ಪೌರಾಣಿಕ ಕತೆ

ಕಾವ್ಯ ಭಾಗವತ 97: ನರಕಾಸುರ ವಧಾ

Share Button

ದಶಮಸ್ಕಂದ – ಉತ್ತರಾರ್ಧ – ಅಧ್ಯಾಯ – 9
ನರಕಾಸುರ ವಧಾ

ನರಕಾಸುರ ಭೂದೇವಿ ಪುತ್ರನು
ಅದ್ಭುತ ಪರಾಕ್ರಮಿ
ವರುಣದೇವರನ್ನೆದುರಿಸಿ
ಅವನ ರಾಜಚಿಹ್ನೆ ಶ್ವೇತಛತ್ರವ ಕಿತ್ತುಕೊಂಡು
ಇಂದ್ರಮಾತೆ ಅದಿತಿಯ ಕರ್ಣಾಭರಣವ
ಅಪಹರಿಸಿ ತಂದವ
ಮೇರು ಪರ್ವತದ ಭೂಷಣಪ್ರಾಯ
ಮಣಿಪರ್ವತವ ಸಾಗಿಸಿ ತಂದು
ತನ್ನ ನಗರ ಸಮೀಪದಿ ಸ್ಥಾಪಿಸಿದವ
ಅನೇಕ ರಾಜರ ಯುದ್ಧದಲಿ ಸೋಲಿಸಿ
ಅವರ ಸುಂದರ ಪತ್ನಿ ಪುತ್ರಿಯರನು
ತನ್ನರಮನೆಯಲಿ ಬಂಧಿಸಿಟ್ಟ

ದೇವೇಂದ್ರನಿಂದ ನರಕಾಸುರನ
ಪ್ರಜಾಹಿಂಸೆಯ ಪರಿ ಅರಿತು
ಯುದ್ಧದರ್ಶನ ಕುತೂಹಲಿ
ಪತ್ನಿ ಸತ್ಯಭಾಮೆಯೊಡನೆ
ಗರುಡಾರೂಢನಾಗಿ ನರಕಾಸುರ ಪುರ
ಪ್ರಾಗ್ಜೋತಿಷಪುರ ಸಮೀಪಕೆ ಬಂದು
ಪಾಂಚಜನ್ಯ ಶಂಖಧ್ವನಿ ಮಾಡೆ
ಬಹುಕಾಲದಿ ನಿಶ್ಚಿಂತನಾಗಿ ಮಲಗಿದ್ದ
ಮುರಾಸುರ, ನರಕಾಸುರ ಭಂಟ
ಐದು ಮುಖಗಳ ದೈತ್ಯ
ತನ್ನ ತ್ರಿಶೂಲವ ಗರುಡನ ಮೇಲೆ ಪ್ರಯೋಗಿಸೆ
ಕೃಷ್ಣ ತ್ರಿಶೂಲವ ಮಧ್ಯಮಾರ್ಗದಿ ಬಾಣಗಳಿಂದ ಖಂಡಿಸಿ
ನಂತರದಿ ಚಕ್ರಪ್ರಯೋಗ ಮಾಡಿ
ಮುರಾಸುರನ ಹತ್ಯೆಗೈದನು

ತನ್ನ ಬಲಭುಜದಂತಿಂದ ಮುರಾಸುರ
ಹತ್ಯೆಯಿಂದ ಕ್ಷುದ್ರನಾದ ನರಕಾಸುರ
ತನ್ನ ಅಪಾರ ಗಜಸೈನ್ಯದೊಡನೆ ಬಂದು
ಕೃಷ್ಣಸ್ವಾಮಿಯ ಮೇಲೆ ಶತಘ್ನಿ ಎಂಬ
ಭಯಂಕರ ಆಯುಧದಿಂ ಪ್ರಹರಿಸೆ
ಕೃಷ್ಣ ಮಾರ್ಗಮಧ್ಯದೇ ಅದ ತನ್ನ
ಬಾಣದಿಂ ತುಂಡರಿಸಿ ಅಲ್ಪ ಕಾಲಕೆ
ನರಕಾಸುರ ಸೈನ್ಯವೆಲ್ಲವ
ಕೊಂದು ಕೆಡಹಿದನು
ಗರುಡನೂ ತನ್ನ
ಕೊಕ್ಕು ರೆಕ್ಕೆಗಳು ಕಾಲುಗುರುಗಳಿಂದ
ನರಕಾಸುರನ ಗಜಸೈನ್ಯ ಅಶ್ವಸೈನ್ಯವ
ಕಚ್ಚಿ ಬಡಿದು ಹಿಂಸಿಸಿ ಕೊಲ್ಲುತಿರೆ
ನರಕಾಸುರ ಅದರ ಮೇಲೆ ಭಯಂಕರ
ಶಕ್ಯಾಯುಧವ ಪ್ರಯೋಗಿಸಿದರೂ
ವಜ್ರದೇಹಿ ಗರುಡಗೆ ಹಾನಿಯಾಗಲಿಲ್ಲ

ಕೃಷ್ಣನೇ ಸಕಲ ನಷ್ಟಕೆ ಮೂಲವೆಂದು
ನರಕಾಸುರ ತನ್ನ ಶೋಲಾಯುಧವ ಹಿಡಿದು
ಮೇಲೇರಿ ಬರುತಿರೆ ಕೃಷ್ಣ ಸುದರ್ಶನ
ಚಕ್ರಾಯುಧ ಪ್ರಯೋಗದಿ
ನರಕಾಸುರನ ಶಿರವನ್ನುರುಳಿಸಿದ

ಅಂತರಿಕ್ಷದಿ ದೇವತೆಗಳು ಶ್ರೀಕೃಷ್ಣನ
ದುಷ್ಟಸಂಹರಣ ಕಾರ್ಯವ ಶ್ಲಾಘಿಸೆ
ನರಕಾಸುರ ಮಾತೆ ಭೂದೇವಿ
ನರಕಾಸುರ ಪುತ್ರ ಭಗದತ್ತನನ್ನು
ಕೃಷ್ಣನ ಪಾದಗಳ ಮೇಲಿರಿಸಿ
ಅಖಿಲ ಜಗದ ಸೃಷ್ಟಿ ಸ್ಥಿತಿ ಲಯ ಕರ್ತನ
ನ್ಯಾಯಕೆ ತಲೆದೂಗಿ
ಬಾಲಕನ ಕಾಪಾಡುವಂತೆ ಪ್ರಾರ್ಥಿಸಿದಳು
ಕೃಷ್ಣ ಅವಳಿತ್ತ ವೈಜಯಂತಿ ಮಾಲೆ ಶ್ವೇತಛತ್ರವನು
ವರುಣದೇವನಿಗೆ ಒಪ್ಪಿಸಿದನು

ನರಕಾಸುರ ಸೆರೆಗೊಳಗಾಗಿದ್ದ
ರಾಜಪುತ್ರಿಯರು ಒಬೊಬ್ಬರೂ
ದೇವೋತ್ತಮನ ಪಾದಗಳಿಗೆ ನಮಸ್ಕರಿಸಿ
ತಮ್ಮನ್ನು ಕೈಹಿಡಿದು ಉದ್ಧರಿಸಬೇಕೆಂದು ಪ್ರಾರ್ಥಿಸೆ
ಕೃಷ್ಣ ಹಸನ್ಮುಖದಿ ಒಪ್ಪಿ
ಪಾಲಿಕೆಗಳಲ್ಲೇರಿಸಿ ಎಲ್ಲರನೂ
ದ್ವಾರಕಾನಗರಿಗೆ ಕಳುಹಿಸಿದನು

ನಂತರದಿ ಕೃಷ್ಣ ಸತ್ಯಭಾಮೆಯರು
ದೇವೇಂದ್ರನ ರಾಜಧಾನಿಗೆ ನಡೆದು
ಅದಿತಿದೇವಿಯ ಕಾಲಿಗೆರಗಿ
ನರಕಾಸುರ ಅಪಹರಿಸಿದ್ದ ಆಕೆಯ
ಕುಂಡಲಗಳೆರಡನು ಸಮರ್ಪಿಸಿದರು

ಸತ್ಯಭಾಮೆಯು ನಂದನವನದ ಶೋಭೆ
ಪಾರಿಜಾತ ವೃಕ್ಷವ ಬಯಸೆ
ಕೃಷ್ಣ ಅದ ಕಿತ್ತು ಗರುಡನ ಮೇಲೇರಿಸಿಕೊಂಡು
ಹೊರಟಾಗ ಪ್ರತಿಭಟಿಸಿದ ದೇವತೆಗಳ ಪರಾಭವಗೊಳಿಸಿ
ಕೃಷ್ಣ ಅದ ಸತ್ಯಭಾಮೆಯ ಅರಮನೆಯ
ಉದ್ಯಾನದಲಿ ಪರಿಜಾತವ ನೆಡೆಸಿದನು

ನರಕಾಸುರ ರಾಜಧಾನಿಯಿಂದ ಕರೆತಂದ
ಹದಿನಾರುಸಾವಿರದ ನೂರು ಮಂದಿ
ರಾಜಕನ್ಯೆಯರೆಲ್ಲರನು
ಶ್ರೀ ಕೃಷ್ಣನು ವಿದ್ಯುಕ್ತವಾಗಿ ವಿವಾಹವಾದನು

ಶುಭ ಮುಹೂರ್ತದಲ್ಲಿ ಅಷ್ಟು ಸಂಖ್ಯೆಯ
ಆಕೃತಿಗಳನು ತಾಳಿ ಎಲ್ಲರೊಡನೆ
ಏಕಕಾಲದಿ ವಿವಾಹವಾಗಿ ಗೃಹಸ್ಥನಾದ
ಲೀಲಾಮಾನುಷ ವಿಗ್ರಹನ ಚರ್ಯೆಯ
ವಿಶ್ಲೇಷಿಸುವವರ್ಯಾರು?

ಅಷ್ಟು ಮಂದಿ ಬಾರ್ಯೆಯರಲ್ಲಿ
ಒಬೊಬ್ಬರೂ ಕೃಷ್ಣ ಸದಾ ತಮ್ಮ ಬಳಿಯೇ
ವಾಸಿಸುತ್ತಿಹನೆಂಬ ಭಾವದಲಿ ಸುಖಿಸುತ್ತಿರೆ
ಆ ಕೃಷ್ಣ ಮಾಯೆಗೆ ಮಿತಿಯೆಲ್ಲಿ!

(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ :
https://surahonne.com/?p=45164

-ಎಂ. ಆರ್.‌ ಆನಂದ, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *