ಒಬ್ಬ ಗುರುಗಳ ಬಳಿ ಹಲವಾರು ಶಿಷ್ಯರು ವಿದ್ಯೆ ಕಲಿಯುತ್ತಿದ್ದರು. ಒಂದು ಸಾರಿ ಅವರಿಗೆಲ್ಲ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸಬೇಕೆಂಬ ಆಸೆಯುಂಟಾಯಿತು. ಪುಣ್ಯಕ್ಷೇತ್ರಗಳಲ್ಲಿರುವ ಪುಣ್ಯತೀರ್ಥಗಳಲ್ಲಿ ಮಿಂದು, ದೇವರ ದರ್ಶನ ಮಾಡಿದರೆ ತಾವು ಪುನೀತರಾಗುತ್ತೇವೆ, ಪುಣ್ಯ ಸಂಪಾದಿಸಿದಂತಾಗುತ್ತದೆ ಎಂಬ ಭಾವನೆ ಬಂದಿತು. ತಮ್ಮ ಬಯಕೆಯನ್ನು ಗುರುಗಳ ಗಮನಕ್ಕೆ ತಂದು ಹೋಗಿಬರಲು ಅವರ ಅನುಮತಿ ಕೋರಿದರು. ಗುರುಗಳು ಪ್ರಸನ್ನರಾಗಿ “ಒಳ್ಳೆಯ ಆಶಯ. ಹೋಗಿಬನ್ನಿ. ನಿಮಗೆಲ್ಲ ಶುಭವಾಗಲಿ. ನಾನೊಂದು ವಸ್ತುವನ್ನು ನಿಮ್ಮೆಲ್ಲರಿಗೂ ಕೊಡುತ್ತೇನೆ. ನಿಮ್ಮೊಡನೆ ಅದನ್ನು ಕೊಂಡೊಯ್ದು ನೀವು ಪುಣ್ಯತೀರ್ಥಗಳಲ್ಲಿ ಅದನ್ನೂ ಮೀಯಿಸಿ ಅದಕ್ಕೂ ಎಲ್ಲ ದೇವರುಗಳ ದರ್ಶನ ಮಾಡಿಸಿ ವಾಪಸ್ಸು ತನ್ನಿ” ಎಂದು ಪ್ರತಿಯೊಬ್ಬರಿಗೂ ಒಂದೊಂದು ಬಲಿತ ಹಾಗಲಕಾಯಿಯನ್ನು ಕೊಟ್ಟರು.
ಶಿಷ್ಯರು ಅದನ್ನು ಜೋಪಾನವಾಗಿಟ್ಟುಕೊಂಡು ಹೋದಲ್ಲೆಲ್ಲ ಪುಣ್ಯತೀರ್ಥಗಳಲ್ಲಿ ಅದನ್ನೂ ಮೀಯಿಸಿದರು. ದೇವರುಗಳ ದರ್ಶನವನ್ನೂ ಮಾಡಿಸಿದರು. ಕೆಲವು ಕಾಲದ ನಂತರ ಆಶ್ರಮಕ್ಕೆ ಹಿಂದಿರುಗಿದ ಶಿಷ್ಯರುಗಳನ್ನು ಗುರುಗಳು “ಎಲ್ಲವೂ ಸುಸೂತ್ರವಾಗಿ ಪೂರ್ಣವಾಯಿತೇ?” ಎಂದು ಕೇಳಿದರು.
ಶಿಷ್ಯರುಗಳು “ಚೆನ್ನಾಗಿ ಆಯಿತು ಗುರುಗಳೇ” ಎಂದರು.
ಗುರುಗಳು “ ನಾನು ಕೊಟ್ಟಿದ್ದ ಹಾಗಲ ಕಾಯಿಗಳಿಗೂ ತೀರ್ಥಸ್ನಾನ, ದರ್ಶನಗಳನ್ನು ಮಾಡಿಸಿದಿರಾ?” ಎಂದು ಪ್ರಶ್ನಿಸಿದರು. “ಹೌದು ಗುರುಗಳೇ, ತಪ್ಪದೆ ಮಾಡಿಸಿದೆವು” ಎಂದುತ್ತರಿಸಿದರು.
ಗುರುಗಳು ಈಗ ಅವೆಲ್ಲವನ್ನು ಕತ್ತರಿಸಿ ಪಲ್ಯಮಾಡಿರಿ ಎಂದರು. ಶಿಷ್ಯರು ಹಾಗೇ ತಯಾರಿಸಿದರು. ಊಟಕ್ಕೆ ಬಡಿಸಿಕೊಂಡು ಬಾಯಿಗಿಟ್ಟರು. ಮರುಕ್ಷಣವೇ “ಗುರುಗಳೇ ಇದು ತುಂಬ ಕಹಿ ಮುದ್ದೆಯಾಗಿದೆ. ತಿನ್ನಲು ಆಗುತ್ತಿಲ್ಲ” ಎಂದರು.
ಗುರುಗಳು “ಅಲ್ಲಪ್ಪಾ ಅವನ್ನೆಲ್ಲ ಪುಣ್ಯಕ್ಷೇತ್ರಗಳಲ್ಲಿ ಮುಳುಗಿಸಿದ್ದೀರಿ, ಆಯಾ ಕ್ಷೇತ್ರಗಳಲ್ಲಿ ದೇವರ ದರ್ಶನವನ್ನೂ ಮಾಡಿಸಿದ್ದೀರಿ. ಹಾಗಿದ್ದರೂ ಅವು ಕಹಿಯಾಗಿ ಹೇಗಿರಲು ಸಾಧ್ಯ?” ಎಂದು ಕೇಳಿದರು.
ಶಿಷ್ಯರುಗಳು “ಗುರುಗಳೇ ಹಾಗಲದ ಮೂಲ ಗುಣವೇ ಕಹಿರುಚಿ. ಅದೆಂದಿಗಾದರೂ, ಏನು ಮಾಡಿದರೂ ತನ್ನ ಸ್ವಭಾವವನ್ನು ಬದಲಾಯಿಸಿಕೊಳ್ಳಲು ಸಾಧ್ಯವೇ?” ಎಂದು ಪೆಚ್ಚುಮುಖ ಹಾಕಿದರು.
ಗುರುಗಳು “ಪವಿತ್ರ ಕ್ಷೇತ್ರಗಳನ್ನು ಸಂದರ್ಶಿಸಿ, ಪವಿತ್ರಸ್ನಾನ ಮಾಡಿದಾಕ್ಷಣ ನಿಮ್ಮ ಅಂತರಂಗ ಶುದ್ಧಿಯಾದಂತಾಯಿತೇ? ಮಾಡುವ ಪಾಪಗಳನ್ನು ಮಾಡುತ್ತಲೇ ದೇವರ ದರ್ಶನಕ್ಕೆ ಹೋಗಿಬಂದಾಕ್ಷಣ ಪುನೀತರಾಗುವುದಿಲ್ಲ. ಹಾಗಿದ್ದಲ್ಲಿ ನಾನು ನಿಮಗೆ ಕೊಟ್ಟ ಹಾಗಲ ಕಾಯಿಗಳೆಲ್ಲ ತಮ್ಮ ಗುಣವನ್ನು ಬಿಟ್ಟು ಸಿಹಿಯಾಗುತ್ತಿದ್ದವು. ಮೊದಲು ನೀವು ಅಂತರಂಗದಿಂದ ಶುದ್ಧರಾಗಬೇಕು. ಅದಕ್ಕಾಗಿ ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಆಸೆಯನ್ನು ವರ್ಜಿಸಬೇಕು. ದುರ್ಗುಣಗಳನ್ನು ತ್ಯಜಿಸಬೇಕು. ಭಗವಂತನ ಧ್ಯಾನದಿಂದ ಆಲೋಚನೆಗಳಲ್ಲಿ ಶುದ್ಧವಾಗಿರಬೇಕು. ಸಮಾಜಕ್ಕೆ ನಿಮ್ಮಿಂದ ಸೇವೆ ಸಲ್ಲುವಂತಾಗಬೇಕು. ಆಗ ಮಾತ್ರ ಪಾವಿತ್ರ್ಯತೆ ನಿಮ್ಮೊಳಗೂ ಮೂಡಿ ಪುನೀತರಾಗಬಹುದು” ಎಂದರು. ಅವರ ಮಾತುಗಳನ್ನು ಕೇಳಿದ ಶಿಷ್ಯರಿಗೆ ಜ್ಞಾನೋದಯವಾಯಿತು.
“ತಾವು ಹೇಳಿದಂತೆಯೇ ನಡೆದುಕೊಳ್ಳುತ್ತೇವೆ” ಎಂದು ಗುರುಗಳಿಗೆ ವಂದಿಸಿದರು.

ಸಂಗ್ರಹಣೆ ಮತ್ತು ರೇಖಾಚಿತ್ರ ರಚನೆ : ಬಿ.ಆರ್.ನಾಗರತ್ನ, ಮೈಸೂರು

