ʼಜೀವನೋತ್ಸಾಹʼ ಎನ್ನುವುದು ಜೀವನದ ಒಂದು ಪ್ರಮುಖ ಹಾಗೂ ಅಮೂಲ್ಯವಾದ ಭಾವ. ಅದನ್ನು ಎಷ್ಟು ಜೀವಂತಿಕೆಯಿಂದ, ಜತನದಿಂದ ನಾವು ಕಾಪಾಡಿಕೊಳ್ಳುತ್ತೇವೋ ಅದು ನಮಗೆ ಜೀವನವನ್ನು ಸಹ್ಯವಾಗಿಸುತ್ತದೆ ಹಾಗೆಯೇ ನಮ್ಮ ಸುತ್ತಮುತ್ತಲಿನವರಿಗೆ ನಾವು ಸಹ್ಯವಾಗುತ್ತೇವೆ.
ಕೆಲವರು ಜೀವನದಲ್ಲಿ ಅತ್ಯಂತ ಶೀಘ್ರವಾಗಿ ಜೀವನಾಸಕ್ತಿಯನ್ನು ಕಳೆದುಕೊಂಡು ಬಿಡುತ್ತಾರೆ. ಕೆಲಕಾಲ ಅವರುಗಳ ಹಿತೈಷಿಗಳು ಅವರನ್ನು ಆ ಭಾವದಿಂದ ಹೊರತರಲು ಪ್ರಯತ್ನಿಸುತ್ತಾರೆ. ಅದಕ್ಕೆ ಪ್ರತಿಸ್ಪಂದಿಸುತ್ತಾ ಮತ್ತೆ ಉತಾಹಭರಿತ ಜೀವನಕ್ಕೆ ಹಿಂದಿರುಗಬೇಕು. ಇಲ್ಲದಿದ್ದಲ್ಲಿ ಅವರುಗಳೂ ಆಸಕ್ತಿ ಕಳೆದುಕೊಂಡು ಹಿಂದಕ್ಕೆ ಸರಿದು ಬಿಡುತ್ತಾರೆ. ಮತ್ತಷ್ಟು ಜನ ಕೆಲವಾರು ದಿನಗಳು ಕರುಣೆಯನ್ನು ತೋರಿಸುತ್ತಾ ನಂತರದಲ್ಲಿ ಹಿಂದೆ ಸರಿದು ಬಿಡುತ್ತಾರೆ. ಆಗ ಮನುಷ್ಯ ಒಂಟಿಯಾಗಿ ಬಿಡುತ್ತಾನೆ. ಬೇಸರ ಜಡತ್ವ ಜೀವನವನ್ನು ನರಕವಾಗಿಸಿ ಬಿಡುತ್ತದೆ. ಅದಕ್ಕಾಗಿಯೇ ಬದುಕನ್ನು ಆಸಕ್ತಿದಾಯಕವಾಗಿಸಿಕೊಳ್ಳುವುದು, ಉತ್ಸಾಹಭರಿತವಾಗಿಸಿಕೊಳ್ಳುವುದು ಅತ್ಯಂತ ಅಗತ್ಯ.
ಇದಕ್ಕಾಗಿ ಹಣ ವೆಚ್ಚ ಮಾಡಬೇಕಿಲ್ಲ, ಕಷ್ಟ ಪಡಬೇಕಿಲ್ಲ, ಉತ್ಸಾಹ ಉಳಿಸಿಕೊಳ್ಳಬೇಕೆನಿಸುವ ಇಚ್ಛೆ ಬಲವಾಗಿರಬೇಕು ಅಷ್ಟೆ. ನಮ್ಮ ಪೂರ್ವಜರು ಮನಸ್ಸಿನ ಆರೋಗ್ಯಕ್ಕೆ ಅತ್ಯಂತ ಮಹತ್ವವನ್ನು ನೀಡುತ್ತಿದ್ದರು. ಹಾಗಾಗಿಯೇ ಜೀವನದಲ್ಲಿ ಉತ್ಸಾಹ ಮತ್ತು ಆಸಕ್ತಿಯನ್ನು ಉಳಿಸಿಕೊಳ್ಳಲು, ಕಳೆದುಕೊಳ್ಳದಿರಲು ಹಬ್ಬ ಹರಿದಿನಗಳನ್ನು, ಆಚಾರ ವಿಚಾರಗಳನ್ನು ಜೀವನದ ಹಾಸು ಹೊಕ್ಕಾಗಿಸಿದ್ದರು. ಆಧುನಿಕ ಬದುಕಿನ ನಾಗಾಲೋಟದಲ್ಲಿ ಅವುಗಳನ್ನೆಲ್ಲ ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಆಚರಣೆಯಲ್ಲಿರುವಂತೆ, ಪಕಕ್ಕೆ ಸರಿಯದಂತೆ ಎಚ್ಚೆತ್ತುಕೊಳ್ಳಬೇಕಾದ, ನೋಡಿಕೊಳ್ಳಬೇಕಾದ ಅವಶ್ಯಕತೆ ಹಿಂದೆಂದಿಗಿಂತಾ ಇಂದು ಜಾಸ್ತಿ ಇದೆ.
ಈ ನಿಟ್ಟಿನಲ್ಲಿ ಹವ್ಯಾಸಗಳೂ ಸಹ ತುಂಬಾ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಹಬ್ಬಗಳು ಬಂದಿತೆಂದರೆ ದಿನನಿತ್ಯದ ಏಕತಾನತೆಯಿಂದ ಮುಕ್ತರಾಗಿ ವಿವಿಧ ರೀತಿಯ ಧಾರ್ಮಿಕ ಆಚರಣೆಗಳು, ಪಾಕ ನಿಪುಣತೆಯ ಪ್ರಯೋಗಗಳು, ಬಂಧು ಬಾಂಧವರ ಮಿಲನ, ಕಲೆ ಸಂಸ್ಕೃತಿಗಳು ಮರುಕಳಿಸುವತ್ತ ಗಮನ ನೆಟ್ಟಾಗ, ಮತ್ತೆ ದೈನಂದಿನ ದಿನಚರಿಗೆ ಮರಳಿದಾಗ ದುಪ್ಪಟ್ಟು ಉತ್ಸಾಹದಲ್ಲಿ ಕಾರ್ಯನಿರತವಾಗಿ ಉತ್ತಮ ಫಲಿತಾಂಶ ನೀಡುವಂತಾಗುತ್ತದೆ.
ಗಂಡಸರೂ ಹೆಂಗಸರೂ ಎಲ್ಲರೂ ಎಲ್ಲ ಕಾರ್ಯಗಳನ್ನು ಮಾಡಬಹುದಾದರೂ, ಮಾಡಬೇಕಿದ್ದರೂ, ಎಲ್ಲರಿಗೂ ಅವರದ್ದೇ ಆದಂತಹ ಅಭಿರುಚಿ, ಪರಿಣಿತಿ, ಆಸಕ್ತಿಗಳು ಇರುತ್ತವೆ. ಇನ್ನು ಕೆಲವರಿಗೆ ರೂಢಿಗತವಾಗಿ ಬಂದಿರುತ್ತದೆ. ಹಾಗಾಗಿ ಯಾರಿಗೆ ಯಾವುದು ಇಷ್ಟವೋ ಅದನ್ನೇ ಮಾಡಲು ಅನುವು ಮಾಡಿಕೊಟ್ಟಾಗ ಕೆಲಸಗಳು ಅಚ್ಚುಕಟ್ಟಾಗಿ ಆಗುತ್ತವೆ.
ಉದಾಹರಣೆಗೆ ಕೆಲವು ಹೆಂಗಳೆಯರು ಸಂಕ್ರಾತಿ ಹಬ್ಬ ಬಂದಿತೆಂದರೆ ಬೆಲ್ಲ ಕೊಬ್ಬರಿಯನ್ನು ತಾವೇ ಹೆಚ್ಚಬೇಕೆಂಬ ಅಭಿಲಾಷೆಯನ್ನು ಹೊಂದಿರುತ್ತಾರೆ. ಹೊತ್ತು ಗೊತ್ತಿಲ್ಲದೆ, ದಿನ ರಾತ್ರಿಯೆನ್ನದೆ ಸಣ್ಣಗೆ ಒಂದೇ ಸಮ ಅವರುಗಳು ಹೆಚ್ಚುವುದನ್ನು ನೋಡುತ್ತಿದ್ದರೆ ಮೊದ ಮೊದಲು ಪ್ರಶಂಸಿಸುವಂತಾದರೂ ನಂತರದಲ್ಲಿ ಇಷ್ಟು ಆಸಕ್ತಿಯಿಂದ ಹೇಗೆ ಮಾಡಲು ಸಾಧ್ಯ ಎಂದು ಅಚ್ಚರಿ ಪಡುವಂತಾಗುತ್ತದೆ.
ಗೌರಿ ಹಬ್ಬ ಬಂದಿತೆಂದರೆ ಮೊರದ ಬಾಗಿನ ಅಣಿ ಮಾಡುವುದು, ನವರಾತ್ರಿ ಬಂದಿತೆಂದರೆ ಗೊಂಬೆಗಳನ್ನು ಕೂಡಿಸುವುದು, ಎಲ್ಲ ಹಬ್ಬಗಳಲ್ಲಿ ಮನೆಯ ಸಂದಿ ಮೂಲೆಗಳನ್ನೆಲ್ಲಾ ಮತ್ತೆ ಮತ್ತೆ ಸ್ವಚ್ಛಗೊಳಿಸುವುದು, ಆಕರ್ಷಕ ರಂಗೋಲಿಗಳನ್ನು ಹಾಕುವುದೂ, ಚಿತ್ತಾಕರ್ಷಕ ತಳಿರು ತೋರಣಗಳನ್ನು ಕಟ್ಟುವುದೂ, ಹತ್ತಿ ಬತ್ತಿಗಳು, ಕಣ್ಮನತಣಿಸುವ ಗೆಜ್ಜೆ ವಸ್ತ್ರಗಳನ್ನು ಮಾಡುವುದು, ಪ್ರತೀ ಹಬ್ಬಕ್ಕೆ ರೂಢಿಯಲ್ಲಿರುವಂತಹ ವಿವಿಧ ಬಗೆಯ ಅಡುಗೆಗೆಳನ್ನು ಮಾಡುವುದು . . . ಹೀಗೇ ಏನಾದರೂ ಬಿಡದೆ ಎಷ್ಟೇ ಕಷ್ಟವಿರಲಿ ಮಾಡಿಯೇ ತೀರಬೇಕೆಂಬ ಕಟ್ಟುಪಾಡುಗಳನ್ನು ತಮಗೆ ತಾವೇ ಹಾಕಿಕೊಂಡು ಸದಾ ಚಟುವಟಿಕೆಯಿಂದ ಕ್ರಿಯಾ ಶೀಲರಾಗಿರುತ್ತಾರೆ.
ಗಂಡಸರುಗಳು ಸಹ ತಮ್ಮದೇ ಆದ ರೀತಿಯಲ್ಲಿ ಹವ್ಯಾಸಗಳನ್ನು ಬೆಳೆಸಿಕೊಂಡದಲ್ಲಿ ಜೀವನದಲ್ಲಿ ಎಂದೂ ನಿರುತ್ಸಾಹವೆಂಬ ಮಾತೇ ಇರುವುದಿಲ್ಲ. ಕೆಲವರಂತೂ ಟಿವಿ ನೋಡುತ್ತಿರಲಿ, ರೇಡಿಯೋ ಕೇಳುತ್ತಿರಲಿ, ಬಟ್ಟೆಗಳನ್ನು ಮಡಿಸಿಡುವುದೋ ಇಸ್ತ್ರಿ ಹಾಕುವುದೋ ಮಾಡುತ್ತಿರುತ್ತಾರೆ. ಈ ನಿಟ್ಟಿನಲ್ಲಿ ಜೀವನೋತ್ಸಾಹವನ್ನು ಹಸಿರಾಗಿಟ್ಟುಕೊಳ್ಳಬೇಕಿದ್ದರೆ, ಮತ್ತೊಂದು ಸುಲಭೋಪಾಯ ತೋಟಗಾರಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು. ಮನೆಯಲ್ಲಿ ಜಾಗ ಎಷ್ಟೇ ಸಣ್ಣಗಿರಲಿ, ದೊಡ್ಡದಿರಲಿ, ಗಿಡ ಪೊದೆಗಳ ಒಡನಾಟದಲ್ಲಿ ಮನಸ್ಸನ್ನು ತೊಡಗಿಸಿಕೊಂಡರೆ ಅದು ಅತ್ಯಂತ ಉಲ್ಲಾಸಮಯವಾಗಿರುತ್ತದೆ. ಒಂದೊಂದು ಎಲೆ, ಹೂವು, ಕಾಯಿ ಹಣ್ಣು ಚಿಗುರಿದಾಗಲೂ, ಅದು ದೊಡ್ಡದಾಗುವುದನ್ನೂ ಗಮನಿಸುವುದೂ, ಅದರ ಆರೈಕೆ ಮಾಡುವುದೂ ತುಂಬಾ ಇಷ್ಟದ ಕೆಲಸವಾಗಿಬಿಡುತ್ತದೆ.
ನಾನು ಈ ಹಿಂದೆಯೇ ಬರೆದ ಲೇಖನವೊಂದರಲ್ಲಿ ಹೇಳಿದಂತೆ ನಮ್ಮ ಎದುರು ಮನೆಯ ಎಪ್ಪತ್ತೆಂಟು ವರ್ಷದ ಅಜ್ಜಿಯೊಬ್ಬರು ದಿನಾ ವಾಕಿಂಗ್ ಹೋಗುತ್ತರೆ. ಅಲ್ಲಿರುವ ಗುಲಗಂಜಿ ಮರವೊಂದರ ಕೆಳಗೆ ಬಿದ್ದಿರಬಹುದಾದ ಗುಲಗಂಜಿಗಳನ್ನು ಹೆಕ್ಕಿ ಹೆಕ್ಕಿ ತೆಗೆದುಕೊಂಡು ಬರುತ್ತಾರೆ. ಒಂದು ಡಬ್ಬಿಯ ತುಂಬಾ ಕೂಡಿಸಿಟ್ಟಿದ್ದಾರೆ. ಮೊಮ್ಮಕ್ಕಳು ಬಂದಾಗ ಆಡಲು ಬೇಕಾಗುತ್ತದೆ ಎನ್ನುತ್ತಾರೆ. ವರುಷಕ್ಕೋ ಎರಡು ವರುಷಕ್ಕೋ ಒಮ್ಮೆ ನಾಲ್ಕರು ದಿನ ಬಂದು ಹೋಗುವ ಮೊಮ್ಮಕ್ಕಳಿಗಾಗಿ, ಅವರುಗಳು ಆಡುತ್ತಾರೋ ಬಿಡುತ್ತಾರೋ, ಅಜ್ಜಿಯ ಗುಲಗಂಜಿ ಸಂಗ್ರಹಿಸುವ ಉತ್ಸಾಹವಂತೂ ಬತ್ತದು.
ನಮ್ಮ ವಯಸ್ಸಾದ ಸೋದರತ್ತೆಯವರೊಬ್ಬರಿದ್ದರು. ಆರ್ಥರೈಟೀಸ್ ವ್ಯಾಧಿಯಿಂದ ತುಂಬಾ ಬಳಲುತ್ತಿದ್ದರು. ವಿಪರೀತ ಕಾಲುಗಳ ನೋವನ್ನು ಅನುಭವಿಸುತ್ತಿದ್ದರು. ಆದರೆ ಅವರ ಜೀವನೋತ್ಸಾಹಕ್ಕೇನೂ ಕೊರತೆಯಿರಲಿಲ್ಲ. ಈ ಮನೆ, ಆ ಮನೆ ಎನ್ನದೆ, ನಮ್ಮಗಳ ಯಾರ ಮನೆಗೆ ಬಂದರೂ ಕುಳಿತಲ್ಲೇ ಹಣ್ಣು ತರಕಾರಿಗಳನ್ನು ಹೆಚ್ಚಿಕೊಡುವುದು, ಧಾನ್ಯಗಳನ್ನು ಹಸನು ಮಾಡಿಕೊಡುವುದು, ತೆಂಗಿನಕಾಯಿ, ಕೊಬ್ಬರಿಗಳನ್ನು ತುರಿದು ಕೊಡುವುದೂ, ಒಗೆದಿರುವ ಬಟ್ಟೆಗಳನ್ನು ಮಡಿಸಿಕೊಡುವುದು, ಹೀಗೆ ಎಷ್ಟು ಸಹಾಯ ಮಾಡುತ್ತಿರುತ್ತಿದ್ದರೆಂದರೆ ನಮಗ್ಯಾರಿಗೂ ಅವರು ಬಂದರೆ, ಆರೋಗ್ಯ ಸರಿಯಿಲ್ಲದವರು ಬರುತ್ತಿದ್ದಾರೆ, ಅವರ ಕಾಳಜಿ ವಹಿಸಬೇಕು ಎನ್ನಿಸುತ್ತಲೇ ಇರಲಿಲ್ಲ. ಮಿಗಿಲಾಗಿ ನಮಗೇ ಕೆಲಸಗಳು ಹಗುರಾಗಿಬಿಡುತ್ತಿದ್ದವು. ಅವರು ತಯಾರಿಸಿ ಕೊಟ್ಟಿದ್ದನ್ನು ಒಲೆಯ ಮೇಲಿರುವ ಪಾತ್ರೆಗೆ ಕೊಂಡೊಯ್ದು ಹಾಕುವುದಷ್ಟೇ ನಮ್ಮ ಕೆಲಸವಾಗುತಿತ್ತು. ಬೇಗ ಕೆಲಸಗಳನ್ನು ಮುಗಿಸಿ ಅವರ ಅನುಭವದ ಕಥಾನಕಗಳನ್ನು ಕೇಳಲು ಅವರ ಮುಂದೆ ಕುಳಿತುಕೊಳ್ಳುತ್ತಿದ್ದೆವು. ಅವರು ಪರಂಗಿ, ಸೇಬು, ಮಾವು ಮುಂತಾದ ಹಣ್ಣುಗಳ ಸಿಪ್ಪೆಯನ್ನು ಮಧ್ಯದಲ್ಲಿ ಎಲ್ಲಿಯೂ ತುಂಡಾಗದಂತೆ ಉದ್ದಕ್ಕೆ ಒಂದೇ ಸಮನೆ ಬರುವಂತೆ ತೆಗೆಯುತ್ತಿದ್ದರು. ಅದೂ ಒಂದು ಕೌಶಲ್ಯವಲ್ಲವೇ?
ನಮ್ಮ ತಂದೆ ತಾಯಿಯವರುಗಳೂ ಅಷ್ಟೇ, ಎಂಬತ್ತೈದು, ಎಂಭತ್ತೆಂಟರ ಹರಯದಲ್ಲಿಯೂ ರಾಜಕಾರಣ, ಕ್ರೀಡೆ ಮುಂತಾದವುಗಳಲ್ಲಿ ಆಸಕ್ತಿಯನ್ನು ಉಳಿಸಿಕೊಂಡಿದ್ದರು. ವಯೋ ಸಹಜವಾಗಿ ನಿದ್ರೆಗೆ ಜಾರಿದ್ದರೂ ಬೆಳಿಗ್ಗೆ ಎದ್ದ ತಕ್ಷಣ ಹಿಂದಿನ ದಿನದ ಆಟದಲ್ಲಿ ಯಾರು ಗೆದ್ದರು, ಯಾರು ಸೋತರು, ಯಾರು ಎಷ್ಟು ರನ್ ಹೊಡೆದರು? ಹಾಗೆಯೇ ಚುನಾವಣೆಗಳು ನಡೆಯುವ ಸಮಯದಲ್ಲೂ ಸಹ ಎಲ್ಲ ವಿಚಾರಗಳನ್ನು ತಿಳಿಯುವ ಆಸಕ್ತಿ ಉಳಿಸಿಕೊಂಡಿದ್ದರು. ಪುರಾಣ ವಿಷಯಗಳನ್ನು ತೆಗೆದುಕೊಂಡು ಅವರು ಮಾಡಿದ್ದು ಸರಿ, ಇವರು ಮಾಡಿದ್ದು ತಪ್ಪು, ಅವರು ಹಾಗೇಕೆ ಮಾಡಿದರು, ಇವರು ಹೀಗೇಕೆ ಪ್ರತಿಕ್ರಿಯಿಸಿದರು ಎಂದು ಚರ್ಚೆ ಮಾಡಿಕೊಳ್ಳುತ್ತಿದ್ದರು.
ಹೀಗೆ ಜೀವನದ ಸಂಧ್ಯಾಕಾಲದಲ್ಲಿಯೂ ಜೀವನೋತ್ಸಾಹ ಉಳಿಸಿಕೊಂಡು, ಕೇಳುವವರಿದ್ದಾಗ ಮಾತ್ರ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿರುವಾಗ, ವೃದ್ಧಾಪ್ಯವೂ ಎಷ್ಟು ಚೆನ್ನ ಅನ್ನಿಸುತ್ತದಲ್ಲವೇ?
ಕಿರಿಯರಾರಿಗೂ ಹಿರಿಯರ ಮಾತುಗಳನ್ನು ಕೇಳುವ ವ್ಯವಧಾನವಿಲ್ಲದಿದ್ದರೆ, ತಮ್ಮದೇ ವಯೋಮಾನದವರೊಂದಿಗೆ, ಸಮಾನಮನಸ್ಕರೊಂದಿಗೆ ಸೇರಿ ಜೀವನದಲ್ಲಿ ಉತ್ಸಾಹವು ಬತ್ತದಂತೆ ನೋಡಿಕೊಂಡರೆ ಬದುಕು ಸಹ್ಯವಾಗುತ್ತದೆ.
ಕೆಲವರಂತೂ ಒಂದು ಸಣ್ಣ ಆಪರೇಷನ್ ಆಗಿಬಿಟ್ಟರೆ ಅಥವಾ ಸಣ್ಣ ಪುಟ್ಟ ನೋವುಗಳನ್ನೇ ದೊಡ್ಡದು ಮಾಡಿ ತಾವೂ ಭಯಗೊಂಡು ಸುತ್ತಮುತ್ತಲಿರುವವರನ್ನು ಹೆದರಿಸುತ್ತಿರುತ್ತಾರೆ. ಇಂತಹವರು ಕೆಲವಾರು ದಿನಗಳಲ್ಲೆ ಒಂಟಿಯಾಗಿ ಬಿಡುತ್ತಾರೆ.
ನಮ್ಮ ಹಿರಿಯ ಕವಿಯೊಬ್ಬರು ಆಸ್ಪತ್ರೆಯಲ್ಲಿ ತಮ್ಮ ಕೊನೆಯ ದಿನಗಳಲ್ಲೂ ದಿನಾ ಬೆಳಗ್ಗೆ ಎದ್ದ ಕೂಡಲೇ ಪ್ರಾತಃವಿಧಿಗಳೊಂದಿಗೆ ಶೇವ್ ಮಾಡಿಸಿಕೊಂಡು ಗರಿಗರಿಯಾದ ಬಟ್ಟೆಗಳನ್ನು ಧರಿಸಿ ಶಿಸ್ತಿನ ಸಿಪಾಯಿಯಂತೆ ಡಾಕ್ಟರ್ ಬರುವ ವೇಳೆಗೆ ಕುಳಿತಿರುತ್ತಿದ್ದರಂತೆ. ಕೇಳಿದರೆ, – ಹೌದು ನನ್ನನ್ನು ನೋಡಲು ಬರುವರ್ಯಾರಿಗೂ ನಕಾರಾತ್ಮಕ ಭಾವಗಳು ತಟ್ಟಬಾರದು – ಎನ್ನುತ್ತಿದ್ದರಂತೆ.
ಇದಲ್ಲವೇ ಜೀವನೋತ್ಸಾಹ ಎಂದರೆ!
ಹೀಗೆ ಬರೆಯುತ್ತಾ ಹೋದರೆ, ಜೀವನೋತ್ಸಾಹ ಉಳ್ಳವರ ಕುರಿತಾಗಿ, ಅದಿಲ್ಲದವರ ಕುರಿತಾಗು ದೊಡ್ಡದೊಂದು ಪುಸ್ತಕವನ್ನೇ ಬರೆಯಬಹುದು, ಆದರೆ ʼಆಚಾರ ಹೇಳೋಕೆ, ಬದನೇಕಾಯಿ ತಿನ್ನೋಕೆʼ ಎಂದಾಗಬಾರದಲ್ಲವೇ? ನಾನೂ ಉತ್ಸಾಹಭರಿತಳಾಗಿ ಏನಾದರೂ ಆಸಕ್ತಿದಾಯಕವಾದ ಕೆಲಸ ಮಾಡಲು ತೆರಳುತ್ತಿದ್ದೇನೆ, ಇನ್ನು ನೀವು?

–ಪದ್ಮಾ ಆನಂದ್, ಮೈಸೂರು


