ಪರಾಗ

ಪ್ರಾರಬ್ಧ

Share Button

ರೆಸ್ಟಾರಂಟ್‌ನಲ್ಲಿ ಕುಳಿತಿದ್ದ ವಯೋವೃದ್ಧ “ಮೇಹರ್ ಬಾಬಾ”, ಸ್ವಲ್ಪ ದೂರದಲ್ಲಿ ಕುಳಿತಿದ್ದ “ಆಶ್ಲೇಷ” ಎಂಬ ಯುವತಿಯ ಕಡೆ ಯಾದೃಚ್ಛಿಕವಾಗಿ ನೋಡಿದರು. ಅವಳನ್ನು ನೋಡುತ್ತಿದ್ದಂತೆಯೇ ಏನೋ ಕಾರಣಕ್ಕೋ ಅವರ ಮನಸ್ಸು ನೋವಿನಿಂದ ಮಿಡಿಯಿತು. ಆ ಇಡೀ ರೆಸ್ಟಾರಂಟ್‌ಗೆ ಅವರು ಇಬ್ಬರೇ ಗ್ರಾಹಕರಾಗಿದ್ದರು. ಇನ್ನೂ ಸ್ವಲ್ಪ ಹೊತ್ತಿನಲ್ಲಿ ಅಲ್ಲಿ ಒಂದು ಅನಿರೀಕ್ಷಿತ ದುರ್ಘಟನೆ ನಡೆಯಲಿದೆಯೆಂದು ಯಾರೂ ಊಹಿಸಲಿಲ್ಲ!

ಸ್ವಲ್ಪ ಹೊತ್ತಿನಲ್ಲಿ ರೆಸ್ಟೋರೆಂಟ್ ಮುಂದೆ ಒಂದು ದುಬಾರಿ ಕಾರು ಬಂದು ನಿಂತಿತು. ಆ ಕಾರನ್ನು ರೆಸ್ಟೋರೆಂಟ್ ಬಾಗಿಲಿನ ಹತ್ತಿರವೇ ಪಾರ್ಕ್ ಮಾಡಲು ಯತ್ನಿಸಿದಾಗ, ಸೆಕ್ಯೂರಿಟಿ ಗಾರ್ಡ್ ವಿರೋಧ ವ್ಯಕ್ತಪಡಿಸಿದ. ಕಾರಿನಿಂದ ಇಳಿದ ಆ ಸುಂದರ ಯುವಕ… ಅವನೊಂದಿಗೆ ಏನೋ ಮಾತನಾಡಿ ಶೇಕ್ ಹ್ಯಾಂಡ್ ಕೊಡುತ್ತಿದ್ದಂತೆ, ಆ ಗಾರ್ಡ್ ಅವನಿಗೆ ಸಲಾಮ್ ಹೊಡೆದು ಅಲ್ಲಿಂದ ಹೊರಟುಹೋದನು. ಇದನ್ನೆಲ್ಲಾ ನೋಡುತ್ತಿದ್ದ ಆಶ್ಲೇಷ ಮೆಲ್ಲಗೆ ನಕ್ಕು, “ಅಭಿ ಯಾರನ್ನಾದರೂ ಸುಲಭವಾಗಿ ಮರುಳಾಗಿಸುತ್ತಾನೆ” ಎಂದುಕೊಂಡಳು.

ಅಭಿ ಆಶ್ಲೇಷ ಬಳಿ ಬಂದು ಕುಳಿತುಕೊಳ್ಳುತ್ತಾ, “ಸಾರಿ, ಲೇಟ್ ಆಯಿತು” ಎಂದನು.

“ನೋ ಇಷ್ಯು. ನಾನು ಎಷ್ಟು ಸಲ ಲೇಟ್ ಮಾಡಿಲ್ಲ?” ಎಂದು ನಗುತ್ತಾ ಉತ್ತರಿಸಿದಳು.

ಅವನನ್ನು ನೋಡಿದ ಸಪ್ಲೈಯರ್ ಟೇಬಲ್ ಬಳಿ ಬಂದು ಆರ್ಡರ್ ಕೇಳಿದ.


“ಹಾಯ್ ಜೋಸೆಫ್!” ಎಂದು ಕರೆದ ಅಭಿ, “ಎರಡು ಕೋಲ್ಡ್ ಕಾಫಿ. ಅಷ್ಟೇ ತಾನೇ?” ಎಂದು ಆಶ್ಲೇಷ ಕಡೆ ನೋಡಿದ. ಅವಳು ನಗುತ್ತಾ ತಲೆಯಾಡಿಸಿದಳು. ಜೋಸೆಫ್ ಆರ್ಡರ್ ನೋಟ್ ಮಾಡಿಕೊಂಡು ಹೊರಟನು.

ಸ್ವಲ್ಪ ಸಮಯದ ನಂತರ “ವಾಶ್‌ರೂಮ್‌ಗೆ ಹೋಗಿ ಬರುತ್ತೇನೆ” ಎಂದು ಅಭಿ ಎದ್ದನು. ಅವನು ತಂದಿದ್ದ ಸುಂದರವಾದ ಬೊಕೆ ಹೂವುಗಳ ಸುವಾಸನೆಯನ್ನು ಆಶ್ಲೇಷ ಆಘ್ರಾಣಿಸುತ್ತಾ ಕುಳಿತಿದ್ದಳು.

ಹಠಾತ್‌ವಾಗಿ ಮೇಹರ್ ಬಾಬಾ ಓಡಿಬಂದು “ತಡಿ ಮಗಳೇ, ಆ ಕಾಫಿ ಕುಡಿಯಬೇಡ” ಎಂದು ಕೂಗುತ್ತಾ ಆಶ್ಲೇಷ ಕೈಯಲ್ಲಿದ್ದ ಕಾಫಿ ಮಗ್ಗನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದರು .

ಆಶ್ಲೇಷ ಮತ್ತು ಅಭಿ ಇಬ್ಬರೂ ಬೆಚ್ಚಿಬಿದ್ದರು.  ಅವರು ಏಕೆ ಹಾಗೆ ವರ್ತಿಸುತ್ತಿದ್ದಾರೆಂದು ಅವರಿಬ್ಬರಿಗೂ ಅರ್ಥವಾಗಲಿಲ್ಲ. ಸರ್ವ್ ಮಾಡಲು ಬಂದ ಜೋಸೆಫ್ ಗಾಬರಿಯಿಂದ ನೋಡತೊಡಗಿದನು.

“ಯಾರೋ ನೀನು? ಯಾಕೆ ಹೀಗೆ ಅಡ್ಡಬರುತ್ತಿದ್ದೀಯಾ?” ಎಂದು ಮೆಹರ್ ಬಾಬಾನ ಕಾಲರ್ ಹಿಡಿದು ಅಭಿ ಕೋಪದಿಂದ ಕೇಳಿದ.

ಆದರೂ ಮೇಹರ್ ಬಾಬಾ ತಮ್ಮ ಹಿಡಿತ ಬಿಡಲಿಲ್ಲ. “ನಿನ್ನ ತಂದೆಯಂಥವನಾಗಿ ಹೇಳುತ್ತೇನೆ. ನನ್ನ ಮಾತು ಕೇಳು. ಅದರಲ್ಲಿ ಏನೋ ಬೆರೆಸಿದ್ದಾರೆ. ಕುಡಿಯಬೇಡ” ಎಂದು ಬೇಡಿಕೊಂಡರು.

“ನಿಮಗೆ ಬುದ್ಧಿ ಸರಿಯಿಲ್ಲ ಅನ್ನಿಸುತ್ತಿದೆ. ಮೊದಲು ಇಲ್ಲಿಂದ ಹೋಗಿ!” ಎಂದು ಆಶ್ಲೇಷ ಗಟ್ಟಿಯಾಗಿ ಹೇಳಿದಳು. ಒದ್ದಾಟದಲ್ಲಿ ಕಾಫಿ ಸ್ವಲ್ಪ ಅವಳ ಬಟ್ಟೆ ಮೇಲೆ ಬಿದ್ದಿತು. ಅಭಿ ಕೋಪದಿಂದ “ಬಾಸ್ಟರ್ಡ್… ನಿನಗೆ ಏನು ಮಾಡುತ್ತೇನೋ ನೋಡು” ಎಂದು ಗಟ್ಟಿಯಾಗಿ ಕೂಗುತ್ತಾ, ಮೆಹರ್ ಬಾಬಾನನ್ನು ಹೊಡೆಯಲು ಕೈ ಎತ್ತಿದ.

ಆ ಗಲಾಟೆಗೆ  ಸ್ಟಾಫ್ ಮತ್ತು ಮ್ಯಾನೇಜರ್ ಓಡಿಬಂದರು. ಪರಿಸ್ಥಿತಿ ಕೈಮೀರಲಿದೆ ಎಂದು ಅರಿತ ಮೇಹರ್ ಬಾಬಾ, ಅಭಿಯನ್ನು ಬಲವಾಗಿ ಹಿಂದಕ್ಕೆ ತಳ್ಳಿ, ಆಶ್ಲೇಷ ಕೈಯಲ್ಲಿದ್ದ ಮಗ್ ಕಿತ್ತುಕೊಂಡು, ಕಾಫಿಯನ್ನೆಲ್ಲಾ ಒಂದೇ ಉಸಿರಿನಲ್ಲಿ ಕುಡಿದುಬಿಟ್ಟರು.  ಎಲ್ಲರೂ ಬೆರಗಾದರು.

“ಇವನಾರೋ ಹುಚ್ಚನಂತೆ ಇದ್ದಾನೆ. ಜೋಸೆಫ್, ನೀನೂ ಒಂದು ಕೈ ಕೊಡು, ಇವನಿಗೆ ಇಲ್ಲೇ ಪಾಠ ಕಲಿಸೋಣ!” ಎಂದು ಮೆಹರ್ ಬಾಬಾನ ಮೇಲೆ ದಾಳಿ ಮಾಡಲು ಮುಂದಾದ ಅಭಿಯ ಕೈಯನ್ನು ಹಿಡಿದು ತಡೆದಳು ಆಶ್ಲೇಷ.

“ಬೇಡ. ಅವರನ್ನು ಏನೂ ಮಾಡಬೇಡಿ. ಅವರು ಹಾಗೆ ವರ್ತಿಸಲು ಏನೋ ಬಲವಾದ ಕಾರಣ ಇದ್ದೇ ಇರುತ್ತದೆ. ಸ್ವಲ್ಪ ಹೊತ್ತು ಅವರನ್ನು ಹಾಗೆಯೇ ಬಿಟ್ಟುಬಿಡೋಣ. ಸ್ವಲ್ಪ ಸಮಾಧಾನ ಆದಮೇಲೆ ನೋಡೋಣ” ಎಂದು ಸಮಾಧಾನಪಡಿಸಿದಳು.

ಅಭಿ ಅದಕ್ಕೆ ಒಪ್ಪದೆ, “ನಿನಗೆ ಏನೂ ಗೊತ್ತಿಲ್ಲ. ನನಗೆ ಅಡ್ಡ ಬರಬೇಡ…” ಎಂದು ಏನೋ ಹೇಳಲು ಹೊರಟನು.

“ಬೇಡ. ಅವರನ್ನು ಏನೂ ಮಾಡಬೇಡಿ. ಕೂಲ್ ಆಗಿ ಕೂತ್ಕೋ” ಎಂದು ಗಂಭೀರವಾಗಿ ನೋಡುವಷ್ಟರಲ್ಲಿ, ಅಭಿ ಏನೂ ಮಾಡಲಾಗದೆ ಭುಜ ಹಾರಿಸಿ ಕುಳಿತುಕೊಂಡನು.

ಕಾಫಿ ಕುಡಿದ ಮೆಹರ್ ಬಾಬಾ ಸ್ವಲ್ಪ ಹೊತ್ತು ಹಾಗೆಯೇ ನಿಂತು, ನಂತರ ಅಲ್ಲಿನ ಕುರ್ಚಿಯ ಮೇಲೆ ಕುಸಿದು ಬಿದ್ದು, ನಿಧಾನವಾಗಿ ಅಚೇತನ ಸ್ಥಿತಿಗೆ ಜಾರಿದರು. ಅದರಿಂದ ಆಶ್ಲೇಷಗೆ ವಿಷಯವೆಲ್ಲಾ ಅರ್ಥವಾಯಿತು. ಜೋಸೆಫ್ ಕಡೆ ಕೋಪದಿಂದ ನೋಡಿದಳು. ಅಷ್ಟೊತ್ತಿಗಾಗಲೇ ಜೋಸೆಫ್‌ಗೆ ಬೆವರು ಸುರಿಯುತ್ತಿತ್ತು. ಭಯದಿಂದ ನಡುಗುತ್ತಿದ್ದನು.

ಮ್ಯಾನೇಜರ್ ಅವನ ಕಾಲರ್ ಹಿಡಿದು ಗದರಿಸಿದಾಗ, ಜೋಸೆಫ್ ಅಭಿ ಕಡೆ ನೋಡಿದ. ಅಭಿ ನಟಿಸುತ್ತಿದ್ದ.

ಮ್ಯಾನೇಜರ್ ತಕ್ಷಣ ಜೋಸೆಫ್ ಕಾಲರ್ ಹಿಡಿದು, “ಏನೋ ರಾಸ್ಕಲ್… ಆ ಕಾಫಿಯಲ್ಲಿ ಏನು ಬೆರೆಸಿದ್ದೀಯಾ? ಯಾರು ಹೇಳಿದ್ದರಿಂದ ಈ ಕೆಲಸ ಮಾಡಿದೆ?” ಎಂದು ಗದರಿಸುತ್ತಿದ್ದಂತೆ, ಅಭಿ ಕಡೆ ನೋಡಿದನು ಜೋಸೆಫ್. ಅಭಿ ಏನೂ ತಿಳಿಯದಂತೆ ನಟಿಸುತ್ತಿರುವುದನ್ನು ಆಶ್ಲೇಷ ಗಮನಿಸಿದಳು.

“ನಿನ್ನಿಂದ ನಮ್ಮ ರೆಸ್ಟೋರೆಂಟ್‌ಗೆ ಎಷ್ಟು ಕೆಟ್ಟ ಹೆಸರು? ನಿನ್ನನ್ನು ಹೀಗೆ ಬಿಟ್ಟರೆ ಆಗಲ್ಲ. ಪೊಲೀಸರಿಗೆ ಒಪ್ಪಿಸಬೇಕು” ಎಂದು ಮ್ಯಾನೇಜರ್ ಎನ್ನುತ್ತಿದ್ದರೆ, ಅಭಿಯ ಮುಖದಲ್ಲಿ ಕಂಡ ಆತಂಕವನ್ನೂ ಗಮನಿಸಿದಳು ಆಶ್ಲೇಷ.

“ಬೇಡ್ರಿ. ಪೊಲೀಸರಿಗೆ ರಿಪೋರ್ಟ್ ಮಾಡಬೇಡಿ. ಪೊಲೀಸ್ ಸ್ಟೇಷನ್ ಸುತ್ತ ತಿರುಗುವುದು, ಮೀಡಿಯಾ ದೃಷ್ಟಿಯಲ್ಲಿ ಬೀಳುವುದು ನನಗೆ ಇಷ್ಟವಿಲ್ಲ” ಎಂದು ಆಶ್ಲೇಷ ದೃಢವಾಗಿ ಹೇಳುವಷ್ಟರಲ್ಲಿ, ಮ್ಯಾನೇಜರ್ ಸುಮ್ಮನಾದರು.

“ಈ ದೊಡ್ಡವರು ಪ್ರಜ್ಞೆ ಬಂದು ಮಾತನಾಡುವವರೆಗೆ, ಆ ನೀಚನನ್ನು ಬೇರೆ ಯಾವುದಾದರೂ ರೂಮಿನಲ್ಲಿ ಬಂಧಿಸಿ ಇಡಿ. ಏನಂತೀರಾ ಅಭಿ?” ಎಂದು ಅವನ ಕಣ್ಣುಗಳನ್ನೇ ದಿಟ್ಟಿಸಿ ನೋಡಿದಳು.

ಅಭಿ ಅವಳ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡಲಾಗುತ್ತಿರಲಿಲ್ಲ. ಅವನ ಮುಖದಲ್ಲಿ ಗಾಬರಿ, ಆತಂಕ ಸ್ಪಷ್ಟವಾಗಿ ಕಾಣುತ್ತಿತ್ತು.

“ಅದೇ ಕರೆಕ್ಟ್. ಐ ಆಮ್ ಸಾರಿ ಆಶ್ಲೇಷಾ. ನಾನು ಹೋಗಬೇಕು. ಮಿರಾಕಲ್ ಹಾಸ್ಪಿಟಲ್ ಎಮ್‌ಐ ಜೊತೆ ಅಪಾಯಿಂಟ್‌ಮೆಂಟ್ ಇದೆ” ಎಂದು ಅವಳ ಮಾತಿಗಾಗಿ ಕಾಯದೆ ಎದ್ದು ನಿಂತನು. ಆಶ್ಲೇಷ ಅವನನ್ನು ತಡೆಯುವ ಪ್ರಯತ್ನ ಮಾಡಲಿಲ್ಲ. ಅವನನ್ನೇ ಅನುಮಾನದಿಂದ ನೋಡುತ್ತಾ ಉಳಿದುಕೊಂಡಳು.

ಒಂದು ಗಂಟೆಯ ನಂತರ ಮೆಹರ್ ಬಾಬಾ ಚೇತನಕ್ಕೆ ಬಂದರು. ಮಂಪರಿನಲ್ಲಿ ಕಣ್ಣು ತೆರೆದ ಮೆಹರ್ ಬಾಬಾ ಭುಜದ ಮೇಲೆ ಕೈ ಹಾಕಿ, ಪ್ರೀತಿಯಿಂದ ಸವರಿ, “ಅಂಕಲ್! ಈಗ ಹೇಗಿದೆ?” ಎಂದು ಕಾಳಜಿಯಿಂದ ಕೇಳಿದಳು.

ನೀರಸವಾಗಿ ನಗುತ್ತಾ, “ನನಗೆ ಚೆನ್ನಾಗಿದೆ ಅಮ್ಮ! ಅಯ್ಯೋ.. ನೀನು ಸುರಕ್ಷಿತವಾಗಿದ್ದೀಯಾ ತಾನೇ?” ಎಂದರು ತೃಪ್ತಿಯಿಂದ ಅವಳನ್ನೇ ನೋಡುತ್ತಾ.

“ಕಾಫಿಯಲ್ಲಿ ಏನು ಬೆರೆಸಿದ್ದಾರೆ ಎಂದು ತಿಳಿಯದೆ ಹೇಗೆ ಕುಡಿದ್ರಿ ಅಂಕಲ್? ಅದರಲ್ಲಿ ವಿಷ ಇದ್ದರೆ?” ಎಂದು ಕೇಳುತ್ತಿರುವ ಅವಳ ಕಣ್ಣುಗಳಲ್ಲಿ ಭಯ ಸ್ಪಷ್ಟವಾಗಿ ಕಾಣುತ್ತಿತ್ತು.

“ಆ ಆತುರದಲ್ಲಿ ಅದ್ಯಾವುದನ್ನೂ ಯೋಚಿಸಲಿಲ್ಲ. ನನ್ನ ಸ್ವಂತ ಮಗಳೇ ಅಪಾಯದಲ್ಲಿರುವಂತೆ ಅನಿಸಿತು” ಎಂದರು. ಆತನ ಬಗ್ಗೆ ಆಶ್ಲೇಷಗೆ ಅಭಿಮಾನ ಉಕ್ಕಿ ಬಂತು.

“ಸ್ವಲ್ಪ ಮುಖ ತೊಳೆದುಕೊಂಡು ಬನ್ನಿ. ಬಿಸಿ ಕಾಫಿ ಕುಡಿದ ನಂತರ ಎಲ್ಲಾ ವಿಷಯಗಳು ಹೇಳುತ್ತೀರಿ ತಾನೇ” ಎಂದಳು.

 ಅದಕ್ಕೆ ತಲೆಯಾಡಿಸಿ ಮೆಹರ್ ಬಾಬಾ ಎದ್ದು ಹೋದರು.

“ಈಗ ಹೇಳಿ ಅಂಕಲ್” ಅವಳು ಕಾಫಿ ನೀಡುತ್ತಾ ಹೇಳಿದಳು.

ಕಾಫಿ ಕುಡಿಯುವುದು ಮುಗಿದ ನಂತರ ಅವರು ಹೇಳಲು ಆರಂಭಿಸಿದರು.

“ಅಭಿಗೆ ಅಡ್ಡಿಯಾದ ಸೆಕ್ಯುರಿಟಿ ಗಾರ್ಡ್‌ಗೆ ಶೇಕ್ ಹ್ಯಾಂಡ್ ಕೊಡುತ್ತಿರುವಾಗ, ಗುಟ್ಟಾಗಿ ಐನೂರು ರೂಪಾಯಿಯ ನೋಟನ್ನು ಅವನ ಕೈಗೆ ಇಡುತ್ತಿರುವುದನ್ನು ನಾನು ಗಮನಿಸಿದೆ. ಕೇವಲ ಇಪ್ಪತ್ತು ಅಡಿ ದೂರದಲ್ಲಿದ್ದ ಪಾರ್ಕಿಂಗ್ ಪ್ರದೇಶದಲ್ಲಿ ಕಾರು ನಿಲ್ಲಿಸಿ ಬರುವುದು ಯಾರಿಗಾದರೂ ಕಷ್ಟವೇನಲ್ಲ. ಆದರೆ ಲಂಚ ಕೊಟ್ಟು ತನ್ನ ಕಾರನ್ನು ರೆಸ್ಟಾರಂಟ್‌ಗೆ ತುಂಬ ಹತ್ತಿರದಲ್ಲೇ ನಿಲ್ಲಿಸಲು ಅಭಿ ಯತ್ನಿಸಿದ್ದರಿಂದ ನನಗೆ ಅನುಮಾನ ಬಂತು. ಈಗ ಅದೇಕೆ ಎಂದು ಅರ್ಥವಾಗುತ್ತಿದೆ. ನೀನು ಕಾಫಿ ಕುಡಿದು ಪ್ರಜ್ಞೆ ತಪ್ಪಿದ ಮೇಲೆ, ನಿನಗೆ ಹುಷಾರಿಲ್ಲವೆಂದು ಎಲ್ಲರನ್ನೂ ನಂಬಿಸಿ, ನಿನ್ನನ್ನು ಕಾರಿನಲ್ಲಿ ಹತ್ತಿಸಲು ಅನುಕೂಲವಾಗಲೆಂದು ಕಾರನ್ನು ಅಲ್ಲಿ ನಿಲ್ಲಿಸಿದ್ದಾನೆ.

ಸರಿ, ಈಗ ಮುಖ್ಯ ವಿಷಯಕ್ಕೆ ಬರೋಣ. ಯಾವಾಗ ಅವನ ಮೇಲೆ ಅನುಮಾನ ಬಂತೋ, ಅಂದಿನಿಂದ ಅವನ ಮೇಲೆ ಗಮನ ಹರಿಸಿದೆ. ಅಭಿ ವಾಶ್‌ರೂಮ್‌ಗೆ ಹೋದ ತಕ್ಷಣ, ತನ್ನ ಕೆಲಸವನ್ನು ನಿಲ್ಲಿಸಿ ಜೋಸೆಫ್ ಕೂಡ ವಾಶ್‌ರೂಮ್‌ಗೆ ಹೋಗಿ ಎರಡು ನಿಮಿಷಗಳಲ್ಲಿ ಹೊರಬಂದದ್ದು ನನ್ನ ಗಮನಕ್ಕೆ ಬಂತು. ಬಹುಶಃ ಕಾಫಿಯಲ್ಲಿ ಬೆರಸಲು ಯಾವುದೋ ಔಷಧಿಯನ್ನು ಅಭಿ ಅವನಿಗೆ ಕೊಟ್ಟಿರಬೇಕು.

ಆದರೆ ನಾನು ಅವನನ್ನು ಗಮನಿಸುತ್ತಿದ್ದೇನೆ ಎಂಬುದು ಜೋಸೆಫ್‌ಗೆ ಗೊತ್ತಾಯಿತು. ಆದರೂ ಹೊರಗೆ ಬೀಳದಂತೆ ಗಂಭೀರವಾಗಿರಲು ಪ್ರಯತ್ನಿಸಿದ. ಕಾಫಿ ಟ್ರೇ ಹಿಡಿದು ಹೊರಟ ಜೋಸೆಫ್ ನನ್ನ ಟೇಬಲ್ ದಾಟಿ ನಿಮ್ಮ ಟೇಬಲ್ ಕಡೆ ಬರಬೇಕಿತ್ತು. ಅವನು ನನ್ನ ಟೇಬಲ್‌ಗೆ ಹತ್ತಿರ ಬಂದಾಗ ನಾನು, “ಏಯ್ ಮಿಸ್ಟರ್, ಇಲ್ಲಿ ಬನ್ನಿ!” ಎಂದು ಕರೆದಾಗ ಅವನು ತುಂಬ ಗಾಬರಿಗೊಂಡ.

ತಡವರಿಸುತ್ತಾ, “ಸರ್! ನಿಮ್ಮ ಟೇಬಲ್ ಬಳಿ ಸರ್ವ್ ಮಾಡಲು ಬೇರೆ ಅವರು ಬರುತ್ತಾರೆ” ಎಂದು ಆತುರವಾಗಿ ಮುಂದೆ ಹೋಗಿದ್ದರಿಂದ, ನನ್ನ ಅನುಮಾನ ದೃಢಪಟ್ಟಿತು. ನಿನಗೆ ಎಷ್ಟೇ ಹೇಳಿದರೂ ಕೇಳದಿದ್ದರಿಂದ, ನಾನೇ ನಿನ್ನ ಕಾಫಿ ಕುಡಿಯಬೇಕಾಯಿತು.

ನೀನು ಏನೂ ಚಿಂತಿಸಬೇಡ. ಆ ಕಾಫಿಯ ಬಿಲ್ ನಾನು ಕೊಡುತ್ತೇನೆ!” ಎಂದು ಜೋರಾಗಿ ನಗುತ್ತಿದ್ದಂತೆ, ಅಲ್ಲಿಯವರೆಗೂ ಬಹಳ ಗಂಭೀರವಾಗಿದ್ದ ವಾತಾವರಣವು ಒಂದೇ ಕ್ಷಣದಲ್ಲಿ ಹಗುರವಾಯಿತು. ಆ ಜೋಕ್‌ಗೆ ಎಲ್ಲರೂ ಹಾಯಾಗಿ ನಕ್ಕರು.

“ಎಷ್ಟೋ ದೊಡ್ಡ ಅಪಾಯದಿಂದ ನನ್ನನ್ನು ಉಳಿಸಿದ್ದೀರಿ. ಆ ನೀಚ ನನಗೆ ಮದ್ದು ಕೊಟ್ಟು, ಏನು ಮಾಡುತ್ತಿದ್ದನೋ ಎಂದು ನೆನಪಿಸಿಕೊಂಡರೆ, ಹೃದಯ ದಡದಡ ಹೊಡೆಯುತ್ತದೆ. ಎಷ್ಟು ಜನ್ಮಗಳನ್ನು ತೆಗೆದುಕೊಂಡರೂ ನಿಮ್ಮ ಋಣ ತೀರಿಸಲಾರೆ,” ಎಂದು ಹೇಳುತ್ತಿದ್ದಾಗ ಅವಳ ಕಣ್ಣಿನಲ್ಲಿ ನೀರು ಜಿನುಗಿತು.

 ” ನೀನು ಚೆನ್ನಾಗಿ ಓದಿಕೊಂಡವಳಂತೆ ಕಾಣುತ್ತೀಯ. ಅವನ ಬಲೆಯಲ್ಲಿ ಹೇಗೆ ಸಿಕ್ಕಿಬಿದ್ದೆ? ಅದಕ್ಕಿಂತ ಒಳ್ಳೆಯವರು ಯಾರೂ ನಿನಗೆ ಸಿಗಲಿಲ್ಲವೇ?” ಎಂದು ಕೇಳಿದರು.

ಚಿಕ್ಕದಾಗಿ ನಗುತ್ತಾ, “ನೀವು ಹಿರಿಯರು ಹೇಳುತ್ತಿರುತ್ತಾರೆ ಅಲ್ಲವೇ — ‘ಪ್ರಾರಬ್ಧ’ ಎಂದು. ನನ್ನ ವಿಷಯದಲ್ಲೂ ಅದೇ ನಡೆಯಿತು. ಎರಡು ವರ್ಷಗಳ ಹಿಂದೆ ಅಶೋಕ್ ಮೇಲೆ ಪ್ರೀತಿಯಾಯಿತು. ನಾವು ಇಬ್ಬರೂ ಒಂದು ಫ್ಲಾಟ್‌ನಲ್ಲಿ ಒಂದು ವರ್ಷ ಒಟ್ಟಿಗೆ ಇದ್ದೆವು. ‘ಲಿವಿಂಗ್ ಟುಗೆದರ್’ ಅಂತಾರೆ ಅಲ್ವಾ… ಹಾಗೆ,” ಎಂದು ಹೇಳುತ್ತಿದ್ದಾಗ, ಶಾಕ್ ಆದಂತೆ ನೋಡಿದರು.

“ಅಂದರೆ ಸಹಜೀವನ ಎಂದರ್ಥ. ಮದುವೆಯಾಗದೆಯೇ ಸಂಸಾರ ಮಾಡಿದ್ದೀರಾ?” ಎಂದು ವಿಸ್ಮಯದಿಂದ ಕೇಳಿದರು.

“ಅಯ್ಯೋ ಅಂಕಲ್! ಹೀಗೆ ಶಾಕ್ ಆಗ್ತೀರೇನು? ಇವತ್ತಿನ ಕಾಲದಲ್ಲಿ ಇದು ತುಂಬಾ ಕಾಮನ್. ನಿಮ್ಮ ತಲೆಮಾರು ಬೇರೆ, ನಮ್ಮ ತಲೆಮಾರು ಬೇರೆ. ನಿಮ್ಮ ಕಾಲದಲ್ಲಿ ಅಪ್ಪ-ಅಮ್ಮ ಹೇಳಿದ ಮಾತು ಕೇಳಿ, ಇಷ್ಟ ಇದ್ದರೂ ಇಲ್ಲದಿದ್ದರೂ ಮದುವೆಯಾಗಿಬಿಟ್ಟು, ಅರ್ಥವಿಲ್ಲದ ಜೀವನ ನಡೆಸಬೇಕಾಗುತ್ತಿತ್ತು.”

“ಸರಿ. ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು, ಸ್ವಲ್ಪ ಕಾಲ ಇಬ್ಬರೂ ಸೇರಿ ಬದುಕುತ್ತಾರೆ. ನಂತರ ಇಬ್ಬರಿಗೂ ಹೊಂದಿಕೆಯಾಗುವುದಿಲ್ಲ ಎಂದು ತಿಳಿದರೆ, ಆಗ ಏನು ಮಾಡುತ್ತಾರೆ?” ಎಂದು ಕುತೂಹಲದಿಂದ ಕೇಳಿದರು.

“ಏನು ಇದೆ? ಬ್ರೇಕ್‌ಅಪ್. ನಮ್ಮ ವಿಷಯದಲ್ಲೂ ಅದೇ ನಡೆಯಿತು. ಅಶೋಕ್ ಮತ್ತು ನಾನು ಒಂದು ವರ್ಷದ ನಂತರ ಬೇರೆಯಾದೆವು,” ಎಂದು ಅದನ್ನು ತುಂಬಾ ಸಾಮಾನ್ಯ ವಿಷಯದಂತೆ ಹೇಳಿದಳು.

ಮೇಹರ್ ಬಾಬಾ ಅವಳನ್ನು ಅಯೋಮಯವಾಗಿ ನೋಡಿದರು.

“ಅದಾದ ನಂತರ ಇನ್ನೊಂದು ವರ್ಷ ನಾನು ಯಾವುದರ ಬಗ್ಗೆಯೂ ಯೋಚಿಸಲಿಲ್ಲ. ಎರಡು ತಿಂಗಳ ಹಿಂದೆ ಒಬ್ಬ ಸ್ನೇಹಿತರ ಮೂಲಕ ಅಭಿ ಪರಿಚಯವಾದನು. ಲಿವಿಂಗ್ ಟುಗೆದರ್ ಎನ್ನುವ ಕಲ್ಪನೆ ಮೇಲೆ ನಂಬಿಕೆ ಹೋಗಿದ ನಂತರ, ಅವನ ಜೊತೆ ಪ್ರೀತಿಯಲ್ಲೇ ಇದ್ದೆನೇ ಹೊರತು, ಮಿತಿಗಳನ್ನು ಮೀರಿ ಹೋಗಲಿಲ್ಲ. ಸಹಜೀವನ ಮಾಡುತ್ತಾ, ಇಬ್ಬರೂ ಒಟ್ಟಿಗೆ ಬಾಳುವ ಅವಕಾಶವಿಲ್ಲ ಎಂದು ತಿಳಿದುಕೊಂಡಿದ್ದರಿಂದಲೇ, ಈ ನಾಟಕವಾಡಿದ್ದಾನೆ ಎಂದು ಈಗ ಅರ್ಥವಾಗುತ್ತಿದೆ!” ಎಂದು ಹೇಳಿ ಮುಗಿಸಿದಳು.

“ನಮ್ಮ ಕಾಲದಲ್ಲಿ ಹೆಣ್ಣುಮಕ್ಕಳಿಗೆ ಇಷ್ಟು ಸ್ವಾತಂತ್ರ್ಯ ಇರಲಿಲ್ಲ. ಅದರಿಂದ ನಷ್ಟವಾದ ಸಂದರ್ಭಗಳು ಬಹಳ ಅಪರೂಪ. ಆದರೆ ಇಂದಿನ ತಲೆಮಾರಿನ ಯುವಕರು ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಅನುಭವಿಸುತ್ತಿದ್ದಾರೆ. ಇಲ್ಲ… ಇಲ್ಲ… ಅದನ್ನು ದುರುಪಯೋಗ ಮಾಡುತ್ತಿದ್ದಾರೆ. ಅದಕ್ಕೆ ನೀನೇ ಒಂದು ಉದಾಹರಣೆ! ನಮ್ಮ ಭಾರತೀಯ ಸಂಸ್ಕೃತಿ ಅತ್ಯಂತ ಪವಿತ್ರವಾದದ್ದು. ಪಾಶ್ಚಾತ್ಯ ವಿಷ ಸಂಸ್ಕೃತಿಯ ಕಡೆಗೆ ಆಕರ್ಷಿತರಾಗಿ, ತಪ್ಪು ದಾರಿಯಲ್ಲಿ ನಡೆದು, ನಿನ್ನಂತೆಯೇ ಎಷ್ಟೋ ಜನರು ತಮ್ಮ ಜೀವನಗಳನ್ನು ನಾಶ ಮಾಡಿಕೊಳ್ಳುತ್ತಿದ್ದಾರೆ.  ಹಿರಿಯವನಾಗಿ ಒಂದು ಸಲಹೆ ಹೇಳುತ್ತೇನೆ, ಕೇಳು! ನಿಮ್ಮ ತಂದೆಯೊಂದಿಗೆ ಮಾತನಾಡಿ, ಅವರು ನಿಶ್ಚಯಿಸಿದ ಸಂಬಂಧವನ್ನೇ ಮದುವೆಯಾಗು. ಇತ್ತೀಚೆಗೆ ನೀನೇ ಹೇಳಿದೆಯಲ್ಲ — ಎಷ್ಟು ಜನ್ಮವೆತ್ತಿದರೂ ನನ್ನ ಋಣ ತೀರಿಸಲಾರೆ ಎಂದು. ಆ ಋಣವನ್ನು ಈ ಜನ್ಮದಲ್ಲೇ ತೀರಿಸಬಹುದು. ನನ್ನ ಮಾತು ಕೇಳಿ, ನಿಮ್ಮ ಅಪ್ಪ-ಅಮ್ಮ ಹೇಳಿದ ಹುಡುಗನನ್ನು ಮದುವೆಯಾದರೆ ನನ್ನ ಋಣ ತೀರಿಸಿದಂತಾಗುತ್ತದೆ! ಅವಕಾಶ ಕೊಟ್ಟಿದ್ದರಿಂದಲೇ ಸ್ವಲ್ಪ ಹೆಚ್ಚು ಮಾತನಾಡಿದೆ. ಏನೂ ತಪ್ಪಾಗಿ ತೆಗೆದುಕೊಳ್ಳಬೇಡ. ಈಗಾದರೂ ಒಳ್ಳೆಯ ದಾರಿಗೆ ಬಾ, ತಾಯಿ. ನಿನ್ನನ್ನು ಇಷ್ಟೊಂದು ಒತ್ತಾಯಿಸುತ್ತಿರುವುದಕ್ಕೆ ಒಂದು ಬಲವಾದ ಕಾರಣವಿದೆ,” ಎಂದು ಹೇಳುತ್ತಾ ಪರ್ಸ್‌ನೊಳಗಿಂದ ಒಂದು ಫೋಟೋ ತೆಗೆದು ಅವಳಿಗೆ ಕೊಟ್ಟರು.

ಆ ಫೋಟೋದಲ್ಲಿರುವ ಹುಡುಗಿಗೆ ತನ್ನ ಜೊತೆ ತುಂಬಾ ಹೋಲಿಕೆಗಳಿರುವುದನ್ನು ಕಂಡು ಆಶ್ಚರ್ಯದಿಂದ ನೋಡಿದಳು ಆಶ್ಲೇಷ.

“ಮೂರು ವರ್ಷಗಳ ಹಿಂದೆ ಕಾರು ಅಪಘಾತದಲ್ಲಿ ಮೃತಪಟ್ಟ ನನ್ನ ಮಗಳು — ಶ್ರಾವಣಿ,” ಎಂದು ಹೇಳುತ್ತಾ ಕಣ್ಣೀರು ಸುರಿಸುತ್ತಿದ್ದ ಮೇಹರ್ ಬಾಬಾವನ್ನು ನೋಡಿ ಅವಳ ಮನಸ್ಸು ಕಲುಕಿತು. ತಕ್ಷಣವೇ ಒಂದು ನಿರ್ಧಾರಕ್ಕೆ ಬಂದಳು.

“ಖಂಡಿತವಾಗಿ ನೀವು ಹೇಳಿದಂತೆಯೇ ಮಾಡುತ್ತೇನೆ. ನೀವು ನನಗೆ ದೇವರಿಗಿಂತಲೂ ಹೆಚ್ಚಾದವರು. ನನ್ನೊಳಗೆ ನಿಮ್ಮ ಮಗಳನ್ನು ನೋಡುತ್ತಿದ್ದೀರಿ ಎಂದು ನನಗೆ ಅರ್ಥವಾಗಿದೆ. ನಿಮ್ಮ ತೃಪ್ತಿಗಿಂತ ನನಗೆ ಮತ್ತೇನೂ ಮುಖ್ಯವಲ್ಲ,” ಎಂದು ಹೇಳುತ್ತಿದ್ದಂತೆ ಮೇಹರ್ ಬಾಬಾ ಅವರ ಮುಖ ಸಂತೋಷದಿಂದ ಅರಳಿತು.

ತೆಲುಗು ಮೂಲ: ಕೊಯಿಲಾಡ ರಾಮಮೋಹನರಾವು
ಕನ್ನಡ ಅನುವಾದ : ಕೋಡೀಹಳ್ಳಿ ಮುರಳೀ ಮೋಹನ್

10 Comments on “ಪ್ರಾರಬ್ಧ

  1. ಉತ್ತಮ ಸಂದೇಶ ವುಳ್ಳ ಕಥೆ ಮೂಲ ಕತೆ ಗಾರರಿಗೂ ಅನುವಾದಕಾರರಿಗೂ…ಅಭಿನಂದನೆಗಳು

  2. ಪ್ರತಿ ಹಂತದಲ್ಲೂ ಕುತೂಹಲವನ್ನು ಉಳಿಸಿಕೊಂಡು ಹೋಗಿ ಸುಖಾಂತ್ಯದಲ್ಲಿ ಮುಗಿದ ಕಥೆ ವಂದನೆಗಳು

  3. ಮನಸ್ಸನ್ನು ತಟ್ಟುವ ಸುಂದರವಾದ ಕಥೆ. ಆಪ್ಯಾಯಮಾನವಾದ ಅಂತ್ಯ ಸಂತಸ ತಂದಿತು.

  4. ಅನುವಾದಿತ ಕಥೆಯು ಮೂಲ ಕಥೆಗೆ ಎಲ್ಲೂ ಕೊರತೆಯಾಗದಂತೆ ಬಹಳ ಸರಳ ಸುಂದರವಾಗಿ, ಕುತೂಹಲಕಾರಿಯಾಗಿ ಮೂಡಿಬಂದಿದೆ.

Leave a Reply to ಪದ್ಮಾ ಆನಂದ್ Cancel reply

 Click this button or press Ctrl+G to toggle between Kannada and English

Your email address will not be published. Required fields are marked *