ಪ್ರವಾಸ

ದೇವರ ದ್ವೀಪ ಬಾಲಿ : ಪುಟ-8

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಉಬೂದ್ ನ ಶಾಲೆಯಲ್ಲಿ ಸರಸ್ವತಿ ಪೂಜೆ
ಮಾರ್ಗದರ್ಶಿ ಮುದ್ದಣ ಅವರು ನಮ್ಮನ್ನು ಉದ್ದೇಶಿಸಿ, ನೀವು ಬಹಳ ಒಳ್ಳೆಯ ಸಮಯದಲ್ಲಿ ಬಂದಿದ್ದೀರಿ, ನಾಳೆಯಿಂದ ಮೂರು ದಿನ ಬಾಲಿಯಲ್ಲಿ ‘ಸರಸ್ವತಿ ಪೂಜೆ’ ಇರುತ್ತದೆ. ನಿಮಗೆ ನೋಡಲು ಅವಕಾಶ ಸಿಗುವುದು ಎಂದಿದ್ದಿರು. ಈ ಸಮಯದಲ್ಲಿ ಎಲ್ಲರೂ ತಮ್ಮ ಮನೆಯಲ್ಲಿ ಸರಸ್ವತಿ ಪೂಜೆ ಮಾಡುತ್ತಾರೆ, ಶಾಲೆಯಲ್ಲಿಯೂ ಪೂಜೆ ಇರುತ್ತದೆ. ಪ್ರತಿಯೊಬ್ಬರೂ ತಮ್ಮ ಕುಲಗುರುಗಳನ್ನು ಭೇಟಿಯಾಗಲು ಹೋಗುತ್ತಾರೆ. ಹತ್ತಿರದಲ್ಲಿ ಒಂದು ಪ್ರಾಥಮಿಕ ಶಾಲೆ ಇದೆ, ಅಲ್ಲಿ ಸರಸ್ವತಿ ಪೂಜೆ ಮಾಡುತ್ತಾರೆ. ಅಲ್ಲಿಗೆ ನಾಳೆ ಮುಂಜಾನೆ ಕರೆದೊಯ್ಯುವೆ’ ಎಂದಿದ್ದರು. ನಾವೆಲ್ಲರು ಇಲ್ಲಿಯ ಶಾಲಾ ವಾತಾವರಣ ಹೇಗಿರಬಹುದು ಎಂದು ನೋಡಲು ಉತ್ಸುಕರಾಗಿದ್ದೆವು.

ಬಾಲಿಯಲ್ಲಿ ನಮ್ಮ ಮೂರನೆಯ ದಿನದ (06/09/2025) ಶುಭೋದಯವಾಯಿತು. ನಾವು ಉಳಕೊಂಡಿದ್ದ ಹೋಂ ಸ್ಟೇ ‘ಅಮರ್ಥ’ದ ಸುತ್ತುಮುತ್ತಲಿನ ಪರಿಸರ ಆಹ್ಲಾದಕರವಾಗಿತ್ತು. ಆವರಣದಲ್ಲಿ ಹೂವು, ಹಣ್ಣುಗಳ ಮರಗಳು, ವೆನಿಲಾ ಕೃಷಿ ಇದ್ದುವು. ಎರಡು ಪಂಜರಗಳಲ್ಲಿದ್ದ ಗಿಳಿಗಳು ಮತ್ತು ಹಳದಿ ಬಣ್ಣದ ಪಕ್ಷಿಗಳು ಚಿಲಿಪಿಲಿಗುಟ್ಟುತ್ತಿದ್ದುವು. ಎಲ್ಲಿಂದಲೋ ಸುಮಧುರವಾದ ವಾದ್ಯಸಂಗೀತ ಅಲೆಅಲೆಯಾಗಿ ತೇಲಿ ಬರುತ್ತಿತ್ತು. ಗಾಯತ್ರಿ ಮಂತ್ರವೂ ಕೇಳಿ ಬಂತು. ಹಾಗಿದ್ದರೆ ಇಲ್ಲಿ ಹತ್ತಿರದಲ್ಲಿ ಎಲ್ಲೋ ಪೂಜೆ ನಡೆಯುತ್ತಿದೆ ಅಂದುಕೊಂಡೆವು. ಮೊದಲೇ ತಿಳಿಸಿದಂತೆ ಏಳು ಗಂಟೆಗೆ ಮುದ್ದಣನ ಆಗಮನವಾಯಿತು. ನಾವು ಐದೇ ನಿಮಿಷದ ಕಾಲ್ನಡಿಗೆಯಲ್ಲಿ ಉಬೂದ್ ನ ಶಾಲೆ ತಲಪಿದೆವು.

ಅದು ಪ್ರಾಥಮಿಕ ಶಾಲೆ. ಪರಿಸರ ಬಹಳ ಅಚ್ಚುಕಟ್ಟಾಗಿತ್ತು. ನಾಲ್ಕಾರು ಶಾಲಾ ಕೊಠಡಿಗಳಿದ್ದುವು. ಒಂದು ಕೊಠಡಿಯ ಬಾಗಿಲಿನಲ್ಲಿ ಇಣಿಕಿ ನೋಡಿದಾಗ ಅಚ್ಚುಕಟ್ಟಾದ ಡೆಸ್ಕ್, ಬೆಂಚು , ಕುರ್ಚಿಗಳು ಕಾಣಿಸಿದುವು. ವಿವಿಧ ಚಾರ್ಟ್ ಗಳು, ಗ್ಲೋಬ್ ಮೊದಲಾದ ಪಠ್ಯ ಸಾಮಗ್ರಿಗಳೂ ಇದ್ದುವು. ಕುಡಿಯುವ ನೀರಿನ ವ್ಯವಸ್ಥೆಯಿತ್ತು. ಇಲ್ಲಿ ಶಾಲಾ ಮಕ್ಕಳಿಗೆ ಊಟದ ವ್ಯವಸ್ಥೆ ಇದೆಯೇ ಎಂದು ಕೇಳಿದಾಗ, ಇಲ್ಲ ಎಂಬ ಉತ್ತರ ದೊರೆಯಿತು. ಯಾಕೆಂದರೆ ಇಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಬೆಳಗ್ಗೆ ಏಳು ಗಂಟೆಯಿಂದ ಮಧ್ಯಾಹ್ನದ ವರೆಗೆ ಮಾತ್ರ ತರಗತಿಗಳು ಇರುತ್ತವೆಯಂತೆ . ಹಾಗಾಗಿ ತಮ್ಮ ಮನೆಗೆ ಹೋಗಿ ಊಟ ಮಾಡುತ್ತಾರಂತೆ. ಸರಕಾರದ ವತಿಯಿಂದ ಉಚಿತ ಊಟದ ವ್ಯವಸ್ಥೆ ಒಮ್ಮೆ ಅಳವಡಿಸಲಾಗಿತ್ತು, ಆದರೆ ಅದು ಯಶಸ್ವಿಯಾಗಲಿಲ್ಲವಂತೆ.

ಶಾಲೆಯ ಆವರಣದಲ್ಲಿ ಬಿಳಿ ಬಣ್ಣದ ಶರ್ಟ್ ಅಥವಾ ಟಾಪ್ ಧರಿಸಿ ವಿವಿಧ ಬಣ್ಣಗಳ, ವಿಭಿನ್ನ ವಿನ್ಯಾಸವುಳ್ಳ ‘ಸಾರಂಗೊ’ ಉಟ್ಟಿದ್ದ ಅಧ್ಯಾಪಕ/ಅಧ್ಯಾಪಿಕೆಯರು ಸರಸ್ವತಿ ಹಬ್ಬದ ಸಿದ್ಧತೆ ನಡೆಸುತ್ತಿದ್ದರು. ಆವರಣದಲ್ಲಿ ಇದ್ದ ಗುಡಿಯಲ್ಲಿದ್ದ ವಿಗ್ರಹಕ್ಕೆ ಹೂವುಗಳು ಮತ್ತು ತೆಂಗಿನ ಗರಿಯ ಅಲಂಕಾರವಿತ್ತು. ಸರಸ್ವತಿ ದೇವಿಯ ಪ್ರತಿಮೆಗೆ ಸೊಗಸಾದ ಅಲಂಕಾರ ಮಾಡುತ್ತಿದ್ದರು. ನಿಂತುಕೊಂಡಿದ್ದ ಸರಸ್ವತಿ ದೇವಿಯ ವಿಗ್ರಹದ ಕೈಗಳಲ್ಲಿ ವೀಣೆಯೂ ಇತ್ತು, ಭರ್ಜಿಯೂ ಇತ್ತು. ಆವರಣದ ಗುಡಿಯಲ್ಲಿ ಹಾಗೂ ಪ್ರತ್ಯೇಕವಾಗಿದ್ದ ಇರಿಸಿದ್ದ ಸರಸ್ವತಿಯ ವಿಗ್ರಹದ ಮುಂದೆ ಚಿಕ್ಕ ಬಿದಿರಿನ ಬುಟ್ಟಿಗಳಲ್ಲಿ ಮಕ್ಕಳು ತಮ್ಮ ಮನೆಯಿಂದ ತಂದ ಪಲಾವ್ ನಂತಹ ಆಹಾರ ಹಾಗೂ ಹಣ್ಣುಗಳನ್ನು ಮುಚ್ಚಿ, ನೈವೇದ್ಯದಂತೆ ಇರಿಸಿದ್ದರು. ಆವರಣದ ಒಂದು ಕಡೆ ನೆಲದ ಮೇಲೆ ಪ್ರತ್ಯೇಕವಾಗಿ ಹೂವು/ಹಣ್ಣು, ತೆಂಗಿನಗರಿಯ ವಸ್ತುಗಳು ಇತ್ಯಾದಿ ಇರಿಸಿದ್ದರು. ಅಲ್ಲಿಯೂ ಸ್ವಲ್ಪ ಪ್ರಮಾಣದಲ್ಲಿ ನೈವೇದ್ಯ ಇರಿಸಿದ್ದರು. ಇದೇಕೆ ಹೀಗೆ ಎಂದು ಮಾರ್ಗದರ್ಶಿಯನ್ನು ಕೇಳಿದಾಗ, ‘ಇದು ರಾಕ್ಷಸ ಅಥವಾ ದುಷ್ಟ ಶಕ್ತಿಯನ್ನು ಸಂತೃಪ್ತಿಗೊಳಿಸಲು ಮಾಡುವ ಪೂಜೆ. ದೇವರಿಗೆ ಅರ್ಪಿಸುವ ನೈವೇದ್ಯವನ್ನು ಪೂಜೆಯ ನಂತರ ಪ್ರಸಾದವಾಗಿ ಸೇವಿಸುತ್ತಾರೆ, ಆದರೆ ದುಷ್ಟಶಕ್ತಿಗೆ ಅರ್ಪಿಸಿದ ಆಹಾರವನ್ನು ಭಕ್ಷಿಸುವುದಿಲ್ಲ’ ಎಂದ.

‘ಸಾರಂಗೊ’ ತೊಟ್ಟು ಅತ್ತಿತ್ತ ಓಡಾಡುತ್ತಿದ್ದ ಪುಟ್ಟ ಮಕ್ಕಳು ಮುದ್ದಾಗಿ ಕಾಣಿಸುತ್ತಿದ್ದರು. ನಾವು ಮಾತನಾಡಿಸಿದರೆ ‘ಓಂ ಸ್ವಸ್ತ್ಯಸ್ತು’ ಎಂದು ಕೈಮುಗಿಯುತ್ತಿದ್ದರು. ಬಾಲಿಯಲ್ಲಿ ಹಿಂದೂಗಳಲ್ಲದವರು 20 % ಜನ ಇದ್ದರೂ, ಶಾಲಾ ಮಕ್ಕಳ ಉಡುಪಿನ ಆಧಾರದಲ್ಲಿ ‘ಬಾಲಿನೀಸ್ ಹಿಂದೂ’ ಅಲ್ಲದವರು ಯಾರೆಂದು ಗೊತ್ತಾಗುತ್ತಿರಲಿಲ್ಲ. ಎಲ್ಲರೂ ಪೂಜೆಯಲ್ಲಿ ಭಾಗವಹಿಸುತ್ತಾರೆ. ಎಲ್ಲಾ ಮಕ್ಕಳೂ ಬಿಳಿ ಡ್ರೆಸ್ ಧರಿಸಿ ‘ಸಾರಂಗೊ’ ಉಟ್ಟಿದ್ದರು. ಅಧ್ಯಾಪಕರ ನಿರ್ದೇಶನದಂತೆ ಒಂದೆಡೆ ಸಾಲಾಗಿ ಕುಳಿತರು. ಪೂಜೆಯ ಆರಂಭಿಕ ಹಂತವಾಗಿ ಕೆಲವು ಅಧ್ಯಾಪಕಿಯರು ಆವರಣ ಹಾಗೂ ಶಾಲಾ ಆಫೀಸು, ಕ್ಲಾಸ್ ರೂಮ್ , ಕುಳಿತಿದ್ದವರ ಮೇಲೆ ಹೀಗೆ ಎಲ್ಲೆಡೆ ನೀರನ್ನು ಪ್ರೋಕ್ಷಿಸುತ್ತಾ ‘ಶುದ್ಧೀಕರಣ’ ಶಾಸ್ತ್ರ ನೆರವೇರಿಸಿದರು. ಇನ್ನು ಕೆಲವರು ಗೇಟಿನ ಹೊರಗಡೆಯೂ ಹೂವುಗಳನ್ನಿರಿಸಿ , ಅಗರಬತ್ತಿ ಉರಿಸಿ ಬಂದರು. ಎಲ್ಲಾ ವಿಗ್ರಹಗಳಿಗೂ ಆಗರಬತ್ತಿ ಉರಿಸಿ ಆರತಿಯಂತೆ ಬೆಳಗಿದರು. ಅಧ್ಯಾಪಕರೂ, ವಿದ್ಯಾರ್ಥಿಗಳೂ ರಾಗವಾಗಿ ಭಜನೆಯ ಮಾದರಿಯಲ್ಲಿ ಸುಶ್ರ್ಯಾವ್ಯವಾಗಿ ಹಾಡತೊಡಗಿದರು. ಹೀಗೆ ಒಂದೆಡೆ ದೇವತಾರಾಧನೆ ನಡೆಯಿತು.

ಅಷ್ಟರಲ್ಲಿ ಒಬ್ಬರು ಅರ್ಚಕ ಮತ್ತು ನಾಲ್ಕಾರು ಅಧ್ಯಾಪಿಕೆಯರು ನೆಲದ ಮೇಲೆ ‘ದುಷ್ಟ ಶಕ್ತಿ’ಗಾಗಿ ಇರಿಸಿದ್ದ ರಚನೆ ಹಾಗೂ ಆಹಾರದ ಬುಟ್ಟಿಗಳ ಸುತ್ತ ಹಾಡುತ್ತಾ, ನರ್ತಿಸುತ್ತಾ ಬಂದರು. ಒಬ್ಬರ ಕೈಯಲ್ಲಿ ದೀವಟಿಗೆ ಇತ್ತು. ಇನ್ನೊಂದಿಬ್ಬರು ತಮ್ಮ ಕೈಯಲ್ಲಿ ತೆಂಗಿನ ಹೆಡೆಮಟ್ಟೆಯನ್ನು ಸೀಳಿ ಹಿಡಿದುಕೊಂಡಿದ್ದರು. ಪ್ರದಕ್ಷಿಣೆ ಹಾಕುತ್ತಾ ನಾಲ್ಕೂ ದಿಕ್ಕಿನಲ್ಲಿ ಹೆಡೆಮಟ್ಟೆಯಿಂದ ನೆಲಕ್ಕೆ ಬಡಿದರು. ಇದು ದುಷ್ಟ ಶಕ್ತಿಯನ್ನು ಆಹ್ವಾನಿಸುವ ಪದ್ದತಿಯಂತೆ. ಇನ್ನೂ ಸ್ವಲ್ಪ ಸಮಯ ಹಾಡು, ನರ್ತನ ಮೇಳೈಸಿತು. ಭಜನೆಯೂ ನೆರವೇರಿತು.

ಇಲ್ಲಿ ತೆಂಗಿನ  ಗರಿ ಮತ್ತು  ಬಿದಿರಿನಂತಹ ಸಸ್ಯಗಳ ಬುಟ್ಟಿ, ಕೈಚೀಲ ದೊನ್ನೆ  ಮುಂತಾದುವುಗಳ ವ್ಯಾಪಕ ಬಳಕೆ  ಎದ್ದು ಕಾಣಿಸುತ್ತಿತ್ತು. ಅಂಗಡಿಗಳಲ್ಲಿಯೂ  ದೊನ್ನೆಗಳು, ಬುಟ್ಟಿಗಳು ಧಾರಾಳವಾಗಿ ಕಾಣಿಸುತ್ತಿದ್ದುವು.    ಈ ದೈವಾರಾಧನೆ ಮತ್ತು ಅದಕ್ಕೆ ಸಂಬಂಧಿಸಿದ ನೈಸರ್ಗಿಕ  ಕರಕುಶಲ ವಸ್ತುಗಳ ತಯಾರಿ ಹಲವಾರು ಮಂದಿಗೆ  ಉದ್ಯೋಗ ಕಲ್ಪಿಸಿ  ಅವರ ಆದಾಯದ ಮೂಲವೂ ಆಗಿದೆ.  ಎಲ್ಲೂ ಪ್ಲಾಸ್ಟಿಕ್    ಕಾಣಿಸಲಿಲ್ಲ.  

ಪೂಜೆ ಇನ್ನೂ ಸ್ವಲ್ಪ ಕಾಲ ಮುಂದುವರಿಯುತ್ತದೆ ಎಂದು ಗೊತ್ತಾಯಿತು. ನಮಗೆ ಬೇರೆ ಪ್ರಯಾಣಿಸಲಿರುವುದರಿಂದ, ಅದುವರೆಗೆ ವೀಕ್ಷಿಸಲು ಅವಕಾಶ ಮಾಡಿಕೊಟ್ಟ ಅಧ್ಯಾಪಕರುಗಳಿಗೆ ಧನ್ಯವಾದ ಅರ್ಪಿಸಿ ಹೊರಟೆವು. ಹೀಗೆ ಭಾರತೀಯ ಹಿಂದುಗಳಾದ ನಾವು ‘ಬಾಲಿನೀಸ್ ಹಿಂದು’ಗಳ ಸರಸ್ವತಿ ಪೂಜೆ ನೋಡುವ ಅಪರೂಪದ ಅವಕಾಶ ಗಿಟ್ಟಿಸಿಕೊಂಡು ಸಂತಸಪಟ್ಟೆವು.

(ಮುಂದುವರಿಯುವುದು)
ಈ ಪ್ರವಾಸಕಥನದ ಹಿಂದಿನ ಸಂಚಿಕೆ ಇಲ್ಲಿದೆ: https://surahonne.com/?p=44008

ಹೇಮಮಾಲಾ.ಬಿ. ಮೈಸೂರು

5 Comments on “ದೇವರ ದ್ವೀಪ ಬಾಲಿ : ಪುಟ-8

  1. ಪ್ರವಾಸ ಕಥನ ಎಂದಿನಂತೆ ಸೊಗಸಾದ ನಿರೂಪಣೆ ಹಾಗೂ ಪೂರಕ ಚಿತ್ರ ಗಳು ಮನಕ್ಕೆ ಮುದತಂದು ಆಸಕ್ತಿಯಿಂದ ಓದುವಂತೆ ಮಾಡಿತು..ವಂದನೆಗಳು ಗೆಳತಿ ಹೇಮಾ.

  2. ಬಹಳ ಸುಂದರವಾಗಿದೆ. ತುಂಬಾ ಖುಷಿ ನೀಡುವ ಪ್ರವಾಸ ಕಥನ.

  3. ಬಾಲಿನೀಸ್ ಹಿಂದುಗಳ ಸರಸ್ವತಿ ಪೂಜೆಯ ಸವಿವರಗಳನ್ನೊಳಗೊಂಡ ಪ್ರವಾಸ ಪುಟವು ಸೂಕ್ತ ಚಿತ್ರಗಳೊಂದಿಗೆ ಆಕರ್ಷಕವಾಗಿ ಮೂಡಿಬಂದಿದೆ…ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *