ಬಹಳ ವರ್ಷಗಳ ನಂತರ ಬಾಲ್ಯ ಸ್ನೇಹಿತರಾಗಿದ್ದ ಶೀನ, ವೆಂಕ, ಕಾಶಿ, ಸುಬ್ಬು ಭೇಟಿಯಾದರು. ಅಂದಿನ ಕಾಲದ ಆಟಪಾಟಗಳು, ಕೂಟಗಳನ್ನೆಲ್ಲ ಮೆಲುಕು ಹಾಕಿದ್ದಾಯಿತು. ತಮ್ಮ ಹಿಂದಿನ ಸಹಪಾಠಿಗಳು, ಗುರುಗಳ ವಿಚಾರಗಳು, ತಮ್ಮ ಸಾಹಸಗಾಥೆಗಳು, ಒಂದೇ ಎರಡೇ ಪುಂಖಾನುಪುಂಖವಾಗಿ ಹೊರಬಿದ್ದವು. ತದನಂತರ ತಮ್ಮ ತಮ್ಮ ವೈಯಕ್ತಿಕ ಬದುಕಿನ ಬುತ್ತಿಯನ್ನು ಬಿಚ್ಚತೊಡಗಿದರು.
“ಏನೋ ಕಾಶಿ, ಹೇಗಿದ್ದೀಯಾ? ನಿನ್ನನ್ನು ಮದುವೇಲಿ ನೋಡಿದ್ದು. ಆನಂತರ ಫೋನ್, ಮೆಸೇಜುಗಳಿಗಷ್ಟೇ ಲಿಮಿಟ್ಟಾಯ್ತು. ಈಗ ಹೇಳು ಸಿಕ್ಕಿದ್ದೀಯಲ್ಲ ನಿನ್ನ ಮಡದಿ ಮಕ್ಕಳು ಎಲ್ಲರೂ ಸೌಖ್ಯವೇ? ಹಿರಿಯರು ಆಯ್ಕೆ ಮಾಡಿದ ನಿನ್ನ ಜೊತೆಗಾತಿ, ಚೆನ್ನಾಗಿಯೇ ಇರಬಹುದು ಜೀವನ, ಹಾಗೆಯೇ ಒತ್ತಾಸೆಯೂ ಇರುತ್ತದೆ ಅಲ್ಲವೇ?” ಎಂದು ಪ್ರಶ್ನಿಸಿದ ವೆಂಕಟೇಶ ಉರ್ಫ್ ವೆಂಕ.
“ಹೂ ಹಿರಿಯರ ಆಯ್ಕೇನೇ, ಆದರೆ ನನ್ನ ಸ್ಥಿತಿಯನ್ನು ಒಂದು ಕಾದಂಬರಿಯಾಗಿ ಬರೆಯಬಹುದು ಅಷ್ಟಿದೆ. ಈಗಿನ ಕಾಲದಲ್ಲಿ ಹೆಣ್ಣುಕೊಟ್ಟವರು ಏನೆಂದುಕೊಂಡಿದ್ದಾರೆಂಬುದೇ ತಿಳಿಯುತ್ತಿಲ್ಲ. ಅವರಿಗೆ ಮಗಳ ಹೆತ್ತವರು, ಬಂಧುಬಳಗ, ಒಡಹುಟ್ಟಿದವರು ಬೇಕು. ಕೊಟ್ಟ ಮನೆಯಲ್ಲಿ ಗಂಡನೊಬ್ಬನೇ ಇರಬೇಕಂತೆ. ಹಿಂದೆಮುಂದೆ ಯಾರೂ ಬೇಕಾಗಿಲ್ಲ. ಯಾವುದೇ ಜವಾಬ್ದಾರಿಯೂ ಮಗಳಿಗೆ ಬೇಡ. ಹಿಂದೆ ಮುಂದಿಲ್ಲವೆಂದರೆ ನಾವೇನು ಉದ್ಭವ ಮೂರ್ತಿಗಳಾ ಹೇಳು. ನಮ್ಮನ್ನು ಹೆತ್ತು ಹೊತ್ತು ಇಲ್ಲಿಯವರೆಗೆ ಸಾಕಿ ಸಲಹಿ ಬದುಕನ್ನು ಕಟ್ಟಿಕೊಟ್ಟವರನ್ನು ನಿಮ್ಮ ಪಾಡಿಗೆ ನೀವಿರಿ ಅಂತ ನಿಸೂರಾಗಿ ಹೇಗೆ ಹೇಳೋದು. ಹಾಗೆ ಹೇಳಲು ತಯಾರಿಲ್ಲವೆಂದರೆ ತೊಗೋ ಮನೆಯಲ್ಲಿ ಪ್ರತಿದಿನ ಕುರುಕ್ಷೇತ್ರ ಕಾಳಗ. ಈ ಸೂಕ್ಷ್ಮವರಿತ ನಮ್ಮ ಹೆತ್ತವರು ಕಷ್ಟವೋ ಸುಖವೋ ನಮ್ಮ ಪಾಡಿಗೆ ನಾವಿರುತ್ತೇವೆಂದು ಹಳ್ಳಿಯಲ್ಲಿದ್ದು ಹಳೆಯ ಮನೆಯನ್ನು ರಿಪೇರಿ ಮಾಡಿಸಿಕೊಂಡು ಅಲ್ಲಿದ್ದಾರೆ. ಅಲ್ಲಿ ಅವರಿಗೊಂದು ಮನೆಯಿದ್ದದ್ದಕ್ಕೆ ಪರವಾಗಿಲ್ಲ. ಇಲ್ಲದಿದ್ದರೆ ಅದರ ಪರಿಣಾಮವನ್ನು ಕಲ್ಪಿಸಿಕೊಂಡರೇ ಭಯವಾಗುತ್ತೆ ಕಣೋ ವೆಂಕ” ಎಂದು ಫಲುಕಿದ ಕಾಶಿ ವಿಶ್ವನಾಥ ಉರ್ಫ್ ಕಾಶಿ.
“ಹೂಂ ದೈವಲೀಲೆ, ನನ್ನದು ಕೇಳೋ ಕಾಶಿ, ನಾನು ಮತ್ತು ಹೆಂಡತಿ ಇಬ್ಬರೂ ಉದ್ಯೋಗಸ್ಥರು. ಹೀಗಾಗಿ ನಮ್ಮ ತಂದೆತಾಯಿಗಳನ್ನು ನಮ್ಮೊಡನೆ ಇಟ್ಟುಕೊಳ್ಳಲು ಸಮ್ಮತಿಸಿದ್ದಾಳೆ ನನ್ನ ಸತಿ ಶಿರೋಮಣಿ. ಅವರೇನು ಸುಮ್ಮನಿಲ್ಲ. ಗಾಣದೆತ್ತಿನಂತೆ ಬಹುತೇಕ ಕೆಲಸಗಳನ್ನು ಅವರೇ ಮಾಡುತ್ತಿರುತ್ತಾರೆ. ಅಪ್ಪನಿಗೆ ಮೊಮ್ಮಕ್ಕಳನ್ನು ಶಾಲೆಗೆ ಸಿದ್ಧಪಡಿಸಿ ಕರೆದುಕೊಂಡು ಹೋಗಿ ಬಿಡುವುದು, ಸಂಜೆಗೆ ಕರೆದುಕೊಂಡು ಬರುವುದು. ಶಾಲೆಯಲ್ಲಿ ಕೊಟ್ಟ ಹೋಂವರ್ಕ್ ಎಲ್ಲಾ ಅವರೇ ಮಾಡಿಸುವುದು. ಅಮ್ಮನಿಗೋ ಅಡುಗೆ, ಮನೆಗೆಲಸ, ಎಷ್ಟು ಮಾಡಿದರೂ ಆಗಾಗ ಕೊಂಕುನುಡಿ ಆಡುತ್ತಲೇ ಇರುತ್ತಾಳೆ ಸೊಸೆ. ವಿರಾಮವಾಗಿ ಕುಳಿತು ಬಿಸಿಬಿಸಿಯಾಗಿ ಊಟ ಬಯಸುವ ವಯಸ್ಸು ಮುದುಕರದ್ದು. ಅಂಥಾದ್ದರಲ್ಲಿ ಕೈಕಾಲು ಎಳೆದುಕೊಂಡು ಅವರೇ ಕೆಲಸಗಳನ್ನೆಲ್ಲ ಮಾಡುವುದನ್ನು ನನಗೆ ನೋಡಲಿಕ್ಕಾಗದು. ಜೋರು ಮಾಡಿದರೆ ಪರಿಣಾಮ ಘೋರ. ನನ್ನಪ್ಪ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ಪೆನ್ಷನ್ ಇಲ್ಲ. ಅವರಲ್ಲಿದ್ದ ಅಲ್ಪಸ್ವಲ್ಪ ಉಳಿತಾಯವನ್ನು ನಾನು ಮನೆ ಕಟ್ಟುವಾಗ ನನಗೇ ಕೊಟ್ಟರು. ಇನ್ನೇನಾದರೂ ಉಳಿದಿದ್ದರೆ ಅವರ ಖರ್ಚುವೆಚ್ಚಕ್ಕೆ. ಈಗ ಎಲ್ಲಿಗೆ ಹೋಗಲು ಸಾಧ್ಯ. ಸಮಯ ಸಿಕ್ಕಾಗಲೆಲ್ಲ ಹೆಂಡತಿಗೆ ಗೊತ್ತಾಗದಂತೆ ನಾನೇ ವಿಚಾರಿಸಿ ಚೂರುಪಾರು ಸಹಾಯ ಮಾಡುತ್ತಾ ಯೋಗಕ್ಷೇಮ ವಿಚಾರಿಸುತ್ತ ಇದ್ದೇನೆ. ಮೊಮ್ಮಕ್ಕಳಿಗೆ ಅಜ್ಜಿತಾತನೊಡನೆ ಒಳ್ಳೆಯ ಬಾಂಧವ್ಯವಿದೆ. ಅದೊಂದೇ ನೆಮ್ಮದಿ. ಹೇಗೋ ಒಟ್ಟಿಗಿರುವುದರಿಂದ ಯೋಚನೆಗಳು ಕಡಿಮೆ. ಅದೇ ಖುಷಿ.” ಎಂದ ವೆಂಕ.
“ಏ ನಿಮ್ಮಿಬ್ಬರದ್ದೇನು ಮಹಾ ಅನುಭವಾಂತ ಹೇಳ್ತೀರಿ. ಇಲ್ಲಿ ನನ್ನದು ಕೇಳಿ” ಎಂದು ಪ್ರಾರಂಭಿಸಿದ ಶೀನ ಉರ್ಫ್ ಶ್ರೀನಿವಾಸ. ಉಳಿದೆಲ್ಲರೂ “ಹೇಳುವಂತವನಾಗು ಗೆಳೆಯಾ” ಎಂದರು ನಾಟಕೀಯವಾಗಿ. “ಹಾ..ನನ್ನದು ಖಾಸಗಿ ಕಂಪನಿಯೊಂದರಲ್ಲಿ ಸಣ್ಣಉದ್ಯೋಗ. ನನ್ನವಳೋ ಸರ್ಕಾರಿ ಕಛೇರಿಯಲ್ಲಿ ಉದ್ಯೋಗಸ್ಥೆ, ಅದೂ ಬೇರೆ ಊರಿನಲ್ಲಿ. ಬೆಳಗ್ಗೇನೇ ಹೋಗಿ ಸಂಜೆಗೆ ಬರುತ್ತಾಳೆ. ಬೆಳಗಿನ ಹೊತ್ತು ಎದ್ದು ಹೊರಡುವುದರೊಳಗೆ ಎಷ್ಟು ಸಾಧ್ಯವೋ ಅಷ್ಟು ಕೆಲಸ ಮಾಡಿ ಹೋಗುತ್ತಾಳೆ. ಸಂಜೆಗೆ ಆರೂವರೆಗೋ, ಏಳಕ್ಕೋ ಬರುತ್ತಾಳೆ. ಒಮ್ಮೊಮ್ಮೆ ವಿಶೇಷವಾಗಿ ಅದಕ್ಕೂ ಲೇಟಾಗಿ. ತಿಂಡಿ, ಅಡುಗೆ, ಇರುವ ಮಗಳೊಬ್ಬಳ ಜವಾಬ್ದಾರಿ ಎಲ್ಲವೂ ನನ್ನದೇ. ಆಕ್ಷೇಪಿಸಲು ಪದಗಳೇ ಇಲ್ಲ. ಎಲ್ಲವೂ ಅನಿವಾರ್ಯ. ವಯಸ್ಸಾದ ನಮ್ಮಮ್ಮ ತಾವೇನೂ ಮಾಡಲು ಸಾಧ್ಯವಾಗದೆ, ಸೊಸೆಗೇನೂ ಹೇಳಲಾಗದೇ, ಸುಮ್ಮನೆ ಇರಲಾಗದೆ ನಮ್ಮಣ್ಣನ ಮನೆಯಲ್ಲೆ ಠಿಕಾಣಿ ಹಾಕುತ್ತಾಳೆ. ಅಗೊಮ್ಮೆ ಈಗೊಮ್ಮೆ ನೆಂಟಳಂತೆ ಬಂದು ಹೋಗುತ್ತಾಳೆ. ಸೇವಾ ಭದ್ರತೆ ಇರುವ ಕೆಲಸ ನನ್ನಾಕೆಯ ಸರ್ಕಾರಿ ಉದ್ಯೋಗ. ನನ್ನದೋ ಖಾಸಗಿ ಹೇಳಲಾಗದು. ಆದ್ದರಿಂದ ಈ ಹೊಂದಾಣಿಕೆ. ಪಾಲಿಗೆ ಬಂದದ್ದೇ ಪಂಚಾಮೃತ” ಎಂದು ದೀರ್ಘವಾದ ನಿಟ್ಟುಸಿರು ಬಿಟ್ಟ ಶೀನ.
“ನಾವೆಲ್ಲಾ ಮಾತನಾಡುತ್ತಿದ್ದರೂ ಈ ಮಗ ಸುಬ್ಬು ಚಕಾರವೆತ್ತದೆ ಕೂತಿದ್ದಾನಲ್ಲಾ , ಯಾವಾಗ ಫೋನ್ ಮಾಡಿದರೂ ಇನ್ನೂ ಕನ್ಯಾ ಸಿಕ್ಕುತ್ತಿಲ್ಲ ಕಣ್ರೋ, ಹುಡುಕುತ್ತಲೇ ಇದ್ದೇನೆ ಅಂತ ಉತ್ತರ ಕೊಡ್ತಾನೆ. ಅದ್ಯಾರಪ್ಪಾ ನೀನು ಆದರ್ಶಪುರುಷ, ಎರಡೂ ಕುಟುಂಬಗಳನ್ನು ಸೇರಿಸುತ್ತ ಬದುಕು ರೂಪಿಸಿಕೊಳ್ಳಲು ಕಾಯ್ದಿರುವ ಪುಣ್ಯಶಾಲಿಗೆ ಏಕಿನ್ನೂ ಕನ್ಯೆ ದೊರಕಿಲ್ಲ?” ಎಮದು ಚುಡಾಯಿಸಿದರು ಎಲ್ಲರೂ.
“ಹೂ..ಅಣಕಿಸಿರೋ ಅಣಕಿಸಿ. ನನ್ನ ಕೈ ಹಿಡಿಯುವವಳು ಪುಣ್ಯ ಮಾಡಿರಬೇಕು. ನಾನೆಂತಹ ಉದಾತ್ತ ಧ್ಯೇಯಗಳನ್ನಿಟ್ಟುಕೊಂಡಿದ್ದೇನೆ ಗೊತ್ತಾ? ಅವುಗಳನ್ನು ನಾನು ನಿಮಗಿಂತ ಮೊದಲಿನಿಂದಲೇ ಹೇಳಿಕೊಳ್ಳುತ್ತಾ ಬರುತ್ತಿದ್ದೇನೆ. ಆದರೆ ಹೆಣ್ಣು ಹೆತ್ತವರಿಗಿರಲಿ, ಆ ಹೆಣ್ಣುಗಳಿಗೂ ಅರ್ಥವಾಗುತ್ತಿಲ್ಲ” ಎಂದು ಮುತ್ತುಗಳನ್ನು ಉದುರಿಸಿದ ಸುಬ್ಬು ಅಲಿಯಾಸ್ ಸುಬ್ರಮಣ್ಯ.
“ಓ ..ಹೌದಲ್ಲವೇ ಸುಬ್ಬೂ ನೀನು ಹೇಳುತ್ತಿದ್ದುದು ಅಲ್ಪಸ್ವಲ್ಪ ನೆನಪಿದೆ ಪೂರ್ತಿಯಾಗಿಲ್ಲ. ಈಗ ಸಂಕ್ಷಿಪ್ತವಾಗಿ ಹೇಳೋಣಾಗಲಿ. ನಿಮ್ಮ ಮಾತು ಕೇಳಿ ನಮ್ಮ ಗಮನಕ್ಕೆ ಯಾರಾದರೂ ಬಂದರೆ ನಮ್ಮಂತೆ ನಿಮ್ಮನ್ನೂ ಸಂಸಾರ ಬಂಧನಕ್ಕೆ ಸಿಲುಕಿಸಲು ಪ್ರಯತ್ನಿಸುತ್ತೇವೆ. ಈಗಾಗಲೇ ಬಹಳ ತಡವಾಗಿದೆ. ನಿಮ್ಮ ಮುಂಭಾಗದ ಮಂಡೆ ಗೋಪಾಳವಾಗಿಬಿಟ್ಟಿದೆ. ಪೂರ್ತಿಯಾಗಿ ಬೋಳಿಸಿಕೊಂಡರೆ ಅದೊಂದು ಮೊಟ್ಟೆಯಾಗಿ ಹೊಸ ಫ್ಯಾಷನ್ ಆಗಬಹುದು. ಕಮಾನ್ ಇನ್ನೊಮ್ಮೆ ನಮ್ಮ ಅವಗಾಹನೆಗೆ ತಮ್ಮ ಧೈಯೋದ್ದೇಶಗಳನ್ನು ಹೇಳಿ.” ಎಂದರು ಎಲ್ಲರೂ.
“ಆಡಿ ಆಡಿ ಬೆಕ್ಕಿಗೆ ಚೆಲ್ಲಾಟವಾದರೆ ಇಲಿಗೆ ಪ್ರಾಣಸಂಕಟ ಎನ್ನುವಂತಾಗಿದೆ ನನ್ನ ಗತಿ. ಅದರೂ ಹೆಳ್ತೇನೆ ಕೇಳಿ. ನಾನಿರುವ ಈ ಬೆಂಗಳೂರಿನಲ್ಲಿರುವ ಕನ್ಯೆಯೇ ಬೇಕು. ಏಕೆಂದರೆ ಅಲ್ಲಿ ನಾನು ನನ್ನ ಸ್ವಂತ ಉದ್ಯೋಗ ಕಟ್ಟಿಕೊಂಡಿದ್ದೇನೆ. ನಮ್ಮಪ್ಪನ ಕಾಲದಿಂದ ಮುಂದುವರೆಸಿಕೊಂಡಿರುವ ಪೆಟ್ಟಿಗೆ ಅಂಗಡಿ ಮತ್ತು ರಿಕ್ಷಾ ಓಡಿಸುವುದು. ನನ್ನಪ್ಪನ ದೇಹಾಂತವಾದರೂ ನಾನು ಆ ಅಂಗಡಿಯನ್ನು ಮುಚ್ಚಿಲ್ಲ. ಅಮ್ಮ ನೋಡಿಕೊಳ್ಳುತ್ತಿದ್ದಾರೆ. ಮದುವೆಯಾದ ಮೇಲೆ ನನ್ನ ಹೆಂಡತಿ ಅದನ್ನು ಮುಂದುವರೆಸಿಕೊಂಡು ಹೋಗಬಹುದು. ಇನ್ನು ನನ್ನ ವಾಹನ ಸ್ವಂತದ್ದು. ಯಾರದ್ದೂ ಹಂಗಿಲ್ಲ. ಇರಲು ಹಳೆಯ ಮನೆಯಿದೆ ಅದನ್ನೊಂದಿಷ್ಟು ನವೀಕರಿಸಿದ್ದೇನೆ. ಬಂದವಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆಂದು ಭರವಸೆ ನೀಡುತ್ತೇನೆ. ಅವಳ ತಾಯಿಯ ಮನೆ ಇಲ್ಲೇ ಇರುವುದರಿಂದ ಯಾವಾಗಬೇಕಾದರೂ ಹೋಗಿ ಬರಬಹುದು. ಆಕೆಗೆ ವೈಯಕ್ತಿಕ ಕರ್ಚುವೆಚ್ಚ ಕೊಡುತ್ತೇನೆ. ಹಬ್ಬಹರಿದಿನಗಳನ್ನು ಎರಡೂ ಕುಟುಂಬಗಳು ಸೇರಿ ಆಚರಿಸಬಹುದು. ಇದರಿಂದ ಬಾಂಧವ್ಯ ಚೆನ್ನಾಗಿಯೇ ಇರುತ್ತದೆ. ಅಕೆ ಕೆಲಸಕ್ಕೆ ಹೊರಗಡೆ ಹೋಗಬೇಕೆಂದರೆ ಹೋಗಲಿ. ಅದಕ್ಕೆ ಅಡ್ಡಿ ಮಾಡುವುದಿಲ್ಲ. ಇದೆಲ್ಲವನ್ನು ಹೆಣ್ಣು ನೋಡಲು ಹೋದಲ್ಲೆಲ್ಲ ರಾಮಮಂತ್ರದ ರೀತಿಯಲ್ಲಿ ಹೇಳುತ್ತಲೇ ಇರುತ್ತೇನೆ. ಏಕೊ ಏನೊ ಒಬ್ಬರಿಗೂ ನನ್ನ ಆಂತರ್ಯದ ಮಾತುಗಳು ಅರ್ಥವಾಗುವುದೇ ಇಲ್ಲ. ಬರಿ ರಿಕ್ಷಾ ಓಡಿಸುವವನು ಎಂದುಬಿಡುತ್ತಾರೆ. ನನ್ನಮ್ಮ ಮಾತ್ರ ಭರವಸೆ ನೀಡುತ್ತಿರುತ್ತಾಳೆ. ದೇವರು ಒಂದು ಗಂಡಿಗೆ ಒಂದು ಹೆಣ್ಣೆಂದು ಸೃಷ್ಟಿ ಮಾಡಿರುತ್ತಾನೆ. ಎಂದಾದರು ಒಬ್ಬಳು ಸಿಕ್ಕುತ್ತಾಳೆ. ಚಿಂತಿಸಬೇಡ ಎಂದು. ಅಕೆ ಎಲ್ಲಿದ್ದಾಳೋ ಮಹಾರಾಯತಿ ನಾಕಾಣೆ” ಎಂದು ನಿರಾಸೆಯಿಂದ ನುಡಿದ ಸುಬ್ಬು.
“ಛೇ..ಛೇ.. ನಿನ್ನ ಮನಸ್ಸಿನಲ್ಲಿ ಇಷ್ಟೊಂದು ನೋವು ನಿರಾಸೆ ಮಡುಗಟ್ಟಿದೆ. ಎಂದು ತಿಳಿಯಿತು. ನಾವು ಗೆಳೆಯರು ನಿನ್ನ ಜೊತೆಗಿದ್ದೇವೆ. ಹುಡುಕುತ್ತೇವೆ. ನಿಮ್ಮ ತಾಯಿಯ ಮಾತು ನಿಜವಾಗಲಿ. ಆದರೆ..ಅದು ಯಾವಾಗ ಅನ್ನುವುದೇ ಪ್ರಶ್ನೆ” ಎಂದು ನಿಲ್ಲಿಸಿದರು ಎಲ್ಲರೂ.
ಅವರ ಮಾತುಗಳನ್ನು ಕೇಳಿದ ಸುಬ್ಬು “ನೀವುಗಳು ನನ್ನ ಸ್ನೇಹಿತರೋ ಶತೃಗಳೋ. ನಿಮ್ಮಗಳ ಮುಂದೆ ನನ್ನ ಕಂತೆ ಬಿಚ್ಚಿದೆನಲ್ಲ ನನಗೆ ಬುದ್ಧಿ ಇಲ್ಲ. ಆ ವಿಚಾರ ಬಿಡಿ ಹಣೆಯಲ್ಲಿ ಇದ್ದಂತೆ ಆಗುತ್ತೆ. ಈಗ ನೀವೆಲ್ಲರೂ ನನ್ನ ಜೊತೆ ನಮ್ಮನೆಗೆ ನಡೆಯಿರಿ. ನೀವುಗಳು ಬರುವ ವಿಚಾರ ನಮ್ಮಮ್ಮನಿಗೆ ತಿಳಿಸಿದ್ದೆ. ಆಕೆ ಹೋಳಿಗೆ ಮಾಡಿದ್ದಾಳೆ. ಹತ್ತಿ ನನ್ನ ವಾಹನ ರಿಕ್ಷಾ. ಶೀನಿ, ವೆಂಕ, ಕಾಶಿ ಎಲ್ಲರೂ ಜೊತೆಯಾಗಿ ಸುಬ್ಬುವಿನ ಮನೆಗೆ ಹೋಳಿಗೆಯೂಟ ಸವಿಯಲು ಹೊರಟರು.

–ಬಿ.ಆರ್.ನಾಗರತ್ನ. ಮೈಸೂರು.
ಸೂಕ್ತ ಚಿತ್ರದೊಂದಿಗೆ ನನ್ನ ಲೇಖನ ಪ್ರಕಟಿಸಿದ ಸುರಹೊನ್ನೆಯ ಪತ್ರಿಕೆ ಸಂಪಾದಕರಿಗೆ ಧನ್ಯವಾದಗಳು
Nice
ನಿಮ್ಮ ನಿರಂತರ ಓದುವಿಕೆ ಹಾಗೂ ಪ್ರತಿ ಕ್ರಿಯೆಗೆ ಧನ್ಯವಾದಗಳು ನಯನ ಮೇಡಂ
ಲೋಕೋ ಭಿನರುಚಿಃ ಅನ್ನುವಂತೆ ಜೀವನದ ವಿವಿಧ ಮಗ್ಗಲುಗಳನ್ನು ಸ್ನೇಹಿತರುಗಳ ಬಾಯಲ್ಲಿ ಸೊಗಸಾಗಿ ಆಡಿಸಿದ್ದೀರಿ. ಮುದ ನೀಡಿತು. ಬೇಗ ಸುಬ್ಬುವಿಗೆ ಒಬ್ಬ ಅನುರೂಪ ಸಂಗಾತಿ ದೊರೆಯಲಿ
ಹಹ್ಹಾ..ಆ ಹುಡುಗನಿಗೆ ಇಬ್ಬರೂ ಸೇರಿ ಕನ್ಯೆಯನ್ನು ಹುಡುಕೋಣ ಬನ್ನಿ …ಪದ್ಮಾ ಮೇಡಂ ನಿಮ್ಮ ಓದಿನ ಪ್ರತಿಕ್ರಿಯೆ ಗಾಗಿ ಧನ್ಯವಾದಗಳು ಮೇಡಂ
ಉದ್ಯೋಗಸ್ಥ ಮಹಿಳೆಯರ ಪತಿರಾಯನ ಕಥೆ
ತಂದೆ ತಾಯಿಯೊಟ್ಟಿಗೆ ಬಾಳುವವನ ಕಥೆ
ಹೆತ್ತವರನ್ನು ದೂರ ಇಟ್ಟ ಪತ್ನಿಯ ಕತೆ
ಹೆಣ್ಣು ಇನ್ನೂ ಸಿಕ್ಕಿಲ್ಲದ ಬ್ರಹ್ಮಚಾರಿಯ ಕಥೆ
ಕಥೆ ತುಂಬಾ ಚೆನ್ನಾಗಿದೆ
ಹಹ್ಹಾ..ಆ ಹುಡುಗನಿಗೆ ಇಬ್ಬರೂ ಸೇರಿ ಕನ್ಯೆಯನ್ನು ಹುಡುಕೋಣ ಬನ್ನಿ …ಪದ್ಮಾ ಮೇಡಂ ನಿಮ್ಮ ಓದಿನ ಪ್ರತಿಕ್ರಿಯೆ ಗಾಗಿ ಧನ್ಯವಾದಗಳು ಮೇಡಂ
ಸ್ಪಂದನೆಗಾಗಿ ಧನ್ಯವಾದಗಳು ಗಾಯತ್ರಿ ಮೇಡಂ
ತಮ್ಮ ತಮ್ಮ ಜೀವನದ ಪರಿಯನ್ನು ಬಿಚ್ಚಿಟ್ಟ ಸ್ನೇಹಿತರ ಅಳಲು ಕಥಾ ರೂಪದಲ್ಲಿ ಅರ್ಥಗರ್ಭಿತವಾಗಿ ಮೂಡಿಬಂದಿದೆ ನಾಗರತ್ನ ಮೇಡಂ.
ಧನ್ಯವಾದಗಳು ಶಂಕರಿ ಮೇಡಂ