ಪರಾಗ

ವಾಟ್ಸಾಪ್ ಕಥೆ 67: ಆಸೆಯ ಮಿತಿ.

Share Button

ಒಂದಾನೊಂದು ನಗರದ ವ್ಯಾಪಾರಿ ಲಕ್ಷ್ಮೀಪತಿಗೆ ಒಂದು ಸಂಕಲ್ಪವಿತ್ತು. ಅದೇನೆಂದರೆ ನಗರದಲ್ಲಿರುವ ಕೋಟ್ಯಧಿಪತಿಗಳ ಗುಂಪಿಗೆ ಸೇರುವಷ್ಟು ಶ್ರೀಮಂತ ನಾನಾಗಬೇಕು ಎಂದು. ಅದಕ್ಕಾಗಿ ಅವನು ಯುವಕನಾಗಿದ್ದಾಗಿನಿಂದಲೂ ತುಂಬ ಕಷ್ಟಪಟ್ಟು ಹಗಲೂ ರಾತ್ರಿ ದುಡಿಯುತ್ತಿದ್ದ. ಅವನ ಸಂಪಾದನೆ ದಿನೇದಿನೇ ವೃದ್ಧಿಯಾಗುತ್ತಲೇ ಹೋಯಿತು. ಅವನಿಗೆ ನಲವತ್ತು ವರ್ಷಗಳಾಗುವಷ್ಟರಲ್ಲಿ ಕೋಟ್ಯಧಿಪತಿಯಾದನು. ಅಲ್ಲಿಗೆ ಅವನಾಸೆ ಪೂರ್ತಿಯಾಗಲಿಲ್ಲ. ಇನ್ನಷ್ಟು, ಮತ್ತಷ್ಟು ಧನಿಕನಾಗಬೇಕೆಂದು ಆಸೆಪಟ್ಟ. ಹಣ ಸಂಗ್ರಹವಾದಂತೆ ಮೂರು-ನಾಲ್ಕು ಬಂಗಲೆಗಳನ್ನು ಕೊಂಡುಕೊಂಡ. ಅವುಗಳನ್ನು ತನಗೆ ಬೇಕಾದಂತೆ ನವೀಕರಿಸಿದ. ಆದರೂ ಆಸೆ ತೀರಲಿಲ್ಲ. ಸತತ ದುಡಿಮೆಯಲ್ಲಿ ಅವನಿಗೆ ತನ್ನ ದೇಹವನ್ನು ಸುಸ್ಥಿತಿಯಲ್ಲಿ ಇರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಷ್ಟು ವಯಸ್ಸಿಗೆ ಅವನಿಗೆ ಬಿ.ಪಿ., ಶುಗರ್, ಮುಂತಾದ ಖಾಯಿಲೆಗಳು ಅಂಟಿಕೊಂಡವು. ಅತ್ತಕಡೆಗೆ ನಿರ್ಲಕ್ಷ್ಯ ತೋರಿದನು.

ಶ್ರೀಮಂತನು ನಗರದ ಮಧ್ಯಭಾಗದಲ್ಲಿ ಒಂದು ದೊಡ್ಡ ನಿವೇಶನ ಕೊಂಡು ಅದರಲ್ಲಿ ವೈಭವೋಪೇತ ಅರಮನೆಯೊಂದನ್ನು ಕಟ್ಟಸಿದ. ಅದಕ್ಕೆ ವಿಶ್ವದ ಅತ್ಯಂತ ಪ್ರಸಿದ್ಧವಾದ ಕಲಾ ವೈಭವವನ್ನು ನೆನಪಿಸುವಂತಹ ಸಿಂಗಾರ ಮಾಡಿಸಿದ. ಗೃಹಪ್ರವೇಶಕ್ಕೆ ನಗರದ ಎಲ್ಲ ಪ್ರತಿಷ್ಠಿತರನ್ನೂ ಆಹ್ವಾನಿಸಿದ. ನೋಡಿದವರೆಲ್ಲ ಅದರ ಅಂದಚಂದಗಳಿಗೆ ಮರುಳಾಗಿ ಬಾಯಿತುಂಬ ಹೊಗಳಿದರು. ಭೂರಿಭೋಜನ ಸವಿದು ಶುಭ ಹಾರೈಸಿ ಹೊರಟುಹೋದರು. ಅವನ ಹೆಂಡತಿ, ಮಕ್ಕಳು ಆಗಮಿಸಿದ್ದ ಬಂಧು ಬಾಂಧವರೊಡನೆ ಮಾತುಕತೆಗಳಲ್ಲಿ ಮಗ್ನರಾಗಿದ್ದರು. ಆಗ ಶ್ರೀಮಂತನಿಗೆ ಏನೋ ಆಯಾಸ ತಲೆದೋರಿತು. ಸ್ವಲ್ಪ ವಿಶ್ರಾಂತಿ ಪಡೆದರೆ ಸರಿಹೋಗಬಹುದೆಂದು ಮಲಗುವ ಮನೆಗೆ ಹೋಗಿ ಮೆತ್ತನೆಯ ಹಾಸಿಗೆಯಲ್ಲಿ ಮಲಗಿ ಕಣ್ಮುಚ್ಚಿದ.

ನಿದ್ರೆಯ ಮಂಪರಿನಲ್ಲಿ ಅವನಿಗೆ “ನಾನು ಹೋಗುತ್ತೇನೆ” ಎಂಬ ಧ್ವನಿ ಕೇಳಿಬಂತು. ತಕ್ಷಣ ಎಚ್ಚರಮಾಡಿಕೊಂಡು “ಯಾರದು?” ಎಂದು ಪ್ರಶ್ನಿಸಿದ. “ನಾನು ನಿನ್ನ ಆತ್ಮ ನಿನ್ನ ದೇಹವನ್ನು ತೊರೆದು ಹೋಗುತ್ತೇನೆ” ಎಂದಿತು ಶ್ರೀಮಂತನಿಗೆ ಗಾಬರಿಯಾಯಿತು. “ನೀನು ಹೋಗಿಬಿಟ್ಟರೆ ನಾನು ಸಾಯುತ್ತೇನೆ.” ಎಂದನು. ಆತ್ಮವು “ಹೌದು, ನಿನ್ನೊಡನೆ ಇಷ್ಟು ವರ್ಷ ಉಳಿದಿದ್ದೇನೆ. ನಿನ್ನ ಸಂಪತ್ತು ಆಸೆಪಟ್ಟಷ್ಟು ವೃದ್ಧಿಸಿದೆ. ಆದರೆ ನಿನ್ನ ದೇಹ ಜರ್ಝರಿತವಾಗಿದೆ. ನೀನು ಸಾಹುಕಾರನಾಗುವ ಭರದಲ್ಲಿ ದೇಹವನ್ನು ನಿರ್ಲಕ್ಷಿಸಿದೆ. ಈಗ ನಿನಗೆ ತಿನ್ನಲೂ ಆಗದು, ಅರಗಿಸಿಕೊಳ್ಳಲೂ ಆಗದಷ್ಟು ಖಾಯಿಲೆಗಳು ಅಮರಿಕೊಂಡಿವೆ. ಹೀಗಿರುವ ಪರಿಸ್ಥಿತಿಯಲ್ಲಿ ನಾನು ಹೇಗೆ ತಾನೆ ಇರುವುದು? ಅದಕ್ಕೇ ನಾನು ಹೊರಟೆ” ಎಂದಿತು. ಶ್ರೀಮಂತನು ಬೇಡಿಕೊಂಡನು “ದಯವಿಟ್ಟು ಹೋಗದಿರು. ನಾನು ಈಗತಾನೆ ಅರಮನೆಯನ್ನು ಕಟ್ಟಿದ್ದೇನೆ. ಇದರಲ್ಲಿ ವಾಸಮಾಡಿಲ್ಲ.” ಎಂದನು. ಆತ್ಮವು ಹೇಳಿತು “ನಿನಗೆ ಬಂದಿರುವ ಎಲ್ಲ ಖಾಯಿಲೆಗಳ ಮಾತಂತಿರಲಿ. ಮುಖ್ಯವಾಗಿ ನಿನ್ನನ್ನು ಹಿಡಿದಿರುವುದು ಹಣದಾಸೆಯ ಖಾಯಿಲೆ. ಇದು ಮುಗಿಯುತ್ತಲೇ ಇಲ್ಲ. ತೃಪ್ತಿಯಿಲ್ಲದ ಬದುಕು ಒಂದು ಬದುಕೇ? ನನಗೆ ಬೇಸರ ಬಂದಿದೆ. ಆದ್ದರಿಂದ ನನ್ನನ್ನು ತಡೆಯದಿರು. ನಾನು ಹೊರಟೆ” ಎಂದು ನಿರ್ಗಮಿಸಿತು. ಶ್ರೀಮಂತನ ಕಣ್ಣುಗಳು ತಾವಾಗಿಯೇ ಮುಚ್ಚಿದವು. ಅವನು ದೀರ್ಘನಿದ್ರೆಗೆ ವಶನಾದ.

ಬಡತನವಿರಲಿ, ಸಿರಿತನವಿರಲಿ ಬದುಕಿನಲ್ಲಿ ಆರೋಗ್ಯ, ತೃಪ್ತಿ ಇದ್ದರೆ ಮಾತ್ರವೇ ಜೀವನ ಸಾರ್ಥಕ ಇಲ್ಲವಾದರೆ ಬದುಕಿದ್ದೂ ಸತ್ತಂತೆಯೇ.

ಸಂಗ್ರಹಣೆ ಮತ್ತುರೇಖಾಚಿತ್ರ ರಚನೆ : ಬಿ.ಆರ್.ನಾಗರತ್ನ, ಮೈಸೂರು

3 Comments on “ವಾಟ್ಸಾಪ್ ಕಥೆ 67: ಆಸೆಯ ಮಿತಿ.

  1. ಪ್ರಕಟಿಸಿದ ಸುರಹೊನ್ನೆಯ ಸಂಪಾದಕರಿಗೆ..ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *