ಪರಾಗ

ವೃದ್ಧ ದಂಪತಿಗಳು ಮಾರಾಟಕಿದ್ದಾರೆ.

Share Button

ಬೆಳಗಿನ ಆರೂವರೆಯ ಸಮಯ. ಬೆಂಗಳೂರು ನಗರದ ಬಸವನಗುಡಿಯ ಒಂದು ಮುಖ್ಯ ಬೀದಿ. ಸದಾ ಗಿಜುಗುಡುವ ಜನಜಂಗುಳಿ. ಹತ್ತಾರು ವಾಹನಗಳ ಹಾರನ್ನಿನ ಸದ್ದು. ಜನಗಳ ಸರಬರ ಓಡಾಟ ನಡೆದಿತ್ತು. ಹಾಲು ಪ್ಯಾಕೆಟ್ ವಿತರಿಸುವ ಹುಡುಗರು ಮನೆಮನೆಗಳಿಗೆ ಧಾವಿಸುತ್ತಿದ್ದರು. ಮನೆಗಳ ಮುಂದೆ ಹೆಣ್ಣುಮಕ್ಕಳು ಬಾಗಿಲಿಗೆ ನೀರು ಸಿಂಪಡಿಸಿ ರಂಗೋಲಿ ಹಾಕುತ್ತಿದ್ದರು. ಬೀದಿಯಲ್ಲಿನ ಸಣ್ಣ ಕಾಂಡಿಮೆಂಟಲ್ ಸ್ಟೋರ್‌ಗಳ ಮುಂದೆ ಜನರು ಬಿಸಿ ಕಾಫಿ, ಟೀಗಾಗಿ ಸಾಲುಗಟ್ಟಿದ್ದರು. ದಿನಪತ್ರಿಕೆಗಳ ಬಂಡಲ್ ಕೂಡ ಸ್ಟೋರಿನ ಮುಂಭಾಗದಲ್ಲಿ ಜೋಡಿಸಿಡಲಾಗಿತ್ತು. ಜನಗಳಿಗೆ ಮುಂಜಾನೆಯ ಮೊದಲ ಕಾಫಿಯೊಡನೆ ಪತ್ರಿಕೆಯ ಹೆಡ್‌ಲೈನ್ಸ್ ಓದುವ ತವಕ. ಕಾಫಿ, ಟೀ ಖರ್ಚಾದಂತೆ ಪೇಪರ್‌ಗಳೂ ಗಡಿಬಿಡಿಯಿಂದ ಗ್ರಾಹಕರ ಕೈ ಸೇರುತ್ತಿದ್ದವು.

ಜಂಗುಳಿಯಲ್ಲಿದ್ದ ಕೆಲವು ಹಿರಿತಲೆಗಳು ಸುದ್ಧಿಗಳನ್ನು ಓದುತ್ತಿದ್ದಂತೆ ಗುಂಪುಗುಂಪಾಗಿ ಅದರ ಬಗ್ಗೆ ಮಾತನಾಡುತ್ತ ತಂತಮ್ಮ ಮನೆಗಳಿಗೋ ಅಥವಾ ವಾಕಿಂಗ್ ಹೋದಾಗ ಕೂರುತ್ತಿದ್ದ ಪಾರ್ಕುಗಳ ಬೆಂಚುಗಳತ್ತಲೋ ಸರಿದು ಹೋಗುತ್ತಿದ್ದರು. ಆ ದಿನ ಪತ್ರಿಕೆಯಲ್ಲಿ ಒಂದು maaಅಪರೂಪದ ಜಾಹೀರಾತು ಪ್ರಕಟಗೊಂಡಿತ್ತು. ಅದರ ಶೀರ್ಷಿಕೆಯೇ ಎಲ್ಲರ ಗಮನವನ್ನು ಸೆಳೆಯಿತು “ ವೃದ್ಧ ದಂಪತಿಗಳು ಮರಾಟಕಿದ್ದಾರೆ”. ಮನೆ, ಸೈಟು, ಅಂಗಡಿ, ಕಾರುಗಳು, ಸಾಕುನಾಯಿ, ದಿನಬಳಕೆಯ ಹಲವು ವಸ್ತುಗಳು ಮಾರಾಟಕ್ಕಿವೆ ಎಂದು ಅಡ್ವರ್ಟೈಸ್‌ಮೆಂಟ್ ಬರುವುದು ಸಾಮಾನ್ಯ. ಅಂಥಹುದರಲ್ಲಿ ವೃದ್ಧ ದಂಪತಿಗಳನ್ನು ಮಾರುವುದೇ? ಪಾರ್ಕಿನಲ್ಲಿ ಕುಳಿತಿದ್ದ ನಿವೃತ್ತ ತಹಶೀಲ್ದಾರ್ ವೆಂಕಟರಮಣ “ಇದ್ಯಾವೋನ್ರೀ ಈ ರೀತಿ ಕೊಟ್ಟಿದ್ದಾನೆ. ಅವನಿಗೆ ತಲೆಗಿಲೆ ಕೆಟ್ಟಿರಬೇಕು. ಅಲ್ರೀ ತಂದೆತಾಯಿಗಳಿಗೆ ವಯಸ್ಸಾದರೆ ಅವರನ್ನು ಮಾರಾಟಕ್ಕಿಡುವುದೇ? ಕಾಲ ಕೆಟ್ಟೋಯ್ತು ಛೇ..ಛೇ,,” ಎಂದು ಸಿಟ್ಟಿನಿಂದ ನುಡಿದರು.

ಎದುರುಗಡೆ ಬೆಂಚಿನ ಮೇಲೆ ಕುಳಿತಿದ್ದ ರಾಮಕೃಷ್ಣಪ್ಪನವರು ನಿವೃತ್ತ ಹೈಸ್ಕೂಲು ಮೇಷ್ಟರು “ನಮ್ಮ ಜನರ ನೈತಿಕತೆ ಈ ಕೆಳಮಟ್ಟಕ್ಕೆ ಇಳಿಯಿತೇ? ಅವನಿಗೆ ಕಲಿಸಿದ ಮೇಷ್ಟರು ಸರಿಯಾದ ರೀತಿ ಪಾಠ ಹೇಳಿಕೊಟ್ಟಿಲ್ಲ. ತಂದೆತಾಯಿಗಳು ದೇವರ ಸಮಾನರು. ಅವರನ್ನು ವೃದ್ಧಾಪ್ಯದಲ್ಲಿ ಮನೆಯಲ್ಲಿಟ್ಟುಕೊಂಡು ಪ್ರೀತಿಯಿಂದ ನೋಡಿಕೊಳ್ಳುವುದನ್ನು ಬಿಟ್ಟು ಅವರನ್ನು ಬಿಕರಿಮಾಡುವುದೇ? ಅವರು ತನ್ನನ್ನು ಸಾಕಿ ಸಲಹಿದವರೆಂಬ ಕೃತಜ್ಞತೆಯೂ ಇರಬೇಡವೇ?” ಎಂದು ಪೇಚಾಡಿಕೊಂಡರು. ಮೇಷ್ಟರ ಇಬ್ಬರು ಮಕ್ಕಳೂ ವಿದೇಶದಲ್ಲಿ ಕೆಲಸ ಮಾಡುತ್ತಿದ್ದರು ವರ್ಷಕ್ಕೋ ಎರಡು ವರ್ಷಕ್ಕೋ ಒಮ್ಮೆ ಕೆಲವು ದಿನಗಳ ಮಟ್ಟಿಗೆ ಬಂದು ಹೋಗುತ್ತಿದ್ದರು. ಬಸವನಗುಡಿಯಲ್ಲಿ ತಾವೇ ಕಟ್ಟಿಸಿದ್ದ ಮನೆಯಲ್ಲಿ ಗಂಡಹೆಂಡತಿ ಇಬ್ಬರೇ ವಾಸವಿದ್ದರು. ಆಗಾಗ ಮಕ್ಕಳು ಫೋನ್ ಮಾಡಿ ಮಾತನಾಡಿಸಿದ್ದನ್ನೇ ಗೆಳೆಯರ ಮುಂದೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ನಮ್ಮ ಮಗ ಹೊಸಮನೆ ಕೊಂಡನಂತೆ, ದೊಡ್ಡ ಕಾರು ಕೊಂಡನಂತೆ, ಅವನಿಗೆ ಕಂಪನಿಯಲ್ಲಿ ಭಡ್ತಿ ನೀಡಿ ಅವನೀಗ ಸೀನಿಯರ್ ಮೈನೇಜರ್ ಆಗಿದ್ದಾನಂತೆ. ಅವನಿಗದೆಷ್ಟೋ ಸಂಬಳ ಎಂದೆಲ್ಲಾ ಎದೆಯುಬ್ಬಿಸಿ ಹೇಳಿಕೊಂಡು ಬೀಗುತ್ತಿದ್ದರು. ಆದರೆ ಮೇಷ್ಟರ ಹೆಂಡತಿಗೆ ಹೋದವರ್ಷ ಹೊಟ್ಟೆಯಲ್ಲಿ ಕಲ್ಲಿದೆಯೆಂದು ಆಪರೇಷನ್ ಆದಾಗ ಮಕ್ಕಳಿಬ್ಬರಿಗೂ ತಿಳಿಸಿದರೂ ಯಾರೂ ಬಂದಿರಲಿಲ್ಲ. ನಿಜ ಆಗಾಗ ಸ್ವಲ್ಪ ಹಣವನ್ನು ಕಳುಹಿಸುತ್ತಿದ್ದರು. ಮೇಷ್ಟರು ಅವರಿಗೆ ಕೆಲಸದ ಒತ್ತಡ, ಬಿಡುವಾಗದೇ ಬರಲಿಕ್ಕಾಗಲಿಲ್ಲ ಎಂದು ಇವರೇ ಸಮಾಧಾನ ಪಟ್ಟುಕೊಂಡಿದ್ದರು.

ಪಕ್ಕದಲ್ಲಿ ಕುಳಿತಿದ್ದ ನಿವೃತ್ತ ಮಿಲಿಟರಿ ಅಫೀಸರ್ ಉತ್ತಪ್ಪನವರು “ಇಂಥಹ ನಿರ್ದಯಿಗಳಾದ ಮಕ್ಕಳನ್ನು ಗುಂಡಿಟ್ಟು ಕೊಂದುಬಿಡಬೇಕು. ನಾಲಾಯಕ್‌ಗಳು. ವಯಸ್ಸಾದ ತಂದೆತಾಯಿಗಳನ್ನು ಮಾರುವುದೇ ! ಮಹಾಪಾಪ” ಎಂದು ಗುಡುಗಿದರು. ಉತ್ತಪ್ಪನವರಿಗಿದ್ದವಳು ಒಬ್ಬಳೇ ಮಗಳು. ಕಾಲೇಜಿನಲ್ಲಿ ಓದುತ್ತಿರುವಾಗಲೇ ಸಹಪಾಠಿ ಕ್ರಿಶ್ಚಿಯನ್ ಹುಡುಗನೊಡನೆ ಓಡಿಹೋಗಿ ರಿಜಿಸ್ಟರ್ ಮದುವೆಯಾದಳು. ಉತ್ತಪ್ಪನವರು ಆಗಲೂ ಮನೆಯಲ್ಲಿ ಕೆಲವು ದಿನಗಳ ವರೆಗೂ ಸಿಡಿಗುಂಡಿನಂತೆ ಎಗರಾಡಿ ಏನೂ ಮಾಡಲಾಗದೆ ನಂತರ ತಣ್ಣಗಾಗಿದ್ದರು. ಕೆಲವು ವರ್ಷಗಳು ಕಳೆದಮೇಲೆ ಮಗಳು ಅಳಿಯನನ್ನು ಮನೆಗೆ ಸೇರಿಸಿಕೊಂಡರು. ಈಗ ಅವರಿಗೊಬ್ಬ ಮೊಮ್ಮಗನೂ ಇದ್ದಾನೆ. ಅಳಿಯ, ಮಗಳು ಇರುವುದು ಸಿಂಗಾಪುರದಲ್ಲಿ. ಇವರೂ ಹೆಂಡತಿಯೊಡನೆ ಒಮ್ಮೆ ಅಲ್ಲಿಗೆ ಹೋಗಿ ಬಂದರು. ಅಲ್ಲಿ ತಾವು ಕಂಡ ವಿಶೇಷತೆಗಳ ಬಗ್ಗೆ ಅನೇಕ ದಿನಗಳವರೆಗೆ ಹೇಳುತ್ತಲೇ ಇದ್ದರು. ಇಲ್ಲಿ ಇರುವವರು ಮಾತ್ರ ಇಬ್ಬರೇ ಉತ್ತಪ್ಪನವರು ಮತ್ತು ಹೆಂಡತಿ ಕಾವೇರಿ. ವಯೋಸಹಜವಾದ ಅನಾರೋಗ್ಯ ಉಂಟಾದರೆ ಅವರ ನೆರೆಹೊರೆಯವರೇ ನೆರವಾಗುತ್ತಾರೆ. ಮಕ್ಕಳು ಬರಲಾಗುವುದಿಲ್ಲ.

ಈ ಕಡೆ ಬೆಂಚಿನ ಮೇಲೆ ಕುಳಿತಿದ್ದ ಮಾಜಿ ಕಾರ್ಪೋರೇಟರ್ ಪರಮೇಶ್ವರ್‌ರವರು “ಇಂಥಹ ಬಡ್ಡೀಮಕ್ಕಳಿಗೆ ಸರ್ಕಾರ ಕಠಿಣವಾದ ಕಾನೂನು ಜಾರಿಗೆ ತಂದು ಜೈಲಿಗೆ ಅಟ್ಟಬೇಕು. ಹೋಗಲಿ ಇಲ್ಲಿ ಇಷ್ಟೊಂದು ವೃದ್ಧಾಶ್ರಮಗಳಿವೆ. ಕೆಲವೊಂದರಲ್ಲಿ ಹೆಚ್ಚು ಹಣ ಕಟ್ಟಿದರೆ ಸಕಲ ಸೌಲಭ್ಯಗಳೂ ದೊರೆಯುತ್ತವೆ. ಅದಕ್ಕಾದರೂ ಸೇರಿಸಬಹುದಾಗಿತ್ತು. ಅದು ಬಿಟ್ಟು ತಂದೆತಾಯಿಗಳನ್ನು ಮಾರಿ ಅದರಲ್ಲೂ ಹಣ ಸಂಪಾದಿಸುವ ನೀಚರಿಗೆ ಏನು ಶಿಕ್ಷೆ ಕೊಟ್ಟರೂ ಸಾಲದು” ಎಂದು ದೊಡ್ಡ ದನಿಯಲ್ಲಿ ಭಾಷಣ ಬಿಗಿದರು. ಆದರೆ ಜಾಹೀರಾತಿನಲ್ಲಿದ್ದ ಮಾಹಿತಿಯನ್ನು ಪೂರ್ಣವಾಗಿ ಯಾರೂ ಓದುವ ತಾಳ್ಮೆ ತೋರಲೇ ಇಲ್ಲ. ಸಮಯವಾಗುತ್ತಿದ್ದಂತೆ ಒಬ್ಬೊಬ್ಬರಾಗಿ ತಂತಮ್ಮ ಮನೆಗಳತ್ತ ನಡೆದುಹೋದರು.

ಅದೇ ದಿನ ಸಾಯಂಕಾಲದ ಸಮಯ. ದೇವಸ್ಥಾನದ ಮುಂದಿನ ಅಶ್ವತ್ಥಕಟ್ಟೆಯ ಮೇಲೆ ಗೃಹಿಣಿಯರು ಸೇರಿದ್ದರು. ಪತ್ರಿಕೆಯಲ್ಲಿ ಬಂದಿದ್ದ ಜಾಹಿರಾತಿನ ವಿಷಯ ಅವರವರ ಗಂಡಂದಿರಿಂದ ಇವರಿಗೆ ತಿಳಿದಿತ್ತು. ಬಾಯಿಯಿಂದ ಬಾಯಿಗೆ ಹರಡಿ ಊರಿಗೆಲ್ಲ ಅದೇ ದೊಡ್ಡ ಸುದ್ಧಿಯಾಗಿತ್ತು. ಶ್ರೀಕಂಠಶಾಸ್ತ್ರಿಗಳ ಪತ್ನಿ ಕಾಮಾಕ್ಷಮ್ಮನವರು “ಕೇಳಿದಿರೇನ್ರೀ ಸುಶೀಲಮ್ಮಾ, ತಂದೆತಾಯಿಗಳು ವಯಸ್ಸಾದವರೂ ಅಂತ ಅವರನ್ನು ಯಾರೋ ಮಾರಾಟಕ್ಕಿಟ್ಟಿದ್ದಾರಂತೆ. ಏನು ಕಾಲ ಬಂತಪ್ಪಾ, ನಮ್ಮ ಅತ್ತೆಯವರು ತೊಭತ್ತುಮೂರರವರೆಗೆ ಇದ್ದರು. ನಾವವರನ್ನು ಮಕ್ಕಳಂತೆ, ಅದರಲ್ಲೂ ಖಾಯಿಲೆ ಕಸಾಲೆಯಾದಾಗ ಜೋಪಾನವಾಗಿ ನೋಡಿಕೊಳ್ಳಲಿಲ್ಲವೇ. ಈಗ ನೋಡಿ ಎಂತಹ ಕಾಲ ಬಂದಿದೆ.” ಎಂದು ಹಲ್ಲಿಯಂತೆ ಲೊಚಗುಟ್ಟಿದರು. ವಾಸ್ತವವಾಗಿ ಅವರ ಮನೆಯಲ್ಲಿ ಅತ್ತೆ ಸೊಸೆಯರ ಜಗಳ ನಿರಂತರವಾಗಿ ನಡೆಯುತ್ತಿತ್ತು. ಅಕ್ಕಪಕ್ಕದವಗೆಲ್ಲರಿಗೂ ಗೊತ್ತು. ಇನ್ನೊಬ್ಬರ ಮನೆಯ ಒಳಗಿನ ವಿಚಾರಕ್ಕೆ ನಾವು ತಲೆಹಾಕಬಾರದು ಎಂದು ಸುಮ್ಮನಿರುತ್ತಿದ್ದರು. ಅಂತೂ ಕಾಮಾಕ್ಷಮ್ಮನವರ ಅತ್ತೆ ತೀರಿಕೊಂಡ ನಂತರ ಅಲ್ಲಿ ನೆಮ್ಮದಿ ನೆಲೆಸಿತ್ತು.

ದಿನಸಿ ಅಂಗಡಿ ಶ್ರೀನಿವಾಸಶೆಟ್ದರ ಕುಟುಂಬ ವಿಶಾಲಾಕ್ಷಮ್ಮನವರ ಚಿಂತೆಯೇ ಬೇರೆ ರೀತಿ. “ಅಲ್ಲರೀ ವಯಸ್ಸಾದ ದಂಪತಿಗಳನ್ನು ಯಾರು ಕೊಂಡುಕೊಳ್ತಾರೆ. ಅವರಿಗೇನೇನು ಖಾಯಿಲೆಗಳಿವೆಯೋ ಏನೋ. ಅವುಗಳ ಚಿಕಿತ್ಸೆಗೇ ಸಾಕಷ್ಟು ಹಣ ಖರ್ಚಾಗುತ್ತದೆ. ಜೊತೆಗೆ ಇನ್ಯಾವುದಾದರೂ ದೊಡ್ಡ ಖಾಯಿಲೆ ಅಮರಿಕೊಂಡರೆ ಅದು ವಾಸಿಯಗುವುದೇ ಇಲ್ಲ. ಅವರು ಸಾಯುವತನಕವೂ ಚಿಕಿತ್ಸೆ, ಶುಶ್ರೂಷೆ ಅಂತ ಆಸ್ಪತ್ರೆಗೇ ಲಕ್ಷಲಕ್ಷ ಸುರಿಯಬೇಕಾಗುತ್ತೆ. ಅಲ್ಲಾ ಇವರೇ ಬೀದೀಲಿ ಹೊಗೋ ಮಾರೀನ ಯಾರಾದರೂ ಮನೆಗೆ ಕರೆತರುತ್ತಾರೆಯೇ?. ಅಂಥವರನ್ನು ಕೊಳ್ಳುವುದು ಹುಚ್ಚುತನವಾಗುತ್ತದೆ ಅಷ್ಟೇ” ಎಂದು ಖರ್ಚುವೆಚ್ಚಗಳ ಲೆಕ್ಕಚಾರ ಹಾಕಿ ಹೇಳಿದರು.

ಲಾಯರ್ ಗುಣಶೇಖರ್‌ರವರ ಪತ್ನಿ ಮೂಕಾಂಬಿಕೆ ಮುಂದೆ ಬಂದು “ಅಲ್ರೀ ಇವರಲ್ಲಿ ಯಾರೂ ಪೇಪರಿನಲ್ಲಿರೋ ಜಾಹೀರಾತಿನಲ್ಲಿರುವ ಪೂರ್ಣ ಪಾಠವನ್ನೇ ಓದಿಲ್ಲ. ಅದರಲ್ಲಿ ಅನೇಕ ನಿಬಂಧನೆ ಹಾಕಿದ್ದಾರೆ. ಕೊಂಡುಕೊಳ್ಳುವ ಆಸಕ್ತರು ವಿವಾಹಿತ ದಂಪತಿಗಳಾಗಿರಬೇಕು. ಅವರಿಗೆ ಮಕ್ಕಳೂ ಇರಬೇಕು. ವೃದ್ದ ದಂಪತಿಗಳ ಮಾರಾಟದ ಬೆಲೆ ಹತ್ತು ಲಕ್ಷ ರೂಪಾಯಿಗಳು. ಕೊಳ್ಳುವ ಆಸಕ್ತರು ಕೆಳಗೆ ನೀಡಿರುವ ಬ್ಯಾಂಕಿನ ಅಕೌಂಟಿಗೆ ಮುಂಗಡವಾಗಿ ಶೇ10 ಅಂದರೆ ಒಂದು ಲಕ್ಷ ರೂಪಾಯಿಗಳನ್ನು ಜಮಾ ಮಾಡಿದ ನಂತರವೇ ಕೆಳಗೆ ಸೂಚಿಸಿರುವ ಫೋನ್ ನಂಬರಿಗೆ ಸಂಪರ್ಕಿಸಬೇಕು. ಅವರನ್ನು ನಿರ್ದಿಷ್ಟ ಸ್ಥಳದಲ್ಲಿ ಭೇಟಿಗಾಗಿ ಆಹ್ವಾನಿಸಲಾಗುವುದು. ಭೇಟಿಯ ಸಮಯದ ಮಾತುಕತೆಗಳಲ್ಲಿ ಅರ್ಜಿದಾರರು ವೃದ್ಧರನ್ನು ಕೊಂಡುಕೊಳ್ಳಲು ಅರ್ಹರೇ ಎಂಬುದನ್ನು ನಿರ್ಧಾರ ಮಾಡಲಾಗುವುದು. ಒಂದು ವೇಳೆ ಅವರು ಅನರ್ಹರೆಂದು ಕಂಡುಬಂದಲ್ಲಿ ಮುಂಗಡ ಹಣವನ್ನು ಅವರಿಗೆ ಹಿಂದಿರುಗಿಸಲಾಗುವುದು. ಹೆಚ್ಚಿನ ವಿವರಗಳು ಹೀಗಿವೆ: ಮಾರಾಟಕ್ಕಿರುವ ಗಂಡಸಿಗೆ 91 ವರ್ಷಗಳು, ಅವರಿಗೆ ಈಗ ಮರೆವಿನ ಖಾಯಿಲೆ ಪ್ರಾರಂಭವಾಗಿದೆ. ಹೆಂಡತಿಗೆ 89 ವರ್ಷಗಳು. ಆಕೆಗೆ ಸ್ವತಂತ್ರವಾಗಿ ನಡೆದಾಡಲಾಗದು. ವಾಕಿಂಗ್ ಸ್ಟಿಕ್ ಸಹಾಯದಿಂದ ಓಡಾಡುತ್ತಾಳೆ. ನಮ್ಮ ಯಜಮಾನರು ವಕೀಲರು. ಎಲ್ಲವನ್ನೂ ಕೂಲಂಕುಷವಾಗಿ ಓದಿನೋಡಿ ಇದೊಂದು ಮೋಸಮಾಡುವ ಹುನ್ನಾರದ ಜಾಹೀರಾತು ಎಂದು ಹೇಳಿದರು”.

ಮೂಕಾಂಬಿಕೆಯ ಮಾತುಗಳನ್ನು ಕೇಳಿದ ಮೇಲೆ ಎಲ್ಲ ಗೃಹಿಣಿಯರೂ ಮೌನ ತಾಳಿದರು. “ಇದ್ದರೂ ಇರಬಹುದು. ಒಂದು ಲಕ್ಷ ಜಮಾ ಮಾಡಿದ ಮೇಲೆ, ಆ ಪಾರ್ಟಿ ಗಾಯಬ್ ಆದರೆ ಏನು ಮಾಡಲಾಗುತ್ತದೆ. ಹೋಗಲಿ ಬಿಡಿ,. ನಮಗೇಕೆ ಬೇಡದ ಉಸಾಬರಿ” ಎಂದು ಎಲ್ಲರೂ ಮನೆಗಳತ್ತ ಹೆಜ್ಜೆ ಹಾಕಿದರು. ಅಂದಿಗೆ ಪ್ರಕರಣಕ್ಕೆ ಮುಕ್ತಾಯ ಹಾಡಿದರು. ಹೀಗೇ ಬಿಸಿಬಿಸಿಯಾಗಿ ಚರ್ಚಿಸಿದರೂ ಆರಿದಮೇಲೆ ವಿಷಯವನ್ನು ಮರೆತೂಬಿಟ್ಟರು.
ಜಯನಗರದ ಮೂರನೆಯ ಬ್ಲಾಕಿನ ಮನೆಯೊಂದರಲ್ಲಿದ್ದ ಮಧುಕರ, ಮಾಧುರಿ ದಂಪತಿಗಳು ಈ ಜಾಹಿರಾತನ್ನು ಎರಡೆರಡು ಸಾರಿ ಓದಿದರು. ಮಧುಕರನು “ಮಾಧುರಿ ನಾವಿಬ್ಬರೂ ನಮ್ಮ ಬಾಲ್ಯದಲ್ಲಿ ತಂದೆತಾಯಿಗಳ ಪ್ರೀತಿಯೇನೆಂಬುದನ್ನು ಅರಿಯೆವು. ನತದೃಷ್ಠರು. ಆದರೆ ನಮ್ಮ ಪುಟ್ಟ ಮಕ್ಕಳಿಗಾದರೂ ಅಜ್ಜಿ, ತಾತ ಸಂಬಂಧಗಳ ಪರಿಚಯ ಮಾಡಿಕೊಡುವ ಆಸೆ ನನಗಿದೆ. ನಾವು ಅಮೆರಿಕೆಯಲ್ಲಿ ಒಳ್ಳೆಯ ನೌಕರಿಯಲ್ಲಿದ್ದರೂ ಮಕ್ಕಳನ್ನು ನಮ್ಮದೇ ವಾತಾವರಣದಲ್ಲಿ ಭಾರತೀಯ ಕೌಟುಂಬಿಕ ಹಿನ್ನೆಲೆಯಲ್ಲಿ ಬೆಳೆಸಬೇಕೆಂಬ ಉದ್ದೇಶದಿಂದ ಹಿಂದಿರುಗಿ ಬಾರತಕ್ಕೆ ಬಂದೆವು. ಇಲ್ಲಿನ ಸಂಸ್ಕಾರ, ಸಂಸ್ಕೃತಿ, ಸಂಪ್ರದಾಯಗಳನ್ನು ಅವರು ಅರಿಯಲಿ. ನನಗನ್ನಿಸುತ್ತಿದೆ ಇದೀಗ ನಮಗೆ ಅಂತಹದ್ದೊಂದು ಅವಕಾಶ ಅನಾಯಾಸವಾಗಿ ದೊರಕುತ್ತಿದೆ” ಎಂದ.

“ನೀವೇನು ಹೇಳುತ್ತಿದ್ದೀರಿ ಸ್ವಲ್ಪ ಬಿಡಿಸಿ ಹೇಳಿ” ಎಂದಳು ಮಾಧುರಿ.
“ಇಂತಹ ಜಾಹಿರಾತು ನೀಡಿದವರು ಯಾರೋ ತುಂಬ ಬುದ್ಧಿವಂತರಿರಬೇಕು. ವೃದ್ಧ ದಂಪತಿಗಳನ್ನು ಯಾವುದಾದರೂ ವೃದ್ಧಾಶ್ರಮಕ್ಕೆ ಸೇರಿಸಿ ಕೈ ತೊಳೆದುಕೊಳ್ಳುವ ಬದಲಾಗಿ ಅವರನ್ನು ಮಾರಾಟಕ್ಕಿಟ್ಟಿದ್ದಾರೆ. ಇದರರ್ಥ ಆ ವೃದ್ಧರಿಗೆ ಒಂದು ಕುಟುಂಬದ ಸಹವಾಸ ಬೇಕಾಗಿದೆ. ಅದಕ್ಕಾಗಿಯೇ ಅವರು ಆಸಕ್ತರನ್ನು ಮೊದಲು ಮಾತುಕತೆಗಾಗಿ ಕರೆದಿದ್ದಾರೆ. ಅಲ್ಲಿ ಕೊಳ್ಳುವವರು ಅರ್ಹರೇ ಎಂಬುದನ್ನು ಖಚಿತ ಪಡಿಸಿಕೊಳ್ಳುವರಂತೆ. ಉದಾಹರಣೆಗೆ ಒಂದು ಮಗುವನ್ನು ದತ್ತು ಪಡೆದುಕೊಳ್ಳಬೇಕಾದರೆ ಹಲವಾರು ನಿಯಮಾವಳಿಗಳಿವೆ. ಅವನ್ನೆಲ್ಲ ಪಾಲಿಸಿ ಅರ್ಹರಾದವರಿಗೆ ಮಾತ್ರ ಪರಿಶೀಲನಾನಂತರ ಅನುಮತಿ ನೀಡುತ್ತಾರೆ. ಇದೂ ಅದೇರೀತಿ, ವೃದ್ಧ ತಂದೆತಾಯಿಗಳನ್ನು ಅರ್ಹ ದಂಪತಿಗಳು ದತ್ತು ಪಡೆಯುವುದು. ಆದರೆ ಇಲ್ಲಿ ಶುಲ್ಕ ಪಾವತಿ ಮಾಡಬೇಕಾದ ನಿಬಂಧನೆಯಿದೆ” ಎಂದ ಮಧುಕರ.

“ಈಗ ನನಗೆ ಸರಿಯಗಿ ಅರ್ಥವಾಯಿತು. ನಾವೀಗ ಭಾರತಕ್ಕೆ ಬಂದು ನಮ್ಮದೆ ಸ್ವಂತ ತಂತ್ರಜ್ಞಾನದ ಕಂಪನಿ ನಡೆಸುತ್ತಿದ್ದೇವೆ. ನೂರಾರು ಜನರು ಇದರಲ್ಲಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಮಕ್ಕಳಿನ್ನೂ ಪ್ರಾಥಮಿಕಶಾಲಾ ಹಂತದಲ್ಲಿದ್ದಾರೆ. ನಾವು ವಾಸ ಮಾಡುತ್ತಿರುವ ‘ಪ್ರಸನ್ನ ಕಮ್ಯನಿಟಿ’ಯ ನೂರಾರು ಫ್ಲಾಟುಗಳಲ್ಲಿರುವ ಮಕ್ಕಳು ಒಳ್ಳೆಯ ಶಾಲೆಗಳಿಗೆ ಹೋಗಿ ಬರುತ್ತಾರೆ. ಇಲ್ಲಿಯ ಸೊಸೈಟಿಯ ಕಾರ್ಯಕ್ರಮಗಳಲ್ಲಿ ನಾವೂ ಎಲ್ಲರೊಡನೆ ಭಾಗಿಯಾಗುತ್ತಿರುತ್ತೇವೆ. ಸಮಾರಂಭಗಳು ನಡೆಯುವಾಗ, ಸಂಜೆಹೊತ್ತು ಆಟವಾಡಿ ಹೊರಗೆ ಕುಳಿತಿರುವಾಗ ಎಷ್ಟೋ ಅಜ್ಜಿ ತಾತಂದಿರು ತಮ್ಮ ಮೊಮ್ಮಕ್ಕಳ ಸಂಗದಲ್ಲಿ ಸಂತೋಷವಾಗಿರುವುದನ್ನು ಕಂಡಿದ್ದೇವೆ. ಕೆಲವು ಸಾರಿ ನಮ್ಮ ಪುಟ್ಟ ಯಶು “ಅಮ್ಮಾ ನಮಗೆ ಅಜ್ಜಿ ತಾತ ಎಲ್ಲಿದ್ದಾರೆ? ಅವರೇಕೆ ಇಲ್ಲಿಗೆ ಬರುತ್ತಿಲ್ಲ. ನನ್ನ ಫ್ರೆಂಡ್ ಮನೆಯಲ್ಲಿ ಅವರಜ್ಜಿ ತಾತನವರು ಅವನಿಗೆ ರಾತ್ರಿಹೊತ್ತು ಚಂದದ ಕಥೆಗಳನ್ನು ಹೇಳುತ್ತಾರೆ. ಅವನೊಡನೆ ಅವರು ಇಂಡೋರ್ ಗೇಮ್ಸ್ ಕೂಡ ಆಡುತ್ತಾರೆ. ಅವನು ಮಲಗುವಾಗಲೂ ಅವರೊಂದಿಗೇ ಅಂತೆ. ಎಷ್ಟು ಚೆನ್ನಾಗಿರುತ್ತದೆ ಅಲ್ವಾ? ಎಂದು ಕೇಳಿದ್ದುಂಟು. ಆಗ ನಾನು ಉಪಾಯವಾಗಿ ಅವರು ದೂರದ ಊರಿನಲ್ಲಿದ್ದಾರೆ ಎಂದು ಏನೋ ಸಮಾಧಾನಹೇಳಿದ್ದೆ. ಈಗ ನೀವು ಹೇಳುತ್ತಿರುವುದನ್ನು ಕೇಳಿದರೆ ನಾವೇಕೆ ಒಂದು ಛಾನ್ಸ್ ತೆಗೆದುಕೊಳ್ಳಬಾರೆದು ಅನ್ನಿಸುತ್ತದೆ. ಒಂದೆ ವೇಳೆ ಅವರಿಗೆ ನಮ್ಮನ್ನು ಕಂಡು ಇಷ್ಟವಾದರೆ ನಮ್ಮಾಸೆ, ಮತ್ತು ಮಕ್ಕಳಾಸೆ ಎರಡೂ ನೆರವೇರಬಹುದು. ನಮಗೂ ಹಿರಿಯರೊಡನೆ ಸಹವಾಸ, ಮಕ್ಕಳಿಗೆ ಅಜ್ಜಿ ತಾತನ ಸಂಬಂಧ” ಎಂದಳು ಮಾಧುರಿ.

“ಹೌದು ಮಾಧುರಿ ನಾವೇಕೆ ಪ್ರಯತ್ನಿಸಬಾರದು. ನಮ್ಮ ಆರ್ಥಿಕ ಸ್ಥಿತಿಯಲ್ಲಿ ಆ ವೃದ್ಧರಿಗೆ ವೈದ್ಯಕೀಯ ಚಿಕಿತ್ಸೆ ಆವಶ್ಯಕವಿದ್ದರೆ ಕೊಡಿಸಲೂ ಸಾಧ್ಯವಿದೆ. ಕುಟುಂಬವಾಸದ ಹಿತಕರ ವಾತಾವರಣದಲ್ಲಿ ಅವರ ಆರೋಗ್ಯ ಸುಧಾರಿಸಿ ಹೆಚ್ಚುಕಾಲ ನಮ್ಮೊಡನೆ ಇರುವಂತಾಗಬಹುದು. ನೀನೊಪ್ಪಿದರೆ ನಾನೀಗಲೇ ಅವರ ಅಕೌಂಟಿಗೆ ಒಂದು ಲಕ್ಷರೂಪಾಯಿಗಳನ್ನು ಟ್ರಾನ್ಸ್ ಫರ್ ಮಾಡಿ ಭೇಟಿಗಾಗಿ ಸಮಯ ನಿಗದಿ ಪಡಿಸಿಕೊಳ್ಳುತ್ತೇನೆ” ಎಂದನು ಮಧುಕರ.
“ಹಾಗೇ ಮಾಡಿ” ಸಮ್ಮತಿಸಿದಳು ಮಾಧುರಿ.

ಜಾಹೀರಾತುದಾರರಿಂದ ಮಾಹಿತಿ ಬಂದಿತು. ಮುಂದಿನ ಭಾನುವಾರ ಹತ್ತುಗಂಟೆಯ ವೇಳೆಗೆ ಮಧುಕರ, ಮಾಧುರಿ ತಮ್ಮೆರಡು ಮಕ್ಕಳೊಡನೆ ಕನಕಪುರ ರಸ್ತೆಯಲ್ಲಿ ಸಿಟಿಯಿಂದ ಸುಮಾರು ಹನ್ನೆರಡು ಕಿಲೊಮೀಟರ್ ದೂರದ ವಿಳಾಸವೊಂದಕ್ಕೆ ಬರಬೇಕೆಂದು ಆಹ್ವಾನಿಸಲಾಗಿತ್ತು.

ಅದರಂತೆಯೇ ಬೇಗನೆದ್ದು ಸಿದ್ಧರಾಗಿ ಮಕ್ಕಳನ್ನೂ ಸಿದ್ಧಗೊಳಿಸಿ ಹೋಗುತ್ತಿರುವಾಗಲೇ ಕನಕಪುರ ರಸ್ತೆಯಲ್ಲೇ ಒಂದು ರೆಸ್ಟೋರೆಂಟಿನಲ್ಲಿ ಬ್ರೇಕ್‌ಫಾಸ್ಟ್ ಮುಗಿಸಿ ಹೋಗಬೇಕಾದ ಅಡ್ರೆಸ್ಸಿಗೆ ತಲುಪಿದರು. ಮುಖ್ಯರಸ್ತೆಯಿಂದ ಎಡಗಡೆಗೆ ತಿರುಗಿದರೆ ಒಂದು ಸಣ್ಣ ಮೋಟಾರುರಸ್ತೆ, ಹಾಗೇ ಸಾಗಿದರೆ ಸುಮಾರು 800 ಮೀಟರ್ ನಂತರ ಒಂದು ಹಳೆಯಕಾಲದ ಭವ್ಯವಾದ ಮನೆಯಿತ್ತು. ಮನೆಯ ಸುತ್ತ ಹೂದೋಟ. ಗಾಳಿ ಸ್ವಚ್ಛವಾಗಿತ್ತು. ವಾತಾವರಣ ಹಿತಕರವಾಗಿತ್ತು. ಮನೆಯ ಮುಂಭಾಗದ ಪೋರ್ಟಿಕೋದಲ್ಲಿ ವೋಕ್ಸ್ವ್ಯಾಗನ್ ಕಾರು ನಿಂತಿತ್ತು. ಅಲ್ಲಿಂದ ಮೆಟ್ಟಿಲು ಹತ್ತಿದರೆ ಮುಂಬಾಗಿಲು. ಕರೆಗಂಟೆ ಒತ್ತಿ ನಾಲ್ಕೈದು ನಿಮಿಷಗಳಾದಮೇಲೆ ಬಾಗಿಲು ತೆರೆಯಿತು. ಎತ್ತರದ ಆರೋಗ್ಯಕರ ಮುಖಚರ್ಯೆಯ ವೃದ್ಧರೊಬ್ಬರು ಕಾಣಿಸಿದರು. ಅವರು ತುಂಬುತೋಳಿನ ಷರ್ಟ್, ಗರಿಮುರಿಯಾದ ಟ್ರೌರ‍್ಸ್ ಧರಿಸಿದ್ದರು, ನೀಟಾಗಿ ಟಕ್ ಮಾಡಿಕೊಂಡಿದ್ದರು. ಮನೆಯಲ್ಲಿದ್ದರೂ ಕಾಲಿನಲ್ಲಿ ಕ್ಯಾನ್ವಾಸ್ ಶೂಸಿದ್ದವು. ನೋಟದಿಂದಲೇ ಅವರು ತುಂಬ ಶಿಸ್ತಿನ ಮನುಷ್ಯರೆನ್ನಬಹುದಾಗಿತ್ತು.

ಮಧುಕರ ಮಾಧುರಿ ತಮ್ಮ ಪರಿಚಯ ಹೇಳಿಕೊಂಡರು. ಅವರು “ನಾನು ನಿಮಗಾಗಿಯೇ ಕಾಯುತ್ತಿದ್ದೆ ಒಳಗೆ ಬನ್ನಿ” ಎಂದು ಆಹ್ವಾನಿಸಿದರು. ಅಲ್ಲಿದ್ದ ಸೋಫಾದ ಮೇಲೆ ಕುಳಿತುಕೊಂಡರು. ಮಕ್ಕಳಿಗೆ ಮನೆಯಲ್ಲೇ ತಾಯಿ ಹೇಳಿಕೊಟ್ಟಿದಂತೆ ಗಂಭೀರವಾಗಿ ಅಪ್ಪ ಅಮ್ಮನ ಪಕ್ಕದಲ್ಲಿ ಕುಳಿತರು. ವೃದ್ಧರ ಮುಖದಲ್ಲಿ ಮಾಸದ ಮುಗುಳ್ನಗೆ “ನೀವು ನಮ್ಮ ಜಾಹೀರಾತನ್ನು ಪೂರ್ತಿಯಾಗಿ ಓದಿ ಅರ್ಥಮಾಡಿಕೊಂಡು ಇಲ್ಲಿಗೆ ಬಂದದ್ದು ತುಂಬ ಸಂತೋಷ. ಮೊದಲು ನಿಮ್ಮ ಪೂರ್ಣ ಪರಿಚಯ, ಕೌಟುಂಬಿಕ ಹಿನ್ನೆಲೆಗಳನ್ನು ವಿವರವಾಗಿ ತಿಳಿಸಿ” ಎಂದರು.

“ಸರ್ ನನ್ನ ಹೆಸರು ಮಧುಕರ, ಈಕೆ ನನ್ನ ಪತ್ನಿ ಮಾಧುರಿ. ನಾವಿಬ್ಬರು ಸಾಫ್ಟ್ವೇರ್ ಇಂಜಿನಿಯರ್‌ಗಳು. ನಾವು ಅಮೆರಿಕೆಯಲ್ಲಿ ಒಂದೇ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದೆವು. ಅಲ್ಲಿಯೆ ಪರಸ್ಪರ ಪರಿಚಯವಾಯಿತು. ನಾನು ಚಿಕ್ಕ ವಯಸ್ಸಿನಲ್ಲಿಯೇ ನನ್ನ ತಂದೆತಾಯಿಗಳನ್ನು ಕಳೆದುಕೊಂಡೆ. ನನ್ನ ತಂದೆಯ ತಾಯಿ, ನನ್ನಜ್ಜಿಯವರು ಸ್ಕೂಲ್‌ಟೀಚರ್ ಆಗಿದ್ದರು. ಅವರು ನನ್ನನ್ನು ಸಾಕಿ, ಸಲಹಿ, ಓದಿಸಿದರು. ನಾನು ಅವರ ನಿರೀಕ್ಷೆಯಂತೆ ಉತ್ತಮ ದರ್ಜೆಯಲ್ಲಿ ತೇರ್ಗಡೆಯಾಗಿ ಕ್ಯಾಂಪಸ್ ಸೆಲೆಕ್ಷನ್ ನಲ್ಲಿ ಆಯ್ಕೆಯಾಗಿ ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸಕ್ಕೆ ಸೇರಿದೆ. ಕೆಲವು ಕಾಲದ ನಂತರ ನನಗೆ ಭಡ್ತಿನೀಡಿ ಕಂಪನಿಯ ವತಿಯಿಂದಲೆ ಅಮೆರಿಕಕ್ಕೆ ಕಳುಹಿಸಿದರು. ಅಲ್ಲಿ ಮಾಧುರಿ ಕೆಲಸ ಮಾಡುತ್ತಿದ್ದಳು. ಮಾಧುರಿಯ ತಂದೆತಾಯಿಗಳು ಒಂದು ವಾಹನ ಅಪಘಾತದಲ್ಲಿ ತೀರಿಕೊಂಡರು. ಆಗ ಆಕೆಯಿನ್ನೂ ಚಿಕ್ಕವಳು. ಅವಳು ಒಂದು ಆಶ್ರಯಧಾಮದಲ್ಲಿ ಬೆಳೆದಳು. ಆಕೆ ಕಷ್ಟಪಟ್ಟು ಬಿ.ಇ., ಮುಗಿಸಿ ಈ ಕಂಪನಿಯಲ್ಲಿ ಕೆಲಸ ಪಡೆದುಕೊಂಡಿದ್ದಳು. ಕೆಲವು ವರ್ಷಗಳ ಹಿಂದೆ ನನ್ನನ್ನು ಸಾಕಿಬೆಳೆಸಿದ ಅಜ್ಜಿಯವರೂ ನಿಧನರಾದರು. ಇಬ್ಬರಿಗೂ ಹತ್ತಿರದ ಬಂಧುಗಳಾರೂ ಇಲ್ಲದ್ದರಿಂದ ನಾವಿಬ್ಬರೂ ಒಬ್ಬರಿಗೊಬ್ಬರು ಆತ್ಮಿಯರಾದೆವು, ಬಂಧುಗಳಾದೆವು, ನಂತರ ಪತಿಪತ್ನಿಯರಾದೆವು. ಹಲವಾರು ವರ್ಷಗಳು ಅಲ್ಲಿಯೇ ಕೆಲಸ ಮಾಡಿ ಸಾಕಷ್ಟು ಹಣ ಗಳಿಸಿದೆವು. ನಮ್ಮ ಇಬ್ಬರು ಮಕ್ಕಳೂ ಅಲ್ಲಿಯೇ ಹುಟ್ಟಿದರು. ನಾವೇಕೆ ಭಾರತಕ್ಕೆ ಹಿಂದಿರುಗಿ ನಮ್ಮದೇ ಸ್ವತಂತ್ರ ಪುಟ್ಟ ಕಂಪನಿಯನ್ನು ತೆರೆಯಬಾರದೆಂಬ ಬಯಕೆ ಉಂಟಾಯಿತು. ನಮ್ಮ ಮಕ್ಕಳು ಅಲ್ಲಿನ ವಾತಾವರಣದಲ್ಲಿ ಬೆಳೆಯುವುದು ನಮಗಿಷ್ಟವಿರಲಿಲ್ಲ. ನಮ್ಮ ಊರಿನಲ್ಲಿ ನಮ್ಮ ಕುಟುಂಬ ವ್ಯವಸ್ಥೆಯಲ್ಲಿ ನಮ್ಮದೇ ಸಂಸ್ಕಾರ, ನಡೆನುಡಿಗಳು ಅವರಿಗೆ ದೊರಕಲಿ ಎಂಬ ಆಶಯದೊಂದಿಗೆ ಭಾರತಕ್ಕೆ ಹಿಂದಿರುಗಿದೆವು.

ಬೆಂಗಳೂರಿನಲ್ಲಿ ವಾಸವಿದ್ದು ನಮ್ಮ ಆಸೆಯ ಕೈಗೂಸಾಗಿ “ಅಪೂರ್ವ ಸೊಲ್ಯೂಷನ್ಸ್” ಎಂಬ ಪುಟ್ಟ ಕಂಪನಿಯನ್ನು ಪ್ರಾರಂಭಿಸಿದೆವು. ಚೆನ್ನಾಗಿ ವ್ಯವಹಾರ ಕುದುರಿದೆ. ನೂರೈವತ್ತು ಜನರು ನಮ್ಮಲ್ಲಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಮಕ್ಕಳು “ಯಶು” ಮತ್ತು “ಸುಶಿ”ಗೆ ನಮ್ಮ ರೀತಿಯ ಕುಟುಂಬ ವ್ಯವಸ್ಥೆಯ ವಾತಾವರಣದಲ್ಲಿ ಬೆಳೆಯಲು ಅವಕಾಶ ಸಿಕ್ಕಿದೆ. ನನಗೂ ತಂದೆ ತಾಯಿಗಳಿಲ್ಲ, ಮಾಧುರಿಗೂ ಆ ಭಾಗ್ಯವಿಲ್ಲ. ಅವರ ಪ್ರೀತಿ ವಿಶ್ವಾಸಗಳೆಂದರೆ ಏನು ಎಂಬುದು ಕಲ್ಪನೆಯೇ ಹೊರತು ವಾಸ್ತವಿಕ ಅನುಭವಗಳಿಲ್ಲ. ಅದಕ್ಕಾಗಿ ನಾವು ಹಾತೊರೆದಿದ್ದೇವೆ. ಆದ್ದರಿಂದ ಈ ಜಾಹಿರಾತಿನ ಪ್ರೇರಣೆಯಿಂದ ನಾವು ವೃದ್ಧ ದಂಪತಿಗಳನ್ನು ಪಡೆದುಕೊಂಡರೆ ನಮ್ಮ ಆಸೆಯು ಕೈಗೂಡಬಹುದೆಂಬ ಆಶಯ. ನಾವು ಅವರನ್ನು ಪ್ರೀತಿಯಿಂದ ಆರೈಕೆ ಮಾಡಿ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡುತ್ತೇವೆ. ಈಗ ನಾವು ಅವರನ್ನು ಭೇಟಿ ಮಾಡಲು ಬಯಸುತ್ತೇವೆ. ದಯವಿಟ್ಟು ಅವರನ್ನು ಕರೆಯಿರಿ” ಎಂದರು ಮಧುಕರ, ಮಾಧುರಿ .

ಅಲ್ಲಿದ್ದ ಹಿರಿಯರು ಎದ್ದು ಒಳಕ್ಕೆ ಹೋಗಿ ಹಿರಿಯ ಮಹಿಳೆಯೊಂದಿಗೆ ಬಂದರು. ಮಧುಕರ ಮಾಧುರಿಗೆ ಆಶ್ಚರ್ಯವಾಯಿತು. ಆಕೆ ಗೌರವರ್ಣದ ಸೌಮ್ಯ ಮುಖಚರ್ಯೆಯ ಸುಂದರ ಹೆಂಗಸು. ಭಾರತೀಯ ನಾರಿಯರಂತೆ ಸೀರೆಯುಟ್ಟು ಹಣೆಯಲ್ಲಿ ಕುಂಕುಮವಿಟ್ಟು ಸಾಲಂಕೃತವಾಗಿದ್ದ ಹೆಣ್ಣುಮಗಳು. ಅವರು ಬಂದು ಹಿರಿಯರ ಪಕ್ಕದಲ್ಲಿ ಆಸೀನರಾದರು.

ಮಧುಕರ ದಂಪತಿಗಳನ್ನು ಮೊದಲು ಭೇಟಿಯಾದ ವೃದ್ಧರು “ನಮ್ಮ ಪರಿಚಯವನ್ನು ನಾನೀಗ ಮಾಡಿಕೊಡುತ್ತೇನೆ. ನಾನು ಮೇಜರ್ ಜನಾರ್ಧನ್, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತ. ಈಕೆ ನನ್ನ ಪತ್ನಿ ಡಾ|| ಸರೋಜಾ. ವೈದ್ಯಳು, ಮಕ್ಕಳ ಚಿಕಿತ್ಸಾ ತಜ್ಞೆ. ನಾವಿಬ್ಬರೂ ಪ್ರೀತಿಸಿ ಮದುವೆಯಾದವರು. ನಮಗೆ ಮೊದಲಿನಿಂದಲೂ ನಮ್ಮ ವೃತ್ತಿಗಳಲ್ಲಿ ಬದ್ಧತೆ ಹೆಚ್ಚು. ಬಿಡುವು ದೊರೆಯುತ್ತಿರಲಿಲ್ಲ. ಹಾಗಾಗಿ ನಿವೃತ್ತರಾದ ಮೇಲೆ ನಗರದಿಂದ ದೂರದಲ್ಲಿರುವ ಈ ಪ್ರಶಾಂತವಾದ ವಾತಾವರಣದಲ್ಲಿ ಮನೆ ಕಟ್ಟಿಸಿಕೊಂಡು ವಾಸವಾಗಿದ್ದೇವೆ. ನಮ್ಮ ಹವ್ಯಾಸಗಳೆಂದರೆ ಪ್ರವಾಸ ಹೋಗುವುದು, ಗೆಳೆಯರೊಡನೆ ಕಾಲಕಳೆಯುವುದು, ತೋಟಗಾರಿಕೆ ಮತ್ತು ಓದುವುದು. ನಮಗೆ ಯಾವುದಕ್ಕೂ ಕೊರತೆಯಿಲ್ಲ. ನಮ್ಮ ಸೇವಾ ಅವಧಿಯಲ್ಲಿ ಸಾಕಷ್ಟು ಉಳಿತಾಯ ಮಾಡಿ ಡಿಪಾಸಿಟ್‌ಗಳಲ್ಲಿ ಇಟ್ಟಿದ್ದೇವೆ. ನಮ್ಮ ಆರೋಗ್ಯವೂ ನಮ್ಮ ವಯಸ್ಸಿಗೆ ಸುಸ್ಥಿತಿಯಲ್ಲಿದೆ. ನಮಗಿರುವುದೊಂದೇ ಕೊರತೆಯೆಂದರೆ ನಮಗೆ ಮಕ್ಕಳಾಗಲಿಲ್ಲ. ನಮ್ಮ ನಂತರ ಈ ಮನೆ, ಸಂಪತ್ತು ಯಾರಿಗಾಗಿ ಎಂಬ ಯೋಚನೆ ನಮ್ಮನ್ನು ಕಾಡುತ್ತಲಿತ್ತು. ಯಾರಾದರೂ ಸಜ್ಜನ ಗೃಹಸ್ಥರು ದೊರಕಿದರೆ ಇವೆಲ್ಲವನ್ನೂ ಅವರಿಗೆ ಹಸ್ತಾಂತರಮಾಡಿ ನಾವುಗಳು ಅವರ ಕುಟುಂಬದ ಸದಸ್ಯರಾಗಿ ಅವರೊಂದಿಗೆ, ಅವರ ಮಕ್ಕಳು ಮರಿಗಳೊಂದಿಗೆ ನಮಗುಳಿದಿರುವ ಕೆಲವು ಕಾಲವಾದರೂ ಹಾಯಾಗಿ ಪ್ರೀತಿ ವಿಶ್ವಾಸಗಳ ವಾತಾವರಣದಲ್ಲಿ ಕಳೆಯಬೇಕೆಂಬ ಹಂಬಲವಿದೆ. ಆದರೆ ಆಸ್ತಿ, ಸಂಪತ್ತನ್ನು ಅರ್ಹರಾದವರ ಕೈಯಿಗೇ ಹಸ್ತಾಂತರಿಸುವ ಮೊದಲು ಅವರ ಸಜ್ಜನಿಕೆ, ಸದುದ್ದೇಶಗಳನ್ನು ಖಚಿತ ಪಡಿಸಿಕೊಳ್ಳುವ ಸಲುವಾಗಿ ಇವೆಲ್ಲ ನಿಬಂಧನೆಗಳನ್ನು ಸೇರಿಸಿ ಜಾಹಿರಾತನ್ನು ಕೊಟ್ಟವರು ನಾವೇ. ನಮ್ಮ ಪ್ರಯತ್ನ ನಿರೀಕ್ಷೆಗೂ ಮೀರಿ ಸಫಲವಾಯಿತೆನ್ನಿಸಿದೆ. ನಿಮ್ಮಂಥವರ ಹುಡುಕಾಟದಲ್ಲಿ ನಾವು ಕಾಯುತ್ತಿದ್ದೆವು. ನಿಜವಾಗಿ ಹೇಳಿಕೊಳ್ಳುವಂತಹ ದೈಹಿಕ ಅನಾರೋಗ್ಯ ನಮ್ಮಿಬ್ಬರಿಗೂ ಇಲ್ಲ. ನನಗೀಗ 80 ವರ್ಷ ಈಕೆಗೆ 75 ವರ್ಷ. ಅದರೆ ಜಾಹಿರಾತನ್ನು ನೋಡಿ ಇಲ್ಲಿಗೆ ಬರುವವರನ್ನು ಪರೀಕ್ಷಿಸುವ ಸಲುವಾಗಿ ಅವನ್ನು ಕಲ್ಪಿಸಲಾಗಿತ್ತು. ಇದೇ ರೀತಿಯಲ್ಲಿ ಮುಂದುವರೆದರೆ ಇನ್ನೂ ನಾವಿಬ್ಬರೂ ಹಲವಾರು ವರ್ಷ ಜೀವಿಸುವ ಭರವಸೆಯಿದೆ.”

“ಈಗ ನೀವು ಮುಂಗಡವಾಗಿ ಕಳುಹಿಸಿದ ಹಣ ಒಂದು ಲಕ್ಷವನ್ನು ಹಿಂದಿರುಗಿಸಿದ್ದೇನೆ. ಚೆಕ್ ತೆಗೆದುಕೊಳ್ಳಿ. ನಾವೆಲ್ಲ ಒಂದೇ ಕುಟುಂಬವಾದ ಮೇಲೆ ಈ ವ್ಯವಹಾರ ಅನಾವಶ್ಯಕ. ನಿಮಗೆ ಒಪ್ಪಿಗೆಯೇ” ಎಂದು ಕೇಳಿದರು ಜನಾರ್ಧನ್.

ಮಧುಕರ ಮಾಧುರಿಯ ಕಣ್ಣುಗಳಲ್ಲಿ ಆನಂದಾಶ್ರುಗಳು ಉದುರಿದವು. ಸಂತೋಷದಿಂದ ಒಪ್ಪಿಗೆ ಸೂಚಿಸಿ ಹಿರಿಯ ಕಾಲಿಗೆ ನಮಸ್ಕರಿಸಿದರು. ಮೇಜರ್ ಜನಾರ್ಧನ್ ಮತ್ತು ಡಾ|| ಸರೋಜಾ ಮಧುಕರ ಮಾಧುರಿಯನ್ನು ಪ್ರೀತಿಯಿಂದ ಅಪ್ಪಿಕೊಂಡರು. ಮಧುಕರ, ಮಾಧುರಿ “ಸರ್ ನಾವಿಗ ನಿಮ್ಮನ್ನು ಡ್ಯಾಡಿ, ಅಮ್ಮನನ್ನು ಮಮ್ಮಿ ಎಂದು ಕರೆಯಬಹುದೇ?” ಎಂದು ಕೇಳಿದರು.

ಹಿರಿಯ ದಂಪತಿಗಳು ತುಂಬು ಹೃದಯದಿಂದ “ಓಹೋ ಧಾರಾಳವಾಗಿ ನಾವೂ ನಿಮ್ಮಿಬ್ಬರನ್ನು ಮಕ್ಕಳಂತೆ ಮಧು, ಮಾಧುರಿ ಎಂದೇ ಕರೆಯುತ್ತೇವೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಎರಡು ಪುಟಾಣಿಗಳನ್ನು ನಮ್ಮ ಮುದ್ದು ಮೊಮ್ಮಕ್ಕಳು ಎಂದು ಒಪ್ಪಿಕೊಂಡಿದ್ದೇವೆ.” ಎಂದು ಯಶು ಮತ್ತು ಸುಶಿಯ ತಲೆ ನೇವರಿಸಿದರು. ಮಕ್ಕಳು ಆನಂದದಿಂದ ಅಪ್ಪಾ, ಅಮ್ಮಾ ನಮಗೆ ಅಜ್ಜಿ ತಾತ ಸಿಕ್ಕಿಬಿಟ್ಟರು. ನಾವು ಹ್ಯಾಪಿ. ವಿ ಮಿಸ್ಡ್ ಯು ಗ್ರಾಂಪಾ, ಗ್ರಾನ್ನಿ” ಎಂದು ಅವರ ಮಡಿಲು ಸೇರಿದರು.

(ಒಂದು ಇಂಗ್ಲಿಷ್ ಮಿನಿ ಕಥೆಯಿಂದ ಸ್ಫೂರ್ತಿ)


ಬಿ.ಆರ್.ನಾಗರತ್ನ. ಮೈಸೂರು

12 Comments on “ವೃದ್ಧ ದಂಪತಿಗಳು ಮಾರಾಟಕಿದ್ದಾರೆ.

  1. ಪ್ರಕಟಣೆಗಾಗಿ ಹೃತ್ಪೂರ್ವಕವಾದ ಧನ್ಯವಾದಗಳು ಸುರಹೊನ್ನೆಯ ಸಂಪಾದಕರಿಗೆ…

    1. ನಿಮ್ಮ ಓದಿ ನ ಸ್ಪಂದನೆಗೆ ಹೃತ್ಪೂರ್ವಕವಾದ ಧನ್ಯವಾದಗಳು ಮುಕ್ತಾ ಮೇಡಂ..

    1. ನಿಮ್ಮ ಪ್ರತಿಕ್ರಿಯೆಗೆ ಹೃತ್ಪೂರ್ವಕವಾದ ಧನ್ಯವಾದಗಳು ನಯನಮೇಡಂ

  2. ನಿಮ್ಮ ಪ್ರತಿಕ್ರಿಯೆಗೆ ಹೃತ್ಪೂರ್ವಕವಾದ ಧನ್ಯವಾದಗಳು ನಯನಮೇಡಂ

  3. ಈಗಿನ ಶಿಥಿಲಗೊಳ್ಳುತ್ತಿರುವ ಸಾಮಾಜಿಕ ವ್ಯವಸ್ಥೆಯನ್ನು ಬಿಂಬಿಸುವ, ಕುತೂಹಲಕಾರಿ ತಿರುವನ್ನು ಹೊಂದಿದ ,ಸೊಗಸಾದ ಸುಖಾಂತ್ಯದ ಕತೆ ಇಷ್ಟವಾಯಿತು.

    1. ನಿಮ್ಮ ಪ್ರೋತ್ಸಾಹ ಪ್ರತಿ ಕ್ರಿಯೆ ಗೆ ಧನ್ಯವಾದಗಳು.. ಗೆಳತಿ ಹೇಮಾ

  4. ಅವಿಭಕ್ತ ಕುಟುಂಬ ಪದ್ಧತಿಯಲ್ಲಿ ಸಿಗುವ ಮಾನಸಿಕ ನೆಮ್ಮದಿ, ಭದ್ರತೆಯ ಭಾವ, ನಿರಪೇಕ್ಷ ಪ್ರೀತಿಯ ಸುಂದರ ಅನಾವರಣವಾಗಿರುವ, ಪ್ರಸ್ತುತ ಕಾಲಘಟ್ಟದಲ್ಲಿ ಸಕಾಲಿಕವೆನಿಸುವ ಕಿರುಗತೆಯು ಆಸಕ್ತಿಕರವಾಗಿದೆ. ಧನ್ಯವಾದಗಳು ನಾಗರತ್ನ ಮೇಡಂ.

    1. ನಿಮ್ಮೋದಿನ ಪ್ರತಿ ಕ್ರಿಯೆಗೆ ಧನ್ಯವಾದಗಳು ಶಂಕರಿ ಮೇಡಂ

  5. ಒಂದು ನೂತನ ಆಯಾಮ ಮತ್ತು ವಿನೂತನ ಕಥಾವಸ್ತು

    ನಾಟಕೀಯ ತಿರುವುಗಳಿದ್ದರೂ ಕಪಟವಿಲ್ಲ
    ಆಂಗ್ಲ ಕತೆಯ ಸ್ಫೂರ್ತಿಯಿದ್ದರೂ ಅನುವಾದವಲ್ಲ !

    ಚೆನ್ನಾಗಿದೆ ಮೇಡಂ
    ಪ್ರತಿಭಾ ನವನವೋನ್ಮೇಷ

    ಬರೆಹಗಾರರಲ್ಲಿ ಪ್ರತಿಭೆ ಇದ್ದರೆ ಹೀಗೆ
    ಸಾಮಾನ್ಯದಲ್ಲೂ ಅಸಾಮಾನ್ಯವನ್ನು ಕಾಣಬಹುದು ಎಂಬುದಕೆ ನಿಮ್ಮೀ ಕತೆಯೇ ದರ್ಶನ, ನಿದರ್ಶನ.

    ಓದಿದ ಹಲವು ಮಂದಿ ʼಇದು ಸಾಧ್ಯವೇ?ʼ ಎಂದು ಪ್ರಶ್ನಿಸಿದರು
    ಇದು ಕತೆಯನ್ನೂ ಸಾಹಿತ್ಯವನ್ನೂ ಪರಿಭಾವಿಸುವ ರೀತಿಯಲ್ಲ ಎಂದು ನಾನವರಿಗೆ
    ತಿಳಿ ಹೇಳಬೇಕಾಯಿತು. ನಮ್ಮಲ್ಲಿ ಮಿಸ್‌ ರೀಡಿಂಗ್‌ ಮತ್ತು ಮಿಸ್‌ ಲೀಡಿಂಗ್‌ ತುಂಬಾ !!

    ನಾವುಗಳು ತುಂಬಾನೇ ತಿದ್ದಿಕೊಳ್ಳಬೇಕು ; ಸಾಹಿತ್ಯವನು ಓದುವ ಕ್ರಮವನು ಕಲಿಯಬೇಕು.

    1. ಒಂದು ಆಂಗ್ಲದ ಪುಟ್ಟ ಕಥೆಯನ್ನು ಓದಿದ ನನಗೆ ನಮ್ಮ..ಜನರ ಮನೋಭಾವ ಕ್ಕೆ ಬಂದರೆ ಹೇಗೆ ಎಂಬುದನ್ನು ಮನದಲ್ಲಿ ಇಟ್ಟುಕೊಂಡು ಕಥೆ ಯನ್ನು ಬರೆದೆ…ಅದನ್ನು…ನೋಡುವುದು ವಿಚಾರಮಾಡುವುದು ಅವರವರಿಗೆ ಬಿಟ್ಟದ್ದು…ನಿಮ್ಮ ಸಹೃದಯ ಪ್ರತಿಕ್ರಿಯೆಗೆ ನಮೋ ನಮಃ.. ಸಾರ್.

Leave a Reply to C.N.Muktha Cancel reply

 Click this button or press Ctrl+G to toggle between Kannada and English

Your email address will not be published. Required fields are marked *