿತು. . ಬಿಳಿ ಅಮೃತ ಶಿಲೆ ಯಲ್ಲಿ ಸಿಲಿಂಡರ್ ಆಕಾರದಲ್ಲಿದೆ. ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಶತ ಶತಮಾನಗಳ ಪ್ರಮಾದದಿಂದಾಗಿ, ಪದೇ ಪದೇ ವಾಲುತ್ತಲೇ ಇದ್ದ ಗೋಪುರ ವನ್ನು ಅನೇಕ ಹಂತಗಳಲ್ಲಿ ಕಟ್ಟಿ ಮುಗಿಸಿದರು. ಎತ್ತರ 55.86 ಮೀಟರ್ ಒಂದು ಕಡೆ, 56.67 ಮೀಟರ್ ಇನ್ನೊಂದು ಕಡೆ ಇದೆ, ನೆಲ ಅ೦ತಸ್ತು ಸೇರಿ 8 ಅ೦ತಸ್ತು. ಒಟ್ಟು 207 ಕಂಬಗಳು, ಪ್ರತಿ ಅಂತಸ್ತಿನಲ್ಲಿ 30 ಕಮಾನು, ( ನೆಲ ಅಂತಸ್ತು ಮಾತ್ರ 15, ಕೊನೆ ಅ೦ತಸ್ತಿನಲ್ಲಿ 16 ಕಮಾನುಗಳು). ಭದ್ರ ಬುನಾದಿ ಇಲ್ಲದಿದ್ದರಿಂದ ಮತ್ತು ಮೆದು ಮಣ್ಣಿನಿಂದಾಗಿ ಗೋಪುರ ಪ್ರತಿ ವರ್ಷ 1-2 ಮಿ ಮಿ (3.99 ಡಿಗ್ರಿ) ವಾಲುತ್ತಿತ್ತು. ಕುಸಿಯುತ್ತಿರುವ ಬುನಾದಿಯಿಂದಾಗಿ ಜಗತ್ಪ್ರಸಿದ್ಧವಾಯಿತು.
ಎರಡನೇ ಮಹಾಯುದ್ಧದಲ್ಲಿ ಅಮೇರಿಕಾದ ಸೈನಿಕರು ಇಡೀ ಪೀಸಾ ನಗರವನ್ನು ನಾಶ ಮಾಡಿದರು. ಆದರೆ ಒಪ್ಪಂದದಿಂದಾಗಿ ಮಿರಾಕಲ್ ಸ್ಕ್ವೆಯರ್ ಮತ್ತು ಅಲ್ಲಿಯ ಸ್ಮಾರಕಗಳನ್ನು ಉಳಿಸಿದರು. ಈ ಮಿರಾಕಲ್ ಸ್ಕ್ವೆಯರ್ ನಲ್ಲಿ ವಾಲು ಗೋಪುರವಲ್ಲದೆ ಕ್ಯಾಥೆಡ್ರಲ್, ಬ್ಯಾಪಿಸ್ಟ್ರಿ ಗಡಿಯಾರ ಗೋಪುರಗಳಿವೆ. ಇವೆಲ್ಲ ಯುನೆಸ್ಕೊದ ಪಾರಂಪರಿಕ ತಾಣಗಳಾಗಿವೆ. ಅದರ ಹತ್ತಿರ ಮತ್ತು ಒಳಗೆ ಹೋಗಲು ಅವಕಾಶ ಇಲ್ಲದಿದ್ದರಿ೦ದ ದೂರದಿ೦ದಲೇ ನೋಡಿ ಫೋಟೋಗಳನ್ನು ತೆಗೆದುಕೊ೦ಡು ಸಾಕಾಗುವ ತನಕ ನೋಡಿ ಎಲ್ಲಾ ಸ್ಮಾರಕಗಳ ಮುಂದೆ ಫೋಟೋಗಳನ್ನು ತೆಗಿಸಿಕೊಂಡು ಅಲ್ಲಿಂದ ಮತ್ತೆ ಅದೇ ಟ್ರೈನ್ ತರಹದ ವಾಹನದಲ್ಲಿ ನಮ್ಮ ಬಸ್ ನಿಂತ ಜಾಗಕ್ಕೆ ಬಂದು ಬಸ್ನಲ್ಲಿ ಕುಳಿತೆವು.
ಅಲ್ಲಿಂದ ನಮ್ಮ ಪ್ರಯಾಣ ಇನ್ನೊಂದು ಪ್ರಸಿದ್ಧ ನಗರ ಫ್ಲಾರೆನ್ಸ್ ಕಡೆಗೆ ಸಾಗಿತ್ತು. ಫ್ಲಾರೆನ್ಸ್ ಮೊದಲ ಮಹಾಯುದ್ಧದ ನಂತರ ಚೇತರಿಕೆಯ ಪುನರುಜ್ಜೀವನದ ತೊಟ್ಟಿಲಾಗಿತ್ತು. ಅಲ್ಲಿ ಬಸ್ ನಿಂದ ಇಳಿದ ನಂತರ ಒಬ್ಬ ಗೈಡ್ ನಮಗಾಗಿ ಕಾಯುತ್ತಿದ್ದ. ಇಟಲಿಯನ್ ಆಗಿದ್ದರೂ ಸಹ ಕನ್ನಡದಲ್ಲಿ ನಮಸ್ಕಾರ, ಬನ್ನಿ, ಇಡ್ಲಿ, ದೋಸಾ ಎಂದು ಸ್ವಾಗತಿಸಿದಾಗ ಆಶ್ಚರ್ಯ ಆನಂದ ಎಲ್ಲ ಒಟ್ಟಿಗೆ ಉಂಟಾಯಿತು.
ಇನ್ನೊಂದು ಆಶ್ಚರ್ಯವೆಂದರೆ ಅಲ್ಲಿ ನಮಗೆಲ್ಲರಿಗೂ ಒಂದೊಂದು ಹಿಯರಿಂಗ್ ಮಷೀನ್ ಕೊಟ್ಟು ಕಿವಿಗೆ ಸಿಕ್ಕಿಸಿಕೊಳ್ಳಲು ಹೇಳಿದರು. ನಂತರ ಎಲ್ಲರನ್ನೂ ಕರೆದುಕೊಂಡು ಸ್ಮಾರಕಗಳ ಕಡೆಗೆ ಕಾಲ್ನಡಿಗೆಯಲ್ಲಿ ಕರೆದುಕೊಂಡು ಹೋದರು. ದಾರಿಯಲ್ಲಿ ಅವರು ಪ್ಲಾರೆನ್ಸ್ ನಗರದ ಇತಿಹಾಸ ಚಾರಿತ್ರಿಕ ಹಿನ್ನೆಲೆ ಮುಖ್ಯ ಸ್ಮಾರಕಗಳ ವಿವರಣೆ ನೀಡುತ್ತಿದ್ದರು. ಎಲ್ಲರಿಗೂ ಸ್ಪಷ್ಟವಾಗಿ ವಿವರಣೆ ಕೇಳುತ್ತಿತ್ತು. ಯಾರೂ ಅವರ ಹತ್ತಿರ ಗುಂಪಾಗಿ ಹೋಗುವ ಅವಶ್ಯಕತೆ ಇರಲಿಲ್ಲ. ಅರ್ನೋ ನದಿಯ ದಡದ ಮೇಲಿರುವ ಫ್ಲಾರೆನ್ಸ್ ನಗರ ಅನೇಕ ಸ್ಮಾರಕ ಬ್ಯಾಪಿಸ್ಟರಿ ಗಳನ್ನು ಹೊ೦ದಿರುವ ನಗರ. ಜೂಲಿಯಸ್ ಸಿಸರ್ ಕ್ರಿಸ್ತಪೂರ್ವ 59 ರಲ್ಲಿ ನಿವೃತ್ತ ರೋಮನ್ ಸೈನಿಕರು ನೆಲೆಸಲು ಮಾಡಿಟ್ಟ ಜಾಗ. ಕ್ರಿಸ್ತ ಶಕ ಮೂರನೇ ಶತಮಾನದಲ್ಲಿ ವ್ಯಾಪಾರ ವಹಿವಾಟುಗಳ ಕೇಂದ್ರವಾಗಿ ಅಭಿವೃದ್ಧಿ ಹೊಂದಿತ್ತು. 12ನೇ ಶತಮಾನದಿಂದ ಪುನರುಜ್ಜೀವನದ ಕೇಂದ್ರ ಬಿಂದುವಾಗಿ, ವ್ಯಾಪಾರ, ವಹಿವಾಟುಗಳಲ್ಲಿ ಗಮನ ಸೆಳೆಯಿತು. ಲಿಯೋ ನಾರ್ಡೊ ಡ ವಿನ್ಸಿ,, ಮೈಖೆಲಾ೦ಜೆಲೋ, ಡಾಟೆ, ಗೆಲಿಲಿಯೋ ಮುಂತಾದ ಜಗದ್ವಿಖ್ಯಾತ ಕಲಾವಿದರು ಮತ್ತು ವಿಜ್ಞಾನಿಗಳನ್ನು ಆಕರ್ಷಿಸಿದ ನಗರ. ಫ್ಲಾರೆನ್ಸ್ ನಗರದ ಬ್ಯಾಂಕುಗಳು ಯುರೋಪಿನಾದ್ಯಂತ ಕೈಗಾರಿಕೆಗಳ ಅಭಿವೃದ್ಧಿಗೆ ಆರ್ಥಿಕ ಸಹಾಯ ಒದಗಿಸಿದವು. ಅಕೌಂಟೆನ್ಸಿ ಯ ಬಿಲ್ ಅಫ್ಎಕ್ಸ್ ಚೇಂಜ್, ಡಬಲ್ ಎ೦ಟ್ರಿ ಬುಕ್ ಕೀಪಿ೦ಗ್ ಗಳನ್ನು ಪ್ರಥಮ ಬಾರಿಗೆ ಜಗತ್ತಿಗೆ ತೋರಿಸಿಕೊಟ್ಟ ನಗರ. ಇತ್ತೀಚಿನ ದಿನಗಳಲ್ಲಿ ಮಾಹಿತಿ ತಂತ್ರಜ್ಞಾನ, ಫ್ಯಾಷನ್ ಡಿಸೈನಿ೦ಗ್ಕ್ಷೇ ತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಕಲಾ ಕೃತಿಗಳ ಬಯಲು ಪ್ರದರ್ಶನಾಲಯ, (ಪಿಯಾಜೊ ಡೆಲ್ ಡುಯಾಮೊ) ಪಿಯಾಜೊ ಡೆಲ್ ಸಿ೦ಗ್ನೊರಿಯ, ಪಿಯಾಜೆಲ್ಲೊ ಮೈಖೆಲಾ೦ಜೆಲೊ (ಬೆಟ್ಟದ ಮೇಲಿನಿ೦ದ ನಗರದ ವಿಹ೦ಗಮ ನೋಟ) ಇಲ್ಲಿಯ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾಗಿವೆ. ಬಸ್ ನಲ್ಲಿ ಎತ್ತರವಾಗಿ ಬೆಟ್ಟದಂತ ಪ್ರದೇಶಕ್ಕೆ ಹೋಗಿ ಅಲ್ಲಿಂದ ಪ್ಲಾರೆನ್ಸ್ ನಗರದ ಹೃದಯಂಗಮ ದೃಶ್ಯವನ್ನು ನೋಡಿ , ಭಾರತೀಯ ರೆಸ್ಟೋರೆಂಟ್ ನಲ್ಲಿ ರಾತ್ರಿಯ ಊಟ ಮುಗಿಸಿ ಕೊಂಡು ಅರೇಜು ನಗರವನ್ನು ತಲುಪಿ ಅಲ್ಲೇ ಹೋಟೆಲ್ನಲ್ಲಿ ರಾತ್ರಿ ವಾಸ್ತವ್ಯ ಹೂಡಿದೆವು.
(ಮುಂದುವರಿಯುವುದು)
ಈ ಪ್ರವಾಸಕಥನದ ಹಿಂದಿನ ಸಂಚಿಕೆ ಇಲ್ಲಿದೆ: https://surahonne.com/?p=44921
–ಟಿ.ವಿ.ಬಿ.ರಾಜನ್ , ಬೆಂಗಳೂರು

