ಭಾವ ತೀವ್ರತೆಯು ಕಟ್ಟೆಯೊಡೆದು ಕಣ್ಣಂಚಿನಲಿ ಹನಿಯುವುದ ಕಂಡೆ
ಜೀವನದ ಸಂಗಾತಿಯ ಅಗಲಿಕೆಯ ನೋವು ಹಿರಿಯ ಜೀವದ
ಮೊಗದಲ್ಲಿ ಇಣುಕಿದ್ದ ನೋಡಿದೆ
ಮಾಮೂಲಿನಂತೆ ಹರಳು ಹುರಿದಂತೆ ಮಾತನಾಡಿದರೂ
ಮಧ್ಯೆ ಮಧ್ಯೆ ಲಘು ಹಾಸ್ಯ ಚಟಾಕಿ ಹಾರಿಸಿದರೂ
ಬಾರದ ನಗುವ ಒತ್ತಾಯದಿಂದ ತಂದು ಕೊಂಡಿದ್ದಕ್ಕೆ ನಾನು ಸಾಕ್ಷಿಯಾದೆ
ಏನು ಆಗಿಲ್ಲವೇನೋ ಎಂಬಂತೆ ನಟಿಸುವ ವೃದ್ಧ ಜೀವವ ಕಂಡು ಕಣ್ಣೀರಾದೆ
ಆ ದೇವನು ನೀಡಿದ ತೀರ್ಪನ್ನು ಹೇಗೆ ಸ್ವೀಕರಿಸಬೇಕು ಎಂದು ತಿಳಿಯದ
ನಿಸ್ಸಹಾಯಕ ವ್ಯಕ್ತಿಯಪರಿಸ್ಥಿತಿಯ ನೋಡಿದೆ
ಮುಂದೇನು ಎಂದು ಅರಿಯದ ಬಡಪಾಯಿಯ ಸಂದಿಗ್ಧತೆಯನ್ನು ಕಂಡೆ
ಜೀವನೋತ್ಸಾಹದ ಬದುಕಿನ ಪ್ರೀತಿಯ ಮಾತುಗಳಾಡಿದರೂ
ಕರುಳಿನ ಕುಡಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಿದರೂ
ತಡೆಯದ ದುಃಖದ ಬಿಕ್ಕಳಿಕೆಯ ಧ್ವನಿಯ ಕೇಳದಾದೆ
ಕವಿದ ಚಿಂತೆಯ ಕಾರ್ಮೋಡದ ಕತ್ತಲಲಿ ಕಳೆದು ಹೋದ ನಗುವ ಹುಡುಕಿದೆ
ಹಲವು ವರ್ಷಗಳ ಕಾಲ ಜೊತೆಗಿದ್ದ ಸಹಧರ್ಮಿಣಿಯ ನೆನಪುಗಳು
ಅವರಿಗೆ ಪ್ರವಾಹದಂತೆ ಬರುತ್ತಿದ್ದರೂ
ಜೊತೆಯಾಗಿ ಎದುರಿಸಿದ ಕಷ್ಟಗಳ ಬಿಡದೆ ಅವರು ನೆನೆಯುತ್ತಿದ್ದರೂ
ಎಲ್ಲಾ ಮರೆಮಾಚಿ ಬೇರೆ ಬೇರೆ ಮಾತನಾಡುವುದ ಕಂಡೆ
ಈಗಲೂ ಪರರ ನೋವುಗಳಿಗೆ ಮಿಡಿಯುವುದ ನೋಡಿದೆ
ಸಂತೈಸುವ ಪರಿಯೆಂತು ಈ ನೊಂದ ಭಾವಜೀವಿಯ
ಬದಲಾದ ಪರಿಸ್ಥಿತಿಗೆ ಒಗ್ಗಿಕೊಳ್ಳುವಂತೆ ಮಾಡುವುದೆಂತು ಶೋಕವೇ ಮೈತಳೆದ ಈ ವ್ಯಕ್ತಿಯ
ಕಾಲವೇ ಮದ್ದರೆಯುವುದು ತೀರದ ಚಿಂತೆಗೆ
ದೈವವೇ ಶಕ್ತಿ ತುಂಬುವುದು ಮುಂದಿನ ಪಯಣಕೆ
ಬರುವುದೆಲ್ಲವ ಅನುಭವಿಸುತ್ತಾ ಮಾಗಬೇಕು
ಕರೆದಾಗ ನಗು ನಗುತಾ ಬಿಟ್ಟು ತೆರಳಬೇಕು
ಶರಣಬಸವೇಶ ಕೆ. ಎಂ


ಚಂದದ ಕವನಸಾರ್
ನೋವು ತುಂಬಿದ ಕವನ
ಸಹಧರ್ಮಿಣಿಯನ್ನು ಕಳಕೊಂಡ ವೃದ್ಧ ಪತಿಯು ನೋವು ನುಂಗಿ ಸ್ಥಿತಪ್ರಜ್ಞನಂತೆ ನಟಿಸುವ ಚಿತ್ರಣದ
ಕವನ ಚೆನ್ನಾಗಿದೆ.
ಧನ್ಯವಾದಗಳು ಬಿ.ಆರ್ ನಾಗರತ್ನ ಮೇಡಂ, ನಯನ ಬಜಕೂಡ್ಲು ಮೇಡಂ ಹಾಗೂ ಶಂಕರಿ ಶರ್ಮ ಮೇಡಂ ಅವರಿಗೆ……. ನಿಮ್ಮಂತಹ ಹಿರಿಯರ ಈ ಪ್ರತಿಕ್ರಿಯೆ ಬಲ ತಂದಿದೆ….
ಪ್ರಕಟಿಸಿದ ಸುರಹೊನ್ನೆ ಪತ್ರಿಕೆಯ ಸಂಪಾದಕರಾದ ಹೇಮಾಮಾಲಾ ಮೇಡಂ ಗೆ
ಧನ್ಯವಾದಗಳು