ಬೆಳಕು-ಬಳ್ಳಿ

ಕಾವ್ಯ ಭಾಗವತ 81 : ಗೋಪಿಯರ ವಸ್ತ್ರಾಪಹರಣ

Share Button

ದಶಮ ಸ್ಕಂದ – ಪೂರ್ವಾರ್ಧ – ಅಧ್ಯಾಯ – 5
ಗೋಪಿಯರ ವಸ್ತ್ರಾಪಹರಣ

ಗ್ರೀಷ್ಮದ ಬಿಸಿಲು ಧರೆಯೆಲ್ಲವ ಸುಟ್ಟು
ಜಲರಾಶಿಗಳನ್ನೆಲವ ಆವಿಯಾಗಿಸಿ
ಮೋಡವಾಗಿ ಮಳೆಯಾಗಿ ವರ್ಷ ಋತುವಿನಲಿ
ನದಿಕೆರೆಗಳೆಲ್ಲ ತುಂಬಿ
ಸಸ್ಯಾವಳಿ ನಲಿದಾಡಿ
ಎಲೆ ಚಿಗುರು ಪುಷ್ಪವೆಲ್ಲ ಫಲವಾಗಿ
ಭೊರ್ಗೆರವ ಜಲರಾಶಿಗಳೆಲ್ಲ
ಶರದ್‌ ಋತುವಿನಲ್ಲಿ ಶಾಂತವಾಗಿ
ಹೊಳೆನೀರು ತಿಳಿಯಾದ ಒಂದು ಮುಂಜಾನೆ
ಉಷಃಕಾಲದಲಿ ಯಮುನೆಗಿಳಿದ ಗೋಪಿಕೆಯರೆಲ್ಲರ
ವಸ್ತ್ರದಗಂಟನ್ನೆಗರಿಸಿ ಮರವೇರಿದ ಕೃಷ್ಣನ
ಅರಿವಿಲ್ಲದೆ ಜಲಕ್ರೀಡೆಯಾಡಿ ಉಷೆ ಮುಳುಗಿ
ಉದಯರವಿ ಕಿರಣಗಳು ಮೂಡಿ ಬೆಳಗಾದಾಗ
ಗೋಪಿಕೆಯರೆಲ್ಲ ಗಡಿಬಿಡಿಯಿಂದ
ತಮ್ಮಬಟ್ಟೆಯ ಗಂಟು ಕಾಣದಾದಾಗ
ಗಾಳಿಯಲ್ಲಿ ತೇಲಿ ಬಂತು ವೇಣುನಾದ

ಗೋಪಿಕೆಯರೆಲ್ಲರ ಆರಾಧ್ಯ ದೇವನಾಗಿ
ತಮ್ಮ ವ್ರತ ನೋಂಪಿಗಳೆಲ್ಲದರ
ಕೊನೆಯ ದಿನವಾದಂದು ವ್ರತನಿಂದನೆಯಾದರೆಂತು
ಮುರಾರಿ ತಮ್ಮ ರಮಣನಾಗುವುದೆಂತು
ಆ ಕಳ್ಳ ಕೃಷ್ಣ ಬಟ್ಟೆಗಂಟ ಮರದ ರೆಂಬೆಗಂಟಿಸಿ
ಕೊಳಲನೂದುತ್ತಿರುವನು

ಓ ಕೃಷ್ಣ ಮುರಾರೆ ನಾವೆಲ್ಲ ನಿನ್ನ ದಾಸಿಯರು
ದಯಮಾಡಿ ನಮ್ಮೆಲ್ಲ ವಸ್ತ್ರಗಳ ನೀಡೆಂದಾಗ
ಕೃಷ್ಣ ಕೊಂಬೆಯಿಂದಿಳಿದು ಬನ್ನಿ ಗೋಪಿಯರೆ
ನಿಮ್ಮ ವಸ್ತ್ರಗಳ ನೀವೇ ಪಡೆದುಕೊಳ್ಳಿ
ಎಂದೊಡನೆ ಗೋಪಿಯರು ನಾಚಿ
ಹಸ್ತದಲಿ ಕುಚದ್ವಯಗಳ ಗುಪ್ತಾಂಗವ ಮುಚ್ಚಿ
ಕೇಶರಾಶಿಯಿಂದ ತನುವನೆಲ್ಲ ಬಳಸಿ
ತಲೆಯ ತಗ್ಗಿಸಿ ಬಂದವರಿಗೆ

ಏನಿದು ನಿಮ್ಮ ನೊಂಪಿ, ವಿವಸ್ತ್ರರಾಗಿ
ಯಮುನೆಯಲಿ ಮಿಂದೆದ್ದುದು
ಜಲಾಭಿಮಾನಿ ದೇವತೆಗಳಿಗಾದ ಅಪರಾಧವಲ್ಲವೆ
ಕೈಯನ್ನೆತ್ತಿ ವಂದಿಸಿದರೆ ಆ ಅಪರಾಧವ ಮನ್ನಿಸುವೆನೆಂದಾಗ
ಲಲನೆಯರು ಏಕಹಸ್ತವನ್ನೆತ್ತಿ ವಂದಿಸೆ
ಎರಡೂ ಕೈಗಳನು ತಲೆಯಮೇಲೆತ್ತಿ
ವಂದಿಸುವುದೇ ನಿಜವಾದ ವಂದನೆಯೆಂದಾಗ
ಗೋಪಿಕೆಯರ
ಹರ್ಷ ಶೋಕ ಲಜ್ಜೆ ಅಸಮಾಧಾನ ಕೋಪಗಳೆಂಬ
ಭಾವಗಳು ಅಳಿದು
ಎರಡೂ ಕೈಗಳನ್ನೆತ್ತಿ ವಂದಿಸಿ

ಕೃಷ್ಣಾ ನಿನ್ನ ದರುಶನದ ಭಾಗ್ಯದಿ
ನಮ್ಮೆಲ್ಲರ ಮಾನ ಪ್ರಾಣಂಗಳು
ನಿನ್ನ ಅಧೀನವಲ್ಲವೇ ಎಂದು
ತಮ್ಮೆಲ್ಲ ವಸ್ತ್ರವ ಪಡೆದು ಧರಿಸಿ
ಕೃಷ್ಣಂಗೆ ನಮಿಸೆ

ಕೃಷ್ಣ ಸಂತೃಪ್ತನಾಗಿ
ಬುದ್ಧಿ ಅಹಂಕಾರ ಮನಸ್ಸೆಂಬ
ತ್ರಿಕರಣಗಳ ನನಗೊಪ್ಪಿಸಿದ ನಿಮಗೆ
ಹುರಿದ ಬೀಜಕೆ ಮೊಳಕೆಯಿಲ್ಲದ ಪರಿ
ಪುನಃಜನ್ಮವಿಲ್ಲ ಎಂದುಚ್ಚರಿಸಿ
ಲೋಕದಲಿ ಕಾಮವೆಂಬುದು
ವಿಷಯ ಭೋಗದಿ ಪರ್ಯಾವಸಾನವಾದರೂ
ಎನ್ನ ನಂಬಿದವರ ಕಾಮ ಪವಿತ್ರ ಪ್ರೇಮವಾಗಿ
ಮುಕ್ತಿ ಪ್ರಾಪ್ತಿಯಲಿ ಪರಿಣಾಮಗೊಳ್ಳುವುದು
ಎಂದ ಜಗದೊಡೆಯ ಕೃಷ್ಣ

(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=44546

-ಎಂ. ಆರ್.‌ ಆನಂದ, ಮೈಸೂರು

4 Comments on “ಕಾವ್ಯ ಭಾಗವತ 81 : ಗೋಪಿಯರ ವಸ್ತ್ರಾಪಹರಣ

  1. ಕಾವ್ಯ ಭಾಗವತ ಬಹಳ ಚೆನ್ನಾಗಿ ಮೂಡಿ ಬರುತ್ತಿದೆ.

  2. ಕಾವ್ಯ ಭಾಗವತದಲ್ಲಿ ಕೃಷ್ಣ ನ ಲೀಲಾವತರಣ.. ಜೊತೆಗೆ ಅಧ್ಯಾತ್ಮಿಕ ಸುಳುಹು ..ಚೆನ್ನಾಗಿ ಒಡಮೂಡಿದೆ..

  3. ಎಂದಿನಂತೆ ಕಾವ್ಯ ಭಾಗವತದ ಈ ಭಾಗವೂ ಸರಳವಾಗಿ ಸುಂದರವಾಗಿ ಮೂಡಿ ಬಂದಿದೆ.

  4. ಭಾಗವತದ ಆಳ ಆಧ್ಯಾತ್ಮದ ಭಾಗವಿದು….
    ಕಾವ್ಯ ಭಾಗವತದ ಪ್ರಸ್ತುತಿ ಎಂದಿನಂತೆ ಸರಳ ಸುಂದರ.

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *