ಪುಸ್ತಕ-ನೋಟ

ಕಾದಂಬರಿ : ‘ಕಶೀರ’, ಲೇಖಕಿ: ಸಹನಾ ವಿಜಯಕುಮಾರ್.

Share Button

ಶ್ರೀಮತಿ ಸಹನಾ ವಿಜಯಕುಮಾರ್ ಒಬ್ಬ ಉತ್ಸಾಹಿ ಬರಹಗಾರ್ತಿ. ಈಕೆ ಕೈಹಾಕಿರುವ ಕಾಶ್ಮೀರದ ಬಗೆಗಿನ ವಸ್ತು ಸ್ಥಿತಿಯ ಚಿತ್ರಣದ ಕೆಲಸ ಬಹಳ ಎದೆಗಾರಿಕೆಯನ್ನು ಬೇಡುವಂತಹುದು. ಇಂತಹ ಸಾಹಸ ಕಾರ್ಯದಲ್ಲಿ ಅನೇಕರು ಸಲಹೆ, ನೆರವು, ಮಾಹಿತಿಗಳನ್ನು ಅವರಿಗೆ ನೀಡಿ ನೆರವಾದರೆಂದು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಅವರು ಪರಾಮರ್ಶಿಸಿರುವ ಮಾಹಿತಿಗಳನ್ನು ಗಮನಿಸಿದರೆ ಮಹತ್ತರವಾದ ಕೆಲಸವನ್ನು ಸಾಧಿಸಿದ್ದಾರೆಂದು ಹೆಮ್ಮೆಯಾಗುತ್ತದೆ. ಈ ಕೃತಿಗೆ ಮುನ್ನುಡಿ ಬರೆದು ಶುಭಹಾರೈಸಿದವರು ಕನ್ನಡದ ಹೆಸರಾಂತ ಕಾದಂಬರಿಕಾರರಾದ ಡಾ. ಎಸ್.ಎಲ್.ಭೈರಪ್ಪನವರೆನ್ನುವುದೂ ಒಂದು ವಿಶೇಷವಾಗಿದೆ.

ಕಾದಂಬರಿಯ ಹೆಸರು “ಕಶೀರ” ಕಾಶ್ಮೀರಿ ಮೂಲ ಕಶುರ್ ಭಾಷೆಯಲ್ಲಿ ಕಾಶ್ಮೀರವೆಂದೇ. ಕಾಶ್ಮೀರವು ಪೌರಾಣಿಕ ಹಿನ್ನೆಲೆಯನ್ನೂ ಹೊಂದಿದೆ. ಹಿಮಾಲಯ ಪರ್ವತ ಪ್ರದೇಶದಲ್ಲಿ ಮನೋಹರವಾದ ಸತೀ ಸರೋವರದಲ್ಲಿ ಜಲೋದ್ಭವನೆಂಬ ರಾಕ್ಷಸನು ನೆಲೆಸಿದ್ದನಂತೆ. ಅವನನ್ನು ಸಂಹರಿಸಲು ಕಶ್ಯಪ ಮಹಾ ಮುನಿಗಳು ತ್ರಿಮೂರ್ತಿಗಳನ್ನು ಪ್ರಾರ್ಥಿಸಿದರಂತೆ. ಅವರ ಕೋರಿಕೆಯ ಮೇರೆಗೆ ರಾಕ್ಷಸನನ್ನು ನಾಶಮಾಡಿದರಂತೆ. ನಂತರ ಆ ಸರೋವರವಿದ್ದ ಜಾಗದಲ್ಲಿ ಕಾಶ್ಮೀರವನ್ನು ಕಶ್ಯಪರೇ ನಿರ್ಮಿಸಿದರಂತೆ. ಸಾಕ್ಷಾತ್ ಪಾರ್ವತೀದೇವಿಯೇ ನದಿಯ ರೂಪದಲ್ಲಿ ಇಲ್ಲಿ ಹರಿದು ಸ್ಥಳವನ್ನು ಪವಿತ್ರಗೊಳಿಸಿದಳಂತೆ. ಇದೇ ವಿತಸ್ಥಾ ನದಿ. ಆದಿ ಶಂಕರರು ಇಲ್ಲಿಯೇ ಶಾರದಾ ಪೀಠವನ್ನು ಸ್ತಾಪಿಸಿದ್ದಾರೆ. ಅಂದಿನಿಂದಲೇ ಪ್ರಸಿದ್ಧವಾದ ಈ ನೆಲದಲ್ಲಿ ನೂರಾರು ವಿದ್ವಾಂಸರು, ಕವಿಗಳು, ಉದ್ದಾಮ ಪಂಡಿತರುಗಳು ಬದುಕಿದ್ದರು. ಇಂಥಹ ಪುಣ್ಯಭೂಮಿಯು ಶತಮಾನಗಳ ಅವಧಿಯಲ್ಲಿ ಧಾಳಿಕೋರರ, ಅತಿಕ್ರಮಣಕಾರರ, ಧರ್ಮಾಂಧರ, ಆತಂಕವಾದಿಗಳ, ಸಮಯಸಾಧಕ ಆಡಳಿತಗಾರರ, ಕೈಯಲ್ಲಿ ನರಳಿ ಇಂದಿರುವ ದುಸ್ಥಿತಿಗೆ ತಲುಪಿದೆ. ಕಾಶ್ಮೀರವೆಂದರೆ ಸುಂದರವಾದ ತಾಣ, ಭೂಮಿಯ ಮೇಲಿನ ಸ್ವರ್ಗ ಎಂದೆಲ್ಲ ಕರೆಸಿಕೊಂಡದ್ದು ಈಗ ಸದಾ ದ್ವೇಶಜ್ವಾಲೆಗಳು ಉರಿಯುತ್ತಿರುವ ಅಗ್ನಿಕುಂಡವಾಗಿದೆ. ಇದರ ಸಮಸ್ಯೆಗಳು ಕಗ್ಗಂಟಾಗಿ ಬಿಡಿಸಲಾರದಷ್ಟಾಗಿವೆ. ಸ್ವತಂತ್ರ ಭಾರತದ ಅಂಗಭಾಗವಾಗಿ ವಿಲೀನಗೊಂಡು ಏಳುದಶಕಗಳು ಕಳೆದರೂ ಅದು ನಾನೂ ಭಾರತವೇ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲಾಗದ ಬೇಗುದಿಯಿಂದ ನರಳುತ್ತಿದೆ. ಇಲ್ಲಿನ ಸಮಸ್ಯೆಗಳು, ಅವುಗಳ ಹಿನ್ನೆಲೆ, ಈಗಿನ ವಸ್ತುಸ್ಥಿತಿ, ಇವುಗಳನ್ನು ಪರಾಮರ್ಶಿಸುತ್ತಾ ಮುಂದೆಯಾದರೂ ಇವುಗಳಿಗೆ ಸೂಕ್ತ ಪರಿಹಾರ ದೊರಕಿ ಶಾಂತಿಪೂರ್ಣ ಕಾಶ್ಮೀರವು ತಲೆಯೆತ್ತೀತೇ? ಎಂಬ ಆಶಯಗಳನ್ನು ಹೊಂದಿರುವುದೇ ಈ ಕಾದಂಬರಿಯ ಕಥಾವಸ್ತು.

ಕೆಲವು ಐತಿಹಾಸಿಕ ಸತ್ಯಗಳು ಜನರಿಗೆ ತಿಳಿದಿರಬೇಕು. ಆದರೆ ಕಾಶ್ಮೀರದ ವಿಷಯದಲ್ಲಿ ಇದು ಸಾಧ್ಯವಾಗಿಲ್ಲ ಎಂಬುದೇ ವಿಪರ್ಯಾಸ. ಕಾದಂಬರಿಕಾರ್ತಿ ಅದಕ್ಕಾಗಿಯೇ ಒಬ್ಬ ಸಂಶೋಧಕನನ್ನು ಹುಟ್ಟುಹಾಕಿ ಅವನಿಂದಲೇ ಪ್ರತ್ಯಕ್ಷ ಮಾಹಿತಿಗಳನ್ನು ಸಂಗ್ರಹಿಸುವ ಕಾರ್ಯ ಮಾಡಿದ್ದಾರೆ. ಅವನೇ ನಮ್ಮ ಮುಖ್ಯ ಪಾತ್ರ “ನರೇಂದ್ರ”. ಕಾಶ್ಮೀರದಲ್ಲಿ ಇಂದು ಭಯೋತ್ಪಾದಕರು, ಮೂಲಭೂತವಾದಿಗಳು, ನೆರದೇಶದ ನೆಲದಲ್ಲಿ ತರಬೇತಿ ಹೊಂದಿದ ಕಾಶ್ಮೀರದವರೇ ಆದ ಉಗ್ರಗಾಮಿಗಳು ಅಪಾರ ಸಂಖ್ಯೆಯಲ್ಲಿ ಇದ್ದಾರೆ. ಇವರಿಗೆ ಬೆನ್ನೆಲುಬಾಗಿ ನಮ್ಮವರೇ ಆದ ಪ್ರತ್ಯೇಕತಾವಾದಿ ಇಸ್ಲಾಂ ಧರ್ಮಾನುಯಾಯಿಗಳು ನೆರವಾಗುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಇವರೆಲ್ಲ ಭಾರತ ಸರ್ಕಾರದ ಸೈನ್ಯ ಪಡೆ, ಗಡಿ ರಕ್ಷಣಾಪಡೆಯ ಸೈನಿಕರ ವಿರುದ್ಧ ಪ್ರತಿದಿನ ಎಲ್ಲಿಯಾದರೂ ಒಂದು ಕಡೆ ಹೊಡೆದಾಡುತ್ತಲೇ ಇದ್ದಾರೆ. ಸುದ್ಧಿ ಮಾಧ್ಯಮಗಳು ಇದರ ಬಗ್ಗೆ ವರದಿಗಳನ್ನು ಬಿತ್ತರಿಸುತ್ತಲೇ ಇರುತ್ತವೆ. ಸಾಲದ್ದಕ್ಕೆ ಇಲ್ಲಿನ ಮುಸ್ಲಿಂ ಯುವಕರಿಗೆ ಅಪ್ರಾಪ್ತ ವಯಸ್ಸಿನಿಂದಲೇ ಹಿಂಸಾತ್ಮಕ ಕೃತ್ಯಗಳ ಬೋಧನೆ ನೀಡುವ ಕೆಲಸ ನಿರಂತವಾಗಿ ನಡೆದಿದೆ. ಇವರಲ್ಲಿ ಸ್ವಾರ್ಥಿ ರಾಜಕೀಯ ನಾಯಕರು, ಇಮಾಂಗಳು, ಮುಫ್ತಿಗಳು, ಮಿರ್ವಾಯಿಜೆಗಳ ಕೊಡುಗೆ ಅಪಾರವಾಗಿದೆ. ಮುಂದೆ ಒಳ್ಳೆಯ ಪ್ರಜೆಗಳಾಗುವ ಭವಿಷ್ಯವಿರುವ ಯುವಕರನ್ನು ದಿಕ್ಕು ತಪ್ಪಿಸಿ ಇಸ್ಲಾಂ ಧರ್ಮವನ್ನು ಹರಡಲು, ರಕ್ಷಿಸಲು, ಇತರ ಧರ್ಮದವರನ್ನು ನಾಶಗೊಳಿಸಿದರೆ ಅಂತಹವರಿಗೆ ಸತ್ತನಂತರ ಆವರ ಧರ್ಮದ ನಂಬಿಕೆಯಂತೆ ಸ್ವರ್ಗದಲ್ಲಿ ಅನಂತ ಸುಖ ಪ್ರಾಪ್ತಿಯಾಗುತ್ತದೆ ಎಂದು ಮನಃ ಪರಿವರ್ತನೆ ಮಾಡುತ್ತಿದ್ದಾರೆ. ಇದರಿಂದಾಗಿ ರಕ್ತಹರಿಸುವುದೇ ಇಂತಹವರ ಕಾಯಕವಾಗಿದೆ. ಕೇಂದ್ರ ಸಕಾರದಿಂದ ಕಾಶ್ಮೀರ ರಾಜ್ಯದ ಅಭಿವೃದ್ಧಿಕಾರ್ಯಗಳಿಗಾಗಿ ಬಿಡುಗಡೆಯಾಗುವ ಸಹಸ್ರಾರು ಕೋಟಿ ರೂಪಾಯಿಗಳ ಅನುದಾನವನ್ನು ಸಮಯ ಸಾಧಕ ರಾಜಕಾರಣಿ ಆಡಳಿತಗಾರರು ರಾಜ್ಯ ಮಟ್ಟದಲ್ಲಿ ಸರಿಯಾಗಿ ಬಳಸದೆ ಉಗ್ರಗಾಮಿಗಳಿಗೆ ಹಸ್ತಾಂತರವಾಗುತ್ತಿದೆ. ಆದರೂ ಕೇಂದ್ರದವರು ಕೊಟ್ಟ ಹಣಕ್ಕೆ ಲೆಖ್ಖ ಕೇಳುವಂತಿಲ್ಲ. ಏಕೆಂದರೆ ಕಾಶ್ಮೀರಕ್ಕೆ ನೀಡಲಾಗಿರುವ ಕಲಂ 370 ರ ವಿಶೇಷ ಸ್ಥಾನಮಾನ ಇದಕ್ಕೆ ಅಡ್ಡ ಬರುತ್ತದೆ. ಹೀಗಾಗಿ ಭಾರತ ಸರ್ಕಾರವೇ ಹಣ ನೀಡಿ ಉಗ್ರರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದಂತಾಗಿದೆ. ಸದಾ ನಮ್ಮ ಸೈನಿಕರ ಹತ್ಯೆಯಾಗುತ್ತಿದ್ದರೂ ಕಣ್ಮುಚ್ಚಿ ಕುಳಿತುಕೊಳ್ಳುವಂತಾಗಿದೆ. ಪಾಕಿಸ್ಥಾನದಿಂದ ಬಂದೂಕು ಭಾರತ ಸರ್ಕಾರದ ಹಣ ಪಡೆಯುವುದೇ ‘ಕಶ್ಮೀರಿಯತ್’ ಎಂಬುದಕ್ಕೆ ಅರ್ಥವಂತೆ.

ಕಾದಂಬರಿಯ ಪ್ರಾರಂಭದಲ್ಲಿಯೇ ಉಗ್ರಗಾಮಿಗಳ ದುಷ್ಕೃತ್ಯದಿಂದ ನಮ್ಮ ಸೈನ್ಯದ ಒಬ್ಬ ಧೈರ್ಯಶಾಲಿ ಯುವ ಮೇಜರ್ ಅರ್ಜುನ್ ರ ಹತ್ಯೆಯಾಗಿರುತ್ತದೆ. ಅವನ ಆತ್ಮೀಯ ಗೆಳೆತರಾದ ವಿಕ್ರಮ್, ಮತ್ತು ನರೇಂದ್ರರು ತೀವ್ರ ದುಃಖಿತರಾಗಿದ್ದಾರೆ. ಅದೇ ಸಮಯದಲ್ಲಿ ನಮ್ಮ ಸುದ್ಧಿಮಾಧ್ಯಮಗಳ ಒಂದು ಚಾನಲ್‌ನವರು ಹಿರಿಯ ಪತ್ರಕರ್ತರು, ಲೇಖಕರನ್ನು ಕರೆಸಿ ಮುಸ್ಲಿಮರ ಧಾರ್ಮಿಕ ಆಚರಣೆಯೊಂದರಿಂದ ಸಾರ್ವಜನಿಕರಿಗೆ ತೊಂದರೆಯೊದಗಿದೆ ಎಂಬುದರ ಬಗ್ಗೆ ಪ್ಯಾನೆಲ್ ಚರ್ಚೆಯನ್ನು ಪ್ರಸಾರ ಮಾಡುತ್ತದೆ. ಅದರಲ್ಲಿ ನರೇಂದ್ರ ಸಂಶೋಧಕನಾದುದರಿದ ಪಾಲ್ಗೊಳ್ಳಲು ಆಹ್ವಾನಿಸುತ್ತಾರೆ. ಅಲ್ಲಿ ನಡೆಯುವುದು ಏನೆಂದು ಎಲ್ಲರಿಗೂ ತಿಳಿದದ್ದೇ. ಸರ್ಕಾರದ ಪರವಾಗಿ, ಅಲ್ಪಸಂಖ್ಯಾತರ ಪರವಾಗಿ ಕೊರಳೆತ್ತಿ ಕೂಗುಹಾಕುವ ಸದಸ್ಯರುಗಳು ತಮ್ಮ ವಾದವನ್ನು ಮಂಡಿಸುತ್ತಾರೆ. ಅವರ ಅಭಿಪ್ರಾಯಗಳಿಗೆ ವಿರುದ್ಧವಾಗಿ ವಾಸ್ತವಿಕಾಂಶಗಳನ್ನು ಹೊಂದಿರುವ ಉತ್ತಮ ವಾದವನ್ನು ಆಲಿಸುವ ತಾಳ್ಮೆ, ಅದರಲ್ಲಿರುವ ಉಪಯುಕ್ತ ಅಂಶಗಳನ್ನು ಗಮನಿಸುವ ತೆರೆದ ಮನಸ್ಸು ಯಾರಿಗೂ ಇರುವುದಿಲ್ಲ. ಬರಿಯ ಕೂಗಾಟದಲ್ಲಿ ಚರ್ಚೆಯು ಮುಕ್ತಾಯವಾಗುತ್ತದೆ. ಇಂತಹ ನೂರಾರು ಚರ್ಚೆಗಳನ್ನು ಚಾನೆಲ್ಲಿನವರು ತಮ್ಮ ಟಿ.ಆರ್.ಪಿ. ಹೆಚ್ಚಿಸಿಕೊಳ್ಳುವ ಸಲುವಾಗಿ ಏರ್ಪಡಿಸುತ್ತಾರೆಯೇ ಹೊರತು ಇವುಗಳಿಂದ ಏನೂ ಸಾಧನೆಯಾಗುವುದಿಲ್ಲ. ಚರ್ಚೆಯಲ್ಲಿ ಇಬ್ಬ ಲೇಖಕಿ ಮೀರಾದೇವಿಯೆನ್ನುವರು “ನೀವು ಕಣ್ಣಾರೆ ಇವುಗಳನ್ನು ಕಂಡಿದ್ದೀರಾ?” ಎಂದು ಕೇಳಿದ ಪ್ರಶ್ನೆಯಿಂದ ಉತ್ತೇಜಿತನಾದ ಸಂಶೋಧಕ ನರೇಂದ್ರ ವಸ್ತು ಸ್ಥಿತಿಯನ್ನು ಪರೀಕ್ಷಿಯೇ ಬರಬೇಕೆಂದು ಕಾಶ್ಮೀರದ ಯಾತ್ರೆಗೆ ಹೊರಡುತ್ತಾನೆ. ಮುಂದಿನ ಎಲ್ಲ ವಿವರಣೆಗಳೂ ಅವನ ಮೂಲಕ ಓದುಗರಿಗೆ ತಿಳಿಯುತ್ತಾ ಹೋಗುತ್ತವೆ. ಮಾಧ್ಯಮ ಚರ್ಚೆಯಲ್ಲಿ ಭಾಗವಹಿಸಿ ಪ್ರಸಿದ್ಧ ಲೇಖಕಿಯೆಂದು ಹೆಸರು ಗಳಿಸಿದ ಮೀರಾದೇವಿ ಸ್ವತಃ ಏನನ್ನೂ ಬರೆದವಳಲ್ಲ. ಅವಳು ಪ್ರಭಾವಿ ಮಂತ್ರಿಯೊಬ್ಬರೊಡನೆ ಅಕ್ರಮ ಸಂಬಂಧವಿರಿಸಿಕೊಂಡು ಅವರ ಬೆಂಬಲದಿಂದಲೇ ಬೇರೆಯವರಿಂದ ದುಡ್ಡುಕೊಟ್ಟು ಅನೇಕ ಕೃತಿಗಳನ್ನು ಬರೆಸಿ ತನ್ನ ಹೆಸರು ಹಾಕಿಕೊಂಡು ಹಲವಾರು ಪ್ರಶಸ್ತಿಗಳನ್ನೂ ಬಾಚಿಕೊಂಡಿರುತ್ತಾಳೆ. ಇಂತಹ ಗೋಸುಂಬೆಗಳೇ ಈ ಕಾಲದಲ್ಲಿ ರಾಜಕೀಯ ಕಾರಣಗಳಿಗಾಗಿ ಪ್ರತಿಷ್ಠಿತರಾಗಿದ್ದಾರೆ.

ವಾಸ್ತವದಲ್ಲಿ 1930 ರಿಂದ ಇಂದಿನವರೆಗೆ ಕಾಶ್ಮೀರದ ವಿಷಯದಲ್ಲಿ ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನೂ ಒಳಗೊಂಡಂತೆ ಅನೇಕ ಮಹಾನಾಯಕರುಗಳು ತೆಗೆದುಕೊಂಡ ಹಲವು ತಪ್ಪು ನಿರ್ಧಾರಗಳು, ಸ್ವಾತಂತ್ಯ್ರಾನಂತರ ಅಲ್ಲಿನ ಜನರನ್ನು ಕೇಂದ್ರದಲ್ಲಿ ಮತ್ತು ಕಾಶ್ಮೀರ ರಾಜ್ಯದಲ್ಲಿ ಅಡಳಿತ ನಡೆಸಿದ ರಾಜಕಾರಣಿಗಳು ಜನರನ್ನು ಮತಬ್ಯಾಂಕುಗಳನ್ನಾಗಿ ಮಾಡಿಕೊಂಡು ಅವರ ಓಲೈಕೆಗಾಗಿ ಮತ್ತು ತಮ್ಮ ಸ್ವಾರ್ಥಸಾಧನೆಗಾಗಿ ವಿಶೇಷ ಸವಲತ್ತುಗಳನ್ನು ನೀಡಿದ್ದೇವೆಂಬುದನ್ನೇ ಹೇಳಿಕೊಂಡು ಬಂದಿದ್ದಾರೆ. ಅವರು ಹೆಸರಿಗೆ ಮಾತ್ರ ತಮ್ಮನ್ನು ರಾಷ್ಟ್ರಮಟ್ಟದ ನಾಯಕರೆಂದು ಬಿಂಬಿಸಿಕೊಂಡರೂ ಅವರ ಆಷಾಢಭೂತಿತನದಿಂದ ಜನರಿಗೆ ಮೋಸಮಾಡಿದ್ದಾರೆ. ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸುವ ಬದಲು ಇನ್ನಷ್ಟು ಸಂಕೀರ್ಣಗೊಳಿಸಿದ್ದಾರೆ.

ಸ್ವಾತಂತ್ಯ್ರಪೂರ್ವದಲ್ಲಿ ಆಡಳಿತ ನಡೆಸಿದ್ದ 565 ರಾಜ ¸ಸಂಸ್ಥಾನಗಳನ್ನು ಅಖಂಡ ಭಾರತದಲ್ಲಿ ವಿಲೀನಗೊಳಿಸುವ ಪ್ರಕ್ರಿಯೆಯಲ್ಲಿ ಯಶಸ್ವಿಯಾದ ಸಮರ್ಥ ನಾಯಕ ಸರ್ದಾರ್ ವಲ್ಲಭಬಾಯ್ ಪಟೇಲರಿಗೆ ನಮ್ಮೆಲ್ಲರ ಗೌರವ ಸಲ್ಲುತ್ತವೆ. ಆದರೆ ಮಹಾತ್ಮ ಗಾಂಧಿಯವರ ಅಚ್ಚುಮೆಚ್ಚಿನ ನೀಲಿಗಣ್ಣಿನ ಯುವಕ ಜವಹರಲಾಲ್ ನೆಹರೂರವರು ಜಮ್ಮುಕಾಶ್ಮೀರದ ವಿಲೀನ ಪ್ರಕ್ರಿಯೆಯನ್ನು ಮಾತ್ರ ಪಟೇಲರಿಗೆ ವಹಿಸದೇ ತಮ್ಮ ಆಪ್ತರಾದ ಗೋಪಾಲಸ್ವಾಮಿಯವರಿಗೆ ವಹಿಸಿದರು. ಅಲ್ಲದೆ ಅಲ್ಲಿನ ಮುಸ್ಲಿಮರನ್ನು ತಾನು ಬಿಟ್ಟರೆ ಇನ್ನಾರೂ ರಕ್ಷಿಸಲಾರರು ಎಂಬಂತೆ ಬಿಂಬಿಸಿಕೊಂಡು ಸಂವಿಧಾನದ ಕಲಂ; 370 ತಾತ್ಕಾಲಿಕ ನಿಬಂಧನೆಯೊಂದಿಗೆ ಕಾಶ್ಮೀರಕ್ಕೆ ವಿಸೇಷ ಸ್ಥಾನಮಾನ ದೊರಕಿಸಿಕೊಟ್ಟರು. ಪಾಕಿಸ್ಥಾನಕ್ಕೆ ಹೋದ ಮುಸ್ಲಿಮರ ಬಗ್ಗೆ ಅತಿಯಾದ ಅನುಕಂಪ ತೋರಿ ಗಾಂಧೀಜಿಯವರು ಆ ರಾಷ್ಟ್ರಕ್ಕೆ ಹದಿಮೂರುಕೋಟಿಗೂ ಹೆಚ್ಚು ಹಣವನ್ನು ಕೊಡಲೇಬೇಕೆಂದು ಹಠಹಿಡಿದರು. ಅಲ್ಲದೆ 1946 ರಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಅಧ್ಯಕ್ಷೀಯ ಚುನಾವಣೆಯಲ್ಲಿ ಪಟೇಲರು ಸ್ಫರ್ಧಿಸದಂತೆ ಅವಕಾಶ ತಪ್ಪಿಸಿದರು. ಇದರಿಂದಾಗಿ ನೆಹರೂರವರೇ ತಮ್ಮ ತಂದೆ ಮೋತಿಲಾಲ್ ನೆಹರೂ ನಂತರ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದರು ಮತ್ತು ಸ್ವತಂತ್ರಭಾರತದ ಅವಿರೊಧ ಪ್ರಧಾನಮಂತ್ರಿಯೂ ಆದರು. ಅಂದಿನಿಂದಲೂ ಕಲಂ: 370 ದುರ್ಬಳಕೆಯಾಗುತ್ತಲೇ ಇದ್ದರೂ ಅದನ್ನು ತಿದ್ದುಪಡಿ ಮಾಡಲು ಮುಂದಾಗಲೇ ಇಲ್ಲ. ಅಂದಿನಿಂದ ಆರಂಭಗೊಂಡ ವಂಶಪಾರಂಪರ್ಯ ಕೇಂದ್ರಾಡಳಿತದ ಚುಕ್ಕಾಣಿ ನೆಹರೂರವರ ಕುಟುಂಬದ ಆಸ್ತಿಯೇ ಆಗಿಬಿಟ್ಟಿದೆ. ಐದನೆಯ ತಲೆಮಾರಿಗೂ ಅದನ್ನು ಮುಂದುವರೆಸುವ ಹುನ್ನಾರ ನಡೆದಿದೆ. ವಿಶೇಷ ಸ್ಥಾನಮಾನದಿಂದ ಭಾರತದ ಬೇರೆ ಯಾವುದೇ ಪ್ರದೇಶದಲ್ಲಿದ್ದು ಭಾರತದ ಪ್ರಜೆಯಾಗಿದ್ದರೂ ಕಾಶ್ಮೀರದಲ್ಲಿ ಹೋಗಿ ನೆಲೆಸುವಂತಿಲ್ಲ. ಅವನು ಅಲ್ಲಿ ಆಸ್ತಿಪಾಸ್ತಿ ಖರೀದಿಸುವಂತಿಲ್ಲ. ಅಲ್ಲಿ ಉದ್ಯಮ ಸ್ಥಾಪಿಸುವಂತಿಲ್ಲ. ಕಾಶ್ಮೀರವೆಂದರೆ ಕಾಶ್ಮೀರಿಗಳಿಗೆ ಮಾತ್ರ ಎಂಬ ಅಲಿಖಿತ ನಿಯಮವೇ ಪಾಲನೆಯಾಗುತ್ತಿದೆ, 1990 ರಲ್ಲಿ ಅಲ್ಲಿ ಮುಸ್ಲಿಂ ಉಗ್ರಗಾಮಿ ಸಂಘಟನೆಗಳು ನಡೆಸಿದ ದೊಂಬಿಗಳಿಂದ ಸ್ಥಳೀಯರೇ ಆಗಿರುವ ಲಕ್ಷಾಂತರ ಹಿಂದೂಗಳು, ಪಂಡಿತರುಗಳು ತಮ್ಮ ಸರ್ವಸ್ವವನ್ನೂ ಕಳೆದುಕೊಂಡು ಪ್ರಾಣರಕ್ಷಣೆಗಾಗಿ ಬೇರೆ ಪ್ರದೇಶಗಳಿಗೆ ವಲಸೆಹೋಗಿ ನಿರಾಶ್ರಿತರಾಗಿ ಬದುಕು ಸಾಗಿಸುತ್ತಿದ್ದಾರೆ. ಅವರ ಮನೆಗಳನ್ನು ಲೂಟಿಮಾಡಲಾಗಿದೆ, ಅವರ ಹೆಣ್ಣುಮಕ್ಕಳನ್ನು ಕೆಡಿಸಲಾಗಿದೆ. ಬಲವಂತವಾಗಿ ಹಲವರನ್ನು ಇಸ್ಲಾಂ ಧರ್ಮಕ್ಕೆ ಮತಾಂತರಿಸಲಾಗಿದೆ. ಇಷ್ಟೆಲ್ಲ ನಡೆದು ಕೆಲವು ದಶಕಗಳೇ ಕಳೆದನಂತರ ಈಗ ಕೇಂದ್ರ ಸರ್ಕಾರವು ವಲಸೆ ಹೋದವರಿಗಾಗಿ ಪರಿಹಾರವೆಂಬಂತೆ “ಘರ್ ವಾಪಸಿ” ಎಂಬ ಯೋಜನೆಯನ್ನು ಜಾರಿಗೊಳಿಸಿದೆ. ಇದರಿಂದ ಬೆರಳೆಣಿಕೆಯಷ್ಟು ಜನಕ್ಕೆ ಮಾತ್ರ ಉಪಯೋಗವಾಗಿದೆ. ಇದನ್ನು ಕಡ್ಡಾಯವಾಗಿ ಜಾರಿಗೆ ತಂದು ನೆಲೆ ಕಳೆದುಕೊಂಡವರ ಆಸ್ತಿಪಾಸ್ತಿಗಳನ್ನು ಅವರಿಗೆ ಮತ್ತೆ ದೊರಕುವ ಹಾಗೆ ಮಾಡಲು ಸರ್ಕಾರ ಆಸಕ್ತಿ ಹೊಂದಿಲ್ಲ. ದಿನನಿತ್ಯ ಉಗ್ರಗಾಮಿಗಳು ಹಿಂದೂಗಳ ಮೇಲೆ, ನಮ್ಮ ರಕ್ಷಣಾ ಪಡೆಗಳ ಮೇಲೆ ಆಕ್ರಮಣ ಮಾಡುತ್ತಲೇ ಇದ್ದಾರೆ. ಈ ರೀತಿಯ ಚಿತ್ರಗಳನ್ನು ಅವುಗಳ ದಾರುಣ ಪರಿಣಾಮಗಳನ್ನು ಕಾದಂಬರಿಯಲ್ಲಿ ಮನಕಲಕುವಂತೆ ವಿವರಿಸಲಾಗಿದೆ.

ನರೇಂದ್ರನ ಹುಡುಕಾಟದಲ್ಲಿ ಅನೇಕ ವ್ಯಕ್ತಿಗಳ ಪರಿಚಯವನ್ನು ಮಾಡಿಕೊಡಲಾಗಿದೆ. ಶಂಕರಾಚಾರ್ಯ ಬೆಟ್ಟದಲ್ಲಿ ನಾಲ್ಕು ದಶಕಕ್ಕೂ ಹೆಚ್ಚು ಕಾಲದಿಂದ ವಾಸ್ತವ್ಯವಿರುವ, ತಮ್ಮ ಸುತ್ತಮುತ್ತ ನಡೆದಿರುವ ಎಲ್ಲ ವಿಧ್ವಂಸಕ ಚಟುವಟಿಕೆಗಳಿಗೆ ಸಾಕ್ಷಿಯಾಗಿರುವ ಹೃದಯಾನಾಥ ಪಂಡಿತಜೀ, ತಮ್ಮ ಸರ್ವಸ್ವವನ್ನೂ ಕಳೆದುಕೊಂಡು ಬುದ್ಧಿ ಭ್ರಮಣೆಯಾದಂತೆ ಜೀವಂತವಿರುವ ಕೈಲಾಶನಾಥ ಪಂಡಿತರು, ಅವರ ಎದುರು ಮನೆಯಲ್ಲೇ ಇದ್ದು ವಿಶ್ವಾಸ ದ್ರೋಹಿಯಂತೆ ನಡೆದುಕೊಂಡ ಬಶೀರ ಅಹಮದ್, ಮರೆಯಲಾಗದವರಾಗಿದ್ದಾರೆ. ಸ್ಥಳೀಯರೇ ಆಗಿದ್ದು ಸರ್ಕಾರಿ ನೌಕರಿಯಲ್ಲಿರುವ ಸಂಜೀವಕೌಲ್ ಸರ್ಕಾರ ಒದಗಿಸಿದ ಗೃಹ ಸಮುಚ್ಛಯ ಕಟ್ಟಡದಲ್ಲಿ ಕಿರಿದಾದ ಮನೆಯಲ್ಲಿ ರಕ್ಷಣಾ ಕೋಟೆಯ ಒಳಗೆ ಬದುಕು ನಡೆಸುತ್ತಿದ್ದಾರೆ. ಅವರ ಸ್ವಂತ ಮನೆಯೇ ಭವ್ಯವಾಗಿದ್ದರೂ ಅದನ್ನೆಲ್ಲ ಕಳೆದುಕೊಂಡಿದ್ದು ಜೀವಭಯದಿಂದ ಕೆಲಕಾಲ ಶ್ರೀನಗರದಿಂದ ದೂರವಾಗಿದ್ದರು. ನರೇಂದ್ರನಿಗೆ ಕೆಲವು ದಿನಗಳು ಆಶ್ರಯ ಕೊಟ್ಟ ಸಂಜೀವಕೌಲ್ ಅಲ್ಲಿನ ಬಹಳಷ್ಟು ವಿಷಯಗಳನ್ನು ತಿಳಿಸುವುದರ ಜೊತೆಗೆ ತಮ್ಮ ವಾಹನದಲ್ಲಿಯೇ ಅವನನ್ನು ಸುತ್ತಾಡಿಸಿ ಹಲವಾರು ಸ್ಥಳಗಳನ್ನು ತೋರಿಸುತ್ತಾರೆ. ಜೊತೆಗೆ ಉಳಿದ ಕೆಲವು ಜಾಗಗಳನ್ನು ನೋಡಲು ತಮ್ಮ ನಂಬುಗೆಯವನಾದ ಸ್ಥಳೀಯ ಚಾಲಕ ಸಲೀಂನನ್ನು ಪರಿಚಯ ಮಾಡಿಕೊಟ್ಟು ವಾಹನದ ವ್ಯವಸ್ಥೆ ಮಾಡಿಕೊಡುತ್ತಾರೆ. ಇದರಿಂದ ನರೇಂದ್ರನಿಗೆ ಮಾಹಿತಿಗಳನ್ನು ಕಲೆಹಾಕಲು ತುಂಬ ಉಪಕಾರವಾಗುತ್ತದೆ.

ಕೈಲಾಶನಾಥ ಪಂಡಿತರ ಮನೆಯಲ್ಲಿಯೇ ಪಾಠ ಹೇಳಿಸಿಕೊಂಡ ಬಶೀರರ ಎರಡನೆಯ ಮಗ ಪಾಕಿಸ್ಥಾನದ ಕೇಂದ್ರದಲ್ಲಿ ಉಗ್ರಗಾಮಿಯಾಗಿ ತರಬೇತಿ ಪಡೆದು ತನ್ನ ಗುಂಪಿನಿಂದ ನಡೆಸುವ ದುಷ್ಕೃತ್ಯಗಳ ವಿವರಗಳು ಹೇಸಿಗೆ ಹುಟ್ಟಿಸುವಂತಿವೆ, ತಮ್ಮಿಬ್ಬರು ಮಕ್ಕಳನ್ನೂ ಕಣ್ಮುಂದೆಯೇ ದಾರುಣವಾಗಿ ಕಳೆದುಕೊಂಡ ಕೈಲಾಶನಾಥರು ಪ್ರತಿದಿನ ಬಶೀರನ ಮನೆಯ ಮುಂದೆ ಕಂಬಕ್ಕೆ ಕಟ್ಟಿರುವ ಗಂಟೆಯನ್ನು ಬೆಳಗಿನ ಪ್ರಾರ್ಥನೆಯ ಸಮಯಕ್ಕೆ ಸರಿಯಾಗಿ ಬಾರಿಸುತ್ತಾ “ಮೆಗಛ್ ಇನ್ಸಾಫ್” ಎಂದು ಕೂಗುತ್ತಲೇ ಇದ್ದಾರೆಂಬುದನ್ನು ಕಣ್ಣಾರೆ ಕಾಣುತ್ತಾನೆ ನರೇಂದ್ರ. ಮಗನನ್ನು ಇಂತಹ ದುಷ್ಕೃತ್ಯಗಳಿಗೆ ಪ್ರೋತ್ಸಾಹ ನೀಡುವ ಬಶೀರರ ಹೆಂಡತಿ ಧರ್ಮಾಂಧೆ ರಿಫತ್ ಜಾನ್ ಪಶ್ಚಾತ್ತಾಪ ಕೂಡ ಪಡುವುದಿಲ್ಲ. ಕಾರಣ ಅವಳು ಮುಫ್ತಿಯೊಬ್ಬರ ಮಗಳು. ಇವರೆಂತಹ ಕಲ್ಲುಮನಸ್ಸಿನವರು ಎನ್ನಿಸುತ್ತದೆ. ಭಯೋತ್ಪಾದನೆಯನ್ನೇ ಪ್ರಚೋದಿಸಿ ಮಸೀದಿಗಳಲ್ಲಿ ಬೋಧಿಸುವ ಮುಫ್ತಿ ಲತೀಫ್ ತಮ್ಮ ವಾದಕ್ಕೆ ಖುರಾನ್‌ನಲ್ಲಿಯೇ ಆಧಾರವಿದೆಯೆಂದು ಉಲ್ಲೇಖಿಸುತ್ತಾರೆ. ಇಸ್ಲಾಂ ಧರ್ಮದಲ್ಲಿ ಇತರ ಧರ್ಮದವರನ್ನು ಒತ್ತಾಯಪೂರ್ವಕವಾಗಿ ಮತಾಂತರಗೊಳಿಸುವುದು, ಒಪ್ಪದಿರುವವರನ್ನು ರಕ್ತಪಾತದ ಮೂಲಕ ಹತ್ಯೆಮಾಡುವುದಕ್ಕೆ ತಮ್ಮ ಪ್ರವಾದಿಗಳ ಜೀವನದ ಉದಾಹರಣೆಯನ್ನು ಕೊಡುತ್ತಾರೆ, ಏಕೆಂದರೆ ಪ್ರವಾದಿಗಳು ತಮ್ಮ ಕಾಲದಲ್ಲಿ ಮಕ್ಕಾ- ಮದೀನಾ ಮಧ್ಯದಲ್ಲಿ “ಬದ್ರ್” ಎಂಬಲ್ಲಿ ಸಾಗುತ್ತಿದ್ದ ಶ್ರೀಮಂತ ವ್ಯಾಪಾರಿಗಳ ಕಾರವಾನುಗಳ ಗುಂಪಿನ ಮೇಲೆ ಆಕ್ರಮಣ ಮಾಡಿದಾಗ ತಮ್ಮ ಎದುರಾಳಿಗಳನ್ನು ಸೋಲಿಸಿ, ಅವರ ಸರ್ವಸ್ವವನ್ನೂ ಲೂಟಿಮಾಡಿ ಗಂಡಸರನ್ನೆಲ್ಲ ನಿರ್ದಯವಾಗಿ ಕತ್ತರಿಸಿ ಕೊಂದು ಹಾಕುತ್ತಾರೆ. ಇದಕ್ಕೆ ಅಲ್ಲಾನ ಅನುಮತಿಯಿತ್ತು ಎಂದು ಉದಾಹರಿಸುತ್ತಾರೆ. ಧರ್ಮವೆಂದರೆ ಪವಿತ್ರವಾದುದನ್ನೇ ಬೋಧಿಸುತ್ತದೆ. ಹಿಂದೂಧರ್ಮದಲ್ಲಿ ಪರಮತ ಸಹಿಸ್ಣುತೆಗೆ ಸ್ಥಾನವಿದೆ ಎಂದು ನಾವು ನಂಬುತ್ತೇವೆ. ಆದರೆ ಮುಫ್ತಿಯಂತಹವರು ಹೇಳುವ ಇಸ್ಲಾಂ ಧರ್ಮದಲ್ಲಿ ಪರಧರ್ಮಗಳ್ಯಾವುದನ್ನೂ ಸಹಿಸಿಕೊಳ್ಳುವ ಅಂಶಗಳೇ ಇಲ್ಲ. ಇಸ್ಲಾಂ ಧರ್ಮಾನುಯಾಯಿಗಳನ್ನು ಹೊರತು ಪಡಿಸಿದರೆ ಉಳಿದವರೆಲ್ಲಾ ‘ಕಾಫಿರರು’ ಅವರುಗಳನ್ನು ಕೊಲ್ಲುವದರಲ್ಲಿ ಯಾವ ತಪ್ಪೂ ಇಲ್ಲವೆನ್ನುವುದು ಅವರ ವಾದ. ಇದು ವಿಚಿತ್ರವೆಂದರೂ ವಿಶ್ವದ ಅನೇಕ ಕಡೆಗಳಲ್ಲಿ ತಾಲಿಬಾನಿಗಳು, ಮುಸ್ಲಿಂ ಭಯೋತ್ಪಾದಕರು ಅನುಸರಿಸುತ್ತಿರುವುದು ಇದೇ ನೀತಿಯನ್ನು ಎಂಬುದೇ ಆತಂಕಕಾರಿಯಾಗಿದೆ.

ನರೇಂದ್ರನಿಗೆ ಭೇಟಿಯಾದ ಮುಷ್ತಾಕ್ ಎನ್ನುವ ಮುಸ್ಲಿಂ ಉಗ್ರಗಾಮಿ ಯುವಕನ ಮಾತುಗಳು ಬೇರೆಯದನ್ನೇ ಹೇಳುತ್ತವೆ, ಅವನು ತನ್ನ ಬದುಕಿನ ಅಮೂಲ್ಯ ವರ್ಷಗಳನ್ನು ಕಲ್ಲುಹೊಡೆಯುವುದು, ದಂಗೆಯೇಳುವುದು, ಕೊಲೆಗಳನ್ನು ಮಾಡುವುದು ಇವುಗಳಲ್ಲೇ ಕಳೆದು ಇಂತಹ ಒಂದು ಘಟನೆಯಲ್ಲಿ ಗಾಯಗೊಂಡಿರುತ್ತಾನೆ. ಅವನ ಆಲೋಚನೆಯಲ್ಲಿ ಮುಫ್ತಿಗಳಂತಹವರ ಬೋಧನೆಯಿಂದ ತಾನು ಸಾಧಿಸಿದ್ದೇನು? ಇದರಿಂದ ತನ್ನ ಭವಿಷ್ಯದ ಗತಿಯೇನು? ಎಂಬಂತಹ ಸತ್ಯದ ಅಂಶಗಳು ಹೊಳೆದಿವೆ. ಅವನಿಗೆ ತಮ್ಮ ನಾಡಿನ ಪ್ರಮುಖರಾದ ಶೇಕ್ ಅಬ್ದುಲ್ಲಾ, ಮುಫ್ತಿ ಸಯ್ಯದ್, ಇನ್ನೂ ಹಲವಾರು ಪ್ರತಿಷ್ಠಿತರ ಮಕ್ಕಳು ವಿದೇಶಗಳಲ್ಲಿ ಓದಿ ವಿದ್ಯಾವಂತರಾಗಿ ಗೌರವವಾದ ಬದುಕನ್ನು ನಡೆಸುತ್ತಿದ್ದಾರೆ. ತನ್ನಂಥವರನ್ನು ಪ್ರಚೋದಿಸಿ ಆಕ್ರಮಣಕಾರಗಳನ್ನಾಗಿಸಿದ್ದಾರೆ. ಎಂದಾದರೊಂದು ದಿನ ಸೈನಿಕರ ಬುಲೆಟ್ಟಿಗೋ, ಅಥವಾ ತಮ್ಮಲ್ಲೇ ಇನ್ನೊಂದು ಗುಂಪನವರ ಕತ್ತಿಗೋ ಬಲಿಯಾಗುವುದೇ ತನ್ನ ಭವಿಷ್ಯ. ತನಗೂ ಸ್ವತಂತ್ರವಾಗಿ ಭಾರತದ ಇತರ ರಾಜ್ಯಗಳಲ್ಲಿನ ಜನಗಳಂತೆ ಬದುಕಬೇಕೆಂಬ ಆಸೆಯಿದೆ. ಇದನ್ನು ಅವನು ನರೇಂದ್ರನ ಮುಂದೆ ಹೇಳಿಕೊಳ್ಳುತ್ತಾನೆ. ಅಂತಹ ಬಯಕೆಗಳನ್ನು ಹೊಂದಿರುವ ಕಾಶ್ಮೀರಿಗಳು ಸಹಸ್ರಗಳ ಸಂಖ್ಯೆಯಲ್ಲಿದ್ದಾರೆ. ಅದರೆ ಅವರಿಗೆ ಭಯದಿಂದ ದಾರಿಕಾಣದಾಗಿದೆ. ಆದರೆ ನಮ್ಮ ಸಮಯಸಾಧಕ ರಾಜಕಾರಿಣಿಗಳಿಗೆ ಕಾಶ್ಮೀರವನ್ನು ಈಗಲಾದರೂ ಸಂವಿಧಾನದ ಕಲಂ 370 ರ ತಾತ್ಕಾಲಿಕ ನಿಬಂಧನೆಯಿಂದ ಬಿಡುಗಡೆಗೊಳಿಸಿ ಎಲ್ಲ ರಾಜ್ಯಗಳಂತೆ ಅದನ್ನೂ ಆಡಳಿತಕ್ಕೊಳಪಡಿಸುವ ಮನಸ್ಸಿಲ್ಲ. ಇವರು ತಮ್ಮ ಸ್ವಾರ್ಥ ಸಾಧನೆಗಾಗಿ ಪಟ್ಟಭದ್ರ ಹಿತಾಸಕ್ತಿಯಿಂದ ಇಂತಹ ಸುಧಾರಣೆಗೆ ಮುಂದಾಗುತ್ತಿಲ್ಲ. ಹಿಂದಿನವರು ಹೇಳಿದಂತೆಯೇ ಅಲ್ಪಸಂಖ್ಯಾತರ ರಕ್ಷಣೆ, ಸರ್ವಧರ್ಮಸಹಿಷ್ಣುತೆ ಎಂದು ಬಾಯಿ ಮಾತಿನಲ್ಲಿ ಹೇಳಿಕೊಳ್ಳುತ್ತಾ ತಮ್ಮ ಓಟು, ಸೀಟುಗಳನ್ನು ಕಾಯ್ದುಕೊಳ್ಳುವುದರಲ್ಲೇ ಆಸಕ್ತರಾಗಿದ್ದಾರೆ.

ಈಗ ಕಾಲ ಪಕ್ವವಾಗಿದೆ. ಇನ್ನೆಷ್ಟು ಅಸಹಾಯಕ ನಿರುಪದೃವಿ ಪಾಣಗಳ ಬಲಿಯಾಗಬೇಕು? ರಕ್ಷಣಾ ಬಲದ ಸೈನಿಕರ ಮಾರಣ ಹೋಮವಾಗಬೇಕು? ನೆರೆದೇಶದ ಮೂಲಭೂತವಾದಿ ಭಯೋತ್ಪಾದಕರನ್ನು ಮಟ್ಟ ಹಾಕಬಹುದಾದರೂ ನಮ್ಮ ರಾಜ್ಯದಲ್ಲಿಯೇ ಇರುವ ಪ್ರಚೋದನಕಾರಿ ಉಗ್ರಗಾಮಿಗಳನ್ನು ಮಟ್ಟಹಾಕುವುದು ಅಷ್ಟು ಸುಲಭವಲ್ಲ. ಎಪ್ಪತ್ತು ವರ್ಷಗಳ ಕಾಲ ಕಳೆದ ಮೇಲಾದರೂ ನಮ್ಮ ನಾಯಕರುಗಳು ಜಾಗೃತರಾಗಬೇಕು. ವಿವೇಕಶಾಲಿಗಳಾಗಿ ಸೂಕ್ತವಾದ ಕ್ರಮಕ್ಕೆ ಮುಂದಾಗಬೇಕು. ಆಗಷ್ಟೇ ಕಾಶ್ಮೀರದಲ್ಲಿ ಅಲ್ಲಿನ ಜನರಿಗೆ ಎಲ್ಲರಂತೆ ಸಹನೀಯವಾದ ಬದುಕು ಸಾಧ್ಯವಾದೀತು. ಅಲ್ಲಿನ ಯುವಕರು ಸರಿಯಾದ ವಿದ್ಯಾಭ್ಯಾಸ ಪಡೆದು ಒಳ್ಳೆಯ ನಾಗರಿಕರಾಗಿ ಬದುಕಲು ಅವಕಾಶವಾಗುತ್ತದೆ. ಶಾಂತಿ ನೆಲೆಸಿ ಅದು ನಿಜಕ್ಕೂ ಭೂಭಾಗದ ಸ್ವರ್ಗವಾಗಬಹುದು.

ಕೇಳಿ ಕೈಲಾಶನಾಥರ ಗಂಟಾನಾದ ಕೇಳಿಸುತ್ತಿದೆ “ಮೆಗಛ್ ಇನ್ಸಾಫ್” ಕೂಗು ಮೊಳಗಿದೆ. ನ್ಯಾಯದ ಕೂಗಿಗೆ ಕೇಂದ್ರ ಮತ್ತು ರಾಜ್ಯಸರ್ಕಾರದ ಆಡಳಿತಗಾರರು ಸ್ಪಂದಿಸಿಯಾರೇ? ನಿರೀಕ್ಷೆಯಲ್ಲಿದ್ದಾರೆ ಕಾಶ್ಮೀರದ ಜನತೆ ಹಾಗೂ ಭಾರತದ ಜನತೆ.

ನಮಗೆ ಈ ಕೃತಿಯ ಮೂಲಕ ಕಾಶ್ಮೀರದ ನಿಜವಾದ ಸಮಸ್ಯೆಯ ಬಗ್ಗೆ ಸಾಕಷ್ಟು ವಿವರವಾದ ಮಾಹಿತಿಗಳನ್ನು ಒದಗಿಸಿರುವ ಶ್ರೀಮತಿ ಸಹನಾ ವಿಜಯಕುಮಾರ್ ಅಭಿನಂದನೀಯರು.

ಬಿ.ಆರ್.ನಾಗರತ್ನ, ಮೈಸೂರು

6 Comments on “ಕಾದಂಬರಿ : ‘ಕಶೀರ’, ಲೇಖಕಿ: ಸಹನಾ ವಿಜಯಕುಮಾರ್.

  1. ಕುತೂಹಲ ಮೂಡಿಸುವ ಪುಸ್ತಕ ಪರಿಚಯ. ಹಲವಾರು ವಾಸ್ತವ ಅಂಶಗಳನ್ನೂ ಉಲ್ಲೇಖಿಸಲಾಗಿದೆ. ಚೆನ್ನಾಗಿದೆ.

  2. ಕಾಶ್ಮೀರದ ಪ್ರಸ್ತುತ ವಸ್ತುಸ್ಥಿತಿಯನ್ನು ಕಾದಂಬರಿ ರೂಪದಲ್ಲಿ ಓದುಗರಿಗೆ ನೀಡಿದ ಲೇಖಕಿ ಸಹನಾ ವಿಜಯಕುಮಾರ್ ಅವರು ಅಭಿನಂದನೀಯರೆ ಸರಿ. ಅವರ ಕಾದಂಬರಿಯ ವಿಮರ್ಶಾತ್ಮಕ ಲೇಖನವು ಬಹಳ ಆಕರ್ಶಕವಾಗಿ ಮೂಡಿಬಂದಿದೆ ನಾಗರತ್ನ ಮೇಡಂ.

  3. ಕೃತಿಯ ಹೂರಣವನ್ನು ಮೊಗೆಮೊಗೆದು ತೆರೆದಿಟ್ಟ ಪುಸ್ತಕಾವಲೋಕನ ಅತ್ಯಂತ ಸಮಂಜಸವಾಗಿ ಮನಕಲಕುವಂತಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *