ಪ್ರವಾಸ

ಮಿನಿ ಪ್ರವಾಸದ ಸವಿನೆನಪು…

Share Button

ಜೀವನದ ಸಂಧ್ಯಾಕಾಲದಲ್ಲಿ ಏಕತಾನತೆಯಿಂದ ಹೊರಬರಲು ಆತ್ಮೀಯರೊಂದಿಗೆ ಬೆರೆತು ವಿವಿಧ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ಅತ್ಯಂತ ಪ್ರಸ್ತುತವೆನಿಸಿದೆ. ಹಾಗೆಯೇ, ಒಂದು ಪುಟ್ಟ ಪ್ರವಾಸವನ್ನು ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ(ರಿ), ಇದರ ಆಶ್ರಯದಲ್ಲಿ, ಪುತ್ತೂರು ಘಟಕದ ನೇತ್ರತ್ವದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು. ಕ್ಷೇತ್ರಗಳ ದರ್ಶನವು ಇದರ ಮೂಲ ಉದ್ದೇಶವಾಗಿದ್ದು, ಪುತ್ತೂರಿನಿಂದ 225 ಕಿ.ಮೀ ದೂರವಿರುವ ಸಿಗಂದೂರು ಹಾಗೂ ಸಮಯಾವಕಾಶವನ್ನು ಹೊಂದಿಕೊಂಡು, ಮಾರ್ಗ ಮಧ್ಯೆ ಸಿಗುವಂತಹ ಕೊಲ್ಲೂರು ಇತ್ಯಾದಿ ದೇಗುಲಗಳ ದರ್ಶನ ಮಾಡುವುದೆಂದು ನಿಗದಿಯಾಗಿತ್ತು. ಆದಿತ್ಯವಾರದ ಮುಂಜಾನೆ ನಮಗೆಲ್ಲ ಹಿಗ್ಗಿನ, ಕಾತರದ ದಿನ!

ಹತ್ತೂರ ಒಡೆಯ ಪುತ್ತೂರು ಮಹಾಲಿಂಗೇಶ್ವರ ದೇವನ ಪಾದಕ್ಕೆ ಪೊಡಮಟ್ಟು, ಸರಿಯಾಗಿ ಬೆಳಗ್ಗೆ 5:30ಕ್ಕೆ ಹೊರಟ, 42ಆಸನಗಳ ‘ಆನಂದ` ಬಸ್ಸಿನಲ್ಲಿ ಕುಳಿತಿದ್ದ ಪ್ರವಾಸಿಗರ ಮನದಲ್ಲಿ ಆನಂದವೋ ಆನಂದ! ಮಾರ್ಗ ಮಧ್ಯೆ ಸೇರಿಕೊಂಡ ಹಿರಿಯರನ್ನು ತನ್ನೊಳಗೆ ಬರಮಾಡಿಕೊಳ್ಳುತ್ತಾ ಮುಂದುವರೆಯಿತು ವಾಹನ. ಮಾರ್ಗ ಮಧ್ಯೆ ಸೇರಿಕೊಳ್ಳಬೇಕಾಗಿದ್ದ ಹಿರಿಯ ದಂಪತಿ ಇನ್ನೂ ಕಾಣದಿದ್ದಾಗ ಎಲ್ಲರಿಗೂ ಆತಂಕ! ಸ್ವಲ್ಪ ಹೊತ್ತಿನ ಬಳಿಕ ಅವರು ಬಂದರೂ, ತಡವಾದುದಕ್ಕೆ ಕಾರಣ ತಿಳಿದಾಗ, ಪರಿಸ್ಥಿತಿಯ ಗಂಭೀರತೆಯ ಅರಿವಾಯಿತು. ಬೀದಿನಾಯಿಗಳು ಹಾವಳಿ, ಅವುಗಳಿಂದ ದಾರಿಹೋಕರಿಗೆ ಆಗುವ ತೊಂದರೆ ಬಗ್ಗೆ ನಮಗೆಲ್ಲ ತಿಳಿದೇ ಇದೆ. ನಸುಗತ್ತಲಿನಲ್ಲಿ ಬರುತ್ತಿದ್ದ ದಂಪತಿಗೆ ಎದುರಾದ ಬೀದಿನಾಯಿಗಳ ಹಿಂಡು ಅವರನ್ನು ತಬ್ಬಿಬ್ಬುಗೊಳಿಸಿತ್ತು. ಅವುಗಳನ್ನು ನಿವಾರಿಸಿ ಬರುವಷ್ಟರಲ್ಲಿ ಸ್ವಲ್ಪ ತಡವಾಗಿತ್ತು. ಅಂತೂ ಹಿರಿಯರಿಗೆ ತೊಂದರೆ ಏನೂ ಆಗಲಿಲ್ಲವೆಂಬುದೇ ನಿಶ್ಚಿಂತೆ. ಮೊದಲೇ ನಿರ್ಧರಿಸಿದಂತೆ, 7:30ಕ್ಕೆ ಹಳೆಯಂಗಡಿ ಸಮೀಪದ ಪಾವಂಜೆಯನ್ನು ತಲುಪಿದೆವು… ಇಲ್ಲಿಯೇ ಬೆಳಗ್ಗಿನ ಉಪಹಾರ ನಮಗಾಗಿ ಕಾದಿತ್ತು.

ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನವು ‘ನಾಗವೃಜ` ಕ್ಷೇತ್ರವೆಂದು ಪ್ರಸಿದ್ಧಿ. ಸುಮಾರು 800 ವರ್ಷಗಳ ಹಿಂದೆ ಉತ್ತರ ಭಾರತದಿಂದ ಬಂದ ಸಾಧಕರೊಬ್ಬರು ಈ ಪ್ರದೇಶದಲ್ಲಿ ವಾಸವಿದ್ದು ಪರೋಪಕಾರಿ ಜೀವನವನ್ನು ಸಾಗಿಸುತ್ತಾ ಸುತ್ತುಮುತ್ತಲ ಜನರಿಗೆ ಸನ್ಮಾರ್ಗದರ್ಶಕರಾಗಿ, ಬಂದೊದಗಿದ ಆಪತ್ತುಗಳನ್ನು ಪರಿಹರಿಸುತ್ತಾ ಗುರು ಸ್ಥಾನದಲ್ಲಿದ್ದರು. ನಂತರದ ದಿನಗಳಲ್ಲಿ, ಅಂದರೆ ಸುಮಾರು 1920ರಲ್ಲಿ, ಈ ದೇಗುಲವು ಪಾವಂಜೆ ಕೋಡಿಮನೆ ವಾಸುದೇವ ಭಟ್ಟ ಎಂಬವರಿಂದ ನಿರ್ಮಾಣಗೊಂಡಿತು. ಬಳಿಕ 2023ನೇ ದಶಂಬರದಲ್ಲಿ ದೇಗುಲದ ಪುನರುತ್ಥಾನದ ಕೆಲಸವು ನಡೆಯಿತು. ಇದು ಸಂಪೂರ್ಣ ಶಿಲಾಮಯವಾಗಿದ್ದು, ಚಿಕ್ಕದಾಗಿದ್ದರೂ ಬಹಳ ಸುಂದರವಾಗಿದೆ. ದೇವಸ್ಥಾನದ ಮುಂಭಾಗದಲ್ಲಿರುವ ದೇವಾಲಯದ ಪುಷ್ಕರಣಿಯ ಸುತ್ತಲೂ ಶಿಲೆಯ ಆಕರ್ಷಕ ಮೆಟ್ಟಲುಗಳು, ಕೆರೆಯ ಮಧ್ಯಭಾಗದಲ್ಲಿರುವ ಶಿಲಾಮಯ ಮಂಟಪ ಕಣ್ಮನ ಸೆಳೆಯುತ್ತಾ ಪುರಾತನ ಕಾಲದ ಪುಷ್ಕರಣಿಯನ್ನು ನೆನಪಿಸುತ್ತದೆ!. ದೇಗುಲದ ಹೊರಾಂಗಣ, ಒಳಾಂಗಣದ ಸ್ವಚ್ಛತೆ ಗಮನ ಸೆಳೆಯುವಂತಿದೆ. ಬಳಿಯಲ್ಲಿರುವ ನಾಗಬನ, ಪುಟ್ಟ ಸಭಾಂಗಣ, ಆಶ್ಲೇಷಬಲಿಗಳಂತಹ ದೇವತಾ ಕಾರ್ಯ ಕೈಗೊಳ್ಳಲು ಅನುಕೂಲವಾಗುವಂತೆ ನಿರ್ಮಿಸಲಾಗಿರುವ ವಿಶಾಲವಾದ, ಸುಸಜ್ಜಿತ ಸ್ಥಳಾವಕಾಶ ಎಲ್ಲವೂ ಭಕ್ತರ ಮನವನ್ನು ಗೆಲ್ಲುತ್ತವೆ.

ಆಗಮಿಸಿದ ಭಕ್ತಾದಿಗಳಿಗೆ ಎಲ್ಲರಿಗೂ ಬೆಳಗ್ಗಿನ ಫಲಾಹಾರ, ಮಧ್ಯಾಹ್ನದ ಊಟ ಉಚಿತವಾಗಿ ನೀಡುತ್ತಿರುವುದು ಈ ದೇವಸ್ಥಾನದ ಹೆಗ್ಗಳಿಕೆ. ಹಾಗೆಯೇ, ರುಚಿರುಚಿಯಾದ ಒತ್ತುಶ್ಯಾವಿಗೆ, ತೆಂಗಿನ ಸಿಹಿ ಹಾಲು, ಮಜ್ಜಿಗೆ ಹುಳಿ, ಹುಳಿ ಗೊಜ್ಜು ಜೊತೆಗೆ ರುಚಿಕಟ್ಟಾದ ಚಾ ಹಾಗೂ ಕಾಫಿ ನಮಗಾಗಿ ಕಾದಿತ್ತು. ಅತ್ಯಂತ ಆದರದಿಂದ ಆತ್ಮೀಯವಾಗಿ ಪ್ರೀತಿಯಿಂದ ಎಲ್ಲರಿಗೂ ಬಡಿಸಿದ ಅಲ್ಲಿಯ ಸಹೃದಯಿ ಬಂಧುಗಳಿಗೆ ನಮನಗಳು ಸಲ್ಲಲೇ ಬೇಕು. ಭರ್ಜರಿ ಆದರಾತಿಥ್ಯ ಎಲ್ಲರ ಉದರ ತುಂಬಿಸಿ ತಂಪಾಗಿಸಿತು. ಸಾರ್ಥಕ ಭಾವದಿಂದ ಅಲ್ಲಿಂದ ಹೊರಟು ಮುಂದೆ ನಮ್ಮ ಯೋಜನೆಯಂತೆ ಕೊಲ್ಲೂರು ಕಡೆ ಬಸ್ಸು ಓಡಿತು. ಎಲ್ಲರೂ ಬಹಳ ಉತ್ಸಾಹದಿಂದ ಬಸ್ಸಿನಲ್ಲಿದ್ದ ಧ್ವನಿವರ್ಧಕದ ಬಳಕೆಯನ್ನು ಸದುಪಯೋಗಪಡಿಸಿಕೊಳ್ಳುತ್ತಾ, ಹಾಡು, ಪಂದ್ಯ, ಒಗಟುಗಳು, ಹಾಸ್ಯ ಇತ್ಯಾದಿ ಮನರಂಜನೆಗೈಯುತ್ತಾ ಬಸ್ಸಿನೊಳಗಿನ ಹಿರಿಯರೆಲ್ಲರೂ ಕಿರಿಯರಾಗಿಬಿಟ್ಟರು! ನಮ್ಮ ಪ್ರಾರಂಭದ ಯೋಜನೆಯಂತೆ ಮೊದಲಿಗೆ ಕೊಲ್ಲೂರು ದೇಗುಲವನ್ನು ದರ್ಶನಗೈಯುವುದಿತ್ತು. ಆದರೆ ಇದರಿಂದಾಗಿ, ದೂರದಲ್ಲಿರುವ ಸಿಗಂದೂರಿಗೆ ಮಧ್ಯಾಹ್ನದ ಪೂಜೆ ಹಾಗೂ ಪ್ರಸಾದ ಭೋಜನಕ್ಕಾಗಿ ಸಮಯಕ್ಕೆ ಸರಿಯಾಗಿ ತಲಪುವುದು ಕಷ್ಟವೆಂದು ಮನವರಿಕೆಯಾಗಿ, ಕೊಲ್ಲೂರನ್ನು ಹಿಂತಿರುಗುವ ಹಾದಿಯಲ್ಲಿ ದರ್ಶನ ಪಡೆಯುವುದೆಂದು ತೀರ್ಮಾನಿಸಲಾಯಿತು. ಅಂತೆಯೇ ನಮ್ಮ ‘ಆನಂದ`ನು ಆನಂದದಿಂದ ಆಗುಂಬೆ ಬೆಟ್ಟವನ್ನೇರತೊಡಗಿದನು!

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ನದಿಯ ಹಿನ್ನೀರ ದಂಡೆಯಲ್ಲಿ ಉಪಸ್ಥಿತವಿರುವ ಸಿಗಂದೂರು ಚೌಡೇಶ್ವರಿ ದೇವಸ್ಥಾನವು ಬಹಳ ಶಕ್ತಿಶಾಲಿ ಎನಿಸಿದೆ. ಕಳ್ಳರ ಭಯದಿಂದ ನಿವಾರಣೆ, ಇಷ್ಟಾರ್ಥ ಸಿದ್ಧಿಯನ್ನು ನೀಡುವ ದೇವಿಯೆಂದೇ ಹೆಸರುವಾಸಿ. ಭಕ್ತರು, “ದೇವಿಯ ರಕ್ಷಣೆ ಇದೆ” ಎಂಬ ಫಲಕವನ್ನು ಹಾಕಿ ಕಳ್ಳರಿಂದ ತಮ್ಮ ಸ್ವತ್ತುಗಳನ್ನು ಇಂದಿಗೂ ರಕ್ಷಿಸುತ್ತಿರುವುದು ದೇವಿಯ ಬಗ್ಗೆ ಭಕ್ತರಿಗಿರುವ ಅಚಲ ಶ್ರದ್ಧೆ ಮತ್ತು ನಂಬಿಕೆಯ ಪ್ರತೀಕವಾಗಿದೆ. ಈ ದೇವಿಯ ದರ್ಶನ ಪಡೆಯಲು, ಸುಮಾರು 42 ಕಿ.ಮೀ ದೂರವಿರುವ ಸಾಗರದ ಕಡೆಯಿಂದ ಬರುವ ಜನರು ಶರಾವತಿ ನದಿ ದಾಟಲು ಹಿಂದೆ ಬಾರ್ಜ್ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಆದರೆ ಇತ್ತೀಚೆಗೆ ನಿರ್ಮಾಣಗೊಂಡ ತೂಗುಸೇತುವೆಯು ಯಾತ್ರಿಕರ ತೊಂದರೆಯನ್ನು ನಿವಾರಿಸಿದೆ ಎನ್ನಬಹುದು. ಜಾತಿ ಮತ ಭೇದವಿಲ್ಲದೆ, ಎಲ್ಲಾ ಧರ್ಮದವರು ನಡೆದುಕೊಳ್ಳುತ್ತಿರುವುದು ಇಲ್ಲಿಯ ವಿಶೇಷ.

ಸಿಗಂದೂರು ತಲುಪಿದಾಗ ಸುಮಾರು ಮಧ್ಯಾಹ್ನ 12:30. ಬಿಸಿಲ ಝಳದ ಜೊತೆಗೆ ಯಾತ್ರಿಕರ ದಟ್ಟಣೆ ಸಾಕಷ್ಟಿತ್ತು. ಬಸ್ಸು ನಿಲುಗಡೆಗೆ ಸರಿಯಾದ ವ್ಯವಸ್ಥೆ ಇಲ್ಲದ್ದರಿಂದ ಸ್ವಲ್ಪ ದೂರ ನಡೆದು ಹೋಗಬೇಕಾಯಿತು. ಜೊತೆಯೊಂದಕ್ಕೆ ರೂ 2/-ನ್ನು ನೀಡಿ, ಚಪ್ಪಲಿಗಳನ್ನು ಇರಿಸುವ ಪ್ರತ್ಯೇಕ ವ್ಯವಸ್ಥೆಯಿತ್ತು. ಆಯಾಸಗೊಂಡ ಚಪ್ಪಲಿಗಳಿಗೆ ವಿಶ್ರಾಂತಿ ನೀಡಿ, ದೇವರ ದರ್ಶನಕ್ಕಾಗಿ ವಿಶಾಲವಾದ ಹಜಾರದಲ್ಲಿದ್ದ ಉದ್ದದ ಸರತಿ ಸಾಲಿನಲ್ಲಿ ಸೇರಿಕೊಂಡೆವು. ಪೂಜಾ ಕೈಂಕರ್ಯಕ್ಕಾಗಿ ನಮ್ಮ ಅಧ್ಯಕ್ಷರು ತಮ್ಮ ಪರಿಚಿತರ ಮೂಲಕ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಿದ್ದರಿಂದ, ಪೂಜೆ ಹಾಗೂ ಪ್ರಸಾದ ಪಡೆಯುವುದು ಸುಲಭವಾಯಿತು. ಬಳಿಕ, ವಿಪರೀತವಾದ ನೂಕುನುಗ್ಗಲಿನ ಜೊತೆಗೆ ನಮ್ಮ ಹಿಂಡು ಸೇರಿಕೊಂಡು ದೇವರ ದರ್ಶನವನ್ನು ಪಡೆಯಲಾಯಿತು. ಚಿನ್ನಾಭರಣಗಳಿಂದ ಹಾಗೂ ಹೂಗಳಿಂದ ಅಲಂಕೃತಳಾದ ದೇವಿಯ ದರ್ಶನದಿಂದ ನಮ್ಮ ಕಣ್ಣುಗಳು ಪಾವನವಾದವು! ಆದರೆ ಅರೆಕ್ಷಣವೂ ದೇವಿ ಮುಂದಿರಲು ಅವಕಾಶ ನೀಡದ ಮಹಿಳಾ ಸಿಬ್ಬಂದಿಯ ಒರಟುತನ ಮಾತ್ರ ಹಿಡಿಸಲಿಲ್ಲವೆನ್ನಿ. ಮಧ್ಯಾಹ್ನ, ದೇವಳದಲ್ಲಿ ನೀಡಿದ ಸರಳ ಸಾರನ್ನ ಪ್ರಸಾದವನ್ನು ಉಂಡು ಹೊರಬಂದೆವು. ಇಲ್ಲಿ ಸ್ವಚ್ಛತೆ, ಅಚ್ಚುಕಟ್ಟು, ಸೇವೆಯ ಕೊರತೆ ಢಾಳಾಗಿ ಎದ್ದುಕಾಣುತ್ತಿತ್ತು.

ಬಳಿಕ, ಶರಾವತಿ ಹಿನ್ನೀರಿಗೆ ಕಟ್ಟಿದ, ಇತ್ತೀಚೆಗೆ ಲೋಕಾರ್ಪಣೆಗೊಂಡ ಸುಮಾರು 2.5ಕಿ.ಮೀ ಉದ್ದದ ಹೊಸ ತೂಗುಸೇತುವೆಯನ್ನು ನೋಡಲು ನಮ್ಮ ವಾಹನ ದೌಡಾಯಿಸಿತು. ಶರಾವತಿಯ ಹಿನ್ನೀರಿನ ಅಗಾಧ ಜಲರಾಶಿಯಲ್ಲಿ ಅಲ್ಲಲ್ಲಿ ಹಿಂಡು ಹಿಂಡಾಗಿ ಬೆಳೆದ ಪೊದರಿನಂತಹ ಸಸ್ಯಗಳು ಪುಟ್ಟ ಪುಟ್ಟ ದ್ವೀಪಗಳಂತೆ ಕಾಣುತ್ತಿದ್ದವು. ಸಾಗರದ ಜನರನ್ನು ಸಿಗಂದೂರಿಗೆ ತಲಪಿಸುವ ಹೊಣೆ ಹೊತ್ತ ಬೃಹತ್ ತೂಗುಸೇತುವೆಯು ಚತುಷ್ಪಥವಾಗಿದ್ದು, ಅತ್ಯಂತ ಸದೃಢವಾಗಿ ರೂಪುಗೊಂಡಿದೆ! ಇದರ ಸೌಂದರ್ಯವನ್ನು ಸವಿಯಲು ಅನುಕೂಲವಾಗುವಂತೆ ನಮ್ಮ ಬಸ್ಸು ಸೇತುವೆಯನ್ನು ಪ್ರವೇಶಿಸಿ ಅದರ ಇನ್ನೊಂದು ತುದಿಗೆ ತಲಪಿದ ಬಳಿಕ ಹಿಂತಿರುಗಿ ಅರ್ಧದಲ್ಲಿ ನಿಂತಿತು. ಬಸ್ಸಿನಿಂದ ಇಳಿದಾಗ ಅಲ್ಲಿ ಬೇರೆಯೇ ಪ್ರಪಂಚ ತೆರೆದುಕೊಂಡಿತು! ದಿಗಂತದ ಅಂಚಿನ ವರೆಗೆ ಮೈಚಾಚಿ ಮಲಗಿದ್ದ ಶರಾವತಿಯ ಜಲರಾಶಿ ಬೆಳ್ಳಿಯಂತೆ ಮಿನುಗುತ್ತಿತ್ತು. ಈ ಸೌಂದರ್ಯವನ್ನು ಕಣ್ತುಂಬಿಕೊಂಡು, ಸವಿ ನೆನಪಿಗಾಗಿ ಸಹಬಂಧುಗಳೊಂದಿಗೆ ನಮ್ಮ ಚರವಾಣಿಯಲ್ಲಿ ಚಿತ್ರಿಸಿಕೊಂಡು ವಾಹನವನ್ನೇರಿದೆವು. ನಮ್ಮ ‘ಆನಂದ`ನು ಹಾವಿನಂತೆ ಸುತ್ತು ಬಳಸಿ ಮಲಗಿದ್ದ ರಸ್ತೆಯನ್ನು ಸವೆಸುತ್ತಾ ಆಗುಂಬೆ ಬೆಟ್ಟವನ್ನು ಇಳಿಯತೊಡಗಿದನು…. ತಪ್ಪಲಿನಲ್ಲಿರುವ ಕೊಲ್ಲೂರಾಂಬೆಯ ದರ್ಶನದ ಕಾತರತೆಯಿಂದ…

ಕೊಡಚಾದ್ರಿ ಪರ್ವತಶ್ರೇಣಿಯ ತಪ್ಪಲಿನ ಉಡುಪಿ ಜಿಲ್ಲೆಯ ಕೊಲ್ಲೂರು ಸ್ಥಿತ ಆದಿಶಕ್ತಿಯು; ಪಾರ್ವತಿ, ಲಕ್ಷ್ಮಿ, ಸರಸ್ವತಿಯರ ಸಂಯೋಜಿತ ಲಿಂಗರೂಪವಾಗಿ, ಆದಿಶಂಕರಾಚಾರ್ಯರಿಂದ ಸ್ಥಾಪಿತವಾಯಿತೆಂಬ ಐತಿಹ್ಯವಿದೆ. ಪರಶುರಾಮ ಸೃಷ್ಠಿಸಿದ ಮೋಕ್ಷದಾಯಕವಾದ ಏಳು ಕ್ಷೇತ್ರಗಳು ಅಥವಾ ರಾಜ್ಯದ ಸಪ್ತ ಮುಕ್ತಿ ಸ್ಥಳಗಳಾದ ಕೊಲ್ಲೂರು, ಉಡುಪಿ, ಸುಬ್ರಹ್ಮಣ್ಯ, ಕುಂಭಾಶಿ, ಕೋಟೇಶ್ವರ, ಶಂಕರನಾರಾಯಣ, ಗೋಕರ್ಣದ ಜೊತೆಗೆ ಈ ಪವಿತ್ರ ಕ್ಷೇತ್ರವೂ ಒಂದಾಗಿದೆ. ಸೌಪರ್ಣಿಕಾ ನದಿಯ ದಂಡೆಯಲ್ಲಿರುವ ಈ ಕ್ಷೇತ್ರವು ತನ್ನ ಆಧ್ಯಾತ್ಮಿಕ ಮಹತ್ವ, ಸುಂದರ ಪ್ರಕೃತಿಯ ಸೌಂದರ್ಯ, ವಿಶಿಷ್ಟ ಪೂಜಾ ವಿಧಾನಗಳಿಂದ ಮಹತ್ವವನ್ನು ಪಡೆದಿದೆ. ಮಂಗಳೂರಿನಿಂದ ಸುಮಾರು 147ಕಿ.ಮೀ ದೂರದಲ್ಲಿರುವ ಈ ದೇಗುಲದ ದೇವತೆಯ ಮೂಲಸ್ಥಾನವು, 1200ವರ್ಷಗಳ ಹಿಂದೆ, ಪರ್ವತದ ತುತ್ತತುದಿಯಲ್ಲಿ, ಅಂದರೆ ಸಮುದ್ರಮಟ್ಟದಿಂದ 3880 ಅಡಿ ಎತ್ತರದಲ್ಲಿ ಇತ್ತು ಎನ್ನಲಾಗಿದೆ. ಇದರಿಂದಾಗಿ, ಜನಸಾಮಾನ್ಯರಿಗೆ ದೇವಿಯ ದರ್ಶನ ಕಷ್ಟ ಸಾಧ್ಯವಾಗಿತ್ತು. ಇದನ್ನು ಮನಗಂಡ ಆದಿಶಂಕರಾಚಾರ್ಯರು ಅದನ್ನು ಪರ್ವತದ ತಪ್ಪಲಿಗೆ ತಂದು ಸ್ಥಾಪಿಸಿದರಂತೆ. ಕೇರಳೀಯರಿಗೆ ಈ ದೇಗುಲವು ಅತ್ಯಂತ ಮಹತ್ವದ್ದಾಗಿದೆ.

ನಾವು ಕೊಲ್ಲೂರಿಗೆ ತಲಪಿದಾಗ ಸಂಜೆಯಾಗಿತ್ತು. ಯಾತ್ರಿಕರು ವಿರಳವಾಗಿದ್ದರಿಂದ ದೇವಿ ದರ್ಶನವು ಸುಲಭವಾಯಿತು. ಬಳಿಕ, ದೇಗುಲದ ಹೊರಾಂಗಣದಲ್ಲಿರುವ ಗೃಹ ಸಮುಚ್ಚಯದಲ್ಲಿದ್ದ ಕೊಲ್ಲೂರು ಕ್ಷೇತ್ರ ದೇವಳದ ಪ್ರಧಾನ ಅರ್ಚಕರಾದ ನರಸಿಂಹ ಅಡಿಗರನ್ನು ಭೇಟಿ ಮಾಡಿದೆವು. ಅವರ ದಿವ್ಯ ಉಪಸ್ಥಿತಿಯಲ್ಲಿ, ಅವರ ಆಶೀರ್ವಚನವನ್ನು ಕೇಳಿ ಪ್ರಸಾದ ಸ್ವೀಕರಿಸುವ ಭಾಗ್ಯ ನಮ್ಮದಾಯಿತು. ಮಾರ್ಗ ಮಧ್ಯದಲ್ಲಿ; ಇತ್ತೀಚೆಗೆ ನವೀಕರಣಗೊಂಡ ಪ್ರಸಿದ್ಧ ಕಾಪು ಮಾರಿಯಮ್ಮ ದೇವಸ್ಥಾನವನ್ನು ಪ್ರವೇಶಿಸಿದಾಗ ಅದಾಗಲೇ ರಾತ್ರಿ 8 ಗಂಟೆ ಕಳೆದಿತ್ತು….ದೇವಾಲಯದ ಬಾಗಿಲು ಮುಚ್ಚಿತ್ತು. ಆದರೆ, ಹೊರಾಂಗಣದ ವೈಭವೋಪೇತ, ಅತೀ ಸುಂದರ ಶಿಲ್ಪ ಕಲಾಕೃತಿಯನ್ನು ಕಣ್ತುಂಬಿಕೊಂಡು ದೇವಿಗೆ ನಮಿಸಿ ಹೊರಟೆವು….ನಮ್ಮ ಗಮ್ಯಸ್ಥಾನಕ್ಕೆ. ಪುತ್ತೂರಿಗೆ ತಲಪಿದಾಗ ತಡರಾತ್ರಿಯಾಗಿದ್ದರೂ, ಯಾರಿಗೂ ಬೇಸರವೆನಿಸಲಿಲ್ಲ. ಕ್ಷೇತ್ರ ದರ್ಶನದ ಈ ಸುಂದರ ಪ್ರವಾಸದ ಒಂದು ದಿನದಲ್ಲಿ ಹಾದುಹೋದ ಸಿಹಿಕ್ಷಣಗಳು ಸದಾ ಮನ:ಪಟಲದಲ್ಲಿ ಉಳಿದು, ಮುಂದಿನ ದಿನಗಳಿಗೆ ಚೇತನ, ಹುರುಪನ್ನು ನೀಡುವುದರಲ್ಲಿ ಸಂಶಯವಿಲ್ಲ… ಅಲ್ಲವೇ?

-ಶಂಕರಿ ಶರ್ಮ, ಪುತ್ತೂರು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *