ಪೌರಾಣಿಕ ಕತೆ

ಕಾವ್ಯ ಭಾಗವತ 70 : ಶ್ರೀ ಕೃಷ್ಣ ಕಥೆ-7

Share Button

ದಶಮ ಸ್ಕಂದ – ಅಧ್ಯಾಯ – 2
ಶ್ರೀ ಕೃಷ್ಣ ಕಥೆ – 7
ದುರ್ಗಾವತಾರ, ಗೋಕುಲದಿ ಜನ್ಮೋತ್ಸವ

ವಸುದೇವನು ಹೆಣ್ಣು ಶಿಶುವ ತಂದು ದೇವಕಿಯ ಮಗ್ಗುಲಲಿ ಮಲಗಿಸೆ
ಸೆರೆಮನೆಯಲಿ ವಸುದೇವ ದೇವಕಿಯರ ಸಂಕೋಲೆಗಳು
ಮುಂಚಿನಂತೆ ಸೇರ್ಪಡೆಯಾಗೆ ಸ್ತ್ರೀ ಶಿಶು ʼಹೋʼ ಎಂದು
ಚೀರಿ ಅಳುತಿರೆ ಶಿಶು ಜನ್ಮದ ವಾರ್ತೆ ಕಂಸಗೆ ತಲುಪಿ
ಓ ನಭೋ ವಾಣಿ ನುಡಿದ ನನ್ನ ಮೃತ್ಯು ಪಾಶ
ಎಂಟನೆಯ ಗರ್ಭದಲಿ ಜನಿಸಿದೆ ಎಂದು ಕಂಸನ
ಚಂದ್ರಾಯುಧವನ್ನೆತ್ತಿಕೊಂಡು ಸೆರೆಮನೆಗೆ ಯಮದೂತನಂತೆ
ಬಂದುದ ಕಂಡು ದೇವಕಿ ನಡುನಡುಗುತ
ಅಣ್ಣಾ ಈ ಹೆಣ್ಣು ಮಗು ನಿನಗೇನು ಮಾಡೀತು
ಆರು ಮಂದಿ ಪುತ್ರ ಸಂತಾನವ ನಿಷ್ಕರುಣೆಯಿಂ ವಧೆಗೈದೆ
ಈ ಹೆಣ್ಣನ್ನಾದರೂ ನನ್ನ ಪಾಲಿಗೆ ಬದುಕಿಸು
ಎಂಬ ದೇವಕಿಯ ರೋಧನಕೆ ಕಿವಿಗೊಡದೆ
ರೋಧಿಸುತ್ತಿರ್ಪ ಕೂಸಿನ ಎರಡು ಕಾಲುಗಳ ಪಿಡಿದು
ತಲೆಕೆಳಗಾಗಿ ನೇತಾಡಿಸುತ್ತಾ ಸೆರೆಮನೆಯ ಮುಂದಿರ್ಪ
ಬಂಡೆಯ ಮೇಲೆ ಬಟ್ಟೆಯನ್ನೆತ್ತಿ ಒಗೆವಂತೆ ಅಪ್ಪಳಿಸೆ
ಭಗವನ್ಮಾಯೆಯಲಿ ಶಿಶು ಅವನ ಕೈಯಿಂದ
ಅಂತರಿಕ್ಷಕೆ ಹಾರಿ ಅದ್ಭುತ ದುರ್ಗಾವತಾರವ ತಳೆದು
ರಕ್ತವರ್ಣದ ಪೀತಾಂಬರ ಎಂಟು ಹಸ್ತದಿ ಭಯಂಕರ
ಆಯುಧಗಳ ಧರಿಸಿ ದಿವ್ಯ ಕಿರೀಟ ಕುಂಡಲಾದಿಗಳಿಂದ
ಹೊಳೆಯುತ್ತಾ ಕಂಸನಿಗೆ – ಏ ದುರುಳಾ ನಿನ್ನ ಕೊಲ್ಲುವ
ಕಾಲಾತ್ಮಕನು ಬೇರೆಡೆಯಲ್ಲಿ ಬೆಳೆಯುತಿಹನು
ಎಚ್ಚರ – ಎಂದಂದು ಅದೃಷ್ಯಳಾದಳು
ವಿವಧ ನಾಮರೂಪಗಳಾದ ಕಾಳಿ ದುರ್ಗೆಯಾಗಿ
ಲೋಕದೆಲ್ಲಡೆ ನೆಲಸಿದಳು

ದುರ್ಗೆಯ ನಿರ್ಗಮನದ ನಂತರದಿ ಕಂಸ ತಾನು
ದೈವದಿಂ ವಂಚಿಸಲ್ಪಟ್ಟವನಾದೆನೆಂದು ಮರುಗಿ
ವಸುದೇವ ದೇವಕಿಯರ ಕಾಲಿಗೆರಗಿ ಕ್ಷಮೆಯಾಚಿಸಿ
ಸಕಲ ಜೀವಿಗಳೂ ತಮ್ಮ ಪ್ರಾರಬ್ಧಕರ್ಮದನುಸಾರದಲಿ
ಹರ್ಷ ಶೋಕ ಜನನ ಮರಣಗಳನನುಭವಿಸುವರೆಂದು
ತಿಳಿದೂ ಅಶರೀರವಾಣಿಯ ಭಯದಿ ನಿಮ್ಮೆಲ್ಲ ನಿರಪರಾಧಿ
ಮಕ್ಕಳ ಹತ್ಯೆಗೈದರೂ ನನ್ನ ಪ್ರಾಣಾಪಹಾರಕ ಶಿಶುವು ಬೇರೆಲ್ಲೋ
ಹುಟ್ಟಿ ಬೆಳೆಯುತಿರಲು ನಿಮ್ಮ ಸೆರೆಯಲ್ಲಿಟ್ಟು ಹಿಂಸಿಸುವುದೆಷ್ಟು ಸರಿ
ಎಂದವರ ಸೆರೆಯಿಂ ಬಿಡಿಸಿದ

ನಂತರದಿ ಕಂಸ ತನ್ನ ಮಂತ್ರಿ ಮತ್ತಿತರ ಆಪ್ತ ಸಲಹೆಗಾರರೊಂದಿಗೆ
ಸಮಾಲೋಚಿಸಿ ಎಲ್ಲದಕೂ ಕಾರಣನು ಆ ವಿಷ್ಣುವೇ ಎಂದು ತೀರ್ಮಾನಿಸಿ
ಆ ವಂಚಕ ವಿಷ್ಣುವಿನ ನೆಚ್ಚಿನ ನೆಲೆಗಳಾದ ತುಳಸೀ ವೃಂದಾವನ ಗೋವುಗಳು
ಬ್ರಾಹ್ಮಣರು ಋಷಿಮುನಿಗಳು ಇವರ ಸ್ಥಳಗಳ ಧ್ವಂಸ ಮಾಡಿದರೆ
ಅವನು ನಿರ್ನಾಮನಾಗುವನು ಈಗಾಗಲೇ ಹುಟ್ಟಿ ಬೆಳೆಯುತ್ತಿರುವ
ಯೋಗಮಾಯೆಯ ಪ್ರಾಣಾಂತಕ ಶಿಶುವನ್ನು ಹುಡುಕಿ
ಹುಟ್ಟಿ ಹತ್ತುದಿನದೊಳಗಿರುವ ಎಲ್ಲ ಶಿಶುಗಳ ವಧಿಸಬೇಕೆಂಬ
ಸಲಹೆಯ ಮನ್ನಿಸಿ ಆಜ್ಞಾಪಿಸಿದ ಕಂಸ

ಮತಿಹೀನನಾಗಿ ಚಂಚಲಚಿತ್ತನಾಗಿ ಹೇಗಾದರೂ ತಾನು ಬದುಕಬೇಕೆಂಬ
ಸ್ವಾರ್ಥದಿ ತನ್ನ ರಾಜ್ಯದ ವಿವಿಧ ಭಾಗಗಳಿಗೆ ದುಷ್ಟರ ಕಳುಹಿಸಿದರೂ
ಪ್ರಾಣಭಯದಿ ತಲ್ಲಣಿಸುತ್ತಿದುದು ವಿಧಿನಿಯಮ

ಅತ್ತ ನಂದಗೋಕುಲದಲಿ ಯಶೋದೆ ತನ್ನ ಮಗ್ಗುಲಲಿ
ದಿವ್ಯ ಲಕ್ಷಣಯುತವಾದ ಪುರುಷ ಶಿಶುವ ಕಂಡು
ಮಹದಾನಂದಗೊಂಡು ಎಲ್ಲರೂ ಎಚ್ಚೆತ್ತು ಕ್ಷಣಮಾತ್ರದಿ
ಸುದ್ದಿ ನಂದಗೋಕುಲದ ಚತುರ್ದಿಕ್ಕುಗಳಿಗೂ ಹಬ್ಬಿತು

ಶುದ್ಧೋದಕದಲಿ ಮಂಗಳ ಸ್ನಾನ ಬ್ರಾಹ್ಮಣರ ಸ್ವಸ್ತಿವಾಚನ
ಜಾತಕಕರ್ಮಾದಿ ಮಂಗಳ ಕಾರ್ಯಗಳೆಲ್ಲವ ಆಚರಿಸಿ
ಬ್ರಾಹ್ಮಣರಿಗೆ ಗೋ ಭೂಮಿ ಹಿರಣ್ಯಾದಿ ದಾನಗಳಿತ್ತು
ದೇವತೆಗಳನ್ನೂ ಪಿತೃಗಳನ್ನೂ ವಿದ್ಯುಕ್ತ ರೀತಿಯಲಿ ಆರಾಧಿಸಿ
ನಂದಗೋಕುಲ ಆನಂದೋತ್ಸಾಹದಲಿ ನಲಿದಾಡಿತು.

(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=44061

-ಎಂ. ಆರ್.‌ ಆನಂದ, ಮೈಸೂರು

4 Comments on “ಕಾವ್ಯ ಭಾಗವತ 70 : ಶ್ರೀ ಕೃಷ್ಣ ಕಥೆ-7

  1. ಕಾವ್ಯ ಭಾಗವತ.. ಸುಲಲಿತವಾಗಿ ಓದಿಸಿಕೊಂಡುಹೋಗುತ್ತಿದೆ ಸಾರ್

  2. ಪ್ರಕಟಿಸಿದ “ಸುರಹೊನ್ನೆ” ಗೆ ತುಂಬು ಮನದ ಧನ್ಯವಾದಗಳು.

  3. ಅತ್ಯಪೂರ್ವವಾದ ಶ್ರೀಕೃಷ್ಣ ಜೀವನದ ಈ ಕಾವ್ಯ ಭಾಗವು ಬಹಳ ಸುಂದರ ರೂಪದಲ್ಲಿ ಮೂಡಿಬಂದಿದೆ. ಧನ್ಯವಾದಗಳು ಸರ್.

Leave a Reply to ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *