‘ಸ್ವಾಮೀ ನನಗೆ ಮೋಕ್ಷ ಕೊಟ್ಟು ಬಿಡಿ. ನನಗೆ ಮೋಕ್ಷವೊಂದೇ ಸಾಕು.’ ಎಂದು ಮತ್ತೆ ಮತ್ತೆ ಕೇಳುವಳು ಸೂರ್ಯನಾಗಮ್ಮ ಎಂಬ ರಮಣರ ಭಕ್ತೆ. ರಮಣರು ನಸುನಗುತ್ತಾ, ‘ಮೋಕ್ಷವೊಂದೇ ಸಾಕೇ, ಬೇರೇನೂ ಬೇಡವೇ? ಎಲ್ಲವನ್ನೂ ಬಿಡುತ್ತಾ ಬಂದರೆ ಕೊನೆಗುಳಿಯುವುದೇ ಮೋಕ್ಷ. ಎಲ್ಲಾ ವಾಸನೆಗಳ ನಾಶವಾದ ನಂತರ ಸಿಗುವುದೇ ಮೋಕ್ಷ’ ಎಂದು ಉತ್ತರಿಸುವರು. ಹೀಗೆ ರಮಣರು ತನ್ನ ಭಕ್ತರ ಬೇಡಿಕೆಗಳನ್ನು ಸರಳವಾದ ಮಾರ್ಗಗಳ ಮೂಲಕ ಪರಿಹರಿಸುತ್ತಿದ್ದರು. ಆದರೆ ಜನಸಾಮಾನ್ಯರಿಗೆ ‘ಎಲ್ಲವನ್ನೂ ಬಿಡುವುದು’ ಅಷ್ಟು ಸುಲಭವೇ? ನಮ್ಮ ಮನದಲ್ಲಿ ಮೂಡುವ ಆಶೆಗಳನ್ನು, ನಿರೀಕ್ಷೆಗಳನ್ನು, ವ್ಯಾಮೋಹಗಳನ್ನು ದೂರಮಾಡುವುದು ಸಾದ್ಯವೇ? ಪರರಿಗೆ ನೆರವಾಗುತ್ತಾ, ನಮ್ಮೊಳಗೆ ನಾವಿರುವುದೇ ಮೋಕ್ಷಕ್ಕೆ ರಹದಾರಿ ಎಂದುಲಿಯುವರು, ಈ ಶತಮಾನ ಕಂಡ ಮಹಾಪುರುಷರಾದ ಶ್ರೀ ಭಗವಾನ್ ರಮಣ ಮಹರ್ಷಿಗಳು. ಇವರ ಅಂತ್ಯಕಾಲದಲ್ಲಿ ಭಕ್ತರು, ‘ಸ್ವಾಮೀ, ನಮ್ಮನ್ನು ಬಿಟ್ಟು ಹೋಗಬೇಡಿ’ ಎಂದು ಕಣ್ಣೀರಿಟ್ಟಾಗ ರಮಣರು, ‘ನಾನೆಲ್ಲಿಗೂ ಹೋಗಲಾರೆ, ಇದು ನನ್ನ ತಂದೆ ಅರುಣಾಚಲೇಶ್ವರನ ಸ್ಥಳ. ನನ್ನ ದೇಹ ನಶಿಸಬಹುದು, ಆದರೆ ನನ್ನ ಆತ್ಮ ಇಲ್ಲಿಯೇ ಇರುವುದು.’ ಎಂದು ನುಡಿಯುವರು.
ಬನ್ನಿ ನಾವಿಂದು ಅರುಣಾಚಲ ಗಿರಿಯ ತಪ್ಪಲಿನಲ್ಲಿರುವ ಅರುಣಾಚಲ ಆಶ್ರಮಕ್ಕೆ ಭೇಟಿ ನೀಡೋಣ – ಆಶ್ರಮದ ಒಳ ಹೊಕ್ಕಾಗ ಕಂಡು ಬರುವುದು, ಪ್ರಶಾಂತವಾದ ವಾತಾವರಣ, ರಮಣರ ಗದ್ದುಗೆಯ ಸುತ್ತಲೂ ಓಡಾಡುತ್ತಿರುವ ನವಿಲು, ಹಲವು ಬಗೆಯ ಗಿಡಮರಗಳನ್ನು ಹೊತ್ತ ಸುಂದರವಾದ ಉದ್ಯಾನವನ. ಸ್ವಚ್ಛತೆ, ಶಿಸ್ತು, ನಿಶ್ಯಬ್ಧ ಹಾಗೂ ಶಾಂತತೆಯ ಬೀಡಾಗಿರುವುದು ಈ ಆಶ್ರಮ. ರಮಣಾಶ್ರಮದ ಸ್ವಯಂಸೇವಕರು ಗಡಿಬಿಡಿಯಿಲ್ಲದೆ ತಮ್ಮ ತಮ್ಮ ಕಾರ್ಯವನ್ನು ಸಮಾಧಾನ ಚಿತ್ತದಿಂದ ಮಾಡುತ್ತಾ ಸಾಗುತ್ತಿರುವರು.. ಆಶ್ರಮದ ದಿನಚರಿಯನ್ನು ಒಮ್ಮೆ ಗಮನಿಸೋಣ ಬನ್ನಿ. ರಮಣರ ಅನುಯಾಯಿಗಳು ಮುಂಜಾನೆ ಸೂರ್ಯೋದಯಕ್ಕೆ ಮೊದಲೇ ಎದ್ದು, ಅಂದರೆ ನಾಲ್ಕು ಗಂಟೆಗೆ ಸರಿಯಾಗಿ ರಮಣರು 25 ವರ್ಷಗಳ ಕಾಲ ಧ್ಯಾನ ಮಾಡಿದ್ದ ಧ್ಯಾನಮಂದಿರದಲ್ಲಿ ಧ್ಯಾನದಲ್ಲಿ ತಲ್ಲೀನರಾಗುವರು. ಐದು ಗಂಟೆಗೆ ಸರಿಯಾಗಿ ನೂತನವಾಗಿ ನಿರ್ಮಿಸಲಾಗಿರುವ ಧ್ಯಾನ ಮಂದಿರದಲ್ಲಿ ಓಂಕಾರದೊಂದಿಗೆ ಪ್ರಾರ್ಥನೆಯನ್ನು ಆರಂಭಿಸಲಾಗುವುದು. ಇಲ್ಲಿ ಹಲವಾರು ಸಿದ್ದರು, ಯೋಗಿಗಳು ಧ್ಯಾನ ಮಾಡಿರುವುದರಿಂದ ಒಂದು ಬಗೆಯ ದೈವೀಕ ವಾತಾವರಣ ಮೂಡಿದೆ. ಐದೂವರೆ ಗಂಟೆಗೆ ಸರಿಯಾಗಿ ರಮಣರ ತಾಯಿಯ ಸಮಾಧಿ ಸ್ಥಳದಲ್ಲಿರುವ ಮಾತೃಭೂತೇಶ್ವರ ದೇಗುಲದಲ್ಲಿ ಪೂಜೆ ನಡೆಯುವುದು. ನಂತರದಲ್ಲಿ ವೇದ ಪಾಠಶಾಲೆಯಲ್ಲಿ ವಿದ್ಯಾರ್ಥಿಗಳ ವೇದ ಪಠಣ ಇಡೀ ಆಶ್ರಮದಲ್ಲಿ ಮಾರ್ದನಿಸುವುದು. ಆರುಗಂಟೆಗೆ ರಮಣೇಶ್ವರಲಿಂಗದ ಕ್ಷೀರಾಭಿಷೇಕ ನಡೆಯುವುದು. ಧ್ಯಾನ, ಪ್ರಾರ್ಥನೆ, ಮಾತೆಯ ಪೂಜೆ, ವೇದಘೋಷದ ನಂತರವೇ ರಮಣರ ಪೂಜೆ. ಏಳು ಗಂಟೆಗೆ ಸರಿಯಾಗಿ ಆಶ್ರಮವಾಸಿಗಳಿಗೆ ಉಪಾಹಾರದ ಸಮಯ.
ಹತ್ತು ಗಂಟೆಗೆ ‘ನಾರಾಯಣ ಸೇವೆ’ ಅಂದರೆ ಇಲ್ಲಿಗೆ ಬರುವ ಭಕ್ತರಿಗೆ ಅನ್ನ ಸಂತರ್ಪಣೆ. ಅನ್ನದಾನ ಎಂದರೆ, ಅನ್ನದಾನ ಮಾಡಲು ದೇಣಿಗೆ ನೀಡಿದವನಿಗೆ ಅಹಂಕಾರ ಬರದಿರಲಿ ಎಂದು ಈ ಕ್ರಿಯೆಯನ್ನು ‘ನಾರಾಯಣ ಸೇವೆ’ ಎಂದು ರಮಣರು ಕರೆದರು. ಅಬ್ಬಾ ಇವರ ನಿಸ್ವಾರ್ಥ ಸೇವೆಗೆ ಇದಕ್ಕಿಂತ ಬೇರೆ ಉದಾಹರಣೆ ಬೇಕೇ? ಮತ್ತೊಂದು ನಂಬಿಕೆ ಇಲ್ಲಿನ ಭಕ್ತರಲ್ಲಿ ಮನೆ ಮಾಡಿದೆ – 25 ಮಂದಿ ಭಕ್ತರು ಊಟ ಮಾಡಿದರೆ ಅವರಲ್ಲಿ ಒಬ್ಬ ಸಿದ್ದನಿದ್ದೇ ಇದ್ದೇ ಇರುತ್ತಾನೆ ಎಂದೂ 108 ಜನರು ಪ್ರಸಾದ ಸ್ವೀಕರಿಸಿದರೆ ಅವರಲ್ಲಿ ಸಾಕ್ಷಾತ್ ಶಿವನು ಪ್ರತ್ಯಕ್ಷನಾಗಿದ್ದು ಪ್ರಸಾದ ಸ್ವೀಕರಿಸುತ್ತಾನೆ ಎಂಬ ಪ್ರತೀತಿಯಿದೆ. ಸಂಜೆ ನಾಲ್ಕೂವರೆಗೆ ರಮಣರು ರಚಿಸಿರುವ ಗ್ರಂಥಗಳ ಪಠಣ ಇದ್ದು ಸಾಧಕರಲ್ಲಿ ಆಧ್ಯಾತ್ಮದ ಅರಿವನ್ನು ಮೂಡಿಸುವ ಯತ್ನ, ಉದಾಹರಣೆಗೆ ‘ನಾನು ಯಾರು ಎಂಬ ವಿಚಾರ ಹೊತ್ತ ಮನಸ್ಸು ಅಂತರ್ಮುಖವಾಗಿ ಹೃದಯವನ್ನು ಸೇರುತ್ತಲೇ ‘ನಾನು’ ಎನ್ನುವ ಅಹಂಕಾರದ ಶಿರವು ಮುರಿದು ಅದು ನಾಶವಾಗುತ್ತದೆ.’ ‘ನಾನು ಎನ್ನುವ ದೇಹಾತ್ಮ ಬುದ್ಧಿಯಿಲ್ಲದ ನೆಲೆಯೇ ಸರ್ವೋತ್ತಮ ನೆಲೆ, ಸತ್ ಚಿತ್ ಆತ್ಮನ ನೆಲೆ’ ‘ಜೀವ, ಜಗತ್ತು, ಮತ್ತು ಈಶ್ವರ – ಮೂರನ್ನೂ ಎಲ್ಲ ಮತ ಒಪ್ಪುವುವು’ ..ಹೀಗೆ ಸಂಕ್ಷಿಪ್ತವಾಗಿ ಮಾನವ ಧರ್ಮದ ಬಗ್ಗೆ ಆತ್ಮ ಚಿಂತನೆ ಮಾಡುತ್ತಾ ಜ್ಞಾನದ ಜ್ಯೋತಿಯಾಗಿ ಬೆಳಗಿದರು ರಮಣರು. ರಮಣರನ್ನು ಸುಬ್ರಹ್ಮಣ್ಯನ ಅವತಾರವೆಂದೂ ಕೆಲವರ ನಂಬಿಕೆ. ಹಾಗಾಗಿ ಇಲ್ಲಿ ನವಿಲುಗಳು ಸ್ವಚ್ಛಂದವಾಗಿ ವಿಹರಿಸುವುದನ್ನು ಕಾಣಬಹುದು. ಸಂಜೆ ಐದೂವರೆಗೆ ಸರಿಯಾಗಿ ರಮಣರ ಮಾತೃಭೂತೇಶ್ವರ ದೇಗುಲದಲ್ಲಿ ಶ್ರೀಚಕ್ರ ಪೂಜೆಯು ನೆರವೇರುವುದು. ಏಳೂವರೆಗೆ ಫಲಾಹಾರ. ನಂತರ ವಿಶ್ರಾಂತಿ. ಇದು ರಮಣಾಶ್ರಮದ ದಿನಚರಿ.
ಅರುಣಾಚಲ ಶಿವ, ಅರುಣಾಚಲ ಶಿವ, ಅರುಣಾಚಲ ಶಿವ ಎಂದು ಹಾಡುತ್ತಾ ಸಾಗುತ್ತಿರುವ ರಮಣರ ಶಿಷ್ಯರನ್ನು ಕಂಡಿರಾ? ಈಗ ರಮಣರ ಪೂರ್ವಾಶ್ರಮದ ಕಥೆಯನ್ನು ಕೇಳುವ ಸಮಯ, ‘ಹದಿನಾರರ ಹೊಸ್ತಿಲಲ್ಲಿದ್ದ ಬಾಲಕ, ಅರುಣಾಚಲೇಶ್ವರ ದೇಗುಲದಲ್ಲಿ ದಿನಗಟ್ಟಲೇ ಧ್ಯಾನಕ್ಕೆ ಕುಳಿತಿರುವನು. ಅವನನ್ನು ಕಂಡ ಅರ್ಚಕರು, ಅವನಿಗೆ ಎಚ್ಚರವಾದಾಗ ತಿನ್ನಲೆಂದು ಊಟವನ್ನು ಅವನ ಬಳಿಯಿಡುತ್ತಿದ್ದರು. ಕೆಲವು ಬಾರಿ ಹಸಿವಾದಾಗ ಹುಡುಗನು ಅನ್ನವನ್ನು ತಿನ್ನುತ್ತಿದ್ದನು, ಬಹಳಷ್ಟು ಬಾರಿ ಅವನಿಗೆ ಎಚ್ಚರವಾಗುತ್ತಲೇ ಇರಲಿಲ್ಲ. ಕಿಡಿಗೇಡಿ ಹುಡುಗರು, ಅವನನ್ನು ಎಚ್ಚರಿಸಲು ಅವನ ಮೇಲೆ ಕಲ್ಲು ಎಸೆದದ್ದೂ ಉಂಟು. ಈ ಹುಡುಗರ ಉಪಟಳ ಹೆಚ್ಚಿದಾಗ ರಮಣರು ಆ ದೇಗುಲದ ನೆಲ ಅಂತಸ್ತಿನಲ್ಲಿದ್ದ ಪಾತಾಳಲಿಂಗದ ಬಳಿ ಧ್ಯಾನಕ್ಕೆ ಕೂರುತ್ತಾರೆ. ಅಲ್ಲಿದ್ದ ಕ್ರಿಮಿ ಕೀಟಗಳು ಅವನನ್ನು ಕಚ್ಚಿ ಘಾಸಿ ಮಾಡಿದರೂ ಅವನಿಗೆ ಎಚ್ಚರವೇ ಇರಲಿಲ್ಲ. ಆಗ ಶೇಷಾದ್ರಿಸ್ವಾಮಿಗಳು ಕೃಶದೇಹಿಯಾಗಿದ್ದ ಹುಡುಗನನ್ನು ಎತ್ತಿ ತಂದು ಉಪಚರಿಸಿ, ಅರುಣಾಚಲದ ಬೆಟ್ಟದಲ್ಲಿದ್ದ ಗುರುಮೂರ್ತ ದೇವಾಲಯದಲ್ಲಿ ಬಿಡುವರು. ಮುಂದೆ ರಮಣರ ಯೋಗಕ್ಷೇಮವನ್ನು ನೋಡಿಕೊಂಡವರು ಪಳನಿಸ್ವಾಮಿ ಎಂಬ ಸಂತರು. ಇವರ ಹೆಸರು, ಕುಲ ಗೋತ್ರ ಯಾವುದೂ ಗೊತ್ತಿಲ್ಲದ ಕಾರಣ ಎಲ್ಲರೂ ‘ಬ್ರಾಹ್ಮಣಸ್ವಾಮಿ’ ಎಂದೇ ಕರೆಯುತ್ತಿದ್ದರು. ಸದಾ ಮೌನಕ್ಕೆ ಶರಣಾದವರನ್ನು ಪದೇ ಪದೇ ‘ನೀವು ಯಾರು?’ ಎಂದು ಕೇಳಿದಾಗ ರಮಣರು ಒಂದು ಕಾಗದದ ಚೂರಿನ ಮೇಲೆ ತಮ್ಮ ಹೆಸರು ಹಾಗೂ ತಮ್ಮ ಊರನ್ನೂ ಬರೆದು ತಿಳಿಸುತ್ತಾರೆ. ಅಂದಿನಿಂದ ಈ ತೇಜಸ್ವಿಯಾದ ಹುಡುಗನಿಗೆ ‘ರಮಣ ಮಹರ್ಷಿ’ ಎಂದು ಕರೆಯತೊಡಗುತ್ತಾರೆ. ಈ ಬ್ರಾಹ್ಮಣ ಸ್ವಾಮಿಯ ಸನಿಹ ಕುಳಿತರೆ ಸಾಕು, ಅವರ ಕಷ್ಟಗಳೆಲ್ಲಾ ಪರಿಹಾರವಾಗುತ್ತಿತ್ತಂತೆ. ಹಾಗಾಗಿ ಸಂಕಟದಲ್ಲಿದ್ದವರೆಲ್ಲಾ ರಮಣ ಮಹರ್ಷಿಗಳ ದರ್ಶನಕ್ಕೆ ದಂಡು ದಂಡಾಗಿ ಬರುತ್ತಿದ್ದರು.
ಈ ಶತಮಾನ ಕಂಡ ಮಹೋನ್ನತ ಚೇತನ ಶ್ರೀ ಭಗವಾನ್ ರಮಣ ಮಹರ್ಷಿಗಳು. ಇವರ ಜನನ 30 ಡಿಸೆಂಬರ್, 1879. ಸುಂದರಂ ಅಯ್ಯರ್ ಹಾಗೂ ಅಳಗಮ್ಮಾಳ್ ದಂಪತಿಗಳಿಗೆ ಇವರು ಜನಿಸಿದರು. ವೆಂಕಟರಮಣನು ಕ್ರಿಶ್ಚಿಯನ್ ಶಾಲೆಗಳಲ್ಲಿ ವ್ಯಾಸಂಗ ಮಾಡಿದರು. ಅದ್ಭುತವಾದ ಸ್ಮರಣ ಶಕ್ತಿ ಇದ್ದ ರಮಣರು, ಒಮ್ಮೆ ಕೇಳಿದರೆ ಸಾಕು ಅದನ್ನು ನೆನೆಪಿಟ್ಟುಕೊಳ್ಳುತ್ತಿದ್ದರು. ತಮ್ಮ ಹದಿನಾರರ ವಯಸ್ಸಿನಲ್ಲಿಯೇ ಸಾವಿನ ಭೀಕರ ಅರಿವು ಪಡೆದರು, ತಾವು ಸಾಯುತ್ತಿದ್ದೇವೆಂದು ಭ್ರಮಿಸಿ, ಸತ್ತಮೇಲೆ ದೇಹದ ಸ್ಥಿತಿ ಏನಾಗುವುದು ಎಂದು ಕಲ್ಪಿಸಿಕೊಂಡು ನಿಶ್ಚಲವಾಗಿ ಮಲಗುವರು, ತನ್ನ ದೇಹವನ್ನು ಶ್ಮಶಾನದಲ್ಲಿ ಸುಟ್ಟಂತೆ, ಆಗ ತನ್ನಲ್ಲಿ ಒಂದು ಅದ್ಭುತವಾದ ಚೈತನ್ಯ ಸ್ಫುರಿಸಿದಂತೆ ಆತ್ಮಾನುಭವ ಪಡೆದರು. ಅಂದಿನಿಂದ ಅವರು ಬೇರೆಯೇ ವ್ಯಕ್ತಿಯಾದರು. ಸದಾ ಆಳವಾದ ಧ್ಯಾನದ ಸ್ಥಿತಿಯಲ್ಲಿ ಕುಳಿತು ಬಿಡುತ್ತಿದ್ದರು. ಆಗಾಗ್ಗೆ ಮಧುರೈನ ಮೀನಾಕ್ಷಿ ದೇಗುಲದಲ್ಲಿ ಧ್ಯಾನಸ್ಥರಾಗಿ ಕುಳಿತು ಬಿಡುತ್ತಿದ್ದರು. ದೇವರು ಸ್ವರ್ಗದಿಂದ ಇಳಿದು ಬಂದು ತನಗೆ ದರ್ಶನ ನೀಡಬಹುದೆಂದು ಕಾತುರದಿಂದ ಕಾಯುತ್ತಿದ್ದರು. ತನ್ನ ಸ್ನೇಹಿತರಿಂದ, ಕುಟುಂಬದವರಿಂದ ದೂರವೆ ಇದ್ದು ಬಿಡುತ್ತಿದ್ದರು. ವಿದ್ಯಾಬ್ಯಾಸದ ಬಗ್ಗೆ ಸಂಪೂರ್ಣ ಆಸಕ್ತಿಯನ್ನು ಕಳೆದುಕೊಂಡರು. ಒಮ್ಮೆ ಬಂಧುಗಳೊಬ್ಬರು ಅರುಣಾಚಲದ ಬಗ್ಗೆ ಹೇಳಿದಾಗ, ಅವರಲ್ಲಿ ಶಿವನನ್ನು ಕಾಣಬೇಕೆಂಬ ತೀವ್ರವಾದ ಹಂಬಲ ಗರಿಗೆದರಿತ್ತು. ತಕ್ಷಣವೇ ಚಿಕ್ಕಪ್ಪನ ಮನೆಯಿಂದ ಅರುಣಾಚಲಕ್ಕೆ ಹೊರಟೇಬಿಟ್ಟರು. ಅವರಿಗಾಗಿ ದೇಗುಲದ ಮೂರು ಬಾಗಿಲುಗಳೂ ತೆರೆದಿತ್ತೆಂದು ಹೇಳುತ್ತಾರೆ. ಅಂದಿನಿಂದ ದೇಗುಲದಲ್ಲಿ ಕುಳಿತು ಸಮಾಧಿಸ್ಥರಾಗಿಬಿಡುತ್ತಿದ್ದರು. ದೇಗುಲಕ್ಕೆ ಬರುತ್ತಿದ್ದ ಕೆಲವು ಭಕ್ತರು ಅವರನ್ನು ಕಾಳಜಿಯಿಂದ ನೋಡಿಕೊಂಡರು.
ಉಪನಿಷತ್ತಿನಲ್ಲಿ ಹೇಳುವ ಹಾಗೆ ಆತ್ಮಸಾಕ್ಷಾತ್ಕಾರವನ್ನು ಪಡೆಯಲು ಎರಡು ಮಾರ್ಗಗಳಿವೆ – ಪಿಪೀಲಿಕಾ ಮಾರ್ಗ ಹಾಗೂ ಶುಕಮಾರ್ಗ. ರಮಣರು ಬಳಸಿದ್ದು ಶುಕಮಾರ್ಗ. ಪಿಪೀಲಿಕಾ ಎಂದರೆ ಇರುವೆ. ಶುಕ ಎಂದರೆ ಗಿಳಿ. ನೆಲದ ಮೇಲೆ ಹರಿವ ಇರುವೆ, ಮರದ ಮೇಲಿನ ಮಾಗಿದ ಮಾವಿನ ಹಣ್ಣಿನ ಪರಿಮಳವನ್ನು ಗ್ರಹಿಸಿದಾಗ, ಮೆಲ್ಲ ಮೆಲ್ಲನೆ ಮರದ ಮೇಲೇರುತ್ತಾ, ರೆಂಬೆ ಕೊಂಬೆಗಳ ಮೇಲೆ ಸಂಚರಿಸಿ ಕೊನೆಗೂ ಹಣ್ಣನ್ನು ಸವಿಯುತ್ತದೆ. ಇದು ದೀರ್ಘಕಾಲ ತೆಗೆದುಕೊಳ್ಳುವ ಕಷ್ಟಕರವಾದ ಮಾರ್ಗ. ಇದಕ್ಕೆ ಬೇಕು ಧೃಡ ಸಂಕಲ್ಪ, ಶ್ರದ್ಧೆ, ಸಹನೆ ಹಾಗೂ ನಿರಂತರ ಪ್ರಯತ್ನ.ಇದಕ್ಕೆ ಪ್ರತಿಯಾಗಿ ಇರುವುದು ಶುಕಮಾರ್ಗ. ಗಿಳಿಯು ಮಾವಿನ ಹಣ್ಣಿನ ಪರಿಮಳವು ಬರುತ್ತಿದ್ದಂತೆ ನೇರವಾಗಿ ಹಾರಿಹೋಗಿ ಹಣ್ಣನ್ನು ಸವಿಯುವುದು. ಇದು ಬಹಳ ಸರಳವಾದ ಅನಾಯಸಕರವಾದ ಮಾರ್ಗ. ಮೊದಲನೆಯದು ಕರ್ಮೋಪಾಸನೆಗಳ ದಾರಿಯಾದರೆ ಎರಡನೆಯದು ಜ್ಞಾನವೈರಾಗ್ಯಗಳ ದಾರಿ.
ರಮಣರು 23 ವರ್ಷಗಳು ಅರುಣಾಚಲದ ಬೆಟ್ಟದ ಗುಹೆಗಳಲ್ಲಿ ಕುಳಿತು ಧ್ಯಾನ ಮಾಡುತ್ತಾರೆ.. ಪ್ರತಿ ನಿತ್ಯ ಎರಡು ಬಾರಿ ಅರುಣಗಿರಿಯನ್ನು ಹತ್ತಿ ಇಳಿಯುತ್ತಾರೆ. ಈ ಬೆಟ್ಟದ ಕಲ್ಲು ಕಲ್ಲಿಗೂ ರಮಣರ ಪಾದಸ್ಪರ್ಶ ಆಗಿದೆ. ಅರವತ್ಮೂರು ನಯನಾರ್‌ಗಳ ಜೀವನಚರಿತ್ರೆಯಾದ ‘ಪೆರಿಯ ಪುರಾಣಂ’ ಅಭ್ಯಸಿಸುತ್ತಾರೆ. ಇವರ ಕೀರ್ತಿ ಎಲ್ಲೆಡೆ ಪಸರಿಸಿದಂತೆ ಹಲವು ತತ್ವಜ್ಞಾನಿಗಳು ಇವರ ಬಳಿ ತಮ್ಮ ಸಂದೇಹಗಳನ್ನು ಪರಿಹರಿಸಿಕೊಳ್ಳಲು ಬರುತ್ತಾರೆ. ಶಿವಪ್ರಕಾಶ್ ಪಿಳ್ಳೈರವರು ‘ನಾನು ಯಾರು’ ಎಂಬ ಪ್ರಶ್ನೆಯನ್ನು ರಮಣರ ಮುಂದಿಡುತ್ತಾರೆ. ಮೌನಕ್ಕೆ ಶರಣಾಗಿದ್ದ ರಮಣರು ಕೆಲವು ಬಾರಿ ಚುಟುಕಾದ ಉತ್ತರಗಳನ್ನು ನೀಡುತ್ತಾರೆ, ಮತ್ತೆ ಕೆಲವು ಬಾರಿ ಬರೆದು ತೋರಿಸುತ್ತಾರೆ. ತಾವು ಕೇಳಿದ ಹದಿನಾಲ್ಕು ಪ್ರಶ್ನೆಗಳಿಗೆ ರಮಣರು ನೀಡಿದ ಉತ್ತರಗಳನ್ನೆಲ್ಲಾ ಸಂಗ್ರಹಿಸಿ ಪಿಳ್ಳೈಯವರು ಒಂದು ಪುಸ್ತಕವನ್ನು ಪ್ರಕಟ ಮಾಡುತ್ತಾರೆ. ಇದು ಜಗತ್ತಿನ ಹಲವು ಭಾಷೆಗಳಲಿ ಭಾಷಾಂತರವಾಗಿದ್ದು, ರಮಣರ ಮೂಲ ಸಿದ್ಧಾಂತಕ್ಕೆ ಕ್ಷಕಿರಣ ಬೀರುವಂತಿದೆ.
ರಮಣರೂ ಗ್ರೀಕ್ ತತ್ವಜ್ಞಾನಿಯಾಗಿದ್ದ ಸಾಕ್ರಟೀಸ್‌ನಂತೆ ಆತ್ಮ ವಿಚಾರಕ್ಕೆ ಪ್ರಾಮುಖ್ಯತೆಯನ್ನು ಕೊಡುತ್ತಿದ್ದರು. ಆತ್ಮವಿಚಾರ ಮಾಡಲಿಕ್ಕೆ ಯೋಗಾಭ್ಯಾಸ ಅತ್ಯುತ್ತಮವಾದ ವಿಧಾನ ಎಂದು ರಮಣರು ಹೇಳುತ್ತಾರೆ – ಉಸಿರಾಟವನ್ನು ನಿಗ್ರಹಿಸಿ, ಮನಸ್ಸನ್ನು ಸಮಸ್ಥಿತಿಗೆ ತಂದು ಧ್ಯಾನ ಮಾಡಲು ಅನುವು ಮಾಡಿಕೊಡುವುದು. ಸಾಧಕನು ಏಕಾಗ್ರತೆಯಿಂದ ತನ್ನನ್ನು ತಾನು ಗಮನಿಸುತ್ತಾ ಗೊಂದಲಕ್ಕೊಳಗಾದ ಮನಸ್ಸನ್ನು ಶಾಂತಗೊಳಿಸಿದಾಗ, ದೇವರೊಡನೆ ಅನುಸಂಧಾನ ನಡೆಯುವುದು. ರಮಣರ ಮಾತುಗಳನ್ನು ಕೇಳಿ, ‘ಈ ಬಾಹ್ಯ ಪ್ರಪಂಚ ನಶ್ವರ, ಆದುದರಿಂದ ಅಂತರ್ಮುಖಿಯಾಗಿ ನಿನ್ನ ಒಳಗಣ್ಣನ್ನು ತೆರೆ, ಸಹಜ ಸಮಾಧಿಯಲ್ಲಿ ಕುಳಿತು ಆತ್ಮವನ್ನು ಗಮನಿಸು. ನಿನ್ನ ಅನುಭವದ ಪರಿಧಿಯಲ್ಲಿಯೇ ಚಿಂತಿಸು ಆತ್ಮಸಾಕ್ಷಾತ್ಕಾರವನ್ನು ಪಡೆಯುವೆ. ಮೋಕ್ಷ ಪಡೆಯುವ ಮಾರ್ಗ ಯಾವುದು ಎಂದರೆ ಎಲ್ಲಾ ಆಸೆಗಳನ್ನು ಬಿಡುವುದು, ಪವಿತ್ರಗ್ರಂಥಗಳ ಪಠಣ, ಪರಿಶುದ್ಧವಾದ ಮನಸ್ಸು, ಜ್ಞಾನ, ಅನುಭವಗಳಿಂದ ಮೋಕ್ಷದತ್ತ ಸಾಗಬಹುದು. 1850 ರಿಂದ 1950 ರವರೆಗೆ ನಾಲ್ಕು ಜನ ಮಹಾಪುರುಷರು ಉದಯಿಸಿದರು – ರಾಮಕೃಷ್ಣ ಪರಮಹಂಸರು ಭಕ್ತಿಯೋಗದ ಅಪರಾವತಾರವಾದರೆ, ವಿವೇಕಾನಂದರು ಜ್ಞಾನಯೋಗದ ಪ್ರತೀಕವಾದರು. ಮಹಾತ್ಮ ಗಾಂಧಿಯವರು ಕರ್ಮಯೋಗದ ಸಂಕೇತವಾದರೆ, ರಮಣ ಮಹರ್ಷಿಗಳು ಜ್ಞಾನಯೋಗದ ನಕ್ಷತ್ರವಾಗಿ ಮಿನುಗಿದರು.
ಯೋಗ ಗೆಳತಿಯರು ರಮಣಾಶ್ರಮದಲ್ಲಿ ಕುಳಿತು, ರಮಣರ ಆತ್ಮವಿಚಾರವನ್ನು ಮಂಥನ ಮಾಡುತ್ತಾ ಧ್ಯಾನಕ್ಕೆ ಕುಳಿತರು. ಅಲ್ಲಿಂದು ಏಳುವ ಮನಸ್ಸು ಯಾರಿಗೂ ಇಲ್ಲ, ಮತ್ತೊಮ್ಮೆ ಬಂದು ಮೂರು ದಿನಗಳ ಕಾಲ ಇಲ್ಲಿಯೇ ಉಳಿದು ಧ್ಯಾನ ಮಾಡೋಣ ಎಂದು ಅನೂ ಮತ್ತು ವೀಣಾ ಇಬ್ಬರೂ ಒಕ್ಕೊರಲಿನಿಂದ ಹೇಳಿದಾಗ ಎಲ್ಲರೂ ತಲೆಯಾಡಿಸಿದರು.

ಡಾ.ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ


ಬಹಳ ಮಾಹಿತಿಯುಕ್ತವಾದ ಚೆಂದದ ಬರಹ.
ತುಂಬಾ ಉಪಯುಕ್ತ ಮಾಹಿತಿಯನ್ನು ಒಳಗೊಂಡ ಲೇಖನ ಎಂದಿನಂತೆ ಸೊಗಸಾದ ನಿರೂಪಣೆ… ಮೇಡಂ..
ತಮ್ಮ ಸಹೃದಯ ಪ್ರತಿಕ್ರಿಯೆಗೆ ವಂದನೆಗಳು
ತಮ್ಮ ಪ್ರತಿಕ್ರಿಯೆಗೆ ವಂದನೆಗಳು ಮೇಡಂ
ಚಂದದ ನಿರೂಪಣೆ: ರಮಣಾಶ್ರಮದ ಬಗ್ಗೆ ಉತ್ತಮ ಮಾಹಿತಿ. ಧನ್ಯವಾದಗಳು ಮೇಡಂ.
ತಮ್ಮಂತಹ ಖ್ಯಾತ ಲೇಖಕರ ಪ್ರತಿಕ್ರಿಯೆಯನ್ನು ಕಂಡು ತುಂಬಾ ಸಂತೋಷವಾಯಿತು ವಂದನೆಗಳು
ನನ್ನ ಲೇಖನವನ್ನು ಪ್ರಕಟಿಸಿರುವ ಹೇಮಾ ಮೇಡಂಗೆ ವಂದನೆಗಳು
ಧನ್ಯವಾದಗಳು ಮೇಡಂ.
ನನ್ನ ದೊಡ್ಡಪ್ಪನವರು ರಮಣ ಮಹರ್ಷಿಗಳ ಭಕ್ತರಾಗಿದ್ದು, ವೈರಾಗ್ಯ ಹೊಂದಿ, ಕೊನೆಯವರೆಗೂ ಬ್ರಹ್ಮಚಾರಿಯಾಗಿಯೇ ಉಳಿದು, ಮೌನವ್ರತ ಪಾಲನೆ ಮಾಡುತ್ತಾ ಸನ್ಯಾಸಿಯಾಗಿ ಬದುಕಿದರು. ಅವರಿಗಾಗಿ ನಮ್ಮಜ್ಜ ಗುಡ್ಡದ ಮೇಲೆ ದೂರದಲ್ಲಿ ಆಶ್ರಮವನ್ನು ಕಟ್ಟಿಕೊಟ್ಟಿದ್ದರು. ಆಗ ನಾನು ಚಿಕ್ಕವಳಿದ್ದೆ… ದಿನಾ ಅವರಿಗೆ ಮಜ್ಜಿಗೆ ಕೊಂಡೊಯ್ದು ಕೊಡುವ ಕೆಲಸ ನನ್ನದಾಗಿತ್ತು. ಆಗಾಗ ಅವರನ್ನು ಭೇಟಿ ಮಾಡಲು ಜನರು ಬರುತ್ತಿದ್ದರು. ಅವರ ಪ್ರಶ್ನೆಗಳಿಗೆ ಬಳಪದಲ್ಲಿ ಬರೆದು ಉತ್ತರಿಸುತ್ತಿದ್ದರು….
ಈ ರೀತಿಯಲ್ಲಿ ರಮಣ ಮಹರ್ಷಿಗಳ ಪ್ರಭಾವ ನಮ್ಮ ಕುಟುಂಬದ ಮೇಲೂ ಬೀರಿದ ಪುಣ್ಯ ನಮ್ಮದಾಗಿದೆ.
ಸೊಗಸಾದ ಲೇಖನಕ್ಕೆ ಧನ್ಯವಾದಗಳು, ಗಾಯತ್ರಿ ಮೇಡಂ.
ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು
ರಮಣರನ್ನು ಕುರಿತು ಬರೆಹ, ಹೃದಯಕ್ಕೆ ಆಪ್ತವಾಗಿದೆ; ಆತ್ಮಕ್ಕೆ ತೃಪ್ತವಾಗಿದೆ. ಧನ್ಯವಾದಗಳು
ರಮಣರು ಸಹಜ ಸಿದ್ಧರು ಮತ್ತು ಸಾಧಕರು. ಅವಧೂತರಾಗಿ
ಕೊನೆಗೆ ದೇವಮಾನವರಾದವರು. ರಮಣರ ತತ್ತ್ವಶಾಸ್ತ್ರವು ಇಂದು ವಿದೇಶಗಳ
ವಿಶ್ವವಿದ್ಯಾಲಯದಲ್ಲಿ ಅಧ್ಯಯನವಾಗುತ್ತಿದೆ. ವಿಶೇಷವೆಂದರೆ ವಿದೇಶೀಯ
ಸಂಸ್ಕೃತಿಯ ಸೋಂಕಿಲ್ಲದ ಶುದ್ಧ ಭಾರತೀಯ ಆಧ್ಯಾತ್ಮಿಕತೆಯೇ ರಮಣರ ಬೋಧನೆಯ ಸಾರ.
ಇವರು ಮೌನವ್ರತಿ ಮತ್ತು ಯತಿ; ನಾವು ಪಾಲಿಸಬೇಕಾದ ಆದರ್ಶ. ಪಾಲಿಸಲಾದೀತೆ?
ಇಂದಿನ ಮಾತಿನ ಮಹಿಮಾಯುಗದಲ್ಲಿ!? ಕಷ್ಟ ನಮ್ಮಂಥ ನರಮನುಷರದು.
Nice one